Wednesday, 28 May 2014

ಕವನ

ನೀವೂ ಒಬ್ಬರೇ?!!


ಹೌದು ನಾನೂ ಒಬ್ಬಳೆ
ತನ್ನವರೆಲ್ಲ ಅವರವರೊಟ್ಟಿಗೆ
ನಾನೂ ಒಬ್ಬಳೇ,
ಆಗಲೂ, ಈಗಲೂ
ಮುಂದೆಯೂ,,,,
ಎನ್ನುವ ಮುನ್ನ, ನನ್ನೋಳಗವಳು
ಒಂದೇ ಸಮನೆ ತಿವಿಯುತ್ತಿರುವಳು..

ಎಲ್ಲೆಲ್ಲಿಯೂ ನಾನಷ್ಟೇ
ನನ್ನೊಂದಿಗೆ;
ಬಯಸಿದ ಆಸರೆಗಳು
ಆಸರಿಕೆಗಳಲ್ಲದವು,
ನಂಬಿ-ನೆಚ್ಚಿ ಇನ್ನೆಷ್ಟು ಹಂಬಲ?
ಇಲ್ಲದ-ನಿಲ್ಲದ ನಿರೀಕ್ಷೆಗಳ
ಬೆನ್ನಿಗೆ ಬಿದ್ದ ಭಿಕಾರಿಯಂತೆ,,

ಸಾಕೆನಿಸಿ ಸಾವರಿಸಿಕೊಂಡು
ನಿಂತಿದ್ದೆ; ಬದುಕು ತನಗಷ್ಟೇ,
ಬದುಕಲಿ ಅವರೂ-ಇವರೂ,
ತಾನೇನು ಅಲ್ಲದ ಅವರಿಗಾಗಿ
ನನ್ನೀ ಜೀವವಲ್ಲ ಅವರಿಗಾಗಿ!

ಕ್ಷಮೆಯ ಬೇಡಿದ್ದೇ; ನಾನೇ ನನ್ನೊಳ ಅವಳಿಗೆ
ಅವಳ ಜೀವ ಹಿಂಡಿದ್ದಕ್ಕೆ, ನೊಂದು
ಹಿಂಸಿಸಿದಕೆ:
,,,,,,,
ನಕ್ಕಳು,,
ನನ್ನ ಮುಗ್ಧ ತಪ್ಪುಗಳಿಗೆ,
ಬರಸೆಳೆದು ತುಬ್ಬಿಕೊಂಡಿರುವಳು
ನನ್ನೇ ತನ್ನವಳೆಂದು,,,

ಬಾಹ್ಯ ಸಂಸಾರಕೆ ಹೋಲಿಸಿ
ನಡುಗುವಾಗೆಲ್ಲಾ,
ಅವಳೇ ಆಸರೆ
ನಗುವಲ್ಲಿ ಅಳುವಲ್ಲಿ
ಸಮ ಭಾಗಿ
ನನ್ನೊಳ ಅವಳು,

''ನೀವು ಒಬ್ಬರೇ?'' ಎನುವ ಪ್ರಶ್ನೆಗೆ,
ತಕ್ಷಣ ಅದೇಕೋ ಉತ್ತರಿಸಲಾರೆ,
ಇಲ್ಲವೆನ್ನಲೇ ಕಾಣುವ ಕಣ್ಣುಗಳಿಗೆ?
ಹೌದೆನ್ನಲೇ ನನ್ನೊಳ ಅವಳ ಕಣ್ಣಿಗೆ ಕಂಬನಿಯಾಗಿ!!

ನನ್ನೀ ಅಸಾಧಾರಣ ತತ್ವಗಳಿಗೆ
ಏನೆಂದು ಕರೆವೆಯೋ(ವರೋ) ಈ ಕಣ್ಣ ಮುಂದಣ ನೀ(ನೀವು)
ಅವಳು ನನ್ನೊಳ ಚೇತನ;
ಒಮ್ಮೆ ಪ್ರೇಮಿ; ಮತ್ತೊಮ್ಮೆ ತಾಯಿ,
ಮೀರಿ ನಿಂತಾಗ ನಾನೇ!!!

ಈಗ ಕೇಳಿ;
ನೀವೂ ಒಬ್ಬರೇ?!!!!

28/05/2014

No comments:

Post a Comment