Thursday, 6 November 2014

ಕವನ

ನಕ್ಷತ್ರ ಕನಸು ...



ಸುನಾಮಿ ಎದ್ದ ಮನಸ್ಸು
ಶಾಂತವಾಗಲು ಅದೆಷ್ಟು 
ಹೊಡೆತಗಳ ಎದುರಿಸಬೇಕೋ?!

ಮಡಿಲ ಬಿಟ್ಟ ಹಕ್ಕಿ 
ಅದೆಷ್ಟು ತಾಸು ನೆಲದಿ
ಸುಮ್ಮನೆ ಉರುಳಬೇಕೋ?!

ಮೋಡ ಬಿಟ್ಟ ಹನಿ
ಗಾಳಿಯೊಂದಿಗೆ ಎಷ್ಟು 
ಸೆಣಸಿ ಧರೆಗಿಳಿಯಬೇಕೋ?!

ಬಿಟ್ಟ ಮಾತು 
ತಿರುತಿರುಗಿ ಎದುರೇಟಾಗಿ 
ಮತ್ತೆಷ್ಟು ಬಾರಿ ಎದೆ ನೆಟ್ಟಿ ನಿಲ್ಲಬೇಕೋ?!

ಕಳೆದು ಬಂದ ಬಂಧ 
ನೆನಪುಗಳಾಗಿ ಇನ್ನೇಷ್ಟೂ ಕಾಲ
ಹೀಗೆ ಜೀವ ಹಿಂಡ ಬೇಕೋ?!

ಒಮ್ಮೆ ಎಡವಿದ ಕಾಲ್ಬೆರಳು 
ರಕ್ತ ಒಸರುತ್ತಿದ್ದರೂ ಇನ್ನೆಷ್ಟು ದೂರ 
ಈ ಓಟದ ಆಟದಲಿ ಓಡಬೇಕೋ?!

ಒಡೆದ ಕನಸುಗಳ ಅವಶೇಷಗಳನ್ನಿಟ್ಟು 
ಇನ್ನೆಷ್ಟು ನಕ್ಷತ್ರ ಕನಸ ಹೊಸೆದು 
ಹಸಿ ಹಸಿಯಾಗಿ ಮತ್ತೆ ಮತ್ತೆ ಹುಟ್ಟಬೇಕೋ ಕಾಣೆ!!


06/11/2014

ಕವನ

ಯಾವ ದಿಕ್ಕಿಗೆ?!! 


ಬೆಳಗ್ಗೆ ಎದ್ದೊಡನೆ ಕಣ್ಣಿಗೆ ಬಿದ್ದ 
ಅತ್ಯಾಚಾರದ ಎರಡು ಸುದ್ದಿಗಳು. 
ಒಂದು ಶಿಕ್ಷಕನಿಂದ ಶಾಲೆಯಲ್ಲಿ ಮತ್ತೊಂದು 
ಅಪ್ಪನಿಂದ ಮಗಳ ಮೇಲೆ ಮನೆಯಲ್ಲೇ!.
ಅಲ್ಲೇ ಪಕ್ಕದಲ್ಲೊಂದು ವ್ಯಂಗ್ಯ ಚಿತ್ರ
ಶಾಲೆಯಿಂದ ಹೊರಡುವ ವೇದನೆಯ ಕೂಗಿಗೆ
ಹೆದರಿ ಎದ್ದು ಬಿದ್ದು ದೂರ ಓಡುವ ಬಾಲಕಿ!

ಶಾಲೆಯ ದಿಕ್ಕಿಗೆ ಆಸೆ ಕಂಗಳ ಕಂದಮ್ಮಗಳ
ಕನಸಿತ್ತು ಚಿತ್ರಕಾರರ ಕಣ್ಗಳಲಿ
ಶಾಲೆಯೆಡೆಗೆ ಸೆಳೆವ ಗುರಿಯಿತ್ತು ಶಿಕ್ಷಕರಲಿ
ಈಗೆಲ್ಲಾ ಭೀಕರವೆನಿಸೋ ಶಾಲೆಯ ಚಿತ್ರಣ
ಮನಗಳಲ್ಲೂ ಕಲೆಗಾರರಲ್ಲೂ; 
ಶಾಲೆ ಎಂದರೆ ಹೆದರುವ ಸ್ಥಿತಿಗೆ ಪುಷ್ಠಿ ನೀಡಿ
ಎತ್ತ ಸಾಗಿಸುತ್ತಿದ್ದಾರೆ ಶಿಕ್ಷಣದ ಗುರಿಯಾ?
ಶಿಕ್ಷಣವೆಂಬುದು ಕೇವಲ ಶಿಕ್ಷಕನ ಗುರಿಯೇ
ಸಮಾಜವೆಲ್ಲಿ ಕಳೆದು ಹೋಯ್ತೋ ಕರ್ತವ್ಯ ಸಡಲಿಕೆಗಳಲಿ

ರಣ ಚಂಡಿಯಂತ ಆ ಆಂಟಿಯದು 
ಒಂದೇ ಅಬ್ಬರಗಳ ಹೊಡೆತ
ಆ ಕೊಳಗೇರಿಯ ಹಾದು ಹೋಗುವಾಗ 
ಕೇಳಿಬಂದ ಹಿಂದಿನ ದಿನದ ಇಳಿ ಸಂಜೆಯ ನೆನಪು;
ಎಂತ ಗಂಡನಯ್ಯಾ ನೀನೂ ಮುದಿ ಗೂಬೆ ನೀನು
ಐವತ್ತಾದ ಮೇಲೂ ಹೆಂಡತಿ ಸತ್ತಳೆಂದು 
ಎರಡನೇ ಹೆಂಡತಿ ಬೇಕಿತ್ತೇನಯ್ಯಾ?! ಮುದಿಯಾ,,
ನೋಡು ಅಪ್ಪ ಮಗಳ ಮೇಲೇಯೇ ಕಣ್ಣು 
ಹಾಕಿದ್ದನಂತೆ
ಬಿಟ್ಟರೇ ನೀನೂ ಅಂತವನೇ 
ಈ ಎಪ್ಪತ್ತರಲ್ಲೂ
ಮನೆ ತುಂಬಾ ಹೆಣ್ಣು ಮಕ್ಕಳೇ ನಿನಗೆ,, 
ಛೇ ಛೇ,,
ಎಂದೊಂದೇ ಉಸಿರಿಗೆ ಬಡಿದಾಡುತಿದ್ದಳು 
ನಾಲಿಗೆಯೊಡನೆ ಅವಳ ಕೊಳಕು ಮೆದುಳೂ..

ಏದುಸಿರ ಜೀವ ಕಣ್ಣೀರಾಯ್ತೋ ಏನೋ
ಮಬ್ಬುಗತ್ತಲೊಳು ಆ ಹಿರಿ ಜೀವದ ಭಾವ 
ಕಲ್ಪನೆಗೆ ಹಿಡಿಯಲಾಗಲಿಲ್ಲ
ಜಗತ್ತು ಪ್ರತಿಕ್ರಿಯಿಸುತ್ತಲಿದೆ, ಪ್ರತಿಭಟಿಸುತ್ತಲಿದೆ
ಯಾವ ದಿಕ್ಕಿಗೆ? ಯಾವ ರೀತಿಯಲಿ? ಎಂತಹ ಆಕ್ರೋಶದಲಿ?
ಯಾರ ಮೇಲೆ? ಯಾರ ಪರಾರಿ ಮಾಡಿ? ಯಾರನು ಶಿಕ್ಷಿಸಿ?!
ದೀರ್ಘ ನಿಟ್ಟುಸಿರಲಿ ಚಿಂತನೆ ಸಾಗಿದೆ!!

05/11/2014

ಚಿತ್ರಗಳು


04/11/2014
ನುಣುಪಾದ ಕೆನ್ನೆಯನು
ಸ್ವತಃ ಮುಟ್ಟಿ 
ನೋಡಿಕೊಳ್ಳಲಷ್ಟೇನು 
ಆಸಕ್ತಿ ಇರುವುದಿಲ್ಲ;
ನುಣುಪಾದ ಕನ್ನಡಿಯೇ ಬೇಕು
ಕೃತಕವೆನಿಸಿದರೂ
ನೈಜತೆಗೊಂದು ತೆಳು ಪರದೆ
ಬೇಕೇ ಬೇಕೇನೋ
ಕದ್ದು ನೋಡೊ ಸ್ವಾರಸ್ಯವ 
ಅನುಭವಿಸಲು! 

06/11/2014

^^^^^^^^^^^^^^^^^^^^^^^^^^^^^^^^

ಇಲ್ಲದ ನೋವನು 
ಕಲ್ಪಿಸಿ ಮೊರೆವಾಗ
ಕಣ್ಣೀರು ಹೆಚ್ಚು
ಇದ್ದ ನೋವನು 
ಇನ್ನಿಲ್ಲದೆ ಮರೆಮಾಚುವಾಗ
ಎಲ್ಲಿಲ್ಲದ ಸಡಗರ ಸಂಭ್ರಮ
ಗೆದ್ದಂತೆ ಎಲ್ಲವ!

^^^^^^^^^^^^^^^^^^^^^^^^^^^^^

ಪದ್ಯಗಳಲ್ಲೇ ಕನಸು ಕಟ್ಟಿ,
ಕನಸುಗಳಲ್ಲೇ ಕಾಮನೆ ಹರಡಿ,
ಎಷ್ಟು ಸುರುಳಿ ಸುತ್ತಿಹುದೊ
ಆ ಆಲದ ಮರ,,
ಒಮ್ಮೆಲೆ ಬಿಳುಲಾಗಿ ಬಾಗಿದೆ ಭುವಿಗೆ,,
ಮರೆತು ದಿಕ್ಕುಗಳ,,
ನೆನಪಿಟ್ಟು ಪ್ರೀತಿಯನೇ,,

04/11/2014

ಕವನ

ಈ ಭಾವಗೀತೆ ...



ಇದ್ದ ಭಾವಗಳನ್ನು ಇಲ್ಲದ ಕವಿತೆಗಳಲ್ಲಿ
ಹುಡುಕಿದ್ದೇ ಒಂದು ತಪ್ಪು!
ಇದ್ದ ಕವಿತೆಗಳಲ್ಲಿ ಇಲ್ಲದ ಭಾವಗಳನ್ನು
ಕಂಡುಕೊಂಡಿದ್ದೂ ಮತ್ತೂ ತಪ್ಪೇ!

ಎಷ್ತು ತಪ್ಪು ಲೆಕ್ಕಾಚಾರಗಳೊ ಈ 
ಭಾವಗೀತೆಗಳಲಿ; ಹಾಡಿರುವೆ ನಾ
ಉಸಿರು ಕಟ್ಟಿ, ನಿಲ್ಲಿಸಲಾಗದು
ಇನ್ನೂ ಉಸಿರಿದೆಯಾದ ಕಾರಣಗಳಲಿ!

ತಪ್ಪೋ ಸರಿಯೋ ಅಂತೂ ಹಾಡಿದೆ
ಈ ಎದೆಯೊಳಗೆ ನಿರಂತರ ಮೊಳಗುತ
ಆಕಸ್ಮಿಕಗಳಾಗಿ ಹಿಮ್ಮೇಳಗಳು ಒಮ್ಮೊಮ್ಮೆ
ಕೈ ತಟ್ಟೋ ಮನಸ್ಸುಗಳ ಬೆನ್ ಚಪ್ಪರಿಕೆ

ಸಾಲು ಮುಗಿವ ಮುನ್ನ ಹಾಡು ನಿಲ್ಲದಿರಲಿ
ಎಂಬ ಆಶಯವಷ್ಟೇ ಈ ಎಲ್ಲಾ ತಪ್ಪುಗಳ ಸರಣಿ ಬಯಕೆ!
ಕಂಠ ಸವೆದರೂ ಗುನುಗಿ ಮುಗಿಸೇನು
ಹುಮ್ಮಸ್ಸಿನ ಉಸಿರಿರಲಿ ಹಾಡಿನೊಳಗೆ!

02/11/2014

Sunday, 2 November 2014

ಕವನ

ಅಮ್ಮಾ ನೀ....




ಅಮ್ಮಾ ನೀನು ಗುರುವಾಗಲು
ನಾನು ಮಗುವಾಗಲೇ ಚೆಂದ
ನಿನ್ನ ಆಸೆ ಲಾಲಿತ್ಯ
ನಾಳೆಯ ನನ್ನ ಕನಸ ಸಾಹಿತ್ಯ!

ಅಮ್ಮಾ ನೀ ಗೆಳತಿಯಾಗಲು
ನಾನು ಗೆಳಯನಾಗಲೇ ಚೆಂದ
ನಿನ್ನ ಆಶಯ ಕಾರುಣ್ಯ
ನನ್ನೆದೆಯ ರಮ್ಯ ಕಾವ್ಯ!

ಅಮ್ಮಾ ನೀ ಜಗವೇ ಆಗಲು
ನಾನು ಪುಟ್ಟ ಕಣವಾಗಲೇ ಚೆಂದ
ನಿನ್ನ ಹಸುರ ರಹಸ್ಯ
ನನ್ನ ಜೀವನದ ಸ್ವಾರಸ್ಯ!

ಅಮ್ಮಾ ನೀ ಕನ್ನಡವಾಗಲು
ನಾನು ಕನ್ನಡದ ಕೈಯಾಗಲೇ ಚೆಂದ
ನಿನ್ನ ಅಜರಾಮರ ಲಿಪಿ ಮಾಣಿಕ್ಯ
ನನ್ನ ಹೃದಯ ವೀಣೆ ಉಲಿವ ಮಾಧುರ್ಯ!

31/10/2014

ಕವನ

ನಿನ್ನ ತಲುಪಬೇಕು ಎನಿಸಿದೆ...



ನಿನ್ನ ತಲುಪಬೇಕು ಎನಿಸಿದೆ
ಕಷ್ಟವೇನಲ್ಲ ನನಗೆ
ನಿನಗೆ ಕಷ್ಟವಾಗಬಾರದಲ್ಲ
ನನ್ನ ಪ್ರೀತಿಯ ಹೊರೆ

ನಿನ್ನ ಕೈ ರೇಖೆಯ ಮೇಲೆ ಬೆರಳಿಟ್ಟು
ನಾ ನೋಡಬೇಕಿತ್ತು
ಅದು ಸಾಗೊ ದಾರಿಯ
ಸವಿದು ನಡೆಯಬೇಕಿತ್ತು

ಎಷ್ಟು ಕನಸಿತ್ತೊ ಈ ಕಣ್ಣೊಳಗೆ
ಈಗೆಲ್ಲಾ ಹನಿಗಳ ಹೊರಳಾಟ
ಬರಬೇಕಿತ್ತು ನೀ ಅವಧಿಗೆ ಮುನ್ನ
ಈಗ ಹೋಗಬಾರದಿತ್ತು ಹೀಗೆ
ಕನಸಿನ ಕಣ್ ತೆರೆವ ಮುನ್ನ!

31/10/2014
ಹೃದಯ ಹಿಂಡುತ್ತಿದೆ
ಪ್ರಾಣ ಹೋಗುವುದಿಲ್ಲ ಬಿಡು
ಅಶುದ್ಧತೆಯ ಹೊರಗೆಡವಿಕೊಳ್ಳಲು
ಮತ್ತೆ ಹೃದಯ ತುಂಬಿಕೊಳ್ಳಲು!

31/10/2014

#####################

ಜೊತೆ ನಡೆಯಲಾರದವರ,
ಎಲ್ಲಿಂದಲೋ ಬಂದು ಸೇರುವವರ
ನಿಂತು ಕಾಯುವವಳು ನಾನಲ್ಲ;
ತೆವಳಿಯೋ, ಹರಿದೋ, ಓಡಿಯೋ
ಸಾಗುವಾಗ ಆಕಸ್ಮಿಕವಾಗಿ ಎದುರಾದರೂ
ಜೊತೆ ನಿಲ್ಲೋ ಮನಸ್ಸಿನವರ 
ಬಹುಶಃ ನಿರೀಕ್ಷಿಸಬಹುದು!! 

30/10/2014

ಕವನ

ಯಾರಿಗೆ ಯಾರುಂಟು!



ಈ ನಡುವಿನ ಹೊಯ್ದಾಟದಲಿ
ನಿಂತ ನೆಲದ ಅಸ್ಪಷ್ಟ ಬಿಂಬ!
ಮರೀಚಿಕೆಗಳ ಹಾರಾಟ,
ಅನಿಸುವುದು ಹಿಗೆಯೇ; 
ಮಿಕ್ಕಿದ್ದ ಬದುಕು ಅದು ನನ್ನದಲ್ಲ 
ಮಿಕ್ಕವರ ನಗೆಯ ಪಾಲು!
ಬದುಕಿದ್ದ ಅಷ್ಟು ದಿನ
ನಾನು ನಾನಾಗಿರಲೇ ಇಲ್ಲ
ಗೊತ್ತಿದೆ ಬದುಕು ಒಮ್ಮೆಲೇ ಜಗ್ಗಿ ಬಿಡುವುದಿಲ್ಲ
ತುಸು ತುಸುವೇ ವಾಲಿಸಿ
ನೆಲವ ನೇವರಿಸುವುದು ತಲೆಗೂದಲು
ಆಗಲಾದರೂ ಒಮ್ಮೆ ಎಚ್ಚತ್ತಾನೇನೋ ಮನುಜ
ಎಂಬ ಬದುಕ ಆಶಯ!
ಯಾರಿಗೆ ಯಾರುಂಟು?! ಯಾರೂ ಇಲ್ಲ
ಜೀವಕೆ ಬದುಕೇ ಬೆಂಬಲ!
ಬದುಕ ಪಡೆಯಲು
ಈಗೀಗ ಅದೇಕೊ ಬದುಕಿಬಿಡುವ ಹಂಬಲ!

30/10/2014
ಯಾಕೆ ಯಾರೂ ಪ್ರೀತಿಯ ನಂಬುವುದಿಲ್ಲ
ಆತಂಕಗಳೇ ಹೆಚ್ಚು; ಇಲ್ಲವೇ ಸಂಶಯ,
ಈಗೀಗ ನಿಷ್ಠೆ ಎಂಬುದು ನಿಘಂಟಿನ ಹೊರಗುಳಿದ ಪದವಂತೆ
ಗೊತ್ತಿರಲಿಲ್ಲ; ನಿಷ್ಠೆಯಿದ್ದರೆ ಅದು ಅವರಿಗೆ ಆಕಸ್ಮಿಕ
ನಮಗೆ ಸಂಕಟ!
ಪ್ರೀತಿಯಲಿ ನಿಷ್ಠೆಯ ಅವರು ಬಯಸರು
ಅವರಿಗೂ ಅದು ಕಷ್ಟವಂತೆ,,!
ನಿಷ್ಠೆಯ ಬಸಿದುಕೊಂಡ ಪ್ರೀತಿ ಕೊನೆಗೆ ಬೇಡವೆನಿಸಿತು!

30/10/2014

##############

ಕಣ್ಣಿಗೆ ಬಿದ್ದು ಬಿದ್ದೂ
ಕಣ್ಣು ಕೆಂಪಗಾಯಿತು
ಮನಸು ವಿಕಲವಾಗಿ
ನಾಲಿಗೆ ಹರಿತವಾಯಿತು!

29/10/2014

Wednesday, 29 October 2014

ಕವನ

ಅಂಬಿಗನೇ ...


ಎಷ್ಟೋ ವೇದನೆಗಳ ನಡುವೆ 
ಒಂದಷ್ಟು ನಿರಾಳ ಕಂಡದ್ದು 
ಅದು ಬಹುಶಃ ನಿನ್ನಲ್ಲೇ,, 
ನನ್ನನ್ನು ನನ್ನಂತೆ ಒಪ್ಪಿದ ನೀನು 
ನಿನ್ನನ್ನು ನಾ ನಿನ್ನಂತೆ ಒಪ್ಪಿದರೆ 
ನಿನಗೇಕೆ ಸಂಶಯ ಹುಡುಗನೇ !!

ನಿನ್ನೊಳಗೊಂದು ಹೊಳೆವ ನನ್ನ ಬಿಂಬಕೆ 
ನನ್ನೊಳಗಿನ ಚೇತನ ಮಂತ್ರಮುಗ್ಧ 
ಹೀಗೆಲ್ಲಾ ನಾನೂ ಹರಿವಳೇ?! ಎನ್ನೋ 
ಆಶ್ಚರ್ಯದೊಂದಿಗೆ ಸಣ್ಣ ಆತಂಕ!
ಇನ್ನಷ್ಟು ಹತ್ತಿರಾಗಿ ವಿವರಿಸಲಾರೆಯಾ 
ನಿನ್ನ ಪ್ರೇಮವಾ?; 
ಪ್ರೀತಿಯ ಹೊಳೆಯಲಿ ಒಲುಮೆಯ 
ಹುಟ್ಟು ಹಾಕೋ ಅಂಬಿಗನೇ !!

29/10/2014 
ಕಣ್ಣಿಗೆ ಬಿದ್ದು ಬಿದ್ದೂ 
ಕಣ್ಣು ಕೆಂಪಗಾಯಿತು 
ಮನಸು ವಿಕಲವಾಗಿ 

ನಾಲಿಗೆ ಹರಿತವಾಯಿತು!

##################################

ಒಳ್ಳೆಯತನ ಎಂಬುವುದು ಹೆಚ್ಚು ಮಾತನಾಡದು 
ತನ್ನತನವ ಸಾಬೀತುಪಡಿಸಿಕೊಳ್ಳಲು ಹೆಣಗಬಾರದು 
ಮೂಕಿಯಾಗಿದ್ದ ಬಹಳಷ್ಟು ಸಂದರ್ಭ ನಾ ದ್ವೇಷಿಸಲ್ಪಟ್ಟಿದ್ದೆ 
ಮಾತು ಬಾರದ ಕಾರಣ ನಿಂದನೆಗೊಳಗಾಗಿದ್ದೆ 
ಇಂದು ನನಗೆ ಮಾತು ಬರುವುದು, ವಾದವೂ ನಡೆವುದು 
ಆದರೂ ಒಳ್ಳೆಯತನವೆನಿಸಿಕೊಳ್ಳಲಿಲ್ಲ ಅಹಂ ಎನಿಸಿಬಿಟ್ಟಿತು 
ತನ್ನ ತಾ ಸಾಧಿಸಿಕೊಳ್ಳೋ ಹಟ, ಸುಳ್ಳಲ್ಲದ ನಾನು ನಿಜವಾಗುಳಿವ ಛಲ 
ಅವರಿಗದು ಬೇಡದ ವಿವರ, ಅವರಿಗೂ ಇಂತಹುದೇ ಹುಚ್ಚು 

ನಾನು ಸೋತು ಮತ್ತೆ ಸೋತೆ, ಗೆಲ್ಲುವವರು ಗೆಲ್ಲುತಲೇ ನಿಂದರು ಬೆನ್ನ ಹಿಂದೆ,

################################

ಇನ್ನೇನು ದಡ ಸಿಕ್ಕಿತು 
ಎನ್ನುವಷ್ಟರಲ್ಲಿ 
ಅಲ್ಲಿಯೇ ಸಿಕ್ಕಿಕೊಂಡೆ 
ಸುಳಿಯೊಳಗೆ 
ಕಾಡಿದ್ದ ಕಾದಿದ್ದ ಹುಡುಗ 
ಬೆಚ್ಚಿ ನಿಂತಿದ್ದ 
ದಡದ ಗೋಡೆಯಂತೆ, 
ನಾ 
ಎರಚಿ ಹೋದ ನೀರಿಗೆ 

ಕ್ಷಣಕಾಲದ ಚಿತ್ತಾರಕೆ!

###############################

ನಿಮ್ಮ ಹೊಸ ನೋವಿಗೆ
ನಾನು ಕಾರಣಳಲ್ಲ
ಹಾಗೆಯೇ 
ನನ್ನ ಹಳೆಯ ನೋವಿಗೆ 
ಹೊಸ ನಗುವಿಗೆ

ನೀವು! 

#################################

ಎಷ್ಟು ಅದುಮಿಟ್ಟರೂ ಗತದ ಮಣ್ಣ್ಯಾಕೊ ಸಡಿಲ,
ಎದ್ದು ಬಂದು ಎದುರು ನಿಲ್ಲುತ್ತವೆ ಒಡೆದ ನನ್ನ ಬಿಂಬಗಳು!
ಕನ್ನಡಿ ಮಾತ್ರವೇ ನನ್ನದು
ಆಗಾಗಷ್ಟು ಸ್ಪಷ್ಟ

ಕಣ್ಗಳು ಎಂದಿನಂತೆ ಮಂಜೆ! 

29/10/2014 

################

ಭೀಕರ ಕತ್ತಲೊಳಗೆ 
ಮೋಹದ ಮಂದ ದೀಪವ ಹಿಡಿದು ನಡೆವುದು
ಎಷ್ಟು ಕಷ್ಟವೋ!
ಅವನೊಬ್ಬ ನಡೆದಿರುವನು, 
ಕತ್ತಲ 'ಮತ್ತಿನ' ಆರಾಧಕ!
ಅವನ ಕಂಡಾಗಲೆಲ್ಲಾ ಸೋಜಿಗವೇ!
ಸೇಡಿನ ಜಿದ್ದಿಗೆ ಬಿದ್ದು, ಛಲದ ಮುಖವಾಡವಿಟ್ಟು
ಅಂತೂ ನಡೆದಿದ್ದಾನೆ
ಅವನೊಡ ಕತ್ತಲೆಯೂ..

28/10/2014 

ಕವನ

ಧ್ಯಾನದಲ್ಲಿದ್ದ ಮೌನಕೆ 
ಜಗತ್ತು ಶೂನ್ಯವೆನಿಸಿ 
ತನ್ನೊಳ ದಕ್ಕಿದ ಕಾಂತಿಯನು ಮೆಚ್ಚಿ 
ಅದನೇ ಬರೆದುಬಿಟ್ಟಿತು 
ಹೇಳಿಕೊಳ್ಳಲೊಂದೂ ಕಿವಿಯಿಲ್ಲದಾಗ 
ಪತ್ರಗಳೇ ಕಿವಿ , ಮೂಗು , ಕಣ್ಗಾಳಾದವು 
ಅಲ್ಲಿಗೆ ಬಂದ ದಾರಿ ಹೋಕನೊಬ್ಬ 
ಬಿದ್ದ ಪತ್ರಗಳನೆಲ್ಲಾ ಹೆಕ್ಕಿ ಓದಿಕೊಂಡ
'ಓ ಮಹಾ ಕಾವ್ಯ'ವೆಂದ
ಈ ಮೌನ ಶರೀರಕ್ಕೊಂದು 
ಸುಮಧುರ ಶಾರೀರ ಹಚ್ಚಿ 
ತನ್ನೂರಲ್ಲೊಂದು ಸಂತೆ ಕಟ್ಟಿದ!

27/10/2014 

ಕವನ

ಸತ್ಯವು ಕಣ್ಣೆದುರೇ ಬಂದು ನಿಂತು 
ನಗಬಾರದಿತ್ತು ಅದಕ್ಕೇನು ಗೊತ್ತಿತ್ತು 
ಅದನ್ನವರು ಮುಚ್ಚಿಟ್ಟಿದ್ದರೆಂದು!

ಈಗ ಅವರೂ ನಗುವರು ಸತ್ಯದೊಡನೆ
ಅಡಗಿಸಿಟ್ಟ ಸತ್ಯ ಶುದ್ಧವೆಂದು 
ಅಶುದ್ಧವನ್ನು ಮೆರೆಸೊ ಮಾಂತ್ರಿಕರು

ಹೆಚ್ಚೇನು ವಿಷಯ ಬೇಕಿರಲಿಲ್ಲ 
ಪಸರಿಸಿದ ವಿಷದ ಗುರುತು ಹಚ್ಚಲು 
ಮೂಢರಲ್ಲ, ಇಲ್ಯಾರು ಮೂಢರಿಲ್ಲ
ನೈತಿಕತೆ ಬಿಟ್ಟ ಆರಾಧಕರು!!

27/10/2014 


ನಿದಿರೆ ಸೆಳೆದಿರುವಳು 
ಈ ಹೊತ್ತು,
ತಣ್ಣನೆಯ ಸಂಜೆ
ಬಿಡಿಸಿಕೊಳ್ಳುತ್ತಿರುವೆ ಕಣ್ 
ರೆಪ್ಪೆಗಳ
ಮಂಪರಿನಿಂದ, 
ನಿನ್ನ ನೆನಪಿನಿಂದ
ಕ್ಷಮೆಯಿರಲಿ ಇದು ಸಂಜೆ

ಹೊತ್ತಲ್ಲದ ಹೊತ್ತು!

###################

ಮನಸ್ಸಿಲ್ಲ ಈಗ ಮನಸ್ಸಿಲ್ಲ,,
ಖಾಲಿತನ ಜಗದ ಮುಖವಾಡ
ಸೋತಿಲ್ಲ ನಾ ಸೋಲೊಲ್ಲ
ಬರಿದಲ್ಲದ ಮನಕೆ ಆ ಮುಖವಿಲ್ಲ
ಸೊಗಸಿಲ್ಲ ಏನೇನೂ ಸೊಗಸಿಲ್ಲ
ಮರುಳಾಗುವ ವಯಸ್ಸೆಲ್ಲಾ ಇನ್ನಿಲ್ಲ!!

26/10/2014 

ಕವನ

ಭಾವನೆಗಳಿಗೂ ಭಾವಿಸೋ ನಡೆಗಳಿಗೂ
ಕೃತಕತೆ ಎನ್ನುವ ನಡುವಿನ ವ್ಯತ್ಯಾಸ!

ಪ್ರೀತಿಸುವೆ ಎನ್ನುವ, ಪ್ರೀತಿಸಿಬಿಡುವ
ಒಲವೆನ್ನುವ ನಡುವಿನ ವ್ಯತ್ಯಾಸ!

ನುಡಿಗಳು ಸುಳ್ಳಾಡಿದರೂ 
ಕಣ್ಗಳು ದಿಟವೇ

ಮರುಳಾದ ಮಾತುಗಳು 
ನನ್ನೊಳ ಮೊಳಗದ ಸುದ್ಧಿ

ಎಷ್ಟೋ ಕಾರಣಗಳು ಬೇಕಿರಲಿಲ್ಲ ನಾ ಮೆಚ್ಚಲು
ಒಂದಷ್ಟು ಬಚ್ಚಿಡದ ಒರಟುತನ, ನಿಜವೇ ಹೇಳುವ ನಿನ್ನ ಕಣ್ಗಳು!

26/10/2014

Saturday, 25 October 2014

ಕವನ

ಶಿಥಿಲ ಶಿಲೆಗಳು....



ಬಂಧಿಸಿಕೊಂಡಷ್ಟು ಭಾವಗಳು
ಹರಿದುಬಿಡಲು ತವಕಿಸುತ್ತವೆ
ಕುರುಡಾಗಿ ಎಲ್ಲೆಂದರಲ್ಲಿ ನುಗ್ಗುವಂತೆ
ಒಳ ಒತ್ತಡವಿರುವಂತೆ!

ಹರಿದುಬಿಡುವ ಭಾವಗಳಿಗೆ

ಹಗುರಾಗುವ ಅವಸರಗಳು
ಕೊರೆದ ನೆಲಗಳ
ಪರಿವೆಯೇ ಇಲ್ಲದಂತೆ!

ಹರಿದು ಕೊಟ್ಟ ಮಣ್ಣ ನೆಲಗಳಿಗೆ

ಕಳೆದುಕೊಂಡ ಭಾವ
ಜೊತೆ ಸಾಗಲಾರದ ಜಿಗುಪ್ಸೆ
ಕಣ್ಣೀರಿಲ್ಲದ ಕಣ್ಣಂತೆ!

ಮನಸೇ ಇಲ್ಲದ ಧಾರೆಗಳಿಗೆ

ಮನಸುಕೊಟ್ಟು ಪಡೆವ ವೇದನೆ
ಕೊರೆತ ಸಹಿಸಿ ಕತ್ತಲ ಕೂಪಕ್ಕಿಳಿವ
ಮೌನ ರೋದನದಂತೆ!

ಭದ್ರವಾಗಿ ಆಳಕ್ಕಿಳಿವ ಭಗ್ನ ಮನಸುಗಳಿಗೆ

ನೆಲದ ಮೇಲೆ ಇದ್ದ ನಿಶಾನೆಯೇ ಇಲ್ಲ
ಕೊರೆತವೆಲ್ಲಾ ಅಳಿಸಿಕೊಂಡು ಉಳಿವ
ಭೂಗರ್ಭದ ಕಲ್ಲು ಚಪ್ಪಡಿಗಳಂತೆ

ಎಂದೋ ಯಾವುದೋ ಮನಸುಗಳಿಗೆ

ಇನ್ನಿಲ್ಲದ ಶ್ರಮದ ಫಲವಾಗಿ
ಸಿಗಿದು ಪಡೆವ ಪುರಾತನ
ಶಿಥಿಲ ಶಿಲೆಗಳಂತೆ ಮತ್ತವು
ಅಮೂಲ್ಯವಂತೆ!

25/10/2014
ಮನಸ್ಸು ತುಳಿದ ಹೂವಾದಾಗ
ನೋಡುವ ನೋಟವೆಲ್ಲಾ ಕ್ರೂರವೇ
ಬಳಿ ಬಂದ ತಂಗಾಳಿಗೂ ಉರಿವ ಆಪಾದನೆ
ನಿಂತ ನೆಲವೂ ಮತ್ತೂ ಕೆಳಕ್ಕೆ ತುಳಿಯೋ ವೇದನೆ
ಮನಸ್ಸು ಮೆದುವಾಗಬಾರದಿತ್ತು
ಮನಸ್ಸು ಹೂವಾಗಬಾರದಿತ್ತು
ಕಲ್ಲೊಳ ಮೃದುವು ಅವರೆದೆಯ ತಾಕಬಾರದಿತ್ತು
ಕಲ್ಲು ಕರಗಬಾರದಿತ್ತು!

25/10/2014

Friday, 24 October 2014

ಕವನ

ಕುಸುರಿ



ಕನಸ ಕುಸುರಿಗೆ
ಬಣ್ಣದ ಅಭಾವ!

ಭಾವ ದೀಪ್ತಿಗೆ
ಮನಸು ಅಭಾವ!

ಹೃದಯ ಬಿರಿತಕೆ
ಮಿಡಿತದ ಅಭಾವ!

ಪ್ರೀತಿ ಸೆಳೆತಕೆ
ನಿಷ್ಠೆಯ ಅಭಾವ!

ಆದರೂ ಕನಸಿಗೆ ಭಾವ ತುಂಬಿ
ಮನಸಿಗೆ ಹೃದಯ ಬಿಗಿದು

ನಿಷ್ಠೆಯ ಮಿಡಿತ ಹೆಚ್ಚಿಸಿದೆ
ಹಾಳು ಈ ಜೀವನ ಬಣ್ಣಗಳು!

24/10/2014

Thursday, 23 October 2014

ಕವನ

ಚರದಲಿ...


ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ
ಬರೆದುಕೊಂಡು ಬಿಡು ನೀನೇ ನನ್ನಯ ಸಾಲು

ಸೇರದ ದೂರವಾಗದ ಈ ಹಳಿಗಳಂತಾಗಿ
ಒಟ್ಟಿಗೆ ಪಯಣಿಸೊ ಈ ಸುಂದರ ಮಾರ್ಗ
ಆ ಕಿಟಕಿಗೆ ನೀನು, ಈ ಕಿಟಕಿಗೆ ನಾನು
ಮುಖ ಮಾಡಿ ಪರಸ್ಪರ ಧ್ಯಾನಿಸುತ
ಕುಳಿತ ಒಂದೇ ಬೋಗಿಯ ಪ್ರಯಾಣಿಕರು

ಕಿಟಕಿಯಾಚೆಗೆ ಸೆಳೆವ ಹಸಿರೊಳು ಉಸಿರಾಗಿ 
ಒಮ್ಮೆ ಕಂಪಿಸುತ,,ಮತ್ತೊಮ್ಮೆ ಆಘ್ರಾಣಿಸುತ 
ಸಾಗುತ ನಿಂದೆವು ನಾವು ಸ್ಥಿರವಾಗಿ ಚರದಲಿ..

24/10/2014

ಕವನ

ಕವಿ-ಕಾವ್ಯ ನಾಮ




ನಕ್ಷತ್ರವೊಂದು ಹೇಳಿತಂತೆ
ದೂರದಿಂದ ಆರಾಧಿಸೋ
ಆ ನನ್ನಯ ಸಾಸಿರ ಜೀವಗಳು
ಬಂದು ಒಂದರೆ ಘಳಿಗೆಯೂ
ಇರರು ನನ್ನೊಟ್ಟಿಗೆ; ಕಾರಣ
ನನ್ನೊಳ ಬೇಗೆ, ಉರಿಯೋ ವೇದನೆ
ಉಸಿರಿಲ್ಲದ ಉಚ್ಛ್ವಾಸ-ನಿಶ್ವಾಸಗಳು!

ಕಾನನದ ಹೂವೊಂದು ನಲುಗಿತಂತೆ
ಅದೆಲ್ಲೋ ಕುಳಿತು ಜಪಿಸೋ ಕವಿ ಹೃದಯ
ಕಾಡು ಮಲ್ಲೆಯ ಸೊಬಗ ಇನ್ನಿಲ್ಲದೆ ವರ್ಣಿಸಿದ
ಆತನಾದರೂ ಬಂದೊಮ್ಮೆ ಕೇಳಿದನೇ
ನನ್ನಯ ಅನಿವಾರ್ಯ ವೈರಾಗ್ಯ
ಬರಲಾರನು ದಾಟಿ ಕಾಡ ಗಡಿಯ
ಜೀವ ಭಯವಿದೆ ಅವನಿಗೂ
ನೋಡಿ ನನ್ನಯ ಈ ದಟ್ಟ ಅರಣ್ಯ!

ಕಡಲಾಳದ ಮುತ್ತೊಂದು ಕರೆಯಿತಂತೆ
ಬಂದು ಸೇರೋ ಚಿನ್ನದ ಹುರಿಯ
ಬರಲಾರೆನೆನುತ ಸೋತುಕೊಂಡಿತಂತೆ
ಅವರ ಕೈಯೊಳು ತಲತಲಾಂತರದ ಸೊತ್ತಂತೆ,
ನಿಟ್ಟುಸಿರಲಿ ಮಗ್ಗುಲಾದ ಮುತ್ತು
ಮತ್ತೆಲ್ಲೋ ಬಲೆಯೊಳಗೆ ಬಿಕ್ಕು
ಸಮುದ್ರದಾಳಕ್ಕಿಂತ ಮನಸು ಭಾರವಾಯ್ತು
ಬರಲಾರದ ಚಿನ್ನದ ಹುರಿಗೆ ದೂರ ನೆಪವಾಯ್ತು

ಮಾಯದ ಮೋಹವು ಮಾತಾಯಿತಂತೆ
ನನ್ನೆಡೆ ಬರಲಾರರು ಎಂದು ಯಾರೂ ಇಲ್ಲ
ಬಂದವರ್ಯಾರು ಉಳಿವರಿಲ್ಲ;
ಬಂದು ಹೋಗೊ ಬಯಕೆ ನಾ
ಬಂದಿಲ್ಲೇ ಕಳೆದು ಹೋದವರೆಲ್ಲಾ ಹುಚ್ಚರು!
ದಾಹಿಗಳು, ಧ್ಯಾನಿಗಳು, ಮೋಹದ ಮಾಂತ್ರಿಕರು
ಕಳೆದು ಬಂದು ಉಳಿವರು ಹೀಗೆ ಕವಿಗಳ ಹಾಗೆ!

ಆಗಸದ ನಕ್ಷತ್ರ, ಕಾಡು ಮಲ್ಲೆ, ಕಡಲಾಳದ ಮುತ್ತುಗಳು
ಒಂದೇ ಸಮನೆ ಉದ್ವೇಗದಿ ಉಲಿವರಂತೆ
ಮೋಹದ ಜೊತೆಗೂಡಿ
ವಿರಹ, ಪ್ರೇಮ, ಮಧುರ ಭಾವ, ವೈರಾಗ್ಯ
ತಮ್ಮದೇ ಆಸ್ತಿಗಳಂತೆ
ಕ್ಷಣ ಕಾಲ ಮೌನವಾಗಿ ಆವರಿಸಿ ಎದೆಗೇರಿ ನಿಂತರು
ಕವಿ ಕಾವ್ಯ ನಾಮಗಳಲ್ಲಿ
ನೆಲೆ ಕಂಡರಂತೆ!

23/108/2014

ಕವನ

ಕ್ಷಮಿಸಿಬಿಡು ನೀ....



ನಿನ್ನನು ಅಲ್ಲಿ ಇಲ್ಲಿ
ಹುಡುಕಿ ಅವಮಾನಿತಳಾಗಿದ್ದು
ನನ್ನದೇ ತಪ್ಪಿದೆ;
ಕ್ಷಮಿಸಿಬಿಡು ನನ್ನೊಳಗೇ ಇರುವ ನಿನ್ನ
ಲಕ್ಷಿಸದೇ ಉಳಿದುಕೊಂಡೆ!

ಆಯ ತಪ್ಪಿದ ನಡೆಯಂತೆ
ಮನವೆಲ್ಲಾ ಕೊರಗು
ಕ್ಷಮಿಸಿಬಿಡು ನೀ ನನ್ನೊಳ ಒಲವೇ
ತಪ್ಪಲಾರೆ ಇನ್ನು ಎಂದಿಗು

ಏಸು ದಿನದ ಶ್ರಮವೋ
ನೀ ನನ್ನ ಶಾಂತ ನಿರ್ವಿಕಾರ ಕಾಂತಿ
ಕುಂದಿಸಿ ಬಿಟ್ಟೆ ನಾನೊಡನೆಯೇ
ಲಯ ತಪ್ಪಿದ ಗೇಯದಂತೆ

ಕದಡಿದ ಕೊಳದ ರಾಡಿಯಂತೆ
ಇನ್ನೆಷ್ಟು ಕಾಲ ಬೇಕೋ ಹಗುರಾಗಲು
ಸಹಕರಿಸಿ ಕ್ಷಮಿಸಿಬಿಡು 
ಓ ನನ್ನಯ ಮನವೇ
ಮತ್ತಾಗೆನು ಹೀಗೆ ಚಂಚಲ ಚಿತ್ತಳು!

23/10/2014

Wednesday, 22 October 2014

ಕವನ

ಹೇಳು ನೀ ದೇವನೇ.....



ಸುತ್ತಲೂ ಬೆಳಕಿರಲು 
ನನ್ನೊಳ ಅಂಧಕಾರವ 
ಮುಚ್ಚಿಡಲಾರೆನೋ ದೇವ

ಸುತ್ತ ಸೂರ್ಯ ಕಾಂತಿ ಹೊಮ್ಮಿರಲು
ನನ್ನೊಳ ಮುಳ್ಳು ಬೇಲಿಯ 
ಬೆಳಸಲಾರೆನೋ ದೇವ

ಸುಳಿವ ತಂಗಾಳಿ ಸೆಳೆದಿರಲು 
ನಡುವಿನ ಒಂಟಿತನ ಸಂಕೋಲೆಯ 
ಬಿಡಿಸದೆ ನಿಲ್ಲಲಾರೆನೋ ದೇವ

ಶಬ್ಧಗಳೆಲ್ಲಾ ಶಬ್ದವಾಗಿರಲು 
ನನ್ನೊಳ ನಿಶ್ಶಬ್ದವ
ಕಾಯ್ದಿರಿಸಲಾರೆನೋ ದೇವ

ಹಸುರ ಹೊನ್ನು ರಾಶಿಯಿರಲು
ಒಳಗಿನ ಬರಡುತನವ 
ಇನ್ನೆಷ್ಟು ಸಹಿಸಲಿ, ಆಗದೋ ದೇವ

ಜಗದಗಲ ಹಬ್ಬಿದ ಪ್ರೀತಿಗೆ 
ನನ್ನೊಳ ಮೋಹ ಚೇತರಿಕೆಯ
ಸುಳಿವನು ಹೇಗೆ ಮುಚ್ಚಿಡಲಿ,
ಹೇಳು ನೀ ದೇವನೇ,,,

22/10/2014
ಬೆಳಕು ತುಂಬಿರಲಿ ಕಣ್ಗಳಲಿ
ಪ್ರೀತಿ ತುಂಬಿರಲಿ ಬಾಳಲಿ

22/10/2014

##################

ಬಯಸಿದ್ದೆಲ್ಲಾ ಸಿಗುವುದಿಲ್ಲ
ಸಿಕ್ಕರೆ ಬಯಕೆಗಳಿಗೆ ಬೆಲೆಯಿಲ್ಲ

21/10/2014

ಕವನ

ಯಾರು ನೀ.....



ಹಾರೋ ಹಕ್ಕಿ ನಾ
ಜಿಗಿಯೋ ಜಿಂಕೆಯೂ
ಉಲಿವ ಕಲರವವೂ
ಯಾರು ನೀ ಕಲಿಸಲು
ನನಗೆ ನಗುವುದನು?!

ನಿತ್ಯ ನಿಘಂಟು ನೋವುಗಳು
ಅಂಜದೆ ಅಳುಕದೆ ನಿತ್ಯ ನಂದನ
ಹರಿವ ತೊರೆಯೊಳು ಕಪ್ಪುಂಟೇ?!
ಯಾರು ನೀ ಮತ್ತೂ ನನ್ನ ನಗಿಸಲು

ನಗಿಸಲು ನಿನಗಿಲ್ಲವೋ ಅವಕಾಶ
ಹುಟ್ಟು ನಗುವಿನರಸಿ
ಅಳು ಬಾರದವಳು;
ಅತ್ತರೂ ಕಣ್ತೇವ ಆರಿದವಳು!
ಯಾರು ನೀ ನಗಿಸಲು ನನ್ನ
ಯಾರು ನೀ ಮೊದಲಾಗಿ ನಗಲಾರದವನು?!

21/10/2014



''ಅವಳು''........
ಅವರು ಅಂದುಕೊಂಡರು
ಅವಳು ನನ್ನ ಬಿಟ್ಟು ಬದುಕಲಾರಳೆಂದು
ಅವರು ಅಂದುಕೊಂಡರು
ಅವಳು ಮತ್ತೆ ಮತ್ತೆ ತಿರುಗಿ ಬರುವಳೆಂದು
ಅವರು ಅಂದುಕೊಂಡರು
ಅವಳು ಹೆಣ್ಣು; ನನ್ನ ಬಿಟ್ಟು ಬದುಕಲಾರಳೆಂದು
ಅವರು ಬದುಕಲಾರರು ಈಗ
'ಅವಳು' ಎನ್ನುವ ಹೆಸರ ಬಿಟ್ಟು!

21/10/2014


############################


ಕವಿ, ಕವಿತೆ ಕಲ್ಪನೆಗಳಲ್ಲೇ
ಕಳೆದು ಹೋಗಿ
ವಾಸ್ತವದಲಿ ದಾಪುಗಾಲನಿಟ್ಟು
ಅರಿಯದ ಜೀವನದಲಿ
ಸೋಲುತ್ತಲೇ ನಗುತ್ತಿದ್ದ
ಕವಿಯ ಕಲ್ಪನೆಗಳಲ್ಲಿ ಬರೀ ಗೆಲುವೇ
ಸೋಲಿಗಂಟದ ಗೆಲುವು
ಅದೊಂದು ಮೊದಲನೇ ಸಹೃದಯ!


##############################


ದೊಡ್ಡ ದೊಡ್ಡವರೆಲ್ಲಾ ದೊಡ್ಡ ಮನೆಯಂಗಳದಲಿ
ನಾನೋ ಪುಟ್ಟ ಹುಡುಗಿ; ತಲೆ ಕೆದರಿದವಳು
ಲಂಗದಲ್ಲಷ್ಟು ಅಕ್ಕಿ ನುಚ್ಚು, ಬಾಗಿ ಬಾಗಿ ಬಾಗಿಲಿಗಿಡುವೆ
ಮುಂದಲೆ ಕೂದಲ ಒರಟಾಗಿ ಹಿಂದಕೆ ಸರಿಸುತ
ಅಂಗಳದ ಇರುವೆ ಗೂಡುಗಳಿಗೆ;
ಕಚ್ಚದವು ನನಗೆ ಮೆಚ್ಚುಗೆ ಇದೆ ಮನದೊಳಗೆ

20/10/2014

Monday, 20 October 2014

ಕವನ

"ನಿನ್ನ ಮುಟ್ಟಲಾರದ ದನಿ"



ನಿನ್ನ ಮುಟ್ಟಲಾರದ ನನ್ನೀ ದನಿ

ಒಳಗೊಳಗೇ ಮರಗಟ್ಟಿದ ಪ್ರೀತಿ

ಎಂದು ಉಕ್ಕಿ ಹರಿವುದೊ ನಲ್ಲ

ಆಗಾಗ ಕಾಡುವ ಭಯವು ನನಗೆ

ನೀ ಕಾತುರದಿ ನನ್ನ ನೋಡ ಬಂದಾಗ

ನೀನೇ ಸಂಭಾಳಿಸಬೇಕಿದೆ ಮನದ ತೊಳಲಾಟ

ಅರಿತು ಈ ಮಾಯಾ ಮೋಹದ ಬೇಟ..


18/10/2014

ಕವನ

''ಪ್ರೇಮ ಕವಿತೆ''




ನೀರಿನ ಮೇಲೆ ಬರೆದ ಕವಿತೆ


ಇದು ಅಲ್ಲವೇ ಅಲ್ಲ ನಲ್ಲ;


ಹೃದಯ ತಟ್ಟಿದ ಒಲುಮೆಯದು

ನಿನ್ನ ಪ್ರೇಮ ಕವಿತೆ

ಓದಿ ಓದಿ ನಾ ನೆಚ್ಚಿ ಕೊಚ್ಚಿ ಹೋದೆನಲ್ಲ

ನಿನ್ನ ಸಾಲುಗಳ ಸುಳಿಯಲಿ ಸಿಕ್ಕಿ

ನಿನ್ನಲೇ ಉಳಿದು ಬಿಟ್ಟಿರುವೆ

ನಾನಿಲ್ಲಿ ಇಲ್ಲವೇ ಇಲ್ಲ!



17/10/2014
ಕುದುರೆಗೆ ಕಣ್ಪಟ್ಟಿ,


ದನಕ್ಕೆ ನೊಗ ಭಾರ


ಮನುಜನಿಗೆ ಚಿಂತನೆಗಳು


ಇರುವಷ್ಟೇ ಕಾಲ


ದಾರಿ ನೇರ


18/10/2014

%%%%%%%%%%%%


ಪ್ರೀತಿಸಬಹುದು, 


ಪ್ರೀತಿಸುವಂತೆ ಬಯಸಬಹುದು 


ಪ್ರೀತಿಸಿ ಕಾಯಲೂಬಹುದು


ಆದರೆ ಪ್ರೀತಿಸುವಂತೆ ಪ್ರಚೋದಿಸಲಾಗದು!


17/10/2014

Friday, 17 October 2014

"ವಿಪರ್ಯಾಸ"


ಕತ್ತಲ ಪೂರ್ಣ ಅನುಭವವಾಗದ ಹೊರತು
ಜಡ ಮನವು
ಬೆಳಕಿಗೆ ಎಂದೂ ಹಾತೊರೆಯದು!

17/10/2014

%%%%%%%%%%%%

ಯಾನ..


ಹಿತವಾದ ಈ ಸಂಜೆ
ಸೂರ್ಯ ಕಿರಣ ಬಿಸಿ ಹದವು
ನೇರ ಹಸಿರ ಹಳ್ಳಿ ಸೊಗಡಿಗೆ
ಮಾತು ಮೌನಗಳ ಮೆಲುಕು
ಮಳ್ಳ ನೀ ಮನದೊಳಗೆ,,
ಹೀಗೊಂದು ಸುಂದರ ಯಾನ,,
ಕೇಳಿದೆಲ್ಲಾ ಸುಮಧುರ ಸಂಗೀತ,,  



%%%%%%%%%%


ಹುಡುಗ,

ನೀ ಹೀಗೆ ಮೌನವಾದರೆ
ನನ್ನ ಪದಗಳಿಗೆ
ದನಿ ಇಲ್ಲ..

17/10/2014


ಎಲ್ಲಕೂ ಕಾರಣಗಳಿರಬಹುದು

ಹೇಳಬಹುದು ಎಂದೊಂದಾದರೆ

ಅರಗಿಸಿಕೊಳ್ಳಲಾರದ ಅನೇಕ

ಬಗೆಯಬಾರದು ಕುತೂಹಲಗಳ

ನೊಂದುಕೊಂಡಾವೋ ನೋವುಗಳು

ಬಿಟ್ಟು ಬಿಡಿ ಅವುಗಳದರಂತೆ

ಚೇತರಿಸಲಾರದಿರೆ ಸುಮ್ಮನೆ


%%%%%%%%%%%


ನಿನ್ನ ಕಂಡೊಡನೆಯೇ ಈಗೀಗ

ಅದೇಕೊ ನಾಚಿಕೆ

ನೀನೆಲ್ಲೋ ನನ್ನ ಕನಸುಗಳ

ಮುಂಚೆಯೇ ಓದಿಕೊಂಡು ಬಂದಂತೆ!


14/10/2014

ಚಿತ್ರ



14/10/2014

ಕವನ

ಮನದಲ್ಲೊಂದು ಮೌನ



ಪ್ರೀತಿಸಬೇಕೆಂದು ಎನಿಸಿದ 

ಪ್ರತೀ ಕ್ಷಣದ ಹಿಂದೆ

ದೂರಾಗೊ ಆತಂಕ;

ಸುಮ್ಮನಿದ್ದು ಬಿಡುವೆ ಹೀಗೆಯೇ,

ಸಾಲು ಸಾಲು ದುರಂತಗಳ ನಂತರ

ಇನ್ನು ತ್ರಾಣವಿಲ್ಲ ಬದುಕಲಿ

ಕಣ್ಗಳಾದರೂ ನಗುತಿರಲಿ

ಎದುರುಗೊಳ್ಳೊ ನಗೆಗಳೆದುರು

ನಕ್ಕು ಬಿಡುವೆ ಸುಮ್ಮನೆ

ಮನದಲ್ಲೊಂದು ಮೌನ

ಹೀಗೆಲ್ಲಾ ಸೋಕಿ ಹೋಗೋ

ನಿನ್ನ ನಿಟ್ಟುಸಿರಿಗೆ..!


14/10/2014

ಮನಸಿಗಷ್ಟು ಮುದ ಕೊಡುವ


ಸಣ್ಣ ಸಣ್ಣ ಕುತೂಹಲ-ಮೆಚ್ಚುಗೆಗಳು

ಬಹುಶಃ ದೊಡ್ಡ ದೊಡ್ಡ ತಲೆನೋವುಗಳಿಗೆ ಮದ್ದು!! 

ಕವನ

ದಂಗೆ ಏಳಲಾರದ ಅಸಹಾಯ ಸ್ಥಿತಿಗೆ

ನಾ ಸಂತಳೆಂದು ಹೇಳಿಕೊಂಡೆನು

ನನ್ನಲೂ ಆಸೆಗಳಿವೆ ಅವು ಅವಕಾಶಗಳ ಬೇಡುತ್ತಲಿವೆ

ಸಮಯ ದೂಡಿರುವೆ ಬಲಿಯಲು

ಕೋಪವೆಂಬ ಕಿಚ್ಚಿದ್ದ ಕಾರಣ

ಸಾಧುವಲ್ಲ ನಾ

ತಾಮಸವಾದಿ ಭುಗಿಲೇಳುವವರೆಗೂ!

ತಡೆದು ತಡೆದು ನಿಂತ ಭೂ ಗರ್ಭದ

ಜ್ವಾಲಾಮುಖಿಯು ನಾನು!



13/10/2014

ಕವನ

ನಿತ್ಯ ನೂತನ ಆಸೆಗಳಲಿ
ಕರಗಿಸಲಿ ಹೇಗೆ ನಾ ಕನಸುಗಳ
ಕಾಣಬಾರದೆಂದು ಎಷ್ಟು ಬಿಗಿಹಿಡಿದರೂ
ರೆಪ್ಪೆ
ಅದ್ಯಾವ ಮಂಪರಿನಲಿ
ತೆರೆದುಕೊಳ್ಳುವುದೋ ಕನಸಿಗೆಬತ್ತಿ ಹೋದ ಪ್ರೀತಿಗೂ
ನೆನಪುಗಳ
ಬಸಿದುಕೊಂಡ ರೀತಿಗೂ
ಸೋಜಿಗದೂರಿನ ಆಹ್ವಾನ
ಇನ್ನೆಷ್ಟು ತಡೆಯಿಡಿಯಲಿ ನಿದಿರೆ
ಇನ್ನೆಷ್ಟು ಬಿಗಿದು ಹಿಡಿಯಲಿ ರೆಪ್ಪೆ
ಜಾರುತಿದೆ ಮನಸ್ಸು ಕನಸಿನೂರಿಗೆ
ಅರೆ ಬೆಂದ ಇಟ್ಟಿಗೆಗಳೊಂದಿಗೆ
ಬೆಂದುಕೊಳ್ಳೊ ಗೂಡಿಟ್ಟು
ಕಾಯಬೇಕಿದೆ ಸೂಕ್ತ ನೆಲೆಗೆ
ಇಟ್ಟು ಮನಸ ಹರವಲೊಂದು
ದಿಟವಾದ ದಿಟ್ಟ ದೀವಿಗೆ!..


13/10/2014

ಕವನ




ನನ್ನ ಎತ್ತರವನ್ನು ನಾನು ತಗ್ಗಿಸಿಕೊಂಡೆ


ಅವನು ತಗ್ಗೇ ಇದ್ದಂತೆ ಕಂಡು ದೂರದಲ್ಲಿದ್ದ


ಹತ್ತಿರಾದಂತೆ ವ್ಯತ್ಯಾಸಗಳು ಹೆಚ್ಚಾಯ್ತು


ನಾ ತಗ್ಗಿದ್ದು ಇನ್ನೂ ನೆಲ ಸಮವಾದಂತೆ 


ಈಗ ಹತ್ತಿರಾದ ಅವನ ಮುಂದೆ,, 

ತಗ್ಗಿದ್ದು ತಪ್ಪೇ? ಇಲ್ಲ ಹತ್ತಿರಾಗಿದ್ದು?

ಇನ್ನೂ ಚಿಂತಿಸುತ್ತಲಿರುವೆ,,

ಎಲ್ಲಿ ನಾನಿದ್ದೆ ಈಗೆಲ್ಲಿರುವೆ,,

ನೆಲದಡಿಯಲಿ.....


12/10/201

Saturday, 11 October 2014

ಕವನ

ಅಲೆಗಳೆದುರಿಗೆ ಈಜುವ ಈಜುಬಾರದವಳು!
ಸದಾ ನೀರಿಗೆ ಹಾತೊರೆಯುವಳು!
ದಿನ ಬೆಳಗಾದರೆ ತೊರೆಯೊಳು ಧುಮುಕೋ ಮೋಜಿನವಳು!
ಈಜುಬಾರದವಳು, ಈಜದೇ ದಡ ಸೇರದವಳು!
ಮೀನುಗಾರರ ಕಣ್ಣಿಗೆ ಕಸರತ್ತಿನ ಪಟು ಅವಳು!
ನೀರ ತೊರೆಯ ಸುತ್ತಲೇ ಅಲೆದು,
ನೀರ ಮುಟ್ಟಿ ಈಜಲಾರದ ಸ್ಥಿತಿಗೆ ಏದುಸಿರಿನವಳು!
ಮುಳುಗಿ ನೋಡಿ, ಮತ್ತೆ ಮತ್ತೆ ಮುಳುಗೋ ಅವಳು
ಛಲ ಬಿಡದೆ ಈಜು ಕಲಿಯದೇ ತೇಲಿ ಹೋಗೋ ನೀರ ಮೇಲಣ ಆವಿಯಾದವಳು,,,,,,,,,

11/10/2014

ಕವನ



ಹೀಗೆಯೇ ಅಲೆಯುತಿದ್ದ ಮನಕೆ
ಎದುರಾದ ತಂಗಾಳಿ ಹಾಯ್ ಎನಿಸಿ
ಮನದಲ್ಲೆಲ್ಲಾ ಕೋಲಾಹಲ

ನೆನಪುಗಳ ಸುತ್ತ ಹೊರಳಾಟ,
ಹೊಸ ಕನಸುಗಳ ಜೂಟಾಟ,

ಇದ್ದಷ್ಟು ಕಾಲ ತಂಗಾಳಿ
ತೆಪ್ಪಗೆ ತಂಪಾಗಿರುವೆ
ಕಟ್ಟಿಹಾಕಿದಂತೆ ಗಾಳಿಯ ಮೋಡಿಗೆ..
ಆ ಹಳೆಯ ಬಿರುಸು ನೆನಪುಗಳಿಗೆ

ಎಷ್ಟು ಕಾಡುತ್ತವೋ ಕಾಡಲಿ,,
ಗಟ್ಟಿಗಿತ್ತಿ ನಾ ಕಾಡಿಸಿಕೊಳ್ಳಬಲ್ಲೆ
ಇದ್ದಷ್ಟು ಕಾಲ ಹಾಗೆಯೇ
ಸದಾ ನಕ್ಕು ನಲಿವ ಎನ್ನ ಮನದೊಂದಿಗೆ!