Monday, 28 July 2014

ಮನದ ಮಾತು

ಙ್ಞಾನೋದಯ,,,, ;-) 



ಇಂದು ಬೆಳಗ್ಗೆ ಎಚ್ಚರವಾಗಿ ಕಣ್ಬಿಟ್ಟಾಗ, ಏಕೋ ಏನೋ ಗೊತ್ತಿಲ್ಲ ಅಳು ಉಮ್ಮಳಿಸಿ ಬಂತು. ನನಗೇಕೆ ಅಳು ಬರ್ತಾ ಇದೆ ಅದೂ ಬೆಳಬೆಳಗ್ಗೆ?! ನನಗೇ ಗೊಂದಲ, ಕಾರಣವೂ ತಿಳಿಯುತ್ತಿಲ್ಲ.

ಹೌದು, ಮನಸ್ಸು ತೀರ ನೋವಿನಲ್ಲಿತ್ತು. ಆದರೆ ನಿದ್ದೆಯಿಂದೆದ್ದ ಮನಕ್ಕೆ ಯಾವುದಾ ನೋವು ಎಂದೂ ತಿಳಿಯಲಿಲ್ಲ. ಸುಮ್ಮನೆ ಹಾಗೆಯೇ ಮಲಗಿ ಹಿಂದಿನ ದಿನದ ವಿಚಾರಗಳನ್ನೆಲ್ಲಾ ನೆನಪು ಮಾಡಿಕೊಳ್ಳ ತೊಡಗಿದೆ. ದಿನವೆಲ್ಲಾ ಚೆನ್ನಾಗಿಯೇ ಇತ್ತು, ಯಾರೂ ನನ್ನ ಬೈದಿರಲಿಲ್ಲ, ನಾನೂ ಯಾರಿಗೂ ಬೈದಿರಲಿಲ್ಲ, ಯಾವ ಜಗಳವೂ ಇರ್ಲಿಲ್ಲ. ಹೀಗಿದ್ದೂ ಯಾಕೆ ಈ ದುಃಖ?! ಎಂದು ಯೋಚನೆಯಾಯ್ತು,, ಹಾ,, ದಿನದ ಕೊನೆಯಲ್ಲಿ ಮಲಗುವ ಮುನ್ನ ನಾನೊಂದು ಸಿನೆಮಾವನ್ನು ಅರ್ಧ ನೋಡಿ ಮಲಗಿದ್ದೆ. ಮಿಕ್ಕದ್ದು ನಾಳೆ ನೋಡಿದರಾಯ್ತು ಎಂದು. ಸಿನೆಮಾ ''ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ". ಸಿನೆಮಾ 'ಸೂಪರ್' ಅಂತ ಎರಡನೇ ಬಾರಿ ನೋಡೋ ಆಸೆಯಾಗಿತ್ತು. ಎಲ್ಲಾ ಡೈಲಾಗ್ನೂ ಸಕ್ಕತ್ ಎಂಜಾಯ್ ಮಾಡ್ತಾ ಇದ್ದೆ. ನನ್ನದು ಮೊದಲೇ ಆಳವಾದ 'ಇನ್ವಾಲ್ಮೆಂಟ್!' ಬೇರೆ ;-) . ಹಾಗಾಗಿ ಹೀಗಾಗಿರಬಹುದೇನೋ ಅಂತ ಅಂದ್ಕೊಂಡೆ.

ಸಿನೆಮಾ ನಿಲ್ಲಿಸಿದಾಗ ಹೀರೋ ತನ್ನ ನೊಂದ ಲವ್ ಸ್ಟೋರಿಯನ್ನು ಹಿರೋಯಿನ್ಗೆ ಹೇಳ್ತಾ ಇದ್ದ,,, ''ಒಗ್ಗರಣೆಗೆ ಕರಿಬೇವ್ನ ಹಾಕಿದ ಸೌಂಡಂತೆ ಅವಳು ಬಂದ್ಲು'' ಎನ್ನುವಲ್ಲಿಗೆ ನಿಲ್ಲಿಸಿ ಮಲಗಿದ್ದೆ. ಅದೇ ಫೀಲ್ನಲ್ಲಿ ಮಲಗಿದ್ದು ಹೀಗೆ ದುಃಖ ಆಗಿದೆ ಅಂತ ಬೆಳ್ಳಂಬೆಳಗ್ಗೆ ಙ್ಜಾನೋದಯವಾಯ್ತು.

''ಕಾರಣ ಗೂತ್ತಾದ ಮೇಲೆ ಪರಿಹಾರ ಹುಡುಕಲ್ವಾ ನಾನು?!'', ಅಂದ್ಕೊಂಡು ಸರಿ ಇವತ್ ರಾತ್ರಿ ಪೂರ್ತಿ ಸಿನೆಮಾ ನೋಡಿ ಖುಷ್ಯಾಗ್ ಮಲಗೋಣ ಎಲ್ಲಾ ಸರಿ ಹೋಗುತ್ತೆ ಅಂದ್ಕೊಂಡು ಕೆಲಸಕ್ಕೆ ರೆಡಿಯಾದೆ.. ಈ ದಿನ ನಿಜವಾಗ್ಲೂ ಫುಲ್ ಖುಷ್ಯಾಗೇ ಇತ್ತು...

ಇದನ್ನೆಲ್ಲಾ ಯಾಕೆ ಹೇಳೋ ಪ್ರಯತ್ನ ಅಂತ ಅನಿಸ್ಬೋದು ನಿಮಗೆ. ''ನಮ್ಮ ಮನಸ್ಸನ್ನು ನಾವು ನಡೆಸಬಹುದು, ದುಃಖದಿಂದ ಸಂತಸದೆಡೆಗೆ''. ಇದು ಸಾಧ್ಯವೆಂದು ಹೇಳಲು 'ಒಂದು ಫ್ರೆಶ್' ಉದಾಹರಣೆ!!,,,,,,,

ಇದೊಂದು ಸಣ್ಣ ನೋವೇ ಇರಬಹುದು,, ಅದರ ಅನ್ವಯ ದೊಡ್ಡ ಆಘಾತಗಳಿಗೂ ತರಬಹುದು,, ಆದರಲ್ಲಿ ಮನಸ್ಸನ್ನು ನಡೆಸುವ ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕು, ಈ ಕ್ರಿಯೆಯಲ್ಲಿ ಸೋತಾಗ, ಆ ಸೋಲನ್ನೇ ಸೋಮಾರಿತನವಾಗಿ ಮುಂದುವರೆಸದೆ ಕಾರ್ಯಪ್ರವೃತ್ತರಾದರೆ ಖಂಡಿತ ಎಲ್ಲವೂ ಸಾಧ್ಯ.

ಮನವು ಒಮ್ಮೊಮ್ಮೆ ಅಸಾಧ್ಯ!

.......... ಎನ್ನುವುದು ನನ್ನ ಮಾತು,,, :-)

28/07/2014

ಕವನ

ಹೆಣ್ಣಿನೊಳ ಆ 'ಶೂರ್ಪಣಖಿ'


ಈ ಸೌಂದರ್ಯ
ಈ ಮಾದಕತೆ
ಈ ಯೌವ್ವನ,,
ಇದ್ದಷ್ಟು ಕಾಲವಷ್ಟೇ!

ಅದ ತಿಳಿದೋ ತಿಳಿಯದೆಯೋ
ಅವುಗಳನ್ನೇ ರಮಿಸಿ
ಅಹಂಮ್ಮಿನ ಎದೆಗೊರಗಿ
ಕಣ್ಣಲ್ಲೊಂದು ಆಸೆ
ಹೃದಯದಲ್ಲೊಂದು ಬಯಕೆ!

ಎಷ್ಟು ಮೋಹಕತೆಯೋ ಏನೋ
ಮನದ ವಿಕೃತಿಯೊಂದೇ ಸಾಕಿತ್ತು
ಹೆಣ್ಣು;
ಸೌಂದರ್ಯವಿದ್ದೂ ಶೂರ್ಪಣಖಿಯಾಗಲು!

ಪ್ರತಿಯೊಬ್ಬ ಗಂಡಿನಲ್ಲೂ
ಒಬ್ಬ ಯಯಾತಿಯಂತೆ
ಪ್ರತೀ ಹೆಣ್ಣಿನಲ್ಲೂ ಆಗೊಮ್ಮೆ ಈಗೊಮ್ಮೆ
ರಾವಣನ ಸೋದರಿ!

ತಾನೇ ಕಂಡುಕೊಂಡ
ಕೈಗನ್ನಡಿಯ ಸತ್ಯ!
ಒಮ್ಮೊಮ್ಮೆ ಅಷ್ಟೇ
ಹೊಳೆವುದು!

27/07/2014

ಕವನ

ಪ್ರೀತಿ,,,


ಪ್ರೀತಿ ಎಂಬುದು
ಆಸೆಗಳನ್ನು ಮೀರಿದ್ದು
ಪ್ರೀತಿಯೇ ಆಗಿದ್ದರೆ
ಅದು ಕಾಮಕ್ಕೆ ಹೊರತು

ಕಾಮಕ್ಕೆ ವ್ಯಾಪ್ತಿಯುಂಟು
ಪ್ರೀತಿಗಿಲ್ಲ ಯಾವುದೇ ಬೇಲಿ
ಕಳೆದುಕೊಂಡ ಭಾವವೂ ಬಾಧಿಸದು
ಪ್ರೀತಿಗಷ್ಟೇ ನೀ ಸೋತಿದ್ದರೆ,,

ಕಾಮದ ನಶೆಯನ್ನೆಲ್ಲಾ ಪ್ರೀತಿ ಎನ್ನದಿರು
ಪ್ರೀತಿಗಿರುವುದು ಬರೀ ಎಚ್ಚರಗಳು
ಕಾಳಜಿ, ಮಮತೆ, ತ್ಯಾಗಗಳು
ತಲೆ ಚಿಟ್ಟು ಹಿಡಿಸೋ ಕಾಮನೆಗಳಲ್ಲ

ಪ್ರೀತಿಯೊಳು ನೀನಿಂತು ಅರಸದಿರು
ದೂರದ ಮೋಹ ತೀರಗಳಲಿ
ಪ್ರೀತಿಯೇ ನಿನ್ನೆದೆಯಂತೆ
ಅದರೊಳು ನೀ ನೆಟ್ಟ ಹೂ
ಶಾಂತಿ ಕಂಪ ಬೀರುವಂತೆ,,

ನಶೆಯಲ್ಲವೋ ಗೆಳೆಯ
ಪ್ರೀತಿಯೊಬ್ಬ ತಾಯಿಯಂತೆ!

27/07/2014

Sunday, 27 July 2014


ಬಹುಶಃ
ಎಲ್ಲವ ಕಳೆಯುವವರೆಗೂ
ಪಡೆದುದರ
ಅರಿವಾಗದೇನೋ
ಮನಕೆ..
ಈ ಕೊಂಕು ಮನಕೆ

___________________

ಭಾವಕ್ಕೊಂದು ಮಾತಿದೆ
ನೋವಿಗೊಂದು ಭಾಷೆಯಿದೆ
ಮೂಕ ಪ್ರೇಮಿ ನಾನು
ನಕ್ಕರೂ ನಾದ, ಅತ್ತರೂ ಲಯ
ಇನ್ನೇನಿದೆ ಇದಕೂ ಮೀರಿ ಸಂತಸ
ಪ್ರೀತಿಯೆಂಬ ಕನಸೇ ಕೂಸು!

26/07/2014

ಕವನ

ಇವನು ಕೃಷ್ಣನಲ್ಲ,,,

ನಿನ್ನದು ಚೆಂದವಾದರೆ
ನನ್ನದು ಸೊಬಗು
ನಿನ್ನದು ಮುಗುಳ್ನಗೆಯಾದರೆ
ನನ್ನದು ಮುಕ್ತ ನಗು

ನೀನು ಕಂಡು ಬಿಟ್ಟು ಹೋದೆ
ನಾನು ಕಾಣದೆ ಕಾದು ನಿಂತೆ
ನೀನ್ಯಾರಿಗೊ ರುಕ್ಮಿಣಿ
ನಾನೋ ನೊಂದ ರಾಧೆ
ಇವನೊಬ್ಬ ಬೇಟದ ಜೀವ

ನಿನ್ನ ಹೋಗಬಿಟ್ಟು, ನನ್ನ ಕಾಯಬಿಟ್ಟ
ಮಧ್ಯೆ ಮೌನವಹಿಸಿದ್ದಾನೆ
ಸುಮ್ಮನಿರು ಗೆಳತಿ,
ನಿನಗೊಬ್ಬ ಶ್ರೀ ಕೃಷ್ಣ ರಾಜನ
ನನಗೊಬ್ಬ ಕಳ್ಳ ಕೃಷ್ಣನ
ಹುಡುಕಿ ಕೊಡುವನೇನೋ ಇವನು

ಬಿಂಕವೆಂಬ ಮಡಿಕೆಯ ಒಡೆದು
ಸಲುಗೆಯೆಂಬ ಭಾವ ಸುಲಿದು
ಸುಲಭಕೆ ಎನ್ನ ಮನವ
ಇವನೆಡೆಗೆ ಹರಿಸಿಕೊಂಡ
ಈ ಕಲಿಯ ಪಶ್ಚಾತ್ತಾಪಕೆ!
ಗಳಿಸಿ ಅಳಿಸಿದ ಖುಷಿಯ ಕಾಲಕೆ!

26/07/2014
'ಭೀಮನ ಅಮಾವಾಸ್ಯೆ'ಯ ದಿನ;

ಮಗಳು ಆಫೀಸಿನಿಂದ ಮನೆಗೆ ಬೇಗ ಬಂದಿದ್ದಾಳೆ, ಬಂದವಳೇ ಗಮನಿಸಿದ್ದು ದೇವರು ಮನೆಯಲ್ಲಿ ಉರಿಯುತ್ತಿದ್ದ ದೀಪಗಳು.

ಓಹ್!,, ಅಂದುಕೊಂಡಳು.
ಬೆನ್ ಹಿಂದೆಯೇ ಬರುತ್ತಿದ್ದ ಅಪ್ಪನಿಗೆ ಮುಖಮಾಡಿ ಕೇಳಿದಳು,,
ಕೆಣಕುತ್ತ,,,

"ಆಯ್ತಾ ಪೂಜೆ?"  ,,, ;-)

ಅಪ್ಪ ಕೈಮುಗಿಯುತ್ತ, "ಹ್ಮೂ,, ನೋಡಲ್ಲಿ ದೇವರು ಮನೆಯಲ್ಲಿ ದೀಪಗಳು ಉರಿತಿವೆ!! :-) ಎಂದರು.

"ಅದಲ್ಲಪ್ಪಾ,, ನಿಂಗ್ ಪೂಜೆ ಆಯ್ತಾ? ಅಂದೆ"  ,,

"ಓ,, ನಾನ್ ಹುಟ್ದಾಗಿಂದನೂ ಪೂಜೆ ಆಗ್ತಾನೇ ಇದೆ"  ,,

" ಆ,,!! ನೀನ್ ಹುಟ್ದಾಗ್ಲೇ ಮದ್ವೆ ಆಗ್ಬಿಟ್ಟಿದ್ದಾ,,,,,,,?!! :-O
,,,,,,,,,,,,,,ಕಳ್ಳ ನೀನು!!"  ;-) :-)

:-D

ಓಡುವ ಪ್ರಿಯ,,,, 

ಓಡುವ ಮೋಡವು 
ಮೋಹಕವೇ
ಓಡೋ ನದಿಯೂ
ಹಾರೋ ಹಕ್ಕಿಯೂ
ಇವುಗಳ ಬಯಸಿ
ಕೈ ಬೀಸಿ 
ಕರೆವ ಹಂಬಲವೂ
ಹೆಚ್ಚು ಪ್ರಿಯವೇ,

ಆದರೇಕೋ 
ಕೈ ಕೊಡವಿ ಓಡುವ
ಪ್ರಿಯನ
ಹಂಬಲಿಸೊ
ಹುಂಬತನವೇಕೋ
ಒಲಿದು ಬರಲಿಲ್ಲ,
ಇದನು ನೀ ಅಹಂ ಎಂದರೆ
ಬಿಡು ನನಗೀಗ 
ಒಂಟಿತನವು

ಅಭ್ಯಾಸ!!! 

24/07/2014

_________________

ಅನುದಿನವೂ ನಿನ್ನನೇ 
ಕನಸಾಗಿಸಲು
ದಿನದ ದಣಿವೆಲ್ಲಾ 
ಮರೆಯಾಗಿ
ಹೊಸ ಹುಮ್ಮಸ್ಸನ್ನು
ತುಂಬಿಕೊಳ್ಳತ್ತಿರೆ,
ನೀನೊ ನನಗೊಂದು 
ಸುಖನಿದ್ರೆಯಂತೆ!,
ಕಣ್ಣಿಗೆ ನಿಲುಕದೆ, 
ಕನಸಿಗೆ ತೂರಿ
ಮನಸಿಗೆ ಇನ್ನಿಲ್ಲದಂತೆ 
ಹತ್ತಿರಾದೆ,,
ಮನದ ಭಾವಕ್ಕೊಂದು

ರೂಪವಾದೆ,,!

________________

ಆಷಾಢ ಗಾಳಿಗೆ
ಒಳಗೊಳಗೇ ಬೆಂಕಿ ಹಚ್ಚಿಸುವ
ಹುನ್ನಾರ ಗೊತ್ತಿದೆ;
ಅದಕ್ಕೇ ಈಗೀಗ 
ಎಲ್ಲೆಲ್ಲೂ ಜಟಾಪಟಿ!
ಕಾರಣಗಳೂ
ಆ ಅದೇ ಕಿಚ್ಚುಗಳು,,!

23/07/2014

Wednesday, 23 July 2014

ಚುಕ್ಕಿ ಚಂದ್ರಮರೆಲ್ಲಾ
ನಾಚುತ್ತಿದ್ದಾರೆ
ನನ್ನ ಕಳ್ಳಾಟಕ್ಕೆ;
ಒಮ್ಮೆ ಹೊಳೆದು, ಚುಕ್ಕಿ ಮಿಂಚಿ
ಮತ್ತೆ ಮತ್ತೆ ಹುಣ್ಣಿಮೆಯ ಸಾಲು,
ಅಮಾವಾಸ್ಯೆಯ ವಿರಹವನೂ
ದೂಡಿರುವೆ,
ಹಚ್ಚಿ ನಿನ್ನ ನೆನಪ,,!

23/07/2014
ದೇವ ಲೋಕದಿಂದ ವಿಶೇಷ ಸೂಚನೆ
ದೇವೇಂದ್ರ;
ಭೂಲೋಕ ಕವಿ ಜನರ ಹೊರತು
ಮಿಕ್ಕೆಲ್ಲಾ ಕವಿಯ ನಕಲುಗಳು
ಸ್ವರ್ಗಕ್ಕೆ ಅಡಿಯಿಡಲನುಮತಿ ಇಲ್ಲ
ಕಾರಣ,
ನಕಲಿ ಕವಿಗಳು
ಸುಳ್ಳಾಡೋ ಕವಿಗಳ ಮೀರಿ
ಸುಳ್ಳುಲಿವ ಪೈಪೋಟಿಯಲ್ಲಿದ್ದಾರೆ,, !
ಕಂಗಾಲಾದ ಕವಿಗಳು
ನರಕವನ್ನು ಸ್ವರ್ಗವೆಂದರೆ,
ನಕಲಿ ಕವಿಗಳು ದೇವೇಂದ್ರನನ್ನೇ ಯಮನೆಂದು ಹೇಳಿ
ಯಮನನ್ನು ಅಲ್ಲಿ ಖುಷಿಪಡಿಸುತ್ತಿದ್ದಾರೆ!!

(ಅದರಲ್ಲೂ ಆ ದಿವ್ಯ! ;-) :-)  )

22/07/2014

_____________

ಮನಸ್ಸು
ಪ್ರೀತಿಸುವವರೆಗೂ
ಮುನಿಸುತ್ತದೆ,
ಪ್ರೀತಿಸಿದ ಮೇಲೆ
ಕೊಸರುತ್ತದೆ!
ಅದು ಅವನದು,
ಮುನಿಸಿ,ಕೊಸರಿ
ಮತ್ತೂ ಉಸಿರಾಡಿದೆ
ಈ ಎದೆಯೊಳು,, !

22/07/2014

______________

ತಡವಿದ್ದಷ್ಟೇ ಹೃದಯ
ಎಂಬ ಭ್ರಮೆಯಾಯ್ತು,

ಪ್ರೀತಿ ನೀನದೋ ವಿಶಾಲ
ನಿನ್ನ ಕಿರು ಬೆರಳಿನುಗುರಷ್ಟೇ
ತರಚಿದ್ದು ಇನ್ನೂ!

ಬಿಡು, ನೀ
ಸನಿಹವಿರುವೆ
ಎಂಬ ಖಾತ್ರಿಯಾಯ್ತು!

21/07/2014

ಕವನ

ಕವನ,,



ಕಡಲ ಕಲಕಿದರೆ ಸುನಾಮಿ
ಭಾವ ಕದಲಿದರೆ ಬೇನಾಮಿ

ಅನಾಥವದೋ ಭಾವಗಳು,
ಕಡಲೊಡಲ ಮುತ್ತೆಲ್ಲಾ
ಅಲೆಯೊಡಪ್ಪಳಿಸೊ ಕಲ್ಗಳೊ
ಕಣ್, ಕಿವಿ, ಮೂಗ್ಗಳಿಗೆ ಘಾಸಿ,,

ಕಡೆ ಕೈ ತುದಿಯೊಳೇ ನಲಿದಿದ್ದರೂ
ಹೃದಯದಾಳದ ಮಧುರ ಗೀತೆ
ಅರಿತು ಅಂಗೈಲಾಡಿಸೋ ಪೋರ
ಅರಿಯದೇ ಕಂಗಾಲಾದ ಕವಿತೆ!

ಪುಟ್ಟಿಸಿದ ದೇವ ಹುಲ್ಲು ಮೇಯಿಸನೇ?!
ಕೈಯೊಳ ಕವನ ಆದರೂ ಆದೀತು ಮುಂದೊಮ್ಮೆ ದವನ!!

20/07/2014

ಮನದ ಮಾತು

ಎಲ್ಲೋ ಕೇಳಿದ್ದು, "ಬೆಕ್ಕಿಗೆ ಒಂಭತ್ತು ಜೀವ" ಅಂತ. ಇರಬಹುದೇನೋ ಸಾವಿನ ಅಷ್ಟು ಪ್ರಯತ್ನಗಳ ನಂತರವೂ ಒಂಭತ್ತನೇಯ ಬಾರಿಯೂ ಜೀವ ಬದುಕುಳಿವುದು. ಇದನ್ನು "ಛಲ''ವೆನ್ನಬಹುದೇನೋ... :-)
ಮಹಾನ್ ಬುದ್ದಿಜೀವಿಯಾದ ಮನುಷ್ಯನು ಅಲ್ಪಾಯುಷಿ ಈ ಪ್ರಾಣಿಗಳಿಂದ ಜೀವನಪರ್ಯಂತ ಕಲಿಯುವುದಿದೆ.
ಪ್ರವಾಹದೆದುರಿನ ಈಜು , ತಿರಸ್ಕಾರಗಳ ನಂತರದ ಬದುಕು, ಹೀಗೆ ಮತ್ತೆ ಮತ್ತೆ ಬದುಕುವುದು ಒಂದು ರೋಚಕವೇ ಸರಿ

ಸೋಲಬಹುದು, ನಿಲ್ಲಬಾರದು,,, :-)

20/07/2014


ದೂರಲು
ದೂರ ಮಾಡಲು
ಪ್ರೀತಿಗೇನು ರೀತಿಯೇ ಇಲ್ಲವೆ?

ಕಾರಣವಿಲ್ಲದೆ
ಇಲ್ಲ,
ಇಲ್ಲದ ಕಾರಣಗಳ ನೆಪ ಮಾಡಿ
ಸತಾಯಿಸುವ ಕಸರತ್ತಿಗೆ
ಮತ್ತೂ ಪ್ರೀತಿಯೇ ಬಹುಮಾನವೇ?!

___________________________________

'ಟ್ರೈನ್ ಹೋದ ಮೇಲೆ ಟಿಕೇಟ್ ತಗೊಳ್ಳೋದು'
ಕೇಳಿ ಮಜವೆನಿಸಿತ್ತು,,

ನಾನೂ ನೋಡೋಣ ಎಂದುಕೊಳ್ಳುತ್ತಿದ್ದೆ
ನನ್ನ ಸರದಿ ಬಂದಾಗ,
ಟಿಕೇಟ್ ಕೊಡುವವರೂ
ಅದೇ ಟ್ರೈನ್ ಹತ್ತಿ ಹೋಗಿದ್ದರು!!

ನೆನಪಿಗಾದರೂ ಕಳೆದ ಟ್ರೈನ್ನ ಟಿಕೇಟೂ ಇಲ್ಲವಾಯ್ತು,,,

__________________

ಕಣ್ಣು ಕಟ್ಟಿ
ತಿರುಗಿಸಿ ಬಿಟ್ಟಂತೆ
ಈ ಮನ,
ದಿಕ್ಕಿತ್ತು
ಈಗ ಕಾಣಲೊಲ್ಲದು
ಕೈಯಾಸರೆ ಬೇಡಿದೆ
ಮುಂದಡಿಯಿಡಲು
ಕೈ ನೀಡೆಯಾ ತಂದೆಯೇ,,,,

19/07/2014

Friday, 18 July 2014

ಕವನ

ಬದುಕು,,,


ಬದುಕು ಒಮ್ಮೊಮ್ಮೆ ಹೀಗೆಯೆ
ಮಿಂಚು ಮಳೆ!
ಬರಡು ಹೃದಯ ಬೆಂಕಿಯಲಿ ಬೇಯ್ವ ದುರಂತ!

ಮಳೆಯಾಸರೆಯ ಆಸೆ ಇದ್ದ ಮನಕೆ 
ಮೋಡದ ಮರೆಯ ಬೆಳ್ಳಿ
ಅಂಬರದಿಂದಿಳಿದು ನೇರ ಎದೆ ಸೀಳೋ 
ಅಂಬುವೇ ಆದರೂ
ಮೌನದಿ ಸಹಿಸೋ ಹಂತ!

ಜೀವನವಿದು ಸುಲಭಕೆ ಕೊನೆಗೊಳ್ಳದ ಹೆದ್ದಾರಿ
ಆಗಾಗ ಈ ಕವಲುಗಳೋ 
ಒಮ್ಮೆಲೇ ದಿಗ್ಭ್ರಮೆಗೊಳಿಸಿರಲು

ಕಾಲನ ಕೈಯೊಳು ತೂಗೋ 
ತೊಟ್ಟಿಲ ಮರಿಗಳು ನಾವು
ತೂಗಬೇಕು ಇನ್ನೂ ತೂಗಿಕೊಳ್ಳಬೇಕು 
ನಮ್ಮ ನಮ್ಮ ತೊಟ್ಟಿಲುಗಳ

ಬೆಳೆದು ನಿಲ್ಲುವವರೆಗೂ
ಕತ್ತಲು ಕಳೆವವರೆಗೂ
ಮಿಂಚು ಮರೆಯಾಗೋವರೆಗೂ
ತತ್ತರಿಸದೆ,,
ಹೀಗೆಯೇ ಬಂಡೆ ಕಲ್ಲುಗಳಂತೆ,,!! 

ಮಿಂಚಿಗೆ ಮಿಂಚಾಗಿ, ಬಂಡೆಗೆ ಬಂದೆಯಾಗಿ
ಮಳೆಗೆ ಮಳೆಯಾಗಿ, ಗಾಳಿಗೆ ಬಿರುಗಾಳಿಯಾಗಿ
ಹಾಗೆಯೇ ಹೂವಿಗೆ ಹೂವೇ ಆಗಿ,,,,

ಮನವಿನ್ನೂ ಹದಗೊಳ್ಳಬೇಕಿದೆ
ಈ ಮಳೆ, ಮಿಂಚು, ಮೋಡಗಳ ಬಯಕೆಗಳಲಿ
ಬಾಯಿಬಿಟ್ಟ ಬರಡು ಬಾವಿಯ ಬಾಯಾರಿಕೆಗಳಲಿ

ಈ ಹದಗಳಲಿ 
ಟಿಸಿಲೊಡೆವ ಚಿಗುರ ಕನವರಿಕೆಗಳಲಿ,,

ಚಿತ್ರ ಕೃಪೆ; ಅಂತರ್ಜಾಲ


ದಿವ್ಯ ಆಂಜನಪ್ಪ
15/07/2014
ಸತ್ಯವೆಂಬುದು
ಮರಳೋಳ
ಹೂತ ಅಸ್ತಿ
ಗಾಳಿ
ತೀಡೋವರೆಗೂ
ಗೌಪ್ಯ,,!

__________________

ಕೈಗೆಟುಕಿದ್ದರೆ
ಹೀಗೆ ಕಟ್ಟಿಕೊಳ್ಳುತ್ತಿರಲಿಲ್ಲ
ಕನಸು;
ಇಲ್ಲದ್ದೇ ಬಯಸುವುದು,
ಇಲ್ಲದ್ದೇ ಹಂಬಲಿಸುವುದು
ಆದರೂ
ಸಿಗಲೊಲ್ಲದು
ಬೇಡಿಕೆ ನಿರಂತರ ಕಾಯ್ದಿರಿಸಲು
ಕಾಣೋ ಹಿತವೆಲ್ಲಾ ನಿಜವಲ್ಲಾ,
ಅಹಿತಗಳ ಸುಲಭಕೆ ಹರವಲಾರದು
ಈ ನಿರಾಶ್ರಿತ ಮನ,
ಜಿಗಿಯೊ ಜಿಂಕೆಗೆ
ಕೊಂಬೇ ಅದರ ಗರ್ವ,
ಅಷ್ಟೇ ನಯವಾದ ಚುಕ್ಕಿ
ಮೈಯೆಲ್ಲಾ ಕಣ್ಣಾದ ಭಯವಿದೆ,,
ಓಟ ಬಯಸಿದ್ದು ನಿಜವೇ
ಜೀವನವೆಲ್ಲಾ ಓಟವಾಗುವ ಕಲ್ಪನೆಯಿರಲಿಲ್ಲ,,

_______________


'ನೀ ನನಗಿಷ್ಠ'
ಎಂದು ಹೇಳಿಬಿಡುವುದು
ಅಷ್ಟು ಸುಲಭದ ಮಾತಾಗಿದ್ದರೆ
ಅಷ್ಟೆಲ್ಲಾ ಪ್ರಾಸಬದ್ದ ಆಲಾಪನೆ,
ನಿನ್ನ ಮಳೆಗೋ ಮೋಡಕೋ
ಆಹ್ವಾನಿಸಿ
ಅದರೊಳು ಮಿಂದು
ಶೀತವೇರಿದಂತೆ
ನಶೆಯ ಉಪಮೆಗಳು
,,,,
ಕಾಮನಬಿಲ್ಲೇ,
ತಿರುತಿರುಗಿ ನಿನ್ನಡೆಗೆ
ಮತ್ತೂ ವಾಲುವ ಹಂಬಲವಾದರೂ
ಏಕಿತ್ತು,,
ಹೇಳುವುದು ಅಷ್ಟು ಸುಲಭವಿದ್ದಿದ್ದರೆ,,,

17/07/2014

_____________

ನನಗೂ ಈಗೀಗ
ಕೋಪ ಹೆಚ್ಚು
ಅದಕ್ಕೆ
ಮುಖವು ಸೊಟ್ಟಕೆ
ನಿಮ್ಮವೂ ಬುದ್ದಿ ಅತಿರೇಕ
ಅದಕ್ಕೆ
ತಲೆಯು ಸೊಟ್ಟಗೆ

____________________

ಜೀವನದಿಂದ ಹೀಗೆ ಯಾರೋ
ಹೊರ ನಡೆಯೋ ವಿಚಾರದಲ್ಲಿದ್ದರೆ
ನನಗದರ ಪರಿವೇ ಇರುವುದಿಲ್ಲ;
ಅವರು ಹೊರಟ ಮೇಲಷ್ಟೇ ನನಗೆ ಎಚ್ಚರ
ಕುರುಡು ನಂಬಿಕೆಯೋ ಏನೋ
ಸುಮ್ಮನಿದ್ದುಬಿಡುತ್ತೇನೆ;
ಬಹುಶಃ ಹೊರಟ ಅವರ ಸದ್ದು
ನನ್ನನಷ್ಟು ರೋಧಿಸುವಂತೆ ಮಾಡಿ
ಒಮ್ಮೆಲೇ ಕುಗ್ಗಿಸಿಬಿಡುತ್ತದೆ,
ಸರಿಯೇ ಸದ್ದಿಲ್ಲದೆ ಸರಿವ
ಬಂಧ ಸರದಿಗಳು
ಹೀಗೆಯೇ ಒಂದೊಂದೆ,,
ನಾನೂ ಒಬ್ಬಳೆ ಆಗಲೂ ಈಗಲೂ
ಬಿಡು ಮುಂದೆಯೂ
ವಿಶೇಷವೇನಿದೆ?, ಎಲ್ಲಾ ಹಳೆಯದೇ,,!

16/07/2014

_________________

ಈ ಆಷಾಡ ಗಾಳಿಗೆ
ತಲೆ ನೋವು ತುಂಬಾ
ನೆಗಡಿ ಶೀತದೊಂದಿಗೆ
ದಿನವೂ ಮಳೆಯಲಿ
ನೆನೆಯೋ ವಿರಹಗಳು
ಬರೆಯದ ಕವನಗಳು,,

______________________

ಹದ ತಪ್ಪಿದ ಪದಗಳಲಿ
ಭಾವದುಂಬೋ ಹೆಣಗಾಟ
ಮತ್ತೆ ಜೀವಿಸೋ ಉತ್ಸಾಹ!!

15/07/2014
_________________

ಇಷ್ಟವಿಲ್ಲದ್ದನ್ನು
ಒಪ್ಪಿಸೋ ಪ್ರಯತ್ನವದು
ಒಂದು ರೀತಿಯ
ಹಿಂಸೆಯೇ ಸರಿ;
ಅರಳೋ ಮನವದು
ಪ್ರಫುಲ್ಲವಾಗರಳಲು
ಪ್ರೀತಿಯ ಪೋಷಣೆ,
ಜೊತೆಗೆ
ನಿರ್ದಿಷ್ಟ ಸ್ವಾತಂತ್ರ್ಯವೂ
ಅಗತ್ಯ ಬೇಕಿದೆ
ನಾವು,
ನಮ್ಮವರು
ಎಂಬ ಭ್ರಾಂತಿಗಳಲ್ಲೂ!!

14/07/2014

_____________________

ಮೂರು ದಿನದ ಬದುಕಲಿ
ನೋವಿಗೊಂದಾದರೆ
ರೋದಿಸಲು ಉಳಿದೆರಡು ದಿನಗಳಾಗದಿರಲಿ,
ಪ್ರೀತಿ ತುಂಬಿರಲು ಮನದಲಿ
"ನಗುವೇ ಜೀವನ,,,,,"

____________________

ಕಾಗದದ ದೊಣಿಯಂತೆ
ನನ್ನ ಪ್ರೀತಿ
ನಿನ್ನೆದೆಯ ಸಾಗರಕೆ,

ಸಾಗಬಹುದಿತ್ತು
ನನ್ನಾಸೆಯ ರಭಸಕೆ

ವ್ಯಥೆಯಿಷ್ಟೆ ನಿನ್ನ ನಿಟ್ಟುಸಿರೇ
ಬಿರುಗಾಳಿಯಾದದ್ದು,

ಮುಳುಗೊ ನನ್ನ ಕಾಗದದ ದೊಣಿಯ
ನೀ ಕೈ ಹಿಡಿಯದೆ ಕಾಗದದೊಳೇ ಪ್ರೀತಿಯ ಉಳಿಸಿದ್ದು,,

13/07/2014

___________________

ಅವಳಿಲ್ಲದ ಈ ಹೊತ್ತು
ನನಗಿಲ್ಲಿ ಕವನದ
ಸ್ಫೂರ್ತಿಯೇ ಕಳೆದು
ಹೋದ ಹೊತ್ತು
ತುತ್ತು ತುತ್ತು ಪದ ಮುತ್ತಿಗೂ
ಕನವರಿಸಿ ಅವಳ ನೆನೆದಂತೆ,,!
ಶಪಿಸಿ ಅವಳ ಗತ್ತು,,,

_____________________

ತಪ್ಪು ನಿನ್ನದಲ್ಲದಿರೆ
ಮತ್ಯೇಕೆ ಮರುಗುವೆ
ಮನವೇ,
ಬಿಡು ಅವರವರಂತೆ ಅವರ ಹಾದಿ
ಭೂಮಿಯಿರುವವರೆಗೂ ಗುರುತ್ವಾಕರ್ಷಣೆ ತಪ್ಪಿದಲ್ಲ
ಹೆಣ್ಣಿರುವವರೆಗೂ ಗಂಡಿಗೂ
ಅವರಿಬ್ಬರಿಗೂ ಈ ಪ್ರೀತಿಯ ಆಕರ್ಷಣೆ;
ಸುಮ್ಮನೆ ಹೀಗೆಯೇ ಹರಿದುಬಿಡೋಣ
ಸೇರಲೇಬೇಕಿದ್ದರೆ ಮುಂದೆ ತಿರುವಿರಬಹುದು!!

______________

ಹುಟ್ಟು ಕೋಪಿಷ್ಟೆ
ಎನಿಸಿಕೊಳ್ಳಬಲ್ಲೆ;
ನನಗೆ ದ್ವೇಷಿಸೋ
ಧೈರ್ಯವಿಲ್ಲವೋ,,!

ಯಾರಿಗೂ ತೊಡಕಾಗಿರಲೊಲ್ಲೆ
ಎಲ್ಲವ ಬಿಟ್ಟು ಬಯಲೊಳು
ಒಬ್ಬಳೇ ನಾ ನಿಂತರೂ ಸರಿಯೇ
ತಿರಸ್ಕಾರವ ಸಹಿಸಲಾರೆ ತಂದೆ,,
ಬಯಸದ ಜನರ ಮನದಲಿ ನಿಂದು!!

11/07/2014

Thursday, 10 July 2014

ಕವನ

ಈ ಮಳೆ,,, ;-)

ಈ ಸಂಜೆ ಮಳೆಗೆ
ಮೆದುಗೊಳ್ಳದ ಮನವಿದೆಯೇ?
ದಿಕ್ಕೆಟ್ಟ ಬಯಕೆಗಳ ಕ್ರೊಢೀಕರಣ
ಮಧುರ ಭಾವಗಳ ತೋಂ ತನನ

ನೀರ ಹಬೆಯ ಮಸುಕು ದೃಷ್ಟಿ
ನಿನ್ನ ಕೈಯೊಳೆನ್ನ ಕೈ ಸೇರಿ
ನೀ ದಾಟೋ ಹೆಚ್ಚೆಗಳ
ಅನುಸರಿಸಿ ನಾನೆಡೆವಾಗ
ಭೂಮಿಯಾಚೆಯ ಆ ಲೋಕ
ಅದು ನಮ್ಮಿಬ್ಬರದು ಗೆಳೆಯಾ,

ಮತ್ತೊಮ್ಮೆ ಕಣ್ತುಂಬೋ
ಕನಸ ನೀಡೆಯಾ,
ಹೀಗೊಮ್ಮೆ ಕೈ ನೀಡಿ,,

ಕಾದಿರುವೆ ಭರವಸೆಗಳ ಹೊತ್ತು ತರವ
ನಿನ್ನ ಕಣ್ಣ ಕಾಂತಿಗಾಗಿ,,
ನಿನಗಾಗಿ, ನಿನ್ನ ಪ್ರೀತಿಯಾಸರೆಗಾಗಿ,,,!!

10/07/2014 :-)
ಕಾದ ಕಾತುರ,,,

ಸವಿಯೋ ಸವಿ ಕ್ಷಣಗಳಲಿ
ಸುಮ್ಮನೆ ಕಣ್ಣೀರಾದೆ;
ನಿನ್ನ ಕಾಣೋ ಆತುರದಲ್ಲಿ
ಭ್ರಮೆಗಳಲ್ಲಿ ಮರುಳಾದೆ
ಹಾಲಂತ ಕನಸುಗಳ
ಹೆಪ್ಪಿಟ್ಟ ಕಾರಣಕೆ
ಜರಿಯದಿರು ನನ್ನವನೇ
ನೀ ಬರುವ ಮುನ್ನ
ಗುರಿಯಿಲ್ಲದ ಸೋತ ದಾರಿ
ತುಳಿದೆನೆಂದು,,,

______________________

ಸೋತ ಅಷ್ಟೂ ಹೊತ್ತುಗಳು
ಮೋಸದ ಹೆಜ್ಜೆ ತಿರುವುಗಳು
ನನ್ನನಿನ್ನೂ ಬದುಕುವಂತೆ ಮಾಡಿದ್ದು
ನಿಜವೇ ಆದರೂ ಮತ್ತೂ ಅನಿವಾರ್ಯ,, 

10/07/2014

ಕವನ

ಮೆಚ್ಚಿಸಲು ನಾನ್ಯಾರೋ
ಮೆಚ್ಚಲು ನೀನ್ಯಾರೋ

ಮೆಚ್ಚಿಸಿದವಳೆಲ್ಲೋ,
ಮೆಚ್ಚಿದವನೆಲ್ಲೋ,

ಮೆಚ್ಚಿದವರು ಮೆಚ್ಚಿಕೊಂಡಂತೆ
ಹಚ್ಚಿಕೊಳ್ಳಲಾರದೆ ಉಳಿದಾಗ,

ನನ್ನ ಮೆಚ್ಚಿ ನೀ ಮತ್ತೆ
ಮೆಚ್ಚಿಸಿದವಳ ಮಾತ ಮೆಚ್ಚ,
ನಾನೆಂತು ಮೆಚ್ಚಲಿ ನೀ ಮೆಚ್ಚುವಂತೆ,,!!

09/07/2014


ಅವರ ಪ್ರಿಯ ಸುಳ್ಳು ಮೋಸಗಳು
ಪ್ರೀತಿಯಲಿ ಸಹಿಸುವುದು ಪ್ರಿಯವೆನಿಸಿ
ಹೋದಾಗ;
ಮೋಸವೆಲ್ಲಾ ಪ್ರೀತಿಯೇ,,,

ಇದ ಗೊತ್ತಿದ್ದೂ ಕೊರಗೋ ಮನಕೆ
ನಿಜ ಪ್ರೀತಿಯ ಮಾತೇಕೋ ರುಚಿಸದು,
ಮೋಸದ ಬೀಸಣಿಗೆಯೇ ಬೇಕು
ಮನದ ತಂಪಿಗೆ,,,

ಪ್ರೀತಿ ಕುರುಡು;
ಅದಲ್ಲವೇ ಅಲ್ಲ,
ಪ್ರೀತಿಯಲಿ ಕುರುಡು ಸಹಜ 

ಎನ್ನಬಹುದೇನೋ,, 

____________________________

ಬಹುಶಃ ಕೈ ಚೆಲ್ಲಿ ದೂರ ಸರಿದ ಮೇಲೆಯೇ
ನಮ್ಮೊಳಗಿನ ಕೀಳರಿಮೆ ಮಾತಾಗಿ
ಕಳೆದವರ ಕಾಳಜಿಗೆ ನಿಲ್ಲುವುದು ಅನಿವಾರ್ಯ ಜಂಜಾಟ!
ಇವುಗಳ ಮಾಡದಿದ್ದರೇ ಆ ಅವರ ಜೀವನ ಬಹುಶಃ 
ಸ್ವಂತದ್ದಾಗಿರಬಹುದು; ನಮ್ಮಂತೆ ಅಲ್ಲ!! 

___________________

ನಿನ್ನ ಹುಡುಕಾಟದಲ್ಲಿ
ನಾ ಕಾಡು ಮೇಡಾದರೂ ಅಲೆಯುವಂತಿದ್ದರೆ
ಚೆನ್ನಿತ್ತು,,
ಅರ್ಧ ಶೃಂಗಾರ ಸೌಂದರ್ಯವನಲ್ಲೇ ಸೇರಿಸಿ ಸವಿದುಬಿಡುತ್ತಿದ್ದೆ
ಹೀಗೆ ಸುಮ್ಮನೆ ಕಾಂಕ್ರೀಟ ಕಾಡಿನೊಳು
ತಂಗಾಳಿಗೆ ಹಂಬಲಿಸುತ 
ಈ ಸುಡುವ ವಿರಹವ ಕೈಲಿಡಿದು 

ಉರಿದುರಿದು ಬೀಳೋ ನಕ್ಷತ್ರ ಕಣ್ಗಳಡಿ ಮಾನಸ ಕಾಂತಿಗುಂದಿಸಿ,,

08/07/2014

__________________

ನಾಳೆಗೂ ಮುನ್ನ 
ಇಂದು 'ನಡುವೆ'ಯುಂಟು
ಇಂದು ದಕ್ಕಿದರೆ
ನಾಳೆಯ ಸುಖವುಂಟು
ಹಾಗೆಯೇ 
ದುಃಖವೆಂಬ ಅನುಭವದ ಗುರುವೂ,,,!

07/07/2014

_______________

ನಿನ್ನ ಆಸಕ್ತಿಗೆ
ನಾನು ಹಗುರಾದೆ
ಸುಮ್ಮನೆ ಹೀಗೆ ಹರಿದು,,,,

05/07/2014

Friday, 4 July 2014



ಆ ನೀರ ಸೆಳೆವು
ಅದೆಲ್ಲೋ ಇರುವಾಗ
ಅದರ ಮೇಲೊಂದು
ಕಾಗದದ ದೋಣಿಯಿಟ್ಟು
ತನ್ನತ್ತ ಬಾರದೀ ದೋಣಿಯೆಂದು
ಮರುಗುವ ಮನವಿದು ಮಗುವಂತೆ,,,,

04/07/2014
___________________________

ಒಂದು ಕ್ಷಣದ ನಿರ್ಧಾರ ತಬ್ಬಿಬ್ಬಾದರೆ
ಕಳೆದ ಹೊತ್ತೊ, ಒಡೆದ ಮುತ್ತೋ
ಆಗಿಬಿಡುವುದು; ಆದರೂ
ನಿರ್ಧರಿತ ವಿಚಾರಗಳಲಿ ವಿಚಲಿತಗಳಿಲ್ಲದಿರೆ
ಒಡೆದ ಹೊತ್ತು ದ್ವಿಗುಣ, ಕಳೆದ ಮುತ್ತೂ!!

__________________

ಕವನಗಳು
ಭರವಸೆಗಳೂ ಅಲ್ಲ,
ನಿರಾಸೆಯೂ ಅಲ್ಲ,
ಸಂಚಾರಿ ಆಶಯಗಳು,,
ಎನ್ನಬಹುದೆನೋ,,,,

____________________

ಮೈಮೇಲೆ ಬಿದ್ದ ಛಾಯೆಗೆ
ಬೆಚ್ಚಿ ಎಚ್ಚರಾಗಿದ್ದೆ
ನೀನಾಗಲೇ ಬಂದುಬಿಟ್ಟೆಯೆಂದು

ನನಗಿನ್ನು ಸಮಯ ಹೊಂದಿಸಿ
ಅಡುಗೆಗಿಳಿವ ಕಾಲ,
ಎದುರು ಮಾತುಗಳನು ತೊರೆಯೊ ಕಾಲ,
ಜಿಪುಣತನದಿ ಕೂಡಿಟ್ಟು ಜೀವಿಸೊ ಕಾಲವೆಂದು,

ಅರೇ ಇದು ಕನಸೇ,
ಅದು ಮರದ ನೆರಳೇ??
ಬಿಡು ಇನ್ನೂ ಸಮಯವಿದೆ ಮುಂಜಾವಿಗೆ
ನನಗೋ ಗಾಢ ನಿದ್ದೆ,,,, ,,,,, ,,,,,

04/07/2014

____________________________

ಅರ್ಥವಾಗದ ಭಾವಗಳೂ ರೂಪಕಗಳೂ
ನನ್ನನಿನ್ನೂ ಬೆಚ್ಚಿಸಿರಲು,,
ನಾನೋ ಅದ್ಯಾವುದೋ ಕುಗ್ರಾಮದ
ಜನಪದ ಹಾಡುಗಾರ್ತಿ;
ಉರು ಹೊಡೆದು ಗೀಗೀ ಪದ ಸಾಲನಷ್ಟೇ ಹಾಡಬಲ್ಲೆ
ನಿನ್ನಂತ ಕಲೆಗಾರಳಲ್ಲ ನಾ;
ಹೀಗೆಲ್ಲಾ ಬೆರಳಲೇ ನನ್ನೀ ತಲೆಯೊಳ ಮಸ್ತಕವ
ಹುರಿದು ಮುಕ್ಕಿಬಿಡುವೆಯಲ್ಲಾ?
ನನಗೀಗಲೇ ತಲೆಕೂದಲು ನೆರೆತಂತೆ ಒಮ್ಮೆ ಭಾಸವಾಗಿ,
ಮತ್ತೊಮ್ಮೆ ನಿನಗಿಂತ ದಶಕಕೂ ಮುಂದಿನವಳಂತೆ ಅನಿಸುವುದು,,
ನಾನಿನ್ನೂ ಪ್ರಾಥಮಿಕ, ನಿನ್ನದೋ ಪ್ರೌಢ!!
_____________________

ಅರ್ಥವಿಲ್ಲದ ಎಷ್ಟೋ ಕವನಗಳ
ನಾನೂ ಗೀಚಿಬಿಟ್ಟೆ;
ನಿನ್ನ ಅದರೊಳು ಹುಡುಕುತ,
ಹಾಗೇ ಸುಮ್ಮನೆಂದುಲಿಯುತ,,,

___________________

ಸಾವಿರ ಕಣ್ಣುಗಳು
ಅದ್ಭುತ ಬಣ್ಣಗಳು
ಅಗತ್ಯಕ್ಕಿಂತ ಹೆಚ್ಚೇ ತೋರು
ಖುಷಿಯ ಗರಿಬಿಚ್ಚಲು
ನೋಡಲೆರಡು ಕಣ್ಣು ಸಾಲದಷ್ಟೇ!
ಸಣ್ಣ ಗುಬ್ಬಿಯ ಕನಸೊಂದನೂ ಭರಿಸಿಕೊಳ್ಳಲಾರದು,
ತನ್ನ ಸೊಬಗಿನ ಭಾರವೇ ನೆಲ ಕಚ್ಚಿಸಿದೆ
ಆಗಸವನೆಂದೂ ಮುಟ್ಟದಂತೆ,,
ಅದಕ್ಕೂ ಹಾರಲಾರದ ಕನಸುಗಳಿದ್ದು
ಕೊರಗಿಬಿಟ್ಟಿವೆಯಂತೆ,,

ಅದೋ ಆ ಸುಂದರ ನವಿಲ
ನೆಲದಲೇ ಕುಣಿವ ಅನಿವಾರ್ಯ
ನಮ್ಮ ಮನರಂಜನೆ!

02/07/2014

_________________

ಒಮ್ಮೆ,,,

ಬೀಸೋ ಗಾಳಿಗೋ
ಸುರಿವ ಮಳೆಗೋ
ಗುಡುಗೊ ಮುಗಿಲಿಗೋ
ಬೆಚ್ಚದ,
ಅಚಲ ಮೇರು ಗಿರಿಯೇ
ಆಗಿಬಿಡಲಿ
ಈ ಹೃದಯವೊಮ್ಮೆ,,
ನಂತರವೆಲ್ಲಾ
ಸೊನೆ,
ತಂಗಾಳಿ,
ಕಾಮನ ಬಿಲ್ಲೆಂದು
ಕನಸು ಹೆಣೆದುಬಿಡುವೆನು,,, !!

30/06/2014

Tuesday, 1 July 2014

ಮನದ ಮಾತು

ನಗು,,,,,,,,,,,,, :-)


ಮಗುವು ಹುಟ್ಟಿದಾಗ ಆ ಮಗುವಿನ ಅಳು ಹೆತ್ತವರಲ್ಲಿ ಸಂತಸವನ್ನು ತರುತ್ತದೆ. ಬಹುಶಃ ಇದೊಂದು ಅಳುವಷ್ಟೇ ಹೆತ್ತವರು ಬಯಸಿದ ಖುಷಿಯಾಗಿರುತ್ತದೆ ಎನ್ನಬಹುದು. ಮಗುವಿನ ಮುಂದಿನ ದಿನಗಳಲಿ ಅದರ ಕಣ್ಣಲ್ಲಿನ ಒಂದು ಹನಿ ಕಣ್ಣೀರನ್ನು ಅವರು ಸಹಿಸದವರು. ಕೆಲವೊಮ್ಮೆ ನಮ್ಮನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂದೊ, ಯಾವುದೊ ಅನಿವಾರ್ಯಕ್ಕೆ ನಮ್ಮ ಕೈಬಿಟ್ಟುರು ಎಂದೊ ತಂದೆ ತಾಯಿಯ ದೂರಿಬಿಡುತ್ತೇವೆ.
ತಂದೆ ತಾಯಿಯು ನಮ್ಮನ್ನು ಈ ಭೂಮಿಗೆ ತರುತ್ತಾರೆ, ಅದು ಅವರ ಆಸೆಗಳಿಗೋ ಬಯಕೆಗೊ,,,

ಹೌದು, ನಾವು ಅವರ ಆಸೆಗಳು, ಬಯಕೆಗಳ,,, ಹೀಗಿರುವಾಗ ಅವರ ಕಣ್ಣೇದುರೇ ನಮ್ಮ ಜೀವನ ದುಃಖಿಸುವಂತಾಗಬಾರದು. ನೋವು ನಲಿವುಗಳಿಲ್ಲದ ಜೀವವಿಲ್ಲ, ಬಂದ ದುಸ್ಥಿತಿಯನ್ನೂ ನಿಭಾಯಿಸಿ ಮುನ್ನಡೆಯಬೇಕು ನಮಗಾಗಿ, ನಮ್ಮನ್ನೇ ಅಸಹಾಯಕರಾಗಿ ನೋಡುತ್ತಲಿರುವ ಆ ದೊಡ್ಡ ಜೀವ ತಂದೆ ತಾಯಿಯರಿಗಾಗಿ.

ನಮ್ಮೆದುರೇ ತನ್ನ ಕಂದ ಎಡವಿ ಬೀಳುವುದನ್ನು ನೊಂದು ಬೇಯುವುದನ್ನು ಯಾವ ತಂದೆ/ತಾಯಿಯ ಜೀವವೂ ಸಹಿಸದು,,,,

ನಮ್ಮನ್ನು ಅಳುತ್ತಲೇ ಬರಮಾಡಿಕೊಂಡರು, ನಾವೂ ''ಓ,,,'' ಎಂದತ್ತರೆ,, ಅವರದು ಸಂತಸದ ನಿಶ್ಶಬ್ದ ಕಣ್ಣೀರ ಹರಿವು.

ಅಳುತ್ತಲೇ ಹುಟ್ಟಿದೆವು ಎನ್ನುವ ಕಾರಣಕ್ಕೆ ಜೀವನವ ಅಳುವಿಗೆ ಬಿಟ್ಟುಕೊಡಲಾಗುವುದೇ? :-)

ನಮ್ಮನ್ನು ಮಕ್ಕಳು ಎಂದು ಭಾವಿಸುವ ಆ ಎಲ್ಲಾ ಜೀವಗಳಿಗಾಗಿ ನಾವಿಂದು ಎಂತಹುದೇ ಸಂದರ್ಭದಲ್ಲೂ ನಗುತಾ ಬಾಳೊಣ,, ಖುಷಿಯ ಹಂಚೋಣ, ಹಂಚಿದಷ್ಟೂ ವೃದ್ಧಿಸುವ ಆಸ್ತಿಯದು.
ನೋವ ನುಂಗಿ ನಗುವುದೂ ಒಂದು 'ಗೆದ್ದಂತಹ ಸಂತಸ'ವೇ,, :-)

ಅಳು,, ವೇದನೆಗಳನ್ನು ಪಕ್ಕಕ್ಕಿಟ್ಟು ಒಮ್ಮೆ ಮನಸೊ ಇಚ್ಛೆ ನಕ್ಕುಬಿಡೋಣ ನಮ್ಮವರಿಗಾಗಿ,,,,,
ದೂರದ ತಾಯಿಯ ನೆನೆದು, ಹತ್ತಿರದ ತಂದೆ ಆಸೆಗಳ ನೆನೆದು,
ಇಷ್ಟು ದೊಡ್ಡವರಾದರೂ ಇನ್ನೂ ಮಗುವಂತೆಯೇ ಕಾಣೊ ಅಕ್ಕಂದಿರ ನೆನೆದು, ನಮ್ಮನ್ನು ಪ್ರೀತಿಸೋ ಜೀವಗಳ ನೆನೆದು,,,,, :-)

01/07/2014