ಮೊನ್ನೆ ಅವ ಸಿಕ್ಕಿದ್ದ
ತಟ್ಟನೆ ಎದುರಾಗಿದ್ದ
ಹೊಟೆಲ್ಲೊಂದರಲ್ಲಿ
ಜೊತೆಗಿದ್ದಳು ನನ್ನಕ್ಕ
ಒಂದು ಕ್ಷಣ ನಿಂತಂತಾದರೂ
ಕಾಲು ಓಡಿತ್ತು ನಿಲ್ಲದೆ
ಹೈಸ್ಕೂಲಿನ ದಿನಗಳಲ್ಲಿ
ನಮ್ಮನ್ನು ರೇಗಿಸುವ ಹುಡುಗರೊಂದಿಗಿನ
ಪಾಪದ ಹುಡುಗ, ಒಳ್ಳೆ ನಾಚಿಕೆಯವ!
ನಾವೇ ಆಗಾಗ ಕೆಣಕುತ್ತಿದ್ದೆವು,
''ಎಲ್ಲಿ?!, ನಿನ್ ಗೆಳೆಯರು ?''
ಭಯದಲ್ಲಿಯೂ ನಗುತ್ತಿದ್ದ ಅಪರೂಪದವ!
ಬೆಳೆದೆವು, ಓದು ಓಟಗಳಲ್ಲಿ ಕಳೆದವು
ಅವನೆಲ್ಲೋ, ನಾವು-ನಮ್ಮ ಲೋಕವೆಲ್ಲೋ
ಕೆಲಸ ಸಿಕ್ಕ ಹೊಸತರಲ್ಲಿ ಬಸ್ ಸ್ಟಾಂಡಿನಲ್ಲಿದ್ದ ನನ್ನತ್ತ
ನೇರ ಬಂದು ಮಾತನ್ನಾಡಿಸಿದ್ದ,
ಈ ಬಾರಿ ಮಾತಿಗೆ ಹೆದರಿದವಳು ನಾನು,
ಅವನು ಗೆಳೆಯನೂ ಅಲ್ಲ, ಪ್ರೇಮಿಯೂ ಅಲ್ಲ,
ಯಾವುದೇ ಭಾವ ಸೆಳೆತವಿಲ್ಲ,
ಆದರೂ ಎದುರು ಸಿಕ್ಕಿ ನೆನಪಾಗಿದ್ದ,
ಕಂಡ ಖುಷಿಯೂ ಇಲ್ಲ, ಕಾಣದುದ್ದರ ವ್ಯಥೆಯೂ ಇಲ್ಲ
ಆದರೂ ಅವನ ಮುಗ್ಧ ಮುಖ ಇನ್ನೂ ನೆನಪಿದೆ,
ಅದಕೆ ಸಾಕ್ಷಿ ನಾನವನ ಗುರುತಿಸಿದ್ದು
ಅವ ನನ್ನನ್ನೇ ಅದೇ ಪೆಚ್ಚು ಮೊರೆಯಲ್ಲಿ ನೋಡುತ್ತಿದ್ದದ್ದು!
24/12/2013
No comments:
Post a Comment