ತೂರಿ ಹೋಗಿ, ಜಾರಿ ಬಾಗಿ,
ಮೇಲೇರುವ ಜೀವ
ಗಾಳಿಪಟದಷ್ಟೆ ಹಗುರ!
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
ಭಾವಗಳ ಮೂಟೆ….
ಭಾವಗಳ ಮೂಟೆ
ಕಾಪಿಟ್ಟು ಕಟ್ಟಿಟ್ಟು
ಹಬೆಯಾಗಿದೆ ಹೃದಯ!
ಹಾಡಿ ನಲಿದ ಒಲವು
ಎಂದೊ ಬೂದಿಯಾಗಿ
ನಿಂತು ಬೇರೂರುವ ಛಲಕೆ
ಮನಸ್ಸು ಕಲ್ಲು!
ಕಟ್ಟಿಟ್ಟ ಕನಸು
ಗಂಟಿಕ್ಕಿದ ಗೀತೆ
ಹನಿದು ಹನಿದು
ತೊರೆಯಂತೆ!
ಹರಿದು ಹಗುರಾಗುವ
ತಾಣವಿಲ್ಲ; ಬರಿದೆ ಬೊಗಳೆ
ನುರಿದು ಹಸನಾಗುವ
ನೂಲು ಅಲ್ಲವೇ ಅಲ್ಲ; ಕಗ್ಗಂಟು!
ಮತ್ತೊಮ್ಮೆ ಹೀಗೆಯೆ
ಪ್ರಾರಂಭಿಸಲಿ ಹೊಸತು
ಹಳೆಯ ನಂಬಿಕೆಯ ಹೊಸಲಲಿ
ಕಾಮನಬಿಲ್ಲ ರಂಗು ರಂಗೊಲಿ!
–ದಿವ್ಯ ಆಂಜನಪ್ಪ
ಬಿಳಿಯ ಹಾಳೆಯ ಮೇಲೆ
ಕಪ್ಪು ಗೆರೆಯೊಂದು
ಮೂಡಬಾರದಿತ್ತು
ಎಳೆದಿದ್ದೇ ಆದಲ್ಲಿ
ಮುಂದುವರೆಸಿ ಚಿತ್ರವೊಂದ
ಬಿಡಿಸಲೇ ಬೇಕು..
ಪೂರ್ಣಗೊಂಡ ಚಿತ್ರಕ್ಕೆ
ಕಲಸಿದ ಬಣ್ಣ
ಬೀಳಬಾರದಿತ್ತು
ಎರಚಿದ್ದೇ ಆದಲ್ಲಿ
ತನ್ನ ಮಡಿಕೆಗೆ ಅಚ್ಚು ಹಾಕಿ
ಹೊಸ ಕಲೆಯ ಉಸಿರಾಡಲೇ ಬೇಕು..
ಬಿಡಿ ಹಾಳೆಗಳು
ಚದುರಬಾರದಿತ್ತು ಗಾಳಿಗೆ
ಹರಡಿ ಹಂಚಿದ್ದೇ ಆದಲ್ಲಿ
ಬಿಡಿ ಭಿತ್ತಿಚಿತ್ರಗಳಲ್ಲಿ
'ಚಿತ್ರವೊಂದು ಮೂಡಿದ ಕತೆ'
ರಾರಾಜಿಸುತ್ತಿರಬೇಕು..
12/08/2018