Wednesday, 25 March 2015

ಕವನ

ಪರಿಹಾರ


ದಿನದ ಬಹು ಬೇಗೆಯ ಹೊತ್ತಲ್ಲಿ
ದೂರದೂರಿಂದ ಪ್ರಯಾಣಿಸಿ
ಮುಸ್ಸಂಜೆಗೆ ಮನೆಯ ತಲುಪಿದ್ದೆ
ಎಂದಿನಂತೆ ಕೆಲಸದಿಂದ

ಅದೇನೇನೋ ಯೋಚನೆ 
ಯಾತನೆಗಳಲ್ಲೇ ಇದ್ದೆ
ಪ್ರಶಾಂತದಿ ಈಗೊಂದು 
ಪುಸ್ತಕ ಹಿಡಿದು ಓದುವಾಗ
ಧಗೆಯೋ ಧಗೆ..
ರಾತ್ರಿಯ ತಂಪು ಮೆರೆಸುವಂತೆ

ಏನಾಯಿತೋ ಎಂಬಂತೆ 
ಮುಡಿಯೊಳು ಬೆರಳಾಡಿಸಲು 
ಮದ್ಯಾಹ್ನದ ಬಿಸಿಯು ಇನ್ನೂ ಆರಿಲ್ಲ
ಓಹ್! ಸಂಜೆಗೆ ಮುಡಿಯ ಬಿಚ್ಚಿದ್ದರೆ
ಆಗಲೇ ಈ ಬಿಸಿ ಉಸುರಿ ಹೋಗುತ್ತಿತ್ತು 
ಅದರಂತ್ಯವ
ತನ್ನ ಸ್ವಗತ

ಹೆರಳ ಬಿಚ್ಚಿ ಹರಡಿದೆ
ಬೆರಳಾಡಿಸಿ ಹೊತ್ತು
ರಾತ್ರಿಯ ತಂಗಾಳಿ ತುಸು ತುಸುವೇ 
ಸನಿಹವೆನಿಸಿತು..

ಅಂದಂದಿನ ಬಿಸಿಗೆ 
ಅಂದೇ ಪರಿಹಾರ 
ಪ್ರಯತ್ನಗಳಾಗಬೇಕು

ಒಳಗೊಳಗೆ ಕುದ್ದು
ಕರಕಲಾಗುವ ಮುನ್ನ! 
ಇಲ್ಲವೇ
ಬಿಸಿ ಆರಿ ಬಯಕೆ
ಬತ್ತುವ ಮುನ್ನ!

20/03/2015

No comments:

Post a Comment