ಸೋಲಿನ ನೆರಳ ಮರ
ಸೋಲೆಂಬ ಆಲಿಕಲ್ಲು
ರಪರಪನೆ ಮುಖಕ್ಕೆ ಬಡಿದು
ಬಾವು ಊದಿಕೊಂಡು
ನೋವೆಲ್ಲಿ ಸೋಲೆಲ್ಲಿ ಹುಡುಕ ಹೊರಟು
ದಾರಿಗುಂಟ ಒದ್ದೆ ಮುದ್ದೆಯಾಗಿ ಬಿದ್ದಿದ್ದ ಸೋಲು
ಜಿನುಗುತ್ತಿದೆ ಕೆಸರಾಗಿ ;ಕಾಲು ಹೂತು ತೊಡರು
ಅದೇನೋ ಹೊಳೆದಂತೆ ಸೂರ್ಯ ಕಂಡು
ಉಷ್ಣವೇರಿ ಆಕರ್ಷಣೆಗೊಂಡು
ಮತ್ತೆ ಮತ್ತೆ ಮೇಲೆರುತ್ತಿದೆ ಆವಿಯಾಗಿ
ಮತ್ತೆ ಮೋಡ ಮಳೆ ಆಲಿಕಲ್ಲಿನೇಟಿಗೆ
ಜಡಗೊಳ್ಳದ ಮನ ಕೊರಗಿ ತತ್ತರಿಸಿದೆ..
ಸೋಲಿಗೆ ಜೊತೆಯಾಗಿ ನಿಂತಿದೆ..
ಬದುಕು ಎಂದು ಹೆಸರಿಟ್ಟು
ನಿರಂತರ ಮಳೆಗಾಗಿ ಕಾದು ಕೂತು
ಏಟಿಗೆ ಎದೆಕೊಟ್ಟು
ಹೆಪ್ಪುಗಟ್ಟುವ ರಕ್ತವ ಕುದಿಸಿ ಹರಿಸಿ
ಮಳೆಯ ನೆರಳಲಿ ಸುಖವೆಂದು
ಆಲಿಕಲ್ಲಿನೇಟಿಗೆ ಜಗ್ಗದೆ ನಿಂತ ಜೀವ ಮರ
ಹೆಚ್ಚೆಚ್ಚು ಆಸೆ, ಆಸರೆಯ ಹುಚ್ಚು ಬೆಳೆಸಿಕೊಂಡು
ಘನವಾದ ಮೋಹದ ಬಯಕೆಯಲಿ
ಭಾರಿ ಮೋಡವ ಅರಸಿ
ಮಳೆಯ ಸುರಿಸೆಂದು ನಿಂತ ಮರ
ಹನಿವ ತುಂತುರಿಗೆ ದಾಹ ತೀರದೆ
ತೊಯ್ವ ಧಾರೆಯ ನೆನೆದು
ಸಿಡಿಲು ಗುಡುಗನ್ನೇ ಮೇಲರೆಗಿಸಿಕೊಂಡು
ಒಮ್ಮೆ ಸುಟ್ಟು ಮತ್ತೆಲ್ಲೇ ಮೂಲೆಯಲಿ ಚಿಗುರಿ
ಹಸಿರ ಉಸಿರಲಿ ಮಳೆಗಾಗಿ ನಿಂತ ಮರ
ಇದು ಬೇರಿಲ್ಲದ ಮರ
ತೇಲಿ ನಡೆವ ಮರ
ಬಿಳಲುಗಳನೇ ಹಗ್ಗ ಮಾಡಿ
ಭೂಮಿಯ ಮೇಲೆ ಹರಿದಾಡುವ ಮರ
ಮರ; ಮರಗಟ್ಟದ ಮರ
ಇದ್ದರೂ ಸತ್ತರೂ ಸುಟ್ಟುಕೊಳ್ಳುವ ಮರ
ಬೆಳಕಿಗೆ ಬದುಕಿಗೆ...
28/10/2015