Friday 30 May 2014

ಮನದ ಮಾತು

''ಕೊನೆ ಪಕ್ಷ ಯಾರನ್ನು ನಿಂದಿಸೋ ಹಾಗಿಲ್ಲ, ನಮ್ಮನ್ನು ನಾವೇ ಹಳಿದುಕೊಂಡು ಜೀವಿಸಬೇಕು ಆದಂತಹ ಎಲ್ಲಾ ಎಡುವುಗಳಿಗೂ'' ಎಂದೆನಿಸಿದಾಗಲೆಲ್ಲಾ ತೀರ ಅಸಹನೀಯವಾಗಿಬಿಡುವುದು ಈ ಬದುಕು. ಹೌದು ಕೆಲವೊಮ್ಮೆ ಇಂತಹ ಹತಾಶೆಗಳಲ್ಲಿ ನಮ್ಮನ್ನು ನಾವೇ ಮುಳುಗಿಸಿಬಿಡುತ್ತೇವೆ. ಬಹಳಷ್ಟು ಬಾರಿ ನಮಗಾಗ ಆಘಾತಗಳನ್ನು ನಾವು ಒಪ್ಪಿಕೊಂಡಿರುವುದೇ ಇಲ್ಲ. ನಮ್ಮನ್ನು ನಾವು ಅಂತಹ ಸ್ಥಿತಿಯಲಿ ಕ್ಷಣ ಮಾತ್ರವೂ ಇಟ್ಟು ನೋಡಲಾರೆವು. ಕಾರಣ ಕರುಣೆ,,,!!
ನಮ್ಮನ್ನು ನಾವೇ ಆ ಕರುಣೆಯ ಕಣ್ಣುಗಳಲ್ಲಿ ನೋಡಲಿಚ್ಚಿಸೆವು; ಹಾಗಿರುವಾಗ ಇತರರು?!
ಹಾಗಾಗಿಯೇ ಏನೋ ನೋವುಗಳನ್ನು ಹಂಚಲಾರೆವುವು, ವಂಚಿಸುವ ತಂತ್ರವಲ್ಲ, ನಮ್ಮನ್ನು ನಾವು ಒಪ್ಪಿಕೊಂಡು ಅದರಾಚೆ ಜೀವಿಸೋ ಆತ್ಮಬಲ.

ನೋವುಗಳನ್ನು ಹಂಚಿಕೊಂಡವು, ಎಂದಾದರೆ ಅದರ ಹಿಂದೆಯೇ ನಮಗರಿವಿಲ್ಲದೇ ಬರುವಂತಹುದು ನಿರೀಕ್ಷೆ!, ನಮ್ಮನೊಮ್ಮೆ ಸಮಾಧಾನಿಸುವರೇ? ಎಂದು. ಎಲ್ಲರೆದುರು ದಿಟ್ಟರೆಂದೇ ಹೆಸರಿಸಿಕೊಂಡರು ತನ್ನವರಲ್ಲಿ(ಆತ್ಮೀಯರಲ್ಲಿ) ಮಾತ್ರ ನಮ್ಮ ಕೆಲ ನೋವು- ಸೋಲುಗಳನ್ನು ಹಂಚಿಕೊಳ್ಳುವಂತಾಗಿಬಿಡುತ್ತದೆ. ಯಾಕೋ ಗೊತ್ತಿಲ್ಲ, ಆದರೆ ಆ ಆತ್ಮೀಯರು ಸಮಾಧಾನದ ಮಾತುಗಳಾಡದಿದ್ದರೂ ಸರಿಯೇ ಕುಗ್ಗಿಸುವಂತೆ ನಮ್ಮೊಂದಿದೆ ನಡೆದುಕೊಳ್ಳದಿದ್ದರೆ ಅದೇ ನಮ್ಮ ಜಯ,, :-)

ಬದುಕು ಏನೆಲ್ಲಾ ಕಲಿಸುತ್ತದೆ ಎನ್ನುವಾಗ; ಮತ್ತೆ ಮತ್ತೆ ಸೋಲಿಸುತ್ತದೆ ಎನ್ನುವುದೂ ಅಷ್ಟೇ ನಿಜ. ಎಷ್ಟು ಬಾರಿ ಸೋತರೂ ಮತ್ತೂ ಕಣಕ್ಕಿಳಿಯೋ ಉತ್ಸಾಹ ಉಳಿಯುವುದು ಬದುಕಿರುವವರೆಗೂ. ಅದು ಜೀವನ!!. ಹಾಗಾಗಿ ಎಲ್ಲಾ ದುಃಖಗಳಾಚೆ, ನಿರಾಶೆಗಳಾಚೆ ನಾವೇ ನಮಗಾಗಿ ಕಟ್ಟಿಕೊಳ್ಳೋ ಸಂತಸದ ಮನೆಯ ಇಟ್ಟಿಗೆಗಳಿವೆ, ಆಯ್ದುಕೊಂಡು ಕಟ್ಟಿಕೊಳ್ಳೋ ನಿರಂತರ ಪ್ರಯತ್ನ ನಮ್ಮದಾಗಿರಬೇಕು. ಸೋಲು ಮುಖ್ಯವಲ್ಲ,, ಸೋತು ಉಳಿವುದು, ಮತ್ತೂ ಸಜ್ಜಾಗುವುದು ಮುಖ್ಯ,,,!

ಯಾರನ್ನೋ ನಿಂದಿಸುತ ಅಥವಾ ತಮ್ಮನ್ನೇ ಹೀಗಳೆಯುತ ನಿಲ್ಲುವ ಬದಲು, ಸೋಲುಗಳನ್ನೇ ಎದುರಿಸುತ ಮುನ್ನುಗ್ಗುವುದು ಹೆಚ್ಚು ಪ್ರಿಯವೆನಿಸುತ್ತದೆ. ನದಿಯ ತಿಳಿಗೊಳ್ಳುವಿಕೆಗೆ ಹರಿವು ಮುಖ್ಯ, ಎತ್ತ ಕಡೆಗೆ ಎನ್ನುವುದಕ್ಕಿಂತ; ಹಾಗೆಯೇ ಮನಸ್ಸು. ನೋವು-ಅಸಹನೆಗಳು ತುಂಬಿದ ಮನಸ ಹಗುರಾಗಿಸಲೆಂದು ಹರಿದು ನಿರೀಕ್ಷಿತ-ಅನಿರೀಕ್ಷಿತ ಅಡೆ-ತಡೆಗಳನೆಲ್ಲಾ ದಾಟಿ ಸಾಗೋ ಒತ್ತಡವಿರಲಿ ಮನದಲಿ. ಜೀವನ ಯಾನ ಸುಖಕರವಲ್ಲದಿದ್ದರೂ 'ಆಕ್ಶನ್ ಮೂವಿ' ಯಂತಾದರೂ ಒಂದು ರೋಮಾಂಚನವಿರುತ್ತದೆ. :-)



  

Thursday 29 May 2014

ಹೊರಗೆಲ್ಲಾ ತಂಗಾಳಿಯ ಹೊಯ್ದಾಟ
ನಾನೋ ಕಿಟಕಿಗಳ ಮುಚ್ಚಿ ಕುಳಿತು
ಬೆವತಿದ್ದೆ,,
ಅದೇನೋ ಮಿಂಚಿದಂತೆ ಬೆಳಕು;
ಇಣುಕಿದೆ,
ಓಹ್!,,,
ಮಳೆ ಬರುವ ಸೂಚನೆ,
ತಂಗಾಳಿಗೆ ಮೈಯೊಡ್ಡಿ
ಕಳೆದು ಹೋಗೋ ಹೃದಯ,
ಕಲ್ಪನೆಗಳಿಗಷ್ಟು ರೆಕ್ಕೆ ಪುಕ್ಕಗಳು,
ಸುಮ್ಮನೆ ಕುಳಿತಿರಲೆಂತು ಮನವು,
ಕೇಳೋ ಹಾಡಿಗೋ ಒಂದು ದೃಷ್ಯಾವಳಿ
ಕಣ್ಣಲೇ ಓಡಿಸುತ
ಪುಳಕಗಳಿಗಷ್ಟು ಕಚಗುಳಿ;
ಏಕೋ ಏನೋ ಈ ಸಮಯದಿ
ಒಳಗೊಳಗೆ ನಗು, ಉಲ್ಲಾಸ;
ಗಾಳಿಯದೇ ರಾಜ್ಯಭಾರ,
ಇನ್ನೂ ಮಳೆ ಇಲ್ಲ,,
ಆದರೂ ರೋಮಾಂಚನ!!!

_________________

ನನ್ನ ಕಲ್ಪನೆಯ ರಾಜ,
ಅದೇಕೋ ಕೊರಗಿದಂತೆ
ಸರಿದಿದ್ದಾನೆ;
ಪ್ರತಿಸ್ಫರ್ಧಿಗಳ
ಗುರುತಾಯಿತೋ?!
ತಿಳಿಯದು,,,

_______________________

ಮನಸು ನಿಂತಂತೆ ಎನಿಸಿದಾಗಲೆಲ್ಲಾ
ಓಡಿಸಿದ್ದೆ ಕಣ್ಣುಗಳ ಹಕ್ಕಿಗಳೆಡೆಗೆ
ಕಿವಿಗಳ ವೇಗದ ವಾದ್ಯಗಳೆಡೆಗೆ
ಓಡುವ ಕಾರೋ,, ಮುನುಗ್ಗೋ ಬಸ್ಸೊ
ಬಿರುಸು ನಡಿಗೆಯೋ,
ಹೆಚ್ಚು ಪ್ರಿಯ ನನಗೆ;
ಮನಸನೊಮ್ಮೆ ರಮಿಸಿ
ಮುನ್ನೆಡೆಸಲು
ವೇಗವ ಕಲಿಸಿ ಒಗ್ಗಿಸಲು,,,,

29/05/204

________________

ಬೀಸೋ ತಂಗಾಳಿ,
ಹಕ್ಕಿ ನಾದ
ಚಿಟಪಟ ಆಗೊಮ್ಮೆ ಈಗೊಮ್ಮೆ ಮಳೆ
ಮುಂಜಾವ ಕಿರಣ,
ಬೆಳದಿಂಗಳ ರಾತ್ರಿ
ಒಮ್ಮೊಮ್ಮೆ ಒಂದೊಂದರ ಜೊತೆ,
ಅವುಗಳ ಮೀರಿ
ನೀನಿರಲು ನನ್ನೊಳಗೆ
ನನಗೆಲ್ಲಿಯ ಒಂಟಿತನ!

_____________

'ಕನಸು'
ಎಂಬುದೆಲ್ಲಾ
'ಹುಸಿ' ಎನಿಸಿದಾಗ
ನೀನೂ ಇಲ್ಲ!

__________________

ಹೊಳೆವ ಕೆನೆಯ ನೋಡಿ
ಅಳೆಯದಿರು
ಅವಳ ಮನವ
ಒಳ ಪದರಗಳು
ಹಾಲೋ
ಮೊಸರೋ
ತಿಳಿದು ಉರಿಯಿಡು,,
ಮಥಿಸಿದರೂ ಒಳೆತೇ,,
ಆಂತರ್ಯಕ್ಕಿಳಿದು,
ಉರಿಗೆ ಉಕ್ಕದು,
ಸೀದು ಕರಗುವುದು
ನಿರೀಕ್ಷೆಗಳ ಹುಸಿಗೊಳಿಸಿ,,

28/05/2014

Wednesday 28 May 2014

ಮನದ ಮಾತು

"ಹೌದು ನಮಗೆ ಒಂಟಿತನ", ಅಂತ ಬಹುಶಃ ಯಾರೂ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ನನ್ನ ಭಾವ.
ಹಾಗೇನಾದರೂ ಒಪ್ಪಿಕೊಂಡರೆ ಅದು ಒಂದು ರೀತಿ 'ಮಂಡಿಯೂರಿ ಶರಣಾದಂತೆ' ಎಂದು ಅನಿಸುತ್ತದೆ.
ಮುಂದಿನ ಸನ್ನಿವೇಶದಲ್ಲಿ ಎದುರಿನವರು ಹೇಗೆ ಬೇಕಾದರೂ ಪ್ರತಿಕ್ರಿಯಿಸಬಹುದು, ಸಹಿಸಬೇಕಾಗುತ್ತದೆ.
ನಿಂದಿಸಿದರೂ,, ಹೀಯಾಳಿಸಿದರೂ, ಪ್ರೀತಿಸಿದರೂ,,,
ಆದರೇ ಯಾವಾಗಲೂ ನಮಗೆ ಹೆಚ್ಚು ನಕಾರತ್ಮಕ ಯೋಚನೆಗಳೇ ಮೊದಲು ಬರುವುದು,,,
ಹಾಗೇನಾದರೂ ಯಾರಾದರೂ ನಮ್ಮ ಮುಂದೆ ತಮ್ಮ ಒಂಟಿತನವನ್ನು ಒಪ್ಪಿಕೊಂಡಿದ್ದೇ ಆದಲ್ಲಿ,,,

,,,,,,,,ಅದು ಗ್ರೇಟ್!!!   :-)

ಕವನ

ನೀವೂ ಒಬ್ಬರೇ?!!


ಹೌದು ನಾನೂ ಒಬ್ಬಳೆ
ತನ್ನವರೆಲ್ಲ ಅವರವರೊಟ್ಟಿಗೆ
ನಾನೂ ಒಬ್ಬಳೇ,
ಆಗಲೂ, ಈಗಲೂ
ಮುಂದೆಯೂ,,,,
ಎನ್ನುವ ಮುನ್ನ, ನನ್ನೋಳಗವಳು
ಒಂದೇ ಸಮನೆ ತಿವಿಯುತ್ತಿರುವಳು..

ಎಲ್ಲೆಲ್ಲಿಯೂ ನಾನಷ್ಟೇ
ನನ್ನೊಂದಿಗೆ;
ಬಯಸಿದ ಆಸರೆಗಳು
ಆಸರಿಕೆಗಳಲ್ಲದವು,
ನಂಬಿ-ನೆಚ್ಚಿ ಇನ್ನೆಷ್ಟು ಹಂಬಲ?
ಇಲ್ಲದ-ನಿಲ್ಲದ ನಿರೀಕ್ಷೆಗಳ
ಬೆನ್ನಿಗೆ ಬಿದ್ದ ಭಿಕಾರಿಯಂತೆ,,

ಸಾಕೆನಿಸಿ ಸಾವರಿಸಿಕೊಂಡು
ನಿಂತಿದ್ದೆ; ಬದುಕು ತನಗಷ್ಟೇ,
ಬದುಕಲಿ ಅವರೂ-ಇವರೂ,
ತಾನೇನು ಅಲ್ಲದ ಅವರಿಗಾಗಿ
ನನ್ನೀ ಜೀವವಲ್ಲ ಅವರಿಗಾಗಿ!

ಕ್ಷಮೆಯ ಬೇಡಿದ್ದೇ; ನಾನೇ ನನ್ನೊಳ ಅವಳಿಗೆ
ಅವಳ ಜೀವ ಹಿಂಡಿದ್ದಕ್ಕೆ, ನೊಂದು
ಹಿಂಸಿಸಿದಕೆ:
,,,,,,,
ನಕ್ಕಳು,,
ನನ್ನ ಮುಗ್ಧ ತಪ್ಪುಗಳಿಗೆ,
ಬರಸೆಳೆದು ತುಬ್ಬಿಕೊಂಡಿರುವಳು
ನನ್ನೇ ತನ್ನವಳೆಂದು,,,

ಬಾಹ್ಯ ಸಂಸಾರಕೆ ಹೋಲಿಸಿ
ನಡುಗುವಾಗೆಲ್ಲಾ,
ಅವಳೇ ಆಸರೆ
ನಗುವಲ್ಲಿ ಅಳುವಲ್ಲಿ
ಸಮ ಭಾಗಿ
ನನ್ನೊಳ ಅವಳು,

''ನೀವು ಒಬ್ಬರೇ?'' ಎನುವ ಪ್ರಶ್ನೆಗೆ,
ತಕ್ಷಣ ಅದೇಕೋ ಉತ್ತರಿಸಲಾರೆ,
ಇಲ್ಲವೆನ್ನಲೇ ಕಾಣುವ ಕಣ್ಣುಗಳಿಗೆ?
ಹೌದೆನ್ನಲೇ ನನ್ನೊಳ ಅವಳ ಕಣ್ಣಿಗೆ ಕಂಬನಿಯಾಗಿ!!

ನನ್ನೀ ಅಸಾಧಾರಣ ತತ್ವಗಳಿಗೆ
ಏನೆಂದು ಕರೆವೆಯೋ(ವರೋ) ಈ ಕಣ್ಣ ಮುಂದಣ ನೀ(ನೀವು)
ಅವಳು ನನ್ನೊಳ ಚೇತನ;
ಒಮ್ಮೆ ಪ್ರೇಮಿ; ಮತ್ತೊಮ್ಮೆ ತಾಯಿ,
ಮೀರಿ ನಿಂತಾಗ ನಾನೇ!!!

ಈಗ ಕೇಳಿ;
ನೀವೂ ಒಬ್ಬರೇ?!!!!

28/05/2014


ಅವರ ಮನದಾಳದಿಂದ ಪುಟಿದಿದ್ದ
ನನ್ನೆಡೆಗಿನ ರಾಗ, ದ್ವೇಶ, ಹತಾಶೆಗಳು,
ನಾನೊಮ್ಮೆ ಅವರಾಳಕ್ಕಿಳಿದ ನನ್ನವೇ ಸಾಕ್ಷಿಗಳು
ಬೆರಗು ಮತ್ತು ಸೊಗಸೆನಿಸದೇ ಇರದು..

_______________

ಮಳೆ ಹನಿಯ ಸದ್ದಿಗೆ
ನಿದಿರೆ ಮುನಿದು
ಕನಸಿನ ಬಾಗಿಲೊಳು
ಕುದುರೆ ದಿಕ್ಕೆಟ್ಟು
ರಾಜನಿಗೆ ಕ್ಷೋಭೆ!!

_______________

ಅರಳಿದ ನಗುವಿಗೆ
ನಾಳೆಯ ಕೈ
ಚಿಂತೆ ಸವರಲು
ಇಂದೇ ಬಾಡುವ
ಅನಿವಾರ್ಯ
ಮೊಗ್ಗಿಗೆ!!

28/05/2014

Tuesday 27 May 2014

ಹಸಿ ಹನಿ
ತಂಪು ಗಾಳಿ
ತುಸು ಬಿಸಿ
ಕನಸು ಇನಿ
ಒಳಗೆ ಹಬೆ
ಉಸಿರು ಬಿಗಿ
ನಿಶ್ಶಬ್ದ ನೀರವತೆ,,
ಈ ಮಳೆಯಲಿ,
ನೀ ಮನದಲಿ,,,,

ಕವನ



ಪ್ರೀತಿಯೊಂದು ಕಡಲು
ಮೊಗೆದಷ್ಟೇ ಅಮಲು

ಬಯಕೆ ಬೇಡಿಕೆಯಾಗಬಹುದು
ಅರ್ಪಣೆ ಪ್ರೀತಿ ಪಥ್ಯವಾಗಬಹುದು

ಕಡಲಿಗೆ ನದಿಯ ಕಾಳಜಿ ಹರಿಸು
ಗೆಲ್ಲಲು ಬೆಳದಿಂಗಳ ಪ್ರೀತಿ ಹಾಲ್ಗಡಲು

27/05/2014

ಮನದ ಮಾತು

ಹಲವು ಸಂದರ್ಭಗಳಲ್ಲಿ ನಮಗಾದ ನೋವುಗಳಿಗೆ ನಾವೇ ಕಂಡುಕೊಂಡು ಕೆಲ ಕಾರಣಗಳು, "ಬಹುಶಃ ನಮ್ಮದೇ ತಪ್ಪುಗಳಿರಬಹುದು, ನಮ್ಮ ಚಿಂತನೆಗಳೇ ಸರಿ ಇಲ್ಲ, ನಾವೇ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳೋಣ'' ಎಂದು ಯೋಚಿಸುವುದುಂಟು. ಹಾಗೆಯೇ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತ ವಿಶಾಲವಾದ ಚಿಂತನೆಗಳು ನಮ್ಮದಾಗಬೇಕು, ಸಂಕುಚಿತ ಮನೋಭಾವವನ್ನು ತೊರೆಯಬೇಕು ಎಂದೆಲ್ಲಾ ಅಂದುಕೊಳ್ಳುತ್ತೇವೆ. ಸರಿ ಅದರಂತೆಯೇ ಕೆಲ ದಿನಗಳು ನಡೆದೂ ಬಿಟ್ಟರೂ ಆ ನಮ್ಮ ಕೆಲ ಸೋಲುಗಳು ಸೋಲುಗಳಾಗಿಯೇ ಉಳಿಯುತ್ತದೆ. ಆಗೆಲ್ಲಾ ಮತ್ತೂ ಯೋಚನೆ, "ಹೌದಲ್ವಾ ಎಷ್ಟೇಲ್ಲಾ ನನ್ನನು ನಾನು ಬದಲಾಯಿಸಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ,, ಮತ್ತೆ ನಾನು ಅದೇ ಬಿಂದುವಿಗೆ ಬಂದು ನಿಂತೆ, ಮತ್ತದೇ ನೋವು ಬೇಸರ,,"

ಯಾಕೆ ಹೀಗೆ? ಗೊತ್ತಿಲ್ಲ,,,
ನನಗನಿಸುವುದು; ನಮ್ಮದು ಕೇವಲ ಬದಲಾದ ಭ್ರಮೆ, ಬದಲಾಗಿ ಖುಷಿಯಾಗಿದ್ದೇವೇ ಅಂದುಕೊಳ್ಳುತ್ತೇವೆ. ಬದಲಾಗದೇ.
ಅಥವಾ ಬದಲಾವಣೆಯು ದಿಡೀರ್ ಖುಷಿಯನ್ನು ಕೊಡಬೇಕು ಎಂಬುದೇ ನಮ್ಮನದ ಭಾವ ಹಾಗಾಗಿ ನಮಗೆ ಆ ಖುಷಿಗಳು ನಮ್ಮ ನಿರೀಕ್ಷೆಯಂತೆ ಶೀಘ್ರದಲ್ಲಿ ಸಿಗದಿದ್ದರೆ ನಾವು ನಮ್ಮ ಬದಲಾಗುವ ಆ ಪ್ರಯತ್ನಗಳನ್ನೇ ದೂರುತ್ತೇವೆ.
ಪ್ರಯತ್ನಗಳ ಕೈ ಬಿಟ್ಟು ಮತ್ತೆ ಮತ್ತೆ ಆ ಅದೇ ಬಿಂದುವಿಗೇ ನಾವೇ ಸೆಳೆದುಕೊಂಡಂತೆ ಬಿಗಿದುಕೊಂಡುಬಿಡುತ್ತೇವೆ.

ಮತ್ತದೇ ಬೇಸರ,,,, ಏಕಾಂತ,,,,,,,,,,

ನಮ್ಮಲ್ಲಿ ಮೂಡುವ ಅನಿಸಿಕೆಗಳು, ಭಾವಗಳು, ಚಿಂತನೆಗಳು ಬಹುಶಃ ಅವುಗಳ ಪಕ್ವತೆಯನ್ನು ನಮ್ಮಲ್ಲಿ ಬೇಡುತ್ತವೆ ಅನಿಸುತ್ತದೆ. ಇಲ್ಲವೆ ಬದಲಾವಣೆಗಳ ಪ್ರಯತ್ನಗಳಿಗೆ ಒಗ್ಗಿಕೊಂಡು ಏರು-ಪೇರುಗಳ ಮೀರಿ ನಡೆವ ಹದಕ್ಕಾಗಿ ತುಸು ಸಮಯ ಬೇಕೇನೋ. ಹೀಗೆ ನೀಡಿದ ಸಮಯ ಅರಿವಿಲ್ಲದೆ ನಮ್ಮನ್ನು ಹಾದಿಯ ನಮ್ಮೊಳ ನಿರೀಕ್ಷಿತ ಹೊಸತನಕ್ಕೆ ತಂದು ನಿಲ್ಲಿಸಿದ್ದೇ ಆದರೆ ಆ ಪ್ರಯತ್ನಗಳಿಗದೇ ಅದರ ಯಶಸ್ಸು; ಹಾಗೆಯೇ ನಮ್ಮದೂ.
ಇದಕ್ಕಾಗಿ ನಮ್ಮಲ್ಲಿರಬೇಕಾದ್ದು ತಾಳ್ಮೆ; ಹೊಂದಿಕೊಳ್ಳುವ-ಹೊಂದಿಕೊಳ್ಳೋ ಪ್ರಯತ್ನಗಳಿಗೆ ಒಗ್ಗಿಕೊಳ್ಳುವ ತಾಳ್ಮೆ. ಆದರದೇ ಈಗಿನ ಜೀವನ ಶೈಲಿಯಲ್ಲಿ ಸಾಧಿಸಬೇಕ್ಕಾದ್ದಾಗಿಬಿಟ್ಟಿದೆ.

ಸರಳವಾಗಿ ಕಂಡುಕೊಂಡ ವಿಧಾನ; ಏನೇ ಕಳೆದರೂ ಮತ್ತೂ ಉಳಿದಿದೆ ಈ ಜೀವನ. ಹುಟ್ಟಿದಂದಿನಿಂದ ಸಾಧಿಸಿಕೊಂಡು ಬಂದ 'ಈ ಜೀವನ', ಯಾವ ಯಾವುದೋ ಕಾರಣಗಳಿಗೆ ಮುದುಡಿಸಬಾರದು.

ಹುಟ್ಟುವಾಗ ತಾಯಿ, ಬೆಳೆಯುವಾಗ ತಂದೆ-ತಾಯಿ, ಶಿಕ್ಷಕರೂ, ಸುತ್ತ ಮುತ್ತಲ ಸ್ನೇಹಿತರೂ ಮತ್ತೂ ಈ ಸಮಾಜ ಕಷ್ಟವಾದರೂ ನಮ್ಮನ್ನು ನಮ್ಮಂತೆ ಸಹಿಸಿಕೊಂಡಿದ್ದಾರೆ; ಕೆಲ ಹಂತದವರೆಗೂ. ಹೀಗಿರುವಾಗ ನಾವೂ ಅವರೊಟ್ಟಿಗೆ ಬೆಳೆಯಲು ಬೆರೆಯಲು ತುಸು ಶ್ರಮಪಡುತ್ತೇವೆಂದರೆ ಸರಿಯೇ, ಅದು ಅಗತ್ಯವೂ ಕೂಡ. ಎಲ್ಲರೂ ನನ್ನಂತಿರಲಿ ಎನ್ನುವ ಮುನ್ನ ನಾವು ಎಲ್ಲರಂತಿರಲು ಪ್ರಯತ್ನಿಸೋಣ. ಅನುಯಾಯಿಯಾಗಲ್ಲ; ಅನುಬಂಧಗಳಲೊಂದಾಗಿ. ಪರಿಸರಕ್ಕೆ ಹೊಂದಿಕೊಂಡ ಜೀವಿಗಳಷ್ಟೇ ಉಳಿದು ಮಿಕ್ಕಂತೆ ನಶಿಸಿ ಹೋದ ಥಿಯರಿಗಳನ್ನು ಜೀವ ವಿಙ್ಞಾನದಲ್ಲಿ ನೆನೆವಂತೆ ನಾವೂ ಹೊಂದಾಣಿಕೆಯ ಮಂತ್ರ ಜಪಿಸೋಣವೆ?

ಹೊಂದಿಕೆಯೇ ಜೀವನ!!

26/05/2014


ಮತ್ತೆ ಕಳೆಗಟ್ಟಿದ ಹೃದಯಕೆ
ನಿನ್ನ ಲಗ್ಗೆಯೇ ನೆಪವಾಗಿದೆ!

________________

ಸ್ನೇಹ-ಪ್ರೀತಿಯ ಎದುರು,
ಮನವು ಮೆದುಗೊಂಡು
ಮಳೆ ನಿಂತ ಮೌನಕೆ ಶರಣು"

26/05/2014


ಮತ್ತೊಮ್ಮೆ ಪಡೆದ
ಕಳೆದ ಸವಿ ಘಳಿಗೆ
ನನ್ನ ನಿನ್ನ
ಈ ಗೆಳತನ!!

__________________

ಆಡಂಬರದ ಬಣ್ಣಗಳೆಲ್ಲವ
ಕಂಡ ಮೇಲೆ,
ಬದುಕಿಗಾಗಿ ಹುಡುಕಾಟ,
ಜೀವನವಲ್ಲಿ ಶುರುವಾಗಿತ್ತು,,,,

____________________

ಈ ತೂರಿ ಬರುವ ತಂಗಾಳಿಗೆ
ನಿನ್ನ ಹೆಸರಿಟ್ಟೆ;
ನಿನ್ನಂತೆ ಹಾರಿ ಬಂದು
ತೂರಿ ಹೋಗೋ
ಅದರ ಒಳ ಸಂಚಿಗೆ!!..

24/05/2014

___________________________

ಕಂಡುಕೊಂಡ ಚಿಕ್ಕ ಖುಷಿಯ ಪ್ರಪಂಚದಲ್ಲಿ
ಚೂರು ಏರುಪೇರಾದರೂ ಮನವು
ಚಿಂತೆಯ ಗಾಳಕ್ಕೆ ಸಿಕ್ಕ ಮೀನು
ಒಂದೇ ಸಮನೇ ವಿಲವಿಲ ಒದ್ದಾಟ!

____________________

ಅಸಡ್ಡೆ-ತಿರಸ್ಕಾರಗಳಿಗಿಂತ
ಅವರುಗಳು
ಘೋಷಿಸಿಕೊಂಡ
ಅಹಂ; ನನಗೆ
ಹೆಚ್ಚು ಸಹ್ಯ..........

__________________________

ಪ್ರೀತಿಸಲು ಪದಗಳೇ ಬೇಕಿಲ್ಲ
ಮೌನವೂ ಪ್ರೇಮವೇ ಅರ್ಥವಾದೊಡೆ!

ಪ್ರೀತಿಗೆ ಅಂತರವೂ ನಗಣ್ಯ
ಆಂತರಿಕ ಒಲವಾದೊಡೆ!

ಈ ಪ್ರೀತಿಗೆ ಏನೇನೋ ಬೇಕಿಲ್ಲ
ಬರೀ ನಾನು ನೀನು ಅಷ್ಟೇ ಆದೊಡೆ!

ಕಾಲದ ಪರಿವೂ ಇಲ್ಲ, ಹಾದಿಯ ಹಂಗೂ ಇಲ್ಲ
ನೀನಲ್ಲಿ ನಾನಿಲ್ಲಿ ನೆನಪುಗಳೇ ಜೊತೆಯಾದೊಡೆ!

_______________

ತಲೆ ತಿರುಕರೆಲ್ಲಾ
ತನ್ನಿದಿರೇ ನೋಡಿ
ಎದುರಾದಂತೆ
ಎನ್ನ ವಿಶಾದಗಳಿಗೆಲ್ಲಾ
ಹೊಸ ಕಳೆ!

23/05/2014

Thursday 22 May 2014

ಕವನ

ಮೌನ........


ತುಟಿಗಳನು ಹೊಲಿದರಷ್ಟೇ
ಮೌನವಲ್ಲ;
ಮೌನ ಒಂದು ಧ್ಯಾನ
ಅರಿವು ಮೂಡೋವರೆಗೂ

ಮೌನ ಒಂದು
ಆಂತರಿಕ ಗಲಭೆ-ಗದ್ದಲ,,
ಸರಿ-ತಪ್ಪುಗಳ ಸಂಘರ್ಷ,
ಇಂದು-ನೆನ್ನೆಯ ತಾಳೆ ನೋಟ,

ಮೌನ,
ಎಂದಿಗೂ ಸಂಪೂರ್ಣ ದಕ್ಕದದು
ದಕ್ಕುವಾಗ ಗಲಿಬಿಲಿಗೊಂಡು; ಬೆದರಿ
ಅವಿವಾರ್ಯ ಮಾತುಗಳಲಿ ತೇಲಿಹೋಗುವೆವು

ಮೌನ,
ಮನವ ಹೆಚ್ಚು ಕಾಡಿದುದು
ನೆನಪುಗಳ ಹೊತ್ತ ನಿಟ್ಟುಸಿರು
ಅನಿರೀಕ್ಷಿತ ಹೊಡತಗಳು
ಮೂಡಿಸೋ ಎತ್ತರದ ಅಲೆಗಳು

ಮೊರೆತ-ಭೋರ್ಗರೆತ
ತನಗಷ್ಟೇ ಕೇಳೋ ಅಬ್ಬರಗಳು
ಮೌನದೊಂದಿಗೆ ಪ್ರೇಮವಾಗದ ಹೊರತು
ಮೌನ ತನ್ನೊಳಗೊಂದು ಒಗಟೇ,,

ಮೌನದೊಳು ಸಾಗರದ ಘನವಿದ್ದರಷ್ಟೇ
ಮುಂದಣ ಮಾತು ಕಳೆಗಟ್ಟುವುದು
ತರಗೆಲೆಯಾದ ಮೌನ; ಬಹುಶಃ
ಮಾತಿಗೆ, ಭಾವಕೆ ನೆಲೆ ಕಾಣಿಸಲಾಗದೇನೋ

ಮೌನಕೆ ಬಾಯಿಲ್ಲವಂತೆ
ಅದು ನಿಜವೇ ಆಗಿದ್ದರೆ
ಮೌನಕೆ ಅರ್ಥ-ತರ್ಕವಿಲ್ಲ
ಆತ್ಮಾವಲೋಕನ ಪ್ರಸ್ತಾಪವೇ ಇಲ್ಲ..

ಮೌನ ನನ್ನೊಳಗೊಂದು
ನಿರಂತರ ಚರ್ಚೆ
ನಾನು ನನ್ನೊಂದಿಗೆ
ಪ್ರತಿಫಲದುತ್ತರ ಅದು ನಿನ್ನೊಂದಿಗೆ(ನಿಮ್ಮೊಂದಿಗೆ) ,,

23/05/2014


ಪ್ರೀತಿಯೊಂದು ನಶೆಯೇ ಆದರೆ
ಬಿಡು ನಿನ್ನನು
ಉಷೆಯ ಮುಂಜಾವ
ಇಬ್ಬನಿಯ ತೃಷೆಗಳಲ್ಲಿಯೇ
ಹುಡುಕುವೆ

___________________

ಮನಸ್ಸನ್ನು ಹೆಚ್ಚು ಬಿಚ್ಚಿಟ್ಟೇ
ತನ್ನ ಅರಿತಿದ್ದೆ;
ಮನವೆನಿಸಿಕೊಳ್ಳುವ
ನನ್ನ ಸುತ್ತಲ ಒಲುಮೆಗಳನೂ!

23/05/2014
ಈ ಎದೆಯ ಉರುಳನು ತಪ್ಪಿಸೊ
ಹೊಸ ಗುಂಗು ಬೇಕಿದೆ
ಅವನ ಪ್ರೀತಿ ಎಂಬ ಉರುಳಿಗೆ
ಬಿಗಿದು ಬಿಗಿದು ಸಾಕಾಗಿದೆ
ಹೊಸ ಬೆಸುಗೆ ಬಿಗುವು
ಕರುಳ ಕುಡಿ ಒಲವು
ಬಯಸುವಂತಾಗಿದೆ,, 

ಚಿತ್ರ ಕೃಪೆ; ಅಂತರ್ಜಾಲ


23/05/2014

Wednesday 21 May 2014

ಜೀವನವು ಬಹು ಬಣ್ಣವೇನಲ್ಲ
ಕೇವಲ ಕಪ್ಪು-ಬಿಳುಪು
ಅಷ್ಟೇ,,
ಒಮ್ಮೊಮ್ಮೆ ಒಂದೊಂದು
ಹೊಳಪ ಪಡೆಯುವುದು
ಯಾವುದೂ ದಿಟವಲ್ಲ
ಯಾವುದೂ ಸ್ಥಿರವಲ್ಲ
ಆಯಾ ಕಾಲದ ಕಾಲಗಳು
ಆಯಾ ಬಣ್ಣದ ನಿಷ್ಟೆ,
ಬಿಳುಪಿಗೆ ನೆರಳಾಗಿ ಕಪ್ಪು
ಕಪ್ಪುನ ತೆರೆಯಾಗಿ ಬಿಳುಪು!
ಕಾಣುವ ಈ ನಾನು,
ನಾನೇ ಅಲ್ಲವೆನೋ
ಆ ನಾನು!

21/05/2014

_________________

ನಿನ್ನನ್ನು
ಕಳೆದುಕೊಳ್ಳುತ್ತಿರುವಂತೆ
ಭಾಸವಾಗುತ್ತಿರುವ
ಈ ಕ್ಷಣಗಳಲಿ,,
ಸಮಾಧಾನವೊಂದೆ
ನೀ ನನ್ನೊಂದಿಗೆ
ನಗುತ್ತಿರುವೆ
ನನ್ನೆದರು,,
ನನ್ನೊಳಗೂ,,,

__________________

ತಂಪಿಲ್ಲದ ಕಂಪು
ಕಣ್ಣು ಕುಕ್ಕೋ ರಂಗು
ಇದ್ದು ಉರುಳೋವರೆಗು
ಹೀಗೂ ಒಂದು ಹೂವು!!

20/05/2014

__________________

ಹೆಜ್ಜೆ ಜಾಡುಗಳ
ಹಿಡಿದು ಬಂದರೆ
ನನ್ನವರನ್ನೆಲ್ಲಾ
ನೀ ಸೆಳೆದುಕೊಂಡರೆ
ಈ ಹೆಜ್ಜೆ ಗುರುತುಗಳು,
ಮುಗ್ಧ ನನ್ನವರು
ನಿನ್ನವರಾಗಲೂಬಹುದು
ಆದರೆ ನಾನಲ್ಲ!!

19/05/2014

Monday 19 May 2014

ಕವನ

ತೆರೆದ ಪುಸ್ತಕ

ತೆರೆದ ಪುಸ್ತಕವಾಗುವ
ಬಯಕೆ;
ಹಾಗೆ ಪ್ರಯತ್ನಿಸಿದಾಗಲೆಲ್ಲಾ
ಚಿತ್ತಾದ ಮನದ ಹಾಳೆಯ
ಪಟ ಪಟ ಸದ್ದು;
ಈಗ ನಾ ಹೇಗೆ
ಸಮಾಧಾನಿಸಲೀ ಮನವ?

ಜಗವಿದ್ದಂತೆ ಮನವಿರದೆ ಹೋದಲ್ಲಿ
ನಾನೊಬ್ಬ ಅಲೆಮಾರಿ ಒಬ್ಬಂಟಿ,
ಗೊತ್ತು; ಮನಃಸಾಕ್ಷಿಯ ಮುಂದೆ
ಇನ್ನೂ ಗೆಳೆಯನು ಬೇಕೆ?
ಪ್ರಶ್ನೆಯಲೇ ಉತ್ತರವಿರಲು
ಮನವು ಕೇಳದು ಏನೂ,,

19/05/2014

ಕವನ

ತಾಪತ್ರಯ

ತಾಪತ್ರಯಗಳ ನಿವಾರಣೆಗೆ
'ತಾನು ಯಾರನ್ನೂ ಪ್ರೀತಿಸುತ್ತಿಲ್ಲ'
ಇಲ್ಲವೇ,
'ತಾನೊಬ್ಬನ ಪ್ರೀತಿಸುಳಿಯಲ್ಲಿದ್ದೇನೆ'
'ದೂರವಿರಿ ನೀವುಗಳು'
ಎನ್ನುವ ಉತ್ತರವೇ ಅನಿವಾರ್ಯವಾಗುವುದೇಕೆ??!,,,

ಅದೂ ಅಲ್ಲದೇ,
ತಾನು ಅವನ ಪ್ರೀತಿಯಲ್ಲಿದ್ದೇನೆ ಎಂದರೆ,
ಯಾರದು? ಎನ್ನುವ ಪ್ರಶ್ನೆ
ಅವನಿದ್ದು,
ಇವನೇ ಅವನು ಎನುವಾಗ,
ಅವನಿಗೆ ಪ್ರೀತಿಯಿದೆಯೋ, ಇಲ್ಲವೋ ಗೊಂದಲ,
ಹಾಗೇನಾದರೂ ಇದ್ದರೆ,
ಈ ಬದುಕು ಅನುಮತಿಸುವುದೇ?
ಅನುಮತಿಸಿದರೂ,
ಹಲವು ಸ್ತರಗಳ ಈ ಸಮಾಜ???

ಬೇಕಿತ್ತಾ ಇಷ್ಟೆಲ್ಲಾ ತಾಪತ್ರಯ?
ಅದಕ್ಕೆ, ನಾ ಯಾರನ್ನೂ ಪ್ರೀತಿಸುತ್ತಿಲ್ಲ,,

19/05/2014

Sunday 18 May 2014

ಇಟ್ಟ ಚುಕ್ಕಿಗಳೆಲ್ಲಾ
ರಂಗೋಲಿಯಾಗದು
ಈ ಮನದ ರಂಗದಲಿ
ಚುಕ್ಕಿ ಇಡದೆ ಹಬ್ಬಿದಂತೆ
ವಲ್ಲಿ(ಬಳ್ಳಿ);
ನಿನ್ನ ಕಣ್ಣ ಕನಸುಗಳ
ಬಣ್ಣ ತುಂಬಿಕೊಂಡು
ರಂಗು ರಂಗಾದ ರಂಗೋಲಿ!

__________________________

ಕಳೆದವು ಎಲ್ಲಾ ದುರಂತಗಳು
ಉಳಿದಿಲ್ಲ ಒಂದು ಮಾತ್ರ ನೋವು
ಎನುವಾಗ ಎಚ್ಚರಿಸಿದ್ದವು
ಹಣೆಯ ಮೇಲಿನ ಮೊಡವೆಯ ಕಲೆಗಳಂತೆ
ತಮ್ಮ ಮನದ ಕಣ್ಣುಗಳಲಿ ಉಳಿಯದ್ದು
ಎದುರುಗೊಂಡ ಎಲ್ಲರಿಗೂ ಎದ್ದು ಕಾಣುವಂತದ್ದು
ಅವರ ಕಣ್ಣ ಪ್ರತಿಬಿಂಬಕೆ ಬೆದರಿ
ಸೇರಿದಂತೆ ಮತ್ತದೇ ನೋವ ಕೂಪಕೆ,,,

18/05/2014

ಕವನ

ಮಳೆ

ಮಳೆ ಹನಿದಂತೆ
ಉಸಿರೆಳೆತ ಹೆಚ್ಚು
ಮನ ತುಂಬಿಕೊಂಡಂತೆ
ಮಸ್ತಕ ಹಗುರಾಗಿ
ಮೈನವಿರೇಳಿಸೊ
ಉಲ್ಲಾಸ,,

ಇನ್ನೇನೂ ಉಳಿದಿಲ್ಲ
ಸಂತೋಷದ ಪಾರಕೆ
ಎನುವಾಗ
ಮತ್ತೆಲ್ಲೋ
ಕರೆಯೊಂದು ಕೆರೆದಂತೆ
ಚಡಪಡಿಸಿ ಮನವು
ಅದರೆಡೆಗೆ ಮೊರೆವಂತೆ

ಏನು ಮಾಯೆಯೋ
ಈ ಮಳೆ,
ತೋಯ್ದಂತೆ ಇಳೆ,
ಬಿತ್ತಿದಂತೆ ಪ್ರೀತಿ ಹೂ ಬೆಳೆ
ಮನದ ತೋಟಕೆ
ಕಾಮನಬಿಲ್ಲ ಕಳೆ,,

18/05/2014

ಮಳೆ ಹನಿಯ
ಇನಿಯನೆದೆಯ
ತಂಪು ನಾನು,
ಪ್ರೀತಿ....

________________

ಈ ಮೌನವು ಕಾಡುವಂತೆ
ಮತ್ತಿನ್ಯಾವುದೂ ಕಾಡಲಿಲ್ಲ
ಯಾರದೂ ಅಲ್ಲ
ಎನ್ನ ಮೌನಕೆ ತಾನೇ ಬೆದರುವೆನು
ಅದು ಕಾರಣ ನಾ ವಾಚಾಳಿ,,,

17/05/2014

Thursday 15 May 2014

ಈ ಕವನ........


ಈ ಕವನ
ಕೆಲ ಮನಗಳ ಹತ್ತಿರಾಗಿಸಿವೆ
ಕೆಲ ಮನಗಳನ್ನು ಕಲಕಿವೆ
ಮತ್ತೂ ಕೆಲವನ್ನು ಕೆಣಕಿವೆ
ಹಂಗಿಸಿದಂತೆ ಅಹಂ ಮೆರೆದು
ದೂರ ದೂಡಿದೆ
ಈ ಕವನ..

ಈ ಕವನ..
ಬದುಕ ಪ್ರೀತಿಲಿ ಬೆಸೆದಿದೆ
ತಡೆದು ನೋಡೋ ತಾಳ್ಮೆಯ ಬಿತ್ತಿದೆ
ಅತ್ತು ನಗುವ ಭಾಷೆಯ ತಿಳಿಸಿದೆ
ಸೋತರೂ ಗೆದ್ದಂತೆ, ಗೆದ್ದರೂ ಸೋತಂತೆ
ಸ್ಥಿತಪ್ರಙ್ಞೆಯಲಿ ನಿಲ್ಲಿಸಿದೆ
ಈ ಕವನ..

ಈ ಕವನ
ಗತವ ನೆನಪಿಸಿದೆ,,
ಆದರೂ ಅದೆಲ್ಲವ ಅರಗಿಸಿದೆ,
ಮನಕೆ ಕಿವಿಯಾಗಿದೆ,
ಸಾಂತ್ವನದ ಕೈಯಾಗಿದೆ,
ಖಾಲಿತನಕೆ ವಾಯುವಾಗಿದೆ,
ದನಿಯಾದರೂ ಮೊಳಗುವಂತೆ,
ಎದೆಯೊಳ ವದನ; 
ಕವನ ಸದನವಾಗಿದೆ
ನಿರಂತರ ಕಲಾಪ,
ಈ ಕವನ..

ಈ ಕವನ
ಬದುಕ ಕಟ್ಟಲಿಲ್ಲವೆಂದಲ್ಲ
ಬದುಕೊಳು ಕವನ ಕಟ್ಟಲಿಲ್ಲವಷ್ಟೇ
ಈ ಕವನ,, 
ಸರಕುಗಳ ಬೇಡಿಕೆಯಿಟ್ಟಿದೆ,
ಬಡವಿ; ನಾನದ ಒದಗಿಸದಾದೆ,,
ಸೋಲದೀ ಕವನ,
ಸೋತೆ ನಾ ಕದನ,,
'ಪೂರ್ಣ ಶರಣಾಗತಿ ಈ ಜೀವನಕೆ', 
ವಿರೋಧದ ಮಾತಿಲ್ಲ', 
ಕೇಳಿ ನಗುವುದೀ ಕವನ
ಈ ಕವನ....
ನನ್ನೀ ಕವನ...........

16/05/2014

ಕವನ

ನಿರೀಕ್ಷೆ

ನಿರೀಕ್ಷೆಗಳ ಗೆಲ್ಲುವ
ಪ್ರತೀ ಕ್ಷಣಗಳಲ್ಲೂ
ಸೋತಿದ್ದೇನೆ;

ಎಂತಹ ಹಾಸ್ಯವೆಂದರೆ
ಅಷ್ಟೂ ಹೊತ್ತೂ
ನಕ್ಕುಬಿಟ್ಟಿದ್ದೇನೆ

ಗೊಂದಲಗೊಳಿಸಿ
ನಗು ಉಕ್ಕಿಸೊ
ಈ ನಿರೀಕ್ಷೆಗಳೂ
ಒಂದರ್ಥದಿ ಚೆಂದವೇ

15/05/2014


ಯಾರದೋ ವಿರಹ ಗೀತೆ
ಮತ್ತಿನ್ಯಾರಿಗೋ ವೇದನೆ
ಅತ್ತೊಬ್ಬರಿಗೆ ಕೀಟಲೆ
ಮಿಕ್ಕವರಿಗೆ ಶೋಷಣೆ..
ಅರ್ಥವಾಗದ ಮನಗಳ 
ಸಂವೇದನೆ 
ಈ ಕವಿತೆ,, 

________________

ಹೇಳಿ ಹೋಗು ಕಾರಣ..
ಹಳೆಯದಾಯ್ತು..
ಹೇಳದೇ ಹೋಗು,,
ಬೇಸರವಿಲ್ಲ,
ನೀನಿನ್ನೂ ನನ್ನೊಡನಿರುವೆನೆಂಬ 
ಭ್ರಮೆ
ಅಷ್ಟೇನು ಗಾಬರಿಗೊಳಿಸದು,
ಕಲ್ಲೆದೆ; ಕೆತ್ತಬಹುದು ನೀನೂನು
ಉಳಿ ಬಳಗ 
ಇನ್ನೂ ಅಷ್ಟು ದೂರದಿ ನಡೆದಾರೊ,,
ಒಬ್ಬೊಬ್ಬರದೂ ಒಂದೊಂದು ನುಣುಪು ಉಳಿ,
ಮಾಗಿಲ್ಲ ಹಸಿತನ..
ಕೊನೆಯಿಲ್ಲ ಘಾಟಿತನ..

________________

ತೇಲೋ ಮೋಡ,, 
ಹರಿಯೋ ನೀರು
ಬೀಸೋ ಗಾಳಿ 
ಮತ್ತೂ 
ಈ ಮೌನ,,
ಮರು ಘಳಿಗೆ
ಪುಟಿವ ಹರಳು
ಬಿರಿವ ಹೂ ಮನ
ನಿರಂತರ,,
ನಿರಂಕುಶ,,,

15/05/2014

ಕವನ

ಪೌರ್ಣಮಿ


ನಡು ರಾತ್ರಿ ಪ್ರಭೆಯ ಚೆಲ್ಲಿ
ಗಾಢ ನಿದ್ರೆಯಲ್ಲೂ
ಎಚ್ಚರಿಸಿದ್ದ ಚಂದಿರ

ಎದ್ದು ಕೂತು
ತಲೆ ಎತ್ತಿ ನೋಡಲು
ಕಿಟಕಿಯಿಂದಾಚೆ,

ಸೂರ್ಯನಂತೆ ಬೆಳಗುತ್ತಿದ್ದವ
ಮಂಪರಿನಲೂ
'ಏನೋ ವಿಶೇಷ'
ಈ ಚಂದಿರ,
ಎಸಿಸದೇ ಇರಲಿಲ್ಲ..

ಸೆರೆಹಿಡಿಯಲೇ
ಚಿತ್ರವನೆನಿಸಿದರೂ
ಬಿಡು ಕಣ್ತುಂಬಿಕೊಳ್ಳೋಣವೆಂಬ
ಅರಿವು..

ತುಂಬಿದ ಮನದಲಿ ಮಲಗಿದೆ,
ಎಂತಹ ನೆಮ್ಮದಿಯ ನಿದ್ದೆ...!
ಬೆಳಗಾಗೆದ್ದಾಗ ಪೌರ್ಣಮಿಯ ಸದ್ದು..

14/05/2014

ಕಣ್ಣು ತುಂಬಿದ
ಸೊಗಸೆಲ್ಲಾ
ಕಣ್ಣಲ್ಲೇ
ಕೊನೆಯಾದವು
ಮನಕ್ಕಿಳಿಯದೆ;
ನಿನ್ನಂತೆ
ಕನಸ
ಹುಟ್ಟು ಹಾಕದೆ..

14/05/2014

____________________

ಈ ಪದಗಳಲಷ್ಟೇ ಕಟ್ಟಿಕೊಡಬಲ್ಲೆ
ನನ್ನೆಲ್ಲಾ ತುಡಿತ ಮಿಡಿತಗಳ...
ನಿನ್ನೆದುರು ನಿಂತು ನಡೆಯಲಾರೆ
ಏನೋ ಬಿಗುವು ನನ್ನೊಳಗೂ
ಮಾಗದ ಒಲವಿರಬಹುದೇ?!!

__________________

ಗುರ್ತಿಸಿಕೊಳ್ಳಲು
ಬಹಳಷ್ಟು ಬಾರಿ
ಬುದ್ಧಿ ಜೀವಿಗಳು
'ಶೋಷಿತ ದನಿ'ಯ
ತಲೆಬರಹದಿ
ಬಳಸಿದ ಪದಗಳು
ಬಡತನ,
ತೀವ್ರ ನೋವುಗಳು,
ಮತ್ತು
ಹೆಣ್ಣು,,,

13/05/2014

Tuesday 13 May 2014

ನೀ ನಾಚುವ
ಆ ಘಳಿಗೆ
ನನ್ನೊಳಗೊಂದು
ಪುಳಕ ಹುಡುಗ,,

____________________

ಕಲ್ಪನೆಗೇ
ಕಳೆದು ಹೋದ
ವಾಸ್ತವದಿ ಹುಡುಕಾಟವಿದೆ
ಎಚ್ಚೆರಗೊಂಡು ಎದುರಾಗೆಯಾ ಗೆಳೆಯನೇ,,

___________________

ಒಡೆದು ಹೋದ ಕನಸುಗಳಲ್ಲಿ
ಹೊಳೆದವಷ್ಟೇ ಸೊಗಸು!

_________________

ನಾನೊಬ್ಬಳೇ
ಬದುಕಬೇಕೆಂದಿಲ್ಲ
ನನ್ನೊಡನೆಯೇ
ನನ್ನ ಸಹಿಸದವ
'ನೀನೂ
ಬದುಕು';
ಎನ್ನುವಂತಿದೆ
'ನೀರ'ಘನ ಮೋಡದಡಿಯ
'ಬೆಂಕಿ' ಮಿಂಚು!

ಒಮ್ಮೊಮ್ಮೆ
ಅವನು ಅವಳಾದರೆ
ಅವಳು ಅವನು,,

__________________

ಸಾವಿಗೂ ಮುನ್ನಿನ ಬದುಕಿಗೆ
ಬದುಕಾಗಿಬಿಡು
ಕಣ್ಣಲ್ಲೇ ಕಾಪಿಟ್ಟ ನಿನ್ನವಳ
ಹೂ ಕನಸುಗಳು
ಪಸರಿಸೋ
ಗಾಢ ಪರಿಮಳದಂತೆ
ಮಗುವಾಗಿ,
ವನವಾಗಿ,
ತಂಗಾಳಿಯಾಗಿ
ತೇಲಿಸೊಮ್ಮೆ
ಅವಳೆದೆ ಪ್ರೇಮಾನುರಾಗಗಳ
ಆಗಸದೆಡೆಗೆ
ಬದುಕೆಷ್ಟು ಸುಂದರವೆನಿಸಬಹುದು
ಅವಳ ಮಡಿಲ
ನಿನ್ನದೊಂದು ಕನಸು
ಮೂಡಿದಂತೆ
ನೆರೆತ ನಿನ್ನೆದೆ ಮಿಡಿದಂತೆ

________________

ನೋವ ಮುಳ್ಳಿಗೆ
ಸಾವಿರ ಹೂನಗೆಯ ಹೊದಿಕೆ
ದೂರದಿ ನೋಡಿ ಆನಂದಿಸಿ
ಹತ್ತಿರಾಗಿ ನೊಂದು ಜರಿಯದಿರಿ
ನನ್ನೊಡಲ ಮುಳ್ಳು ತಾಗಿ,
ಹೇಳಿರುವಳು ಗುಲಾಬಿ,,

13/05/2014
ನಿದಿರೆ ಬಾರದೆಂದು ನೆನೆದೆ ನಿನ್ನ,
ಎನ್ನ ಕಲ್ಪನೆಗಿಳಿದು ನೀನಿಟ್ಟ
ಮುತ್ತಿನ ಮತ್ತಿನ ಗಮ್ಮತ್ತಿಗೆ
ಕಣ್ಣೆವೆಗಳಿವು ಭಾರಗೊಂಡಿವೆ,
ನಿದ್ರಿಸಲಾರೆ;
ಮತ್ತೆರಡು ಮುತ್ತುಗಳ ಬೇಡಿಕೆಯಿದೆ,,

______________________

ಕೂರಗಿ ಕರಗಿ ಹೋದವಳಲ್ಲಿ
ಸಾವಿರ ಯಾತನೆಗಳ ಚೀತ್ಕಾರದ ಚಿತ್ತಾರ
ಬಿಡಿಸಲಷ್ಟೇ ಗೋಜಲು ಗೋಜಲು
ಬೆಸೆದುಕೊಂಡ ರಭಸಕೆ ಬೇಲಿಯೇ ಇಲ್ಲ,,

12/05/2014

Monday 12 May 2014



ಪ್ರೀತಿಯಲಿ ಪೂರ್ಣ 
ಶರಣಾಗದ ಹೊರತು
ಪ್ರೀತಿ ದಕ್ಕದು 
ಅರ್ಥವೂ ಆಗದು,,, 

_______________

ಓಡುವ ಮನಸ್ಸು 
ಓಡುತ್ತಲೇ ಇರುವುದು
ಸಿಕ್ಕಿದೊಂದು ನೆಮ್ಮದಿಯ ಬಿಟ್ಟು
ಮತ್ತೊಂದರ ಹಿಂದೆ..

_______________

ಅಂದಿಗೂ ಇಂದಿಗೂ
ಒಬ್ಬರೇ
ಎನುವಾಗ
ಯಾರಿಗಾಗಿ ಬದಲಾವಣೆ,
ನನ್ನಂತೆ ನಾನಷ್ಟೇ

____________

ಮುಗ್ಧರಾದಷ್ಟೂ
ಜಗ
ಸುಂದರ..

11/05/2014
ನಿನ್ನೀ ಪ್ರೀತಿ ಮಳೆಯಲಿ 
ನಾನು,
ನಿನ್ನೊಲವ ಹೂವನೇ ಆಸರೆಯಾಗಿ 
ಹಿಡಿದಿರುವೆ,
ನಿನ್ನ ಪ್ರೇಮಕೆ ನೀನೇ ಸಾಟಿ,,

ಚಿತ್ರ ಕೃಪೆ; ಅಂತರ್ಜಾಲ

10/05/2014



ಪಡೆಯಲೇಬೇಕೆಂಬ 'ಅಹಂ',
ದಕ್ಕಿಸಿಕೊಳ್ಳುವ ಮುನ್ನವೇ
ತೀರಿಹೋಗುವುದು;
ದಕ್ಕದು ಏನೂ
ಪಡೆದ ನೆನಪ ಬಿಟ್ಟರೆ,,

___________________

ಮನವು ಮುಗ್ಧವೇ ಆದರೂ
ತನ್ನ ಪ್ರೀತಿಗದು ಪ್ರಬಲವೇ

__________________

ಪ್ರೀತಿಯ ಹೆಸರಲಿ ಮನಸ ಕದಿಯಬಹುದು,
ಮನಸೇ ಮೋಸವಾಗಬಾರದು ಪ್ರೀತಿಗೆ

ಕನಸ ಹೊಸೆಯಬಹುದು ಭಾವಕೆ,
ಭಾವವೇ ಜೊಳ್ಳಾಗಬಾರದು ಕನಸಿಗೆ

ಆಸೆಗಳಿರಬೇಕು ಬಂಧಗಳಲಿ,
ಸಂಬಂಧಗಳೇ ಸ್ವಾರ್ಥಗಳ
ಮುಖವಾಡಗಳಾಗಬಾರದು ಜೀವನದಾಶಯಕೆ

10/05/2014

Friday 9 May 2014

ಮನದ ನಲಿವಿಗೆ 
ದಟ್ಟೈಷ್ವರ್ಯ ಬೇಕಿಲ್ಲ
ಮನಸು ಬೇಕು 
ಮುಗ್ಧ ಕನಸುಗಳು ಬೇಕಷ್ಟೇ,, 

ಚಿತ್ರ ಕೃಪೆ; ಅಂತರ್ಜಾಲ

09/05/2014

ತುಡಿತವೊಂದು ಸೆಳೆದ ರೀತಿ

ಈ ಹಳ್ಳಿಯ ನಟ್ಟ ನಡುವೆ
ಅಲ್ಲೊಬ್ಬ ಬಳೆಗಾರ
ಪಟ್ಟೆ ಪಟ್ಟೆಯ ಚಿನ್ನದ ಗೆರೆಗಳ
ಬಳೆಗಳ ಗೊಂಚಲು,

ನೋಡಿದರೆಘಳಿಗೆ
ನಿಂತೇಬಿಟ್ಟೆ,
ಬೇಕಿತ್ತೋ ಇಲ್ಲವೋ
ಯೋಚನೆಯೊಂದೂ ಇಲ್ಲದೆ,

ಪಕ್ಕದಲ್ಲಿದ್ದ ಅಕ್ಕ;
"ತೋಡಿಸಿಕೊಳ್ಳೇ
ಬಳೆಗಳ"
ಕೇಳಿದಳು,,

ಬೇಕು, ಬೇಡ
ಹೇಳೆನು ಏನೂ,,
ಸುಮ್ಮನಷ್ಟು
ಮುನ್ನಡಿಯಿಟ್ಟು
ನಡೆದುಬಿಟ್ಟೆ
"ಬೇಡಬಿಡು,,",
ತಡ ಉತ್ತರ,,

ಅಂತರಂಗದೊಳು
ಹಲವು ಪ್ರಶ್ನೆಗಳು,
ಕೆಲಸದೊತ್ತಡಗಳಲಿ
ತನ್ನನು ತಾನೇ
ಪೆಡುಸಾಗಿಸಿ,
ಗೊಡ್ಡು ಹಾದಿಗಳಲಿ
ಗಂಡಾಗಿಸಿ,
ಮೆರೆದ ಪಾತ್ರಗಳಲಿ
ಮೆರೆತಿದ್ದೆ

ನನ್ನವೇ ಕೆಲ
ಕನಸುಗಳನು,
ಹೆಣ್ಣಾಗಿ ಮೆರೆವ
ಸೊಗಸುಗಳನು,,

ಈ ಹಳ್ಳಿಯ,
ಹಸುರು ತಂಗಾಳಿಗೆಷ್ಟು
ಶಕ್ತಿ?!
ಆವರಿಸಿ
ತಡವರಿಸುವಂತಾಗಿದೆ,,

ಮತ್ತೆ ನನ್ನ ನಾನು
ಕಂಡುಕೊಳ್ಳುವಂತೆ
ಅಲಂಕಾರ,
ವೈಯ್ಯಾರ,
ಶೃಂಗಾರಗಳಲಿ

ಮನಸು
ಕನಸು
ಹೆಣೆವಂತೆ
ಹೊಸ ಕಾಮನೆಗಳಲಿ
ಅಪ್ಪಟ ಹೆಣ್ಣಂತೆ,,

08/05/2014
ನುಡಿದ(ಬರೆದ) ಮಾತ ಅಳಿಸಲಾರೆ
ಸಾಧಿಸೊ ಹಟವೆಂದಲ್ಲ,
ಸಾಧಕ ಬಾದಕಗಳ ಎದುರಿಸಿ
ನಿಭಾಯಿಸೋ ದಿಟ್ಟತನವೆಂದು

__________________

ಒಮ್ಮೊಮ್ಮೆ ಖಾಲಿ ಕೊಡವೂ
ಇಷ್ಟವಾಗುತ್ತದೆ
ಅದರ ಪ್ರಶಾಂತತೆಗೆ
ಸುಯ್ಯನೆ ಸುಳಿವ ಗಾಳಿ
ಅದರೊಳು ಹೊಮ್ಮಿಸೋ
ರುಯ್ಯೆನ್ನೊ ಲಯದ ನಿನಾದಕೆ,,

_______________

ದಿನವೂ ಪ್ರೀತಿಯಲಿ
ತಲೆ ನೇವರಿಸುವ ಕೈ
ಹಟಾತ್ ಸುಮ್ಮನಿರಲು
ಚಡಪಡಿಕೆಯಿದೆ;
ಹುಡುಕಾಟವೂ,
ಪ್ರೀತಿಯಿದೆ
ಮೋಹವೆನ್ನಲಾರೆ,,

______________________

ನಿದಿರೆ ಬಾರದ ರಾತ್ರಿಗಳಲಿ
ಇಲ್ಲಸಲ್ಲದ ನೆಪಗಳು, ದೂಷಣೆಗಳು
ಕಾಣದ ನಲ್ಲನ ಹೆಸರಿನಲಿ,,
_______________

ನನ್ನೀ ಗೆಲುವಿಗೆ
ನೀನು ಬೇಕಿತ್ತಷ್ಟೇ
ನೀನು ಅನ್ನುವುದಕೆ
ನಾನು ಹೆಸರಿಟ್ಟೆನಷ್ಟೇ

_________________

ಪ್ರಿಯರ ಏಕಾಂತವನ್ನೂ
ಪ್ರಶ್ನಿಸುವ ಹಕ್ಕಿಲ್ಲ
ಪ್ರೀತಿ ಸ್ನೇಹದ ನೆಪದಲ್ಲಿ
ಈ ಹುಡುಗಿಯರು...

09/05/2014
________________

ದಿನವೂ ಹುಟ್ಟಬೇಕು
ಸಾವಿನ ಪರಿವಿಲ್ಲದೆ

08/05/2014

ಕವನ

ಉತ್ತರಿಸು ದನಿ ನೀ 

ಯೌವ್ವನದ ಬೆಂಕಿಗೆ
ನಿನ್ನೊಲವ ತಂಗಾಳಿ

ಭುಗಿಲೇಳದಿದ್ದರೆ
ಎನ್ನತನಕೆ ಅವಮಾನ,,

ಒಲಿದು ಹೊಮ್ಮಲೊ;
ಸರಪಲಿಗಳೆಂಬ
ಅಕಾರಣಗಳು,

ಹೆಣ್ಣಿನಂತಹ
ಬೊಂಬೆಯಾಗಲೋ

ಜನುಮವ ಭರಿಸೋ
ಪ್ರೇಮಸುಧೆಯಾಗಲೋ

ಅಸಹಾಯಕತೆ ತೂಗುಯ್ಯಾಲೆಯ
ಒಂಟಿ ಪ್ರೇಮಿಗೆ
ಕಿವಿಯಿದ್ದು ದನಿಯಿಲ್ಲ,,

07/05/2014
ಹತ್ತಿರವಿದ್ದಾಗ ಗೊಂದಲ
ದೂರ ಸರಿಯಲು ವ್ಯಾಕುಲ
ಪ್ರೀತಿ, ನೀನೊಂದು ಹೂಮನ
ನನ್ನೊಳ ಬಚ್ಚಿಡಲಾಗದ ಚೇತನ,,

________________

ಗುರಿಯ ಗರಿಮೆಗಿಂತ
ಕಣ್ಮುಚ್ಚಿ ಸಾಗೋ
ಶ್ರಮದ ಹಿರಿಮೆ ಮಿಗಿಲು,,

07/05/2014

ಕವನ

ಮೂಗಿಯ ಮೌನ

ಮೂಗಿಯ ಮೌನ,
ಹೇಳಲೆಷ್ಟು ಚೆನ್ನ
ಅರಗಿಸಿಕೊಳ್ಳಲಾರದ
ಆಂತರ್ಯ,,
ಭೂಗರ್ಭದ
ಸಿಡಿದ ಜ್ವಾಲೆ
ಉಕ್ಕದು,,
ತಟಸ್ಥವಾಗದು
ನಿಗಿನಿಗಿ ಉರಿವ ಕೆಂಡ
ಆಗಾಗ ತಣ್ಣನೆಯ ಬೂದಿ,,

ಮೇಲೆಷ್ಟೋ
ಹಸುರ ಹುಸಿಯಾಗಿ
ಹೊದ್ದರೂ
ಗಾಳಿಯಾಡದೇ ಭಗ್ಗನೇ
ಹೊತ್ತಿ ಉರಿವ ಒಡಲು
ತಲೆಯ
ಹಳೆಯ
ಪಳೆಯುಳಿಕೆಗಳ
ಕೆರಳುವಿಕೆ,,

ನಾಟಕವೆಂದರೂ ಜೀವನವೆಂದರೂ
ನಟಿಸಬೇಕು ಜೀವಿಸಬೇಕು,,
ದೌರ್ಬಲ್ಯಗಳನೇ ಎಳೆದಾಡಿ
ಉಸಿರಡಗಿಸೋ ಸಮಾಜಕೆ
ಪ್ರತಿಯಾಗಿ ನಿಲ್ಲಲಾಗದ
ಮೂಗಿಯ ಮೌನ
ಒಡೆಯುವುದೆಂದೋ,,

07/05/2014

ಸುಲಭಕೆ ದೊರೆತ ಅರ್ಥವ
ಸುಲಭಕೆ ಕೈಸೆರೆಯಾದ ಬಂಧವ
ಸೆರೆಯಾಗಿಸಿ ನೋಡುವ ಆಸೆಯೇ ಹೆಚ್ಚು
ಉಬ್ಬಿಸಿ ಹುರಿದುಂಬಿಸಿ ಹಾರಿಸಿ ನಲಿವ ಮನಸು
ತುಸು ಹಿಡಿದಿಟ್ಟಂತೆ ಮೆರೆವ ಸ್ವಾರ್ಥವೇ ಸರಿ,,

______________________

ಪ್ರತೀ ಬಣ್ಣದ ಚಿತ್ತಾರದ ಹಿಂದೆ
ಬಹಳಷ್ಟು ಕಪ್ಪು ಬಿಳುಪಿನ ರೇಖಾಬಲೆ
ಹೆಣೆದುಕೊಂಡ ಹಂತಗಳ
ಪ್ರಾಮಾಣಿಕತೆಯಷ್ಟೇ
ಚಿತ್ರದ ಹೊಳಪು ಹಾಗೂ ಗೆಲುವು,,

07/05/2014
____________________


ಏನೇ ಬವಣೆ ಬೇಸರಗಳಿದ್ದರೂ
ತಡೆದು ಬಡಿದೋಡಿಸೋ
ನನ್ನ ಸಂಗಾತಿ, ಈ ತಂಗಾಳಿ,
ಎನ್ನೆದೆಗೆ ಉಸಿರಾಗೋ ಸಂಗೀತ,,

06/05/2014

ಕವನ

ಅದು ನೀನೇನಾ?

ಹೊಂಗೆ ನೆರಳ ತಿಂಪಿನಲಿ
ನಿದ್ದೆಯ ಜೊಂಪಿನಲಿ
ಕನಸಿನಂತೆ ಕಂಡೆ ನೀನು
ಮರೆತ ಭಾವ ತೀಡಿದಂತೆ
ಇದ್ದೂ ಕಾಣದ ಪರಿಮಳದಂತೆ
ಅದು ನೀನೇನಾ, ಅದು ನೀನೇನಾ?

ಚಂದಿರನ ರೂಪವಂತೆ
ಅವನ ಹೊಳಪು ನಿನ್ನೊಳಗಂತೆ
ಕಳೆದ ಕಾಲದ ಸೋನೆಯಂತೆ
ಸುಳಿದ ಈ ಹೊಸ ರಾಗದಂತೆ
ಬಂದೆ ಈ ಎದೆಗೆ ಮಿಂಚಂತೆ
ಅದು ನೀನೇನಾ? ಅದು ನೀನೇನಾ?,,,

05/05/2014



ಪ್ರೀತಿ;
ಎರಡು ಜೋಡಿ 
ಕಣ್ಗಳ
ಒಂದು ಸುಂದರ
ಕನಸು...

________________

ನಿದಿರೆಯ ಅಭಾವಕೆ 
ಸಾಲವ ಪಡೆದ,
ಈಗವನಿಗೆ 
ಭಾರಿ ನಿದ್ದೆ,
ಅಸಲು ಬಡ್ಡಿಯಿಲ್ಲದೆ 
ನಷ್ಟದಲಿ ರಾತ್ರಿಗಳು,, 

_______________________

ಹೆಣ್ಣಿಗೆ ಪ್ರೇಮವಷ್ಟೇ ದೌರ್ಬಲ್ಯ
ಮೀರಿದರೆ ಸೋಲೆ ಇಲ್ಲ,,

________________

ಎಲ್ಲರೂ ಮಿಂಚುವ 
ಮೋಡದ ಬಾಲವ 
ಹಿಡಿದಿದ್ದಾರೆ,
ಕತ್ತಲೆಯ ಭ್ರಮೆ ಇಳಿದು, 
ವಾಸ್ತವ ದರ್ಶನ
ಸಿಡಿಲು ಬಡಿದು 
ಕರಕಲಾದಾಗಲೇ,,

04/05/2014
___________________

ನಗುವಿಗಿರುವ ಅಭಿಮಾನವನ್ನು
ನೋಯಿಸಿ ಅಳಿಸಲಾರೆ, 
ಕಲೆ ನೀನು ನಗುವಾಗಿರಲು
ಕವಿತೆ ಎಂದೂ ಅಳಲಾರದು,,

03/05/2014

ಕವನ



ತನ್ನ ಅನಿವಾರ್ಯತೆಗಳಿಗೆ
ಅವಳಿಟ್ಟುಕೊಂಡ ಹೆಸರು
ಸೋಮಾರಿತನ
ಹುಳಿ ದ್ರಾಕ್ಷಿಯ ನರಿಯ ಕತೆಯಂತೆ

ಅಸಹಾಯಕತೆಯನೂ ಬಿಟ್ಟುಕೊಡದ
ಸ್ವಾಭಿಮಾನಿ,
ಅಹಂ ಎಂದೇ ಕರೆದುಕೊಳ್ಳುವಳು
ನನಗೆಂದೂ ಅರ್ಥವಾಗದವಳು,,

ಎಂದಾದರೂ ಅರ್ಥವಾಗಿಬಿಟ್ಟರೆ
ನನ್ನೆದುರೇ ನಿಲ್ಲದವಳು,
ನಾನೂ ಪ್ರಯತ್ನಿಸೆನು
ಗೊತ್ತೆನಗೆ ನಾನಗಾಗಿಯೇ ಹೀಗವಳು,,

03/05/2014

Saturday 3 May 2014

ಕಮಲ ನಯನಕೆ
ಕಣ್ಣೀರ ಕೆಸರು!

______________________

ಮೆಚ್ಚಿಸಲು ನಾನ್ಯಾರೋ
ಮೆಚ್ಚಿಕೊಳ್ಳಲು ನೀನ್ಯಾರೋ
ಅಚ್ಚು ಮೆಚ್ಚು ದಿಟವಷ್ಟೇ ಸೇತುವೆ
ನನ್ನ ನೀನು, ನಿನ್ನ ನಾನು
ಹಚ್ಚಿಕೊಂಡಿರಲು ಗುರುವೇ,,,

________________________

ಆರಾಧನೆ ಒಂದು ಭಾವ
ಅವರವರ ಭಾವಕೆ
ಲಿಂಗವೂ ಅಹುದು, ಮುನೇಶ್ವರನೂ ಅಹುದು,
ಕಾಳಪ್ಪ, ಭೈರಪ್ಪನೂ ಅಹುದು
ಕಲೆಗೆ ನಟರಾಜನೂ ಅಹುದು,
ಸತ್ಯವಿರಬೇಕಷ್ಟೇ ಆತ್ಮದೊಳು
ಸುಂದರ ಶಿವನು
ಮನದಲಿ ನೆಲೆಗೊಳ್ಳಲು,,, 

02/05/2014

ಕವನ

ಕನಸು


ಕನಸ ಕಟ್ಟೆ ಒಡೆದರೆ,
ಹರಿಯುವುದು ಕನಸು
ಹರಿಯುವುದು ಕನಸು

ಹರಿದು ನನಸಾಗುವುದು 
ಬಯಲ ಹರವಿನೊಳು
ಹಚ್ಚ ಹಸುರಾಗಿ,
ಅವರೆದೆಯ ಉಸಿರಾಗಿ
ಮತ್ತೊಂದು ಕನಸೇ ಆಗಿ,,

ಅಕ್ಷಯವಾಗಲೀ ಕನಸು
ಚಿನ್ನದಂತೆ ಚಿನ್ನವಾಗಿ,, 
ಹೊಳೆಯ ಹೊಳಪಂತೆ
ಜೀವಜಲಕೇ ಸರಿಸಾಟಿಯಾಗಿ

ಬಿದ್ದ ಬದುಕೂ ಎದ್ದು ಓಡುವ
ಕನವರಿಕೆಗಳು ಕೆನೆವಂತೆ
ಸ್ಫೂರ್ತಿಯಾಗೊ ಕನಸು
ಬೇಕೀ ಜೀವಕೆ, ತುಡಿವ ಭಾವಕೆ

ಅಪಹಾಸ್ಯಗಳ ಬೆಂಕಿಯ ದಾಟೋ 
ಹೊಸ ಹುಮ್ಮಸ್ಸಿಗಾಗಿ,
ಈ ಮನಸಿಗಾಗಿ, ದೂಡಿದ ನೆಮ್ಮದಿಗಾಗಿ
ಕನಸೀಗ ನನಗಾಗಿ ನನ್ನ ಜೊತೆಗಾಗಿ,,

02/05/2014

Thursday 1 May 2014



ಈ ಮನಕೆ,,
ಪ್ರೇಮವಾದರೂ,
ಭಗ್ನವಾದರೂ,
ನಿರಂತರ ಜಿನುಗೊ
ಭಾವ ಹರವು
ಒಮ್ಮೆ ಬೇಸಿಗೆಯ
ಬೇಗೆಯ ಪ್ರೀತಿ
ಮತ್ತೊಮ್ಮೆ ಚಳಿಗಾಲದ
ಕೊರೆವ ವಿರಕ್ತಿ
ಸದಾ ಉಸುರೊ
ಏರಿಳಿತಗಳ ಸಾಲು ಕವನ
ಒಂದು ಗೆಲುವೇ;
ಸೋಲುಗಳಿಲ್ಲದ್ದು,,,

______________________

ತಂಗಾಳಿಗೆ ಸೋಲದ ಮನ
ಇನಿದನಿಗೆ ಅರಳದ ಭಾವ
ಇದ್ದರೂ ಇದ್ದೀತೇ ಈ ಧರೆಯೊಳು
ಜೊತೆಗಷ್ಟು ರೋಮಾಂಚನ
ನಿನ್ನೊಡ ಕಲ್ಪನೆಗಳೇನೇನೋ ಈ ಕ್ಷಣ,,,

01/05/2014


'ಬೇಸರ', ಎಂದೆನಿಸಿದಾಗಲೆಲ್ಲಾ ಹುಡುಕಿದ್ದೆ 
ನನ್ನಲೇ ಕೆಲ ಮೆಚ್ಚುಗೆಗಳನು, 
ಮತ್ತೊಮ್ಮೆ ಮೆಚ್ಚಿ ಖುಷಿಪಟ್ಟೆ, 
ಬೇಸರಕೀಗ ಹೊರ ನೆಡೆಯೋ ಅವಸರ,, 

______________________

ನನ್ನೀ ಪರಧಿಯೊಳು 
ಬಂದ ನೀನು
ಈಗ ಹೊರಟರೂ 
ನಾನಿಲ್ಲೇ ನಿಂತ ಬಿಂದು
ಈ ಬಾಳ ವೃತ್ತದ 
ಪರಧಿಯೊಳು ಸುತ್ತೋ 
ಏಕಾಂಗಿ 
ಆದರೂ ಕ್ರೇಝಿ,, !! 

_________________________

ಅತ್ತು ಅತ್ತು ಸಾಕಾದ ಮೇಲೆ
ಹೂಗಳು ಅರಳಿದ್ದವು,
ಅವು ಕಣ್ಗಳೆಂದು ಗೊತ್ತಾದದ್ದು
ಹೊಳಪ ತಂದ ನಿನ್ನ ನಗುವಿಗೆ ಬೆರಗಾಗಿ ಹೀಗೆ

___________________

ನಿದ್ದೆಯಲಿ 
ನಾ ತಡಕಿದಷ್ಟೂ
ನಿನಗೋ 
ಮತ್ತೂ ಗಾಢ ನಿದ್ದೆ
ಈ ವಿರಹ 
ಬಿಸಿಯುಸಿರೂ 
ತಾಗದಂತೆ,,

30/04/2014

_____________________

ಆದ ಮನಸ್ತಾಪಗಳನ್ನೆಲ್ಲಾ
ಗೊತ್ತಿಲ್ಲದೆ ಮರೆತು 
ಮತ್ತೆ ಬೆರೆತು 
ಸಹಜ ನಲಿವಿನಲಿ 
ಬಾಳುವ ರೀತಿಗೆ 
ಬಹುಶಃ 
ಬದುಕು 
ಎನ್ನಬಹುದೇನೋ,,,

____________________

ಭ್ರಮೆಗಳಲೀ,,,

ಬಯಸಿದ ಭಾವ 
ಆ ಕ್ಷಣಕದು ಅಭಾವ
ಇನ್ನೆಂದೋ ಮತ್ತೆಲ್ಲೋ 
ದನಿ ಕೇಳಲು
ಮೀರಿದ 
ವೈರಾಗ್ಯವೇಕೋ 

ಪ್ರೀತಿಸಲಾರೆ, 
ಭಾವಗಳಿಗೆ ಬೆರಗಾಗಿ
ಮತ್ತೊಮ್ಮೆ 
ಜೀವ ಕೆಡುವಲಾರೆ,,
ಭ್ರಮೆಗಳಲಿ,,,

_____________________________

ಯಾರ ದಾರಿಗೂ ಅಡ್ಡಿಯಾಗಿರಲಿಲ್ಲ
ಅವರವರ ದಾರಿಗಳ ಅವರೇ ಮರೆತಂತೆ ನಿಂತರೆ
ನನ್ನದೇನಿದೆ ತಪ್ಪು
ನಾನೋ ನಡೆವ ಹಾದಿಯ ಅವಸರದ ದಾಪುಗಾಲು...

29/04/2014

___________________________

ನಿನ್ನ ಕಣ್ಣ ಕನಸುಗಳ
ಕದ್ದುಬಿಡುವುದೇನೂ 
ಕಷ್ಟವಲ್ಲ ನನಗೆ,
ಸಿಕ್ಕಿಬಿದ್ದು ಹಿಂದಿರುಗಿಸುವಾಗಿನ 
ಒನಪು ನೆನದಷ್ಟೇ 
ಭಯ ಮಿಶ್ರಿತ ರೋಮಾಂಚನ
ಬಯಸಿ ಬಯಸದ ಶಿಕ್ಷೆ!

___________________________

ಕುಹುಕ ಅವಮಾನಗಳೆಲ್ಲಾ ಹಳತೇ ಆದರೂ
ಮತ್ತೆ ಮತ್ತೆ ಸಿದ್ಧಗೊಳ್ಳಬೇಕಿದೆ
ಹೊಸ ಹೊಸ ದಾರಿಗಳ ತಿರುವುಗಳಲಿ,,,

___________________________

ಕಮಲ ದಳದ ಮೇಲೊಂದು ಮುತ್ತು
ಕನಸೊಳು ನೀನಿರುವ ಹೊತ್ತು

ಹೊಯ್ದಾಡೋ ಕಾಮನೆಗಳು
ಸಂಜೆಗೆ ಮುದುಡೋ ಹೂವೊಳ ಗುಂಗು

ಮತ್ತೊಂದ ಹಗಲ ಯಾಚನೆಯಲಿ
ಅರಳೊ ಹೂವಿನ ಕನಸಿನಲಿ ನಿಶೆಗಿಲ್ಲಿ ಶರಣು,,

________________________

ಈ ನನ್ನ ಕಲ್ಪನೆಯ ಸಾಲುಗಳಲ್ಲೇ 
ನೀ ಬಲು ಚೆಂದ..
ನನ್ನನೆಂದೂ ದೂರ ತಳ್ಳುವ ಮಾತಿಲ್ಲ
ಇದ್ದರೂ ನಾನಾಗಲೇ ತಿದ್ದಿಬಿಟ್ಟಿರುವೆ.. 

__________________

ಬೇಡಿ ಬದುಕೊ ಭಿಕ್ಷುಕನಿಗೂ
ದನಿ ಏರಿ ಬೇಡೋ ಹಕ್ಕಿದೆ
ಆದರೆ ಪ್ರೀತಿ ಬೇಡಲು
ಉಗುಳು ನುಂಗಲು ಶಬ್ದದ ಭಯ..
ಪ್ರೀತಿ ತಲೆತಿರುಕರ ಹುಚ್ಚು ಸಾಹಸ... !!!

27/04/2014

__________________

ಕಣ್ಣೀರ ಬಸಿದ ಕೈಗಳು
ಹೆಣ್ಣುಗಳ ಯಾತನೆಯ ಚಿತ್ತಾರವ
ಚೆಂದವಾಗೇ ಬಿಡಿಸಿತ್ತು 
ಚಿತ್ರಪಟದ ಬೆಲೆ ಹೆಚ್ಚಿಸಿ

26/04/2014

____________________

ಖಾಲಿತನಕೆ 
ಹೆಚ್ಚು ಮಾತಂತೆ
ಆದರೂ 
ನಾ ಮೌನಿ,,
ಸುಳಿಯದ 
ನಿನ್ನ ಸ್ವರಕ್ಕೆ
ಗಾಳಿಯೊಳ
ಕಿವಿಯಾದ
ನಿತ್ಯ ಧ್ಯಾನಿ,,
ಖಾಲಿ ಪ್ರೇಮಿ!

25/04/2014

________________________

ಮೊರೆವ ಹರಿವು,,

ಧೋ ಎಂದು ಧುಮುಕಿ
ಕಿವಿಗಡಚಿ ರಭಸದಿ ಭೋರ್ಗರೆವ
ಈ ನದಿಯು,
ಅವಸವಸರವಾಗಿ ಹುಡುಕಾಡಿದ್ದು
ತನ್ನ ಮೊರೆತವ ತಡೆದು ನಿಲ್ಲಿಸೋ
ದಿಟ್ಟ ಗಂಡೆದೆಯ ತಟಕ್ಕಾಗಿ
ಸಂದರ್ಭವಿದಷ್ಟೇ ದೌರ್ಬಲ್ಯ 
ಅವಳದು,
ಆ ಕ್ಷಣಗಳು ಮೀರಿದಂತೆ
ನುಗ್ಗಿ ಹೊರ ಕಣಿವೆಗಳಲಿ ಹೊಮ್ಮಿ
ದೂರ ದೂರಿಗೆ ಸಾಗುವಾಗ ತುಳುಕಳು
ಶಾಂತಳು,
ಗಾಂಭೀರ್ಯವದು ಇವಳ ಹರಿವು,,

__________________

ಕಾಡುವಂತಿಲ್ಲ ಕನಸುಗಳು 
ಎಲ್ಲಾ ಅರೆಬರೆ ವಿಚಿತ್ರಗಳು
ಕೂಡಿಸಿ ನೋಡಲಾರೆ
ಗೊತ್ತದು ನಿನ್ನದೆ ಚಿತ್ರ!!

_________________

ನೀರೆಂದರೆ ಶಕ್ತಿ
ನೀರೆ ಎಂದರೂ ಶಕ್ತಿ 
ವಿದ್ಯುಚ್ಚಕ್ತಿ!! 

23/04/2014

ಕವನ

ನಿರೀಕ್ಷೆ

ಈ ನಿರೀಕ್ಷೆಗಳು 
ತೊಳಲಾಡಿಸಿ
ಹರಿಸೋ ವಿಷಾದಗಳಗೆ
ತತ್ತರಿಸಿರುವೆ ನಾ

ಬಿಟ್ಟೆನೆಂದುಕೊಂಡರೂ 
ಬಿಡದೀ ಮಾಯೆ
ಛಾಯೆಯಾಗಿ 
ಬೆನ್ನ ಹಿಂದೆ

ಕೈಹಿಡಿದ ನಿರೀಕ್ಷೆ ಎಲ್ಲೋ,,
ಬಂದ ಸುಳಿವಿಲ್ಲದೆ 
ಹೊರಟುಬಿಟ್ಟ
ಅಚ್ಚಾದ ಹೆಸರು

ಬೆಚ್ಚಿಹೆನು ನಾ 
ನಿರೀಕ್ಷೆಗಳಿಗೆ
ನಿರೀಕ್ಷೆ ಒಡೆದ 
ವೇದನೆಗಳಿಗೆ,,

23/04/2014
ಗೋಪುರವ ಕಟ್ಟಲೇಬೇಕೆಂದಿಲ್ಲ
ಒಬ್ಬರ ಆಶಾಗೋಪುರವ
ಉರುಳಿಸದಿರೋಣ,,
ಭ್ರಮೆಗಾದರೂ ಸಂಭ್ರಮಿಸಲಿ ಜೀವ
ನಮ್ಮದೇನಿದೆ ಅದರೊಳ ನಷ್ಟ

__________________________

ಬರೆಯದ ಪದಗಳಲ್ಲಿ ಎಷ್ಟೋ ನಿರಾಶೆಗಳು
ನುಂಗಿಕೊಂಡು ನಲಿವ ಉರಿಸಿದ್ದೇ ನೋಡು
ಬಯಲು ಬಾನು ಎಂದೆನ್ನದೇ
ಎಲ್ಲೆಲ್ಲೂ ನಿನ್ನದೇ ಶಾಂತ ಮುಖದ 
ಉರಿದೆದೆಯ ಬಣ್ಣ ಬಣ್ಣದ ಚಿತ್ತಾರ, 
ಅದು ನಿನ್ನದಲ್ಲ,
ನಿನ್ನ ದಹಿಸಿದ ಆ ಬೆಂಕಿಯ ಬಯಕೆಯ ಫಲ!
ನಕ್ಕರೂ ಸ್ಫೂರ್ತಿಯಾಗಬೇಕು 
ಅವರೆದೆಗಳಲಿ ಪ್ರತಿಫಲಿಸುವಂತೆ
ಅಳುವ ಮುನ್ನ ಯೋಚಿಸುವಂತೆ..... !!

22/04/2014