Monday, 16 June 2014

ಇಂದು ಅಪ್ಪನದಿನದ ಪ್ರಯುಕ್ತ ಪ್ರಸಾರವಾದ 'ಆಕಾಶವಾಣಿಯ ಯುವವಾಣಿ' ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದು, ಕಾರ್ಯಕ್ರಮವನ್ನು ಮನೆಯವರಿಗೆ ಕೇಳಿಸಲು ತುಸು ಭಯದಿಂದಲೇ ಸಜ್ಜಾಗಿದ್ದೆ. ಕಾರ್ಯಕ್ರಮ ಶುರುವಾಯ್ತು. ನನಗೆ ಒಳಗೊಳಗೇ ಆತಂಕ. ಕಾರಣ ಅಪ್ಪ ನನ್ನ ಮಾತುಗಳನ್ನು ಕೇಳಲು ಕುಳಿತಿದ್ದರು. ಅತೀ ಶೀಘ್ರದಲಿ ಕೋಪಗೊಳ್ಳೋ ಅಪ್ಪನ ಮಾತಿಗೆ ಎಂದೂ ಹೆದರುವವಳು ನಾನು, ಹಾಗೆಯೇ ಕೆರಳುವವಳು!  :-P

ಎಲ್ಲರ ಮಾತುಗಳನ್ನೂ ಗಮನ ಕೊಟ್ಟು ಆಲಿಸಿದರು. ನನ್ನ ಮಾತುಗಳು ಶುರುವಾದವು, ಹತ್ತಿರ ಒಂದೆಜ್ಜೆ ಮುಂದಿಟ್ಟು ಮೆಲ್ಲನೆ ಹೇಳಿದೆ, ''ಅಣ್ಣಾ, ಇದು ನನ್ನದು,,", ಒಂದೇ ಉಸಿರಿಗೆ ಹೇಳಿದ ಹಾಗಿತ್ತು ನನ್ನ ಮಾತುಗಳು. ಜೊತೆಗೆ ನಾನು ನನ್ನ ಧ್ವನಿ ಕೇಳಿದ್ದು ಇದೇ ಮೊದಲು, ಅದೂ ಆಕಾಶವಾಣಿಯಲ್ಲಿ! ನನ್ನ ಮಾತು ಅದೇನೋ ತೀರಾ ಚಿಕ್ಕ ಹುಡುಗಿಯ ಕೋಪಗೊಂಡ ಮಾತುಗಳಂತೆ ಕಂಡವು. ಅಪ್ಪನ ಕುರಿತಾಗಿ ಹೇಳಿದ್ದ ವಿಚಾರವೂ ಕೂಡ ಅಂತದ್ದೇ ಸ್ಟ್ರಾಂಗ್ ಅನ್ನಬಹುದು. ಬಹು ನಿರೀಕ್ಷಿತ ಅಣ್ಣನ 'ಪ್ರತಿಕ್ರಿಯೆ'ಗೆ ಕಾದ ನಾನು ಅಣ್ಣನಲ್ಲಿ ಕಂಡದ್ದು ಭಾವುಕತೆ,,,ಇನ್ನೆರಡು ಮಾತು ನನ್ನವು ಹೆಚ್ಚಿದ್ದಿದ್ದರೆ ಬಹುಶಃ ಅಣ್ಣ,,, :-)

ನನ್ನ ಮಾತುಗಳನ್ನು ಕೇಳಿದ ಅಣ್ಣ ಮೌನರಾದರೂ. ಮಹಾನ್ ತರ್ಲೆಯಾದ ನಾನೂ ಕೂಡ. ಮೌನ ಮಾತುಗಳಾಡುತ್ತವೆ ಎನ್ನುವುದು ಎಷ್ಟು ಸತ್ಯ. ಅಣ್ಣ, ಈಗ ಮಾತನಾಡುವುದು ನನಗೂ ಬೇಡವಾಗಿತ್ತು. ಈ ಮೌನಗಳ ಮುರಿಯಲೆಂದೇ ಎಂಬಂತೆ ದೂರದೂರಿನಿಂದ ಅಕ್ಕ-ಭಾವ ಫೋನ್ ಮಾಡಿ ಹರ್ಷ ವ್ಯಕ್ತಪಡಿಸಿದರು. ತುಂಬಾ ಖುಷಿಪಟ್ಟರು. ಎಲ್ಲರ ಖುಷಿಯಿಂದ ನನಗೂ ಖುಷಿ ಈಗ ದುಪ್ಪಟ್ಟು,,, :-)

15/06/2014

No comments:

Post a Comment