Saturday 13 December 2014

ಕವನ

ಇಲ್ಲದ್ದರ ನಡುವೆ......




ಭಾವವಿಲ್ಲದ ಸಾಲು
ಪದಗಳಷ್ಟೇ;
ಉಸಿರಿಲ್ಲದ
ಸುಂದರ ಕೊಳಲಂತೆ!

ಕಾಮನೆಗಳಿಲ್ಲದ ಕಣ್ಣು
ನೋಟವಷ್ಟೇ;
ಬೆಳಕಿಲ್ಲದ
ಭವ್ಯ ಮಹಲಂತೆ!

ಮೌನವಿಲ್ಲದ ಮಾತು
ಗದ್ದಲವಷ್ಟೇ;
ಬಂಗಾರ ಕಳೆದ
ಬೆಳ್ಳಿಯಂತೆ!

ಗೀತೆಯಿಲ್ಲದ ಮನವು
ಕ್ಷೋಭೆಗಳಷ್ಟೇ;
ಸ್ವರಗಳೇ ಇಲ್ಲದ
ಸಂಗೀತದಂತೆ!

ನೀನಿಲ್ಲದ ಬದುಕು
ಜೀವನವಷ್ಟೇ;
ಸಕ್ಕರೆಯಿಲ್ಲದ
ತಿಳಿ ಹಾಲಿನಂತೆ!

ಪದ ಗೀತೆಯಿಲ್ಲದ ಬದುಕು
ಭಾವವಿಲ್ಲದ ಸಂಭಾಷಣೆಯಷ್ಟೇ;
ಮೌನ, ಕಾಮನೆ, ಕೊನೆಗೆ ಗದ್ದಲವೂ ಇಲ್ಲದ
ರುದ್ರನಾಟಕದ ತೆರೆ ಬಿದ್ದ ನಿರ್ಜನ ರಂಗಮಂದಿರದಂತೆ!

13/12/2014

No comments:

Post a Comment