Friday 4 July 2014



ಆ ನೀರ ಸೆಳೆವು
ಅದೆಲ್ಲೋ ಇರುವಾಗ
ಅದರ ಮೇಲೊಂದು
ಕಾಗದದ ದೋಣಿಯಿಟ್ಟು
ತನ್ನತ್ತ ಬಾರದೀ ದೋಣಿಯೆಂದು
ಮರುಗುವ ಮನವಿದು ಮಗುವಂತೆ,,,,

04/07/2014
___________________________

ಒಂದು ಕ್ಷಣದ ನಿರ್ಧಾರ ತಬ್ಬಿಬ್ಬಾದರೆ
ಕಳೆದ ಹೊತ್ತೊ, ಒಡೆದ ಮುತ್ತೋ
ಆಗಿಬಿಡುವುದು; ಆದರೂ
ನಿರ್ಧರಿತ ವಿಚಾರಗಳಲಿ ವಿಚಲಿತಗಳಿಲ್ಲದಿರೆ
ಒಡೆದ ಹೊತ್ತು ದ್ವಿಗುಣ, ಕಳೆದ ಮುತ್ತೂ!!

__________________

ಕವನಗಳು
ಭರವಸೆಗಳೂ ಅಲ್ಲ,
ನಿರಾಸೆಯೂ ಅಲ್ಲ,
ಸಂಚಾರಿ ಆಶಯಗಳು,,
ಎನ್ನಬಹುದೆನೋ,,,,

____________________

ಮೈಮೇಲೆ ಬಿದ್ದ ಛಾಯೆಗೆ
ಬೆಚ್ಚಿ ಎಚ್ಚರಾಗಿದ್ದೆ
ನೀನಾಗಲೇ ಬಂದುಬಿಟ್ಟೆಯೆಂದು

ನನಗಿನ್ನು ಸಮಯ ಹೊಂದಿಸಿ
ಅಡುಗೆಗಿಳಿವ ಕಾಲ,
ಎದುರು ಮಾತುಗಳನು ತೊರೆಯೊ ಕಾಲ,
ಜಿಪುಣತನದಿ ಕೂಡಿಟ್ಟು ಜೀವಿಸೊ ಕಾಲವೆಂದು,

ಅರೇ ಇದು ಕನಸೇ,
ಅದು ಮರದ ನೆರಳೇ??
ಬಿಡು ಇನ್ನೂ ಸಮಯವಿದೆ ಮುಂಜಾವಿಗೆ
ನನಗೋ ಗಾಢ ನಿದ್ದೆ,,,, ,,,,, ,,,,,

04/07/2014

____________________________

ಅರ್ಥವಾಗದ ಭಾವಗಳೂ ರೂಪಕಗಳೂ
ನನ್ನನಿನ್ನೂ ಬೆಚ್ಚಿಸಿರಲು,,
ನಾನೋ ಅದ್ಯಾವುದೋ ಕುಗ್ರಾಮದ
ಜನಪದ ಹಾಡುಗಾರ್ತಿ;
ಉರು ಹೊಡೆದು ಗೀಗೀ ಪದ ಸಾಲನಷ್ಟೇ ಹಾಡಬಲ್ಲೆ
ನಿನ್ನಂತ ಕಲೆಗಾರಳಲ್ಲ ನಾ;
ಹೀಗೆಲ್ಲಾ ಬೆರಳಲೇ ನನ್ನೀ ತಲೆಯೊಳ ಮಸ್ತಕವ
ಹುರಿದು ಮುಕ್ಕಿಬಿಡುವೆಯಲ್ಲಾ?
ನನಗೀಗಲೇ ತಲೆಕೂದಲು ನೆರೆತಂತೆ ಒಮ್ಮೆ ಭಾಸವಾಗಿ,
ಮತ್ತೊಮ್ಮೆ ನಿನಗಿಂತ ದಶಕಕೂ ಮುಂದಿನವಳಂತೆ ಅನಿಸುವುದು,,
ನಾನಿನ್ನೂ ಪ್ರಾಥಮಿಕ, ನಿನ್ನದೋ ಪ್ರೌಢ!!
_____________________

ಅರ್ಥವಿಲ್ಲದ ಎಷ್ಟೋ ಕವನಗಳ
ನಾನೂ ಗೀಚಿಬಿಟ್ಟೆ;
ನಿನ್ನ ಅದರೊಳು ಹುಡುಕುತ,
ಹಾಗೇ ಸುಮ್ಮನೆಂದುಲಿಯುತ,,,

___________________

ಸಾವಿರ ಕಣ್ಣುಗಳು
ಅದ್ಭುತ ಬಣ್ಣಗಳು
ಅಗತ್ಯಕ್ಕಿಂತ ಹೆಚ್ಚೇ ತೋರು
ಖುಷಿಯ ಗರಿಬಿಚ್ಚಲು
ನೋಡಲೆರಡು ಕಣ್ಣು ಸಾಲದಷ್ಟೇ!
ಸಣ್ಣ ಗುಬ್ಬಿಯ ಕನಸೊಂದನೂ ಭರಿಸಿಕೊಳ್ಳಲಾರದು,
ತನ್ನ ಸೊಬಗಿನ ಭಾರವೇ ನೆಲ ಕಚ್ಚಿಸಿದೆ
ಆಗಸವನೆಂದೂ ಮುಟ್ಟದಂತೆ,,
ಅದಕ್ಕೂ ಹಾರಲಾರದ ಕನಸುಗಳಿದ್ದು
ಕೊರಗಿಬಿಟ್ಟಿವೆಯಂತೆ,,

ಅದೋ ಆ ಸುಂದರ ನವಿಲ
ನೆಲದಲೇ ಕುಣಿವ ಅನಿವಾರ್ಯ
ನಮ್ಮ ಮನರಂಜನೆ!

02/07/2014

_________________

ಒಮ್ಮೆ,,,

ಬೀಸೋ ಗಾಳಿಗೋ
ಸುರಿವ ಮಳೆಗೋ
ಗುಡುಗೊ ಮುಗಿಲಿಗೋ
ಬೆಚ್ಚದ,
ಅಚಲ ಮೇರು ಗಿರಿಯೇ
ಆಗಿಬಿಡಲಿ
ಈ ಹೃದಯವೊಮ್ಮೆ,,
ನಂತರವೆಲ್ಲಾ
ಸೊನೆ,
ತಂಗಾಳಿ,
ಕಾಮನ ಬಿಲ್ಲೆಂದು
ಕನಸು ಹೆಣೆದುಬಿಡುವೆನು,,, !!

30/06/2014

No comments:

Post a Comment