Thursday, 26 December 2013

ಕಂಡ ಕನಸುಗಳೆಲ್ಲಾ 
ಕಣ್ಣೆದುರೇ ಬಂದು
ನನ್ನೇ ಅಣಕಿಸುತ್ತಿರುವಂತೆ

ಕಲ್ಪನೆಯೊಂದು ಕೈಚೆಲ್ಲಿ
ಕಣ್ಣೆದುರೇ ಹೊರಟಿತ್ತು
ನಿನ್ನದಲ್ಲವೆಂದು!

'ಬಯಸದ ನೆನಪು'



ಮೊನ್ನೆ ಅವ ಸಿಕ್ಕಿದ್ದ
ತಟ್ಟನೆ ಎದುರಾಗಿದ್ದ
ಹೊಟೆಲ್ಲೊಂದರಲ್ಲಿ
ಜೊತೆಗಿದ್ದಳು ನನ್ನಕ್ಕ


ಒಂದು ಕ್ಷಣ ನಿಂತಂತಾದರೂ

ಕಾಲು ಓಡಿತ್ತು ನಿಲ್ಲದೆ


ಹೈಸ್ಕೂಲಿನ ದಿನಗಳಲ್ಲಿ

ನಮ್ಮನ್ನು ರೇಗಿಸುವ ಹುಡುಗರೊಂದಿಗಿನ

ಪಾಪದ ಹುಡುಗ, ಒಳ್ಳೆ ನಾಚಿಕೆಯವ!

ನಾವೇ ಆಗಾಗ ಕೆಣಕುತ್ತಿದ್ದೆವು,

''ಎಲ್ಲಿ?!, ನಿನ್ ಗೆಳೆಯರು ?''

ಭಯದಲ್ಲಿಯೂ ನಗುತ್ತಿದ್ದ ಅಪರೂಪದವ!


ಬೆಳೆದೆವು, ಓದು ಓಟಗಳಲ್ಲಿ ಕಳೆದವು

ಅವನೆಲ್ಲೋ, ನಾವು-ನಮ್ಮ ಲೋಕವೆಲ್ಲೋ

ಕೆಲಸ ಸಿಕ್ಕ ಹೊಸತರಲ್ಲಿ ಬಸ್ ಸ್ಟಾಂಡಿನಲ್ಲಿದ್ದ ನನ್ನತ್ತ 

ನೇರ ಬಂದು ಮಾತನ್ನಾಡಿಸಿದ್ದ,

ಈ ಬಾರಿ ಮಾತಿಗೆ ಹೆದರಿದವಳು ನಾನು,


ಅವನು ಗೆಳೆಯನೂ ಅಲ್ಲ, ಪ್ರೇಮಿಯೂ ಅಲ್ಲ, 

ಯಾವುದೇ ಭಾವ ಸೆಳೆತವಿಲ್ಲ,

ಆದರೂ ಎದುರು ಸಿಕ್ಕಿ ನೆನಪಾಗಿದ್ದ,

ಕಂಡ ಖುಷಿಯೂ ಇಲ್ಲ, ಕಾಣದುದ್ದರ ವ್ಯಥೆಯೂ ಇಲ್ಲ

ಆದರೂ ಅವನ ಮುಗ್ಧ ಮುಖ ಇನ್ನೂ ನೆನಪಿದೆ, 

ಅದಕೆ ಸಾಕ್ಷಿ ನಾನವನ ಗುರುತಿಸಿದ್ದು

ಅವ ನನ್ನನ್ನೇ ಅದೇ ಪೆಚ್ಚು ಮೊರೆಯಲ್ಲಿ ನೋಡುತ್ತಿದ್ದದ್ದು!


24/12/2013

ಅತಿಯಾಗಿ ಹೇಳಿದೆಲ್ಲಾ ವ್ಯರ್ಥವಾಯಿತು

ಹೇಳದಿದ್ದುದೇ ಅರ್ಥವಾಯಿತು

ಮನಸುಗಳು ಮಾತನಾಡಬೇಕು

ಮಾತು ನುಡಿದರೂ ಮಿಥ್ಯ

ಮನವು ನುಡಿವುದು ಸತ್ಯ!


***



ಸುಳ್ಳುಗಳಿಗಿರುವ ಮಹತ್ವ ನಿಜಕ್ಕಿಲ್ಲ

ನಿಜಕ್ಕೆ ನಿರಂತರ ರಜೆ 

ಸುಳ್ಳಿಗೆ ನಾಲಿಗೆಯಲ್ಲಿ ಸವೆಯುವ ಸಜೆ 

ಹೌದು, ರಜೆಯಲ್ಲಿರುವ ನಿಜಕ್ಕೆ ಮಹತ್ವವಿಲ್ಲ

ನಿಜವನ್ನು ದುಡಿಸಿಕೊಳ್ಳುವ ಧೈರ್ಯ 

ಮಾಲೀಕನಿಗಿಲ್ಲ;

ಹಾಗಾಗಿ ಸುಳ್ಳುಗಳಿಗಿರುವ ಮಹತ್ವ ನಿಜಕ್ಕಿಲ್ಲ 




***



ಶಬ್ಧಗಳು ಶಬ್ದವಾಗದೇ ಹೋಗಲು

ಮೌನವೊಂದು ಅನಿವಾರ್ಯ,

'ಮೌನ'ವೊಂದು ಧ್ಯಾನವಾಗದೆ 

ಅಪಾರ ಅರ್ಥಗಳಲಿ ಮುಳುಗಿ 

ಮರೆಮಾಚುವ ಸತ್ಯವಾಗಿರುವುದು 

ವಿಪರ್ಯಾಸ!



24/12/2013

ಭವ್ಯವಾಗದಿದ್ದರು ಭಾವದೊಳು ಲೀನವಾಗಿ

ನಿನ್ನ ತೀರಕೆ ತಾಗುವೆ ಓ ನನ್ನ ಚೇತನವೇ...



***



ಭಾವ ಲೋಕದಲಿ ಕಳೆದುಹೋದ ನನ್ನನು

ಹುಡುಕದಿರಿ ಎಂದಿಗೂ

ಸಿಕ್ಕರೂ ಸಿಗದವಳು ನಾನು

ಹಿತವಿದ್ದೆಡೆ ಬೇಕೆಂದೇ

ನನ್ನ ನಾ ಮರೆತು ನಿಲ್ಲುವ

ಕಳ್ಳ ಸೋಗಿನವಳು ನಾನು!



***



ನೆನಪಾಗಲು 

ನೆವಗಳೇ ಬೇಕಿಲ್ಲ

ನೆನೆಯುವ ಮನ 

ಸದಾ ಜಿನುಗುವ

ಸವಿನೆನಪುಗಳಕ್ಷಯ!



23/12/2013


*******************



ಕೂಡಿಟ್ಟದ್ದು 

ಕಳೆಯಲಂತೂ ಅಲ್ಲ;

ಮತ್ತೇ,,,

ಕೂಡಲೋ< ಗುಣಿಸಲೋ?!

ಸ್ವಾರ್ಥಿ ನಾ ಭಾಗಿಸಲಾರೆನೋ,,

ಗೆಳೆಯನೇ,,

ನಿನ್ನ ಪ್ರೀತಿಯ,,,



22/12/2013

Wednesday, 25 December 2013


'ಏಕೋ!?'... 


ನಾ ನಗುವಾಗಲೆಲ್ಲಾ ಅಳುವಿನ 

ಭಯವಿಲ್ಲವೇಕೋ;

ಆದರೆ ಅಳುವಾಗಲೆಲ್ಲಾ ನಕ್ಕಿದ್ದೇ ಹೆಚ್ಚು 

ಅದೇಕೋ;

ಇದೊಂದು ಭ್ರಾಂತಿ ಎಂದರೂ ಹಿತವಾಗಿಯೇ ಕಾಣುವುದು

ಏಕೋ.

ಮನವು ತಟಸ್ಥವಿದ್ದರೂ ನಗುವೊಂದು ಸ್ವಗತ

ಹೀಗೇಕೋ!?....... 



***



ಪ್ರೀತಿಗೂ ಮಿತಿಯಿರಬೇಕಂತೆ

ಇಲ್ಲದಿದ್ದರೆ ಪ್ರೇಮಿಗೆ 

ಅಮೃತವೂ

ರುಚಿ ಕೆಡಿಸುವುದಂತೆ!



***



ವಿಷಾದಗಳೇ ಹೆಚ್ಚಿ ನಶೆಯಂತಾಗಿದೆ

ತಲೆ ತಿರುಗಿ ಕಣ್ಕಾಣದಂತಾಗಿದೆ

ಭ್ರಮೆಗಳೂ ದಿಗ್ಭ್ರಮೆಗೊಂಡಿವೆ

ಕಾಲನ ಕೈಯೊಳು ಬಂಧಿಯಾಗಿದೆ

ಈ ಎನ್ನ ಮನಸನು ರಮಿಸಲಾಗದೆ

ನಿನ್ನತ್ತ ಓಡುವ ಓಟವ ನಿಲ್ಲಿಸಲಾಗದೆ!



***


ಮಾಸುವ ನೆನಪಿಗೆ ಹಗೆ ಸಾಧಿಸುವ ಹಟ
ತಿರಿದೇ ತೀರುವುದು ಬದುಕಿನ ತುಣುಕ


21/12/2013

Saturday, 21 December 2013

'ನನ್ನ ಕಲ್ಪನೆ'


ಕಲ್ಪನೆಗಳೂ ಕಣ್ಮುಂದೆ ಬಂದು ನಿಂತರೆ
ನಾ ಕಲ್ಪಿಸುವುದ ಬಿಟ್ಟೇನು
ನೀನೊಂದು ನನ್ನ ಕಲ್ಪನೆ
ಇದ್ದುಬಿಡು ಅದರೊಳು ಸುಮ್ಮನೆ!


***

'ರುಚಿ'


ಪ್ರೀತಿಗೂ ಮಿತಿಯಿರಬೇಕಂತೆ
ಇಲ್ಲದಿದ್ದರೆ ಪ್ರೇಮಿಗೆ 
ಅಮೃತವೂ
ರುಚಿ ಕೆಡಿಸುವುದಂತೆ!


***

'ನೆನಪು'


ಮಾಸುವ ನೆನಪಿಗೆ ಹಗೆ ಸಾಧಿಸುವ ಹಟ
ತಿರಿದೇ ತೀರುವುದು ಬದುಕಿನ ತುಣುಕ


***

'ಸೆಣೆಸಾಟ'


ವಿಷಾದಗಳೇ ಹೆಚ್ಚಿ ನಶೆಯಂತಾಗಿದೆ
ತಲೆ ತಿರುಗಿ ಕಣ್ಕಾಣದಂತಾಗಿದೆ
ಭ್ರಮೆಗಳೂ ದಿಗ್ಭ್ರಮೆಗೊಂಡಿವೆ
ಕಾಲನ ಕೈಯೊಳು ಬಂಧಿಯಾಗಿದೆ
ಈ ಎನ್ನ ಮನಸನು ರಮಿಸಲಾಗದೆ
ನಿನ್ನತ್ತ ಓಡುವ ಓಟವ ನಿಲ್ಲಿಸಲಾಗದೆ!

21/12/2013

Friday, 20 December 2013

ಕವನ


ಕಳೆದುಹೋಗಬೇಕು ಗೆಳೆಯನೇ 

ನಭೋಮಂಡಲದೊಳು ನಕ್ಷತ್ರಗಳಲಿ

ದೊಡ್ಡದದೋ ಕಾಯ ಗುರುವಂತೆ

ಚಿಕ್ಕದದೋ ಬುಧ ಶುಕ್ರ ಶನಿ

ಹೊಳೆ ಹೊಳೆವ ಸೂರ್ಯ

ನಟ್ಟನಡುವೆ ಸೆಳೆವಂತೆ

ದೂರದಲ್ಲೆಲ್ಲೋ ತಿರುತಿರುಗುವ ನಕ್ಷತ್ರಗಳ ತವರಂತೆ

ಹೇಳಲಾಗದೀ ಉಲ್ಲಾಸ ನಕ್ಷತ್ರಗಳೊಡನಾಟ

ನೋಡಿ ನಲಿದ ಈ ವಿಶ್ವ ನಿನ್ನಂತೆಯೇ ನನಗೊಂದು ವಿಸ್ಮಯ

ಜೊತೆಗಾರ ನೀನಿರಲು ಬದುಕಿನ್ನೂ ಸೋಜಿಗ

ಅದು ಭೂಮಂಡಲವೋ ನಭೋಮಂಡಲವೋ

ಕಂಡೂ ಕಾಣದಂತಿರುವ ನೀನು 

ಕತ್ತಲು ಬೆಳಕ ಹಂಗ ನೀಗಿದ

ನನ್ನ ನೆರಳಂತೆ!!  :-)


ನಗೆ ಹನಿ

ಕವಿ ಕಲ್ಪನೆ


ಹಳೇ ಕವಿ; ಕವನ ಚಿಕ್ಕದಾಗಿರುತ್ತೆ ಅದನ್ನು ಬರೆಯುವ ಕವಿಯ ಖಾಯಿಲೆ ದೊಡ್ಡದು!

ಹೊಸ ಕವಿ; "ಪ್ರೀತಿ" ಅದರ ಹೆಸರು ಅಲ್ವಾ ಸರ್? ಹ್ಹ ಹ್ಹ ಹ್ಹ 

ಹಳೇ ಕವಿ !!!

'ಮೂರು ಹನಿಗಳು'


ನನ್ನ ಮೂರು ಪ್ರೀತಿ ಹನಿಗಳು ಕಳೆದಿವೆ

ಹುಡುಕಿ ಕೊಡುವೆಯಾ?, ಎನಲು ನಾನು

ಕಳೆದರೆ ಮರೆತುಬಿಡು ಅವು ನನ್ನವೆಂದು

ಬಚ್ಚಿಟ್ಟಿಕೊಂಡ ಕಳ್ಳ ಪ್ರೇಮಿಯು!!


***


'ಪ್ರೀತಿ'



ತೋರಿಸಿದಷ್ಟೇ ತೋರಿಕೆಯ ಪ್ರೀತಿ

ಒಳಗಿಲ್ಲದ್ದು ಹೊರಗುಳಿವುದು ಹೆಚ್ಚು

ನಾಚಿದ ಪ್ರೀತಿ ಮಾತಲಿ ಒರಟು

ಭಾವ ತೀವ್ರತೆ ಶಬ್ಧಗಳಲಿ ಮೌನ

ಸಾಬೀತುಪಡಿಸಲಾಗದೀ ಪ್ರೀತಿ

ಪ್ರೇಮಿಯೆದುರು ನಟಿಸಿ 

ಅವನಿಚ್ಚೆಯಂತೆ ಸ್ಪಂದಿಸಿ 


20/12/2013


Thursday, 19 December 2013


ಬಳಸಿದ ದಾರಿಯೆಲ್ಲಾ ಗುರಿ ಮುಟ್ಟದು


ಘಟಿಸಿದ ಘಳಿಗೆಯೆಲ್ಲಾ ನೆನಪುಗಳಾಗದು

ಕೆಲವೊಮ್ಮೆ ಅಷ್ಟೇ ಕಾಡುವ ಕನಸು ಹುಟ್ಟುವುದು

ಅದರಲ್ಲೂ ಒಮ್ಮೊಮ್ಮೆ ಅಷ್ಟೇ ಭ್ರಮೆಯ ಖುಷಿಯೂ

ದಿಟವಾಗಿ ನಿನ್ನಂತೆ ಜೊತೆಯಾಗುವುದು! 


***



ನಿನ್ನ ಮೌನ ನನ್ನ ಕಾಡುವುದಾದರೆ


ಒಪ್ಪುವೆ, ನನಗೆ ನಿನ್ನಂತರ್ಯವೇ ಹಿತವಾಗಿದೆ 

ನಿನ್ನ ಮಾತಿದ್ದರೂ ಇಲ್ಲದಿದ್ದರೂ;

ಸೋಜಿಗವೆನಿಸಿದೆ ಕಂಡು ನನ್ನೊಳ ನೀನು

ಮೌನವ ಸಹಿಸದ ನಾನೂ ಈಗ ಮೌನಿ

ನಿನ್ನಂತೆ ನಿನ್ನ ಪ್ರೇಮಿ!!



19/12/2013

*******************



ಹಾಗೇ ಸುಮ್ಮನೆ............ 



ಒಂದು ಸುಂದರ ಆಸೆಯೊಂದಿತ್ತು,

ಬರೆಯಬೇಕು ಜೀವನದಲ್ಲೊಂದು

ಪ್ರೇಮ ಪತ್ರ; 

ಬರೆಸಿಬಿಟ್ಟಿತು ಅವನೊಲವು 

ಪತ್ರಗಳ ಕಂತೆ ಸಾರ ಹನಿಗವನಗಳನು

ನಾ ಅವಗೆ ಒಂದೂ ಕೊಟ್ಟಿಲ್ಲ

ಆದರೂ ಅವನೋದದೆ ಒಂದೂ ಬಿಟ್ಟಿಲ್ಲ!! 



***



ಕೆಣಕುವ ನಿನ್ನ ಮಾತು


ಮರೆತರೂ ಮರೆಸದ

ನಿನ್ನೊಳ ಸೆಳವು

ನನ್ನ ಭ್ರಮೆಯೋ

ನಿನ್ನ ಮೋಡಿಯೋ

ನಿನ್ನ ಮೊಗೆದಷ್ಟೂ

ಉಕ್ಕುವ ನನ್ನ ಕಲ್ಪನೆಯೋ

ಕಾಣೆ ನಾ ಗೆಳೆಯನೇ,

ಸುಂದರವಷ್ಟೇ ತುಂಬಿದ ನನ್ನ ಕಣ್ಗಳೀಗ

ನಿನ್ನ ಕಾಂತಿ ಬಿಂಬಿತ

ಜೋಡಿ ದೀಪಗಳು ,,,,,,



18/12/2013

*********************



ಹೊಸತನವ ಬಯಸುವ ಮುನ್ನ


ಹೊಸಬರೇ ಆಗೋಣ

ನೆನ್ನೆಯ ಕಳೆದರೂ

ಇಂದು ಇನ್ನೂ ಇದೆ ಬದುಕಲು

ನಾಳೆ ಹೆಚ್ಚೇ ಇದೆ ನಲಿಯಲು!!



17/12/2013

******************



ನಾ ಮುನಿಸಿಕೊಂಡಾಗಲೆಲ್ಲಾ


ಮಿರಮಿರನೆ ಬೆಳ್ಳಗೆ ಮಿಂಚಿ

ನನ್ನ ಸೆಳೆಯುವ ಅವನ ಸಂಚಿಗೆ

ನಾ ನಾಚದಿದ್ದರೆ ಹೇಗೆ ಹೇಳಿರೇ

ಚಂದಿರನ ಗೆಳತಿಯರೇ??




***



ನನ್ನನ್ನೇ ನೀ ಅನುಮಾನಿಸಿರುವೆ,


ನಿನ್ನ ಶತ್ರುಗಳನ್ನು ಮಿತ್ರರನ್ನಾಗಿ ನೀ ಭಾವಿಸಿ

ಮುದ್ಧುಗರೆಯುವುದು ನಿನ್ನ ಮುಗ್ಧತೆಯೆನ್ನಲೇ

ಇಲ್ಲವೇ ನನ್ನ ದೌರ್ಭಾಗ್ಯವೆನ್ನಲೇ

ಕಾಲವೇ ನಿರ್ಧರಿಸಲಿ ನಾ ಸೋತಿರುವೆ



16/12/2013
********


'ತಿರಸ್ಕಾರ'


ಏನೆಲ್ಲಾ ಅರಿಗಿಸಿಕೊಳ್ಳುವ ಮನ ಹಿಂಜರಿಯುವುದೊಂದಕ್ಕೆ 


ತಿರಸ್ಕಾರವೊಂದಕ್ಕೆ!


ಪ್ರೀತಿ ಸ್ಪಂದಿಸದಿದ್ದರೂ, ಅದು ತಿರಸ್ಕಾರವೆನಿಸದು


ಪ್ರೇಮಿಯ ವಿಮುಖತೆ, ನೀರವತೆಯಷ್ಟೇ ಕಾಡುವುದು.


ಅದುವೇ ವ್ಯಕ್ತಿ ತಿರಸ್ಕಾರ!


ಇದೊಂದು ಪ್ರಶ್ನೆಯಷ್ಟೇ; ಯಾರೊಟ್ಟಿಗೆ? 

ತಂಡದಿಂದ ವಿಮುಖವಾಗಿ ಹೇಗೆ ಬದುಕುವೆ?, ಎಂಬ ಭೀತಿಯಷ್ಟೇ

ತಿರಸ್ಕಾರ


'ಸಂಘಜೀವಿ ಮಾನವ ಹೆದರುವುದು ಗುಂಪಿನಿಂದ ಹೊರಗುಳಿವ ಸಂಕಟಕಷ್ಟೇ!'

ತೀವ್ರ ವೇದನೆಯೆಂದರೆ ಒಂದೇ

ತಿರಸ್ಕಾರ,,,,,,

,,,,,,,,,,,,,,,,,,,,,,,,,,ಒಂದೇ!!!

DA

15/12/2013
**************