Thursday, 19 December 2013


ಬಳಸಿದ ದಾರಿಯೆಲ್ಲಾ ಗುರಿ ಮುಟ್ಟದು


ಘಟಿಸಿದ ಘಳಿಗೆಯೆಲ್ಲಾ ನೆನಪುಗಳಾಗದು

ಕೆಲವೊಮ್ಮೆ ಅಷ್ಟೇ ಕಾಡುವ ಕನಸು ಹುಟ್ಟುವುದು

ಅದರಲ್ಲೂ ಒಮ್ಮೊಮ್ಮೆ ಅಷ್ಟೇ ಭ್ರಮೆಯ ಖುಷಿಯೂ

ದಿಟವಾಗಿ ನಿನ್ನಂತೆ ಜೊತೆಯಾಗುವುದು! 


***



ನಿನ್ನ ಮೌನ ನನ್ನ ಕಾಡುವುದಾದರೆ


ಒಪ್ಪುವೆ, ನನಗೆ ನಿನ್ನಂತರ್ಯವೇ ಹಿತವಾಗಿದೆ 

ನಿನ್ನ ಮಾತಿದ್ದರೂ ಇಲ್ಲದಿದ್ದರೂ;

ಸೋಜಿಗವೆನಿಸಿದೆ ಕಂಡು ನನ್ನೊಳ ನೀನು

ಮೌನವ ಸಹಿಸದ ನಾನೂ ಈಗ ಮೌನಿ

ನಿನ್ನಂತೆ ನಿನ್ನ ಪ್ರೇಮಿ!!



19/12/2013

*******************



ಹಾಗೇ ಸುಮ್ಮನೆ............ 



ಒಂದು ಸುಂದರ ಆಸೆಯೊಂದಿತ್ತು,

ಬರೆಯಬೇಕು ಜೀವನದಲ್ಲೊಂದು

ಪ್ರೇಮ ಪತ್ರ; 

ಬರೆಸಿಬಿಟ್ಟಿತು ಅವನೊಲವು 

ಪತ್ರಗಳ ಕಂತೆ ಸಾರ ಹನಿಗವನಗಳನು

ನಾ ಅವಗೆ ಒಂದೂ ಕೊಟ್ಟಿಲ್ಲ

ಆದರೂ ಅವನೋದದೆ ಒಂದೂ ಬಿಟ್ಟಿಲ್ಲ!! 



***



ಕೆಣಕುವ ನಿನ್ನ ಮಾತು


ಮರೆತರೂ ಮರೆಸದ

ನಿನ್ನೊಳ ಸೆಳವು

ನನ್ನ ಭ್ರಮೆಯೋ

ನಿನ್ನ ಮೋಡಿಯೋ

ನಿನ್ನ ಮೊಗೆದಷ್ಟೂ

ಉಕ್ಕುವ ನನ್ನ ಕಲ್ಪನೆಯೋ

ಕಾಣೆ ನಾ ಗೆಳೆಯನೇ,

ಸುಂದರವಷ್ಟೇ ತುಂಬಿದ ನನ್ನ ಕಣ್ಗಳೀಗ

ನಿನ್ನ ಕಾಂತಿ ಬಿಂಬಿತ

ಜೋಡಿ ದೀಪಗಳು ,,,,,,



18/12/2013

*********************



ಹೊಸತನವ ಬಯಸುವ ಮುನ್ನ


ಹೊಸಬರೇ ಆಗೋಣ

ನೆನ್ನೆಯ ಕಳೆದರೂ

ಇಂದು ಇನ್ನೂ ಇದೆ ಬದುಕಲು

ನಾಳೆ ಹೆಚ್ಚೇ ಇದೆ ನಲಿಯಲು!!



17/12/2013

******************



ನಾ ಮುನಿಸಿಕೊಂಡಾಗಲೆಲ್ಲಾ


ಮಿರಮಿರನೆ ಬೆಳ್ಳಗೆ ಮಿಂಚಿ

ನನ್ನ ಸೆಳೆಯುವ ಅವನ ಸಂಚಿಗೆ

ನಾ ನಾಚದಿದ್ದರೆ ಹೇಗೆ ಹೇಳಿರೇ

ಚಂದಿರನ ಗೆಳತಿಯರೇ??




***



ನನ್ನನ್ನೇ ನೀ ಅನುಮಾನಿಸಿರುವೆ,


ನಿನ್ನ ಶತ್ರುಗಳನ್ನು ಮಿತ್ರರನ್ನಾಗಿ ನೀ ಭಾವಿಸಿ

ಮುದ್ಧುಗರೆಯುವುದು ನಿನ್ನ ಮುಗ್ಧತೆಯೆನ್ನಲೇ

ಇಲ್ಲವೇ ನನ್ನ ದೌರ್ಭಾಗ್ಯವೆನ್ನಲೇ

ಕಾಲವೇ ನಿರ್ಧರಿಸಲಿ ನಾ ಸೋತಿರುವೆ



16/12/2013
********


'ತಿರಸ್ಕಾರ'


ಏನೆಲ್ಲಾ ಅರಿಗಿಸಿಕೊಳ್ಳುವ ಮನ ಹಿಂಜರಿಯುವುದೊಂದಕ್ಕೆ 


ತಿರಸ್ಕಾರವೊಂದಕ್ಕೆ!


ಪ್ರೀತಿ ಸ್ಪಂದಿಸದಿದ್ದರೂ, ಅದು ತಿರಸ್ಕಾರವೆನಿಸದು


ಪ್ರೇಮಿಯ ವಿಮುಖತೆ, ನೀರವತೆಯಷ್ಟೇ ಕಾಡುವುದು.


ಅದುವೇ ವ್ಯಕ್ತಿ ತಿರಸ್ಕಾರ!


ಇದೊಂದು ಪ್ರಶ್ನೆಯಷ್ಟೇ; ಯಾರೊಟ್ಟಿಗೆ? 

ತಂಡದಿಂದ ವಿಮುಖವಾಗಿ ಹೇಗೆ ಬದುಕುವೆ?, ಎಂಬ ಭೀತಿಯಷ್ಟೇ

ತಿರಸ್ಕಾರ


'ಸಂಘಜೀವಿ ಮಾನವ ಹೆದರುವುದು ಗುಂಪಿನಿಂದ ಹೊರಗುಳಿವ ಸಂಕಟಕಷ್ಟೇ!'

ತೀವ್ರ ವೇದನೆಯೆಂದರೆ ಒಂದೇ

ತಿರಸ್ಕಾರ,,,,,,

,,,,,,,,,,,,,,,,,,,,,,,,,,ಒಂದೇ!!!

DA

15/12/2013
**************



No comments:

Post a Comment