Thursday 22 May 2014

ಕವನ

ಮೌನ........


ತುಟಿಗಳನು ಹೊಲಿದರಷ್ಟೇ
ಮೌನವಲ್ಲ;
ಮೌನ ಒಂದು ಧ್ಯಾನ
ಅರಿವು ಮೂಡೋವರೆಗೂ

ಮೌನ ಒಂದು
ಆಂತರಿಕ ಗಲಭೆ-ಗದ್ದಲ,,
ಸರಿ-ತಪ್ಪುಗಳ ಸಂಘರ್ಷ,
ಇಂದು-ನೆನ್ನೆಯ ತಾಳೆ ನೋಟ,

ಮೌನ,
ಎಂದಿಗೂ ಸಂಪೂರ್ಣ ದಕ್ಕದದು
ದಕ್ಕುವಾಗ ಗಲಿಬಿಲಿಗೊಂಡು; ಬೆದರಿ
ಅವಿವಾರ್ಯ ಮಾತುಗಳಲಿ ತೇಲಿಹೋಗುವೆವು

ಮೌನ,
ಮನವ ಹೆಚ್ಚು ಕಾಡಿದುದು
ನೆನಪುಗಳ ಹೊತ್ತ ನಿಟ್ಟುಸಿರು
ಅನಿರೀಕ್ಷಿತ ಹೊಡತಗಳು
ಮೂಡಿಸೋ ಎತ್ತರದ ಅಲೆಗಳು

ಮೊರೆತ-ಭೋರ್ಗರೆತ
ತನಗಷ್ಟೇ ಕೇಳೋ ಅಬ್ಬರಗಳು
ಮೌನದೊಂದಿಗೆ ಪ್ರೇಮವಾಗದ ಹೊರತು
ಮೌನ ತನ್ನೊಳಗೊಂದು ಒಗಟೇ,,

ಮೌನದೊಳು ಸಾಗರದ ಘನವಿದ್ದರಷ್ಟೇ
ಮುಂದಣ ಮಾತು ಕಳೆಗಟ್ಟುವುದು
ತರಗೆಲೆಯಾದ ಮೌನ; ಬಹುಶಃ
ಮಾತಿಗೆ, ಭಾವಕೆ ನೆಲೆ ಕಾಣಿಸಲಾಗದೇನೋ

ಮೌನಕೆ ಬಾಯಿಲ್ಲವಂತೆ
ಅದು ನಿಜವೇ ಆಗಿದ್ದರೆ
ಮೌನಕೆ ಅರ್ಥ-ತರ್ಕವಿಲ್ಲ
ಆತ್ಮಾವಲೋಕನ ಪ್ರಸ್ತಾಪವೇ ಇಲ್ಲ..

ಮೌನ ನನ್ನೊಳಗೊಂದು
ನಿರಂತರ ಚರ್ಚೆ
ನಾನು ನನ್ನೊಂದಿಗೆ
ಪ್ರತಿಫಲದುತ್ತರ ಅದು ನಿನ್ನೊಂದಿಗೆ(ನಿಮ್ಮೊಂದಿಗೆ) ,,

23/05/2014

No comments:

Post a Comment