ಕೀಳರಿಮೆ
ಕಾಡಿದ ಕೀಳರಿಮೆಯ
ಹೊರಗೋಡಿಸಲು
ಮತ್ತೆ ಮತ್ತೆ ಅದೇ ತಾಣಗಳನ್ನೇ
ಸುತ್ತಿ ಬಂದೆ
ನಡುಗೆ ಬಿರುಸುಗೊಂಡು
ಹೆಜ್ಜೆ ಮೆದುವಾಗಿ
ಮನಸ್ಸು ಹದಗೊಳ್ಳುತ್ತಿತ್ತು
ವೇಗ ಹೆಚ್ಚಾಗಿದೆ ಈಗ
ಆವೇಗಗಳೂ
ಕೀಳರಿಮೆಯ ಕೊಳಗಳಲಿ
ನಿಲ್ಲಲಾರೆ ಹೆಚ್ಚು ಹೊತ್ತು
ನಡೆಯಬೇಕಿದೆ ಮುಂದೆ
ಕೊಳಗಳ ಬತ್ತಿಸಿ
ಬಯಸಿ ನೀರು ತುಂಬಿಸಿಟ್ಟೆ
ಬಳಕೆಯಾಗದೆ ಕೊಳಕಾಯಿತು
ಹೆಸರಿಟ್ಟ ಕಾರಣಕೆ
ಕೊಳಗಳನು ಬರಿದು ಮಾಡಲಾಗಲೇ ಇಲ್ಲ
ಕೊಳದ ತೇವವ ಇಂಗಿಸಬೇಕಿತ್ತು
ಅದಕೆ ಬೆಂಕಿಯು ಬೇಕಿತ್ತು;
ಆ ಸೂರ್ಯನನ್ನೇ ನಂಬಿರುವೆ
ಸುಟ್ಟುಬಿಡುವನೆಂದು
ಜಗಕ್ಕೆಲ್ಲಾ ಅಗ್ನಿಯೇ ಶ್ರೇಷ್ಟವಲ್ಲವೆ?!
ಸುಡುವ ಭಸ್ಮಗೊಳಿಸುವ
ಪ್ರವೃತ್ತಿಯೇ ಉತ್ತಮೊತ್ತಮವೆನಿಸಿರಲು
ಕೀಳರಿಮೆಗಳು ಅದೇಕೋ ಇನ್ನೂ ಹಸಿಯಾಗಿವೆ
ಒಮ್ಮೆಲೆ ಸೂರ್ಯನಾಳಕೆ ಜಿಗಿಯಲಾರೆ
ಅವನ ನೆರಳಲಿ ನಿಧಾನದಿ ಆವಿಯಾಗುವೆ
ಭಾಸ್ಕರನು ಅನುಮತಿಸಲಿ.
04/03/2015
No comments:
Post a Comment