Monday, 30 June 2014

ಪೂರ್ಣ ತೊಯ್ದು ಹೋದ ಮೇಲೆ
ಆಸರೆ ಇನ್ನೇಕೆ ಹುಡುಕಲೀ
ಬಿಡು ಮಳೆಯೇ
ನಾನೂ ನಿನ್ನಂತೆಯೇ ಸೂರಿಲ್ಲದವಳು!!

___________________

ಶತ್ರುಗಳನ್ನೂ 
ದ್ವೇಷಿಸಲಾರದವಳು
ಕೊನೆಗೂ ದ್ವೇಷಿಸಿದ್ದು
'ಪ್ರೀತಿ'ಯನು....

_____________________

ಕೆಲವರು ದುಡ್ಡಿನ ಹಿಂದೆ ಬಿದ್ದು
ಪ್ರೀತಿ ಕಳೆಯುತ್ತಾರೆ,
ಮತ್ತೆ ಕೆಲವರು ಪ್ರೀತಿಯ ಹಿಂದೆ ಬಿದ್ದು
ದುಡ್ಡು ಕಳೆಯುತ್ತಾರೆ,
ಇಷ್ಟಾದರೂ ಪ್ರೀತಿ ದುಡ್ಡಿನವರನು;
ದುಡ್ಡು ಪ್ರೀತಿಯವರನು ಕಳೆಯದೆ
ಅವರವರ ಹಿಂದೆ ಬಿದ್ದಿದೆ,, 

30/06/2014
__________________

ಪ್ರತೀ ಮುಂಗಾರಿನ ಮಳೆಗೂ
ಎನ್ನೆದೆ ಕಣ್ಣೀರೆ,,
ಈ ಬಾರಿಯ ಮುಂಗಾರು ಹಿಂಗಾರಿಗೂ
ನಡುವಿನ ಮಳೆಯೂ ಹೊರತಲ್ಲ,, 

29/06/2014

Sunday, 29 June 2014

ಲೇಖನ;

  "ಆತ್ಮಹತ್ಯೆ; ಒಂದು ಚಿಂತನೆ"



                              ನೆನ್ನೆ(ಶನಿವಾರ) ನಾಲ್ಕನೇ ತರಗತಿಯಲ್ಲಿ ವಿಙ್ಞಾನ ಪಾಠವೊಂದರ ಕುರಿತು ಚರ್ಚಿಸುತ್ತಿದ್ದ ಸಮಯ.
ಪಾಠದ ಹೆಸರು "ಮಣ್ಣು". ಮಕ್ಕಳಿಗೆ ಮಣ್ಣು ಹೇಗಾಯಿತು?, ಮಣ್ಣಿನ ರಚನೆ, ಮಣ್ಣಿನ ಉಪಯೋಗಗಳನ್ನು ಹೇಳುವಾಗ,
ಇಂಧನವಾದ ಕಲ್ಲಿದ್ದಲು ಕುರಿತು ಚರ್ಚೆ ಬೆಳೆಯಿತು. ಹಾಗಾಗಿ ಪಾಠಕ್ಕೆ ಹೊರತಾಗಿದ್ದು ಹೆಚ್ಚಿನ ಮಾಹಿತಿಯೆಂದೇ ತಿಳಿದಿದು ವಿಷಯಾಂತರವಾದರೂ ಸರಿಯೇ ಎಂದು ಅದರ ಬಗ್ಗೆಯೂ ಮಾಹಿತಿ ನೀಡುತ್ತಿದ್ದೆ. ಈಗಿನ ಶಿಕ್ಷಣ ಕ್ರಮದಲ್ಲಿ ವಿಷಯಾಂತರ ಎಂಬ ಮಾತಿಲ್ಲ. ಕನ್ನಡ ಪಾಠದಲ್ಲಿ ವಿಙ್ಞಾನದ ವಿಷಯಾಂಶ ಬಂದರೂ ಅದನ್ನು ಬೊದಿಸಿಯೇ ಮುಂದೆ ನಡೆಯಬೇಕು. ಮಕ್ಕಳಲ್ಲಿ ಯಾವುದೊಂದು ಪ್ರಶ್ನೆಯೂ ಉತ್ತರ ಕಾಣದೆ ಉಳಿಯುವಂತಿಲ್ಲ. ಹಾಗಾಗಿ ನನಗೂ ಖುಷಿ ಮತ್ತು ಧೈರ್ಯ! :-).


                  ಕಲ್ಲಿದ್ದಲ ಕುರಿತು ಸರಳವಾಗಿ ಅರ್ಥೈಸುವ ಪ್ರಯತ್ನದಲ್ಲಿ ಮಕ್ಕಳಿಗೆ ಹೀಗೆ ವಿವರಿಸಿದೆ; ಡೈನೊಸಾರ್ ಹೆಸರು ಕೇಳಿದ್ದೀರಾ? "ಹೋ ಗೊತ್ತು ಮಿಸ್" ಎಂದು ಸಂತಸಪಟ್ಟರು ತುಂಬಾ ಪರಿಚಿತರೆಂಬಂತೆ. ಟಿ.ವಿಗಳಲ್ಲಿ ಕಾರ್ಟೂನ್ಗಳಲ್ಲಿ ನೋಡಿದ್ದರಿಂದ. "ಈಗ ಇದ್ಯಾ ಅದು?" ಕೇಳಿದೆ. ಇಲ್ಲ ಮಿಸ್. ಎಲ್ಲಿ ಹೊಯ್ತು? ಉತ್ತರವಿಲ್ಲ. ಮುಂಚೆ ಇತ್ತಾ? ಹ್ಹೂ ಅಂತೆ ಮಿಸ್. ಅದೂ ಟಿವೀಲಿ ತೊರಿಸ್ತಾರೆ. ಸರಿ ಮಕ್ಕಳಲ್ಲಿ ಇಷ್ಟು ಮಾಹಿತಿ ಇದ್ದರೆ ಸಾಕು ಎಂದುಕೊಂಡೆ. ಹೌದಲ್ಲವೇ, ಈಗ ಇಲ್ಲ ಆದರೆ ಹಿಂದೆ ಇತ್ತಂತೆ ಹೇಳ್ತಾರೆ. ದೊಡ್ಡ ಗಾತ್ರದ ಆ ಪ್ರಾಣಿಯನ್ನು ಹೊಲುವಂತಹ ಯಾವ ಪ್ರಾಣಿಯೂ ಈಗಿಲ್ಲ, ಅಂದರೆ ಅದರ ಸಂತತಿ ಸಂಪೂರ್ಣ ನಾಶವಾಗಿರಲೇ ಬೇಕು. ನೈಸರ್ಗಿಕ ವೈಪರಿತ್ಯವಾದ ಭೂಕಂಪವು ಸಂಭವಿಸಿದಾಗ ಈ ಪ್ರಾಣಿಗಳಂತೆ ಇತರೆ ಜೀವಿಗಳು ನಾಶವಾಗಿ ಭೂಗರ್ಭ ಸೇರಿರುತ್ತದೆ. ಅಂದರೆ ಭೂಮಿಯ ಆಳ, ಅಲ್ಲಿ ಗಾಳಿ ಬೆಳಕಿಲ್ಲ. ಅತೀ ಒತ್ತಡವಷ್ಟೇ. ಹೀಗಿರುವಾಗ ಸತ್ತ ಪ್ರಾಣಿ ಸಸ್ಯಗಳು ಅಲ್ಪ ಪ್ರಮಾಣದಲ್ಲಿ ಕೊಳೆತು ಇಲ್ಲ ಕೊಳೆಯದೇ ಕಾಲಕ್ರಮೇಣ ಕಲ್ಲುಗಳಂತಾಗಿ ಬಿಡುತ್ತದೆ. ಸಾವಿರಾರು ವರ್ಷಗಳ ನಂತರ ನಮಗೆ ಭೂಮಿಯಲ್ಲಿ ಈಗ ಸಿಗುತ್ತಿರುವ ಇಂಧನಗಳಾಗಿವೆ ಎಂದು ವಿವರಿಸಿದೆ. ಮಕ್ಕಳಿಗೆ ಸಂಪೂರ್ಣವಾಗಲ್ಲದಿದ್ದರು ಸುಮಾರು ಅರ್ಥವಾಯಿತು. ಆದರೆ ಸತ್ತ ಜೀವಿಗಳು ಭೂಗರ್ಭದಲ್ಲಿ ಕೊಳೆಯಲಿಲ್ಲ ಎಂದಾಗ ಗಲಿಬಿಲಿಗೊಡಂತೆ ಕಂಡದ್ದು ನಿಜ. ಸರಿ ಅದನ್ನೂ ಹೇಳಿದರಾಯ್ತು ಎಂದುಕೊಂಡು. ಈಗ ಸತ್ತವರನ್ನು ಹೂಳುತ್ತಾರೆ, ಕಾಲಕ್ರಮೇಣ ದೇಹವು ಕೊಳೆತು ಮಣ್ಣಿನೊಂದಿಗೆ ಬೆರೆತುಬಿಡುತ್ತದೆ ಹೌದಲ್ವೇ? ಮಣ್ಣಿನಲ್ಲಿ ಗಾಳಿಯಾಡುವುದರಿಂದ ಕೋಳೆಯುತ್ತದೆ. ಭೂಗರ್ಭದಲ್ಲಿ ಗಾಳಿ ಲಭ್ಯವಾಗಿರುವುದಿಲ್ಲ ಹಾಗಾಗಿ ಕೊಳೆಯುವುದಿಲ್ಲ. ಈ ಸಂದರ್ಭದಲ್ಲಿ ಮೊನ್ನೆ ಮೊನ್ನೆ ತಾನೆ ಹುಳಿಕಲ್ ನಟರಾಜ್ ರವರು ಪವಾಡ ಬಯಲು ಕಾರ್ಯಕ್ರಮದಲ್ಲಿ ಸಮಾಧಿಯಾಗಿ ಮತ್ತೆ ಎದ್ದು ಬಂದ ಸಂದರ್ಭ ನಮಗೆ ನೆನಪಾಗುತ್ತದೆ. ಕಲಿಸುತ್ತಾ ಕಲಿಯುವುದು ಎಂದರೇ ಇದೇ ಏನೋ?. ಇಷ್ಟೂ ಚರ್ಚೆಗಳು ಖುಶಿ ಕೊಟ್ಟವು. ಅವಧಿ ಮುಗಿಯಿತು ಪಕ್ಕದ ತರಗತಿಗೆ ಹೊರಟೆ, ಅಷ್ಟರಲ್ಲಿ ವಿಧ್ಯಾರ್ಥಿಯಿಂದ ಒಂದು ಹೇಳಿಕೆ; "ಮಿಸ್ ಕೆಲವರನ್ನ ಸುಡುತ್ತಾರೆ ಮಿಸ್", "ಹೌದು ಅವರವರ ಆಚರಣೆ" ಅಂದೆ. "ನಮ್ಮಪ್ಪನ್ನ ಸುಟ್ಟಿದ್ವಿ ಮಿಸ್", "ಹೌದಾ.....?" ಅಂತ ಮನಸ್ಸಿನಲ್ಲಿಯೇ ಅಂದುಕೊಂಡು ಯೊಚಿಸುತ್ತಿದ್ದೆ, ಅವನು ಅವನಕ್ಕನೂ ಒಂದೇ ತರಗತಿ. ಇಬ್ಬರೂ ಮಾತಾಡತೊಡಗಿದರು. "ಅದೇ ಮಿಸ್ ನಮ್ಮಪ್ಪ ನೇಣುಹಾಕ್ಕೊಂಡ್ರಲ್ಲಾ ಅದಕ್ಕೆ ಮಿಸ್". ಓಹ್ ನೆನಪಾಯ್ತು. ಇನ್ನೂ ಮಕ್ಕಳೆಲ್ಲದೆದುರು ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಬೇಡೆಂದು, "ಆ ರೀತಿ ಮಾಡುವುದು ತಪ್ಪು ಹಾಗೆ ಮಾಡಿದ್ದರಿಂದ ನಿಮ್ಮ ತಾಯಿ ನಿಮ್ಮನ್ನು ಸಾಕಲು ಎಷ್ಟು ಕಷ್ಟಪಡ್ತಾ ಇದ್ದಾರೆ ಅಲ್ವಾ?" ಅಂದೆ. ತರಗತಿಯ ಎಲ್ಲಾ ಮಕ್ಕಳಿಗೂ ತಿಳಿದಿದ್ದ ವಿಷಯ. ಎಲ್ಲರಿಗೂ ಸರಿ ಅನಿಸಿತು. ಎಲ್ಲಾ ತಪ್ಪುಗಳಿಗಿಂತ ದೊಡ್ಡ ತಪ್ಪು ಅದು ಎಂದು ಹೇಳಿ ಮನೆ ಪಾಠ ನೀಡಿ ಮತ್ತೆ ಇಂದೆ ಮತ್ತೊಂದು ಅವಧಿ ಸಿಕ್ಕರೆ ಬರುವುದಾಗಿ ಹೇಳಿ ಹೊರಟೆ. ಯಾಕೋ ನನಗೂ ಮನಸ್ಸಿರಲಿಲ್ಲ ಈ ಕೊನೆಯ ವಿಷಯವನ್ನು ಉದ್ದೇಶಪೂರ್ವಕವಾಗಿ ಮೊಟಕುಗೊಳಿಸಿದ್ದಕ್ಕೆ.


                "ಆತ್ಮಹತ್ಯೆ", ತಲೆಹೊಕ್ಕ ವಿಷಯ. ಯಾಕೆ ಹಾಗೆ ಮಾಡಿದ್ರು? ಏನಾಗಿರ್ಬೋದು ಅಂತೆಲ್ಲಾ ಮನಸ್ಸು ಓಡಿತು. ಮೊನ್ನೆ ಯಾರೋ ಗೆಳತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರಂತೆ. ಗಾಳಿ ಸುದ್ಧಿನೋ ಏನೋ ಗೊತ್ತಿಲ್ಲ. ವಿಷಯ ತಿಳಿದಾಗಿನಿಂದ ದಿನಾ ನನ್ನ ಬಿಡುವು ಅನ್ನುವ ಸಂದರ್ಭಗಳಲ್ಲಿ ನೆನಪಾಗ್ತಾರೆ. ತುಂಬಾ ಮನಸ್ಸನ್ನು ಹಿಂಸಿಸುತ್ತೆ. ಕೊನೆಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಎಷ್ಟು ಯೊಚಿಸಿದರೇನು? ಕಾರಣಗಳೆನು ಕಾಣದು ಸುಮ್ಮನೆ ಬದುಕಿದ್ದ ನಾವು ಕಿನ್ನರಾಗುತ್ತೇವೆ ಎಂದೆನಿಸಿತು.


             ಆತ್ಮಹತ್ಯೆ ಸಮಾಜದಲ್ಲಿನ ಒಂದು ಸಹನೀಯ ವಿಚಾರವಾಗಿ ನನಗೆ ಕಾಣುತ್ತದೆ. ಆತ್ಮಹತ್ಯೆಯ ಕುರಿತು ಮಾತನಾಡಲು ನಾನೇನು ಮನೋಙ್ಞಾನಿಯಲ್ಲ, ಜ್ಯೋತಿಷಿಯಲ್ಲ; ಒಬ್ಬ ಸಾಮಾನ್ಯ ಪ್ರಜೆಯಾಗಿ ಸಮಾಜದಲ್ಲಿನ ನೋವಿಯ ಕಾವಿಗೆ ತುಸು ನೋಯಿಸಿಕೊಂಡ ಜೀವವಷ್ಟೇ.


              ಈ ಆತ್ಮಹತ್ಯೆಗೆ ಕಾರಣಗಳು ಏನೇನೋ...... ದಿನನಿತ್ಯ ಟೀವಿಗಳಲ್ಲಿ ಅದೇ ವಿಚಾರ. ಇತ್ತೀಚಿಗಂತು ಇಂತಹ ಕಾರ್ಯಕ್ರಮವನ್ನೇ ನೋಡಲು ಅಸಹನೀಯವೆನಿಸುತ್ತದೆ. ಯಾಕ್ ಸಾಯ್ತಾರೋ ಜನ ಅಂತ ಕೋಪ ಬಂದುಬಿಡುತ್ತೆ. ಹುಟ್ಟಿ ಏನೇನೋ ಸಾಧಿಸಿ ಅಂತ ಯಾರು ದುಂಬಾಲು ಬೀಳುವುದಿಲ್ಲ. ಕೊನೆಪಕ್ಷ ಹುಟ್ಟಿದ ಮೇಲೆ 'ಬದುಕಿ' ಅಷ್ಟೇ ಈ ಸಮಾಜ ಎಲ್ಲರನ್ನೂ ಕೇಳೋದು. 'ಒಳ್ಳೆ ರೀತಿಯ ಬದುಕು' ಅಂದರೆ ಇದೂ ಸಹ ಸೇರುತ್ತದೆ; ಆತ್ಮಸ್ಥೈರ್ಯದಿಂದ ಬದುಕುವುದು. ಚಾಪೆ ಇದ್ದಷ್ಟು ಕಾಲು ಚಾಚು ಎಂಬಂತೆ ಎಲ್ಲರೂ ಜೀವನ ಮಾಡಿದರೆ ಸಾಲಗಳು ಏಕಾತ್ತವೆ? ಸೋಮಾರಿತನವನ್ನು ಬಿಟ್ಟು ಎಲ್ಲರೂ ದುಡಿಯುವಂತಾದರೆ ಬದುಕಿನ ಸ್ಥಿತಿ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ಮತ್ತೆ ಕೆಲವು ಪ್ರೆಮ ಭಂಗಗಳು. ಪ್ರೀತಿಯ ಅರ್ಥ ತಿಳಿದು ಪ್ರೀತಿಸಿದ್ದೇ ಆದರೆ ಅಲ್ಲಿ ಭಂಗಗಳೇ ಇಲ್ಲ. ತಿಳಿಯದ ವಯಸ್ಸಿಂದ ಹಿಡಿದು ಪ್ರೌಢ ವಯಸ್ಸಿನವರೆಗೂ ಪ್ರೇಮಭಂಗದ ಕಾರಣದ ಆತ್ಮಹತ್ಯೆಯನ್ನು ನಾವು ಕೇಳಿರುತ್ತೇವೆ. ಇನ್ನೂ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ನಮಗೆ ಪಟ್ಟಿಗಿಂತ ಮುಖ್ಯ ವಾಸ್ತವ ಸ್ಥಿತಿಗಳು ಮತ್ತು ಪರಿಹಾರಗಳು.


                ಆದರೂ ಕೆಲವು ಕಾರಣಗಳನ್ನು ಹೆಸರಿಸುವುದಾದರೆ, ಕೌಟುಂಬಿಕ ಕಲಹ, ಹೆಣ್ಣು-ಗಂಡೆಂಬ ತಾರತಮ್ಯ-ಅಸಮಾನತೆ, ಬಡತನ, ಅನಾರೋಗ್ಯ. ದುರ್ಬಲ ಮನಸ್ಸು, ಒಂಟಿತನ, ಇನ್ನೂ ಅನೇಕ ನಂಬಲಸಾಧ್ಯ ಕಾರಣಗಳು ಈಗೀಗ ಸೇರಿಬಿಟ್ಟಿವೆ. ಇದ್ದಕ್ಕೆ ಪರಿಹಾರವೇನು? ಇದು ನನ್ನ ನೇರ ಪ್ರಶ್ನೆ. ಅತೀ ಕಡಿಮೆ ಓದಿ, ಕೂಲಿ ಮಾಡಿ ಇಲ್ಲವೇ ಇನ್ಯಾವುದೋ ಕಡಿಮೆ ಸಂಬಳದ ಕೆಲಸ ಮಾಡಿ ಶ್ರಮದ ನೆರಳಲ್ಲೇ ಬದುಕುವ ಅದೆಷ್ಟೋ ಜನರು ಆತ್ಮಸ್ಥೈರ್ಯದಿಂದ ಬದುಕುತ್ತಿರುವುದುಂಟು, ಆದರೆ ಅದೇ ಅತೀ ಹೆಚ್ಚು ಓದಿದ ಅಥವಾ ಶ್ರೀಮಂತ ಎನಿಸಿಕೊಳ್ಳುವ ಜನರೇ ಈಗೀಗ ಹೆಚ್ಚೆಚ್ಚು ಈ ಆತ್ಮಹತ್ಯೆ ಎಂಬ ಕೃತ್ಯಕ್ಕೆ ಮುಂದಾಗಿದ್ದಾರೆ. ಹಾಗಾದರೆ ಅವರ ಕಲಿತ ವಿದ್ಯೆ ಶಿಕ್ಷಣ ಅರ್ಥ ಕಳೆದುಕೊಂಡಿತೆ? ಸೊಜಿಗವೆನಿಸುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಕಲಿತ ಶಿಕ್ಷಣ ಕೇವಲ ಕೆಲಸವನ್ನು ಗಿಟ್ಟಿಸಿಕೊಟ್ಟರೆ ಸಾಲದು ಬದುಕಲು ಕಲಿಸಬೇಕು. ಅಂತಹ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸಬೇಕು. ಇದೆಲ್ಲಾ ಶಾಲೆಗಳಲ್ಲಿ ಮಾತ್ರ ನಡೆಯುವ ಕ್ರಿಯೆಗಳಲ್ಲ. ಮಗುವಿನ ಸರ್ವತೋಮುಖ ಬೇಳವಳಿಣೆಗೆಗೆ ಮನೆ, ಶಾಲೆ ಮತ್ತು ಪರಿಸರವೂ ಇದಕ್ಕಾಗಿ ಶ್ರಮಿಸಬೇಕಿದೆ. ಇದು ಪ್ರಾಥಮಿಕ ಹಂತದ ವಿಚಾರಗಳಾದರೆ, ಇನ್ನು ಬೆಳೆದು ನಿಂತ ಮಕ್ಕಳು ಯಾವ್ಯಾವುದೋ ಬೇಡದ ಕಾರಣಗಳಿಗೆ ಸೋಲುವ ಪರಿಯನ್ನು ಅವಮಾನಿಸದೆ ತಿದ್ದುವ ತಾಳ್ಮೆ ಹಿರಿಯರಿಗಿರಬೇಕು. ತಂದೆ-ತಾಯಿಯರ ವಿಶ್ವಾಸವನ್ನು ಮಕ್ಕಳು, ಮಕ್ಕಳ ವಿಶ್ವಾಸವನ್ನು ತಂದೆ-ತಾಯಿಯರು ಗಳಿಸಿದ್ದೇ ಆದಲ್ಲಿ ಈ ಕಾರ್ಯ ಬಹು ಸುಲಭವೆನಿಸುತ್ತದೆ. 'ಪ್ರೀತಿ' ಈ ಎಲ್ಲಾ ಸಂಕಟಕ್ಕೂ ಮದ್ದು ಎಂದರಿತರೆ ಸಮಸ್ಯೆಗಳೆಲ್ಲಕ್ಕೂ ನಮ್ಮಲ್ಲಿ ಪರಿಹಾರವುಂಟು. ಇನ್ನೂ ಅನೇಕ ಪರಿಹಾರಗಳಿರಬಹುದು, ಇಲ್ಲಿ ಚರ್ಚಿಸಲಾದದ್ದು ಅತೀಸಾಮಾನ್ಯ ಮನುಷ್ಯಳಾಗಿ ಅತೀ ಸಾಮಾನ್ಯ ಮನುಷ್ಯ ಕೈಗೊಳ್ಳಬಹುದಾದ ಕೈಗೆಟಕುವ ಪರಿಹಾರಗಳು. ಈ ಕ್ರಮಕ್ಕೆ ಅತೀ ತಾಳ್ಮೆ, ಪ್ರೀತಿ ಮತ್ತು ಸಮಯ ಇವಿಷ್ಟೇ ಬೇಕಾದದ್ದು. ಆದರೆ ಈಗ ಇವೇ ದುರ್ಲಭ!! ವಿಪರ್ಯಾಸ...... ಹೌದು ಸಮಾಜದಲ್ಲಿನ ಸಾಧಕ ಬಾಧಕಗಳೆಂಬ ಎಲ್ಲಾ ಅಂಶಗಳು ನಮ್ಮಿಂದಲೇ. ಒಪ್ಪುವಿರಾ?


                              'ಆತ್ಮಹತ್ಯೆ' ಎಂಬ ವಿಷಯದ ಕುರಿತು ಇದೊಂದು ಪಾರ್ಶ್ವದ ಚಿಂತನೆ ಅಷ್ಟೇ. ಈ ನಿಟ್ಟಿನಲ್ಲಿ ಯೋಚಿಸಲು ಶುರು ಮಾಡಿದ್ದೇ ಆದರೆ ಬಹಳಷ್ಟು ವಿಚಾರಗಳ ಚಿಂತನ ಚರ್ಚೆಗಳಿಂದ ಹುಟ್ಟಿ ಒಂದು ಆರೋಗ್ಯಕರ ವಿಚಾರಧಾರೆ ಸೃಷ್ಟಿಯಾಗಬಹುದು. ವಿಚಾರಗಳಿಂದ ಪ್ರಭಾವಿತ ಯಾವುದೋ ಒಂದು ಜೀವ ಬೆಳಕ ಕಂಡರೆ ಅಷ್ಟೇ ನಮ್ಮೆಲ್ಲರ ಚರ್ಚೆ ಸಂವಾದಗಳ ಸಫಲತೆ. ಹಾಗಾದರೆ ಬನ್ನಿ ಚಿಂತಿಸೋಣ... :-)

ಧನ್ಯವಾದಗಳು
ದಿವ್ಯ ಆಂಜನಪ್ಪ

೧೬/೦೯/೨೦೧೩






ಹರಿಯೊ ನೀರಿಗೆ
ಅಂಬಿಗನ ಹಂಗೇ?!

________________

ಅಳಲು ಎರಡು ಕಣ್ಣು
ನಗಲು ಒಂದೇ ಕಣ್ಣು 

28/06/2014

___________________

ಕಳೆದ ಅಷ್ಟೂ ಹೊತ್ತುಗಳು
ನನ್ನಲಿ ಲೆಕ್ಕವ ಬೇಡುತಲಿವೆ
ನಿನ್ನನು ಅದೆಷ್ಟು ಪರಿಯಲಿ 
ಹೀಗೆ ಮುಚ್ಚಿಟ್ಟುಕೊಂಡಿದ್ದೆನೆಂದು
ಪದಗಳಲ್ಲಿನ ಮೊಗ್ಗುಗಳ ಆರಿಸಿ ಪೋಣಿಸುತ,,

_____________________

ಈ ಸಂಜೆ, ಏಕಾಂತ, ತಂಗಾಳಿ
ಎಲ್ಲವೂ ಸರಕುಗಳಷ್ಟೇ
ನಿನ್ನ ನೆನೆಯಲು,,,,
ಕಲ್ಪಿಸಲು,,
ರಾತ್ರಿಯ ಕನಸ ಹೊಸೆಯಲು,,,

27/06/2014

Thursday, 26 June 2014

ಹಾಸ್ಯ ;-)

ದಿನ ಭವಿಷ್ಯ; ಸಂಗಾತಿಯೊಂದಿಗೆ ಕಲಹ..

ಬ್ಯಾಚುಲರ್ ಗುಂಡ; ವಾರೇ ವಾಹ್!!!,, ಈ ದಿನ ಯಾರು ನನ್ನೊಂದಿಗೆ ಜಗಳವಾಡುತ್ತಾರೋ,,,,,,,,,,

'ಅವಳೇ ನನ್ ಹೆಂಡ್ತಿ'!  :-)

:-D

23/06/2014


ನಿನ್ನ ಕಂಡೋಡನೆಯೇ 
ಕುಣಿದಾಡಲು,
ನೀನೇನು ಮುಗಿಲೋ?

ನಾನೇನು ನವಿಲೋ?!! 

____________

ನನ್ನ ಪ್ರೀತಿಗೆ
ಪದಗಳ ಸಹಕಾರವಿದ್ದರೆ
ಅವನ ಪ್ರೀತಿಗೆ
ಉಸಿರ ಗೇಯ

ಉಪಕಾರವಂತೆ,,, 

___________________

ತನ್ನವರ ಖಂಡಿಸುವ 
ಎಲ್ಲ ಅವಕಾಶಗಳ ಕೊಂದೆ
ನನ್ನದು ಪೂರ್ಣ 
ಶರಣಾಗತಿಯೆಂದಾದರೂ
ಅವರದು ಪ್ರೀತಿ 

ಭೋರ್ಗರೆತವೆಂದು,, 

_____________________

ಈ ಮೊಗದ ಮೊಡವೆ ಚುಕ್ಕಿಗಳು
ನೆನಸಿದಂತೆ
ಸೂರ್ಯನ ಸೌರ ಕಲೆ
ಚಂದ್ರನ ಕಂದಕದ ಹೊರೆ

ಬೀಗಲು ಇನ್ನೇನುಂಟು?! 

25/06/2014

_______________

ಬೆವರು ಹರಿಯದೆ
ಹರಿದ ಹೊತ್ತು
ಕಳೆದ ಘಟ್ಟ

ಕಣ್ಣೀರಿನ ಕರೆ

24/06/2014

_________________

ನೋಡುತ ನೋಡುತ
ಕಳೆದೇ ಹೋಗುವಂತೆ
ಕಾಲ ಮರೆಯಲು;
ನಾನೆಲ್ಲೋ 
ಸೆಳೆದುಕೊಂಡೆನೆಂಬ ಭಾವ,
ಈ ಭಾವಾರ್ಥವ 
ಬಿಡಿಸಿ ಹೇಳೆಯಾ?
ಭಾವ ಚಿತ್ರವೇ? 


_________________

ಅವಳಿದ್ದರಿಲ್ಲಿ
ಸಾವಿರ ಗಲಗಲ
ಹೆಜ್ಜೆ ನಾದ,

ಘಲ್ ಘಲ್ ಘಲ್,
ಝಲ್ ಝಲ್ ಝಲ್

ಇಲ್ಲದಿರೆ
ಏಕತಾರ ತಂತಿ ನಾದ

ಟೊಯ್ ಟೊಯ್ ಟೊಯ್ ಟೊಯ್!

23/06/2014
___________________

ಈ ನಗುವಿಗೆ ಕಾರಣವಾಗಿಸಲು
ಸುಮ್ಮನೆ ಇಲ್ಲದ ನಿನ್ನ ಮತ್ತೂ ಚಿತ್ರಿಸಿದ್ದೆ,,
ಈಗೆಲ್ಲಾ ಅದಾಗದು,
'ನನ್ನೀ ನಗುವಿಗೆ ನಾನೇ ಕಾರಣ'
ಹೋಗು,
ಅದೆಲ್ಲಿಂದ ಸಿಟ್ಟಿನಿಂದ ಸಿಡಿವೆಯೋ
ನೋಡಿಯೇಬಿಡೋಣ!!

21/06/2014
______________________

ಕಾಡೋ ಕನಸುಗಳಿಗೆಲ್ಲಾ
ನಿನ್ನ ಹೆಸರಿಟ್ಟು
ನಿದ್ದೆಗೆ ಜಾರಿಬಿಡಲೇ?
ಕಣ್ಬಿಟ್ಟಾಗ ನಿನ್ನನೇ
ನಾ ನೋಡುವ
ಭರವಸೆಯೊಂದಿಗೆ!

20/06/2014

ನೋಟ!

ಅದೊಂದು ಸಿನೆಮಾ/ಧಾರಾವಾಹಿಯ ಕಥೆ, ಎಳೆ ವಯಸ್ಸಿನ ಮೇಜರ್ ಎನಿಸಿಕೊಳ್ಳೋ ಹುಡುಗ ಹುಡುಗಿಯ ಪ್ರೀತಿ ವೃತ್ತಾಂತವೊಂದರಲ್ಲಿ, ಹುಡುಗನಿಗೆ ಆಗಲೇ ನಿಶ್ಚಯವಾದ ವಧುವಿರುತ್ತಾಳೆ. ಆದರೂ ಅವಳಿಗೂ ಮೊದಲು ಮನಗೆ ಬಂದ ಅತ್ತೆಯ ಮಗಳು ಯಾಕೋ ತಡವಾಗಿ ಇಷ್ಟವಾಗಿರುತ್ತಾಳೆ,, ಸರಿ ಇಬ್ಬರಲ್ಲೂ ಪ್ರೀತಿ ಮೂಡಿ; ಇನ್ನು ಮದುವೆ? ಎನ್ನುವ ಪ್ರಶ್ನೆಗೆ ಸಂಪ್ರದಾಯದ ಕಟ್ಟುಪಾಡುಗಳ ದಿಗ್ಬಂಧನ. ಹೀಗಿರುವಾಗ ಹುಡುಗನ ಮನೆಯವರನ್ನು ಒಲಿಸುವ ಎಲ್ಲಾ ಪ್ರಯತ್ನಗಳೂ ಸೋತವು ಎಂದಕೊಂಡ ಆತನು ಹಿಡಿದ ದಾರಿ; ಪ್ರೇಯಸಿಯೊಂದಿಗೆ ಓಡಿ ಹೋಗಿ ಮದುವೆಯಾಗುವುದು. ಓಡಿ ಹೋಗಿ ಮದುವೆಯಾಗಲು ಒಪ್ಪದ ಪ್ರೇಯಸಿಯನ್ನು, ಅವಳ ಪ್ರೀತಿಯನ್ನು ಗೆಲ್ಲುವ ಅವನ ಕೊನೆಯ ಅಸ್ತ್ರ 'ಬೆಟ್ಟದಿಂದ ಬಿದ್ದು ಸಾಯುವೆ' ಎಂಬ ಬೆದರಿಕೆ.
ಹುಡುಗಿ ಹೆದರಿಯೋ?, ಬೆದರಿಯೋ?, ಇಲ್ಲ 'ಅಯ್ಯೋ' ಎಂದೋ, ಇಲ್ಲ ಪ್ರೀತಿಗೋ ಒಪ್ಪಿಬಿಡುವಳು ಮದುವೆಗೆ.

ಇತ್ತ ಕಡೇ ಮನೆಗೆ ತಂದಿಟ್ಟುಕೊಂಡ ತಂಗಿಯ ಮಗಳು ಮತ್ತೂ ನಾದಿನಿಯ ಮಗ ಮನೆಗೆ ಬಾರದಿದ್ದರೆ, ತಾನು ಸತ್ತು ನಿಮ್ಮನ್ನು ಕಾರಣ ಮಾಡುತ್ತೇನೆ ಎನ್ನುವ ನಾದಿನಿಯ ಎದುರು ಹುಡುಗಿಯ ದೊಡ್ಡಮ್ಮನಿಗೆ ತನ್ನ ಗಂಡನಿಂದಲೂ ಅಂತದ್ದೇ ಧಮಕಿ, 'ಅವರು ಬಾರದಿದ್ದರೆ ನಿನ್ನನ್ನು ಸಾಯಿಸಿಬಿಡುವೆ' ಎನ್ನುವಂತದ್ದು.
ಆದರೂ ಕೊನೆ ಹಂತದಲ್ಲಿ ಮದುವೆಯಾಗದೆ ಮನೆಗೆ ಹಿಂದುರಿಗಿದ ಹುಡುಗ-ಹುಡುಗಿಯು ಬಯಸಿದ್ದು ತಮ್ಮ ಮದುವೆಗೆ ಮನೆಯವರ ಒಪ್ಪಿಗೆ. ಪಾಪ, ಮದುವೆಯಾಗದೇ ಮನೆಗೆ ಬಂದರೂ ಮನೆಯವರು ಮತ್ತೂ ಅವರನ್ನು ತಮ್ಮಂತೆಯೇ ನಡೆಸಿಕೊಳ್ಳುವವರು,, ಅವರಿಬ್ಬರನು ದೂರ ಮಾಡಲು ಬಳಸಿದ್ದೂ ಮತ್ತೆದೇ ಅಸ್ತ್ರ,, 'ನೀವೇನಾದ್ರೂ ಮಾತು ಮೀರಿ ಮದುವೆಯಾದ್ರೆ ನಾನು ಸಾಯ್ತೀನಿ' ಅನ್ನೋ ಹುಡುಗನ ತಾಯಿ. ಮದುವೆಯನ್ನು ಒಳ್ಳೆ ಉದ್ದೇಶಕ್ಕಾಗಿ ನಿಲ್ಲಿಸಿ ಮನೆಗೆ ಹುಡುಗನ ಕರೆತಂದ ಹುಡುಗಿಯನ್ನು ಮನೆಯಿಂದ ಹೊರಗೆ ಕಳಿಸಿದರೆ ತಾನು ಸಾಯುವೆನೆಂಬ ಅವಳ ದೊಡ್ಡಮ್ಮ,,

ಉಫ್,,!! ಒಂದು ದಿನದ ಇಡೀ ಎಪಿಸೋಡಿನಲ್ಲಿ ಬರೀ ಸಾವೇ,,, ಎಲ್ಲದಕ್ಕೂ ಅದೇ ಉತ್ತರ,, ಇಲ್ಲಿ ಆತ್ಮಹತ್ಯೆಯ ಇಲ್ಲವೇ ಸಾಯಿಸಿಬಿಡುವ ಬೆದರಿಕೆಗಳು.. !!

ತಾವು ಸದಾ ಏನನ್ನು ಕೇಳುತ್ತಿರುತ್ತೇವೋ, ನೋಡುತ್ತಿರುತ್ತೇವೋ ಅವುಗಳನ್ನೇ 'ನಿಜ'ವೆಂದು ಒಪ್ಪಿಕೊಂಡುಬಿಡುವುದು 'ಮುಗ್ಧ ಮನಸ್ಸುಗಳು'. ಮನರಂಜನೆಗೆ ಎಂದೇ ಇರುವ ಇಂತಹ ಅವಕಾಶಗಳು ನಮಗರಿವಿಲ್ಲದೆ ಹಿಡಿವ ಮೂಢ ದಾರಿಯಂತಾಗದಿರಲಿ. ಬಹಳಷ್ಟು ಬಾರಿ ಪ್ರೀತಿಯ ತೀವ್ರತೆಯಲ್ಲಿ ಕಿರಿವಯಸ್ಸಿನ ಜೀವಗಳಲ್ಲಿ ಈ ಆತ್ಮಹತ್ಯೆಯ ತುಡಿತವೊಂದು ಪ್ರೀತಿ ಹೆಸರಿನಲ್ಲಿ ಗೊತ್ತಿಲ್ಲ ಹುಟ್ಟಿಕೊಳ್ಳೊ ಅಙ್ಞಾನವಾಗಿಬಿಟ್ಟಿರುತ್ತದೆ. ಪ್ರೀತಿಯನ್ನು ತೋರಿಸೋ ಮಾರ್ಗವಾಗಿ ಭಾವಿಸೋ ಸಂದರ್ಭಗಳನ್ನೂ ನಾವಿಂದು ಈ ಸಮಾಜದಲ್ಲಿ ನೋಡುತ್ತಿದ್ದೇವೆ.

ಹಾಗಾಗಿ ಕಥೆಗಳಲ್ಲಿ ಇನ್ನಾದರೂ ಈ ಆತ್ಮಹತ್ಯೆಗಳಿಗೆ,, ಸಾಯಿಸೋ ಪ್ರವೃತ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವುದ ನಿಲ್ಲಿಸಲಿ,,,, ಅದರಲ್ಲೂ ಪ್ರೀತಿ ಹೆಸರಲಿ,, :-)
ನಮ್ಮ ಕಥೆಗಾರರು ಆತ್ಮಹತ್ಯೆಗಳಿಂದ ಹೊರಬರಲಿ, ಆತ್ಮಹತ್ಯೆಯನ್ನು ಒಂದು ಅಸ್ತ್ರವನ್ನಾಗಿ ನಿಲ್ಲಿಸೋ ಪ್ರಯತ್ನಗಳ ಕೈಬಿಟ್ಟು
ಎಲ್ಲಾ ನೋವಿಗೂ ಮೀರಿದ ಜೀವನದ ಆಕರ್ಷಣೆಗಳನ್ನು ತೆರೆದಿಡುವ ಪ್ರಯತ್ನಗಳ ಕೈ ಹಿಡಿಯಲಿ ಎಂದು ಆಶಿಸೋಣವೇ? :-)

ಅನಿಸಿದ್ದು,, :-)

26/06/2014

Friday, 20 June 2014



'ನಾ ನಿನ್ನೊಡನಿರುವ
ಅರೆ ಹೊತ್ತನೂ
ಕಳೆದುಬಿಡುವಿಯಲ್ಲೇ
ಹೀಗೆ ನಿದ್ದೆ ಇಲ್ಲದೆ'
ಎನುವ ಅವನಳಲಿಗೂ
ಕನಸು ಸಹಕರಿಸಿ
ನನ್ನನ್ನದರೊಳ
ಕರಗಿಸಿಬಿಡುವುದೇ
ಕಡೇ
ಬೇಡಿಕೆಯಿದೆ,,

________________

'ನಮ್ಮವರು' ಎಂದು
ಮುಂಬಾಗಿಲಲ್ಲಿ ನಿಂತು
ಕೂಗಿ ಹೇಳಿದ್ದೆ
ಹಿಂದುರುಗಿ
ನೋಡುವಷ್ಟರಲ್ಲಿ
ಹಿಂಬಾಗಿಲಿನಿಂದ
ಓಡಿಬಿಟ್ಟಿದ್ದರು
ಈಗ ಹಿಂಬಾಗಿಲಿಗೆ
ಬೀಗ ಜಡಿದಿರುವೆ
ಹೆಬ್ಬಾಗಿಲಿಗೂ
'ನೋ ಎಂಟ್ರಿ' ಬೋರ್ಡ
ಸಿಕ್ಕಿಸಿರುವೆ!

20/06/2014

Thursday, 19 June 2014

ಕವನ

ತೆರೆದ ಆ ಆಕಾಶ,,,

ಆಕಾಶವ ನೋಡಲು ನೂಕು ನುಗ್ಗಲೇಕೆ?
ಹಾಗೆಯೇ ಏನೋ ತೆರೆದ ಮನಸ್ಸುಗಳು!

ಮುಚ್ಚಿಟ್ಟುಕೊಂಡ ರಹಸ್ಯಗಳೇ ಪ್ರಿಯ; ಭೂಮಿಯಂತೆ,
ಅವಳ ಕೆದಕುತ, ಕೊರೆಯುತ, ಹಿಂಸಿಸುತ,

ಮುಚ್ಚಿಟ್ಟ ಮನಸು ಆಸಕ್ತಿದಾಯಕವಾದರೂ ಧಾಳಿಗಳ ನಿರಂತರ ಬಲಿ
ತೆರೆದ ಮನವದು ಸದಾ ನಗುತು, ದೂರ ಉಳಿವ ನಿರಾಸಕ್ತ  ವಿಷಯ,

ಅನಂತ ರಹಸ್ಯಗಳ ತವರೇ ಧರೆಯಾದರೂ
ತೆರೆದಂತ ಆಕಾಶಗಂಗೆಯಲ್ಲಿಯೇ ಅವಳ ತವರು!

ಆಸಕ್ತಿ ನಮಗದು ಎಲ್ಲಿಯದು?
ಧರೆಯದೋ? ಇಲ್ಲವೇ ಅವಳನ್ನೊಡಲಿಟ್ಟುಕೊಂಡ ಆಕಾಶದೋ?

ಆಕಾಶವೋ ಇಳೆಯಂತೆ ಅನೇಕ ಆಸಕ್ತಿಗಳ ಹರವು
ನಾವೊಂದನ್ನಷ್ಟೇ ಕಂಡೇವು ನಮ್ಮ ಕಣ್ಣಳತೆಯಂತೆ

ತೆರೆದಿಟ್ಟ ಮನವೂ ಹಾಗೆಯೇ,
ಕಂಡಂತೆ ಕಾಣದಂತೆ ಹಲವು ವಿಸ್ಮಯ

ಕಾಣದಿದ್ದ ನಮ್ಮ ಕುರುಡುತನಕೆ
ಇಲ್ಲವೆನ್ನುವಂತಿಲ್ಲವಲ್ಲಾ?!

ತೆರೆದಕೊಂಡ ಮಾತ್ರಕೆ ಜೊಳ್ಳಲ್ಲ!
ಮುಚ್ಚಿಟ್ಟ ಮಾತ್ರಕೆ ಶ್ರೇಷ್ಠವೂ ಅಲ್ಲ!

ದಿವ್ಯ ಆಂಜನಪ್ಪ

19/06/2014

Wednesday, 18 June 2014

ಮನದ ಮಾತು

ಆತ್ಮೀಯರು ಎಂದರೆ,,,,, ?!



'ನಾನು ನನ್ನ ಕನಸು'ನಲ್ಲಿರುವ ಅಪ್ಪನಿಗೆ ತನ್ನೆದುರು ತನ್ನ ಮಗಳು ಹುಡುಗನೊಬ್ಬನ ಪ್ರೀತಿಯಲ್ಲಿರುವುದು ಏಕೋ ಸಹಿಸಲಾಗದು! ಮಗಳ ಮೇಲಿನ ಪ್ರೀತಿಯೇ ಇದಕ್ಕೆ ಕಾರಣ. ಮಗಳು ಎಲ್ಲಿ ತನ್ನಿಂದ ದೂರಾಗಿಬಿಡುವಳೋ ಎಂಬ ಆತಂಕ. ನಿಜ, ಮಗಳನ್ನು ಮದುವೆ ಮಾಡಿಕೊಡಲೂ ತಂದೆಯ ಮನಸ್ಸು ನಿಜಕ್ಕೂ ಬೇಡವೆಂದೇ ಹೇಳುವುದುಂಟು. ಹೀಗಿರುವಾಗ ಸ್ವಂತ ಮಗಳಲ್ಲದಿದ್ದರೂ ಒಮ್ಮೊಮ್ಮೆ ಮಗಳೂ ಎಂದು ಭಾವಿಸಿ ಅವಳನ್ನು ಆತ್ಮಿಯವಾಗಿ ಕಾಣುವಾಗ ಆ ತಂದೆ ಎಂಬ ಸ್ನೇಹಿಯೂ ನಿಜ ತಂದೆಯಂತೆ ನಡೆದುಕೊಳ್ಳುವುದೂ ಇಂತಹುದೇ ಕೆಲವು ಸಂದರ್ಭಗಳಲಿ. ಪಕ್ಕಾ ತಂದೆಯಾಗಿಸೋ ಪ್ರಸಂಗಗಳು!, ಚೂರು ಬಿಂಕವನ್ನೂ ತಂದುಬಿಟ್ಟಿರುತ್ತದೆ. ಆ ಅನುಭವವೇ ಅಮೋಘ!.

ರಕ್ತ ಸಂಬಂಧಿಗಳ ಪ್ರೇಮವನ್ನು ನಾವು ನಮ್ಮ ಹಕ್ಕುಗಳೆಂದು ಭಾವಿಸಿಬಿಡುತ್ತೇವೆ. ಅದೇ ರಕ್ತ ಸಂಬಂಧವಲ್ಲದ ಸಂಬಂಧದಲ್ಲಿ ಸ್ನೇಹಿತರು, ತಂದೆ, ತಾಯಿ, ತಮ್ಮ, ಪ್ರೇಮಿ,,, ಎನಿಸಿಕೊಳ್ಳೊ ಇವರ ಪ್ರೇಮದಲ್ಲಿ ಹೊಸ ಹುಮ್ಮಸ್ಸನ್ನು ಕಂಡುಕೊಳ್ಳುತ್ತೇವೆ, ಹಾಗೂ ಇವರುಗಳಲ್ಲಿ ಅತೀ ಭಾವುಕರಾಗಿಬಿಡುತ್ತೇವೆ. ಯಾಕೋ ತಿಳಿಯದು.

'ಪ್ರೇಮಿ'ಯನ್ನು ಈ ಸಂದರ್ಭದಲ್ಲಿ ಮರೆತಂತೆ ಮುನ್ನೆಡೆಯೋಣ, ಏಕೆಂದರೆ ಅದು ಇವೆಲ್ಲವನ್ನೂ ಕೆಲವೊಮ್ಮೆ ಮೀರಿಸಿಬಿಡುವಂತಹುದು. ಏಕೆ? ಹೇಗೆ? ಎಂಬಿತ್ಯಾದಿಯಾಗಿ ಚಿಂತಿಸೋಣ ಅದರ ಬಗ್ಗೆ ಮತ್ತೊಂದು ಅವಧಿಯನ್ನು ಪಡೆದು.

ಹಾಂ,, ರಕ್ತ ಸಂಬಂಧಿಯಲ್ಲದ ಸಂಬಂಧಿಕರು,,, 
ಹೌದು ಇವರು ಹೆಚ್ಚು ಆತ್ಮೀಯರು ಎನಿಸಿಕೊಂಡುಬಿಡುತ್ತಾರೆ. ಕಾರಣವಿಷ್ಟೇ ಯಾರು ತಮ್ಮನ್ನು ತಮ್ಮಂತೆ ಇಷ್ಟಪಡುತಾರೋ ಮನಸ್ಸು ಅವರೆಡೆಗೆ ವಾಲುವುದುಂಟು. ನಮ್ಮೆಡೆಗೆ ನಕಾರಾತ್ಮಕ ನಿಲುವನ್ನು ಹೊಂದುತ್ತಿದ್ದಂತೆ ಅವರು ಯಾರೇ ಆದರೂ ನಮ್ಮಿಂದ ದೂರಾಗಿಬಿಡುತ್ತಾರೆ. ಹುಟ್ಟುವಾಗ ಎಲ್ಲರೂ ಒಂದೇ, ಬೆಳೆಯುತ್ತಾ ಪರಿಸರದಂತೆ ನಾವಾಗಿರುತ್ತೇವೆ. ಹೀಗಿರುವಾಗ ಒಂದು ಹಂತದಲ್ಲಿ ನಮ್ಮಲ್ಲಿ ತಿಳುವಳಿಕೆ ಮೂಡಿದ ಮೇಲೂ ನಾವು ನಮ್ಮನ್ನು ಸರಿಪಡಿಸಿಕೊಳ್ಳದಿದ್ದರೆ ಅದು ನಮಗೇ ಕುತ್ತು. ಹೀಗೆ ಸರಿಪಡಿಸಿಕೊಳ್ಳುತ್ತಾ ನಾವು ನಮ್ಮೊಂದಿಗಿನ ಆತ್ಮೀಯರೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತಾ ಹೋಗುತ್ತೇವೆ. ಮನೆಯಲ್ಲಿ ನಮ್ಮನು ಸಹಿಸಿಯಾರು, ಆದರೆ ಹೊರಗಿನವರು ಅಸಾಧ್ಯ, ಯಾವಾಗ ನಾವು ಹೊರಗಿನರೊಂದಿಗೂ ಹೊಂದಿಕೊಳ್ಳಲಾರಂಭಿಸುತ್ತೇವೋ ಆಗ ನಮ್ಮ ಮನೆಯ, ಹೊರಗಿನ ಪ್ರಪಂಚಕ್ಕೂ ಸರಿ ಹೊಂದುತ್ತೇವೇನೋ! 

ಯಾರಿಗೋ ನಾವು ಸ್ನೇಹಿತೆ, ಅಕ್ಕನೋ, ಅಮ್ಮನೋ ತಂದೆಯೋ ಆಗಿಬಿಡುವುದಿಲ್ಲ, ಮನುಷ್ಯ ಎಷ್ಟೇ ಯಾಂತ್ರಿಕ ಜೀವನಕ್ಕೆ ಅಂಟಿಕೊಂಡರೂ ಅವನಲ್ಲಿನ ಮಾನವೀಯತೆಗಳು ಅವನೊಳು ಅಪ್ಪ, ಅಮ್ಮ, ತಮ್ಮ, ಎಂಬಿತ್ಯಾದಿ ಸಂಬಂಧಗಳು ಹುಟ್ಟಿಹಾಕಿಬಿಡುತ್ತದೆ. ಯಾಂತ್ರಿಕತೆಯ ದಣಿವು ಮಾನವೀಯತೆಯಲ್ಲಿ ಅಡಗಿಬಿಡುತ್ತದೆ. ಆತ್ಮೀಯರಲ್ಲಿ ಆಸಕ್ತರಾಗಿಬಿಡುತ್ತೇವೆ. ಹೀಗೆ ಎಂದಾದರೂ ಅವರೆಲ್ಲೋ ನಮ್ಮಿಂದ ದೂರಾಗುತ್ತಿದ್ದಾರೆ ಎನಿಸಿದಾಗ ಮನಸು ತನ್ನ ಯಾಂತ್ರಿಕ ಬದುಕನ್ನೂ ಮರೆತು ಕುಳಿತುಬಿಡುತ್ತದೆ, ಮನಸ್ಸನ್ನು ಕೊರೆದುಬಿಡುತ್ತದೆ,,

ಮಾನವೀಯ ಮೌಲ್ಯಗಳಲ್ಲಿ ತುಸು ನೆಮ್ಮದಿ ಕಾಣೋ ಪ್ರಸಂಗಗಳನ್ನು ಇವೆಯಂತಾದರೆ, ನಾವು ಯಂತ್ರಗಳೇ ಆಗಿದ್ದರೂ ಕೆಲ ಕಾಲ ಅಲ್ಲಿ ನೆಲೆಸಿಬಿಡೋಣ,
ಬನ್ನಿ ನಾವೆಲ್ಲರೂ ದಣಿವಾರಿಸಿಕೊಳ್ಳೋಣವೇ,,,  :-)

18/06/2014

Tuesday, 17 June 2014

ಕವನ

ತಿರುಕನ ವೇದಾಂತ,,,, 


ಮನೆಯ ಬಾಗಿಲು ಬಡಿದು ಬೇಡಿದೆ,
ಹಸಿವಿದೆ ಅನ್ನವಿಕ್ಕೀ ಎಂದು,
ಬರೀ ಆಗ ಆಸೆಯಿತ್ತೆನಗೆ,
ಮುಖದ ಮೇಲೆಯೇ ಬಾಗಿಲು ಬಡಿದರು,

ಮುಂದಿನ ಮನೆ ಮುಂದಣ ಹೋಗಿ ಬೇಡಿದೆ,
ಇದ್ದವರಾಗಿ ಕೊಡುವವರಂತೆ ಮಾಡಿ
ಇಲ್ಲೆಂದು ಕೈಯಾಡಿಸಿ ಮುಂದೆ ಹೋಗೆಂದರು
'ನಿರೀಕ್ಷೆ' ಹುಟ್ಟಿಸಿದ್ದರು ಕೊಡುವವರಂತೆ,

ಮುಖದ ಮೇಲೆ ಬಡಿದ ಅಷ್ಟೂ ಬಾಗಿಲುಗಳು
ಮತ್ತೂ ಛಲ ಹುಟ್ಟಿಸಿದ್ದವು;
ನಾನು ಬೇಡಿಯಾದರೂ ಸರಿ ಈ ಹೊತ್ತಿಗೆ ಅನ್ನವ ಪಡೆವೆನೆಂದು
ಹೌದು ಮುಂದಿನ ಬಾಗಿಲೂ ತಟ್ಟಿಯೇಬಿಟ್ಟೇ
ನನಗಿದ್ದದ್ದು ಅನ್ನದ ಹಸಿವು; ಹೃದಯದ ಪ್ರೀತಿಯಲ್ಲ!

ಪ್ರೀತಿಗಾದರೂ ಒಂದೇ ಬಾಗಿಲು!
ಪ್ರೀತಿ ಬಾಗಿಲಿಗೆ ಕೈ ಕಾಲು ಕಟ್ಟಿಕೊಂಡಿರುವೆ
ಬಯಸುವೆನು, ಬೇಡಲಾರೆ,
ತಿರಸ್ಕಾರವ ಎದುರಿಸೋ ಶಕ್ತಿಯಿಲ್ಲ,,
ಪ್ರೀತಿ ಎಂದರೆ ಅನ್ನವಲ್ಲ ಬೇಡಲು,
ಪ್ರೀತಿ ಎಂದರೆ ಹಸಿವಲ್ಲ ಇಂಗಿಸಲು!!

17/06/2014

ಓಡುವ ಮೋಡಕೆ
ಬೇಲಿ, ಬಲೆ ಸಾಧ್ಯವೇ?!
ಬಲವಂತಕೆ ಮಳೆಯೂ
ರಗಳೆಯೇ;
ಅದರಂತೆ
ಗಾಳಿಗೂ ಅದರೊಳ
ಪರಿಮಳಕೂ,,

________________

ಅನಾಯಾಸದಿ
ಕಣ್ಣೆವೆಗಳಪ್ಪಿಕೊಳ್ಳಲು
ಸುಖ ನಿದ್ರೆ ಇರಬೇಕು,
ಇಲ್ಲವೇ
ತಂಗಾಳಿಯ ತಂಪು
ಬಿಸಿಲ ಹೊಳಪು
ನಶೆಯ ಅಮಲು,
ಮತ್ತೂ
ಪ್ರೀತಿಯ ಘಮಲು

_______________________

ನಗುವೊಂದೇ ಕೊನೆ ಉತ್ತರ
ಎಲ್ಲವೂ ಗೊಂದಲವೇ ಆದಾಗ!

17/06/2014
________________________

ಎನ್ನಭಿರುಚಿಯ ಕುರಿತು ಕುತೂಹಲ,
ಅದಕ್ಕಾಗಿಯಾದರೂ ಸಂಭಾಷಿಸುತ್ತಾರೆ,
ನನಗೋ ಆಲಸ್ಯ, ತೋಡಿಕೊಳ್ಳಲು
ಅಭಿವ್ಯಕ್ತಿಯ ಬದಲು;
ಯಾರನ್ನೂ ಒಂದೇ ಬಾರಿ ನಿರ್ಧರಿಸದಿರುವುದು
ಒಳಿತೇನೋ;
ನಿಂತ ನೀರನ್ನು ಅಳೆದಂತೆ ಫಲಿತಾಂಶ!

_______________________

ಸುಮ್ಮನೆ ಉತ್ತರಿಸುತ್ತಾ ಹೋದೆ
ಪ್ರಶ್ನೆಗಳೇ ಇಲ್ಲ ಹಾಳೆಗಳಲಿ!
ಈಗವು ಪಟಪಟನೆಂದು
ನನ್ನ ಪ್ರಶ್ನಿಸುತ್ತಲಿವೆ;
ನಾನೀಗ ಅನುತ್ತೀರ್ಣ!

______________

ಹೂವಿಗೋ
ತಾನು ಸೊಗಸೆಂಬ
ಗರಿಮೆ ಇಲ್ಲ
ತಂಗಾಳಿಗೋ
ತಾನೇ ಅವಳ ಬಳಿ ಸಾರುವೆನೆಂಬ
ಕೀಳರಿಮೆ ಇಲ್ಲ,
ಮಿಡಿವ ಮನಸಿಗೆ
ತಾನು ಹೂವೋ ತಂಗಾಳಿಯೋ
ಆಗಿದ್ದರೆ ಚೆನ್ನಿತ್ತು
ಎನಿಸದೇ ಇರಲಿಲ್ಲ,,

16/06/2014

Monday, 16 June 2014


ತಲೆ ನೋವಿಗೆ ಪರಿಹಾರ,,,

ಮನಸ್ಸನ್ನು ತಲೆಯ ಕೆಲಸಕ್ಕೊಪ್ಪಿಸಿ
ಅದರ ಕೈಲಿಟ್ಟು ಮರೆತರೆ
ತಲೆನೋವು,
ಚೂರು ಹೃದಯಕ್ಕೂ, ಕಿವಿ ಮೂಗು, ಕಣ್ಣಿಗೂ,
ಕಳಿಸಿದರೆ ಮನ ತುಸು ಹಗುರ-ವಿಶ್ರಾಂತಿ,
ಮನಸ್ಸೊಮ್ಮೆ ಅಭಿವ್ಯಕ್ತಿಯಾದೊಡೆ
ಬಾಯಿಯೂ ಹರಟಿ
ಹಗುರ ಮನಸ್ಸು,
ತಲೆನೋವುರಹಿತ!!!!

__________________

'ನಾನು'
ಎನ್ನುವುದೆಲ್ಲವ
'ನೀ' ತಿಳಿದ ಮೇಲೆ
ಆಸಕ್ತಿಯಿಲ್ಲ
ನಿನಗೆ ನನ್ನ ಮೇಲೆ;
ನನಗೆ ನಿನ್ನ ಮೇಲೆ
ಎಂಬುದಷ್ಟೇ ಸುಳ್ಳು
ನಾನು, ನೀನು ನಿಂತ
ಹರಿವು ಎಂಬಂತೆ!!

_____________________

ವಾಚಾಳಿಗಳಾದರೂ
ಹೆಸರು ಮೂಗರು,
ಬುದ್ದಿವಂತರಾದರೂ
ದಡ್ಡರು,
ನಿಪುಣರು ಎನಿಸಿಕೊಂಡಿದ್ದರೂ
ವಿದ್ಯಾರ್ಥಿಗಳು,
ಇದ್ದಂತೆ ಒಪ್ಪಿಕೊಳ್ಳಲಿಲ್ಲಿ
ಮಾನಗಳೇ ಏರುಪೇರು
ಜನರಂತೆ!

______________________

ನಿರೀಕ್ಷೆಗಳು ಕುಸಿಯುತ್ತಿವೆ,
ಎಂದುಕೊಳ್ಳುತ್ತಿದ್ದೆ
ಕನಸುಗಳು ಬೆನ್ತಟ್ಟಿ ಎಚ್ಚರಿಸಿದವು!

15/06/2014
ಇಂದು ಅಪ್ಪನದಿನದ ಪ್ರಯುಕ್ತ ಪ್ರಸಾರವಾದ 'ಆಕಾಶವಾಣಿಯ ಯುವವಾಣಿ' ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದು, ಕಾರ್ಯಕ್ರಮವನ್ನು ಮನೆಯವರಿಗೆ ಕೇಳಿಸಲು ತುಸು ಭಯದಿಂದಲೇ ಸಜ್ಜಾಗಿದ್ದೆ. ಕಾರ್ಯಕ್ರಮ ಶುರುವಾಯ್ತು. ನನಗೆ ಒಳಗೊಳಗೇ ಆತಂಕ. ಕಾರಣ ಅಪ್ಪ ನನ್ನ ಮಾತುಗಳನ್ನು ಕೇಳಲು ಕುಳಿತಿದ್ದರು. ಅತೀ ಶೀಘ್ರದಲಿ ಕೋಪಗೊಳ್ಳೋ ಅಪ್ಪನ ಮಾತಿಗೆ ಎಂದೂ ಹೆದರುವವಳು ನಾನು, ಹಾಗೆಯೇ ಕೆರಳುವವಳು!  :-P

ಎಲ್ಲರ ಮಾತುಗಳನ್ನೂ ಗಮನ ಕೊಟ್ಟು ಆಲಿಸಿದರು. ನನ್ನ ಮಾತುಗಳು ಶುರುವಾದವು, ಹತ್ತಿರ ಒಂದೆಜ್ಜೆ ಮುಂದಿಟ್ಟು ಮೆಲ್ಲನೆ ಹೇಳಿದೆ, ''ಅಣ್ಣಾ, ಇದು ನನ್ನದು,,", ಒಂದೇ ಉಸಿರಿಗೆ ಹೇಳಿದ ಹಾಗಿತ್ತು ನನ್ನ ಮಾತುಗಳು. ಜೊತೆಗೆ ನಾನು ನನ್ನ ಧ್ವನಿ ಕೇಳಿದ್ದು ಇದೇ ಮೊದಲು, ಅದೂ ಆಕಾಶವಾಣಿಯಲ್ಲಿ! ನನ್ನ ಮಾತು ಅದೇನೋ ತೀರಾ ಚಿಕ್ಕ ಹುಡುಗಿಯ ಕೋಪಗೊಂಡ ಮಾತುಗಳಂತೆ ಕಂಡವು. ಅಪ್ಪನ ಕುರಿತಾಗಿ ಹೇಳಿದ್ದ ವಿಚಾರವೂ ಕೂಡ ಅಂತದ್ದೇ ಸ್ಟ್ರಾಂಗ್ ಅನ್ನಬಹುದು. ಬಹು ನಿರೀಕ್ಷಿತ ಅಣ್ಣನ 'ಪ್ರತಿಕ್ರಿಯೆ'ಗೆ ಕಾದ ನಾನು ಅಣ್ಣನಲ್ಲಿ ಕಂಡದ್ದು ಭಾವುಕತೆ,,,ಇನ್ನೆರಡು ಮಾತು ನನ್ನವು ಹೆಚ್ಚಿದ್ದಿದ್ದರೆ ಬಹುಶಃ ಅಣ್ಣ,,, :-)

ನನ್ನ ಮಾತುಗಳನ್ನು ಕೇಳಿದ ಅಣ್ಣ ಮೌನರಾದರೂ. ಮಹಾನ್ ತರ್ಲೆಯಾದ ನಾನೂ ಕೂಡ. ಮೌನ ಮಾತುಗಳಾಡುತ್ತವೆ ಎನ್ನುವುದು ಎಷ್ಟು ಸತ್ಯ. ಅಣ್ಣ, ಈಗ ಮಾತನಾಡುವುದು ನನಗೂ ಬೇಡವಾಗಿತ್ತು. ಈ ಮೌನಗಳ ಮುರಿಯಲೆಂದೇ ಎಂಬಂತೆ ದೂರದೂರಿನಿಂದ ಅಕ್ಕ-ಭಾವ ಫೋನ್ ಮಾಡಿ ಹರ್ಷ ವ್ಯಕ್ತಪಡಿಸಿದರು. ತುಂಬಾ ಖುಷಿಪಟ್ಟರು. ಎಲ್ಲರ ಖುಷಿಯಿಂದ ನನಗೂ ಖುಷಿ ಈಗ ದುಪ್ಪಟ್ಟು,,, :-)

15/06/2014

Sunday, 15 June 2014

ಅಪ್ಪ,,

ಅಪ್ಪ ಬಂಡೆಯೊಳ ಬೆಂಕಿ
ನನ್ನೊಳ ಕಾಂತಿ!!
ಸೋಲಿನಾಚೆಯ ಜಯಕೆ
ಗಂಡಾಗೋ ಛಲ ಹುಟ್ಟಿಸೋ ಪತಾಕೆ!!

15/06/2014

Saturday, 14 June 2014

ಹೂ ಪಕಳೆಗಳ
ಸವರುತ್ತ ಬೆರಳುಗಳು,
ಮನವು ನಿನ್ನಧರವ ನೆನೆದಂತೆ
ಫಟ್ಟನೆ ಚುಚ್ಚಿದ ಮುಳ್ಳು
ತನ್ನ ಹತಾಶೆಯ ತೋರಿತು
ಈ ಹಿಂದೆಯೂ
ಕವಿತೆ ಕಟ್ಟಿ ಬರೆದೆನೆಂದು
ಕೆಂಪಗೆ ಮುನಿದಿದ್ದಳೀ ಗುಲಾಬಿ,,

_________________

ಸುನಾಮಿಗೂ ಮುನ್ನ
ಶಾಂತ ಸಾಗರವೇ
ಆಗಿತ್ತು!

___________________

ಬಹಳ ನಿರಾಳ ಸ್ಥಿತಿಯು
ಮತ್ತೇರಿದಂತೆ
ಮಂಪರು ತರಿಸುತ್ತದೆನೋ,,
ಪ್ರೀತಿಯಲಿ ಹೀಗೆಯೇ,
ಮಳೆಯಲಿ, ಪ್ರೀತಿ ಗುಂಗಲಿ,,

14/06/2014

Thursday, 12 June 2014


ಹೀಯಾಳಿಸಿದ ಅಷ್ಟೂ ಜನರೂ
ಅಗೋ,,
ಅಲ್ಲಿ ಅಲ್ಲಿಯೇ ನಿಂತರು
ನಾನು ಕಾಣುವಂತೆ,,
ಇನ್ನೂ ಹಾಗೆಯೇ ಹೀಗಳೆಯುತ್ತ,,
ನನ್ನನಲ್ಲ,, ಮತ್ತಿನ್ಯಾರನ್ನೋ,,
ಅವರ ಕೆಲಸವೆಲ್ಲಾ ದಾರಿ ತಪ್ಪಿ,
ಇದುವೇ ಗುರಿಯಾಗಿದೆ,
ಛೇ,,
ಪಾಪ,!
ಹೀಗಾಗಬಾರದಿತ್ತು
ಎನಿಸುತ್ತದೆ ನನಗೂ,,
ಏನು ಮಾಡಲಿ,,
ನಾನು ಹೀಗಳೆಯುವಂತಿಲ್ಲ,,!!

_______________

ಕಣ್ಣೆದುರು
ನೀನಿಲ್ಲಿದ ಹೊತ್ತಲಿ
ನಿನ್ನ ನೆನೆದಷ್ಟು
ನಿನ್ನೆದುರು
ಭಾವಗಳ
ತೋರ್ಪಡಿಸಲಾರೆ
ಗೆಳೆಯಾ,
ಹೀಗೇಕೆ?!
ನಿನಗೂ ಹೀಗೆಯೇ?!

___________________

ನನ್ನ ಊಹೆಗೂ ಮೀರಿದ
ನಿನ್ನ ಪ್ರೀತಿಗೆ
'ಮೌನ' ಉತ್ತರ,,!

_________________

ಬಾನ ಚಂದಿರನಿಗೆ
ತುಂಬು ಯೌವ್ವನವಿಂದು
ಎಂದರೆ,
ಅವನ ಹಿಂದೆ
ಸೂರ್ಯ ನಕ್ಕನು
ಕಣ್ಣು ಹೊಡೆದು,
ಅದಕ್ಕೇ ಈ ರಾತ್ರಿ,
ಚಂದಿರನ ಮಿಂಚಿಸಲೂ
ಬೆಳದಿಂಗಳ ಹರಿಸಲು,,,

__________________

ಎಲ್ಲಾ ಅವ್ಯವಸ್ಥೆಗಳಿಗೂ
ತಾನೇ ಉತ್ತರವಾಗುವ
ಹಂಬಲದ ಹುಂಬನಿಗೂ
ಒಂದು ಪ್ರಶ್ನೆಯಿದೆಯಂತೆ,,!

12/06/2014

____________________________

ಪ್ರಿಯನ ಕಣ್ಣೋಟಕೆ ಸೋಲದ ಮನವಿಲ್ಲ
ಎನ್ನ ಸೋಲ ನೋಡಲಿಚ್ಚಿಸದೆ
ಎನ್ನನೆಂದೂ ಕಣ್ಣೆತ್ತಿ ನೋಡನಂತೆ,
ನಾನೂ ಕಾದಿರುವೇ ಆ ಕಾಡೋ ಕಣ್ಗಳಿಗೆ,,

________________________

ಕೆಲವೊಮ್ಮೆ ನಮ್ಮ ಹೆಚ್ಚು 'ಇಲ್ಲ'ಗಳು
ಒಂದು 'ಹೌದನ್ನು' ಹೆಚ್ಚು ಸಾರುತ್ತಿರುತ್ತದೆ,,

_____________________

ಅದ್ಯಾವ ಉಪ್ಪರಿಗೆಯ
ಕೊಪ್ಪರಿಗೆಯಲ್ಲಿಟ್ಟರೆ
ಈ ಹೃದಯ
ಮಿಡಿವುದ
ಬಿಡುವುದೋ?
ಸುಮ್ಮನೆ ನಿನಗಷ್ಟು
ಕಾಟ
ನನ್ನಿಂದ;
ಸಿಡುಕಿ
ನಿನ್ನದೊಂದೇ ದೂರು
ಕನಸಲೂ
ಕಟ್ಟಿ ಹಾಕುವೆನೆಂದು!!

___________________


ಮೌನವೆಲ್ಲಿ ಕೊಂದುಬಿಡುವುದೋ
ಈ ಮನಸನು;
ಎನಿಸಿ ಮತ್ತೂ ಮಾತನಾಡುವೆ
ಮಾತನಾಡುತ್ತಲೇ ಇರುವೆ,,!

12/06/2014

Wednesday, 11 June 2014

ತುಮುಲಗಳು,,,, 


"ಕನಸು ಕಾಣುವ ಹೊತ್ತುಗಳೆಲ್ಲವನ್ನೂ ಆತಂಕಗಳಲಿ ಕಳೆದುಬಿಟ್ಟೆ, ಹಿಂದೆ ಬಿದ್ದ ಹುಡುಗರನ್ನೆಲ್ಲಾ ಕಡೆಗಣಿಸಿದ್ದೂ ಅಲ್ಲದೆ ಅವಮಾನಿಸಿಯೂಬಿಟ್ಟಿದ್ದೆ....... ", " ನಾನೆಷ್ಟು ಒರಟಾಗಿದ್ದೆ,,,? ಯಾಕೋ ತಿಳಿಯದು". ದೀರ್ಘವಾದ ನಿಟ್ಟುಸಿರಿಟ್ಟು ವಾಸ್ತವಕ್ಕೆ ಬಂದಿದ್ದಳು ನಕ್ಷತ್ರ. ಆ ಸಂಜೆಯ ಅದ್ಯಾವುದೋ ಧಾರಾವಾಹಿಯಲ್ಲಿನ ಕಾಲೇಜು ಹುಡುಗಿಯಲ್ಲಿನ ಪ್ರೇಮ-ಪ್ರೀತಿಯ ಸಂವೇದನೆಗಳು ಅವಳನ್ನು ಬಹುವಾಗಿ ಪ್ರಶ್ನಿಸಿತ್ತು. ಅವಳ ನಗು, ನಾಚಿಕೆ, ಪ್ರಿಯತಮನ ಕಾಣೋ ಆತುರ, ಬಂದಾಗಿನ ಉಲ್ಲಾಸ, ಮಾತಿದ್ದರೂ ಆಡದೇ ಒದ್ದಾಟ, ಓರೆ ನೋಟ, ಏನೋ ಆವೇಗ ಓಹ್, ರೋಮಾಂಚನ,,!!. ಸಿನೆಮಾಗಿಂತ ಕಡಿಮೆಯೇನಿಲ್ಲ ಈ ಧಾರವಾಹಿ, ಒಂದು ಕಾದಂಬರಿ ಓದಿಸಿಕೊಂಡಂತೆ ಭಾವಗಳ ಅನುಭವವನ್ನು ನೀಡುತ್ತದೆ'' ಎಂದುಕೊಳ್ಳುತ್ತಾ ತನ್ನ ಬಗ್ಗೆ ಯೋಚಿಸತೊಡಗುತ್ತಾಳೆ.

''ತಾನು ಇವುಗಳೆಲ್ಲವನ್ನೂ ತನ್ನ ಪಾತ್ರದಲ್ಲಿ ತಂದುಕೊಳ್ಳಲೇ ಇಲ್ಲವಲ್ಲಾ ವ್ಯರ್ಥಗೊಂಡ ವಯಸ್ಸು ಸುಮ್ಮನೆ ಕಳೆದುಬಿಟ್ಟೆ. ಎಲ್ಲಾ ಕಟ್ಟುಪಾಡುಗಳನ್ನೂ ಅನುಸರಿಸಿ ತನಗಾದ ಒಳಿತಾದರೂ ಏನು? ಏನೂ ಇಲ್ಲ. ಒಂದು ನಗುವಿಲ್ಲ, ಒಂದು ಸಮಾಧಾನ, ಪ್ರೀತಿ, ಸಾಮಿಪ್ಯ,, ಬದುಕಲಿ ಬೇಕಾದ ಬಾಂಧವ್ಯ ಭರವಸೆಗಳನ್ನೇ ನಾನು ಪಡೆಯದಾದೆ. ತನ್ನೆದುರುಗೊಂಡ ಅಷ್ಟನ್ನೂ ತಿರಸ್ಕರಿಸಿ, ನೇರ ದಾರಿ ಎಂಬಂತೆ ಕಣ್ಮುಚ್ಚಿ ಬಾಂಧವರು ತಂದುಕೊಟ್ಟ ಬಂಧವನ್ನೊಪ್ಪಿದೆ. ಅರ್ಧ ದಿನವೂ ಉಳಿಯದೆ ಕಳಚಿ, ಬದುಕ ಪರಚಿ, ಗುರುತುಬಿಟ್ಟು, ಮಿಂಚಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಯ್ತು. ನೆನಪಿಗೂ ದಾಖಲೆಗೂ ಹೆಸರಾಯ್ತು''.

''ಹಣೆ ಬರಹವೆನ್ನಲೋ? ದಡ್ಡತನವೋ? ಅಂತೂ ಬದುಕಿ ಮುಂದೆ ಬಂದಾಯ್ತು. ಬಹಳ ಗಟ್ಟಿ ನಾನು ಎನ್ನುವಾಗ ನನ್ನೊಳಗೊಂದೇ ಕೊರತೆ, ದೇವರಿಲ್ಲದ ಗರ್ಭಗುಡಿಯಂತೆ. ನಾನೊಂದು ಸುಂದರವಾದ ಗರ್ಭಗುಡಿ. ''ಖಾಲಿತನ''ವೊಂದೇ ಆಸ್ತಿ,,!!" ನಗುವಳು ಕತ್ತಲೆಗೆ ಮುಖ ಮಾಡಿ. ಕತ್ತಲೆಯಷ್ಟೇ ತನ್ನನ್ನು ತನ್ನ ನೋವುಗಳಿಂದ ಮುಚ್ಚಿಡಲು ಸಾಧ್ಯವೆಂದು ನಂಬಿರುವವಳು. ಬೆಳಕಿಗೆ ಹೊಳೆಯೋ ಕಣ್ಗಳವಳು!. ಒಂದು ಸಂಜೆಯ ಯಾವುದೋ ಒಂದು ಸನ್ನಿವೇಶ ತನ್ನನ್ನು ಇಷ್ಟು ಬಗೆಯಾಗಿ ಕಾಡಿದ್ದರ ಬಗ್ಗೆ ಮನಸಿಗೆ ಅವಳದು ಒಂದೇ ಉತ್ತರ, ''ನಾನೀಗ ಸೋತಿರುವೆನೋ ಗೆದ್ದಿರುವೆನೋ,, ಅದೆಲ್ಲವೂ ಒಟ್ಟು ನನ್ನ ಪ್ರಾಮಾಣಿಕ ಅನುಭವಗಳಷ್ಟೇ, ವಂಚಿಸಿಲ್ಲ ಆ ಖುಷಿಯಿದೆ ನನ್ನಲಿ, ಬಹುಶಃ ಆ ಎಲ್ಲಾ ಹಂತಗಳಲ್ಲೂ ವಂಚಿಸಿ ಗೆದ್ದು ಬಂದಿದ್ದರೂ ನಾನಿಂದು ಒಂದಷ್ಟು ನೆಮ್ಮದಿಯ ಹೊತ್ತುಗಳನ್ನು ಕಾಣದಿರುವಂತಾಗುತ್ತಿತ್ತು''. ಅವಳಿಗೆ ಅವಳದೇ ಒಂದು ಸಾಂತ್ವಾನ.

--***----***----*****-----------****************------------------
ವೇದಾಂತವೇ ಪ್ರಾರಂಭವಾದ್ದರಿಂದ ಅಂತಿಮವಾಗಿಯೂ ಎಲ್ಲಾ ನೋವಿಗೂ ವೇದಾಂತವೇ ಸಮಾಧಾನ. ಕೆಲವು ಜೀವನಗಳೂ ಅಷ್ಟೇ, ಅಂತಹ ಆಕರ್ಷಕವಲ್ಲ,, ಆದರೆ ಸತ್ವಯುತವಾದದ್ದು. ಚಂದಿರ ಪ್ರೇಮಕ್ಕೆ ಸ್ಫೂರ್ತಿಯೂ ಹೌದು, ಹಾಗೆಯೇ ವಿರಹಾಗ್ನಿಗೆ ತುಪ್ಪವೂ ಹೌದು,,! ಸುಖಭರಿತ ಜೀವನ ಅನ್ನುವುದು ಯಾವುದೋ ಕಾಣೆ. ಆದರೆ ಸುಖವಾದ ಮನಸ್ಸನ್ನು ಸಾಧಿಸಿಕೊಳ್ಳಲು ಬಹುಶಃ ನಿಸ್ವಾರ್ಥ, ತ್ಯಾಗ ಇವುಗಳು ಸಹಕರಿಸಬಹುದೇನೋ,,,,, 

11/06/2014

Tuesday, 10 June 2014

ಮನದ ಮಾತು

''Sometimes being choiceless is better than having lot of choices''

ಈ ಸಾಲನ್ನು ನಾನೂ ಒಪ್ಪುತ್ತೇನೆ ನಿಜ. ಬಹಳ ಅವಕಾಶಗಳು ನಮ್ಮೆದುರು ಬಂದು ನಿಂತು ನಮ್ಮನ್ನು ಗೊಂದಲಕ್ಕೊಳಗಾಗಿಸುವ ಬದಲು ನಮ್ಮೆದುರು ಅವಕಾಶಗಳೇ ಇಲ್ಲದಿದ್ದರೆ ಸರಿಯಿತ್ತೇನೋ ಎಂದು ಅನಿಸುವುದುಂಟು,,,,
ಇದೊಂದು ಅಸಹಾಯಕ ಸ್ಥಿತಿಯೆಂದೇ ಅನಿಸುತ್ತದೆ, ಗೊಂದಲದ ಪರಮಾವಧಿ. ಹೌದು ಹೀಗೆಲ್ಲಾ ಅನಿಸುವುದು ಸಾಮಾನ್ಯವಾಗಿ ನಮ್ಮೆದುರು ಉದ್ಯೋಗ, ಮದುವೆ ಇತ್ಯಾದಿ,, ಇಂತಹವೇ ಮಹತ್ವದ ಘಟ್ಟಗಳಲ್ಲಿಯೇ.

ಯಾವೊಂದನ್ನು, ''ಚಾಯ್ಸ್'', ''ಆಪ್ಶನ್ಸ್'' ಎಂದು ನಾವು ಒಪ್ಪಿಕೊಳ್ಳುವಾಗ ನಾವು ಅವುಗಳಷ್ಟನ್ನೂ ಮೆಚ್ಚಿರುತ್ತೇವೆ!. ಇಲ್ಲೇ ನನಗೆ ತಪ್ಪು ಅನಿಸುವುದು. ನಾವು ಒಂದನ್ನು ಸರಿ ಎಂದುಕೊಂಡ ಮೇಲೆಯೂ ಮತ್ತೊಂದನ್ನೂ ಅಷ್ಟೇ ಮುತುವರ್ಜಿಯಿಂದ ಆರಿಸುತ್ತೇವೆ. ಅದು ನಮಗೆ ಬೇಕೋ? ಬೇಡವೋ? ನಂತರದ ವಿಚಾರವೆಂದೇ ನಮ್ಮ ಭಾವ. ಹೀಗೆ ಆರಿಸುವಾಗ ಅದು ಬಟ್ಟೇಯೋ ಮತ್ತಿನ್ಯಾವುದೋ ವಸ್ತುವೋ ಆಗಿದ್ದರೆ ಸರಿ, ನೇರ ಜೀವನಕೆ ಸಂಬಂಧಿಸಿದ್ದಲ್ಲಿ ಆರಿಸುವ ವಿಚಾರದಲ್ಲಂತು ನಮ್ಮಲ್ಲಿ "ಮುಂದೇ ಹೇಗೋ ಏನೋ?, ಅದು ಏನಾಗುತ್ತದೋ?" ಎಂಬ ಆತಂಕವೇ ಇಷ್ಟೇಲ್ಲಾ ಗೊಂದಲಗೊಳ್ಳಲು ಕಾರಣ. ಮತ್ತೆ ಮತ್ತೆ ಆರಿಸಿ ಮೆಚ್ಚೋ ಸಾಹಸ,,!

ಈ 'ಆರಿಸುವುದು' ಎನ್ನುವುದು ಕಷ್ಟವೇ ಸರಿ,, ಆದರೆ ನಮ್ಮೆದುರು ಬಂದು ನಿಲ್ಲೋ ಆ ಬದುಕು (ದಾರಿ) ನಮ್ಮ ಮನಸ್ಸಿಗೆ ತುಸು ಸರಿ ಎನಿಸುತ್ತಿದೆ ಎಂದಾಗ ಅಲ್ಲಿ ನಾವು ಆ ದಾರಿಗೆ ಸೆಳೆದುಕೊಂಡಂತೆಯೇ. ಮತ್ತೆ ಅಕ್ಕ-ಪಕ್ಕದಲ್ಲೆನೋ ಹಾದು ಹೋಯಿತೆಂದು ಮನಸು ಚಂಚಲವಾದರೆ ನಾವಲ್ಲಿ ಸೋತಂತೆ,, ಮತ್ತೆ ಗೊಂದಲ, ನಡೆದ ಇಷ್ಟು ದಾರಿ ಸರಿಯೋ?! ವ್ಯರ್ಥವೋ?! ಎಂದು. ಸರಿಯಾದರೂ ವ್ಯರ್ಥವಾದರೂ ಬದುಕು ಬದುಕೇ,, ಸಧ್ಯ ಅದಕ್ಕೇನು ಮಾನದಂಡವಿಲ್ಲ ''ಒಲುಮೆಯೊಳು ಜೀವಿಸುವುದು'' ಎನ್ನುವುದ ಬಿಟ್ಟು.

ಇನ್ನೂ ನೇರವಾಗಿ ಉದ್ಯೋಗ, ಮದುವೆ ವಿಚಾರವಾಗಿ ಚಿಂತಿಸುವುದಾದರೆ,, ದೊಡ್ಡ ದೊಡ್ಡ ತಲೆಗಳೇ ತಲೆಕೆಳಗಾದವು..

ಉದ್ಯೋಗ ನಮ್ಮ ಆಸಕ್ತಿ-ಅಭಿಲಾಷೆಯನುಸಾರ ಇಲ್ಲವೆ ಕೆಲವು ಅನಿವಾರ್ಯಗಳಂತೆ ಆಗಿಬಿಟ್ಟಿರುತ್ತದೆ. ಇನ್ನು ಮದುವೆಯ ಬಗ್ಗೆ ಮಾತನಾಡಲೂ ಕಷ್ಟವೇ ಸರಿ. ಎಲ್ಲಾ ಅವರವರ ಮನಸ್ಸಿನಂತೆ ಎಂದರೆ ಸರಿಯೇನೋ. ಹಾಗೂ 'ಅನಿವಾರ್ಯ' ಇಲ್ಲಿಯೂ,,

ದಾರಿಗಳ ಹುಡುಕಾಟದಲ್ಲಿ ಏಕೋ ಏನೋ ನನ್ನ ಕಣ್ಣುಗಳು ಸಣ್ಣವು,, ಕಂಡ ದಾರಿಯ ಬಗ್ಗೆ ಅಷ್ಟೇ ಯೋಚಿಸುವೆ. ಆ ದಾರಿ ಮುಂದುವರೆದು ಎಲ್ಲವನ್ನೂ ತೆರೆಸುವುದು ಎನ್ನುವ ನಂಬಿಕೆಯಷ್ಟೇ. ನಡೆದ ದಾರಿ ನಿಜಕೂ ಹೆಜ್ಜೆಯೂರಿಸಿಕೊಂಡಿದ್ದರೆ,,!
ಈ ಸಂದರ್ಭದಲ್ಲಿ ನಮ್ಮೆಲ್ಲರ ವೈಯಕ್ತಿಕ ಅಭಿಪ್ರಾಯಗಳು ಬೇರೆ ಬೇರೆ ಇರುವವೆಂದು ಮರೆಯುವಂತಿಲ್ಲ,,

ಒಮ್ಮೆ ದಾರಿಯನ್ನು ತುಳಿದ ಮೇಲೆ ಹಿಂದಿರುಗೋ ಮಾತಿಲ್ಲ. ಏನಿದ್ದರೂ ನಿಭಾಯಿಸುವ ಮನಸ್ಸು ಮತ್ತು ಧೈರ್ಯವಿರಬೇಕಷ್ಟೇ,,  ಆಗಷ್ಟೇ ನಾವು ಈ 'ಆಯ್ಕೆ'ಯನ್ನು ಜೀವನದಲ್ಲೊಂದು 'ಆಯ್ಕೆ'ಯನ್ನಾಗಿ ನೋಡಬಹುದೇನೋ. ಬದುಕೆಂದರೆ ಸಂತೆಯೊಳು ದಾರಿ ಹಿಡಿದು ಮುಂದುವರೆದಂತೆ,, ಏಳು-ಬೀಳು, ಸಂತೆಯೋಳು ಯಾರು ಕೇಳರು, ಹಾಗೆಯೇ ಕಾಣರು. ಎದ್ದು ನಿಂತು ನಡೆವುದಷ್ಟೇ ಮುಖ್ಯ,, !! :-)

10/06/2014

ಹಣೆಯಲಿ ಕೆತ್ತಿದ ಹೆಸರ ತಿದ್ದುಪಡಿಗೆ
ಹೃದಯಕೆ ಜೋರು ಪೆಟ್ಟಿದೆ,

ಅದ ಸಾವರಿಸಿಕೊಳ್ಳತ ಯೌವ್ವನ ಮಿಂಚಿದೆ
ಸರಿದ ಕಾಲ ಚುಚ್ಚಿ ನೊಂದಿದೆ,,

ಈ ಹೆಸರುಗಳ ಹಂಗಿಲ್ಲದ ತಾಣಕೆ
ಜೀವ ಬಿಡುವಿಲ್ಲದೆ ಮಿಸುಕಾಡಿದೆ,, !!


_________________

ಒಂಟಿತನಕ್ಕೆ
ಮದುವೆಯೇ ಮದ್ದು!
ಹೇಳುತ
ಇಡೀ ಜೀವನವ
ಕಳೆದ ಕವಿ;
ಕಾವ್ಯಕ್ಕೆ ಸಂಗಾತಿ!!

10/06/2014

ಕವನ

ಈರ್ಷೆ,,,,,,



ನಮ್ಮೊಳಗಿನ ಈರ್ಷೆಗೆ
ನಮ್ಮೀ ಎರಡೂ ಕಣ್ಗಳೊಂದಿಗೆ
ಮನವೂ ಕುರುಡು,,!

ಪ್ರೀತಿಯನು
ದ್ವೇಷಿಸೋ ಮನಸು,,!

ಸ್ವಾತಂತ್ರ್ಯವ
ಕೊಂದು ತಿನ್ನೋ ಪ್ರವೃತ್ತಿ,,

ಇಲ್ಲದ ಭಾವಕೆ
ಭಾಷೆ ತುಂಬೋ ತವಕ,,

ಮಿಕ್ಕಂತೆ ಗೊಂದಲದೊಳು
ಸತ್ತು ಬದುಕೋ ಉನ್ಮಾದ,,

ತನ್ನವರಿಗೂ, ಪರರಿಗೂ
ಕಾಡೋ ಕೀಟದಂತೆ,,!!

ಈರ್ಷೆ,
ಆಸೆಗೆ ಜನಿಸಿದರು
ಹಿಡಿದದ್ದು ಅಡ್ಡದಾರಿ

ಆಸೆಯ ಮಡಿಲಿಗೆ
ನಿಜ ಸಾಧನೆಯ ಆಕಾಂಕ್ಷೆಗಳೇ
ನಿಜ ಪುತ್ರರು,,!!

10/06/2014


ನಿನ್ನ ರೇಗಿಸಿ ನೋಡೋ ಆಸೆ ಗೆಳೆಯ ನನಗೆ,
ನಿನ್ನ ಕೆನ್ನೆ ಕೆಂಪೋ? ಮೂಗೋ?
ಎಂದು ಸಿಗುವೆ?,,
ದಯಮಾಡಿ ಕನಸಲಿ ಎನ್ನದಿರು
ಕತ್ತಲ ರಾತ್ರಿಯೆಲ್ಲಾ ಹುಣ್ಣಿಮೆಯಾಗಿ
ಬೆಳಗಾಗೀತು,,,!!!!

____________________

ಯಾರೂ ಇಲ್ಲ ಎನುವಾಗ
ಎಲ್ಲರೂ ನಮ್ಮವರೆ,
ಇಷ್ಟಕ್ಕೂ ಭೂಮಿಯಿಂದಾಚೆ ನೆಗೆಯೋ
ಸಾಹಸಿ ನಾನಲ್ಲ!

_________________

ವಿರಾಜಿತ ಕತ್ತಲೊಳು
ನೀನೊಂದು ಬೆಂಕಿ ಕಿಡಿ
ಕತ್ತಲೆ ನಿರಂತರ ಸಂಗಾತಿ
ಈ ಬದುಕಿಗೆ..!

09/06/2014

Monday, 9 June 2014

ಕವನ

ಕಾಡೋ ಪದ್ಯಗಳೋ,,!

ಕೆಲವು ಪದ್ಯಗಳು ಇಷ್ಟವಾಗಿರದು
ಆದರಷ್ಟೆ ಕಾಡುವುದು
ಅವುಗಳು ಎದುರಿದ್ದಾಗಲೂ
ಇಲ್ಲದಿದ್ದಾಗಲೂ
ಮರೆಯಲಾಗದು,,

ಮುರಿದ ಸಂಬಂಧಕೆ
ಬೆಸೆಯೋ ಪ್ರಯತ್ನಗಳ
ಹೀಗಳವ ಹುಡುಗನ ಮಾತುಗಳೋ,,
ಅವರಿಬ್ಬರ ಸೆಣೆಸಾಟ
ನಿನ್ನ ನೆನಪಿಸಲಿಲ್ಲವೆಂದು
ಹೇಗೆ ಹೇಳಲಿ,,?!

ದಾರಿ ಹಿಂದೆ ಬಿಟ್ಟು,
ಹಿಂದುರುಗಿ ಒಮ್ಮೆಯೂ ನೋಡನೆ
ಮುಂದೆಲ್ಲೋ ಸಾಗಿ ಸಾಗಿ,,
ಅಲ್ಲೆಲ್ಲೋ ಏಕಾಂಗಿಯಾದಂತೆ
ಎಲ್ಲರೂ ಇದ್ದರೂ ಯಾರಿಲ್ಲದಂತೆ
ನೀ ಹುಡುಕಿದ 'ಬದುಕು ಹುಡುಕಾಟ'ದ ಪದ್ಯ
ನಾ ಮರೆಯಲೆಂತು,,
ಗೊತ್ತಿದೆ ನಿನ್ನದದೇ ಕೊನೆಯ ಪದ್ಯ,,,,!
ಈ ಹೆಸರಿಗೂ ನಿನ್ನ ಮನಸಿಗೂ
ಕಂಡಿಲ್ಲವಷ್ಟೇ,, ಮರೆತೂ ಇಲ್ಲ,,

09/06/2014

ಮನದ ಮಾತು

ಮನುಷ್ಯ ಎಷ್ಟೇ ಬುದ್ಧಿವಂತನಾದರೂ ಅವನಿಗೂ ನಿದ್ದೆ, ಹಸಿವು, ಮರೆವು, ದಣಿವು ಅನ್ನುವುದೆಲ್ಲಾವೂ ಇರುವುದರಿಂದಲೋ ಏನೋ ತಾನು ಪ್ರತೀ ಕ್ಷಣವೂ ಅತೀ ಜಾಗರೂಕನಾಗಿದ್ದರೂ ಈ ಯಾವುದೋ ಒಂದು ಸ್ಥಿತಿಯಲ್ಲಿ ತನ್ನನ್ನು(ಕಪಟತನವನ್ನು) ರಕ್ಷಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಸುಳ್ಳು ಕಪಟ ತುಂಬಾ ದಿನಗಳ ಕಾಲ ನಿಲ್ಲದು. ಹಾಗೆಯೆ ಸತ್ಯವಲ್ಲದೆ ಮತ್ತಿನ್ಯಾವುದೂ ನಮ್ಮನು ಕಾಯದು,, !! ಇದು ಗೊತ್ತಿದ್ದೂ ಕ್ಷಣಿಕ ಬಯಕೆಗಳಿಗೆ ಸೋಗುಗಳನ್ನು ಹಾಕಿಕೊಂಡು ಜೀವಿಸುತ್ತೇವೆ.. ಯಾರಿಗೋ ವಂಚಿಸಿರುತ್ತೇವೆ ಎಂದುಕೊಂಡು ಖುಷಿಪಡುವಾಗ ಮರೆತಿರುತ್ತೇವೆ ನಾವೇ ನಮ್ಮವರಿಗೆ ವಂಚಿಸಿ ಅವರಿಂದ ಅವರ ಪ್ರೀತಿಯಿಂದ ದೂರಾಗಿರುತ್ತೇವೆ,,,,,,,,

ಹಾಗಾಗಿ ಸಣ್ಣದೊಂದು ಅಪರಾಧ ಪ್ರಜ್ಞೆ ಕಾಡಿದರೂ ಜೀವನ ದುಸ್ತರವೆನಿಸಿಬಿಡುವುದು,,,

09/06/2014
ವಿರಾಜಿತ ಕತ್ತಲೊಳು
ನೀನೊಂದು ಬೆಂಕಿ ಕಿಡಿ
ಕತ್ತಲೆ ನಿರಂತರ ಸಂಗಾತಿ
ಈ ಬದುಕಿಗೆ..!

____________________________

ಮುಚ್ಚಿಟ್ಟ ಸತ್ಯಗಳ ಹುಡುಕಬಾರದು
ಅವು ತಾವಾಗಿಯೇ ನಮ್ಮೆದುರು ಬರುವುದು
ಆಗದರ ಬೆನ್ನು ಸವರಿ ಬಿಟ್ಟುಬಿಡಬೇಕು
ಅವುಗಳೇ ಸವರಿದ ಕೈ ಹುಡುಕುವಂತೆ!!

_________________

ಸೂಕ್ಷ್ಮ ಸಂವೇದನೆಗಳು
ಅರ್ಥವಾಗುವುದು
ಒಂದು ತೆರದಲಿ
ದುರಂತವೇ ಸರಿ,,,,,,,,!!

09/06/2014

____________________

ನಾ ನಿನ್ನ ಕಣ್ಣ ಕನಸಿನಷ್ಟು
ಸುಂದರವಿಲ್ಲದಿರಬಹುದು,
ನಿನ್ನೆದೆಗೊರಗಿದಂತೆ
ನಿನ್ನ ಕನಸನಷ್ಟೇ
ಕಾಣೋ ಕಣ್ಣಿನವಳು!

08/06/2014

Sunday, 8 June 2014

ಮನದ ಮಾತು

ಉಪನ್ಯಾಸಕರ ಮಾತುಗಳನ್ನು ಓದುವಾಗ ಅನಂತಮೂರ್ತಿರವರ ಭಾರತೀಪುರದಲ್ಲಿನ ಈ ಮಾತು ನೆನಪಾಯ್ತು, "ಕೆಳ ವರ್ಗದ ಪ್ರತೀ ಗಂಡು ಮೇಲ್ವರ್ಗದ ಹೆಣ್ಣನ್ನು ಬಯಸುವಂತಾಗಬೇಕು, ಹಾಗೆಯೇ,,,,,,,,,,,,". ಕಾದಂಬರಿಯಲ್ಲಿನ ಮಾತಿನ ಅರ್ಥವು ಲೇಖನದ ಉಪನ್ಯಾಸಕರ ಮಾತಿನ ಅರ್ಥಕ್ಕೆ ತಾಳಿಕೆಯಾದರೂ ಕಾದಂಬರಿಯಲ್ಲಿನ ಮಾತು ತುಸು ನಯವಾಗಿ ಕಾಣಬಹುದೇನೋ,,,,,,

ಪ್ರತೀ ಅಪರಾಧಕ್ಕೂ ಜಾತಿಯನ್ನು ಅಂಟಿಸಬೇಡಿ ಅನ್ನುವ ಲೇಖನದ ತಾತ್ಪರ್ಯವಿದೆ. ಹಾಗೆಯೇ ಜೀವವಿದ್ದು ಪ್ರತಿಭಟಿಸದೇ ಸಹಿಸುವುದು ಸಾಧ್ಯವೇ? ಎನ್ನುವ ಪ್ರಶ್ನೆ.
ಜಾತಿಯಿಂದ ದೌರ್ಜನ್ಯವೋ?, ದೌರ್ಜನ್ಯದಿಂದ ಜಾತಿಯೋ? ಎಂಬಂತೆ,,
ಸಾಮಾನ್ಯವಾಗಿ ಅಸಹಾಯಕತೆಯಿದ್ದಲ್ಲಿಯೇ ದೌರ್ಜನ್ಯ ಹೆಚ್ಚು. ಕೆಳಜಾತಿ ಎನ್ನುವುದು ಅವಮಾನ, ಅಸ್ಪೃಶ್ಯತೆಯಿಂದಾಗಿ ಕೀಳರಿಮೆ; ಸಹಿಸೋ ಅಸಹಾಯಕತೆಯನ್ನುಂಟುಮಾಡಿರುವುದು ಗೊತ್ತಿರುವ ವಿಚಾರ. ಹೀಗಿರುವಾಗ ಅವರು ಸುಲಭಕೆ ಲಭಿಸುವ ಪೀಡಿತರು. ಇದು ಒಂದಾದರೆ; ಮತ್ತೊಂದು ಪ್ರತೀ ದೌರ್ಜನ್ಯಕೂ ನಂತರ ಏಳುವ ಪ್ರಶ್ನೆ ಜಾತಿಯದು. ದೌರ್ಜನ್ಯಕೆ ಪರಿಹಾರ ಜಾತಿ ಎಂಬ ಹೆಡ್ ಲೈಟಿನಿಂದ,, !! ಏಕೆ? ಅವರನ್ನು ಸಾಮಾನ್ಯವಾಗಿ ಒಬ್ಬ ಮನುಷ್ಯನಂತೆ ಕಂಡು ನ್ಯಾಯ ಒದಗಿಸಲು ಅಸಾಧ್ಯವೇ? ಹೌದು, ಒಂದು ಪ್ರಕರಣವನ್ನು ಗಮನಿಸುವುದಾದರೆ ಅದರಲ್ಲಿ ಹೆಸರು, ಲಿಂಗದಷ್ಟೇ ಪ್ರಾಶಸ್ತ್ಯ ಬಂದುಬಿಡುತ್ತದೆ ಜಾತಿಗೆ ಈ ಸಮಾಜದಲ್ಲಿ. ಇಡೀ ವೃತ್ತಾಂತದಲ್ಲಿ ಲಿಂಗ ಮತ್ತು ಜಾತಿ ಮುಖ್ಯವಾಗಿರುತ್ತದೆ ಅಪರಾಧ ಅಪರಾಧಿಗಳಿಗಿಂತ,,!! ಹಾಸ್ಯಾಸ್ಪದವೆನಿಸಿದರೂ ನಾವು ನೋಡಿದ್ದು, ನೋಡುತ್ತಿರುವುದು. ಜಾತಿ ಹೆಸರಿನ ತೂಗುಗತ್ತಿ ಬಹುಶಃ ಮನುಷ್ಯ-ಮನುಷ್ಯನ ನಡುವಿನ ಸಂಬಂಧಗಳ ತಲೆಗಳನ್ನುರುಳಿಸೋ ನಿರ್ಭಾವುಕ ಕ್ರೂರತೆ ಎಂದರೆ ತಪ್ಪಾಗಲಾರದೇನೋ?,,,,

ದೌರ್ಜನ್ಯಕ್ಕೊಳಗಾದವರಿಗಿಂತ ಅದರ ಹೆಸರಲಿ ಹೆಸರು ಸಾಧಿಸಿಕೊಳ್ಳೊ ಜನರ ಕೃತ್ಯವಿದು ಅಷ್ಟೇ (ದೌರ್ಜನ್ಯಕೆ ಜಾತಿಯ ಹಣೆಪಟ್ಟಿ). ಹಾಗಾಗಿ ಜಾತಿ ಅನ್ನುವುದು ಗಾಳಿಪಟವೂ, ಬಾವುಟವೂ ಆಗುತ್ತಿದೆ. ಹಿಡಿದವನಿಗಷ್ಟೇ ಲಾಭ. ಅದು ರಂಜನೆಯೋ? ಸಾಧನೆಯೋ?. ಹಾಗಾಗಿ ಜಾತಿ ಅಪರಾಧಗಳಿಗೆ ಅಂಟಿಕೊಳ್ಳುತ್ತಿದೆ ನಿರಪರಾಧಿಯಾಗಿ,,!

ದೌರ್ಜನ್ಯಕ್ಕೊಳಗಾದವರಿಗೇ ಹೇಸಿಗೆಯಾಗಿ ತಮಗ್ಯಾವ ನ್ಯಾಯವೂ ಬೇಡವೆಂದು ದೂರ ಸರಿದುಬಿಡುತ್ತಾರೆ ಮಧ್ಯವರ್ತಿಗಳ ಈ ಬಾವುಟ ಹಾರಾಟಗಳ ನೋಡಿ, ಇದರಿಂದ ಮತ್ತಷ್ಟೂ ಅಪರಾಧಗಳು ಮುಚ್ಚಿಹೋಗಿ,, ಹೊಸ ಹೊಸ ಅಪರಾಧಗಳಿಗೆ ಅಭಯಾಸ್ತವಾಗಿಬಿಡುತ್ತವೇನೋ ಎಂದೆನಿಸುತ್ತದೆ.
ದೌರ್ಜನ್ಯಗಳನು ಸಹಿಸುವುದರಿಂದ ಅದು ಮತ್ತಷ್ಟು ಬಲಿಷ್ಟವಾಗಿ ಬೆಳೆಯಲು ಪ್ರೇರೇಪಿಸಿದಂತಂತಾಗುತ್ತದೆ. ಅದು ಎಂತಹುದೇ ದೌರ್ಜನ್ಯವಾಗಲೀ, ಪ್ರತಿಭಟಿಸೋ ದನಿಗಾದರೂ ಹೆದರುಸುವ ಶಕ್ತಿಯಿರಲಿ, ಅಲ್ಲಿಗೆ ಅರ್ಧ ದೌರ್ಜನ್ಯದ ಮನರಂಜನೆ ಕುಸಿಯುವುದು.

ಹೆಣ್ಣಿನ ಕಣ್ಣೀರು ಸಂವೇದನೆಯನ್ನು ಹುಟ್ಟುಹಾಕುತ್ತದೆ ಎನ್ನುವುದು ತಿಳಿದಿತ್ತು, ಆದರೆ ಗಂಡಿನ ಕಣ್ಣೀರು ವಿನಾಶವನ್ನು ಸೂಚಿಸೋ ವಿಚಾರ ತಿಳಿದಿರಲಿಲ್ಲ ನನಗೆ. ನನ್ನಜ್ಜಿ ಈ ಸಮಯದವರೆಗೂ ಇರಬೇಕ್ಕಿತ್ತು ಅನಿಸಿತು,,,,,,

ಸದಾ ಚಿಂತನೆಗಳಿಗೊಳಪಡಿಸೋ ಲೇಖನವನ್ನು ನೀಡುತ್ತಿರುವ ನಿಮಗೆ ವಂದನೆಗಳು Anjali ಮೇಡಂ,,

http://www.vijaykarnatakaepaper.com/Details.aspx?id=13817&boxid=5436324

08/06/2014

ಈ ಲೌಕಿಕ ಕಣ್ಣುಗಳ ತಣಿಸಲಾರೆ
ನನ್ನೊಂದಿಗೆ ಪಾಂಡವರೂ ಇಲ್ಲ
ದೇವೇಂದ್ರನೂ ಬಂದು ಹೋಗಿಲ್ಲ
ಆದರೂ ಪಾಂಚಾಲಿ ಅಹಲ್ಯೆಯ ಮನವಿನ್ನೂ
ಕಾದಿದೆ ಶಾಪ ವಿಮೋಚನೆಗೋ
ಅವಮಾನಗಳಿಗೆ ಉತ್ತರಗಳಾಗಲೋ,,

07/06/2014

________________________

ಒಮ್ಮೆ ಮುದುಡುತ ಒಮ್ಮೆ ಕೆರಳುತ
ಮತ್ತೊಮ್ಮೆ ಅರಳುತ ಸಾಗುವಾಗ
ಬಣ್ಣದ ಚಿಟ್ಟೆ ಎನಿಸಿಕೊಂಡರೂ
ಅದಕೆ ಅದರ ಬಣ್ಣದ ಗರ್ವವಿಲ್ಲ
ಎದುರಾದ ಕಣ್ಣುಗಳಲಿ ಕನ್ನಡಿಯಿಲ್ಲ!!

06/06/2014

ಕವನ

ನನಸಾಗದ ಕನಸುಗಳು ,,,,,

ನಾ ಕಂಡ ಕನಸುಗಳೆಲ್ಲವ
ಕೂಡಿಟ್ಟಿಹೆನು
ಪೂರ್ಣ ಚಂದಿರನಾಗದ
ಸಾಲು ಅರ್ಧ ಮುತ್ತಿನ ಮಾಲೆಯನು
ಅರೆ ಬರೆ ತೇಲೋ ಜೋಗುಳ
ಚಂದಿರಗಳಂತೆ,,

ಮುಂದೊಮ್ಮೆ
ಆ ಸಾಲು ಚಂದಿರರನು ಪುಟ್ಟ ಕೈ
ಒಮ್ಮೆ ನೇವರಿಸಿದಂತೆ
ನನ್ನೆದುರು ಕುಳಿತು
ಪಿಳಿಪಿಳಿ ಕಣ್ಣು ಬಿಟ್ಟು ಆಲಿಸೋ
ಬೆರಗುಗಳನ್ನು ನೋಡಿ ಆನಂದಿಸಲು

ನನಸಾಗದ ಕನಸುಗಳೂ
ಜೀವ ತುಂಬುವವು ಬಯಕೆಗಳಿಗೆ,
ಮತ್ತೆ ಮತ್ತೆ ಕನಸ ಕಟ್ಟಲು
ಪ್ರೇರಣೆ ನೀಡುವವು ಜೀವನಕೆ,,

06/06/2014


ಒಮ್ಮೊಮ್ಮೆ
ಕವಲು ದಾರಿಗಳು ಕಾಣುವುದು
ಗೊಂದಲಕ್ಕೀಡು ಮಾಡಲು
ಮತ್ತು
ನಮ್ಮ ಹೆದ್ದಾರಿಯ
ಸಶಕ್ತವಾಗಿ ಗುರ್ತಿಸಿಕೊಂಡು
ಮುಂದೆ ಸಾಗಲು!,,

06/06/2014

______________

ಸಾಗುವಾಗ
ದಾರಿ ಸುಗಮ
ನಿಂತಾಗ
ಎಲ್ಲವೂ ಸುರುಟು
ದಿಕ್ಕೂ ತಿರುಗಿ,
ಗುರಿ ಕಳಚಿ ಬಿದ್ದಂತೆ,,

_________________

ತುಟಿ ರಂಗಿನ ಹೊಳಪ ಕಂಡು
ದಾಳಿಂಬೆ, ಗುಲಾಬಿ ಎಂದೆಲ್ಲಾ
ಹೊಗಳುವ ಆ ಕವಿ ಹೆಸರಿನವಗೆ
ಎನ್ನ ಅಂತರಂಗದ ಜ್ವಾಲೆ
ಸೂರ್ಯನ ನೆನಪಿಸಲೇ ಇಲ್ಲ
ಎಲ್ಲರಂತೆ ಅವನೂ ಒಬ್ಬನಷ್ಟೇ ನನಗೆ,,!
ವಿಶೇಷವೇನಿಲ್ಲ; ಎಂದುದಕೆ
ವಿಷಾದವಿದೆಯಂತೆ ಅವಗೆ,,,

05/06/2014

Wednesday, 4 June 2014

ಮನದ ಮಾತು

ಮೌನ,,,,,,,,,,,,,



ಯಾವುದೇ ಒಂದು ವಿಚಾರವನ್ನು, ಭಾವವನ್ನು ತೀರ ಹತ್ತಿರಾಗಿ ಅನುಭಾವಿಸುವಾಗ ನಮ್ಮಲ್ಲಿ ಮಾತುಗಳಿರದು. ಮೌನದ ಆಹ್ವಾನೆಯಾಗಿಬಿಟ್ಟಿರುತ್ತದೆ. ಆದರೆ ಈ ಮೌನವೂ ಅಷ್ಟೇ ಭಯಾನಕ. ಮೌನವು ಭಾವತೀವ್ರತೆಯಲಿ ಎತ್ತ ಬೇಕಿದ್ದರೂ ನಮ್ಮನು ಸಾಗಿಸಿಬಿಡಬಹುದು; ಸಾಧಿಸೊ ಛಲದೆಡೆಗೋ, ಇಲ್ಲವೇ ತ್ಯಜಿಸೋ ಸೊತ ಭಾವದೆಡೆಗೋ. ಇಂತಹ ಸಂದರ್ಭಗಳಲ್ಲಿ ಮೌನವನ್ನು ಒಡೆದು ನಿಲ್ಲುವ ಪ್ರಯತ್ನ ಜಾಗೃತವಾಗಿದ್ದರೆ ಆ ಸಮಯವನ್ನು ಸಾಧಿಸಿ ಅದರಿಂದ ಹೊರಬರಬಹುದೇನೋ,,

ಮೌನವು ಒಂದು ಧ್ಯಾನ ಎಂಬುದು ಸರಿಯೇ, ಆದರೆ ಎಂತಹ? ಯಾವುದರ ಧ್ಯಾನವಾಗಿದ್ದರೆ ಮೌನಕ್ಕೆ ತಕ್ಕ ಬೆಲೆ? ಎಂಬುದೂ ಅಷ್ಟೇ ಮುಖ್ಯ.

ಕೆಲವೊಮ್ಮೆ ತೀವ್ರ ಮನದ ಆಘಾತಗಳಲ್ಲಿಯೂ ಮೌನ ಅನಿವಾರ್ಯ. ಈ ಸಮಯದಿ ಮೌನ ಒಂದು ಪ್ರಕಾರದ  ಮನದ ವಿಶ್ರಾಂತಿ ಆಗಿರುತ್ತದೆ. ಹಾಗೇಯೇ ಆದರೆ ಒಳಿತು,, :-)

ಈ ಮನಸು, ಈ ಬದುಕು ಎಷ್ಟೋ ಸೋಜಿಗ!, ಜಾರಿ ಪಾತಾಳಕ್ಕೆ ಬಿದ್ದಂತೆ ಬೆಚ್ಚುಬಿದ್ದಾಗ ಕನಸಾಗಿರುತ್ತೆ. ಅದೇ ಎಲ್ಲವೂ ಸರಿಯಾಗಿದೆ ಅನಿಸಿಕೊಂಡಿದ್ದರೂ ಮತ್ತೆಲ್ಲೋ ಜೀವನ ಚುಚ್ಚಿರುತ್ತದೆ. ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎನ್ನುವುದೇನೋ ಸರಿಯೇ. ಆದರೆ ನಮ್ಮ ಸಮಾಧಾನಕ್ಕೆ ಈ ಉತ್ತರ ಅಷ್ಟು ಸಮಾಧಾನಕರವೂ ಅಲ್ಲವೆನೋ. ಆದ್ದರಿಂದ ಚುಚ್ಚಿದ ಜೀವನಕ್ಕೆ ಜರೂರು ಮುಲಾಮಿನ ಅಗತ್ಯವಿದೆ ಅದೂ ನಮ್ಮ ಸಮಾಧಾನಕ್ಕೆ. ಆಗುವ ಎಲ್ಲಾ ಅನಾಹುತಗಳನ್ನೂ ನಾವು ತಡೆಯಲಾರೆವು ಆದರೂ ನಮ್ಮತನದ ಉಳಿವಿಗಾಗಿ ನಮಗಾಗಿ ನಾವು ಶ್ರಮಿಸಲೇ ಬೇಕು. ಬಹಳಷ್ಟು ಬಾರಿ ನನಗೆ 'ನಾನು' ಅನ್ನುವುದಕ್ಕಿಂತ 'ನಾವು' ಅನ್ನುವುದೇ ಪ್ರಿಯವೆನಿಸುತ್ತದೆ. ಇದು ಅಹಂಮ್ಮಿನ ಕುರಿತಾಗಲ್ಲ,, ನಾವು ಎನ್ನುವಾಗ ನನ್ನೊಳಗೆ 'ನಾನು ಮತ್ತು ನಾನು' ಎನ್ನುವ ಭಾವವಿರುತ್ತದೆ. ನನಗೆ ನಾನೇ ಸಮಾಧಾನ, ಔಷಧಿ, ರಕ್ಷಕ, ಪ್ರೀತಿ, ಸ್ನೇಹ,, ಎಲ್ಲವೂ. ಒಮ್ಮೊ ನೊಂದಕೊಂಡರೂ ನನ್ನನೇ ಸಮಾಧಾನಿಸಲು ಮಗುವಂತೆ ರಮಿಸಿಕೊಳ್ಳುವ ಮತ್ತೊಬ್ಬ 'ನಾನು' ಇರುತ್ತಾಳೆ. ಹೀಗೆಲ್ಲಾ ನಾನು ಯೋಚಿಸುವಾಗ ನನಗೇನೋ ನನಗೆಲ್ಲಿಂದಲೋ ಒಂದು ಅಭಯ ಹಸ್ತ ಬೇಕು ಎಂದು ಅನಿಸುವುದು ಈಗೀಗ ಕಡೆಮೆಯೇ. ಮೌನದಲ್ಲಿ ಕಂಡುಕೊಂಡ ನನ್ನವೇ ಈ 'ನಾನು'ಗಳು,, :-)

ಮೌನದಲಿ ಮನುಷ್ಯ ತನಗೆ ತಾನೇ ಮಾರ್ಗದರ್ಶಕ, ಗುರು, ಸ್ನೇಹಿತ, ಹಿತೈಶಿ,,,,,
ಮೌನಕ್ಕೇ ಅದರದೇ ಆದಾ ಪ್ರಾಮುಖ್ಯತೆ ಬಂದದ್ದು ಮುನುಷ್ಯನ ಈ ದಾರಿಗಳಲ್ಲಿನ ಶ್ರೇಷ್ಠ ಸಾಧನೆಗಳಲ್ಲಿ ಎಂದರೆ ತಪ್ಪಾಗಲಾರದು.
ಇನ್ನು ಮುಂದೆ 'ಮೌನಂ ಸಮ್ಮತಿ ಲಕ್ಷಣಂ' ಎನ್ನುವ ಮುನ್ನ ಇವಿಷ್ಟೂ ಕಾರ್ಯಗಳು ಆ ಮೌನದೊಳು ನಡೆದಿರಬಹುದೇ ಎಂಬ ಒಂದು ಸಣ್ಣ ಚಿಂತನೆ ನಮ್ಮೊಳಗೂ ಮೌನವಾಗೇ ಜರುಗಲಿ,,, :-)

04/06/2014
''ಬಹಳಷ್ಟು ಬಾರಿ ತಮ್ಮೆಲ್ಲಾ ನೋವಿಗೆ ತಮ್ಮ ಅತಿಯಾದ ತಲ್ಲೀನತೆಯೇ ಕಾರಣ'', ಎಂದೇ ನಾವು ಕೊಟ್ಟುಕೊಳ್ಳೋ ಕೊನೆ ಕಾರಣ. 

ಖುಷಿಪಡುವ ವಿಚಾರ,,,, 
ಯಾವುದೇ ಕೆಲಸವಾಗಲೀ, ವಿಚಾರವಾಗಲಿ, ಭಾವವಾಗಲೀ ಇಲ್ಲವೇ ಒಬ್ಬ ವ್ಯಕ್ತಿಯಾಗಲೀ ಅವುಗಳಲ್ಲಿ/ಅವರೊಟ್ಟಿಗೆ ನಾವು ಪ್ರಾಮಾಣಿಕರು, ಆ ಕ್ಷಣಗಳಲಿ,, ಎನ್ನುವಾಗ ಎಲ್ಲೋ ಒಂದು ಖುಷಿಯ ಭಾವಾಕಿರಣ ಹೊಮ್ಮುವುದು ನಿಜವೇ ಸರಿ. 

ಯಾರು ಏನೇ ಜರಿದರೂ 
ನಮ್ಮೊಂದಿಗಿನ ನಮ್ಮ ಪ್ರಾಮಾಣಿಕತೆ ನಮಗೆ ಮುಖ್ಯ,,,,,, 

04/06/2014

Sunday, 1 June 2014

ದೊಡ್ಡ ದೊಡ್ಡ ಕನಸುಗಳಲ್ಲಿ
ನಿರೀಕ್ಷೆಗಳು ಬುಡಮೇಲಾದಾಗ
ಚಿಕ್ಕ ಚಿಕ್ಕ ಖುಷಿಗಳಲ್ಲಿ
ದೊಡ್ಡ ನಿರೀಕ್ಷೆಗಳು ಹುಟ್ಟಿಕೊಂಡದ್ದು ತಪ್ಪೇನಲ್ಲ,,!

04/06/2014

_____________________

ನಮ್ಮ ನೋವು ಹತಾಷೆಗಳನ್ನು
ಯಾವ ತೆರದಲೂ
ಹೊರಹಾಕಲಾಗದ
ಸ್ಥಿತಿಗಿಂತ
ಗೋರಿಯೊಳ
ಸೇರಿಕೊಳ್ಳುವುದೇ ಒಳಿತು,,
ಸೇರದಿದ್ದರೂ
ಕಟ್ಟಿಕೊಳ್ಳುತ್ತೇವೆ ನಾವೇ
ನಮ್ಮನಕೆ
ಶೂನ್ಯತೆಯ ರಾಜ್ಯಭಾರದ ಕಪ್ಪು ಕೋಟೆ,,,,,,,,,,,,

04/06/2014

_______________________

ಮೋಡವೇ ನಿನ್ನ ಮನವೇನೋ
ಎನಿಸುವಂತೆ ನನ್ನ ನೆನೆಸುತಿದೆ
ನಿನ್ನ ನೆನಪಿಸುತ್ತಿದೆ,,
ನೀನಲ್ಲೆಲ್ಲೋ ಮನ ನೊಂದಂತೆ,,,,

02/06/2014

________________________

ಈ ಬಯಲು ದಾರಿಯಲಿ
ಗುರುತು ಸಿಗದ ಹಾದಿಯನರಸಿ
ಗೆದ್ದಂತೆ ಅನಿಸಿ; ಸೋತಂತೆ ನಿಂತು,
ಆದಿ ಅಂತ್ಯದ ಸುಳಿವಿಲ್ಲವಿಲ್ಲಿ
ನಾನೇ ನೆಟ್ಟ ಮೈಲುಗಲ್ಲ ಮೇಲೆ
ನನ್ನ ಅಹಂನೊಂದಿಗೆ
ನಾನೊಬ್ಬಳೆ ಈ ಬಯಲಲಿ,,,,

01/06/2014

______________________

ಕೈ ಚಾಚಿದವರಿಗೆಲ್ಲಾ
ಕಣ್ಣು ಮಿಟಿಕಿಸಿ ಸಿಗಲಾರೆನೆಂದು
ಕೆಣಕಿ ನಕ್ಕು ಮಿನುಗುವ ತಾರೆ;
ಚಂದಿರನಿಗೆ ಸ್ವಂತವಾಗಿ ಕಂಡರೂ
ಆತನಿಟ್ಟ ಅಂತರ ಬಹು ದೂರ,, ದೂರ,, !

31/05/2014