ಓಡುವ ಮೋಡಕೆ
ಬೇಲಿ, ಬಲೆ ಸಾಧ್ಯವೇ?!
ಬಲವಂತಕೆ ಮಳೆಯೂ
ರಗಳೆಯೇ;
ಅದರಂತೆ
ಗಾಳಿಗೂ ಅದರೊಳ
ಪರಿಮಳಕೂ,,
________________
ಅನಾಯಾಸದಿ
ಕಣ್ಣೆವೆಗಳಪ್ಪಿಕೊಳ್ಳಲು
ಸುಖ ನಿದ್ರೆ ಇರಬೇಕು,
ಇಲ್ಲವೇ
ತಂಗಾಳಿಯ ತಂಪು
ಬಿಸಿಲ ಹೊಳಪು
ನಶೆಯ ಅಮಲು,
ಮತ್ತೂ
ಪ್ರೀತಿಯ ಘಮಲು
_______________________
ನಗುವೊಂದೇ ಕೊನೆ ಉತ್ತರ
ಎಲ್ಲವೂ ಗೊಂದಲವೇ ಆದಾಗ!
17/06/2014
________________________
ಎನ್ನಭಿರುಚಿಯ ಕುರಿತು ಕುತೂಹಲ,
ಅದಕ್ಕಾಗಿಯಾದರೂ ಸಂಭಾಷಿಸುತ್ತಾರೆ,
ನನಗೋ ಆಲಸ್ಯ, ತೋಡಿಕೊಳ್ಳಲು
ಅಭಿವ್ಯಕ್ತಿಯ ಬದಲು;
ಯಾರನ್ನೂ ಒಂದೇ ಬಾರಿ ನಿರ್ಧರಿಸದಿರುವುದು
ಒಳಿತೇನೋ;
ನಿಂತ ನೀರನ್ನು ಅಳೆದಂತೆ ಫಲಿತಾಂಶ!
_______________________
ಸುಮ್ಮನೆ ಉತ್ತರಿಸುತ್ತಾ ಹೋದೆ
ಪ್ರಶ್ನೆಗಳೇ ಇಲ್ಲ ಹಾಳೆಗಳಲಿ!
ಈಗವು ಪಟಪಟನೆಂದು
ನನ್ನ ಪ್ರಶ್ನಿಸುತ್ತಲಿವೆ;
ನಾನೀಗ ಅನುತ್ತೀರ್ಣ!
______________
ಹೂವಿಗೋ
ತಾನು ಸೊಗಸೆಂಬ
ಗರಿಮೆ ಇಲ್ಲ
ತಂಗಾಳಿಗೋ
ತಾನೇ ಅವಳ ಬಳಿ ಸಾರುವೆನೆಂಬ
ಕೀಳರಿಮೆ ಇಲ್ಲ,
ಮಿಡಿವ ಮನಸಿಗೆ
ತಾನು ಹೂವೋ ತಂಗಾಳಿಯೋ
ಆಗಿದ್ದರೆ ಚೆನ್ನಿತ್ತು
ಎನಿಸದೇ ಇರಲಿಲ್ಲ,,
16/06/2014
No comments:
Post a Comment