Tuesday 27 August 2013

ಮನದ ಮಾತು

ಮನಸೇ ಹಾಗೆ ಎಲ್ಲೆಲ್ಲೋ ಓಡಿ ಎಲ್ಲೆಲ್ಲೋ ನಿಲ್ಲಿಸಿ; ಮರೆಸಿ ಎಲ್ಲವ ಮತ್ತೆ ಪ್ರಶ್ನೆಗಳನ್ನು ಎದುರು ನಿಲ್ಲಿಸಿಬಿಡುತ್ತದೆ, "ಇಲ್ಲಿಗೇಕೆ ಬಂದು ನಿಂತೆ?, ಏಕೆ ಓಡಿದೆ? ನಾನೆಲ್ಲಿ ನಿಂತಿದ್ದೆ ಏನಾಗಿ ನಿಂತಿದ್ದೆ... ? ಮನಸ್ಸಿನೊಂದಿಗೆ ಓಡುವುದು ಒಂದು ಮಗುವಿನೊಂದಿಗೆ ಓಡಿದಂತೆ. ಮಗುವಿನ ಓಟ ಅದೊಂದು ಆಟ. ಉದ್ದೇಶವು ಖುಷಿಯ ಹೊರತಾಗಿ ಇನ್ನೇನು ಅಲ್ಲ. ಮನಸ್ಸಿನಂತೆ ನಡೆವ ನಡೆಯೂ ನಿಜವಾದ ಒಂದು ಸಂತೃಪ್ತಿ. "ಏನಿದ್ದರೂ ಇಲ್ಲದಂತೆ" ಎಂಬ ಭಾವ ಹುಟ್ಟುವುದು ನಮ್ಮ ನಮಸ್ಸಿಗೆ ನಾವೇ ಸ್ವತಃ ದ್ರೋಹ ಬಗೆದಾಗಲೇ. ಮನಸ್ಸು ನಿರಂತರ ಸಂಚಾರಿ ಅದರ ಬಯಕೆ ಅಪಾರ. ಒಮ್ಮೊಮ್ಮೆ ಏನೇನೋ ಬಯಸಿ ಕಿನ್ನತೆಗೊಳಗಾಗುತ್ತದೆ. ಈ ಕಿನ್ನತೆ, ದುಃಖ ಇವೆಲ್ಲಕ್ಕೂ ಕಾರಣ ಯಾವುದೋ ಒಂದು ಆಸೆ. ಆಸೆ ಈಡೇರದೇ ಮನಸ್ಸು ಮಗುವಿಂತೆ ಹಟಹಿಡಿದು ಬುದ್ಧಿಗೂ ಮನಸ್ಸಿಗೂ ತಾಕಲಾಟವುಂಟಾಗುತ್ತದೆ. ಕೊನೆಗೆ ಗೆಲ್ಲುವುದು ಯಾವುದೋ? ಆದರೆ ಅಷ್ಟರಲ್ಲಿ ಮನುಷ್ಯ ಕುಗ್ಗಿ ಹೋಗಿರುತ್ತಾನೆ. ಬಂದ ಅತೀ ಸಣ್ಣ ಕಾಯಿಲೆ ನೆಗಡಿಯೂ ಮಹಾ ಮಾರಿಯಾಗಿ ವಾರಗಟ್ಟಲೆ ಕಾಡುತ್ತದೆ. ಸಣ್ಣ ಕೆಲಸವೂ ತನ್ನಿಂದಾಗುವುದೇ ಎಂದು ಯೋಚಿಸುವಂತಾಗುತ್ತದೆ. ಮುಂದೆ ಇದೇ ಅತಿರೇಕವಾದರೇ ಮುಂಚೆ ಹೇಳಿದ ಎಲ್ಲಾ ಗುಣಗಳು ಉಲ್ಬಣವಾಗಿ ನಿಂತಿರುತ್ತದೆ. ಇಷ್ಟೇಲ್ಲಾ ಅನಾಹುತಗಳಿಗೆ ಕಾರಣ "ಆ ಅದ್ಯಾವುದೋ ತೀರದ ಬಯಕೆ, ಆಸೆ". ಒಂದು ಕ್ಷಣ ಯೋಚಿಸುವ; ಈ ಮುಂಚೆ ತನಗೆ ತನ್ನ ಜೀವನದಲ್ಲಿ ಆ ಆಸೆ ಇದ್ದಿತೇ? ಇಲ್ಲದಿದ್ದರೂ ತಾನು ಸುಖವಾಗಿರಲಿಲ್ಲವೇ? ಹೌದು ಎಂದಾದರೇ ಈಗಲೂ ನಾ ಮೊದಲಿನಂತೆ ದೃಡಭಾವದ ಅದೇ ಖುಷೀ ಜೀವಿ ಎಂದುಕೊಳ್ಳಬಹುದಲ್ಲವೇ?. ಇಂತಹ ಘಳಿಗೆಗಳಲ್ಲಿ ಮನಸ್ಸಿಗೆ ಬೇಕಿರುವುದು ಒಂದು ನಿರಾಳಭಾವ. ಅದನ್ನರಿತು ಸುಮಾರ್ಗದಲ್ಲಿ ಮನಸ್ಸಿಗೆ ನಾವೇ ರಮಿಸಬೇಕಿದೆ. ಮನಸ್ಸಿನ ಶಕ್ತಿ ಅಗಾಧ. ಆಸೆಪಡುವ, ಆಸೆಯನ್ನು ಹಸನುಗೊಳಿಸುವ, ಇತರಲ್ಲಿ ಆಶಾಭಾವ ಮೂಡಿಸುವ ಅಮೋಘವಾದ ಶಕ್ತಿ ಅದಕ್ಕಿದೆ. ಮತ್ತೆ ಹೊಸ ಆಸೆ ಹೊಸ ಕನಸ ಕಟ್ಟುವ ಸಾಮರ್ಥ್ಯವಿದೆ. ಯಾರೂ ದುರ್ಬಲ ಮನಸ್ಸಿನವರಲ್ಲ. ನಾವು ಹೇಗೆ ಶಾಲೆಗೆ ಹೋಗುತ್ತ, ಕಾಲೇಜಿಗೆ ಹೊಗುತ್ತಾ ಪಾಠ ಕಲಿತು ವಿದ್ಯಾವ೦ತರು ಎನಿಸಿಕೊಳ್ಳುತ್ತೇವೋ ಹಾಗೆಯೇ ನಮ್ಮ ಮನಸ್ಸನ್ನೂ ಶಿಕ್ಷಿತಗೊಳಿಸಬೇಕು. ಅದುವೇ ನಿಜವಾದ ಶಿಕ್ಷಣ. ಶಿಕ್ಷಣವೆಂದರೆ ಜೀವನ ನಿರ್ವಹಣೆಯ ಕಲೆ, ಉತ್ತಮ ನಡೆ-ನುಡಿ, ಆಚಾರ-ವಿಚಾರಗಳನ್ನು ಅರಿವುದು ಙ್ಞಾನಾರ್ಜನೆ ಸಾಧನ ಎಂದೆಲ್ಲಾ ಹೇಳುವಾಗ ಇಷ್ಟೇಲ್ಲಾ ಕಾರ್ಯಗಳ ಹಿಂದಿನ ಮನಸ್ಸನ್ನು ಮರೆಯುವ ಹಾಗಿಲ್ಲ. ಮನಸ್ಸಿನ ಮೇಲಿನ ಪರಿಣಾಮವೇ ಬಾಹ್ಯ ನಡತೆ. ಹೌದಲ್ಲವೇ ಸ್ನೇಹಿತರೆ? .ಹಾಗಾದರೇ ನಿಮಗೆ ಆಸೆಗಳು ಬಾಧಿಸಿವೆಯೇ???? :-)

ಧನ್ಯವಾದಗಳು
ದಿವ್ಯ ಆಂಜನಪ್ಪ

೨೭/೦೮/೨೦೧೩   

2 comments:

  1. manassina bagge olle lekana Divya.. inno vistarisi baryari

    ReplyDelete