Wednesday, 18 June 2014

ಮನದ ಮಾತು

ಆತ್ಮೀಯರು ಎಂದರೆ,,,,, ?!



'ನಾನು ನನ್ನ ಕನಸು'ನಲ್ಲಿರುವ ಅಪ್ಪನಿಗೆ ತನ್ನೆದುರು ತನ್ನ ಮಗಳು ಹುಡುಗನೊಬ್ಬನ ಪ್ರೀತಿಯಲ್ಲಿರುವುದು ಏಕೋ ಸಹಿಸಲಾಗದು! ಮಗಳ ಮೇಲಿನ ಪ್ರೀತಿಯೇ ಇದಕ್ಕೆ ಕಾರಣ. ಮಗಳು ಎಲ್ಲಿ ತನ್ನಿಂದ ದೂರಾಗಿಬಿಡುವಳೋ ಎಂಬ ಆತಂಕ. ನಿಜ, ಮಗಳನ್ನು ಮದುವೆ ಮಾಡಿಕೊಡಲೂ ತಂದೆಯ ಮನಸ್ಸು ನಿಜಕ್ಕೂ ಬೇಡವೆಂದೇ ಹೇಳುವುದುಂಟು. ಹೀಗಿರುವಾಗ ಸ್ವಂತ ಮಗಳಲ್ಲದಿದ್ದರೂ ಒಮ್ಮೊಮ್ಮೆ ಮಗಳೂ ಎಂದು ಭಾವಿಸಿ ಅವಳನ್ನು ಆತ್ಮಿಯವಾಗಿ ಕಾಣುವಾಗ ಆ ತಂದೆ ಎಂಬ ಸ್ನೇಹಿಯೂ ನಿಜ ತಂದೆಯಂತೆ ನಡೆದುಕೊಳ್ಳುವುದೂ ಇಂತಹುದೇ ಕೆಲವು ಸಂದರ್ಭಗಳಲಿ. ಪಕ್ಕಾ ತಂದೆಯಾಗಿಸೋ ಪ್ರಸಂಗಗಳು!, ಚೂರು ಬಿಂಕವನ್ನೂ ತಂದುಬಿಟ್ಟಿರುತ್ತದೆ. ಆ ಅನುಭವವೇ ಅಮೋಘ!.

ರಕ್ತ ಸಂಬಂಧಿಗಳ ಪ್ರೇಮವನ್ನು ನಾವು ನಮ್ಮ ಹಕ್ಕುಗಳೆಂದು ಭಾವಿಸಿಬಿಡುತ್ತೇವೆ. ಅದೇ ರಕ್ತ ಸಂಬಂಧವಲ್ಲದ ಸಂಬಂಧದಲ್ಲಿ ಸ್ನೇಹಿತರು, ತಂದೆ, ತಾಯಿ, ತಮ್ಮ, ಪ್ರೇಮಿ,,, ಎನಿಸಿಕೊಳ್ಳೊ ಇವರ ಪ್ರೇಮದಲ್ಲಿ ಹೊಸ ಹುಮ್ಮಸ್ಸನ್ನು ಕಂಡುಕೊಳ್ಳುತ್ತೇವೆ, ಹಾಗೂ ಇವರುಗಳಲ್ಲಿ ಅತೀ ಭಾವುಕರಾಗಿಬಿಡುತ್ತೇವೆ. ಯಾಕೋ ತಿಳಿಯದು.

'ಪ್ರೇಮಿ'ಯನ್ನು ಈ ಸಂದರ್ಭದಲ್ಲಿ ಮರೆತಂತೆ ಮುನ್ನೆಡೆಯೋಣ, ಏಕೆಂದರೆ ಅದು ಇವೆಲ್ಲವನ್ನೂ ಕೆಲವೊಮ್ಮೆ ಮೀರಿಸಿಬಿಡುವಂತಹುದು. ಏಕೆ? ಹೇಗೆ? ಎಂಬಿತ್ಯಾದಿಯಾಗಿ ಚಿಂತಿಸೋಣ ಅದರ ಬಗ್ಗೆ ಮತ್ತೊಂದು ಅವಧಿಯನ್ನು ಪಡೆದು.

ಹಾಂ,, ರಕ್ತ ಸಂಬಂಧಿಯಲ್ಲದ ಸಂಬಂಧಿಕರು,,, 
ಹೌದು ಇವರು ಹೆಚ್ಚು ಆತ್ಮೀಯರು ಎನಿಸಿಕೊಂಡುಬಿಡುತ್ತಾರೆ. ಕಾರಣವಿಷ್ಟೇ ಯಾರು ತಮ್ಮನ್ನು ತಮ್ಮಂತೆ ಇಷ್ಟಪಡುತಾರೋ ಮನಸ್ಸು ಅವರೆಡೆಗೆ ವಾಲುವುದುಂಟು. ನಮ್ಮೆಡೆಗೆ ನಕಾರಾತ್ಮಕ ನಿಲುವನ್ನು ಹೊಂದುತ್ತಿದ್ದಂತೆ ಅವರು ಯಾರೇ ಆದರೂ ನಮ್ಮಿಂದ ದೂರಾಗಿಬಿಡುತ್ತಾರೆ. ಹುಟ್ಟುವಾಗ ಎಲ್ಲರೂ ಒಂದೇ, ಬೆಳೆಯುತ್ತಾ ಪರಿಸರದಂತೆ ನಾವಾಗಿರುತ್ತೇವೆ. ಹೀಗಿರುವಾಗ ಒಂದು ಹಂತದಲ್ಲಿ ನಮ್ಮಲ್ಲಿ ತಿಳುವಳಿಕೆ ಮೂಡಿದ ಮೇಲೂ ನಾವು ನಮ್ಮನ್ನು ಸರಿಪಡಿಸಿಕೊಳ್ಳದಿದ್ದರೆ ಅದು ನಮಗೇ ಕುತ್ತು. ಹೀಗೆ ಸರಿಪಡಿಸಿಕೊಳ್ಳುತ್ತಾ ನಾವು ನಮ್ಮೊಂದಿಗಿನ ಆತ್ಮೀಯರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾ ಹೋಗುತ್ತೇವೆ. ಮನೆಯಲ್ಲಿ ನಮ್ಮನು ಸಹಿಸಿಯಾರು, ಆದರೆ ಹೊರಗಿನವರು ಅಸಾಧ್ಯ, ಯಾವಾಗ ನಾವು ಹೊರಗಿನರೊಂದಿಗೂ ಹೊಂದಿಕೊಳ್ಳಲಾರಂಭಿಸುತ್ತೇವೋ ಆಗ ನಮ್ಮ ಮನೆಯ, ಹೊರಗಿನ ಪ್ರಪಂಚಕ್ಕೂ ಸರಿ ಹೊಂದುತ್ತೇವೇನೋ! 

ಯಾರಿಗೋ ನಾವು ಸ್ನೇಹಿತೆ, ಅಕ್ಕನೋ, ಅಮ್ಮನೋ ತಂದೆಯೋ ಆಗಿಬಿಡುವುದಿಲ್ಲ, ಮನುಷ್ಯ ಎಷ್ಟೇ ಯಾಂತ್ರಿಕ ಜೀವನಕ್ಕೆ ಅಂಟಿಕೊಂಡರೂ ಅವನಲ್ಲಿನ ಮಾನವೀಯತೆಗಳು ಅವನೊಳು ಅಪ್ಪ, ಅಮ್ಮ, ತಮ್ಮ, ಎಂಬಿತ್ಯಾದಿ ಸಂಬಂಧಗಳು ಹುಟ್ಟಿಹಾಕಿಬಿಡುತ್ತದೆ. ಯಾಂತ್ರಿಕತೆಯ ದಣಿವು ಮಾನವೀಯತೆಯಲ್ಲಿ ಅಡಗಿಬಿಡುತ್ತದೆ. ಆತ್ಮೀಯರಲ್ಲಿ ಆಸಕ್ತರಾಗಿಬಿಡುತ್ತೇವೆ. ಹೀಗೆ ಎಂದಾದರೂ ಅವರೆಲ್ಲೋ ನಮ್ಮಿಂದ ದೂರಾಗುತ್ತಿದ್ದಾರೆ ಎನಿಸಿದಾಗ ಮನಸು ತನ್ನ ಯಾಂತ್ರಿಕ ಬದುಕನ್ನೂ ಮರೆತು ಕುಳಿತುಬಿಡುತ್ತದೆ, ಮನಸ್ಸನ್ನು ಕೊರೆದುಬಿಡುತ್ತದೆ,,

ಮಾನವೀಯ ಮೌಲ್ಯಗಳಲ್ಲಿ ತುಸು ನೆಮ್ಮದಿ ಕಾಣೋ ಪ್ರಸಂಗಗಳನ್ನು ಇವೆಯಂತಾದರೆ, ನಾವು ಯಂತ್ರಗಳೇ ಆಗಿದ್ದರೂ ಕೆಲ ಕಾಲ ಅಲ್ಲಿ ನೆಲೆಸಿಬಿಡೋಣ,
ಬನ್ನಿ ನಾವೆಲ್ಲರೂ ದಣಿವಾರಿಸಿಕೊಳ್ಳೋಣವೇ,,,  :-)

18/06/2014

No comments:

Post a Comment