ತುಮುಲಗಳು,,,,
"ಕನಸು ಕಾಣುವ ಹೊತ್ತುಗಳೆಲ್ಲವನ್ನೂ ಆತಂಕಗಳಲಿ ಕಳೆದುಬಿಟ್ಟೆ, ಹಿಂದೆ ಬಿದ್ದ ಹುಡುಗರನ್ನೆಲ್ಲಾ ಕಡೆಗಣಿಸಿದ್ದೂ ಅಲ್ಲದೆ ಅವಮಾನಿಸಿಯೂಬಿಟ್ಟಿದ್ದೆ....... ", " ನಾನೆಷ್ಟು ಒರಟಾಗಿದ್ದೆ,,,? ಯಾಕೋ ತಿಳಿಯದು". ದೀರ್ಘವಾದ ನಿಟ್ಟುಸಿರಿಟ್ಟು ವಾಸ್ತವಕ್ಕೆ ಬಂದಿದ್ದಳು ನಕ್ಷತ್ರ. ಆ ಸಂಜೆಯ ಅದ್ಯಾವುದೋ ಧಾರಾವಾಹಿಯಲ್ಲಿನ ಕಾಲೇಜು ಹುಡುಗಿಯಲ್ಲಿನ ಪ್ರೇಮ-ಪ್ರೀತಿಯ ಸಂವೇದನೆಗಳು ಅವಳನ್ನು ಬಹುವಾಗಿ ಪ್ರಶ್ನಿಸಿತ್ತು. ಅವಳ ನಗು, ನಾಚಿಕೆ, ಪ್ರಿಯತಮನ ಕಾಣೋ ಆತುರ, ಬಂದಾಗಿನ ಉಲ್ಲಾಸ, ಮಾತಿದ್ದರೂ ಆಡದೇ ಒದ್ದಾಟ, ಓರೆ ನೋಟ, ಏನೋ ಆವೇಗ ಓಹ್, ರೋಮಾಂಚನ,,!!. ಸಿನೆಮಾಗಿಂತ ಕಡಿಮೆಯೇನಿಲ್ಲ ಈ ಧಾರವಾಹಿ, ಒಂದು ಕಾದಂಬರಿ ಓದಿಸಿಕೊಂಡಂತೆ ಭಾವಗಳ ಅನುಭವವನ್ನು ನೀಡುತ್ತದೆ'' ಎಂದುಕೊಳ್ಳುತ್ತಾ ತನ್ನ ಬಗ್ಗೆ ಯೋಚಿಸತೊಡಗುತ್ತಾಳೆ.
''ತಾನು ಇವುಗಳೆಲ್ಲವನ್ನೂ ತನ್ನ ಪಾತ್ರದಲ್ಲಿ ತಂದುಕೊಳ್ಳಲೇ ಇಲ್ಲವಲ್ಲಾ ವ್ಯರ್ಥಗೊಂಡ ವಯಸ್ಸು ಸುಮ್ಮನೆ ಕಳೆದುಬಿಟ್ಟೆ. ಎಲ್ಲಾ ಕಟ್ಟುಪಾಡುಗಳನ್ನೂ ಅನುಸರಿಸಿ ತನಗಾದ ಒಳಿತಾದರೂ ಏನು? ಏನೂ ಇಲ್ಲ. ಒಂದು ನಗುವಿಲ್ಲ, ಒಂದು ಸಮಾಧಾನ, ಪ್ರೀತಿ, ಸಾಮಿಪ್ಯ,, ಬದುಕಲಿ ಬೇಕಾದ ಬಾಂಧವ್ಯ ಭರವಸೆಗಳನ್ನೇ ನಾನು ಪಡೆಯದಾದೆ. ತನ್ನೆದುರುಗೊಂಡ ಅಷ್ಟನ್ನೂ ತಿರಸ್ಕರಿಸಿ, ನೇರ ದಾರಿ ಎಂಬಂತೆ ಕಣ್ಮುಚ್ಚಿ ಬಾಂಧವರು ತಂದುಕೊಟ್ಟ ಬಂಧವನ್ನೊಪ್ಪಿದೆ. ಅರ್ಧ ದಿನವೂ ಉಳಿಯದೆ ಕಳಚಿ, ಬದುಕ ಪರಚಿ, ಗುರುತುಬಿಟ್ಟು, ಮಿಂಚಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಯ್ತು. ನೆನಪಿಗೂ ದಾಖಲೆಗೂ ಹೆಸರಾಯ್ತು''.
''ಹಣೆ ಬರಹವೆನ್ನಲೋ? ದಡ್ಡತನವೋ? ಅಂತೂ ಬದುಕಿ ಮುಂದೆ ಬಂದಾಯ್ತು. ಬಹಳ ಗಟ್ಟಿ ನಾನು ಎನ್ನುವಾಗ ನನ್ನೊಳಗೊಂದೇ ಕೊರತೆ, ದೇವರಿಲ್ಲದ ಗರ್ಭಗುಡಿಯಂತೆ. ನಾನೊಂದು ಸುಂದರವಾದ ಗರ್ಭಗುಡಿ. ''ಖಾಲಿತನ''ವೊಂದೇ ಆಸ್ತಿ,,!!" ನಗುವಳು ಕತ್ತಲೆಗೆ ಮುಖ ಮಾಡಿ. ಕತ್ತಲೆಯಷ್ಟೇ ತನ್ನನ್ನು ತನ್ನ ನೋವುಗಳಿಂದ ಮುಚ್ಚಿಡಲು ಸಾಧ್ಯವೆಂದು ನಂಬಿರುವವಳು. ಬೆಳಕಿಗೆ ಹೊಳೆಯೋ ಕಣ್ಗಳವಳು!. ಒಂದು ಸಂಜೆಯ ಯಾವುದೋ ಒಂದು ಸನ್ನಿವೇಶ ತನ್ನನ್ನು ಇಷ್ಟು ಬಗೆಯಾಗಿ ಕಾಡಿದ್ದರ ಬಗ್ಗೆ ಮನಸಿಗೆ ಅವಳದು ಒಂದೇ ಉತ್ತರ, ''ನಾನೀಗ ಸೋತಿರುವೆನೋ ಗೆದ್ದಿರುವೆನೋ,, ಅದೆಲ್ಲವೂ ಒಟ್ಟು ನನ್ನ ಪ್ರಾಮಾಣಿಕ ಅನುಭವಗಳಷ್ಟೇ, ವಂಚಿಸಿಲ್ಲ ಆ ಖುಷಿಯಿದೆ ನನ್ನಲಿ, ಬಹುಶಃ ಆ ಎಲ್ಲಾ ಹಂತಗಳಲ್ಲೂ ವಂಚಿಸಿ ಗೆದ್ದು ಬಂದಿದ್ದರೂ ನಾನಿಂದು ಒಂದಷ್ಟು ನೆಮ್ಮದಿಯ ಹೊತ್ತುಗಳನ್ನು ಕಾಣದಿರುವಂತಾಗುತ್ತಿತ್ತು''. ಅವಳಿಗೆ ಅವಳದೇ ಒಂದು ಸಾಂತ್ವಾನ.
--***----***----*****-----------****************------------------
ವೇದಾಂತವೇ ಪ್ರಾರಂಭವಾದ್ದರಿಂದ ಅಂತಿಮವಾಗಿಯೂ ಎಲ್ಲಾ ನೋವಿಗೂ ವೇದಾಂತವೇ ಸಮಾಧಾನ. ಕೆಲವು ಜೀವನಗಳೂ ಅಷ್ಟೇ, ಅಂತಹ ಆಕರ್ಷಕವಲ್ಲ,, ಆದರೆ ಸತ್ವಯುತವಾದದ್ದು. ಚಂದಿರ ಪ್ರೇಮಕ್ಕೆ ಸ್ಫೂರ್ತಿಯೂ ಹೌದು, ಹಾಗೆಯೇ ವಿರಹಾಗ್ನಿಗೆ ತುಪ್ಪವೂ ಹೌದು,,! ಸುಖಭರಿತ ಜೀವನ ಅನ್ನುವುದು ಯಾವುದೋ ಕಾಣೆ. ಆದರೆ ಸುಖವಾದ ಮನಸ್ಸನ್ನು ಸಾಧಿಸಿಕೊಳ್ಳಲು ಬಹುಶಃ ನಿಸ್ವಾರ್ಥ, ತ್ಯಾಗ ಇವುಗಳು ಸಹಕರಿಸಬಹುದೇನೋ,,,,,
11/06/2014
ಕೆಲವರ ಜೀವನಗಳೂ ಅಷ್ಟೇ, ಅಂತಹ ಆಕರ್ಷಕವಲ್ಲ,, ಆದರೆ ಸತ್ವಯುತವಾದದ್ದು.... :-(
ReplyDelete