Monday, 5 January 2015

ಕವನ

''ಗೊತ್ತಿಲ್ಲೆನಗೆ ಬುದ್ಧ!''

ಅವರು ಕೇಳಿದರು ಎನ್ನೆಡೆಗೆ ಬಾಗಿ;
ಬುದ್ಧ ಗೊತ್ತೇ?!
ಅರಳಿದ ಕಣ್ಗಳೊಡನೆ ನನ್ನೊಳಗು
ಇಲ್ಲ, ಓದಿದ್ದ ನೆನಪೆನ್ನುತ್ತಿತ್ತು
ಗೊತ್ತಿಲ್ಲೆನಗೆ ಆ ಬುದ್ಧ
ಪರಿಚಯವಿಷ್ಟೇ 'ಮುಗ್ಧ ಯುವಕ',
ತಂದೆಯಾಗಿ ರಾಹುಲನೆಂಬ ಕನಸ ತೊರೆದು;
ಯಶೋಧರೆಯ ನಿರೀಕ್ಷೆಗಳ ಗೆದ್ದ ಗೌತಮ
ಹೌದೆನಗೆ ಗೊತ್ತಿಲ್ಲ ಆ 'ಬುದ್ಧ'
ಗೊತ್ತಿಲ್ಲವೋ ಬುದ್ಧ
ಎನ್ನಪ್ಪ ಹೇಳಲಿಲ್ಲ ಎನಗೆ
ಅವ ತೋರಿದ ಇಣುಕು, 
'ಅಂಬೇಡ್ಕರನೆಂಬ ಧೀರ ಮೇಟಿ'ಯ ಹೆದ್ದಾರಿ 
ಬುದ್ಧನ ಸುಳಿವಿಲ್ಲವೋ ಈ ಮನಕೆ
ಆ ದಿನವೊಂದು ಇನ್ನೂ ನೆಪ್ಪು
ಕಂಡರಿತ ಹಳ್ಳಿಯ ದಾರಿ; ಬಸ್ಸೊಳ ಸೂಟುಧಾರಿ ನನ್ನಪ್ಪ
ಎದುರು ಕೂತ ಮುದಕನೊಬ್ಬ ಉನ್ಮಾದದಿ ಉಲಿದಿದ್ದ,
ಕಂಡಿರೇ ನೀವು ಅಂಬೇಡ್ಕರನಂತೆ....
..................................
ಅಪ್ಪನೊಳ ನೂರು ಪುಳಕಗಳು
ಅದರೊಳ ತೆರೆದುಕೊಂಡ ಅವನಪ್ಪ, ದೊಡ್ಡಪ್ಪನ 
ಚೀರಿದ ನೋವುಗಳು; ಚಿವುಟಿದ ತೊಡೆಗಳ ವೇದನೆಗಳು
ಸಾವಿರ ಹೆಪ್ಪುಗಟ್ಟಿದ ಕೂಗುಗಳು!
ಹೌದು ನನ್ನೂರಿನ ಅಜ್ಜನಿಗೂ ಬುದ್ಧ ಗೊತ್ತಿಲ್ಲ
ಅಂಬೇಡ್ಕರನೆಂಬೊ ಸ್ತಂಭವ ಬಿಟ್ಟು!
ನಡುವಲಿ ಎಚ್ಚೆಂತ್ತಂತೆ
ಎನಪ್ಪ ಹೇಳಿದನೊಂದು ದಿನ
'ಅಂಬೇಡ್ಕರ ದಾರಿ ಕಂಡ ಬುದ್ಧನ ಹೆಜ್ಜೆಗಳ'
ಅದ ಕೇಳಿದ ಕ್ಷಣಗಳಿಂದ ಹೆಜ್ಜೆ ಗುರುತಿಗಾಗಿ 
ದಾರಿಯಲ್ಲುಳಿದೆ;
ಗೊತ್ತಿಲ್ಲ ನನಗಿನ್ನೂ ಬುದ್ಧ ಸಿಕ್ಕಿಲ್ಲ
-ದಿವ್ಯ ಆಂಜನಪ್ಪ
೨೫/೧೨/೨೦೧೪

No comments:

Post a Comment