Thursday, 8 January 2015

ನಾ ಬರೆದದೆಲ್ಲಾ ನಾನೇ ಆದರೆ
ನನ್ನಾತ್ಮ ನಿನ್ನ ಹುಡುಕಲಿ
ನನ್ನ ಸಾಲುಗಳು ಆಗಲೇ ಸತ್ತಿದ್ದವು
ನಾ ಬರೆದದೆಲ್ಲಾ ನನ್ನ ಕಲ್ಪನೆಯೇ ಆದರೆ
ಆಗಲೂ ನನ್ನಾತ್ಮ ನಿನ್ನ ಹುಡುಕಲಿ
ನನ್ನ ಸಾಲುಗಳು ಮತ್ತೆ ಹುಟ್ಟಲು!

*****

ಕಂಡು ಕಾಣದೇ ಹೋಗುವವರ
ನಾ ಕರೆದೇಕೆ ತೊಂದರೆ ನೀಡಲಿ?
ಕಂಡು ಕಾಣದೆ ಹೋಗುವ ಅನೇಕ 
ಈ ಗಾಳಿ ಮಳೆ ಬೆಳಕು
ನಾ ಕರೆದೇನು ತೊಂದರೆ ನೀಡಲಿ
ಅದರದರ ಹರಿವಂತೆ ಹರಿದುಬಿಡಲಿ
ಜೊತೆಗೆ ನಾನೂ ಹೀಗೆಯೇ...

*****

ಕನಸ ಕಣ್ಣೊಳಗೆ
ಕಮಲ ಅರಳಿದ್ದು
ತಿಳಿದೇ ಇರಲಿಲ್ಲ
ನೀ ಬಂದು 
ಇಲ್ಲಿನ 
ಮುತ್ತುಗಳನ್ನು
ಆರಿಸಿಕೊಳ್ಳುವವರೆಗೂ...

08/01/2015

*****

ಮನದ ಪರಧಿ 
ವೃದ್ಧಿಸಿದಷ್ಟು
ಶೂನ್ಯಳಾಗುತ್ತಾ ಹೋದೆ
ಕಾಣದ ಬಿಂದುವಾಗುವ 
ಭಯವಿದೆ
ಮತ್ತೂ ಉಳಿದು ತುಂಬಿಕೊಂಡ 
ಖಾಲಿತನದ್ದು 
ಸಾವಿರ ಪ್ರಶ್ನೆಗಳು
ನಾ ಒಂದಕ್ಕೂ 
ಉತ್ತರಿಸಲಾಗದ್ದು!

07/01/2015

No comments:

Post a Comment