Friday, 18 July 2014

ಕವನ

ಬದುಕು,,,


ಬದುಕು ಒಮ್ಮೊಮ್ಮೆ ಹೀಗೆಯೆ
ಮಿಂಚು ಮಳೆ!
ಬರಡು ಹೃದಯ ಬೆಂಕಿಯಲಿ ಬೇಯ್ವ ದುರಂತ!

ಮಳೆಯಾಸರೆಯ ಆಸೆ ಇದ್ದ ಮನಕೆ 
ಮೋಡದ ಮರೆಯ ಬೆಳ್ಳಿ
ಅಂಬರದಿಂದಿಳಿದು ನೇರ ಎದೆ ಸೀಳೋ 
ಅಂಬುವೇ ಆದರೂ
ಮೌನದಿ ಸಹಿಸೋ ಹಂತ!

ಜೀವನವಿದು ಸುಲಭಕೆ ಕೊನೆಗೊಳ್ಳದ ಹೆದ್ದಾರಿ
ಆಗಾಗ ಈ ಕವಲುಗಳೋ 
ಒಮ್ಮೆಲೇ ದಿಗ್ಭ್ರಮೆಗೊಳಿಸಿರಲು

ಕಾಲನ ಕೈಯೊಳು ತೂಗೋ 
ತೊಟ್ಟಿಲ ಮರಿಗಳು ನಾವು
ತೂಗಬೇಕು ಇನ್ನೂ ತೂಗಿಕೊಳ್ಳಬೇಕು 
ನಮ್ಮ ನಮ್ಮ ತೊಟ್ಟಿಲುಗಳ

ಬೆಳೆದು ನಿಲ್ಲುವವರೆಗೂ
ಕತ್ತಲು ಕಳೆವವರೆಗೂ
ಮಿಂಚು ಮರೆಯಾಗೋವರೆಗೂ
ತತ್ತರಿಸದೆ,,
ಹೀಗೆಯೇ ಬಂಡೆ ಕಲ್ಲುಗಳಂತೆ,,!! 

ಮಿಂಚಿಗೆ ಮಿಂಚಾಗಿ, ಬಂಡೆಗೆ ಬಂದೆಯಾಗಿ
ಮಳೆಗೆ ಮಳೆಯಾಗಿ, ಗಾಳಿಗೆ ಬಿರುಗಾಳಿಯಾಗಿ
ಹಾಗೆಯೇ ಹೂವಿಗೆ ಹೂವೇ ಆಗಿ,,,,

ಮನವಿನ್ನೂ ಹದಗೊಳ್ಳಬೇಕಿದೆ
ಈ ಮಳೆ, ಮಿಂಚು, ಮೋಡಗಳ ಬಯಕೆಗಳಲಿ
ಬಾಯಿಬಿಟ್ಟ ಬರಡು ಬಾವಿಯ ಬಾಯಾರಿಕೆಗಳಲಿ

ಈ ಹದಗಳಲಿ 
ಟಿಸಿಲೊಡೆವ ಚಿಗುರ ಕನವರಿಕೆಗಳಲಿ,,

ಚಿತ್ರ ಕೃಪೆ; ಅಂತರ್ಜಾಲ


ದಿವ್ಯ ಆಂಜನಪ್ಪ
15/07/2014

No comments:

Post a Comment