ಅವಳ ತುಮುಲಗಳು
"ನಿಜ ಏನು?, ಹೇಳಿ. ಇಲ್ಲ 'ನೀನಲ್ಲ' ಅಂತನಾದ್ರೂ ಹೇಳಿ, ದ್ವಂದ್ವದಲ್ಲಿ ನಾನ್ ಸಾಯ್ತಾ ಇದ್ದೀನಿ. ಅಟ್ಲೀಸ್ಟ್ ಹುಚ್ಚಿ ತರ ಕವನ ಬರಿಯೊದಾದ್ರೂ ಬಿಡ್ತೀನಿ. ಪ್ಲೀಸ್,,,, ನಾನ್ ರೆಕ್ವೆಸ್ಟ್ ಮಾಡ್ತಾ ಇದ್ದೀನಿ".
ಹೀಗೊಂದು ಮೆಸೇಜ್ ಮಾಡಿದಳವಳು. ಪ್ರತಿಕ್ರಿಯೆಗಾಗಿ ಕಾದಳು. ಕಾಯುವ ತಾಳ್ಮೆ ಸಂಪೂರ್ಣ ಇಲ್ಲವೇ ಇಲ್ಲ ಎನ್ನುವ ಮನೋಸ್ಥಿತಿ ಅವಳದು. ಹಾಗಾಗಿಯೂ ೧೫ ರಿಂದ ೨೦ ನಿಮಿಷಗಳು ಕಾದಳು.. ಅವಳ ಮನದಲ್ಲಿ ಇನ್ನೆಂದೂ ಈತನನ್ನು ತಾನು ಏನೂ ಕೇಳುವುದು ಬೇಡ. ಹೀಗೆ ಪರಿತಪಿಸುವುದು ಬೇಡವೇ ಬೇಡ. ತನ್ನ ಸ್ಥಿತಿಯ ತಾನೇ ನೋಡಿಕೊಳ್ಳಲಾರದೇ ಹೆಣಗುವಳು. ಕೊನೆಯದಾಗಿ ಹೇಳುವುದಾದರೂ ಹೇಳಿಬಿಡೋಣವೆಂದು ಮನಸ್ಸು. ತಾಳ್ಮೆಗೆಟ್ಟು ಮತ್ತೊಂದು ಮೆಸೇಜ್ ಟೈಪ್ ಮಾಡಿದಳು.
"ಇಷ್ಟು ದಿನಗಳು 'ನಾನೇ ಅದು' ಅಂತ ಅಂದುಕೊಂಡಿದ್ದೆ. ಇವತ್ತು ನಿಮಗೆ ಉತ್ತರ ಕೊಡೊಕೆ ಆಗದೇ ಇರೋದು ನನಗೆ ಕಷ್ಟವಾಗುತ್ತಿದೆ. ಬಹುಶಃ ನನ್ ಕಷ್ಟ ನಿಮಗೆ ಅರ್ಥ ಆಗುತ್ತಿಲ್ಲ".
"ಇನ್ನೊಂದು ನಾನ್ ಸಾಯೊಲ್ಲ ಅನ್ನೋ ಧೈರ್ಯ ಇರಲಿ ನಿಮಗೆ. ಒಟ್ಟಿನಲ್ಲಿ ನಾನ್ ಹುಚ್ಚಿ ಅಂತು ನಿಜ ನಿಮ್ಮಿಂದ, ನಾನ್ ನಿಮಗೆ ಯಾವತ್ತೂ ಯಾವ್ ತರದಲ್ಲೂ ಅಡ್ಡಿ ಅಲ್ಲ. ಕೋಪ ಮಾಡಿಕೊಳ್ಳೊದು ಒಂದೇ ಗೊತ್ತಿರೊದು ನಿಮಗೆ. ನಾವೇನ್ ಆದ್ವಿ ಅನ್ನೋ ಕಿಂಚಿತ್ತು ಯೋಚ್ನೆ ಇಲ್ಲ ನಿಮಗೆ. ಇರ್ಲಿ, ನಿಮ್ಮ ಬಗ್ಗೆನೇ ನೋಡಿಕೊಳ್ಳಿ, ಆರಾಮಾಗಿರಿ. ನಾನು ಇನ್ನು ನಿಮ್ಮ ಸುತ್ತಾ ಮುತ್ತಾ ಇರೋಕ್ ಆಗೊಲ್ಲ. ಗುಡ್ ಲಕ್".
ಮೆಸೇಜ್ ಸೆಂಡ್ ಆಗುತ್ತಿದ್ದಂತೆಯೇ ಕಣ್ಣೀರುಕ್ಕಿ ಬಿಕ್ಕುವಳು. ಒಮ್ಮೆಲೆ ಸ್ತಬ್ಧತೆ, ತಾನು ಮಾಡುದ್ದು ಸರಿಯೋ? ತಪ್ಪೋ?, ಮತ್ತೂ ನಾನೇ ನೋಯಿಸಿದೆನೇ? ಎಂದು ಮತ್ತಷ್ಟು ಗೊಂದಲ. ಮತ್ತೇನು ಮಾಡುವುದು ಎಷ್ಟು ದಿನ ಹೀಗೆ ಕೊರಗುವುದು? ಹಗಲಲ್ಲ, ರಾತ್ರಿಯಲ್ಲವೆಂದು ಅವನೊಂದಿಗೆ ಮಾತನಾಡಿ ಪ್ರೀತಿ-ಪ್ರೇಮಗಳ ಕನಸು ಕಂಡು, ಅವನ ಅತಿರೇಕದ ಮಾತುಗಳಿಂದ ಇರಿಸುಮುರಿಸಾದರೂ ಕೊನೆ ಕೊನೆಗೆ ಅವುಗಳೇ ಪ್ರಿಯವಾಗಿ, ಅವಳೇ ಮೊದಲಾಗಿ, ತಾನು ನಿಮ್ಮನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದಳು. ಸ್ಪಷ್ಟವಾಗಿ ಉತ್ತರಿಸದೆ, ಸತಾಯಿಸಿ ತಾನೂ ಅವಳಲ್ಲಿ ಅನುರಕ್ತನಾದಂತೆ ವರ್ತಿಸಿ, ಅವಳಲ್ಲಿ ಪ್ರೀತಿಯೆಂದರೆ ಹೇಳುವುದಲ್ಲ; ನಡೆಯುವುದು ಎಂಬ ಭಾವ ಮೂಡುವಂತೆ ಉಳಿಯುವನು.
ಅತೀ ಗೌರವ ಹೊಂದಿದ್ದ ಅವಳಿಗೆ ಆತನನ್ನು ಪ್ರಶ್ನಿಸಿ ಕಾಡುವ ಮನಸ್ಸಿರಲಿಲ್ಲ. ಬದಲಿಗೆ ಸಂಭ್ರಮಿಸಿದಳು. ಅವನ ಮೌನವೇ ಅವಳ ಕವನಗಳಾದವು. ಅವಳ ಪ್ರತೀ ಬರಹಗಳನ್ನು ಅವನಿಗೇ ಮೊದಳು ತೋರಿಸುತ್ತಿದ್ದಳು. ಅವನೊಪ್ಪಿದರೇ ಅಷ್ಟೇ ಖುಷಿ ಅವಳಿಗೆ. ಮೊದಮೊದಲು ಆಪ್ತರಾಗಿದ್ದೂ ಹೀಗೆಯೇ ಎನ್ನಬಹುದು. ಅವನು ತನ್ನನ್ನೇ ಪ್ರೀತಿಸುತ್ತಿರುವನೆಂದು ನಂಬಿದ್ದಳು. ಅದೇ ಧೈರ್ಯ ಅವ ನನ್ನವನೆಂದು. ಆದರೆ ಇತ್ತೀಚಿಗೆ ಅವನು ಮಹಾ ಮೌನಿ; ಇದೇ ಅವಳಿಗೆ ಸಹಿಸದ ಸಂಕಟವಾದದ್ದು. ಅವನ ಮೌನಕ್ಕೆ ಅವಳ ಬಿಕ್ಕುಗಳೇಷ್ಟೋ? ಮೌನಕ್ಕೆ ಕಾರಣಗಳನ್ನು ಊಹಿಸಿ ಊಹಿಸಿ ಹುಚ್ಚಿಯಂತಾಗುವಳು; ತನ್ನ ಹುಚ್ಚುತನಕ್ಕೆ ತಾನೇ ಬೆಚ್ಚುವಳು. "ನಾನು ನಾನಾಗಿಲ್ಲ, ನಾನಿಷ್ಟು ದುರ್ಬಲಳಾಗಲಾರೆ" ಬಡಬಡಿಸಿ ಅತ್ತು, ಚಿಂತೆಗಳಲಿ ಮುಳುಗುವಳು. ಕೊನೆಗೂ ಅವ ತನ್ನವನೆಂದ ಅಭಿಪ್ರಾಯಕ್ಕೆ ಬಂದು ಮನಸೋಯಿಚ್ಛೆ ಕವನ ಗೀಚುವಳು. ಅವಳ ಕವನಗಳೂ ಅವಳಂತೆ ಹುಚ್ಚುತನದವು. ಒಮ್ಮೆಲೆ ಬಾನೇರಿ ಹಾರುವಳು ದಿಢೀರನೆ ಅವೆಲ್ಲಾ ಕನಸಾದರೆಂದು ಭಾವಿಸಿ ಭ್ರಮೆಯಿಂದ ಮುಗ್ಗರಿಸುವಳು. ಅವನ ತಣ್ಣನೆಯ ಮೌನ ಮಂಜಿನ ಚೂರಿಯಾಗಿ ಇರಿದಾಗೆಲ್ಲಾ, ಎಲ್ಲಿ ತಾನೂ ಏನಾಗುವೆನೋ ಎಂಬ ಭಯ ಶುರುವಾಗಿಬಿಡುತ್ತದೆ. ''ಸಾಯಲಂತೂ ಸಿದ್ಧಳಿಲ್ಲ, ಯಾವ ಕಾರಣಕ್ಕೂ'' ಎಂಬ ಸಿದ್ಧಾಂತವನ್ನು ಹಲವು ವರ್ಷಗಳಿಂದ ಪಾಲಿಸಿದವಳು. ಏನೇ ಆದರೂ ಜೈಯಿಸುವೆ ಎನ್ನುವ ಮನೋಭಾವ ಅವಳಲ್ಲಿ ಸದಾ ಜಾಗೃತ. ಹೀಗಿರುವಾಗ ಬಹಳ 'ಗಟ್ಟಿ' ಎನಿಸಿಕೊಳ್ಳುವವಳು ಈಗ ಅವನ ಪ್ರೀತಿಗೆ ಸಿಕ್ಕಿ, ಅವನ ಮೌನಕ್ಕೆ ಮೇಣದಂತೆ ಕರಗುತ್ತಿರುವಳು. ಒಮ್ಮೆಲೆ ನಾಶವಾಗದಿದ್ದರೂ, ಇಂಚಿಂಚೇ ಸವೆಯುತ್ತಿರುವಳು. ಇದ್ಯಾವುದರ ಪರಿವೆ ಅವನಿಗಿಲ್ಲ.....
ನೊಂದ ಅವಳ ಮನ ಹಾಡಿಕೊಳ್ಳುವುದು......
ಮೇಣದ ಬತ್ತಿಯಂತಾದೆ ಇಂದು ನಾ
ನಿನ್ನ ಮೌನದ ಜ್ವಾಲೆ ನನ್ನಲ್ಲುರಿಯುತ್ತಿರಲು
ನಾನಿಲ್ಲುವೆ ಕಾಣುವ ಕಣ್ಗಳಿಗೆ ಬೆಳಕ ಶೋಭಿಸುತ
ಅಳಿಯುವೆ ನಿನ್ನ ಮೌನದೊಂದಿಗೆ..... still i love u
ಅವಳ ಮನದ ಮಾತುಗಳೋ ಕಾದಂಬರಿಯ ಸಾಲುಗಳೋ ಎಂಬಂತೆ ಅನಿಸುವುದು ಅವಳಿಗೂ ಒಮ್ಮೊಮ್ಮೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಈ ಹಳೆ ಮಾಡೇಲ್ ಎಲ್ಲಿಂದ ಬಂದಳೋ ಎನಿಸುವಂತೆ ಅತೀ ಭಾವುಕತೆ. ಅದೇ ಅವಳಿಗೆ ಮುಳುವೆನೋ ಅನಿಸುವುದು. ಅವಳ ರಾಗದಲ್ಲಿ ಅವಳು ಹಾಡಿಕೊಳ್ಳಲಿ ಅವಳ ಹಣೆಬರಹ!
ಅವಳು ಅವನಿಗಾಗಿ; ಅವನು ಅವಳಿಗಾಗಿ.... ಮೌನ ಪ್ರೇಮಿಗಳು ಅಲ್ಲಿ ಇಲ್ಲಿ ನಮ್ಮ ನಡುವೆ ಕಾಣ ಸಿಗುವ ಕತೆಗಳೋಳಗಿನ ಚಿತ್ರಣಗಳು.
18/10/2013
No comments:
Post a Comment