Monday, 12 January 2015

ಕವನ

''ಕವಿ''


ಒಂದಷ್ಟು ಪದಗಳು ಗುಡ್ಡೆ ಹಾಕಿ
ಜೋಡಿಸಿ ಅರ್ಥೈಸಿಕೊಳ್ಳಿ ಎನ್ನುವ ಕವಿಯು
ಅದೇಕೋ ನನಗೆ ಭಾಷಾ ಶಿಕ್ಷಕನಾಗಿ ಕಾಣುತ್ತಾನೆ

ಒಂದಕ್ಕೊಂದು ಸಂಬಂಧವಿಲ್ಲದ ಪದಗಳು
ನಾವು ಅಂದುಕೊಂಡಂತೆಲ್ಲಾ ಹೊಸ ಹೊಸ ಅರ್ಥಗಳು
ನಮ್ಮ ಪ್ರಯೋಗಗಳಿಗೆ ಅವರು ಕವಿಗಳಾದರು

ಕವಿ ಎಂದರೆ ಅರ್ಥ ಬಿಡಿಸಲಾಗದೆ ಇಟ್ಟ 
ಒಗಟುಗಳ ಮಾಲೀಕನೇ? ಗುಟ್ಟುಗಳ ಗೂಡೆ?
ಸುಮ್ಮನಷ್ಟು ಸರಕೆ? ಮೆದುಳೊಳಗಾಡುವ ಬೆರಳೇ?

ಕವಿಯೊಬ್ಬ ಸೊಗಸುಗಾರ; ಭಾವಗಳ ಸರದಾರ
ಅಷ್ಟಗಲದ ಆಕಾಶವ ಇಷ್ಟಗಲದ ಕಣ್ಣೋಳಗೆ ತಂದಿಟ್ಟವನು
ಭೂಗರ್ಭ ಸಿರಿಯ ನಲ್ಲೆಯ ಹಣೆ ಬೊಟ್ಟಿನಲಿ ಕಂಡವನು

ಕವಿಯೊಬ್ಬ ರಸಿಕ; ಶೃಂಗಾರ ರಾಜ
ಚಂದ್ರನ ಸೆರಗಲೇ ಯೌವ್ವನೆಯ ಛಾಯೆ ಕಂಡವನು
ಮೇಘ ಮಾಲೆಯಲಿ ಲಲಿತೆಯ ತಬ್ಬಿ ನೆನೆದವನು

ಕವಿಯೊಬ್ಬ ಕನಸುಗಾರ; ಕಲ್ಪನೆಯ ಆಗರ
ಇಂದನ್ನು ನೆನ್ನೆಯಾಗಿ; ನೆನ್ನೆಯನ್ನು ನಾಳೆಯಾಗಿ ಚಿತ್ರಿಸಿ 
ಹೊಸತೆಲ್ಲಾ ಹಳೆಯದೆ; ಹಳೆಯದೆಲ್ಲಾ ಹೊಸತೆಂದು ಭ್ರಮೆ ಮೂಡಿಸುವನು

ಅವನೊಬ್ಬ ಮಾರ್ಗದರ್ಶಕ; ಸಲಹೆಗಾರ
ಅನುಭವಗಳ ಮೂಟೆ ಹೊತ್ತು ತಾರ್ಕಿಕ ವಿಶ್ಲೇಷಣೆಗಳಿಗೆ
ತನ್ನ ಸಾಲುಗಳ ಹಾದಿಗಳಲಿ ನಮ್ಮನಗಳ ಓಡಿಸುವವನು

ಅವನೊಬ್ಬ ದಾರ್ಶನಿಕ; ಒಳನೋಟದವನು
ಪ್ರಕೃತಿಗೂ ಮುನ್ನ ಹುಟ್ಟಿ ಬೆಳೆದವನು
ಅದರಂತೆ ನಮ್ಮ ಮುಂದೆ ನಡೆದವನು
ಒಳಗಣ್ಣಿಗಷ್ಟೇ ದಕ್ಕುವನು

ಚಿಂತಕನು ವಿಚಾರಶೀಲನೂ ಅವನು
ನಾಳೆಯ ಬೆಳಕಿಗಾಗಿ ಇಂದು ಕತ್ತಲೆಯ ಪಂಜಿನವನು
ಕತ್ತಲಲ್ಲವದು ಕಪ್ಪುರಂದ್ರ; ಎಲ್ಲವ ತೋಳ ತೆಕ್ಕೆಗೆ ಸೆಳೆದುಕೊಳ್ಳೊ ಕಾಂತ ಸೂರ್ಯ!

12/01/2015

No comments:

Post a Comment