Thursday 26 March 2015

ಕವನ

ಹೀಗೆಲ್ಲಾ ನನ್ನ ಕನಸುಗಳು


ನನ್ನ ಕನಸುಗಳನ್ನೆಲ್ಲಾ
ಹೀಗೆ ನೀ ಜಡೆ ಹೆಣೆದು
ಮೊಲ್ಲೆಯ ಮುಡಿಸಿರುವೆ
ನಿನ್ನ ನಾ ಪ್ರೇಮಿ ಎನ್ನಲೇ
ಇಲ್ಲ ನನ್ನ ತಾಯಿಯೇ
ಓರಿಗೆಯ ಗೆಳತಿಯೇ
ನೀ ಹುಡುಗ!

ಕಣ್ಣಿಗೆ ನಿಲುಕದ ಭಾಷೆಯ
ಕನ್ನಡಿಯೊಳು ಹುದುಗಿಸಿಟ್ಟು
ಹುಡುಕೆಂದು ಹುಡುಗಾಟವಾಡಿರುವೆ
ನೀ ನನ್ನ ಬಾಲ್ಯದ ಗೆಳೆಯನೇ ಹುಡುಗ!

ಹೀಗೆಲ್ಲಾ ನೀ ನನ್ನ ಸಿಂಗರಿಸಲು
ನಿನ್ನ ಕಣ್ಣಿಂದ ನನ್ನ ನಾ ಕಂಡು
ಕಣ್ಣೀರ ಮರೆತಿಹೆನು 
ಯಾರು ನೀ ನನಗೆ
ಹೇಳು ನೀ ಹುಡುಗ!

ನೀನೂ ಮೆಚ್ಚಿದೆ, ನಾನೂ ಮೆಚ್ಚಿದೆ
ಈಗೀಗ ಹೆಚ್ಚು ಹಚ್ಚಿಕೊಂಡೆ
ಜಡೆಯ ಬಿಟ್ಟು ಬೆನ್ನ ಬಿಟ್ಟು
ಪ್ರಶ್ನೆಗಳಿಗೆ ಉತ್ತರವಾಗು
ಎದುರು ಬಂದು ನಿಲ್ಲೋ ಹುಡುಗ!

ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ಮತ್ತಷ್ಟು ಶೃಂಗಾರವ ಕಾಣಬೇಕಿದೆ
ನಿನ್ನೊಳು ನನ್ನದೇ ಬಿಂಬ
ಎಂದು ಹಣೆ ಮುಟ್ಟಿಸಿ, ಕೈ ಜೀಕಿ ನಿಲ್ಲುವೆ
ಹೇ ಹುಡುಗ, ಹೇಳು ನೀನೀಗ...!

ಚಿತ್ರ ಕೃಪೆ; ಕೃಷ್ಣ ಗಿಳಿಯಾರ್ ಸರ್


26/03/2015

No comments:

Post a Comment