Tuesday 3 March 2015

ಮನದ ಮಾತು

ಗೋಧೂಳಿ ಸಮಯ


ಗೋಧೂಳಿ ಸಮಯ; ಈ ಸುಂದರ ಸಂಜೆಯಲಿ ದೂರದಲ್ಲೆಲ್ಲೋ ಓಡುವ ಗೋವುಗಳ ಘಲ್ ಘಲ್ ಗೆಜ್ಜೆ ನಾದದ ಹಿಂದೆಯೇ ಮನವು ಓಡುವುದು. ಸುತ್ತ ಹಸಿರ ವನದ ನಡುವೆ ದಿನವೆಲ್ಲಾ ಮೇಯ್ದ ದನ ಕರುಗಳು ಮೈ ತುಂಬಿಕೊಂಡು ಓಡಿ, ನೆಗೆದು ಬರುವಾಗ ಎದೆಯುಬ್ಬಿಸಿ ನೋಡುವಂತಹ ನಮ್ಮ ಗೌರವದ ಸೂಚಕಗಳಂತೆ ಕಾಣುವ ನಮ್ಮ ಗೋವುಗಳು; ಆಕಳ ಮುಖವೇ ಅದರ ಸಮೃದ್ಧಿಯ ಸಂಕೇತವೆನ್ನುವಂತೆ ನಮ್ಮ ಪೂರ್ವಿಕರಲ್ಲಿ ಪೂಜನೀಯ ಭಾವವಿತ್ತು. ಇಂದಿಗೂ ಪ್ರಸ್ತುತ. 

ಮಾನವನು ಎಷ್ಟೇ ಬುದ್ದಿವಂತನಾಗಿ ತನ್ನ ಬದುಕನ್ನು ಯಾಂತ್ರಿಕವನ್ನಾಗಿಸಿಕೊಂಡಿದ್ದರೂ ಅವನಲ್ಲಿ ಇನ್ನೂ ಸ್ನೇಹ, ಪ್ರೇಮ, ಮೋಹವೆಂಬ ಅನುಭೂತಿಯು ಇನ್ನೂ ಉಳಿದುಕೊಂಡಿದೆ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುತ್ತಾನೆ. ನಮ್ಮ ಅಗತ್ಯಗಳನ್ನು ಪೂರೈಸಿಕೊಂಡ ನಂತರವೂ ಅವುಗಳನ್ನು ಮುದ್ದಿಸಿ ಅದರೊಟ್ಟಿಗೆ ಅವನೂ ಬಾಳುವುದಿದೆ. 
ಹೀಗೆಯೇ ನೆನೆವಾಗ ನಮ್ಮ ಬಾಲ್ಯದ ಆ ದಿನಗಳು ನೆನಪಾಗುತ್ತವೆ. ಹುಟ್ಟಿದಾಗಿನಿಂದಲೂ ಪೇಟೆಯಲ್ಲಿಯೇ ಬೆಳೆದ ನಾನು, ನನ್ನ ಬಾಲ್ಯವನ್ನು ಅರೆ ಪಟ್ಟಣ ಇಲ್ಲವೇ ಅರೆ ಹಳ್ಳಿಯಂತಿದ್ದ ಬೆಂಗಳೂರಿನಲ್ಲಿ ಕಳೆದದ್ದು. ಈಗಿನಂತೆ ’ನಂದಿನಿ’ ಹಾಲಿನ ಸರಬರಾಜಿದ್ದರೂ ಆಗೆಲ್ಲಾ ಹಸುವಿನ ಕರೆದ ಹಾಲನ್ನೇ ನಾವು ಬಳಸುತ್ತಿದ್ದೆವು. ನಮ್ಮ ಮನೆಯ ಪಕ್ಕದ ಕಟ್ಟಡದಲ್ಲಿಯೇ ಹಾಲು ಮಾರವವರಿದ್ದರು. ಆದರೆ ಮನೆಯ ಸುತ್ತಾ ಮುತ್ತಾ ಆಕಳ ಸುಳಿವಿಲ್ಲದಿದ್ದರೂ ದೂರದಲ್ಲೆಲ್ಲೋ ಶೆಡ್ಡುಗಳಂತೆ ದನದ ಕೊಟ್ಟಿಗೆಗಳನ್ನು ಮಾಡಿಕೊಂಡು ಅಲ್ಲಿಯೇ  ಹಾಲನ್ನು ಕರೆದು ಮನೆಮನೆಗೆ ಸರಬರಾಜು ಮಾಡಿತ್ತಿದ್ದರು. ನಾನು ಹೋಗುತ್ತಿದ್ದ ಶಾಲೆಯ ಸುತ್ತಲೂ ಅನೇಕರು ಇಪ್ಪತ್ತು ಮೂವತ್ತು ಸಂಖ್ಯೆಗಳಲ್ಲಿ ದನಗಳನ್ನು ಕಟ್ಟಿ ಬೆಳಗಾಗೆದ್ದು ಹಾಲು ಕರೆಯಲು ನಿಲ್ಲುತ್ತಿದ್ದರು. ನಮಗೋ ಹೀಗೆ ಮಂದೆ ಮಂದೆಯಾಗಿ ಹಸುಗಳನ್ನು ನೋಡಲು ಬಹಳ ಸಂಭ್ರಮವೆನಿಸುತ್ತಿತ್ತು!. ಆಗ ನಾವು ನಾಲ್ಕೈದನೇ ತರಗತಿಯ ಮಕ್ಕಳು. ಆಗೊಂದು ದಿನ ನಮ್ಮ ಮನೆಯಲ್ಲೊಂದು ಪೂಜಾ ಕಾರ್ಯಕ್ರಮವಿತ್ತು. ಸಣ್ಣವಳು ನಾನಿರುವೆನೆಂದು ಒಂದು ಬಾಟಲಿ ಕೊಟ್ಟು ”ಹೋಗು ನಿಮ್ಮ ಸ್ಕೂಲ್ ಹತ್ರ ಎಷ್ಟೊಂದ್ ಹಸುಗಳಿವೆ ಅಲ್ವಾ? ಅಲ್ಲಿಂದ ’ಗಂಜಲ’ (ಗೋ ಮೂತ್ರ)  ತಗೊಂಡ್ ಬಾ” ಅಂತ ಅಕ್ಕ ಹೇಳಿ ಕಳಿಸಿಬಿಟ್ಟಳು. ನಾನೋ ಅದೇನ್ ಮಹಾ ದಿನಾ ನೋಡ್ತೀನಿ ಈಗ ಹಿಡಿದು ತರ್ತೀನಿ ಅಂದುಕೊಂಡು ಹೊರಟೆ. ಸರಿ; ಶಾಲೆಯ ಹತ್ತಿರ ಬಂದೆ, ಶಾಲೆಯನ್ನು ಅರ್ಧ ಸುತ್ತು ಹಾಕಿದೆ. ಹೌದು ಸುತ್ತಲೂ ಎಷ್ಟೊಂದು ಹಸುಗಳಿವೆ, ಎಲ್ಲವೂ ನಿಶ್ಶಬ್ಧ! ಹಾಗೆಯೇ ನಾನೂ!. ಕೆಲವು ನಿಂತಿವೆ, ಕೆಲವು ಕೂತಿವೆ. ನೋಡಿದೆ ಎಲ್ಲಿ ಗಂಜಲ?!. ಓ ಸುಲಭ, ಏನ್ ನಲ್ಲಿ ನೀರು ತರುವವಳಂತೆ ಬೀಗಿ ಬಂದಿದ್ದೆ.  ಈಗ ನೋಡಿದರೆ ಹಸುಗಳು ನನ್ನ ಮನದ ಇಂಗಿತವನ್ನು ಅರಿಯದೆ ನಿಂತಿವೆ ಅದರದೇ ಕಲಾಪಗಳಲ್ಲಿ. ನನಗೀಗ ಆತಂಕ ಶುರುವಾಯಿತು. ಬಂದು ಇನ್ನೂ ಐದು ನಿಮಿಷವೂ ಆಗಿಲ್ಲ ಆದರೆ ನನಗೋ ಕಾಯುವುದು ಭಯವಲ್ಲ, ಕಾದರೂ ಸಿಗದಿದ್ದರೆ?! ಇನ್ನರ್ಧ ಗಂಟೆಯಲ್ಲಂತು ನಾನು ಮನೆಯಲ್ಲಿರಬೇಕು; ಏನು ಮಾಡುವುದು ಎನ್ನುವಷ್ಟರಲ್ಲಿ ಮುನ್ನಡೆಯುತ್ತಿದ್ದವಳಿಗೆ ಎದುರಿನ ಕೆಂಚು ಬಣ್ಣದ ಹಸುವು ಮುಖ ತಿರುಗಿಸಿ ನನ್ನ ನೋಡಲು, ನಾನೂ ಅದನ್ನು ಬೇಡುವವಳಂತೆ ದೀನಳಾಗಿ ನೋಡಲು,,,, ಅರೇ?!!!! ಹಸುವು ತನ್ನ ಬಾಲವನ್ನು ಎತ್ತಿ ನಾ ಬೇಡಿದ್ದ ಸುರಿಯಲು ಪ್ರಾರಂಭ!. ನಾ ಖುಷಿಯಿಂದ ಮುಂದೋಡಿ ತಂದಿದ್ದ ಬಾಟಲಿಯ ತುಂಬಾ ತುಂಬಿಸಿಕೊಂಡೆ ನಿರ್ಭಯವಾಗಿ!. ನನಗಾಗ ಎಷ್ಟು ಖುಷಿಯೆಂದರೇ, ನಾನೇನೋ ಸಾಧಿಸಿಬಿಟ್ಟಷ್ಟು ಹರ್ಷವಾಗಿತ್ತು. ಆ ಸ್ಥಳಕ್ಕೆ ಧಾವಿಸಿ ಕೇವಲ ಐದು ನಿಮಿಷದ ಒಳಗೆ ನಾ ಬಂದ ಕೆಲಸವು ಕೈಗೂಡಿದ್ದರೂ ಗಂಜಲದ ನಿರೀಕ್ಷೆಯಲ್ಲಿ ನನ್ನ ಮನವು ಓಡಿದ್ದ ಆ ಆತಂಕಗಳ ಬೀದಿಗಳು ಹಲವು ಕಿಲೋ ಮೀಟರುಗಳಾಗಿದ್ದವು. ಅಂತೂ ಅಂದಿನ ನಮ್ಮ ಮನೆಯ ಪೂಜಾ ಕಾರ್ಯಕ್ರಮವು ಸಾಂಗವಾಗಿಯೇ ನೆರವೇರಿತ್ತು.  ಆ ದಿನದ ನೆನಪು ನನ್ನಲಿ ಎಂದೂ ಮರೆಯದ ಒಂದು ಸುಂದರ ನೆನಪು!

ಹಾಗೆಯೇ ಒಂದು ಸಂಕ್ರಾಂತಿಯ ಹಿಂದಿನ ದಿನ,  ಪಕ್ಕದ ಮನೆಯ ಹಾಲಿನ ವ್ಯಾಪಾರಿಗಳು ನಮ್ಮ ಮನೆಯ ಪಕ್ಕದಲ್ಲಿನ ಪಾರ್ಕಿನಲ್ಲಿ ತಮ್ಮ ಹಸುಗಳನ್ನು ಸಾಲಾಗಿ ಕಟ್ಟಿದ್ದರು. ಸುಮಾರು ಮೂವತ್ತು ಹಸಗಳಿದ್ದಿರಬಹುದು. ಎಲ್ಲವಕ್ಕೂ ಮೈ ತೊಳೆದು ಕರೆತಂದಿದ್ದರು. ಆದಿನ ನಮಗೆಲ್ಲಾ ಬಹಳ ಸಂಭ್ರಮ ಹಳ್ಳಿಯ ವಾತಾವರಣದಿಂದ ವಂಚಿತರಾಗಿದ್ದ ಕಾರಣ ಈ ಆಚರಣೆಗಳೆಲ್ಲಾ ಈ ಹಬ್ಬದ ಕಲ್ಪನೆಗಳಿಗೆ ರಂಗು ತುಂಬುತ್ತಿದ್ದವು. ಕೊಂಬುಗಳಿಗೆ ಬಣ್ಣ ಬಣ್ಣದ ಟೇಪು ಕಟ್ಟಿ, ಅರಿಶಿನ ಕುಂಕುಮಗಳಿಂದ ಸಿಂಗರಿಸಿ ಆ ಮನೆಯ ಹಿರಿ ಸೊಸೆ ಆ ಎಲ್ಲಾ ರಾಸುಗಳಿಗೆ ಪೂಜೆಯನ್ನು ಮಾಡಿತ್ತಿದ್ದರು. ಅವರ ಮಕ್ಕಳು ನನ್ನೊಂದಿಗಾಡುವ ನನ್ನ ಸ್ನೇಹಿತರು. ಅವರೆಲ್ಲಾ ನನಗೆ ಈ ಪೂಜೆಯ ಬಗ್ಗೆ ವಿವರಿಸುತ್ತಿದ್ದರು. ಮುದ್ದು ಮಕ್ಕಳ ಮುದ್ದು ಮುದ್ದು ಸಂಭಾಷಣೆಗಳು. ” ನೋಡು ನಮ್ಮಮ್ಮ ಪೂಜೆ ಮಾಡ್ತಾ ಇದ್ದಾರೆ,, ಎಷ್ಟೊಂದು ಹಸುಗಳಿವೆ ನಮ್ಮಲ್ಲಿ, ನಮ್ಮ ಊರಿನಲ್ಲೂ ಇವೆ ಗೊತ್ತಾ?”. ”ಹೌದೇನೋ ಎಲ್ಲಾ ಹಸೂಗು ಪೂಜೆ ಮಾಡ್ತೀರಾ ಇವತ್ತು? ಊರಲ್ಲೂ ಮಾಡ್ತೀರಾ?!” ನನಗೋ ಬೆರಗು!, ಸ್ನೇಹಿತನನ್ನು ಕೇಳಿ ತಿಳಿಯುತ್ತಲಿದ್ದೆ. ಈ ಬೆರಗೋ, ಮನಸಿನ ಭಾವಗಳಿಗೆ ರೆಕ್ಕೆ-ಪುಕ್ಕ ಹಚ್ಚುವ ಬಣ್ಣದ ಹೂಗಳಂತೆ. ಎಲ್ಲಿ ಯಾವ ಗಿಡದ ಕುರುಹೋ ಏನೋ ಮತ್ತೆಲ್ಲೋ ಕಂಪಾಗಿ ತೇಲಿ ಸೇರುವ ತಂಗಾಳಿ!. ಎಷ್ಟು ಕಂಡರೂ ಸೂಗಸೇ ಈ ಬಾಲ್ಯದ ಕನಸು. ಬೆಚ್ಚಿದ್ದು, ಚೀರಿದ್ದು, ಎದ್ದು-ಬಿದ್ದು ಆಡಿದ್ದು ಎಲ್ಲವೂ ಮುದ ನೀಡುವ ಸುಂದರ ಹಿನ್ನೊಟವೇ ಅಲ್ಲವೇ?!

ನನ್ನಲ್ಲಿ ಈ ನೆನಪುಗಳು, ಗೋವು ಮತ್ತು ಸಂಕ್ರಾಂತಿ ಹೇಗೋ ಒಂದಕ್ಕೊಂದು ಬೆಸೆದುಕೊಂಡುಬಿಟ್ಟಿವೆ. ಸಂಕ್ರಾಂತಿ ಎನುವಾಗ ನನಗೇಕೋ ಮೊದಲು ನೆನಪಾಗುವುದೇ ಹಸುಗಳು!. “ಇಟ್ಟರೆ ಸಗಣಿಯಾದೆ ತಟ್ಟಿದರೆ..........., ಹಚ್ಚಿದರೆ ಒಸಲಿಗೆ ವಿಭೂತಿಯಾದೆ,,, ನೀನ್ಯಾರಿಗಾದೆಯೋ?.... ಎಲೆ ಮಾನವ......... ಹರಿ ಹರಿ ಗೋವು ನಾನು!”......, ಎನುವ ’ಗೋವಿನ ಬಾಳು’ ನಮಗೆ ಆದರ್ಶವಾಗಬೇಕು. ಹಳ್ಳಿಗಾಡಿನ ಬದುಕಿನಲಿ ವರ್ಷಪೂರ್ತಿ ಹೊಲಗದ್ದೆಗಳಲ್ಲಿ ಎತ್ತುಗಳೊಂದಿಗೆ ದುಡಿವ ರೈತ; ಚಳಿಗಾಲ ನಂತರ ಬರುವು ಸೂರ್ಯನು ಹೊರಳುವ ಸಮಯದಿ ತನ್ನ ಗೌರಿ ಮುಖದ ಹಸುಗಳ ಪ್ರೀತಿಸಿ ಪೂಜಿಸಿ ನಲಿಯುವ ಸಂಭ್ರಮಕೆ ಸಂಕ್ರಾಂತಿ ಎಂಬ ಹೆಸರು ಎಂದರೆ ಬಹುವಾಗಿ ಸರಿಯೇ ಎನಿಸುತ್ತದೆ. ಹಬ್ಬದ ಆಚರಣೆಯಲಿ ಕಿಚ್ಚು ಹಾಯಿಸಿ ದನಕರುಗಳ ತುರಿಕೆ ಇತ್ಯಾದಿ ಬಾದೆಗಳಿಂದ ದೂರ ಮಾಡುವನು. ಆಚರಣೆಗಳನ್ನೂ ನಮ್ಮ ಪೂರ್ವಿಕರು ಒಂದು ವೈಙ್ಙಾನಿಕ ಮನೋಭಾವದಿಂದ ರೂಪಿಸಿರುವುದು ಒಂದು ಸೋಜಿಗವೇ ಸರಿ. ಈ ಪರಿಸರದಲ್ಲಿ ಸಹಜವಾಗಿ ಜೀವಿಸೋ ಜೀವಿಗಳ ಸಂಕಷ್ಟಗಳಿಗೆ ಪರಿಸರವೇ ಪರಿಹಾರಗಳಾಗಿವೆ. ಎಷ್ಟೊ ಬಾರಿ ನಮ್ಮನುಭವಗಳಿಗೂ ಬರುವುದುಂಟು. ಗ್ರಹಣ ಕಾಲದ ಉಪವಾಸದ ಹಿನ್ನೆಲೆ, ಈ ಸಮಯದಿ ಸೂರ್ಯನ ನೋಡಬಾರದೆಂಬ ನಿರ್ಬಂಧಗಳು. ಚಳಿಗಾಲದಲ್ಲಿಯೇ ಎಳ್ಳು ತಿನ್ನುವ ಈ ಸುಗ್ಗಿ ಹಬ್ಬ. ಎಳ್ಳಿನಲ್ಲಿ ಎಣ್ಣೆಯ ಅಂಶವಿದ್ದು ಚರ್ಮ ಬಿರುಕು ಬೀಳುವ ಈ ಸಂದರ್ಭದಲ್ಲಿ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇರುವುದು, ಹೀಗೆಯೇ ಅನೇಕ. 

ನಮ್ಮೆಲ್ಲಾ ಹಬ್ಬಗಳ ಹೂರಣವೇ ನಮ್ಮ ಭಾವಗಳು. ಸೋಲು-ಗೆಲುವು, ನಲಿವು-ನೋವುಗಳಿಗೆ ಸೂಚಕವಾಗಿ ನಮ್ಮ ಈ ಆಚರಣೆಗಳು. ಮಾನವ ತನ್ನ ಸ್ವಾರ್ಥಗಳಲ್ಲಿಯೇ ಮುಳುಗಿ ಹೋದ ಈ ಕಾಲದಲಿ ಆಚರಣೆಗಳು ಎಲ್ಲೋ ಒಂದು ಮಾನವೀಯತೆಯ ಜಾಗೃತಿ ಕಾರ್ಯವನ್ನು ಮಾಡುತ್ತಲಿವೆ ಎಂದರೆ ತಪ್ಪಾಗಲಾರದು. ದಾನ-ಧರ್ಮವೆಂಬುದು ಮಾನವನ ನಡೆಯೇ ಹೊರತು ಪುಸ್ತಕದ ಗಂಟಲ್ಲ. ಎಲ್ಲಾ ಧರ್ಮಗಳು ಸಾರುವ ಸಾರವೇ ವಿಶ್ವ ಮಾನವತೆ. ಅದನ್ನು ಹೊರತುಪಡಿಸಿ ಮೌಢ್ಯತೆಗೆ ಧರ್ಮ ಜಾತಿಗಳ ಹೆಸರ ಕಟ್ಟುವುದು ಸೂಚ್ಯವಲ್ಲ. ದೇಶ ಸುತ್ತಿ ಕೋಶ ಓದಿದ ಮೇಲೂ ಈ ಜಾತಿ ಧರ್ಮಗಳ ಹೆಸರಿನಲಿ ಇನ್ನೂ ಹೆಚ್ಚೆಚ್ಚು ಅನಾಚಾರಗಳನ್ನು ಹುಟ್ಟಿಕೊಂಡಿರುವುದು ಒಂದು ದುರಂತವೇ ಸರಿ. ಆದರೂ ಧನಾತ್ಮಕ ಚಿಂತನೆಯುಳ್ಳ ಸಮಾಜ ಮುಖಿ ಪ್ರೇರಣೆಗಳು ಎಲ್ಲಾ ಧರ್ಮಗಳಿಂದಾಚೆ ಜೀವಿಸುವಂತಹ ಬದುಕ ಕಟ್ಟಿಕೊಳ್ಳವ ಹುಮ್ಮಸ್ಸನ್ನು ನೀಡಬೇಕು. ಮನಸ್ಸೊಂದು ಪರಿವರ್ತನೆಯಾದರೆ, ಅದರ ಪ್ರಭಾವದಿ ಹಲವು ಮನಗಳು ಪ್ರಜ್ವಲಿಸುವವು. ದೀಪದಿಂದ ದೀಪದ ಬೆಳಕು ಹರಿವಂತೆ!. ಈ ನಿಟ್ಟಿನಲ್ಲಿ ನಮ್ಮೆಲ್ಲರ ಮನಗಳೂ ಹರಿಯುವಂತಾಗಬೇಕಿದೆ.
*************

ಸಂಜೆಯ ಮಣ್ಣ ಘಮವ ಹೊತ್ತು ತರುವ ಈ ಗೋವುಗಳ ಗೆಜ್ಜೆಯು ಎಚ್ಚರಿಸುತ್ತಲಿವೆ ಶಿವನ ಆಗಮನವ!. ನಂದೀಶ, ರುದ್ರ ಭೂಮಿ ನಾಯಕ, ಸತ್ಯವನೇ ಪ್ರೀತಿಸುವ ಪ್ರೇರಕ. ಸೂರ್ಯರೂಪಿ ಹಗಲೊಳು ಕಾವ್ಯಪ್ರಿಯ ಮನದೊಳು, ರಾತ್ರಿ ಕಾಯೋ ಜಗ ಹೃದಯ!. ಕಾವ್ಯದ ಆತ್ಮ ಹೀಗೆಲ್ಲಾ ಮನವ ತುಂಬೋ ಶಿವನು ಸೂರ್ಯ ಸದನದ ರಾಜನೆಂಬ ಭಾವಕೆ ಮನವು ಮಿಡಿಯದೇ ಉಳಿವುದೆ?!. ಸೂರ್ಯನು ದಿಕ್ಕು ಬದಲಿಸುವ ಸೊಗಸೇ ಈ ಸಂಕ್ರಾಂತಿ ಎನುವಾಗ. ಮಾನಸ ಶಿವನ ನೆನೆಯದೆ ಮುನ್ನಡಿಯಿಡಲಾರೆನೋ ಹರನೇ... 

“ಗೋಧೂಳಿ ಸಮಯ”- 

ಆಗಸದ ರಂಗೆಲ್ಲಾ ಸೂರ್ಯನೋಕುಳಿಯಂತೆ
ತಂಪಾದ ಗಾಳಿಯ ನವಿರು ಸುಳಿವಂತೆ
ಗೆಜ್ಜೆಗೆ ಹೆಜ್ಜೆ ಹಾಕಿ ಜಿಗಿದು ಬರುವ ಸಾರಥಿಯಂತೆ
ಸಿಡಿದು ಎದ್ದೇಳುವ ಭೂತಾಯಿಯ ಮೈ ಧೂಳಿನಂತೆ
ಕಣ್ಮಂಜಾದರೂ ಕೇಳುವ ಕಿವಿಗೆ ಕಂಪಿನ ಮಣ್ಣಿಗೆ ನಾಸಿಕ
ಕಣ್ಣಾರತಿಯಂತೆ;
ಎಷ್ಟು ವರ್ಣಿಸಲೋ ಪ್ರಭುವೆ ನೀ ತೆರಳುವ ಈ ಹೊತ್ತು
ನಮ್ಮನೆ ಗಂಗೆ ತುಂಗೆಯರು
ನಮ್ಮ ತೆಕ್ಕೆಯೊಳು
ನಿನ್ನನೇ ಮತ್ತೆ ಮತ್ತೆ ನೆನೆದಿಹರು ನಿರೀಕ್ಷೆಯಲಿ!
ಸುಂದರವೀ ಗೋಧೂಳಿ!
ಸುಂದರ ನೀ ರವಿ ಮುಖ ಶಿವನೇ!


ಧನ್ಯವಾದಗಳೊಂದಿಗೆ,
ದಿವ್ಯ ಆಂಜನಪ್ಪ,

15/12/2014

No comments:

Post a Comment