Thursday 1 May 2014



'ಬೇಸರ', ಎಂದೆನಿಸಿದಾಗಲೆಲ್ಲಾ ಹುಡುಕಿದ್ದೆ 
ನನ್ನಲೇ ಕೆಲ ಮೆಚ್ಚುಗೆಗಳನು, 
ಮತ್ತೊಮ್ಮೆ ಮೆಚ್ಚಿ ಖುಷಿಪಟ್ಟೆ, 
ಬೇಸರಕೀಗ ಹೊರ ನೆಡೆಯೋ ಅವಸರ,, 

______________________

ನನ್ನೀ ಪರಧಿಯೊಳು 
ಬಂದ ನೀನು
ಈಗ ಹೊರಟರೂ 
ನಾನಿಲ್ಲೇ ನಿಂತ ಬಿಂದು
ಈ ಬಾಳ ವೃತ್ತದ 
ಪರಧಿಯೊಳು ಸುತ್ತೋ 
ಏಕಾಂಗಿ 
ಆದರೂ ಕ್ರೇಝಿ,, !! 

_________________________

ಅತ್ತು ಅತ್ತು ಸಾಕಾದ ಮೇಲೆ
ಹೂಗಳು ಅರಳಿದ್ದವು,
ಅವು ಕಣ್ಗಳೆಂದು ಗೊತ್ತಾದದ್ದು
ಹೊಳಪ ತಂದ ನಿನ್ನ ನಗುವಿಗೆ ಬೆರಗಾಗಿ ಹೀಗೆ

___________________

ನಿದ್ದೆಯಲಿ 
ನಾ ತಡಕಿದಷ್ಟೂ
ನಿನಗೋ 
ಮತ್ತೂ ಗಾಢ ನಿದ್ದೆ
ಈ ವಿರಹ 
ಬಿಸಿಯುಸಿರೂ 
ತಾಗದಂತೆ,,

30/04/2014

_____________________

ಆದ ಮನಸ್ತಾಪಗಳನ್ನೆಲ್ಲಾ
ಗೊತ್ತಿಲ್ಲದೆ ಮರೆತು 
ಮತ್ತೆ ಬೆರೆತು 
ಸಹಜ ನಲಿವಿನಲಿ 
ಬಾಳುವ ರೀತಿಗೆ 
ಬಹುಶಃ 
ಬದುಕು 
ಎನ್ನಬಹುದೇನೋ,,,

____________________

ಭ್ರಮೆಗಳಲೀ,,,

ಬಯಸಿದ ಭಾವ 
ಆ ಕ್ಷಣಕದು ಅಭಾವ
ಇನ್ನೆಂದೋ ಮತ್ತೆಲ್ಲೋ 
ದನಿ ಕೇಳಲು
ಮೀರಿದ 
ವೈರಾಗ್ಯವೇಕೋ 

ಪ್ರೀತಿಸಲಾರೆ, 
ಭಾವಗಳಿಗೆ ಬೆರಗಾಗಿ
ಮತ್ತೊಮ್ಮೆ 
ಜೀವ ಕೆಡುವಲಾರೆ,,
ಭ್ರಮೆಗಳಲಿ,,,

_____________________________

ಯಾರ ದಾರಿಗೂ ಅಡ್ಡಿಯಾಗಿರಲಿಲ್ಲ
ಅವರವರ ದಾರಿಗಳ ಅವರೇ ಮರೆತಂತೆ ನಿಂತರೆ
ನನ್ನದೇನಿದೆ ತಪ್ಪು
ನಾನೋ ನಡೆವ ಹಾದಿಯ ಅವಸರದ ದಾಪುಗಾಲು...

29/04/2014

___________________________

ನಿನ್ನ ಕಣ್ಣ ಕನಸುಗಳ
ಕದ್ದುಬಿಡುವುದೇನೂ 
ಕಷ್ಟವಲ್ಲ ನನಗೆ,
ಸಿಕ್ಕಿಬಿದ್ದು ಹಿಂದಿರುಗಿಸುವಾಗಿನ 
ಒನಪು ನೆನದಷ್ಟೇ 
ಭಯ ಮಿಶ್ರಿತ ರೋಮಾಂಚನ
ಬಯಸಿ ಬಯಸದ ಶಿಕ್ಷೆ!

___________________________

ಕುಹುಕ ಅವಮಾನಗಳೆಲ್ಲಾ ಹಳತೇ ಆದರೂ
ಮತ್ತೆ ಮತ್ತೆ ಸಿದ್ಧಗೊಳ್ಳಬೇಕಿದೆ
ಹೊಸ ಹೊಸ ದಾರಿಗಳ ತಿರುವುಗಳಲಿ,,,

___________________________

ಕಮಲ ದಳದ ಮೇಲೊಂದು ಮುತ್ತು
ಕನಸೊಳು ನೀನಿರುವ ಹೊತ್ತು

ಹೊಯ್ದಾಡೋ ಕಾಮನೆಗಳು
ಸಂಜೆಗೆ ಮುದುಡೋ ಹೂವೊಳ ಗುಂಗು

ಮತ್ತೊಂದ ಹಗಲ ಯಾಚನೆಯಲಿ
ಅರಳೊ ಹೂವಿನ ಕನಸಿನಲಿ ನಿಶೆಗಿಲ್ಲಿ ಶರಣು,,

________________________

ಈ ನನ್ನ ಕಲ್ಪನೆಯ ಸಾಲುಗಳಲ್ಲೇ 
ನೀ ಬಲು ಚೆಂದ..
ನನ್ನನೆಂದೂ ದೂರ ತಳ್ಳುವ ಮಾತಿಲ್ಲ
ಇದ್ದರೂ ನಾನಾಗಲೇ ತಿದ್ದಿಬಿಟ್ಟಿರುವೆ.. 

__________________

ಬೇಡಿ ಬದುಕೊ ಭಿಕ್ಷುಕನಿಗೂ
ದನಿ ಏರಿ ಬೇಡೋ ಹಕ್ಕಿದೆ
ಆದರೆ ಪ್ರೀತಿ ಬೇಡಲು
ಉಗುಳು ನುಂಗಲು ಶಬ್ದದ ಭಯ..
ಪ್ರೀತಿ ತಲೆತಿರುಕರ ಹುಚ್ಚು ಸಾಹಸ... !!!

27/04/2014

__________________

ಕಣ್ಣೀರ ಬಸಿದ ಕೈಗಳು
ಹೆಣ್ಣುಗಳ ಯಾತನೆಯ ಚಿತ್ತಾರವ
ಚೆಂದವಾಗೇ ಬಿಡಿಸಿತ್ತು 
ಚಿತ್ರಪಟದ ಬೆಲೆ ಹೆಚ್ಚಿಸಿ

26/04/2014

____________________

ಖಾಲಿತನಕೆ 
ಹೆಚ್ಚು ಮಾತಂತೆ
ಆದರೂ 
ನಾ ಮೌನಿ,,
ಸುಳಿಯದ 
ನಿನ್ನ ಸ್ವರಕ್ಕೆ
ಗಾಳಿಯೊಳ
ಕಿವಿಯಾದ
ನಿತ್ಯ ಧ್ಯಾನಿ,,
ಖಾಲಿ ಪ್ರೇಮಿ!

25/04/2014

________________________

ಮೊರೆವ ಹರಿವು,,

ಧೋ ಎಂದು ಧುಮುಕಿ
ಕಿವಿಗಡಚಿ ರಭಸದಿ ಭೋರ್ಗರೆವ
ಈ ನದಿಯು,
ಅವಸವಸರವಾಗಿ ಹುಡುಕಾಡಿದ್ದು
ತನ್ನ ಮೊರೆತವ ತಡೆದು ನಿಲ್ಲಿಸೋ
ದಿಟ್ಟ ಗಂಡೆದೆಯ ತಟಕ್ಕಾಗಿ
ಸಂದರ್ಭವಿದಷ್ಟೇ ದೌರ್ಬಲ್ಯ 
ಅವಳದು,
ಆ ಕ್ಷಣಗಳು ಮೀರಿದಂತೆ
ನುಗ್ಗಿ ಹೊರ ಕಣಿವೆಗಳಲಿ ಹೊಮ್ಮಿ
ದೂರ ದೂರಿಗೆ ಸಾಗುವಾಗ ತುಳುಕಳು
ಶಾಂತಳು,
ಗಾಂಭೀರ್ಯವದು ಇವಳ ಹರಿವು,,

__________________

ಕಾಡುವಂತಿಲ್ಲ ಕನಸುಗಳು 
ಎಲ್ಲಾ ಅರೆಬರೆ ವಿಚಿತ್ರಗಳು
ಕೂಡಿಸಿ ನೋಡಲಾರೆ
ಗೊತ್ತದು ನಿನ್ನದೆ ಚಿತ್ರ!!

_________________

ನೀರೆಂದರೆ ಶಕ್ತಿ
ನೀರೆ ಎಂದರೂ ಶಕ್ತಿ 
ವಿದ್ಯುಚ್ಚಕ್ತಿ!! 

23/04/2014

No comments:

Post a Comment