ಸಕ್ಕರೆ
ಆ ಎರಡು ಕಣ್ಗಳೆದುರು
ಒಂದು ಉಂಡೆ ಸಕ್ಕರೆಯಚ್ಚಿತ್ತು
ಕಣ್ಗಳು ನೋಡಿತು
ತನಗೆ ಬೇಡವೆಂದೆಣಿಸಿ ಸುಮ್ಮನಿದ್ದುಬಿಟ್ಟಿತ್ತು
ಬೇಡವೆಂದದ್ದು ಉಳಿದುಕೊಳ್ಳಬಾರದಿತ್ತು
ದಾರಿ ಸವಿಯ ಹುಡುಕಿ
ಇರುವೆಯೊಂದು ಹರಿದು ಬಂದಿತ್ತು
ಸಕ್ಕರೆಯಚ್ಚಿನ ಸವಿಯ ಸವಿದಿತ್ತು
ಕಣ್ಣು ಸುಮ್ಮನೆಯೇ ನೋಡಿತ್ತು
ಕೆಲ ಹೊತ್ತಿನಲ್ಲಿ ಮತ್ತೆರಡು ಇರುವೆಗಳು
ಜಾಡ ಹಿಡಿದು ಬಂದಿತ್ತು
ಅಚ್ಚಿಗೀಗ ಮೂರೆಡೆ ಸವೆತ
ಕಣ್ಣೂ ಈಗಲೂ ನೋಡುತ್ತಲೇ ಇತ್ತು
ದಂಡಿನಂತೆ ಮತ್ತಷ್ಟು ಇರುವೆಗಳು
ಕಪ್ಪನೆಯ ಹೊಳೆಯಂತೆ ಮೂಡಿ ಬಂದಿತ್ತು
ಕಣ್ಣಿಗೆ ತಣ್ಣನೆಯ ಜೊಂಪು ಹತ್ತಿತ್ತು
ಮತ್ತು ಮಲಗಿಬಿಟ್ಟಿತ್ತು
ಸವಿದ ಸವಿಗೆ ಬಾಯೆಲ್ಲಾ ಬೆಲ್ಲವಾಗಿತ್ತು
ಈಗ ಇರುವೆ ಕಣ್ಣಿಗೂ ದಾಳಿಯಿಟ್ಟಿತ್ತು
ಕಣ್ಣುಗೋ ನಿದ್ದೆ
ಎಚ್ಚರಗೊಂಡಾಗ
ಕಣ್ಣ ಸುತ್ತಾ ಕಪ್ಪು ಹಾವಳಿ, ತುರಿಕೆ, ಚುಚ್ಚುವಿಕೆ
ಸವಿಯಾದ ಸಕ್ಕರೆಯೂ ಮೆತ್ತುಕೊಂಡಿತ್ತು
ಬೇಡವೆಂದೆಣಿಸಿದ ಸಕ್ಕರೆ
ಅಂಗಳದಲ್ಲುಳಿದ 'ಒಂದು ತಪ್ಪು'
ಹೆದರದಿದ್ದರೂ ಸಕ್ಕರೆಯ ಸಿಹಿಗೆ
ಹೆದರಬೇಕು ಅದರ ಸೆಳೆತಕೆ
ನಮ್ಮ ದೌರ್ಬಲ್ಯವೆಂಬ ಸಕ್ಕರೆಗೆ
ಮುತ್ತುಗೆಗಳು ಜೋರೆ!
ದೌರ್ಬಲ್ಯಗಳ ಕಡೆಗಣಿಸಬಾರದು
ಸರಿಯಾದ ಸ್ಥಳದೊಳಿಟ್ಟು ಸರಿಯಬೇಕು
ಇಲ್ಲವೇ ಕಳೆದುಬಿಡಬೇಕು
ಜೊತೆಯಲ್ಲಿಟ್ಟುಕೊಳ್ಳದೆ ಈ ಸಾಂಕ್ರಾಮಿಕ ಸವಿಯ!
16/03/2015
No comments:
Post a Comment