Monday 21 April 2014

ಅವಳು ಖಂಡಿಸುವ ರೀತಿಗೆ
ಪಿತ್ತ ನೆತ್ತಿಗೇರಿ 
ಪ್ರೀತಿಗೊಂದು ಹೆಸರಿಟ್ಟ
ಸಿಟ್ಟು-ಸೆಡವು..... 


***

ಜಾರೋ ಸಂಜೆಗಳಲ್ಲಿ
ಸೋಲುಗಳ ನೆನಪು..
ಪ್ರೀತಿ ಜಾರಿತೋ ಎದೆಗೆ
ಮನವು ಸೋತಿತೋ ಪ್ರೀತಿಗೆ..


21/04/2014

ಕವನ


"ಕನಸೇ"

ಹೊರಟು ಹೋದ ಭಾವಕೆ
ಹಿಂದಿರುಗುವ ಅವಸರವಿಲ್ಲ,,
ಹುಡುಕುವ ಜತನವೂ ಇಲ್ಲ
ಅಲೆದಾಡೋ ಅಲೆಮಾರಿ

ತುಳುಕೋ ಸೊಗಸು
ಮತ್ತೊಮ್ಮೆ ಜೀವ ಹಿಂಡೋ ಜಿಗುಪ್ಸೇ
ಎಲ್ಲಿ ನಿಲ್ಲುವುದೋ ಕೊನೆಗೆ
ತಲೆ ತಗ್ಗಿಸಿ ಹೀಗೊಂದು ಚಿಂತೆ

ಬೇಡದರ ಹಿಂದೆ ಬೇಕಿದ್ದರ ಕಣ್ಣಾಮುಚ್ಚಾಲೆ
ಪ್ರೀತಿ ಮೋಹಗಳ ಬಣ್ಣ ಅದಲು ಬದಲು
ಕುರುಡೋ ಎನಗೇ ಇಲ್ಲ ಭ್ರಮೆಯೋ
ಸೋತಿರುವೆ ನನ್ನೇ ನಾ ಸೋಲಿಸುತ

ಅಡಗಿಕೊಳ್ಳೋ ಪ್ರೀತಿ ನೀ
ನಿಜ ನೀನಿದ್ದರೆ ಈ ವಿಶ್ವದೊಳು
ಕರಗಿಸಿ ಎನ್ನೊಲವ ಎನಗೇ ನೀಡುವೆ
ನೋಡಿಕೊಳ್ಳಲೊಮ್ಮೆ ನಿನ್ನ ಎನ್ನ ಕೈಗನ್ನಡಿಯಲಿ

ಈ ಕನ್ನಡಿಯೋ ಎಷ್ಟು ಭ್ರಮೆ ಮೂಡಿಸಿತ್ತು
ಬಿದ್ದಂತೆ ಬೆಳಕು, ಕಣ್ ಕೊರೈಸೋ ತೇಜ
ನಿನ್ನನೊಮ್ಮೆ ಅದರೊಳ ಕಂಡರೂ
ನೀನೇ ಎಂದು ಒಪ್ಪಲಾರೆ,,
ನಿನಗೆ ನಾ ಸರಿನಾಟಿಯೇ ಅಲ್ಲ ಕನಸೇ,,,, !!!!

20/04/2014




ಈ ಬಿರುಬಿಸಿಲಿನ ಬೇಗೆಗೆ;
ಮಧುರ ಪನ್ನೀರ 
ಸಿಂಚನ, 
ನಿನ್ನ ಚುಂಬನ!


***


ಹನಿಯದ ಕಣ್ಣೀರು,
ಮಿಡಿಯದ ಹೃದಯ,
ಬತ್ತಿಹೋದಂತೆ ಜೀವ,
ಕ್ಷಣ ಕಾಲ
ಹೊಟ್ಟೆಯೊಳ ಬಾವು,
ನೀ 
ಗೆಳೆಯನಾಗದ ಈ ದಿನ,,,!


***


ಇಲ್ಲಿ ನಾನು ನೀನು ಎನ್ನುವುದೆಲ್ಲವೂ ಸುಳ್ಳು
ನನ್ನೊಳಗೊಂದು ನಿನ್ನೊಳಗೊಂದು ಬೆತ್ತಲಾದ ಮೋಹವಷ್ಟೇ ನಿಜ!


20/04/2014

***


ಮುಳುಗೋ ಚಂದಿರನ 
ಹಿಡಿದು ತೇಲಿಸೋ 
ಈ ಹೊಸತು ಕನವರಿಕೆಗಳು
ಮನಸು ಕನಸುಗಳ 
ಹೊತ್ತು ತಿರುಗೋ
ಸುಪ್ತ ಕಾಮನೆಗಳು 
ಮುಚ್ಚಿಡಲಾರದ 
ನೀಲಿ ಕಪ್ಪು ಬಾನಿನಂತೆ ವಿಶಾಲವೂ 
ಅಮಿತ ಉತ್ಸಾಹಿಯೂ,,,


***


ಸುರಿಯೋ ಮಳೆಯಲ್ಲೂ ಇಟ್ಟ ಕಣ್ಣೀರು, 
ನಿಟ್ಟುಸಿರ ನೆನಪಿದೆ
ಕಳೆದೆ ನಾ ಎಷ್ಟೋ ವಸಂತಗಳನ್ನು 
ಬಿಸಿ ಬೇಗೆಯ ಹೃದಯದಲೇ

ಎಂಥಹ ಮೂಢತೆ ಆವರಿಸಿತ್ತೋ 
ನನ್ನ ನಾ ಕಳೆದುಕೊಂಡಂತೆ
ನಗುವನೊಮ್ಮೆ ನೆನೆವ ಪರಿತಪಿಸೋ 
ಅವಕಾಶಗಳು ಸೊರಗಿದಂತೆ

ಉಸಿರೂದಿ ಬಡಿದೆಚ್ಚರಿಸಬೇಕು 
ಇನ್ನಾದರೂ ಆ ಹಳೆಯ ನಿರ್ಜೀವ ಕನಸ
ಮಾವು ಬೇವು ಸಿಗುರೋ ಈ ವಸಂತಕೆ 
ಮುಂದಿನ ಅನಂತ ವಸಂತಕೂ,, 



19/04/2014

***



ಸದ್ದಿಲ್ಲದೆ ಜೊತೆ ನಡೆದಿರುವೆ

ಬದುಕೋ?,, ಭ್ರಮೆಯೋ?,,
ಎಲ್ಲಿಯವರೆಗೆಂದು 

ಕೇಳುವ ಧೈರ್ಯ ನನಗಿಲ್ಲ,,,,


18/04/2014



***



ನೀನೊಂದು ಸೆಳೆತವೇ ಆಗಿದ್ದರೇ

ನಮ್ಮಿಬ್ಬರ ಮೂಗುಗಳು
ಮುಕ್ಕಾಗಿರುತ್ತಿದ್ದವು,,,


***



ಸುಳ್ಳು ಹೇಳಬಯಸದವಳೆಂದೇ

ಬಹಳಷ್ಟು ಮಾತುಗಳನ್ನಾಡದೆ
ಮುಚ್ಚಿಟ್ಟದ್ದು ಒಂದು ಕಪಟವೇ,,

ಕ್ಷಮೆಯಿರಲಿ ಆ ಮಾತುಗಳ ಮೌನಕೆ

***



ಹೃದಯಕೆ ಪ್ರೀತಿ ಬೀಳೋ ಹೊತ್ತಲಿ

ಜೀವನ ವ್ಯವಹಾರಗಳ ತಲೆಗಿರಕಿ,,,


***



ಗೆಲ್ಲಬೇಕಿತ್ತು ನಿರೀಕ್ಷೆಗಳನು

ಅದಕೂ ಮುನ್ನ ಎನ್ನ ಕಾಡೋ

ದೌರ್ಬಲ್ಯಗಳನು... 


16/04/2014

ಕವನ

ಕನಸು ಕನವರಿಕೆ

ನಿದಿರಾದೇವಿ ಕಣ್ಣೆವೆಗಳ ಚುಂಬಿಸುವ 
ಮುನ್ನ
ನೀನೊಮ್ಮೆ ಮುತ್ತಿಟ್ಟು 
ತಲೆ ನೇವರಿಸಬಾರದಿತ್ತೇ

ಹೋಗಲಿ ಕನಸಿಗಾದರೂ ಬಂದುಬಿಡು
ನಿನ್ನ ಮಡಿಲಲೊಮ್ಮೆ ಮಲಗಿ
ನೆತ್ತಿ ಮೇಲಣ ಶೂನ್ಯವೆನುವ 
ವಿಶಾಲ ಕಪ್ಪೊಳು ಮತ್ತೆ ಮತ್ತೆ
ಚುಕ್ಕಿ ಚಂದ್ರಮರನ್ನೆಣಿಸುವಾಸೆ,,

ಬಯಲದಾರಿ ಹರಿವ ಪೂರ ಗರಿಕೆಹುಲ್ಲ 
ಹೆಕ್ಕುವಾಸೆ
ಹೊಳೆಯ ಝರಿಯ ಹನಿಯಲೊಮ್ಮೆ 
ಶೀತವೇರುವಂತೆ ಮೀಯುವಾಸೆ,

ಬಂದುಬಿಡು ಗೆಳೆಯನೇ, 
ಅತಿಯಾದ ನನ್ನ ತುಂಟತನಕೆ 
ನಿನ್ನ ಕನಸೇ ಸದಾ ಸ್ಫೂರ್ತಿಯಂತೆ
ತಡ ಮಾಡದಿರು ಇನ್ನೂ 
ನಿದಿರೆ ಮಾಯೆ ಚೆಲ್ಲುತಾ ಬರುತಿಹಳಿಲ್ಲಿ
ಮೆಲ್ಲ ಬರುತಿಹಳಿಲ್ಲಿ,,,

16/04/2014
ಉತ್ತರಿಸಬೇಕಿಲ್ಲ 
ಯಾರಿಗೂ
ಆದರೆ ತಪ್ಪದೆ
ಆತ್ಮಸಾಕ್ಷಿಗೆ,

ಪ್ರೀತಿ ಇದೆ 
ಪ್ರೀತಿಸುವೆ
ತನ್ನ ಮಗುವಂತೆ 
ಪ್ರೀತಿಸುವ
ಅವನನು,

ದಾರಿ ಬಿಡಿ,,
ಆ ಮೌನಿಯ 
ಹುಡುಕಾಟದಲ್ಲಿರುವೆ
ಕಾಡದಿರಿ ಕಾಲೆಳೆದು,,
ಬಿದ್ದರೂ ಅವನೇ
ಹಿಡಿದಾನು ಬಂದು,,,,

***

ಪ್ರೀತಿಸೋ ಮನವಿದೆ ಪ್ರೀತಿಸಲಾರೆ,,
ಕಟ್ಟುಪಾಡೆನ್ನಲೇ? ಬಂಧನವೆನ್ನಲೇ?
ಮೀರಿ ಪ್ರೀತಿಸಿದರೆ ನೀನೂ ಸರಿದುಬಿಡುವೆ
ನನ್ನ ತೀವ್ರ ಪ್ರೀತಿಗೆ ಬೆಚ್ಚಿದಂತೆ
ನನ್ನನೇ ಸ್ವಾರ್ಥಿಯೆನುತ,
ಅರಿಯಲಾಗದ ಹೆಸರಿಡಲಾಗದ ನೆವಗಳು
ನನ್ನನಿನ್ನೂ ಹೀಗೆ ಅಲೆಸಿವೆ 
ಹುಡುಕಿ ನಿನ್ನೆದುರುಕೊಳ್ಳಲಾಗದಂತೆ
ಭಾವಕ್ಕೇ ಭಾವ ತುಂಬಿಸುತ 
ಪದಕಷ್ಟು ಪದ ಜೋಡಿಸುತ ನಿರಂತರ,,, 

***

ಓಟಕ್ಕೊಂದು ವೇಗವಿರಲಿ
ದಿಕ್ಕು ಬದಲಾದರೂ
ದಾರಿಗುಂಟ ಪ್ರೀತಿ ಇರಲಿ
ಮತ್ತೊಬ್ಬನೂ
ಅನುಯಾಯಿಯಾಗುವಂತೆ
ಸವೆದ ಮುಳ್ಳುಗಳೂ
ಫಳಫಳನೆಂದು ಹೊಳೆದಂತೆ,,
ಆ ಹಾದಿಯೂ ಮತ್ತೆ ಮತ್ತೆ 
ಪ್ರೀತಿಯೊಳೆನ್ನ ನೆನೆವಂತೆ,,,,

ಜೀವನವೇ ಪ್ರೀತಿ, ,,

15/04/2014

***

ನೋಡ್ತಾ ನೋಡ್ತಾ ರಾಗ
ಅನುರಾಗ
ಹಾಡ್ತಾ ಹಾಡ್ತಾ ಮೋಹ
ಶುಭಯೋಗ,,

14/04/2014

Thursday 17 April 2014

ಮನದ ಮಾತು

ಸದಾ ಕಾಲ ಪದ ಕಟ್ಟೊ ಹುಚ್ಚೊಂದು ನನಗೆ ಈಗೀಗ ಹೆಚ್ಚೇ. ಇಂದು ಮತದಾನ ಕಾರ್ಯವೆಲ್ಲಾ ಮುಗಿದು ಇನ್ನೇನು ಎಲ್ಲಾ ಹೊಂದಿಸಿಕೊಂಡು ಹೊರಡಬೇಕು ಎನ್ನುವ ಹೊತ್ತಿನಲ್ಲಿ ಎಲ್ಲರಲ್ಲೂ ಏನೋ ಒಂದು ರೀತಿಯ ನಿರಾಳ ಸ್ಥಿತಿ, ಹಾಗಾಗಿ ತುಸು ಹಾಸ್ಯದ ಪರಿಸರ. ಅಕ್ಕಪಕ್ಕದ ಬೂತಿನ ನಮ್ಮಂತಹ ಮತದಾನ ಕೆಲಸಗಾರರನ್ನು ಪರಿಚಯಿಸಿಕೊಂಡು ಕೆಲಸದ ನಡುವೆಯೂ ಚೂರು ಮಾತುಕತೆ ಸೊಗಸಾಗಿಯೇ ನಡೆದಿರುತ್ತದೆ. ಹೀಗಿರಲು, ನೆನ್ನೆಯಿಂದಲೂ ಬಹು ಗಂಭೀರನಾಗಿದ್ದ ನಮ್ಮ ಬೂತಿನ ಪೋಲೀಸಿನವ ಚೂರು ಹೆಚ್ಚೇ ನಕ್ಕು ನಲಿದಿದ್ದ ನಮ್ಮೊಡನೆ. ನನಗೋ ಆಶ್ಚರ್ಯ ಎಷ್ಟು ಸೈಲೆಂಟ್ ಆಗಿದ್ದವ ಇಷ್ಟು ಚೆಂದ ಮಾತಾಡ್ತಾನೆ ನಗಿಸ್ತಾನೆ ಅಂತ,, 
ಹೊರಡೋ ಮುನ್ನ ಅವನ ನಗು ಕಾಡಿದ್ದು ನಿಜವೇ, ಒಮ್ಮೆ ಹೇಳಿಬಿಡಬೇಕಿತ್ತು ಅವನಿಗೆ,, " ನೀವು ನಕ್ಕಿದ್ರೆ ತುಂಬಾ ಚೆನ್ನಾಗಿ ಕಾಣ್ತಿರ ಕಪ್ಪು ಸುಂದರ" ಅಂತ,, ಪದಕಟ್ಟೋ ಹುಮ್ಮಸ್ಸು ಬೇರೆ,, ಹಾಗೆಲ್ಲಾ ಮಾಡ್ಬಾರ್ದು ಅಂತ ಅಂದ್ಕೊಂಡು ಸುಮ್ನಾದೆ,, ಆದ್ರೂ ಹೇಳ್ಬೇಕಿತ್ತು,,,  
ಮತ್ತೆ ಸಿಕ್ಕಾಗ್ ಹೇಳ್ಬಿಡೋದು ಹೇಗಿದ್ರೂ ಒಂದೇ ತಾಲ್ಲೂಕು,, ಸಿಗಬಹುದು,,!! 
ಅಂದ ಹಾಗೆ ಪ್ರತಿಬಾರಿಗಿಂತ ಈ ಬಾರಿಯ ಚುನಾವಣಾ ಕಾರ್ಯ ಹೆಚ್ಚು ಖುಷಿ ಕೊಟ್ಟಿತು, ಕಾರಣ ಮೊದಲನೇಯದಾಗಿ, ಮಹಿಳೆಯರಿಗೆ ರಾತ್ರಿ ಮನೆಗೆ ತೆರಳೋ ಅವಕಾಶ, ಮತ್ತು ಆ ಅವಕಾಶದ ಆಸೆಗೆ ಬಿದ್ದು ನಾನೂ ಮನೆಗೆ ಬಂದುಬಿಟ್ಟಿದ್ದೆ ಕೇವಲ ಬಿ,ಎಮ್,ಟಿ,ಸಿ ಯ ಬಸ್ಸನು ನಂಬಿ,, 
ಸ್ವಂತ ವಾಹನವಿಲ್ಲದೇ ಸರಿರಾತ್ರಿಯಂತ ಮುಂಜಾವಿನಲಿ ಮನೆಯ ಹೊರಗೆ ಕಾಲಿಡುವುದು, ದೂರಕ್ಕೆಲ್ಲೋ ಪ್ರಯಾಣವು ನನಗೆ ಊಹಿಸಲೂ ಅಸಾಧ್ಯವಾಗಿತ್ತು. ಆದರೂ ಬಂದುಬಿಟ್ಟಿದ್ದೆ, ಮುಂಜಾವು ಹೋಗಲೇಬೇಕಿತ್ತು. ಒಂದು ವ್ಯವಸ್ಥೆ ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ ಇರುತ್ತದೆ. ಆದರೆ ಅದರ ಅನುಷ್ಟಾನದಲ್ಲಿನ ಲೋಪದೋಷಗಳು ವ್ಯವಸ್ಥೆಗೆ ಕೆಟ್ಟ ಹೆಸರನ್ನು ತಂದುಬಿಟ್ಟಿರುತ್ತದೆ. ಇಂದು ಮುಂಜಾವು ಕತ್ತಲೆ ದಾರಿಯಲಿ ಬಸ್ಸಿಗಾಗಿ ನಿಂತಿದ್ದಾಗ ನನಗನಿಸಿದ್ದು. ಭಯವೆನಿಸಿದರೂ ಬಹಳ ಕಾಂಫಿಡೆಂಟ್ ಆಗಿ ಹೊರಟ ನಾನು ನನ್ನೊಳಗೊಬ್ಬ ಜೊತೆಗಾರನನ್ನು ಕಂಡುಕೊಂಡಿದ್ದೆ. ಸದಾ ಹೊರಡೋ ಮುನ್ನ, "ಹುಷಾರು" ಅಂತ ಹೇಳುತ್ತಿದ್ದ ನಮ್ಮ ಅಪ್ಪ ಇಂದು ಹೇಳಿದ್ದೂ ಎರಡೇ ಮಾತೇ, "ಏನೇ ಆದ್ರೂ ಭಯಪಡ್ಬಾರ್ದು, ಹೋಗ್ ಬಾ",, ಸಿಕ್ಕಾಪಟ್ಟೇ ಹುಷಿಯಾಗಿತ್ತು ಅಪ್ಪನ ಹೊಸತನದಲ್ಲಿ.
ಇನ್ನು ಎರಡನೇಯದಾಗಿ, ಹೇಗಾದ್ರೂ ಸರಿ ಹೋಗಿ ತಲುಪೋಷ್ಟು ಮನೆಗೆ ಹತ್ತಿರವಾಗೋ ಪ್ರದೇಶಕ್ಕೆ ನೇಮಿಸಿದ್ದು.
ಇನ್ಮುಂದೆ ಚುನಾವಣಾ ಕಾರ್ಯ ಅಂದ್ರೆ ಬೆಚ್ಚಿ ಹೆದುರೋ ಕಾಲ ಇಲ್ಲ ಅಂತ ಅಂದ್ಕೊಳ್ತಿನಿ,, ಹಲವಾರು ಕುಂದುಕೊರತೆಗಳಿರಬಹುದು ಆದರೂ ಒಂದೇ ಒಂದು ಮನೆಯನ್ನೇ ತೂಗಿಸುವಾಗ ವಾಲುವುದುಂಟು, ಇನ್ನು ಸಾಗರದಂತ ಜನರನ್ನು ಕೂಡಿಕೊಂಡು ಒಂದು ಕಾರ್ಯ ನಡೆಸುವಾಗ? ಏರುಪೇರು ಘಟಿಸದಿದ್ದರೆ ಹೇಗೆ? ಅಲ್ಲಿರುವವರು ನಾವೇ,,, !!?
ದೂಷಿಸುವ ಮುನ್ನ ಯೋಚಿಸೋಣ, ಅರ್ಥ ಕೊಡುವಲ್ಲಿ ನಾನೇಲ್ಲಿ ಎಡವಿದೆಯೆಂದು,,, 

17/04/2014

Sunday 13 April 2014

ಕವನ

"ಅವಳು"

ಒಗಟೆಂದರೆ ಅವಳೇ, 
ಏಟು ಬಿದ್ದಾಗ ನಕ್ಕು
ನಲಿವಿದ್ದಾಗ ದಿಗ್ಭ್ರಮೆಯಾದಂತೆ 
ಗುಮ್ಮನೆ ಒಳಗೊಳಗೇ ಬಿಕ್ಕು,,

ಅವಳೆಂದರೆ ಉರಿವ ಒಡಲು
ಮೇಲಣ ತಣ್ಣನೆ ಮಡಿಲು
ಬಣ್ಣಿಸಲಸಾಧ್ಯ ಅವಳೊಲವು
ಹೆಸರಿಗೆ ಅವಳು ಅವಳಷ್ಟೇ ಮೊದಲು

ಬೆಚ್ಚಿದ ಸಾವಿರ ಕಣ್ಗಳ ಒಡತಿ
ಮಿಡಿವ ಹೃದಯಕೆ ಹೊಳೆವ ಭಾವದೀಪ್ತಿ
ಸೋತರೂ ಗೆಲ್ಲುತ, ಗೆದ್ದರೂ ತ್ಯಜಿಸುತ
ನಿರಂತರ ಭಾವ ಅನುರಾಗಿ ,,,,,,,,

ಏನ ಹುಡುಕುವಳೋ ಅವಳು
ಚಂಚಲವೋ? ವೈರಾಗ್ಯವೋ?
ಕಲ್ಪಿತ ಒಲವೊಳು ಚಿಮ್ಮಿಸೋ ಕವಿತೆಗಳು
ಮನವೋ, ಅದು ಸುಂಟರಗಾಳಿಯೋ
ಸುತ್ತಿ ಸುತ್ತಿ ನಿಂತಲ್ಲೇ ನಿಂತವಳು
ಛಿದ್ರವಾದ ಭಾವಗಳಲಿ ಮತ್ತೂ ಜೋಡಣೆಯಲಿ
ನಿರತ ಚಿರ ವಿರಹಿ; ಆ ಅವಳು,,,,

13/04/2014
''ಮಳೆ''

ಮಳೆ ಎಂದರೆ
ಖಾಲಿ ಹೃದಯವ ಒಮ್ಮೆಲೆ
ತುಂಬಿಬಿಡುವ
ಭಾವ ರಸ ಸಾಗರ,
ಹೊರಹೊಮ್ಮಲೂ

ಅಷ್ಟೇ ಅವಸರದ ಸಡಗರ,,,! 

***


ಬರೆದೆ ನಾ 
ನಿನ್ನ ಅರೆ ಬಿರಿದ 
ತುಟಿಗಳ
ಮೇಲೊಂದು 
ಕವನ;
ಮುನಿದು ನಿಂತಾಳೋ
ಗುಲಾಬಿ 
ಕೆಂಪಗೆ ಮಾಡಿ ವದನ,,,


13/04/2014

***

ತಾಯಿ 
ಎಂಬುದು 
ಭಾವವೋ?
ಪಾತ್ರವೋ?

ಅನುಭಾವಿಸಿ
ವಹಿಸೋ
ನಿಸ್ವಾರ್ಥ
ಭಾವ ತೃಪ್ತಿ
ಅಷ್ಟೇ ಎನಲೇ?

ಕಂದನಿಲ್ಲದೆ
ತಾಯ ಪಟ್ಟವಿಲ್ಲ
ಭಾವಕ್ಕೊಂದು
ಕೂಸು ಹುಟ್ಟಲು
ಮಾನಸ ಪುತ್ರನೆನಲೇ?

***

ಅಡವಿಟ್ಟುಕೊಂಡ ಭಾವಗಳಿಗೆ
ನಿಜ ಬೆಲೆ ದಕ್ಕಿಸದ ಈ ಮನುಕುಲ
ಪ್ರಕೃತಿಯೇ ಎದೆಯೊಳು ನೆಲೆ ಕಂಡು
ಸರಿ ದೂಗಿಸಿದೆ ತಾಯಿ, ಪ್ರೇಮಿ, ಬದುಕೂ ಆಗಿ,, 

12/04/2014

ಮಲಗುವ ಮುನ್ನ ನವಿರು ಕನಸಿನ ಆಲಾಪನೆ
ಬಿದ್ದ ಕನಸೊಳು ಇಲ್ಲದ ಹುಡುಕೋ ತೀವ್ರ ಕಾಮನೆ
ಬೆಳಗೆದ್ದು ಕನಸುಗಳ ಮರು ಜೋಡಣೆ
ಮರೆವನು ಮರೆತಂತೆ ಬಿಡದ ಮನದ ಅನ್ವೇಷಣೆ
ಕೂಡಿಟ್ಟ ಅಷ್ಟಿಷ್ಟು ನೆಮ್ಮದಿಯ ಕಳೆಯೋ ಯೋಜನೆ,,,,,!


***


ಮನಸೊಂದನ 
ಅರಳಿಸಲಾಗದವಗೆ 
ಮುದುಡಿಸುವ 
ಹಕ್ಕೇನಿದೆ?!


***


ಪ್ರೀತಿಸುವುದು ಸರಿಯೇ ಹೌದು ಹುಡುಗ,
ಆದರೆ ಅವಳು ಸಿಗದೇ ನೀ ಪ್ರೀತಿಸಲಾರೆಯಾ?
ನಿನ್ನ ದ್ವೇಷದ ತಿರುವಿಗೆ ಅವಳ ಅಸಹಾಯಕ ಮನವು ಕಾರಣವೇ?
ಯೋಚಿಸು ದೇಷಿಸುವ ಮುನ್ನ,, ಪ್ರೀತಿಯ ಅರ್ಥ ಕಳೆವ ಮುನ್ನ,,


***


ಬೇಕು ಎನ್ನುವಾಗ ಸಂಕುಚಿತವಾಗುವ ಮನಸು
ಏನನ್ನೂ ಹಂಬಲಿಸದೇ ಗಳಿಸಿದ್ದು ನಿರಾಳ,
ಸದಾ ಸಂತಸದಿ ಅರಳೋ ಹೂ ಮನ!



***


ಸೌಂದರ್ಯಕ್ಕೊಂದು
ಹೊಸ ಉಪಮಾನ
ನಿನ್ಹೆಸರು ಬೆರೆತಂತೆ
ಎನ್ನೆದೆ ಉಸಿರು ಶೃಂಗಾರ,,



***



'ಪ್ರೀತಿಸಲು ಕಾರಣ ಬೇಕಿಲ್ಲ, ಕಾಮಬೇಕಿತ್ತು'

ಎಂದು ತಿದ್ದುತಿದ್ದಳು ಕಣ್ಣೀರ ಸುರಿಸಿ
ತನ್ನ ಕಿರುಬೆರಳೊಳು ಅಂಗೈ ಪುಸ್ತಕ ಕವಿತೆಯಲಿ
ವರ್ಷಕೂ ಮುನ್ನ ವಿಚ್ಛೇದನಕ್ಕೆಳೆದ

ಗಂಡನನ್ನೊಮ್ಮೆ ನೋಡಿ ನ್ಯಾಯಾಲಯದಲಿ


11/04/2014



***



ತಿರುವುಗಳಿಗೆ ಹೊಂದಿಕೊಳ್ಳದ 

ಹೊರತು 
ಬದುಕು ಕೊಡವಿಬಿಡುವುದು 
ಜೀನನ್ನು;
ಅಂಟಿಕೊಂಡಂತಹ ನಮ್ಮನೂ
ಗಾಳಿಗೋ,, ಪಾತಾಳಕೋ,, 
ತೂರಿ ಸೇರಿಸಿಬಿಡುವ 
ಈ ಓಡುವ ಕುದುರೆಗೆ 
ಲಗಾಮಿದ್ದರೂ ನಿಲ್ಲಿಸುವಂತಿಲ್ಲ, 
ಓಡುವ ವೇಗಕೆ
ಒಗ್ಗದೆ ಕೆಳಬಿದ್ದರೂ 
ಮುಂದೆಳೆಯುವುದೂ ಇಲ್ಲ
ಇದು ಜೀವನದ ಹರಿವು
ಹರಿದಂತೆ ಉಸಿರು
ಕೊರಗಿದರೆ ನಿಟ್ಟುಸಿರು
ನಿಂತರೆ ಕೊನೆಯುಸಿರು
ಜೀವನವಿದು ಜೀವಂತ
ಜೀವವಿದ್ದರೆ ವೇಗದೊಳು

ಉತ್ಸಾಹವಿದ್ದರೆ ತಿರುವುಗಳೊಳು

***

ಮನದ ಮೂಲೆಯಲ್ಲೊಂದು ಆಶಾ ಕಿರಣ
ಅದು ನಿನ್ನ ಕಣ್ಗಳ ಕಾಂತಿ ಚಂದನ
ತೇಯಲೋ ಬೆಳಗಲೋ
ಹೆಚ್ಚಿದಂತೆ ಕಂಪು ಹೊಂಬೆಳಕು,,

10/04/2014
ಈ ಮಳೆ, ಮಿಂಚು, ಗುಡುಗು 
ಎಲ್ಲವೂ ಸಹಜ
ಪ್ರಕೃತಿಯ ಕ್ರಿಯೆ-ಪ್ರತಿಕ್ರಿಯೆಯೇ 
ಆದರೂ 
ಈ ಕಾರ್ಮೋಡವ 
ಸೀಳಿದ ಕೋಲ್ಮಿಂಚು
ಅವಳೊಳಗೆ ಕೆನೆವ 
ಸದಾ ನಿಟ್ಟುಸಿರ 
ಒಡೆದ ಮನಃ ಪಟಲ;
ಸಿಡಿದ ಒಂದು ನೆನಪು,,,

ಚಿತ್ರ ಕೃಪೆ; ಕುಮಾರ ರೈತ



10/04/2014




ಪ್ರಙ್ಞೆ ತಪ್ಪಿ ನಿದ್ರಿಸಿದವಳಿಗೆ
ನೀರೆರಚಿ ಎಚ್ಚರಿಸಿದಂತೀ ಮಳೆ
ಕಣ್ಣುಜ್ಜಿ ನೋಡಲೀ ಶಾಂತ ಜಗವ
ನೆನಪು ರಾಚಿದಂತೆ ಕಣ್ಮನ ಹುಡುಕಿದ್ದು ನಿನ್ನನ್ನೇ
ವಾಸ್ತವದಲ್ಲಿಲ್ಲದ ನಿನ್ನನ್ನೇ.....

10/04/2014

***

ಈಗಾಗಲೇ ವ್ಯರ್ಥವಾಗಿ
ಕಳೆದ ಹೊತ್ತುಗಳನ್ನು
ಪೋಣಿಸಿಕೊಳ್ಳುವಾಸೆ
ನಿನ್ನ ಮುತ್ತುಗಳಲಿ
ಎಂದು ಇದಿರುಗೊಳ್ಳುವೆ
ಓ ನನ್ನ ಚಂದಿರನೇ,
ಯಾರಿಲ್ಲ ಈ ಧರೆಯಲಿ
ನಿನ್ನಂತೆ ಎನ್ನ ಸೆಳೆದವ
ಅಂದಿಗೂ ಇಂದಿಗೂ
ನಡುವೆ ನಿರಂತರ,,,

***

(ಕಳೆದ ಭಾವದಳೊಮ್ಮೆ ಕರಗಿ)

ನನ್ನಿಂದ ನಿನಗೆ
ನಿನ್ನಿಂದ ನನಗೆ 
ಬೇಡವೀ ಅನುಕಂಪ,

ಹಾಗೆಯೇ ಬೇಡ
ನಮ್ಮಿಬ್ಬರಿಗೂ 
ನೋಡುವ ಜಗದ ಜನರದು,

ಸಾಧ್ಯವೇ ಈ ಬದುಕು 
ಎಡವಿತೆಂದೊಮ್ಮೆ ಮರುಗದೆ
ಮತ್ತೊಂದು ಹೊಸ ಬಾಳು?!!

***

ಬೇಡುವಾಗ ಏನೇನೂ ಫಲಿಸದು
ಬಿಟ್ಟು ಮುನ್ನೆಡೆವಾಗ ಎಲ್ಲವು ಫಲಿಸಿ ನಿಲ್ಲುವುದು
ನನಗದರ ಒಲವೇ ಇಂಗಿ ಹೋಗಿರುವುದು
ಕಾಲನ ನಿಯಮವೆಲ್ಲಿ ತಪ್ಪಿತೊ ಕಾಣದು

***

ರಾಮನ ಕಾಣಲು ಮನಸಿಗೆ
ಹನುಮನ ಹಸ್ತ ಬೇಕಿದೆ;
ಅವನ ಒಲಿಸಿಕೊಳ್ಳಲು
ಮತ್ತೂ ನಾ ರಾಮನೇ ಜಪಿಸಬೇಕಿದೆ,,
ಜೈ ಶ್ರೀ ರಾಮ್, ಜೈ ಹನುಮಾನ್

***

ಭಕ್ತಿಯ ಆಚರಣೆಗಳಿಗಿಂತ 
ನೀತಿಯ ಅನುಸರಣೆಗಳಲ್ಲಿ 
ನೆಮ್ಮದಿ ಕಾಣುವ ಮನಸ್ಸು
ಸದಾ ಇದ್ದಲ್ಲೇ ಕೈಲಾಸವ ಕಾಣ್ವದು

***

ರಾಮನೆಂದರೂ ಕೃಷ್ಣನೆಂದರೂ
ಒಬ್ಬನೇ 
ಆ ಯುಗಪುರುಷನೆನುವಾಗ
ರಾಮನಿಗೆ 
ರಾಧೆಯಾಗುವ ಕನಸಿದೆ
ಸೀತೆಯೊಳು
ಕಲಿಯುಗದಿ,,,

08/04/2014

***

ಕದ್ದಿದಷ್ಟೇ ಕನಸು
ಬಿತ್ತಿದೆಲ್ಲಾ ಬದುಕು
ನೀ ಕಂಡಂತೆ
ನಾ ಕಂಡಂತೆ
ಜಗ ಕಣ್ಮುಂಚಿಕೊಂಡಂತೆಯೂ,,

07/04/2014

***

ಏದುಸಿರು ಬಿಡುವಂತೊಮ್ಮೆ 
ನಿನ್ನ ಕಂಡಾಗ,
ಎನ್ನೆದೆಯಲೇನೋ 
ಆವೇಗ,
ಕನಸೇ ಕಣ್ಮುಂದೆ 
ನಿಂತಿರುವಾಗ
ಬಿಗಿದಪ್ಪಿದ ಕನಸುಗಳೆಲ್ಲಾ 
ಕೆರಳಿದಂತೆ
ನಲಿದಾಡಿದೆ
ನನ್ನೆಲ್ಲಾ 
ಹಿಡಿದಿಟ್ಟ ಭಾವಗಳು
ಒಮ್ಮೆಲೇ 
ಚಿಮ್ಮಿದಂತೆ
ಹರಿದಾಡಿದಂತೆ 
ಕೈಜಾರಿ ನಿನ ಬಯಸಿದಂತೆ, 
ಕಲ್ಪಿತ ಕನಸು ಇದಿರಲಿ 
ಸುಳಿದಾಡಿದಂತೆ
ಒಲವರಳಿಸೊ 
ಸ್ಫೂರ್ತಿ ಸಿಕ್ಕಂತೆ,,,

***

ಅಭಿಮಾನದ ಕಣ್ಣುಗಳಲ್ಲಿ
ನೋಡಿದ್ದೆಲ್ಲವೂ ಸುಂದರವೇ,,
ಅದು ಅಭಿಮಾನದ ತಪ್ಪೇ,,,,

06/04/2014

***

ನನ್ನ 
ಪ್ರೀತಿಗೆ 
ನೀನಿಟ್ಟ 
ಹೆಸರು 
ವಿರಹ; 
ಈಗದು 
ಮುಗಿಯದ 
ಬರಹ 

01/04/2014

Tuesday 1 April 2014

ಉಸಿರೆಲೆಗಳೆಲ್ಲಾ ಬತ್ತಿ ಉದುರಿದವೊ
ಹಸಿರಾದ ಮನವಿದೆ ಇನ್ನೂ,, 
ಎನುವ ಜೀವದ ಉದ್ಗಾರಕೆ 
ಪ್ರಕೃತಿಯ ಪ್ರೀತಿಯಿದೆ
ಭಾವಗಳಾಗಿ ತುಂಬಿಕೊಂಡವೊ
ಈ ಪುಟ್ಟ ಹಕ್ಕಿಗಳು 
ಮಕ್ಕಳಂತೆ ಒಡಲ ತುಂಬಿ ... :-) 

ಚಿತ್ರ ಕೃಪೆ; ಅಂತರ್ಜಾಲ

01/04/2014
ನವ ಯುಗಾದಿ ನವೀನತೆಯ ತುಂಬಿ 
ಬೇವು ಬೆಲ್ಲದ ಜೀವನವಿದು ಎಂಬುದ ನಂಬಿ 
ಸಾಗುವ ದೂರ ಯಾನದೊಳು 
ಸೋಲು ಮೆಟ್ಟಿಲಾಗಿ, ಗೆಲುವು ಗೆಲುವಾಗಿ 
ಒಲವ ಹೊಳೆ ನಿರಂತರವಾಗಿ
ನಮ್ಮೊಳಗಿನ ನಮ್ಮನು, ಪರರಲ್ಲಿ ತನ್ನವರನು
ಕಾಣುವ ನವ ದೃಷ್ಟಿ ಉದಯಿಸಲೆಂದು ಹಾರೈಕೆ,, :-) 

ತಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು  :-)

ಚಿತ್ರ ಕೃಪೆ; ಅಂತರ್ಜಾಲ

31/03/2014





ಎಲ್ಲಾ ನೋವುಗಳಾಚೆ 
ಬದುಕುಂಟು,
ಹುಡುಕಿಕೊಂಡರೆ 
ನಮ್ಮೊಳ ಸಂಭ್ರಮಗಳ,
ಸವೆಸುವುದಲ್ಲ ಜೀವನ 
ಸವಿಯುವುದೆಂದು ತಿಳಿದು....

***

'ಸಾಲುಗಳು ಹುಟ್ಟದ ಹೊತ್ತಿದು ಗೆಳತಿ' 
ಎನ್ನುವ ನಿನ್ನ ವೇದನೆಗೆ' 
'ಕಲ್ಪಿಸಿ ಬರೆ' ಎಂದಿದ್ದೆ ಅಂದು ನಾ 
ನಿನ್ನಾಳಕ್ಕಿಳಿಯದೆ,
ಅರಿವಾಗಿಹುದಿಂದು 
ಕಲ್ಪಿಸದ ಜಡ ಹೊತ್ತಿಹುದೆಂದು,,,,

***

ಈ ಹುಡುಕಾಟ, ಕಾಯುವಿಕೆ
ಎಲ್ಲವೂ ವ್ಯರ್ಥ;
ಏನನ್ನು ಏಕೆಂದು ಅರಿಯದಿರೆ,,

***

ನನ್ನ ನಗುವ ಕುಹುಕವೆನ್ನದಿರು
ನಿನ್ನ ಮರೆವ ಹೊಸ ಹುನ್ನಾರವದು,,


***

ಪ್ರೀತಿಸೆಯಾ ಓ ದುಂಬಿಯೇ
ಹಾದು ಹೋಗುವೆ ನೋಡದ ಹಾಗೆ
ನೀ ಗುಯ್ಗುಟ್ಟಿ ಸುತ್ತುವಾಗ ಜರಿದಿದ್ದೆ
ಎನ್ನ ಏಕಾಂತ ಭಂಗಕೆ,
ನೀ ಬಾರದೀ ಹೊತ್ತು ನೀರವತೆಯ ಧ್ಯಾನ
ಏಕೆ ಬಂದೆ, ಏಕೆ ನಿಂದೆ, ಮತ್ತೇಕೆ ಹೋದೆ?
ಉತ್ತರಿಸಲಾದರೂ ಬರುವೆ ನಿನೆಂದು ಯಾಕ್ವೆನು
ನೀನೋ ದುಂಬಿ ರೆಕ್ಕೆಗಳಿವೆ, 

ನಿನ್ನಂತೆ ಹಾರಲಾರೆ ಉದುರುವ ಪಕಳೆಗಳು ನನ್ನವು....

31/03/2014
***

ಅಹಂ ಕಳೆದುಕೊಂಡೆನೆಂದುಕೊಂಡೆ
ನಿನ್ನೆದುರು ಜಗ್ಗದ ನಾನು ಹೆಣ್ಣು ಎನುವಾಗ
ನಿನ್ನ ಅಹಂನ ಎದುರು ನನ್ನ ಸ್ವಾಭಿಮಾನವಿರಲು
ಅಹಂ ಎಂದೇ ನೀ ಹೇಳುವೆಯಾದರೂ ಸರಿ 
ಅದೇ ಇರಲಿ ನಾ ಸೋಲೆನು ,,,

30/03/2014