Saturday 27 December 2014

ಪ್ರತೀ ಬಾರಿಯೂ 
ಪ್ರೀತಿ ನೀ 
ತೊಟ್ಟು ಕಳಿಚಿದ ಹೂ ಬೀಳುವಂತೆ
ದೂರವಾಗುವೆಯಲ್ಲೇ
ಹೀಗೆ ನಿಧಾನದಿ...
ಏಕೆ?!
ನೀ ಕಾಣದೆ
ಗಾಳಿಯಲೇ ಕೈ ಉಳಿದು ಬಿಟ್ಟಿದೆ...

27/12/2014

****

"ಕಲ್ಪನೆ"
ಮುದವಾಗಿ ಹರಿವ ನೀರಿನ ಮೇಲೆ
ಗೆರೆ ಮೂಡಿಸಿ ಸಂಭ್ರಮಿಸಲು
ನಿನ್ನ ತೋರು ಬೆರಳನು ಹಿಡಿದೆ
ಹೂಗಳಂತೆ ಹೊಮ್ಮುತಾ 
ರೇಖೆಗಳು
ಪುಳಕಗಳು ನಮ್ಮೊಳ
ಅದ್ಯಾವ ಲೆಕ್ಕಾಚಾರ ತಪ್ಪಿಸಿ
ಬಂಧಿಸಿದೆ ನೀ 
ಐದೂ ಬೆರಳುಗಳ
ಹತ್ತು ಬೆರಳುಗಳಂತೆ!

26/12/2014

****

ಬಾಣಕ್ಕೆ ಎದೆಯೊಡ್ಡಿ ಚೀರಿಕೊಂಡ ಮಾತ್ರಕ್ಕೆ
ಗುರಿಯೇ ಅವರಾಗಿರಲಾರರು
ಹಿಂದಣ ಒರಟು ಹಲಸೂ ಆಗಿರಬಹುದು!
ತಿರುಗಿ ನೋಡಬೇಕಿತ್ತು; ಅರಿತು ಎದುರುಗೊಳ್ಳಬೇಕಿತ್ತು!

****

ಸಂತೆಯಲ್ಲಿದ್ದರೂ 
ಏಕಾಂಗಿ ಎನಿಸಲು
ಬಹುಶಃ ಅದು ನೀನಿಲ್ಲದ
ಖಾಲಿತನವೊ ಎಂದು
ಮತ್ತೆ ಭ್ರಮೆಯಾಗಿದೆ..

25/12/2014

Wednesday 24 December 2014

ಕವನ

ಜಾತಿ ಗ್ರಹ-ನಕ್ಷತ್ರ



ಆಹಾರಗಳ ಹಿಂದೆ ಜಾತಿಯನ್ನು ಹುಡುತಲಿದ್ದರು
ಈಗ ಅಕ್ಷರಗಳ ಹಿಂದೆಯೂ
ಜಾತಿಯನೇ ಜಪಿಸೋ ಮನಗಳು
ಎಲ್ಲಿ ಹೋದರೂ 
ಜಾತಿಗೇ ಅಂಟಿಕೊಳ್ಳುವವು!

ಕೊನೆಗಾಲಕೂ ನೀರ ನೀಡಲು ಬಂದ
ಜೀವಕೆ ಜಾತಿಕಟ್ಟಿ
ದೂಡಿ ನೀರಿಲ್ಲದೆ
ಜೀವ ಬಿಡುವಂತಾಗದಿರಲಿ;
ಆಶಯಗಳಿವೆ ಅವಕಾಶಗಳ ಕೊಟ್ಟು!

ಜಾತಿಗಳಿಂದೇ ಉಸಿರಾಡಿ
ಜಾತಿಗಳಿಂದೇ ನೀರು ಕುಡಿದು
ಸುಡುವ ಸೂರ್ಯನಿಗೊಂದು ಜಾತಿಯಿಟ್ಟು
ಭೂತಾಯಿಗೂ ಕೊಟ್ಟು ಜಿಗಿದುಬಿಡಲಿ ಹೊರಗೆ
ಜಾತಿ ಗ್ರಹ-ನಕ್ಷತ್ರಗಳನ್ನು ಹುಡುಕಿಕೊಂಡು!

25/12/2014

ಕವನ

ಬೆಳಗು


ಬೆಳಗಿನ ಭರವಸೆಯೇ 
ಬದುಕು
ಮತ್ತೆ ಮತ್ತೆ ಹೊತ್ತು ತರುವ 
ಕನಸಿನ ತೇರು
ಪ್ರೀತಿ ಕಾಮನೆಗಳ ಹುಟ್ಟು ಹಾಕಿದ 
ಬೇರು
ಇದು ಬೆಳಗು!
ಬರಿ ಹೆದ್ದಾರಿಗಳಿಗಲ್ಲ
ಕೊರಕಲು ಕಣಿವೆಯ ಒಳಗೂ
ಹಬೆಯ ಪ್ರಭೆ ಹರಡುವ ಒಲವು!

ಸ್ನೇಹಿತರೇ, ಬೆಳಗಿನ ಶುಭಾಶಯಗಳು, ಶುಭದಿನ! 


25012/2014



ದುಃಖವನ್ನು ಯಾರೂ ಪ್ರೀತಿಸುವುದಿಲ್ಲ
ಹಾಗಾಗಿ ನಾನು ದುಃಖಿಸುವುದಿಲ್ಲ!

***


ಎದೆಯಿಲ್ಲದವರು ಬಡಿತವನ್ನರಿಯುವರೇ
ದಿಟ್ಟತನವಿಲ್ಲದವರು ಜೊತೆಗಿದ್ದು ನಡೆವರೇ
ಭಯಪಡಿಸೇನು ವಿವರಿಸಿ ಮಿಡಿತವ
ಇದ್ದಂತಿರಲಿ ಹಾಯಾಗಿ ಈ ದಾರಿಹೋಕರು!

25/12/2014


ದೂರದಲ್ಲಿದ್ದವರೆಲ್ಲಾ ಹತ್ತಿರಾಗಿ ಕಂಡರು
ದೂರದಲ್ಲಿದ್ದ ಸಾವು ತುಸು ಹತ್ತಿರವೆನಿಸಿದಾಗ,
ಕಿಸೆಯೊಳ ಅಷ್ಟೂ ಕನಸುಗಳು ಗಳಗಳನೆ ಅತ್ತಂತೆ
ತಿದ್ದಿಕೊಳ್ಳುವ ಅಷ್ಟೂ ತಪ್ಪುಗಳು ನೆನಪಾದಂತೆ
ಮತ್ತೆ ಬದುಕಿಬಿಟ್ಟರೆ ಸಾಕು ಯಾರ ಸುದ್ದಿಗೂ ಹೋಗದೆ
ಯಾರಿಗೂ ಹೊರೆಯಾಗದೆ ಇದ್ದುಬಿಡುವಂತೆ
ಆಲಾಪನೆಗಳು ಒಂದೇ ಸಮನೆ
ಎಚ್ಚರಿದ್ದಾಗ ಅನಿಸದ ಭಾವ 
ಕಳೆದುಕೊಳ್ಳುವಾಗ ಉಕ್ಕುವ ಮೋಹ!
ಸಾವಿದು ಸಾಯಿಸದು
ಬದುಕಿದ್ದ ಭಾವಗಳ ನೆನಪಿಸುವುದು....

***

ಖುಷಿಗಳಿಗಷ್ಟು ಅವಸರಗಳು 
ಬೇಕಿತ್ತು;
ಸರಸರನೇ ಹುಟ್ಟಿದ ನೆನ್ನೆಯ
ನಿನ್ನ ಕನಸಿತ್ತು! 

***


ಅಲ್ಲೆಲ್ಲೋ ನಿಂತು ಕೊಸರಾಡುವ
ಜನರ ನೋಡಿ 
ನನಗೆ ಎಲ್ಲಿಲ್ಲದ ಭಯ ಆವರಿಸಿ
ಓಡುತ್ತೇನೆ ಮತ್ತೂ ಓಡುತ್ತೇನೆ,
ಎಷ್ಟು ಎಡತಾಕಿದ ಕಲ್ಲುಗಳೋ
ಎದೆಗೇ ಬಂದಪ್ಪಳಿಸುವ ಕಾತುರ
ಆಗದ ಸ್ಥಿತಿಗೆ ಅಲ್ಲಲ್ಲೇ ಅದರಷ್ಟಕೇ ಸಿಡಿದು ನಿಂತವು!
ನಾನು ಕಾರಣವಲ್ಲ; ಅವುಗಳ ಗುಣಕೆ!

***

ತಲುಪದ ದಾರಿಯೇ ಹಿಡಿದರು
ನಮ್ಮೊಂದಿಗೆ ನಾವು ಉಳಿಯುವ
ಮಿಕ್ಕಂತೆ ಅವರಿವರು ಸೇರಿಕೊಂಡಾರು
ನಮ್ಮ ವೇಗ- ಆವೇಗಕ್ಕಾಗಿ ಮರುಳು! 

25/12/2014

ಕವನ

ಸುಮ್ಮನಿದ್ದು ಹೊರಡೋಣ ಬಿಡು


ಸುಮ್ಮನಿದ್ದು ಹೊರಡೋಣ ಬಿಡು
ನೀನು ಮಾತನಾಡಬೇಡ; ನಾನೂ,,

ಇಲ್ಲೆಲ್ಲೋ ಹೊರಳಿಕೊಂಡು
ದಾರಿ ಗುಡ್ಡ ಹತ್ತಿಕೊಂಡು
ನಡೆದುಬಿಡೋಣ ಬಿಡು
ನೀನು ಮಾತನಾಬೇಡ; ನಾನೂ,,

ಇದ್ದ ಕಾಲವೆಲ್ಲ ಹೀಗೆ ಕೊರಗಿ
ಕಳೆದ ಕಾಲದೊಳು ಹುಡುಕುತ ಅಡಗಿ
ಕನಸ ಕೂಸುಗಳ ತೊರೆದು
ಇದ್ದು ಬಿಡೋಣ ಬಿಡು ಸಿಗದಂತೆ

ಎದುರಾದರೂ ಮಬ್ಬುಗತ್ತಲು
ನಿನ್ನ ನಾನು; ನನ್ನ ನೀನು ಕಾಣದಂತೆ
ಉಳಿದುಬಿಡೋಣ ಬಿಡು ಹೀಗೆಯೇ
ನನ್ನ ಕಲ್ಪನೆಗಳಾದರೂ ಉಸಿರಾಡಲಿ!

23/12/2014



ಬದುಕು ಅರ್ಥ ಕಳೆದುಕೊಂಡ ಮೇಲೆ
ಶಬ್ಧಗಳು ಅರ್ಥ ಪಡೆದವು!
ಜೀವನ ಸಾಗಿದೆ; ಅದರೊಟ್ಟಿಗೆ
ಮೌನ, ಕಲ್ಪನೆಗಳ ಕಸರತ್ತು!

23/12/2014

Monday 22 December 2014

ಕವನ

ಬಿಂದಿಗೆಯಾಗಿ...


ಬೇಸರಕೆ ಆಟಿಕೆಯಂತೆ ಕಂದನಿಗೆ
ಹಾಗೆಯೇ 'ನೀನು' ಎನ್ನುವ ಒಂದು ಕಲ್ಪನೆ!
ಆಡುವೆಯಷ್ಟೆ ಖುಷಿಗಾಗಿ
ಕೆಲಕಾಲ ಕಳೆದು ಹೋಗುವ
ಹೀಗೆಯೇ ಮಗುವಾಗಿ
ಬಾವಿಯಲ್ಲಿ ಬಿದ್ದ ಚಂದ್ರ
ಎಳೆದು ಎತ್ತಿ ಏರಿಸಿದ ಮುಗ್ಧ ಮಗುವಾಗಿ!
''ನೀನು'' ಎನ್ನುವ ಹಗ್ಗವ ಹಿಡಿದು; ಚಂದದ ಚಂದ್ರಕೆ
ಆಗಾಗ ಬಾಯಿಯೊಳು ಜಿಗಿವ ಬಿಂದಿಗೆಯಾಗಿ!


22/12/2014
ನನ್ನ ಪದಗಳಿಗೆ 
ಅವರ ಬೆರಗು ಇವರ ಕೊರಗು
ಹಿಡಿಸಲಿಲ್ಲ ನನ್ನ ಪದಗಳು;
ಮಾತುಗಳಂತೆ ಬಿಟ್ಟುಬಿಡುವ 
ಈ ಪದಗಳನ್ನು ಎಂದುಕೊಂಡೆ;
ಇರಲಿ ಬಿಡು ಈ ಪದಗಳಾದರೂ 
ನನ್ನ ಹಿಡಿದಿಟ್ಟಿವೆ
ಶಕ್ತಿ-ಯುಕ್ತಿ ಇದ್ದ 
ಆ ಮನಗಳಿಂದಾಗದ್ದು!

****


ಎಲ್ಲಿ ಅಡಗಿದ್ದೋ ನೀ
ಮಾಯೆಯ ಮಡಿಲಿಂದಿಲ್ಲಿಗೆ 
ಬಂದು
ಜೊತೆ ನಡೆದಂತೆ ನವಿರು 
ನನ್ನೊಡಲು
ನಿಜ ಹೇಳು ಬಂದೆಯೋ ನೀನು.. !

****

ಮನದ ಮಾತಿಗೆ
'ಮೌನ' ಜಡಿದ ಬೀಗ;
ಕೈ ಕೀಲಿ ಕಳೆದಿದೆ
ನಕ್ಕುಬಿಡುವೆಯಾ?!

22/12/2014

Sunday 21 December 2014

ಕವನ

ಕನ್ನಡಿ



ಬರೆಯುತ್ತಲಿದ್ದೆ ಬರೆಯುತ್ತಲಿದ್ದೆ
ಗೀಚಿದಂತೆ ವೇಗವಾಗಿ
ನಾ ಹಿಡಿದದ್ದು ಕನ್ನಡಿಯೆಂದು
ನೆನಪಾಗಿ; ಹಾ....
ಬೆಚ್ಚಿ ಗಾಬರಿ ಬಿದ್ದೆ
ಕನ್ನಡಿಯು ಹಾಳಾಯ್ತು;
ಜೊತೆಗದು ಎಲ್ಲರ ನೋಟಕೂ ದಕ್ಕಿತ್ತೆಂದು
ಮತ್ತೂ ಖಿನ್ನಳಾದೆ!
ನನ್ನ ಕನ್ನಡಿಯ ಈಗ ನಾನೇ ನೋಡದಾದೆ
ಊಹೆಗೂ ಮೀರಿದ ಛೇದಗಳಿದ್ದ ಕಲ್ಪನೆ
ನಾನು ನೋಡಲೇ ಇಲ್ಲ ಆ ನನ್ನ ಕನ್ನಡಿಯ
ಯಾರೋ ಕೂಗಿದಂತಾಯ್ತು;
''ಲೇ ಏನೇ ಚೆನ್ನಾಗಾಗ್ಬಿಟ್ಟಿದ್ದೀಯಾ?!!''
ಅಬ್ಬಾ, ಹೌದೇ?!! ನೋಡಿದೆ
ನನ್ನೆದುರು ನನ್ನ ಕನ್ನಡಿ ನಗುತ್ತಿತ್ತು
ಹಲವು ಮಸುಕಗಳ ತೊರೆದು!

21/12/2014

Saturday 20 December 2014

ಕಣ್ಮುಚ್ಚಿ ಅಂದಾಜಲಿ ಆಶ್ರಯಿಸಿ ನಡೆಯುವುದ ಬಿಟ್ಟು
ಕಣ್ಬಿಟ್ಟು ಅಲ್ಲಲ್ಲಿ ಇಳಿದು ಎಲ್ಲೆಲ್ಲೋ ಹತ್ತಿ
ಉರುಳಿ ಬಿದ್ದರೂ ನೆಗೆದು ಎದ್ದು
ನೆನಪಾಗುವುದು ಒಂದು ನನ್ನ ಕನಸು!

***

ಮರೆಮಾಚಿಟ್ಟುಕೊಳ್ಳಬೇಕೆಂದಿದ್ದೆ
ಎಲ್ಲಾ ನಿಂತವೀಗ ಬಯಲಲಿ
ಇನ್ನೇಕೆ ಅವಿತುಕೊಳ್ಳಲಿ
ಬೇಕಿದ್ದವರು ಅವಿತುಕೊಳ್ಳಲಿ
ಅಲ್ಲಲ್ಲಿ ನಾನಿದ್ದ ಕಾರಣಕೆ! 

20/12/2014

ಕವನ

"ಗಂಗೆ ಉಕ್ಕುವಳು"


ಗಂಗೆ ಉಕ್ಕುವವರೆಗೂ ಜಪಿಸಿದ
ರಭಸದ ಅವಸರಕೆ ತತ್ತರಿಸಿ
ಜಟೆಗಾಗಿ ಶಿವನ ಕರೆದ ಗೋಗರೆದ
ಭಗೀರಥ;
ಬಂದಳಷ್ಟೇ ಗಂಗೆ, ಇಳಿದಳಷ್ಟೆ ಭಾವಕೆ
ಹೊರಡುವ ಮಾತಿಲ್ಲ, ನಿಲ್ಲುವ ತವಕವೂ
ಹುಟ್ಟಿ ಹುಟ್ಟಿ ಹರಿವಳಷ್ಟೇ
ಹೃದಯ ಕಮಲದೊಳಿಂದ
ರೌದ್ರನಾದರೂ ಸೌಮ್ಯನಾಗಿ
ತನ್ನ ಶಿರಕೆ ಆಹ್ವಾನಿಸಿ
ತುಂಬಿ ಮೊಗೆದು ಗೆದ್ದ ಮನದಲಿ ನಿಂದು!

21/12/2014

Friday 19 December 2014

ಲೇಖನ

ಕನಸು



'ಕನಸು', ಕೇಳಲೆಷ್ಟು ಸುಮಧುರ!. ಕನಸೆಂಬುದು ಯಾರಿಗಿಲ್ಲ? ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕನಸು ಹುಟ್ಟುತ್ತಾ ಕಾಡುತ್ತಲೇ ಇರುವುದು. ಕನಸು ಕಾಣದ ಮನಸ್ಸು ಸಾಧ್ಯವೇ? ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಿದ್ದರೆ ಬದುಕಲಿ ಸೊಗಸೇ ಇರುತ್ತಿರಲಿಲ್ಲ. ಬದುಕು ಎಂದಾಗ ಅದರೊಳಗಿನ ಸೋಲು ಗೆಲುವುಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಸೋಲು ಗೆಲುವುಗಳು ಎಂಬ ಅಂಶಗಳು ಹುಟ್ಟಿಕೊಳ್ಳಲೂ ಮತ್ತೂ ಈ ಕನಸುಗಳೇ ಕಾರಣ. ಆದರೂ ಎಲ್ಲರೂ ಕನಸಿನ ದಾಸರೇ. ''ಬೆಳಕೇ ಇಲ್ಲದ ದಾರಿಯಲಿ ನಾನು ನಡೆಯಬಲ್ಲೆ; ಕನಸೇ ಇಲ್ಲದ ದಾರಿಯಲಿ ಹೇಗೆ ನಡೆಯಲಮ್ಮ'' ಎನ್ನುವ ರವಿಚಂದ್ರನ್ರವರ ''ಕನಸುಗಾರ'' ಚಿತ್ರದ ಗೀತೆಯ ಈ ಒಂದು ಸಾಲು ನನ್ನನು ಸದಾ ಕಾಡುತ್ತದೆ. 'ಸೋತೆ ಇನ್ನಾಗದು' ಎನ್ನುವ ಪ್ರತೀ ಹಂತದಲ್ಲೂ ಅದೆಲ್ಲಿರುವುದೋ ಈ ಗಾನ ಬಂದು ಮನಕ್ಕೆ ರಾಚುತ್ತದೆ. ಎಚ್ಚೆತ್ತಂತೆ ಮತ್ತೆ ಮತ್ತೆ ನನ್ನೊಳ ಚೇತರಿಕೆ ಮತ್ತೆ ಕನಸ ಕುಸುರಿ ಪ್ರಾರಂಭ.

ಕನಸೇ ಹಾಗೆ; ಪ್ರಚೊದಿಸುತ್ತದೆ, ಬರಸೆಳೆಯುತ್ತದೆ ನೀಯತ್ತಿಗೆ ತಕ್ಕಂತೆ ಫಲವನ್ನೂ ಹತ್ತಿರಾಗಿಸುತ್ತದೆ. ಆದರೂ ಕನಸು ಕಾಡಿದಷ್ಟು ಮತ್ತಿನ್ಯಾವುದು ಮನುಷ್ಯನ ಮನಸ್ಸನ್ನು ಕಲಕಿಲ್ಲವೆನ್ನಬಹುದು. ಸಾಮಾನ್ಯವಾಗಿ ನಮಗೆ ಬೀಳೋ ಕನಸಿಗೂ ನಾವು 'ಕನಸು' ಎನ್ನುವ ಕನಸಿಗೂ ವ್ಯತ್ಯಾಸವುಂಟು. ದಿನನಿತ್ಯದ ಜೀವನದಲ್ಲಿ ನಮ್ಮ ನೋವು, ನಲಿವು, ಒಲವು ಹೀಗೆ ಯಾವುದನ್ನು ತೀರಾ ಮನಸ್ಸಿಗೆ ಹಚ್ಚಿಕೊಳ್ಳುತ್ತೇವೋ ಅವುಗಳೇ ರಾತ್ರಿಯ ಕನಸುಗಳಾಗಿ ಬರುವುದು.
ಮೊನ್ನೆಯಷ್ಟೇ ಬಿದ್ದ ಕನಸಿದು. ಕನಸಿನ ಕಾರಣಗಳನ್ನೂ ಊಹಿಸಿಬಿಟ್ಟಿದ್ದೆ ನಾನಾಗ. ಒಂದು ರಾತ್ರಿಯ ಕನಸಲ್ಲಿ ನಾನೊಂದು ಮಹಡಿಯ ಮೇಲೇರುತ್ತಿರುವೆ, ಮಹಡಿಯ ತೆರೆಸ್ಸನ್ನು ತಲುಪೋ ಸಮಯ, ಮಹಡಿಯ ಕೊನೆ ಮೆಟ್ಟಿಲು ಬಹಳ ಎತ್ತರವಾಗಿದೆ, ಸಾಮಾನ್ಯ ಅಳತೆಗಿಂತ ಹೆಚ್ಚು. ಸರಿ ಅಲ್ಲಿ ಒಂದಡಿಯಷ್ಟೇ ಜಾಗವಿತ್ತು ಕಾಲಿಡಲು. ಆದರೆ ಅಲ್ಲಿ ಅಷ್ಟಗಲವೂ ಒಂದು ನೀಲಿ ವಸ್ತ್ರ, ಅದರ ಮೇಲೆಲ್ಲಾ ಅರಿಶಿನ-ಕುಂಕುಮ, ನಿಂಬೆ ಹಣ್ಣು ಇತ್ಯಾದಿ ಏನೇನೋ. ಒಟ್ಟಿನಲ್ಲಿ 'ಮಾಟ' ಎನ್ನುವಂತೆ ಎಲ್ಲಾ ಅಂಶಗಳಿದ್ದವು. ಹಾಗಿದ್ದಾಗ ಅಲ್ಲಿ ಕಾಲಿಡಲು ಹಿಂಜರಿಕೆ. ಮೇಲೇರಬೇಕಾದ ಅನಿವಾರ್ಯ. ಕನಸಿನಲ್ಲೂ ನಾನು ಅಳುತ್ತಿದ್ದಂತೆ ಅನಿಸುತ್ತಿತ್ತು. ಯಾರೋ ಹೀಗೆಲ್ಲಾ ಮಾಡಿದ್ದಾರೆ ಮೂಢರು ಎಂದೊ, ನನಗಾಗದವರೂ ಇದ್ದಾರೆಯೇ ಎಂದೊ, ಇಷ್ಟ ಕಷ್ಟವಾಗುತ್ತಿದೆ ಎಂದೊ ನೋಯ್ಯುತ್ತಿದ್ದೇನೆ. ಮತ್ತೊಂದು ಆಶ್ಚರ್ಯವೆಂದರೆ ನನ್ನ ಹೊಟ್ಟೆಯಲ್ಲಿ ಮಗುವಿದ್ದಂತೆ ನಾನು ಅಷ್ಟು ಎತ್ತರಕ್ಕೆ ಏರಲಾಗದಂತಹ ಪರಿಸ್ಥಿತಿ. ಹಿಂದಿನಿಂದ ಒಬ್ಬರು ನನ್ನನು ಹತ್ತಿಸಲು ಹಿಡಿದಿದ್ದರು. ಮೇಲೊಬ್ಬ ಹೆಂಗಸು ಕೈ ಕೊಟ್ಟು ಸಹಕರಿಸುತ್ತಿದ್ದರು. ಆದರೂ ನನಗೆ ತೀರ ಸಂಕಟ!. ಸಿಕ್ಕಾಪಟ್ಟೆ ಭಯವಾಗಿ ಕಣ್ಣು ಬಿಟ್ಟು ಕನಸು ಎಂದು ಗೊತ್ತಾದ ಮೇಲೂ ಭಯಂಕರ ಹಿಂಸೆಪಟ್ಟಿದ್ದೆ ಆ ಇರುಳು.

ಬೆಳಗೆ ಎದ್ದಾಗಲೂ ಅದೇ ವೇದನೆ. ಯಾಕೆ ಹೀಗಾಯ್ತು ಅಂತೆಲ್ಲಾ ಚಿಂತನೆ. ಮೊದಲೆ ಈ ಟೀ,ವಿ ಚಾನೆಲ್ಗಳಲ್ಲಿ ಹೇಳೋ ಮಾತು ಕಿವಿಗೆ ಬಿದ್ದಿದ್ದು.. ಯಾರಾದರೂ ಮಾಟ ಮಾಡಿಸಿದ್ದರೆ ಅದು ನಮಗೆ ಸೂಚನೆ ನೀಡಲು ಕನಸುಗಳಲ್ಲಿ ಬರುತ್ತವೆಂದು. ಓ… ಇನ್ನೂ ಕಷ್ಟವಾಯ್ತು ಈ ಕನಸಿನ ವಿಶ್ಲೇಷಣೆ. ಸರಿ ಹಾಳಾಗಿ ಹೋಗಲಿ ಎಂದು ಸುಮ್ಮನಾಗಿ ಕೆಲಸಕ್ಕೆ ಹೊರಟೆ. ಮತ್ತೆ ಸಂಜೆ ಬಂದಾಗ ಅದೇ ಚಿಂತನೆ. ಆಗ ಹೊಳೆಯಿತು ನೋಡಿ; ದಿನವೂ ನೋಡೋ ಸಿರಿಯಲ್ನಲ್ಲಿ ಗರ್ಭಿಣಿ ಸ್ರ್ತೀಯೊಬ್ಬಳಿಗೆ ಕಾಡುವ ತರತರಹದ ರೀತಿಗಳನ್ನು ಕಣ್ಣುಬಿಟ್ಟುಕೊಂಡು ನೋಡಿ ನೋಡಿ ಕನಸಲಿ ನಾನೇ ಆ ಭಾವವನ್ನು ಭಾವಿಸಿದೆ ಎಂದು ತಿಳಿಯಿತು. ಇನ್ನು ಮಾಯಾ ಮಂತ್ರಗಳು; ಹಿಂದಿನ ದಿನವಷ್ಟೇ ನನ್ನಕ್ಕ ಮಾಟದ ಒಂದು ಕಥೆ ಹೇಳಿದ್ದಳು. ನನಗೂ ''ಹುಷಾರೂ'' ಎಂದೂ ಹೇಳಿದ್ದಳು. ಓಹ್! ಒಳ್ಳೆ ಕತೆಯಾಯ್ತು ನನ್ನದು ಅಂದುಕೊಂಡೆ. ಕತೆಗಳನ್ನು ನೋಡಿ, ಕೇಳಿಯೇ ಈ ಮಟ್ಟಕ್ಕೆ ತನ್ಮಳಾಗಿ ಹೋದರೆ ಹೇಗೆ? ಎಂದು ವಿನೋದವೆನಿಸಿದರೂ ತುಸು ಹೆಮ್ಮೆಯೇ ಅನಿಸಿತು. ಸಾಹಿತ್ಯಾತ್ಮಕವಾಗಿ ಈ ರೀತಿಯ ತನ್ಮಯತೆ ಒಂದು ಉತ್ತಮಾಂಶವೆನಿಸಿತು. :-)

 ​ 
​ 
ಹಾಗೆಯೇ ನಾವು ಹೆಚ್ಚು ಬಯಸುವ ಹೊಸತನಗಳೂ ಸಹ ಹೀಗೆ ಕನಸುಗಳಾಗುತ್ತವೆ. ಬಹಳ ಅಪರೂಪವೆಂಬಂತೆ ಮಾತ್ರ ಅಸಂಬದ್ಧ ಕನಸುಗಳು ಬೀಳುತ್ತವೆ. ಅವುಗಳನ್ನೂ ಸೂಕ್ಷವಾಗಿ ವಿಶ್ಲೇಷಿಸಿದ್ದೇ ಆದಲ್ಲಿ ಅವುಗಳನ್ನೂ ಅರಿತುಕೊಳ್ಳಬಹುದು. ಇವಿಷ್ಟು ಒಂದು ರೀತಿಯ ಕನಸುಗಳು. ಈ ಕನಸುಗಳಿಗೆ ಸಮಯದ ಆಧಾರದ ಮೇಲೆ ನಿಜವಾಗುವುದೋ ಇಲ್ಲವೋ ಎಂದೂ ಕೂಡ ಅನಿಸಿಕೆಗಳಿವೆ. ಅವು ನಿಜವೋ ಸುಳ್ಳೋ ಅವರವರ ತರ್ಕಗಳು. ನನಗಂತೂ ಸುಳ್ಳು. ಆದರೆ ನಾವೇ ಕಾಣೋ ಕನಸುಗಳು ಬಹುಶಃ ನಿಜವಾಗಲೂ ಆಗಬಹುದು ಅದು ಮತ್ತೊಂದು ರೀತಿಯ ಕನಸುಗಳು. ಇವು ನಮ್ಮ ಕನಸುಗಳು; ಹಗಲುಗನಸುಗಳು.

ಹಗಲುಗನಸೆಂದು ಉತ್ಪ್ರೇಕ್ಷೆ ಮಾಡುವುದು ಬೇಡ. ಇವು ನಮ್ಮ ಸಾಧನೆಯ ಪ್ರಚೋದಕಗಳು, ಹುಮ್ಮಸ್ಸುಗಳು. ಕನಸುಗಳು ದೊಡ್ಡದಿರಲಿ ಚಿಕ್ಕದಿರಲಿ ನಾವು ಅದರೊಟ್ಟಿಗೆ ಅನುಭವಿಸುವ ಸಂತೋಷವು ಮುಖ್ಯ. ಹೀಗೆ ಭಿಕ್ಷುಕನೊಬ್ಬ ಅರಸನಾದ ಕನಸು, ಅಗಸನೊಬ್ಬ ಸಾಮಂತನಾದ ಕನಸುಗಳು ಉದಾಹರಣೆಗಳನ್ನು ನಾವು ಕತೆಗಳಲ್ಲಿ ಕೇಳಿರುತ್ತೇನೆ. ಇವೆಲ್ಲಾ ಚಿಕ್ಕಮಕ್ಕಳ ಕತೆಗಳು. ಈ ರೀತಿಯ ಕತೆಗಳು ನಮಗೆ ಕನಸುಗಳ ಕಲ್ಪನೆಯನ್ನು ನೀಡುತ್ತದೆ. ಆದಕಾರಣ ಸಣ್ಣ ವಯಸ್ಸಿನಲ್ಲಿ ನಾವು ಹೆಚ್ಚು ಹೆಚ್ಚು ಮಕ್ಕಳಿಗೆ ಕತೆಗಳನ್ನು ಹೇಳುತ್ತೇವೆ. ಕಲ್ಪನೆ-ವಸ್ತು ಪರಿಕಲ್ಪನೆಗಳನ್ನು ಮೂಡಿಸುವಲ್ಲಿ ಕತೆಗಳು ಮಹತ್ವದ ಪಾತ್ರ ವಹಿಸುತ್ತವೆ. ಜಾನಪದ ಕತೆಗಳಲ್ಲಂತೂ ಕತೆಗಳೊಳಗಿನ ಕನಸುಗಳು; ಕನಸುಗಳೊಳ ಕತೆಗಳು ಬಲು ರೋಚಕವಾಗಿರುತ್ತವೆ. ಸರಿಯಾಗಿ ಗ್ರಹಿಸಿದ್ದರೆ ಮಾತ್ರ ಕತೆ ಪೂರ್ಣವಾಗಿ ಅರ್ಥವಾಗುವುದು. ಇಲ್ಲದ್ದಿದ್ದರೆ ಇಲ್ಲ. ಅಂತಹ ಕತೆಗಳನ್ನು ನಾವು ಪದವಿ ಪಠ್ಯವಸ್ತುವಾಗಿ ಪಡೆಯುತ್ತೇವೆ. ಈ ಕತೆಗಳಿಗೂ ಕಲ್ಪನೆಗಳಿಗೂ ಕನಸುಗಳಿಗೂ ಎಲ್ಲೊ ಒಂದು ಆಂತರಿಕ ಸಂಭಂದವಿದೆ ಎಂದೆನಿಸುತ್ತದೆ. ಕೇಳುವ ಕತೆಗಳು ಕಲ್ಪನೆಗಳಲ್ಲಿ ಇನ್ನಷ್ಟು ರೆಕ್ಕೆಪುಕ್ಕ ಹೊಂದಿ ಕನಸುಗಳಲ್ಲಿ ಬೇರೆಯೇ ಹಕ್ಕಿಯಾಗಿ ಹಾರಾಡುತ್ತವೆ. ಹೌದಲ್ಲವೇ?! :-)

ಹೀಗೆಲ್ಲಾ ನಾವು ನಮ್ಮ ಬಾಲ್ಯವನ್ನು ಕಳೆಯುವಾಗ ನಮ್ಮೊಳಗೆ ಹಲವು ಬಗೆಯ ಆಸೆಗಳು ಹುಟ್ಟಿಕೊಳ್ಳುತ್ತವೆ. ಮುಂದೆ ನಾನು ಚೆನ್ನಾಗಿ ಓದಬೇಕು, ಓದಿ ಡಾಕ್ಟರ್, ಎಂಜಿನಿಯರ್, ಟೀಚರ್, ಇಲ್ಲ ಸಿನೆಮಾ ನಟ, ರೈತ ಇತ್ಯಾದಿಯಾಗಿ ಆಗಬೇಕು ಎಂದೆಲ್ಲಾ ಅಂದುಕೊಳ್ಳುತ್ತೇವೆ. ಬೆಳೆಯುತ್ತಾ ಹೋದಂತೆ ಆಸೆಗಳು ಕನಸುಗಳಾಗುತ್ತವೆ. ಅಂದುಕೊಂಡ ಆಸೆಗಳ ಸಾಕಾರಗಳಿಗೆ ನಾವು ನಮ್ಮದೇ ಆದ ರೂಪುರೇಶೆಗಳನ್ನು ಕೂಡಿಸುತ್ತಾ ಹೋಗುತ್ತೇವೆ. ಇವುಗಳೇ ನಮ್ಮ ಕನಸುಗಳು. ಕೆಲವರಿಗೆ ಬಾನೆತ್ತರದಲಿ ಹಾರಾಡೋ ಕನಸು. ಕೆಲವರಿಗೆ ಇದ್ದಲ್ಲಿಯೇ ಸ್ವರ್ಗ ಕಾಣೋ ಬಯಕೆ(ಕನಸು), ಮತ್ತೆ ಕೆಲವರಿಗೆ ಇರುವುದನ್ನು ಇಲ್ಲದವರಿಗೆ ನೀಡಿ ಆತ್ಮತೃಪ್ತಿಯ ಕನಸು.. :-)

ಈ ಕನಸುಗಳಲ್ಲಿ ಶ್ರೇಷ್ಠ-ನೀಚವೆನ್ನುವ ಬೇಧವಿಲ್ಲ,, ಹೇಗೆ ಜನರಲ್ಲಿನ ಮನೋಭಾವವು ಭಿನ್ನವೋ ಹಾಗೆಯೇ ಅವರ ಕನಸುಗಳು ಅವರವರಿಗೆ ಶ್ರೇಷ್ಠವೇ ಸರಿ. ಆದರೆ ಈ ಕನಸುಗಳ ಸಾಕಾರಕ್ಕಾಗಿ ಮತ್ತೊಬ್ಬರ ಕನಸ್ಸನ್ನು ಕೀಳುವುದು ಸಲ್ಲದು. ಹಾಗೆಯೇ ಕನಸು ಕಾಣುವುದು ತಪ್ಪಲ್ಲ.

ಈ ಕನಸುಗಳು, ಎಷ್ಟೋ ಬಾರಿ ಈ ಬದುಕು ದುಸ್ತರವೆನಿಸಿದರೂ ಮತ್ತೂ ನಮ್ಮನ್ನು ಬದುಕುವಂತೆ ಮಾಡುತ್ತದೆ. ಭಗ್ನ ಕನಸುಗಳು ತಂದ ನೋವನ್ನು ಮರೆಯಲೂ ಮತ್ತೂ ಕನಸುಗಳೇ ಆಸರೆ. ಏನೇ ಹೇಳಿ ರವಿಚಂದ್ರನ್ರವರ ಕನಸಿನ ಪರಿಕಲ್ಪನೆ ಯಾಕೋ ತುಂಬಾ ಇಷ್ಟವಾಗುತ್ತದೆ. ಬದುಕಿನೆಡೆಗೆ ಸೆಳೆಯೋ ಆ ಎಲ್ಲಾ ಅಂಶಗಳೂ ನನಗೆ ಶ್ರೇಷ್ಠವೇ ಎನಿಸುತ್ತವೆ. ಹೀಗೆ ಒಮ್ಮೆ ಬಸ್ಸಿನಲ್ಲಿ ಒಬ್ಬ ಅಂಗವಿಕಲ ಹುಡುಗಿಯೊಬ್ಬಳು ಕುಂಟುತ್ತಾ ಬಸ್ ಹತ್ತಿ ಬಂದಳು, ನನ್ನೆದುರೇ ಬಂದು ಕುಳಿತಳು, ಹಾಗಾಗಿ ನಾನು ಗಮನಿಸುವಂತಾಯಿತು. ಪಾಪವೆಂದು ನೋಡುತ್ತಿದ್ದೆ. ಆದರೆ ಆಕೆಯು ತೊಟ್ಟ ಬಟ್ಟೆ ಎಷ್ಟು ಅಚ್ಚುಕಟ್ಟು!,, ಹೊಸ ತರಹದ ದುಪ್ಪಟ್ಟ! ಅಂದವಾಗಿ ಸಿಂಗರಿಸಿಕೊಂಡಿದ್ದಳು. ನೋಡಿ ಒಂತರ ಖುಷಿಯಾಗೋಯ್ತು. ಸಣ್ಣ-ಪುಟ್ಟ ತೊಂದರೆಗಳಿಗೆಲ್ಲಾ ಆಕಾಶವೇ ತಲೆ ಮೇಲೆ ಬಿದ್ದಂತೆ ತಲೆ ಕೆದರಿಕೊಂಡು ಓಡಾಡೊ ಜನರ ಮುಂದೆ ಆ ಹುಡುಗಿ ಸಿಕ್ಕಾಪಟ್ಟೆ ಆತ್ಮವಿಶ್ವಾಸದವಳು ಎಂದೆನಿಸಿತು. ಆ ಶೃಂಗಾರದ ಅಚ್ಚುಕಟ್ಟುತನ ಜೀವನದೆಡೆಗಿನ ಅವಳ ಜೀವನೋತ್ಸಾಹವೆನಿಸಿತು. ನಾನು ಕಲಿತೆ ಕೂಡ ಈ ಸಂದರ್ಭದಲ್ಲಿ,, :-)

ಹೀಗೆ ಆಸೆಗಳು, ಕನಸುಗಳು ನಮ್ಮೊಳಗೆ ಮತ್ತೆ ಮತ್ತೆ ಹುಟ್ಟಬೇಕು ಜೀವನದ ಹಾದಿ ಸೊಗಸೆನಿಸಿಕೊಳ್ಳಲು. ಏನೇ ಬರಲಿ ಕನಸೊಂದಿರಲಿ! :-) ಎನ್ನುವಂತೆ ನಾವು ಕನಸುಗಳ ಆರಾಧಕರಾಗಬೇಕು. ನಿರ್ವಿಕಾರ, ನಿಸ್ವಾರ್ಥ ಕನಸುಗಳ ಮಾಲೀಕರಾಗಬೇಕು. ಮನಸ್ಸಿನಂತೆ ಕನಸುಗಳು, ಕನಸುಗಳು ಸುಂದರ; ಸುಂದರ ಕನಸುಗಳೇ ಮನುಷ್ಯನ ನಿಜ ಸೌಂದರ್ಯ. :-)


ಧನ್ಯವಾದಗಳು,
ದಿವ್ಯ ಆಂಜನಪ್ಪ
೨೩/೧೦/೨೦೧೪  

Wednesday 17 December 2014

ಕವನ

ಸಾಮರ್ಥ್ಯ



ಅಗೋ ನೋಡು ಚಪ್ಪರ ಮೇಲಣ ಸೂರ್ಯ
ನನ್ನ ನೆತ್ತಿಯ ಮೇಲೆಯೇ

ಈ ಸುಂದರ ಹಸುರು 
ನನ್ನಯ ಎಡ ಬಲ

ಈ ಉಕ್ಕೋ ಚಿಲುಮೆ
ನನ್ನಂಗಳದ ಕಾವೇರಿ

ಹೌದು ಇವೆಲ್ಲವೂ ನನ್ನವೇ,
ನನ್ನ ಬೆಂಬೆಲಗಳು!

ನಿಸರ್ಗವಿದು ನನ್ನದು
ಆದರೆ ನಾನೇ ನಿಸರ್ಗವಲ್ಲ!

ಬೆಂಬಲಕ್ಕೂ ಸ್ವಯಂ ಸಾಮರ್ಥ್ಯಕ್ಕೂ
ಇದುವೇ ವ್ಯತ್ಯಾಸ!

ಅರಿಯದೆ ಅವರಿವರ ನಡುವಲಿ ನಾವು ನಿಲ್ಲುವುದು ಬೇಡ
ನಿಸರ್ಗದಂತೆ ಜನರು ಸುಮ್ಮನಿರರು! 

18/12/2014

ಕವನ

ಈತ!


ಅವನು ಎದುರುಗೊಂಡಾಗಲೆಲ್ಲಾ
ಏನೋ ಹುಮ್ಮಸ್ಸಿನ ನಗು
ಅದೇನು ಅವನು ನಗುವನೋ
ಇಲ್ಲ ನಗಿಸುವನೋ ತಿಳಿಯದು
ಪಟ್ಟನೇ ನನ್ನದು ದೀರ್ಘವಾದ ಮುಗುಳ್ನಗೆ!
ಇಷ್ಟೇ ಏನು?;
ನೋಡಿ ನಕ್ಕು ತಲೆ ತಗ್ಗಿಸುವನು ನಾಚಿ
ಆಹಾ!! ಎಂತಹ ಕಚಗುಳಿಯ ನಗು ನನ್ನೊಳಗೆ
ಈ ಹುಡುಗನ್ಯಾಕೆ ನನ್ನ ನೋಡಿ ಹೀಗೆ ನಾಚುವ?!
ನನಗೋ ಬೆರಗು ಮತ್ತೂ ಪುಳಕ,
ದೂರವೇ ನಿಲ್ಲುವ
ತುಸು ಮರೆಯಲೇ
ಕಂಡೂ ಕಾಣದೇ
ಇಣುಕಿ ನೋಡುವ; ಕಣ್ಣಿಗೆ ಸಿಕ್ಕಿ ಬೀಳುವ
ಮತ್ತೂ ನಾಚಿ ನಗುವ ಈ ಹುಡುಗ
ಮರೆತರೂ ಏಕೊ ನೆನಪಿಗೆ ಬರುವ!
ಏನೂ ಬೇಡದ ತಿಳಿ ನಗೆಯ ಸ್ನೇಹಿತ
ಬೊಗಸೆತುಂಬಾ ನಗು ಚೆಲ್ಲುವ ಸುಕುಮಾರನೀತ!

18/12/2014

Tuesday 16 December 2014

ಹಕ್ಕಿಯೊಂದು 
ಹಾರಿ ಹೋಯಿತು ಎದುರಲಿ
ಸುಮ್ಮನೆ ನಾನದ ನೋಡುತಿರಲು
ಒಮ್ಮೆ ತಿರುಗಿ ಬಂದು 
ನನಗಾಗಿ ನಿಂತು ಕೊಂಬೆಯಲಿ 
ಹೊರಡುವೆನೆಂದು ದಿಟ್ಟಿಸಿ 
ಕೊನೆಯಲಿ
ಮಾಯವಾದ ಆ ಘಳಿಗೆಯಿಂದ 
ನಾನುಳಿದೆ ಆ ಮರದಡಿಯಲಿ


*************

ಸೋಸಬೇಕಿತ್ತು ಮನದೊಳಿಂದ 
ಮೌನವ;
ಸೆಳೆದುಕೊಳ್ಳೊ ನಗುವಿರಲಿಲ್ಲ,
ಕೇಳುವ ಕಿವಿಯೂ,
ಹೊಗಳಿ ಬೈವ ಬಾಯಿಯೂ,
ಗೋಡೆಗೆ ಮುಖ ಮಾಡಿ ಇನ್ನೆಷ್ಟು ಅಂದಾಜಿಸಲಿ
ನನ್ನೇ ನಾ?!
ಹರಿದು ಹಂಚಿದ್ದೆ ಗೋಡೆಗಳಿಗೆ
ಕೆಲವು ಅಲ್ಲೇ ಉಳಿದವು ಸ್ತಬ್ಧವಾಗಿ;
ಮತ್ತೆ ಕೆಲವು ಹೊರಡಿದವು ಶಬ್ದಗಳಾಗಿ!

**************

ಮಾತನಾಡುವುದ ನಿಲ್ಲಿಸಿಬಿಟ್ಟೆ
ಈಗ ಮಾತೇ ತೊದಲು!

ಕನಸು ಕಾಣುವುದ ನಿಲ್ಲಿಸಿಬಿಟ್ಟೆ
ಈಗ ನಿದಿರೆಯೇ ಅಳಲು!

ನಿನ್ನ ಹುಡುಕುವುದ ಬಿಟ್ಟುಬಿಟ್ಟೆ
ಈಗ ಈ ಕಣ್ಗಳೇ ಮಂಜು!

16/12/2014

Monday 15 December 2014






ಇದ್ದಷ್ಟು ಹೊತ್ತೊಳು
ಸುಮ್ಮನಷ್ಟು ಭೇದಗಳು
ಏನು ತಂದೆ, ಏನ ಕೊಂದೆ
ಕೈಚೆಲ್ಲಿದ ವಾಸ್ತವ
ಆಯ್ದುಕೊಳ್ಳೊ ಧಾವಂತ
ಈ ಹೊತ್ತು ಕಳೆದು ಬಿಡುವುದೇ ಸೂಕ್ತ


********


ಆ ಮೋಡದ ಮರೆಯಲಿ 
ಪಿಸು ಮಾತಲಿ ಕರೆದವಳೇ
ಇನ್ನೆಷ್ಟು ತೆರನಾಗಿ ಕಾಡುವೆಯೋ ಸ್ನೇಹಿತೆ
ಮಳೆಯಾಗಿ ಧರೆಗಿಳಿಯೇ ರೂಪಸಿಯೇ
ಬಾಯಾರಿ ಕಾದಿಹೆನು; ನಾ ಬಕಪಕ್ಷಿ
ನಿನ್ನ ಪ್ರೇಮಕೆ!

15/12/2014

Saturday 13 December 2014

ಕವನ

ವಿಷಾದ....



ಕಡಲ ದಡದ ಮರಳಲಿ
ಮೂಡಿದ ಕಮಲ
ಅಂಗಳದಲಿ ನಾನಿಟ್ಟ 
ರಂಗೋಲಿ
ಬಹುಶಃ ಚಂದವೇ ಇತ್ತು
ಅಲೆಗಳು ಹೊಡೆವವರೆಗೂ..
ಅವ ಬಂದು ತುಳಿವವರೆಗೂ....

14/12/2014
ಕವಿಯ ಕೊಲ್ಲಲು
ಚೂರಿಯೇ ಬೇಕಿಲ್ಲ,
ಕೇವಲ ಒಂದೆಲೆ ಸಾಕು
ಹೂವ ಕೆಡವಿದ ಅಪರಾಧಿಯಾಗಿ!

*****

ನಡು ರಾತ್ರಿ
ಬಿಗಿ ಹಿಡಿದ ನಗು
ಬೆಳದಿಂಗಳು!

*****

ಸಂಭಾಷಣೆಗಳು ಸ್ವಾರಸ್ಯವಿಲ್ಲವೆನಿಸಿದಾಗ
ಸುಮ್ಮನೊಂದು ಕೌತುಕ ಕಥೆ ಹೇಳಿಬಿಟ್ಟೇ

13/12/2014

ಕವನ

ಇಲ್ಲದ್ದರ ನಡುವೆ......




ಭಾವವಿಲ್ಲದ ಸಾಲು
ಪದಗಳಷ್ಟೇ;
ಉಸಿರಿಲ್ಲದ
ಸುಂದರ ಕೊಳಲಂತೆ!

ಕಾಮನೆಗಳಿಲ್ಲದ ಕಣ್ಣು
ನೋಟವಷ್ಟೇ;
ಬೆಳಕಿಲ್ಲದ
ಭವ್ಯ ಮಹಲಂತೆ!

ಮೌನವಿಲ್ಲದ ಮಾತು
ಗದ್ದಲವಷ್ಟೇ;
ಬಂಗಾರ ಕಳೆದ
ಬೆಳ್ಳಿಯಂತೆ!

ಗೀತೆಯಿಲ್ಲದ ಮನವು
ಕ್ಷೋಭೆಗಳಷ್ಟೇ;
ಸ್ವರಗಳೇ ಇಲ್ಲದ
ಸಂಗೀತದಂತೆ!

ನೀನಿಲ್ಲದ ಬದುಕು
ಜೀವನವಷ್ಟೇ;
ಸಕ್ಕರೆಯಿಲ್ಲದ
ತಿಳಿ ಹಾಲಿನಂತೆ!

ಪದ ಗೀತೆಯಿಲ್ಲದ ಬದುಕು
ಭಾವವಿಲ್ಲದ ಸಂಭಾಷಣೆಯಷ್ಟೇ;
ಮೌನ, ಕಾಮನೆ, ಕೊನೆಗೆ ಗದ್ದಲವೂ ಇಲ್ಲದ
ರುದ್ರನಾಟಕದ ತೆರೆ ಬಿದ್ದ ನಿರ್ಜನ ರಂಗಮಂದಿರದಂತೆ!

13/12/2014

Friday 12 December 2014

ಕವನ

''ಮಾಯೆ''


ಯಾರು ಮೆಚ್ಚಿದರೇನು
ಯಾರು ಮೆಚ್ಚದಿರಲೇನು?
ಮೆಚ್ಚುಗೆಯ ಹುಚ್ಚಿಲ್ಲವೋ
ನಿಂತಂತೆ, ನಡೆದಂತೆ
ಇರುವುದೆಲ್ಲಾ ಶಿವ ಕಂಡಂತೆ
ಎಲ್ಲಾ ಮಾಯೆ; ಇಲ್ಲಿ,
ಮೆಚ್ಚಿಸೋ ಮನವೂ ಮಾಯ!

ಆಚರಣೆ ಅನುಸರಣೆ
ಮನವೊಪ್ಪಿದ ಮಾತುಗಳಷ್ಟೆ!
ಮೆಚ್ಚಲಿಲ್ಲ ಇವರು, ಮೆಚ್ಚಲಿಲ್ಲ ಪರರು
ತನ್ನ ತಾನಿರುವಂತೆ ಒಪ್ಪೊ
ಜಟಿಲ ಮನವು;
ಒಪ್ಪಬಹುದು ಈ ಮೆಚ್ಚದವರನೂ
ಮಾಯೆಯೊಳು ಮಾಯವಾದೀತೊ
ಈ ಅಸಮ-ಸಮ ಭಾವ ಲಹರಿ

ಮೆಚ್ಚಲಷ್ಟು ನಗು; ಮೆಚ್ಚದಿರೆ ಅಳು
ಎಷ್ಟು ಕಾಡಿತೋ ಹರನೇ
ನೀನೊಮ್ಮೆ ಮೆಚ್ಚಿದ ಕ್ಷಣ
ಈ ಮಾಯೆಯ ದಾಟಲಾರೆನೇ ನಾ
ಕಾದಾಟವಿದೆ; ಕಾಯುವಿಕೆಯೂ,
ಈ ನಡುವಿನ ಮೆಚ್ಚುಗೆಳೊಂದಿಗೆ
ನಿನ್ನ ನೆಚ್ಚಿಕೊಂಡ ಕಾರಣಕೆ!

12/12/2014
ನೀನು ಗತವಾಗಬಾರದಿತ್ತು,
ಗತದಲ್ಲಿ ನಿನ್ನ ನಾ ನೋಡಬಾರದಿತ್ತು!
ನೋಡಿದೆ; ಏನೂ ಅನಿಸಲಿಲ್ಲ
ಹೀಗಾಗಬಾರದಿತ್ತು!

12/12/2014
*************

ಕವಿತೆಗಳೋ
ಬೊಗಸೆಯೊಳ ಮಣಿಗಳಂತೆ
ಕೈಚೆಲ್ಲಿ ಹೊರ ಬಿಟ್ಟಾಕ್ಷಣ
ಸ್ವಂತದಲ್ಲ;
ಅಲ್ಲೆಲ್ಲೋ ಕುಣಿದು ತಣಿದು
ಹರಿದಾಡುವ ಮುತ್ತುಗಳು!

**********************

ನೀ ಬಿಟ್ಟು ಹೋದ ಮಳೆ ನೆರಳಿನ ಹೆಮ್ಮರ
ಇನ್ನೂ ಇಲ್ಲಿಯೇ ಭದ್ರವಿದೆ
ಹುಡುಕಿದೆ ನಿನ್ನ ಸುಳಿವಿಲ್ಲ
ಚಲಿಗಾಲದ ಕುಳಿರ್ಗಾಳಿಗೆ
ಮೈಮುದುಡಿ ಬಿರುಕು ಮನವೆಲ್ಲಾ
ಎಲ್ಲೂ ಇಲ್ಲ, ಇಲ್ಲೆಲ್ಲೂ ನೀನಿಲ್ಲ!


**************

ಇಲ್ಲಿ ಏನೇನೂ
ಬದಲಾವಣೆಯಿಲ್ಲ 
ಹೊಸದೇನೂ ಹುಟ್ಟದು
ಎನಿಸುವಾಗ,
ಬಾನಲಿ ಭಾನು ಉದಯಿಸಿದ
ಜೋಡಿ ತಾಯಿ ಕಣ್ಗಳಲ್ಲಿ
ಚೈತನ್ಯದ ಚಿಲುಮೆ!

11/12/2014

*************

ನೋವಿನ ಹೃದಯಕೆ 
ನಗುವ ತುಂಬಿ 
ಪ್ರೀತಿ ಸುರಿವ 
'ಕಾರಣ'ವೇ ಸ್ನೇಹ!

10/12/2014

Tuesday 9 December 2014

ಕವನ

ಬದುಕಿದ್ದಾಗಲೇ ಹುಟ್ಟಿಬಿಡುವ...



ಕೊಳೆತು ಸುಣ್ಣವಾಗುವ ಹೊರತು
ಸಿಡಿದು ಉಕ್ಕಾಗುವ

ಮುದುಡಿ ಮರುಗುವ ಹೊರತು
ಬಿರಿದು ಕಂಪಾಗುವ

ನಿಂತು ಕೊಳವಾಗುವ ಹೊರತು
ಹರಿದು ನದಿಯಾಗುವ

ಹುಡುಕಿ ಕಳೆಯುವ ಹೊರತು
ಕಳೆದೇ ಹುಡುಕುವ

ಹುಟ್ಟಿ ಬಂದು ಬದುಕುವ ಹೊರತು
ಬದುಕಿದ್ದಾಗಲೇ ಹುಟ್ಟಿಬಿಡುವ

ಭಗ್ನವಾಗುಳಿವ ಹೊರತು
ಬಂಧಗಳಲೊಂದಾಗುವ!

09/12/2014
ತುಳಿದಷ್ಟೂ 
ಅರಳುವ ಹೂವಿಗೆ
ಏನೆಂದು ಹೆಸರಿಡಲಿ?!,
"ಮನಸ್ಸು" ಎಂದಲ್ಲದೆ

09/12/2014

Sunday 7 December 2014

ಕವನ

ಕಾಂತಿ..


ವಿರಹದ 
ವಿಜೃಂಬಣೆಗಿಂತ
ಪ್ರೀತಿಯ ಕಾತುರತೆಯ 
ಕಣ್ಗಳ ವರ್ಣನೆ;
ಸೀದಾ ಸಾದವಾದರೂ 
ಮನವು
ನವಿರಲಿ 
ನವಿಲಂತೆ 
ನಲಿವುದು!

'ನಿನ್ನ ಕಣ್ಗಳ 
ಕಾಂತಿಗೆ 
ನಾ ಬೇಟದ 
ಶಿಕಾರಿ'!

07/12/2014

ವಿಶ್ವಾಸ ತೋರುವ ಎಷ್ಟೊ ಜನರನ್ನು ದೂರ ಮಾಡಿದ್ದೆ ನನ್ನದೇ ಕೆಲ ಭ್ರಮೆಗಳಲ್ಲಿ
ತಿಳಿಯಾಯಿತೀಗ ಅವರೊಟ್ಟಿಗಷ್ಟು ಬೆರೆತು ಕಲೆತು ಅರಿತ ಈ ದಿನಗಳಲ್ಲಿ! 

^^^^^^^^^^^^^

ಮರೆತಂತ್ತಿದ್ದು 
ಒಮ್ಮೆಲೆ ನೆನಪಾದಂತೆ
ಈ ಸಂಜೆಯ ಸೂರ್ಯ
ಕೆಂಪೇರಿದ್ದಾನೆ..
ಅವಳ 
ತಾಂಬೂಲ ಸವಿದ ತುಟಿಯ 
ರಂಗಿಗೇ
ಸೆಡ್ಡು ಹೊಡೆದಂತೆ!

07/12/2014


ಸಂತೆಗೆ ನುಗ್ಗಿ ಕಣ್ಣು ತುಂಬಿಸೋ ಮನಸು ನನಗೂ ಇಲ್ಲ
ಬೇಡದ ಅತಿಥಿಯಾಗಿ ಯಾರ ಮನದಲೂ ನಿಲ್ಲುವುದಿಲ್ಲ
"ಹೋಗು ನೀ", "ಏಕೆ ಬಂದೆ?" 
ಎನುವ ಮನಗಳ ಮುಂದೆ ನಿಂತು ಅಳುವುದೂ ಇಲ್ಲ!

^^^^^^^^^^^^^^^^^

ಹಾದಿಯ ಕನಸ ಕದ್ದ ಮಾತ್ರಕೆ
ಕನಸೇ ಗೆದ್ದಂತ್ತಲ್ಲ; 
ನಾನಿನ್ನೂ ಕಣ್ಣಿನವಳು
ಕನಸುಗಳಿಗೆ ಬರವಿಲ್ಲದವಳು!

06/12/2014

Friday 5 December 2014

ನನ್ನ ಭಾವಕೆ 
ನಾನೇ ಅರ್ಥ ಕೊಡದಾದೆ
ಇನ್ನು ಅವರಿವರು ಕೊಟ್ಟ ಅರ್ಥಕೆ 
ಭಾವ ತುಂಬಲಾರೆ
ನಾನೋ ಪದವಷ್ಟೇ,, 
ಹಾಡಾಗಲು 
ರಾಗ ಲಯ ತಪ್ಪಿದೆ! 

^^^^^^^^^^^^^^^^

ಒಂದಷ್ಟು ಬಣ್ಣಗಳ
ಕೂಡಿಟ್ಟುಕೊಂಡಿದ್ದೆ
ಕನಸ ಕುಂಭಗಳಲಿ;
ಈಗ ಆ ಚಿತ್ರವೇ ಕಾಣೆ
ಮನದ ಪುಟಗಳಲಿ,
ಮತ್ತೆ ಮತ್ತೆ ಸೀಸದ ಕಡ್ಡಿ ಹಿಡಿದು 
ಗೆರೆಗಳ ಮೂಡಿಸೋ 
ಧೈರ್ಯವಿಲ್ಲ
ನಾ ಚಿತ್ರಕಾರಳಲ್ಲ
'ಕಲೆ'ಗಳಲಿ 'ಕಲೆ' ಕಂಡವಳಷ್ಟೇ... 

^^^^^^^^^^^^^^^^^

ನನ್ನ ಬೆನ್ನಿಗೆ ಕಿವಿಗಳಿಲ್ಲ
ಸೃಷ್ಟಿಗೆ ಒಂದು ನಮಸ್ಕಾರ 
ಹಾಕುವೆ,
ಆದರೆ ಬೆನ್ ಹಿಂದಿನ ದನಿ
ಕಣ್ಮುಂದೆಯೇ ಬಂದು
ನಿಂತಾಗ; 
ಬಿಡು
ದೃಷ್ಟಿ ತೆಗೆದು ಹಾಕುವೆ!! 

05/12/2014

^^^^^^^^^^^^^^^^^

ಎಲ್ಲರ ಮನೆಯಂಗಳದ ಹೂಗಳು
ಸಂಜೆಗೆ ಬಾಡುತ್ತವೆ;
ನನ್ನದೇನಿದೆ ವಿಶೇಷ?!

ಜೀವ ನೆಟ್ಟಗೆ ಬೇರು ಬಿಟ್ಟು ನಿಂತರೆ
ಬಿಡು ಮತ್ತೆ ಮತ್ತೆ ಹೂಗಳು ಅರಳುತ್ತವೆ
ಎಲ್ಲರಲೂ!

04/12/2014

Wednesday 3 December 2014

ಕವನ

ಬೇಕಿತ್ತು!

ಕೆಣಕುವವರು ಬೇಕಿತ್ತು
ಹೀಗೆ ಕೋಪ ತಾಪಗಳ
ಚಿತ್ತಾರಗಳಿಗೆ!

ಪ್ರೀತಿಸುವವರು ಬೇಕಿತ್ತು
ಹೀಗೆ ನೋವು ವಿರಹಗಳ
ಅಚ್ಚುಗಳಿಗೆ!

ವ್ಯಂಗ್ಯ ಅಪಹಾಸ್ಯಗಳೂ ಬೇಕಿತ್ತು
ಹೀಗೆ ಮೂಕಿಯೊಬ್ಬಳ ಅಬ್ಬರ
ದಾಖಲೆಗಳಿಗೆ!

03/12/2014


ಮೊಗೆದ ಬೊಗಸೆ ನೀರನ್ನೇ ನದಿ ಎಂದುಕೊಂಡೆ 
ಮೊಗೆಯಲಾರದ ಸಾಗರದ ಕಲ್ಪನೆ ಇನ್ನೂ ಇಲ್ಲ !!

02/12/2014

ಕವನ

ಅಮಲೋ,, 


ಪ್ರಙ್ಞಾಸ್ಥಿತಿಯು ಹೆಚ್ಚು ನೋವೇ ಎನಿಸಿದಾಗ
ಅಮಲೊಂದು ಬೇಕಿತ್ತು; ನಕ್ಕುಬಿಟ್ಟೆ!
ಈಗಿದನು ಬಿಟ್ಟು ಬದುಕಲಾರೆನು
ಜೊತೆಗೆ, ನೀನೂ ಇಲ್ಲದಿರುವ ಈ ಹೊತ್ತು!

ಅಮಲೊಳೊಂದು ಅಮಲು ಹುಟ್ಟಿಕೊಂಡು
ಪದಪದ ಪೋಣಿಸಿ ಹಾಡಿರಲು
ಗೆಜ್ಜೆ ಕಟ್ಟಿದೆ, ಹೆಜ್ಜೆಯಾಯ್ತು; ಕಿವಿಗಳಿಲ್ಲವಷ್ಟೇ
ನಿನ್ನ ಕಣ್ಗಳ ಬಯಕೆಯೇ ಇಲ್ಲೆಲ್ಲಾ

ಬಂದು ಹೋದೆಯೋ; ಇಲ್ಲ ಬರದೇ
ಕರಿ ನೆರಳೊಂದು ಸೋಕಿತ್ತು
ನಿನ್ನದಲ್ಲವೆಂಬ ಖಾತ್ರಿಯಿತ್ತು
ನೆರಳಲ್ಲ ನೀ ಕಾಂತ, ಕಣ್ಣ ಕಾಂತಿ!

ನಿನಗೂ ನನಗೂ ನಡುವಿನ ನಗುವೂ
ಅಮಲೋ ಅಮೂಲ್ಯವೋ
ಸೆಳೆದಿದೆ ಮತ್ತೂ ನಿನ್ನೆಡೆಗೆ 
ಹುಡುಕಾಟವಿದೆ ನಿನ್ನ ಪ್ರಭೆಗೆ!

01/12/2014




ಹೆಪ್ಪುಗಟ್ಟಿದ ಭಾವಗಳ 
ಕದಲಿಸಬಾರದು
ಕಡೆದು ಮದವ ಮಥಿಸಿ 
ತಿಳಿಗೊಳಿಸದ ಹೊರತು!

^^^^^^^^^^^^^^^^^^^^

ಅತ್ತಾಗ ಎಲ್ಲಾ ಹೊರಟರು
ನಕ್ಕಾಗ ನಿಂತೇ ನೆಂಟರು!

ಜೀವನ ಮೊದಲು ಕಲಿಸಿದ್ದು ಅಳುವನ್ನು
ನಂತರ ಅವಸರದಿ ಅರಳಿಸಿದ್ದು ನಗುವನ್ನು!

01/12/2014

ಕನವ


ಬೆಸುಗೆ..

ಬೆನ್ನು ಮಾಡಿ ಹೊರಟುಬಿಟ್ಟರೂ ಸರಿಯೇ
ಬೆನ್ ಹಿಂದಿನ ತವರು ತಣ್ಣಗಿರುವಂತೆ ನೋಡಿ!!

ಬೆನ್ನು ಮಾಡಿ ಹೊರಟ ಕವಿತೆಯೂ ಸರಿಯೇ
ಬೆನ್ ಹಿಂದಿನ ನನ್ನ ಭಾವಗಳ ಅಲ್ಲಗಳೆಯದೆ ಹಾಡಿ!!

ಬೆನ್ನು ಮಾಡಿ ಹೊರಟ ಮೋಹವೂ ಸರಿಯೇ
ಬೆನ್ ಹಿಂದಿನ ಬಯಕೆಗಳಲಿ ಭವ್ಯ ಕುರುಹಾಗಿ!

ಬೆನ್ನು ಮಾಡಿ ಹೊರಟ ವಿರಹವೂ ಸರಿಯೇ
ಬೆನ್ ಹಿಂದಿನ ಪ್ರೀತಿಯಲಿ ಬೆಳ್ಳಿ ಬೆಸುಗೆಯಾಗಿ!!

30/11/2014

ಆಪ್ತರು ಮಾತ್ರವೇ ನೋವ ನೀಡಲು ಸಾಧ್ಯ
ದೂರದ ಗೊತ್ತಿಲ್ಲದ ಜನರಲ್ಲ!

30/11/2014

^^^^^^^^^^^^^^^^^^^

ಪೋಣಿಸಿಟ್ಟ ಮುತ್ತುಗಳ
ಸುರಿದು 
ಮತ್ತೆ ಪೋಣಿಸುತ್ತಲಿರುವೆ
ಬಿಡು ಅದು ನಿನ್ನಾ ನೆನಪು
ಆರದ 
ಹಾರವಾಗದ 
ಮುತ್ತಿನ ಹಾರ!

28/11/2014

^^^^^^^^^^^^^^^^^^^^^^

ಇದ್ದಷ್ಟು ಕಾಲ ಇದ್ದು ಬಿಡಬೇಕು 
ಪ್ರೀತಿ ಸ್ನೇಹಗಳೊಡನೆ, 
ಹೊರಟ ಮೇಲೆ ಇಲ್ಲೆಲ್ಲಾ ನೆನಪೇ 
ಹಾಸುಗಲ್ಲು; 
ನಸು ನಗೆಗಳಾಗಿ ಮಂದ ದೀಪವಾಗಿ 
ಉರಿದುರಿದು ಬತ್ತಿಸಬೇಕು
ಬೇಗೆ, ದುಃಖ-ದುಮ್ಮಾನಗಳಾನು, 
ನೆನಪಾಗಬೇಕು; 
ನೆನೆಯಲು ಸ್ಫೂರ್ತಿಯಾಗುವಂತೆ!

27/11/2014

^^^^^^^^^^^^^^^^^^^^^^^

ಬಂದು ಹೋದ ಕನಸುಗಳ
ವಿಳಾಸ ಪಡೆಯದಾದೆ
ಖೇದವಿದೆ ಈ ಅರೆಬರೆ ನಿದಿರೆಯ ಮೇಲೆ
ಕನಸ ಅಮಲಿನ ಮೇಲೆ
ಹೊತ್ತೊಯ್ದ ಕಾಲಿಲ್ಲದ ಕುದುರೆಯ ಮೇಲೆ!

25/11/2014

^^^^^^^^^^^^^^^^^^^^^^^

ಕೊಳದ ನೀರು ತಿಳಿಗೊಳ್ಳುತ್ತಿತ್ತು
ದಡದ ಕೊಕ್ಕರೆಯ ರೆಕ್ಕೆಯಲಿ
ಒಂದೇ ಸಮನೆ ತುರಿಕೆ!

20/11/2014

Wednesday 19 November 2014



ಬೋಗಿಗಳೆಲ್ಲಾ ಮುಂದೆ ಹೋದ ಮೇಲೆ
ಹಿಂದೊಂದು ಎಂಜಿನ್ ಉಳಿದಿತ್ತು
ಹಿಮ್ಮುಖವಾಗಿ ಕರೆಯುತ್ತಿತ್ತು ನನ್ನನೇ!
ಓಡಿ ಹೋಗೋ ಕಾಲ ಬಂದಾಯ್ತು! 

18/11/2014

^^^^^^^^^^^^^^^^^^^^^^

ಮುಖವೇ ಬೇಡವೆಂದು ಹೊರಟಿದ್ದೇ 
ಮೂಲೆಯ ಮರೆಯ ಬಯಸಿ, 
ಗೋಡೆಗಳೇ ಇಲ್ಲದ ಬಯಲಲಿ 
ಬಿಳಿಚಿಕೊಂಡ ಮುಖವೇ ಗುರಿಯಾಯ್ತು 
ಬೆಳಕಿಗೆ;
ಇದು ಮುಖವಾಡವಲ್ಲಾ ಎಂದರೆ 
ಅವರ್ಯಾರು ನಂಬುತ್ತಿಲ್ಲ!

^^^^^^^^^^^^^^^^^^

ಇವಳನು ಕಳೆದುಕೊಳ್ಳುವ ಭಯದಲಿ
ಅವರೇ ಕಳೆದು ಹೋದರು
ಇವಳೂ ಹುಡುಕಲಿಲ್ಲ ಮತ್ತೆ
ಕತೆಗೊಂದು ತಿರುವು! 

17/11/2014

ಕವನ

ನದಿಯು...


ನದಿಯು (ನೀರು) ಹಳ್ಳ ಬಿದ್ದಲ್ಲಿ ಹರಿಯುತ್ತದೆ 
ಧುಮುಕೊ ಭರದಲಿ 
ಆಗಾಗ ಕದಡುತ್ತದೆ!
ಮತ್ತೂ ಹರಿಯುತ್ತದೆ 
ಇನ್ನೆಲ್ಲೋ ತಿಳಿಗೊಳ್ಳುತ್ತದೆ

ಹರಿಯುವುದು ತಿಳಿಗೊಳ್ಳುವುದು
ನಿಂತು ಕಾಲ ಮರೆವುದು
ನೀರ ಗುಣಕ್ಕದು ಹೊರೆಯೇ ಅಲ್ಲ
ಆದರೂ ಕದಡಿದಾಗ ನೊಂದು
ತಿಳಿಗೊಂಡಾಗ ಕಾಲನೊಡನೆ ಹೊಳೆಯುತ್ತದೆ

ಸಾಗರವ ಸೇರುವ ಹೊತ್ತಿಗೆ 
ನದಿಯ ಕತೆಯದು ಅಂತ್ಯ
ರೋಚಕಗಳೇನಿದ್ದರೂ 
ಈ ನಡುವಿನ ಹರಿಯುವಿಕೆಗಳು, 
ಹೊಳೆಯುವಿಕೆಗಳು! 

16/11/2014


ತುಂಬಿ ಹರಿಯೋ ಕಣ್ಣೀರ ತೊರೆಯಲಿ
ನಿನ್ನ ಬಿರು ನುಡಿಗೂ 
ಒಂದು ಹನಿ ಕಣ್ಣೀರು
ನನ್ನದು ಹೆಚ್ಚೇ ಇರಲಿ ಬಿಡು!

^^^^^^^^^^^^^^^^

ನಮಗೆ ನಮ್ಮ ಬೆನ್ನು ಕಾಣದು
ಅದು ಕಾರಣ
ಮುಂದಿದ್ದವರ ಬೆನ್ನ ಮೇಲೆ 
ಆಸಕ್ತಿ
ಅದರಲೂ ಬೆನ್ನ ಮೇಲೆ 
ಮಚ್ಚೆಯ ಕಾಣಲು ಹವಣಿಸೊ ವಿಕೃತ!

16/11/2014

^^^^^^^^^^^^^

ನಾ ಬಯಸಿದೆಲ್ಲವೂ
ನನ್ನ ಸನಿಹವೇ ಸುಳಿದು ಹೋದವು
ನಿಂತು ದಕ್ಕಲಿಲ್ಲವಷ್ಟೇ!
ಕೊರಗೇನಿಲ್ಲ ಬಿಡು
ಕಂಡೆನು ಅವಷ್ಟನ್ನೂ
ಸನಿಹದಿಂದಲೇ!! 
ಹಗುರ ಭಾರಗಳ ತಿಳಿದು ವ್ಯತ್ಯಾಸ
ಇನ್ನಷ್ಟು ಸಾಣೆ ಹಿಡಿದ ಬುದ್ಧಿ!

14/11/2014
ಕತ್ತಲೊಳು ಕುಳಿತಿದ್ದರೂ ಬೆಳಕಿನ ಮೇಲೆ ಮತ್ಸರವೇಕೆ?
ಬೆಳಕಾಗದ ಸ್ಥಿತಿಗೆ ಬಾಗುವ ಸೂರ್ಯ ಕಾಂತಿಯ ಜರಿಯುವುದೇಕೆ
ತನ್ನ ಬೇರನೇ ಗಟ್ಟಿ ಹಿಡಿಯದೆ ಹಬ್ಬೋ ಬಳ್ಳಿಯ ದೂಷಿಸುವುದೇಕೆ
ಚೆಂದದ ನೋಟಕೆ ಕಣ್ಣ ಕಸವ ಹಚ್ಚಿ ತೋರುವುದೇಕೆ
ಕೈಲಾಗದ ಸ್ಥಿತಿಗೆ ಇನ್ನೆಷ್ಟು ಅಮಲೊಳು ಮೈಪರಚಿಕೊಳ್ಳವರೋ?!
ಹಾರೈಕೆ ಇಷ್ಟೇ ತಮ್ಮ ಕಣ್ಣನೇ ಕಿತ್ತುಕೊಳ್ಳದಿರಲಿ ಚಿತ್ರವದು ನಾಶ ಮಾಡಲಾರದ ಹೊತ್ತಿಗೆ!

14/11/2014
ಮಳೆಯೇ ಇಲ್ಲೆಲ್ಲಾ
ನೀನಿಲ್ಲ ಇಲ್ಲಿ
ಕಣ್ಣಿದ್ದು ಕುರುಡಂತೆ
ಈ ಯೌವ್ವನದ ಕಣ್ಣು!

14/11/2014

^^^^^^^^^^^^^^^^^^^^^^^^

ಆಗಾಗ ಜಗ್ಗಿ ಕೀಟಲೆ ಮಾಡುವ
ಸ್ನೇಹವೂ ಇರಬೇಕು
ಸದಾ ಹೊಗಳುವ ಬದಲು!

^^^^^^^^^^^^^^^^^

ಆ ದಡದ ವ್ಯಕ್ತಿಗಷ್ಟೇ ಗೊತ್ತು
ಈ ದಡದಲ್ಲುಳಿದ ಮನದ ವೇದನೆ!

^^^^^^^^^^^^^^

ಚಂದದ ಮುಖವಿದ್ದರೂ
ಚಂದ್ರನಂತೆ ಹೊಳೆಹೊಳೆದರೂ
ಹಿಂದಿದ್ದ ನೆರಳು ಮಾತ್ರವದು ಕಪ್ಪೇ!

13/11/2014

^^^^^^^^^^^^^^^^^^^^^^^^^

ಸುಂದರ ಛಾಪು ಮೂಡಿಸಿದ ಉಳಿಗಳು
ಹಳತಾದರೂ ಉಳಿವವು ಶಾಸನಗಳಂತೆ
ಮುಕ್ಕಾಗಿ ಇನ್ನೂ ಓದಿಸಿಕೊಂಡು ರಹಸ್ಯವಾಗಿ!

^^^^^^^^^^^^^^^^^^^^^^

ದುಃಖವು ಗಂಟಲೊತ್ತುತ್ತಿದರೂ
ಅವಳವು ಬಿರು ನುಡಿಗಳೇ
ಎದುರುಗೊಳ್ಳೊ ಎಲ್ಲಾ ವೇದನೆಗಳಿಗೂ
ಅವಮಾನ ಅವಗಡಗಳಿಗೂ

^^^^^^^^^^^^^^^^^^^^^^

ಮನವು ತೀರಾ ವ್ಯಾಕುಲವೆನಿಸಿದಾಗ
ದಯವಿಟ್ಟು ಕುಲವನ್ನು ಮರೆಯಿರಿ!

^^^^^^^^^^^^^^^^^^^^

ಕಳೆದ ವಸ್ತುವನು 
ಹೆಚ್ಚು ಹುಡುಕಬಾರದು
ಕಳೆವ ಮುನ್ನ 
ಕಡೆಗಣಿಸಿರಬಾರದು
ಹಾಗೆ ಕಡೆಗಣಿಸಿ 
ಈಗ ಹೆಚ್ಚೆಚ್ಚು ಹುಡುಕಿದರೆ
ಅದು ಸಿಕ್ಕಿಯೂ ಬಿಟ್ಟರೆ
ತಬ್ಬಿಬ್ಬಾಗಿಬಿಡುವೆ ನನಗಿದು
ಏಕೆ ಬೇಕಿತ್ತೆಂದು!! 

^^^^^^^^^^^^^^^^^^^^^

ನೋಟದೊಳು ನಾ ಅರಸಿದರೆ ಕಪ್ಪು
ಕಪ್ಪೊಳ ರಂಗು
ಉಡಲು ಆರಿಸಿದೆ ನೀಲಿ
ನೀಲಿಯೊಳ ತಿಳಿ ಗುಂಗು
ಹಾದಿ ಬೀದಿಲಿ ಮಾತ್ರ
ಹಾರೈಸುವೆ ಇರಲಿ ಕಪ್ಪು ಬಿಳಪು!!

12/11/2014

^^^^^^^^^^^^

ಹೀಗೆ ಅನಿಸಿದ್ದು,,,
ಬದುಕೆಂದರೆ ನಾವೊಬ್ಬರೇ ಬದುಕಿಬಿಡುವುದಲ್ಲ
ನಮ್ಮೊಂದಿಗೆ ಅವರೂ ಇವರೂ ಸೇರಿ ಬದುಕುವುದು
ನಿಂದಿಸಿ ಮೂದಲಿಸಿ ಹೊರಗಟ್ಟುವಾಗ ನೊಂದ ಆ ಮನಗಳು
ಬಾರದು ಎಂದಿಗೂ ನಮ್ಮ ನೆರೆಗೆ
ಹೀಗೆ ಎಲ್ಲರನೂ ಹೊರಗಟ್ಟಿ ನಾವೊಬ್ಬರೆ ಉಳಿದರೆ
ನಮ್ಮದದು ಬದುಕೇ? ಎನಿಸುವಷ್ಟು ಬದುಕಿಗೆ ನಾವು ವ್ಯತಿರಿಕ್ತ!

11/11/2014

Monday 10 November 2014

ಕತೆ ಕವಿತೆ ಮತ್ತು ಆ ರಾಮ
ನನ್ನೇ ಕೆಣಕುತ್ತಲಿರುವವು ತರತರದಲಿ!
ಕನ್ನಡ ಕವಿತೆ ಹಾಡಿದೆ ಅಲ್ಲಲ್ಲಿ
ಲಯವನಷ್ಟೇ ತಪ್ಪಿ,
ಈಗಿಲ್ಲಿ ಇಂಗ್ಲೀಷಿನ A rama
ಒಂದೇ ಸಮನೆ ಕಾಡುತಲಿರುವನು
ರಾಮನೋ ರಮನೋ ಎಂದೊಂದೇ ಪ್ರಶ್ನೆ
ನನಗೆ ಗೊತ್ತಿಲ್ಲ ಬಿಡಿ Englishಉ ಎಂದುಬಿಟ್ಟೆ!

%%%%%

ಕಳಚಿಕೊಳ್ಳೊ
ಮರದ ಫಲ
ಮೋಡದ ಹನಿ
ಸೂರ್ಯನ ಕಿರಣ 
ಶ್ರೇಷ್ಠವೋ ಪ್ರಭುವೇ
ಬಂಧಗಳಿಂದ ಮನವಲ್ಲ!
ತಪ್ಪಿದರೆ ತಪ್ಪಿದ್ದರೆ 
ಕ್ಷಮಿಸಲಿ ಹರನು!!

10/11/2014

ಕವನ

'ಮರೆವು'




ಅವರ ಮರೆವಿಗೆ ಗುರಿಯಾಗಿ ಬದುಕುವುದೆಂತು;

ನಾವೂ ಬದುಕುವ ಅದೇ ಮರೆವಿನೊಂದಿಗೆ!


ಮರೆತು ನಡೆಯುವುದು ಕ್ಲಿಷ್ಟವೇನಲ್ಲ

ನೆನಪಿಟ್ಟು ಮರೆತಂತಿರುವುದು ಜೀವನ


ನಿರಂತರ ಮರೆವು ನಿರಂತರ ದಣಿವು

ಸಾಗಿದೆ ಮರೆವಿನ ಯಾನ ನಿರಂತರ! 



09/11/2014


ಕವನ


ಮನದ ಹೊಲ..


ತುಂಬಿಕೊಂಡಷ್ಟೂ ಹಿಗ್ಗುವ ಮನ
ಹಿರಿ ಹಿಗ್ಗಿ ತುಡಿವುದು ಪ್ರೇಮಕೆ
ಮಮತೆ, ಸ್ನೇಹ, ಪ್ರೀತಿ, ಒಲುಮೆಯಲಿ ಕಣ್ತೇವ
ಮನಸು ಹಸಿ ಹಸಿ ಕಣ್ಗಳು ಹಸಿ ಬಿಸಿ
ಎದೆಯೆಲ್ಲಾ ಹದವಾದ ಹೊಲ
ಜಿಟಿಮಿಟಿ ಚಿಗುರಿದೆ ಮನದ ಹಸಿರು

ತಲೆಯೆತ್ತಿ ನೋಡುತ ಹೊಳೆವ ಸೂರ್ಯ 
ಅತ್ತ ಇತ್ತ ಸುಳಿವ ತಂಗಾಳಿ ಇನಿ
ಮಣ್ಣ ಘಮ ತೇಲಿಸಿ ತನುವ
ಮರೆಯಿಸಿ ಕಳೆದ ಕಳೆಯ
ಬತ್ತಿದ ಕೋನಗಳಲ್ಲಿ ಒಲವಿನ ಚಿಲುಮೆಯ
ಎಷ್ಟು ಬಣ್ಣಿಸಲಿ ಈ ಹಸನಾದ ಕನಸ

ಇರುಳ ತಾರೆಯಲಿ ಕನಸ ತೇಲಿಸಿದೆ
ಚಂದ್ರಮನದಕೆ ಚುಕ್ಕಿ ಎಂದನು
ಹತ್ತಿರಾಗುತ ಹಿರಿದಾಗುವ ಚುಕ್ಕಿಗೆ
ಜಗವದು ಸೂರ್ಯನೆಂದಿತು ಹಗಲಿನೊಳಗೆ

ರಾತ್ರಿಯ ಕನಸೆಲ್ಲಾ ಹಗಲ ಕನಸುಗಳಾಗಿ
ಹಗಲುಗನಸಾದವು ಎಚ್ಚೆತ್ತುಕೊಂಡು!
ಕನಸಿಗೆ ರಾತ್ರಿ ಹಗಲಿನ ಪರಿವೆಯೇ ಇಲ್ಲ
ಮನದ ಹೊಲದೊಳು ಜಿಟಿಮಿಟಿ ಚಿಗುರು 
ರಾತ್ರಿಯ ತಿಂಗಳು, ಹಗಲ ಸೂರ್ಯನು
ಚೆಲ್ಲಿರುವರು ಬೆಳಕನೇ ಹಗಲಿರುಳು!

09/11/2014

ಕವನ

''ಹಕ್ಕಿ''


ನೆಲವ ಬಿಡುವ ಮುನ್ನ
ರೆಕ್ಕೆ ಬಡಿಯಲೇ ಬೇಕಿದೆ
ಸುಮ್ಮನೆ ಎಂದೇ 
ಕೆಲವಷ್ಟು ಕೆಲಸ ಸಾಗಬೇಕಿದೆ!

ಹಕ್ಕಿ ರೆಕ್ಕೆಗೆ ನೀರಿಟ್ಟು 
ಮಿಂಚಿಸುವರ್ಯಾರು
ಬಡಿದ ರೆಕ್ಕೆಗೆ ತೆಕ್ಕೆ ಕೊಟ್ಟು
ಮೇಲೇರಿಸುವವರ್ಯಾರು!

ಹಾರುವುದು ಹಕ್ಕಿ
ರೆಕ್ಕೆ ಇರುವುದೆಂದಲ್ಲ
ಬಾನೇರುವುದು ಹಕ್ಕಿ
ನೆಲವ ಮರೆತಿದೆ ಎಂದಲ್ಲ!

ರೆಕ್ಕೆ ಬಡಿದು ಹಕ್ಕಿ ಹಾರಿ
ದೂರದಲೆಲ್ಲೋ ಕಾಳ ಹೆಕ್ಕಿ
ನೆಮ್ಮದಿಗಷ್ಟು ಗೂಡ ಕಟ್ಟಿ 
ಕನಸ ಕೂಸಿನ ರೆಟ್ಟೆ ಬಲಿಯಲು 
ಮತ್ತೆ ಮತ್ತೆ ಹಾರಿದೆ ಹಕ್ಕಿ ಸಾಲು!

09/11/2014



ನನ್ನ ಕುರಿತೇ ಬರೆಯುವ
'ಕವಿತೆ'ಯನ್ನು
ನಾನೆಂದಿಗೂ ಸಹಿಸುವುದಿಲ್ಲ
ನನ್ನ ಕವಿತೆಗಳ ಮೀರಿ
ಮೆಚ್ಚುಗೆ ಪಡೆವವವು
ಅವರ ಸ್ನೇಹಿತೆಯರಲ್ಲಿ!

08/11/2014

Friday 7 November 2014

ಕವನ

ಸದ್ದಿಲ್ಲದೆ ಸುದ್ದಿಯಾಗಲಿ... 



ನಿನ್ನ ಕೈ ಬೆರಳೊಳು
ಬಂಧಿಯಾಗುವ ಈ
ಬೆರಳುಗಳೇ ಈಗೀಗ
ನನ್ನ ಕಾಡೊ ಕೈ ಕುಸುಮ

ನಿನ್ನ ನೋಡದ ನನಗೆ
ನಿನ್ನೇ ನೆನಪಿಸುವಂತಿವೆ
ಈ ಕಿರು ಬೆರಳ ಕೊಂಕುಗಳು
ಬೊಗಸೆ ತುಂಬಾ ತುಂಬಿ ನಿನ್ನದೇ ಬಿಂಬ

ಎಡಗೈ ನಾನು ಬಲಗೈ ನೀನೆಂದು
ಸುಮ್ಮನೆ ಬೆಚ್ಚಗೆ ಹಿಡಿದಿಹವು
ಕೊರೆವ ಚಳಿಯಲಿ
ಖುಷಿಯಲಿ ಚಪ್ಪಾಳೆಯಾಗಿ!

ಎಷ್ಟು ಹೊತ್ತು ಹಿಡಿದಿರುವೆ
ಕೈ ಬಿಟ್ಟು ತುಂಬಿಕೊ ಮನದೊಳು
ಸದ್ದಿಲ್ಲದೆ ಸುದ್ದಿಯಾಗಲಿ
ನಿನ್ನ ಹೃದಯ ಪೀಠಾಲಂಕಾರ! 


07/11/2014
ಹಸಿವಿದ್ದರೂ ಹೊಟ್ಟೆಯಿದ್ದಷ್ಟೇ

ಅನ್ನ;

ಆಕಾಂಕ್ಷೆಗಳಿದ್ದರೂ ನಿಯತ್ತಿನಷ್ಟೇ

ಲಭ್ಯ!


07/11/2014

ಕವನ

ಒಮ್ಮೆ ಸಾಗಿದರೆ ಹಿಂದೆ ಬಾರದು


ಹೊರಡಬೇಕೆಂದುಕೊಂಡಷ್ಟೂ ನಿಲ್ಲುತ್ತೇವೆ
ಹೊರಟಮೇಲೆ ನಿಂತದಷ್ಟೇ ನೆನಪು!
ನಿಲ್ಲಲಾರದ ಪಶ್ಚಾತ್ತಾಪವಿಲ್ಲ

ಬೇರುಗಳಿರಬಹುದೇ ಈ ಕಾಲುಗಳಲ್ಲಿ
ಸುಲಭಕೆ ಮುಂದೆ ಸಾಗದು 
ಎದುರಿನ ಮನಗಳಿಂದ

ಒಮ್ಮೆ ಸಾಗಿದರೆ ಹಿಂದೆ ಬಾರದು
ಕತ್ತರಿಸಿಕೊಂಡ ಬೇರುಗಳಲಿ
ಜೀವ ತುಂಬಿ ಚಿಗುರೊಡೆಯಲು!

06/11/2014

Thursday 6 November 2014

ಕವನ

ನಕ್ಷತ್ರ ಕನಸು ...



ಸುನಾಮಿ ಎದ್ದ ಮನಸ್ಸು
ಶಾಂತವಾಗಲು ಅದೆಷ್ಟು 
ಹೊಡೆತಗಳ ಎದುರಿಸಬೇಕೋ?!

ಮಡಿಲ ಬಿಟ್ಟ ಹಕ್ಕಿ 
ಅದೆಷ್ಟು ತಾಸು ನೆಲದಿ
ಸುಮ್ಮನೆ ಉರುಳಬೇಕೋ?!

ಮೋಡ ಬಿಟ್ಟ ಹನಿ
ಗಾಳಿಯೊಂದಿಗೆ ಎಷ್ಟು 
ಸೆಣಸಿ ಧರೆಗಿಳಿಯಬೇಕೋ?!

ಬಿಟ್ಟ ಮಾತು 
ತಿರುತಿರುಗಿ ಎದುರೇಟಾಗಿ 
ಮತ್ತೆಷ್ಟು ಬಾರಿ ಎದೆ ನೆಟ್ಟಿ ನಿಲ್ಲಬೇಕೋ?!

ಕಳೆದು ಬಂದ ಬಂಧ 
ನೆನಪುಗಳಾಗಿ ಇನ್ನೇಷ್ಟೂ ಕಾಲ
ಹೀಗೆ ಜೀವ ಹಿಂಡ ಬೇಕೋ?!

ಒಮ್ಮೆ ಎಡವಿದ ಕಾಲ್ಬೆರಳು 
ರಕ್ತ ಒಸರುತ್ತಿದ್ದರೂ ಇನ್ನೆಷ್ಟು ದೂರ 
ಈ ಓಟದ ಆಟದಲಿ ಓಡಬೇಕೋ?!

ಒಡೆದ ಕನಸುಗಳ ಅವಶೇಷಗಳನ್ನಿಟ್ಟು 
ಇನ್ನೆಷ್ಟು ನಕ್ಷತ್ರ ಕನಸ ಹೊಸೆದು 
ಹಸಿ ಹಸಿಯಾಗಿ ಮತ್ತೆ ಮತ್ತೆ ಹುಟ್ಟಬೇಕೋ ಕಾಣೆ!!


06/11/2014

ಕವನ

ಯಾವ ದಿಕ್ಕಿಗೆ?!! 


ಬೆಳಗ್ಗೆ ಎದ್ದೊಡನೆ ಕಣ್ಣಿಗೆ ಬಿದ್ದ 
ಅತ್ಯಾಚಾರದ ಎರಡು ಸುದ್ದಿಗಳು. 
ಒಂದು ಶಿಕ್ಷಕನಿಂದ ಶಾಲೆಯಲ್ಲಿ ಮತ್ತೊಂದು 
ಅಪ್ಪನಿಂದ ಮಗಳ ಮೇಲೆ ಮನೆಯಲ್ಲೇ!.
ಅಲ್ಲೇ ಪಕ್ಕದಲ್ಲೊಂದು ವ್ಯಂಗ್ಯ ಚಿತ್ರ
ಶಾಲೆಯಿಂದ ಹೊರಡುವ ವೇದನೆಯ ಕೂಗಿಗೆ
ಹೆದರಿ ಎದ್ದು ಬಿದ್ದು ದೂರ ಓಡುವ ಬಾಲಕಿ!

ಶಾಲೆಯ ದಿಕ್ಕಿಗೆ ಆಸೆ ಕಂಗಳ ಕಂದಮ್ಮಗಳ
ಕನಸಿತ್ತು ಚಿತ್ರಕಾರರ ಕಣ್ಗಳಲಿ
ಶಾಲೆಯೆಡೆಗೆ ಸೆಳೆವ ಗುರಿಯಿತ್ತು ಶಿಕ್ಷಕರಲಿ
ಈಗೆಲ್ಲಾ ಭೀಕರವೆನಿಸೋ ಶಾಲೆಯ ಚಿತ್ರಣ
ಮನಗಳಲ್ಲೂ ಕಲೆಗಾರರಲ್ಲೂ; 
ಶಾಲೆ ಎಂದರೆ ಹೆದರುವ ಸ್ಥಿತಿಗೆ ಪುಷ್ಠಿ ನೀಡಿ
ಎತ್ತ ಸಾಗಿಸುತ್ತಿದ್ದಾರೆ ಶಿಕ್ಷಣದ ಗುರಿಯಾ?
ಶಿಕ್ಷಣವೆಂಬುದು ಕೇವಲ ಶಿಕ್ಷಕನ ಗುರಿಯೇ
ಸಮಾಜವೆಲ್ಲಿ ಕಳೆದು ಹೋಯ್ತೋ ಕರ್ತವ್ಯ ಸಡಲಿಕೆಗಳಲಿ

ರಣ ಚಂಡಿಯಂತ ಆ ಆಂಟಿಯದು 
ಒಂದೇ ಅಬ್ಬರಗಳ ಹೊಡೆತ
ಆ ಕೊಳಗೇರಿಯ ಹಾದು ಹೋಗುವಾಗ 
ಕೇಳಿಬಂದ ಹಿಂದಿನ ದಿನದ ಇಳಿ ಸಂಜೆಯ ನೆನಪು;
ಎಂತ ಗಂಡನಯ್ಯಾ ನೀನೂ ಮುದಿ ಗೂಬೆ ನೀನು
ಐವತ್ತಾದ ಮೇಲೂ ಹೆಂಡತಿ ಸತ್ತಳೆಂದು 
ಎರಡನೇ ಹೆಂಡತಿ ಬೇಕಿತ್ತೇನಯ್ಯಾ?! ಮುದಿಯಾ,,
ನೋಡು ಅಪ್ಪ ಮಗಳ ಮೇಲೇಯೇ ಕಣ್ಣು 
ಹಾಕಿದ್ದನಂತೆ
ಬಿಟ್ಟರೇ ನೀನೂ ಅಂತವನೇ 
ಈ ಎಪ್ಪತ್ತರಲ್ಲೂ
ಮನೆ ತುಂಬಾ ಹೆಣ್ಣು ಮಕ್ಕಳೇ ನಿನಗೆ,, 
ಛೇ ಛೇ,,
ಎಂದೊಂದೇ ಉಸಿರಿಗೆ ಬಡಿದಾಡುತಿದ್ದಳು 
ನಾಲಿಗೆಯೊಡನೆ ಅವಳ ಕೊಳಕು ಮೆದುಳೂ..

ಏದುಸಿರ ಜೀವ ಕಣ್ಣೀರಾಯ್ತೋ ಏನೋ
ಮಬ್ಬುಗತ್ತಲೊಳು ಆ ಹಿರಿ ಜೀವದ ಭಾವ 
ಕಲ್ಪನೆಗೆ ಹಿಡಿಯಲಾಗಲಿಲ್ಲ
ಜಗತ್ತು ಪ್ರತಿಕ್ರಿಯಿಸುತ್ತಲಿದೆ, ಪ್ರತಿಭಟಿಸುತ್ತಲಿದೆ
ಯಾವ ದಿಕ್ಕಿಗೆ? ಯಾವ ರೀತಿಯಲಿ? ಎಂತಹ ಆಕ್ರೋಶದಲಿ?
ಯಾರ ಮೇಲೆ? ಯಾರ ಪರಾರಿ ಮಾಡಿ? ಯಾರನು ಶಿಕ್ಷಿಸಿ?!
ದೀರ್ಘ ನಿಟ್ಟುಸಿರಲಿ ಚಿಂತನೆ ಸಾಗಿದೆ!!

05/11/2014