'ಅನಿಸಿಕೆ'
ಹೆಣ್ಣಿಗೆ ಯೌವ್ವನದಲ್ಲಿ
ತಂದೆಯಂತಹ ಗಂಡನು
ಗಂಡಿಗೆ ಮುಪ್ಪಿನಲ್ಲಿ
ತಾಯಿಯಂತಹ ಹೆಂಡತಿಯು
ಇದ್ದೊಡೆ
ಜೀವನವದು ಸಂಪೂರ್ಣ!
06/03/2015
*****
ಭಗವಂತ ಝಾಡಿಸಿ ಒದ್ದ
ಬಿದ್ದೆ ಹೌದು ನಿಜ
ಎಲ್ಲರೂ ತಿಳಿದರು ಊರಾಚೆ ಬಿದ್ದೆನೆಂದು
ನಾನೋ ಸಮುದ್ರ ದಡದೊಳಿದ್ದೆ
ಮುತ್ತಾರಿಸುತಲಿದ್ದೆ!
*****
ಈ ನೆನಪಿನ ಕತೆಗಳೆ
ಜೊತೆಯಾಯ್ತು..
ಜೊತೆಗಿದ್ದು ಬರೆಸಿಕೊಳ್ಳೊ
ಹೊಸ ಕತೆಗೆ ನೀಲಿ ಖಾಲಿಯಾಯ್ತು!
ಹೇಗೋ ಇದ್ದು ಏನೋ ಆಯ್ತು
ಇನ್ನು ಗೊತ್ತಿಲ್ಲ ಎಲ್ಲಿ, ಏನು
ಬರೆದು ಬರೆದು ಅನ್ವೇಷಿಸಬೇಕಿದೆ
ಚುಕ್ಕಿ ಇಟ್ಟು ಬಿಟ್ಟ ಗೆರೆಗಳನು ಕೂಡಿಸಲು!
*****
ಪೈಪೋಟಿಗಳೇನೂ ಇಲ್ಲ
ಹಾಗಾಗಿ ವೇಗ-ಆವೇಗವೂ..!
ಬದುಕಿನೊಟ್ಟಿಗೆ ಹಟಗಳೇನೂ ಇಲ್ಲ
ಹಾಗಾಗಿ ನೀನಿದ್ದಂತೆ ನೀನಿಟ್ಟಂತೆ!
ಆತಂಕಗಳೂ ಇಲ್ಲ
ಹಾಗಾಗಿ ಆಸೆ ಆಕಾಂಕ್ಷೆಗಳು ಹರಿದಂತೆ!
*****
ಒಂದಷ್ಟು ಜನಬೆಂಬಲ
ಬೇಕಿದ್ದರೆ
ಹೇಗೋ ಸಂಪಾದಿಸಿಬಿಡಬಹುದು
ಮನಗಳನ್ನು ಗೆಲ್ಲಬೇಕು
ಇದ್ದಂತೆ ನಾವಿದ್ದು
****
ಗಾಳಿಯೊಳಗೆಲ್ಲಾ
ಬಣ್ಣ ಹಾರಾಡಿ
ಹುಡುಕಿದೆ ನನ್ನ, ನಿನ್ನ
ಕೃಷ್ಣ! ...
*****
ಜಾತಿಯನ್ನು ತಮ್ಮ ಕಣ್ಣುಗಳಿಗೆ
ಅಂಟಿಸಿಕೊಂಡು ನಿಂತವರ ನೋಡಿ
ನನಗೊಂದೇ ಮೋಜು
ಪಾಪ ಪ್ರಪಂಚದ ಯಾವುದೇ ಅತ್ಯಮೂಲ್ಯವೂ
ಅವರ ಸುಖಕ್ಕೆ ದೊರಕದು!
ಸಹಜವಾದ ಕಣ್ಣುಗಳಾಗಲಿ ಎಲ್ಲರವೂ
ಒಬ್ಬರ ಕಣ್ಣನ್ನೊಬ್ಬರು ನೇರ ದಿಟ್ಟಿಸಿ ನೋಡುವಂತೆ!
05/03/2015
****
ದೃಷ್ಟಿ ತಾಗಿ
ಕಡ್ಡಿ ಸುಟ್ಟಿಸಿಕೊಳ್ಳುತ್ತಿದೆ
ನನ್ನ ಕನಸು!
****
ಜೀವ ವೀಣೆ
ನರಗಳನ್ನೆಳೆದು
ಮೀಟುತಿದೆ
ನೋವಿದೆ ನಿಜ,
ನಂತರ
ಸುಶ್ರಾವ್ಯ ಸಂಗೀತವೂ!
04/03/2015
No comments:
Post a Comment