Wednesday, 4 February 2015

ಕವನ

"ಮುತ್ತು"


ಮನದೊಳು ಕ್ಲೇಷಗಳೇ 
ತುಂಬಿ ಹರಿದ
ಈ ಎರಡೂ ದಿನಗಳು

ಅದೇಕೋ 
ಮತ್ತೆ ಮತ್ತೆ ನೆನೆದು 
ಮೆದುಗೊಳ್ಳುತ್ತಿದೆ
ಆ ಮುದ್ದು ಮುದ್ದು 
ಮುತ್ತುಗಳ ನೆನಪಲಿ ಮತ್ತೆ ಸವಿದು!

ಕೇಳಿದ ಅರೆ ಕ್ಷಣವೇ 
ಕೊಟ್ಟು ಬಿಟ್ಟ 
ಜೋಡಿ ಮುತ್ತುಗಳು! 
ಆ ಜೋಡಿ ಹುಡುಗರು
ನನ್ನೊಳ ಆಶ್ಚರ್ಯಗಳು!

ಹುಡುಗಿಯರ 
ಕಂಡರಾಗದ ಅವರು
ಒಮ್ಮೆಲೇ ಮಣಿದು ಬಿಟ್ಟ 
ಆ ಕ್ಷಣಗಳು!

ಅದರೊಟ್ಟಿಗೆ ಕೇಳದೇ ಕೊಟ್ಟ 
'ಮುತ್ತು','ಮುದ್ದು' ಅವಳಕ್ಕನದು;
ಕೆಲ ಹೊತ್ತಿನ ನನ್ನಯ 
ಕನ್ನಡ ಪಾಠ ಬೋದನೆಗೆ,

ಇನ್ನೂ ನೆನೆದು 
ತಣಿದಂತೆ
'ಈ ಹೊತ್ತು ತಂದ 
ಪ್ರೀತಿ ಬುತ್ತಿ'!

ಕಳೆದೆರಡು ದಿನಗಳ
ಹಿಂದಿನದೀಗ
ಹೊತ್ತು ಹೊತ್ತಿಗೆ
ನನ್ನ ಅಮೃತ ಔಷಧ!

ಆ ನನ್ನಕ್ಕನ 
ಮೂರು ಮಕ್ಕಳು;
'ಅಕ್ಕಳೊಂದಿಗಿನ ಅವಳಿ ತಮ್ಮಂದಿರು!'

04/02/2015

ಕವನ

"ಹೆಣ್ಣು"



ಒಂದೇ ಸಮನೆ ಕಣ್ಣೀರ ಹರಿವು
ಅವರ ಭವ್ಯ ಚಿತ್ರದೆದುರು
ಎದೆ ಝಲ್ಲೆಂದು ಹೋದ
ಕರಾಳ ಹೆಜ್ಜೆ ಗುರುತುಗಳು
ಅವರೆಲ್ಲಾ ನೋವುಗಳಿಗೆ
ನಾನೇ ಕಣ್ಣೀರಾದೆನೋ
ಇಲ್ಲ;
ಅವರೊಳಗೆ ನಾ ಹೊಕ್ಕೆನೋ ತಿಳಿಯೇ
ನಡುಗುವ ನನ್ನೊಳಗು
ಬಿಕ್ಕುಗಳ ನಿಲ್ಲಿಸದು
ಬಹು ಕಾಲ ಅವರ ನಗು ಮೊಗದಲ್ಲೇ ನಿಂತಿದ್ದೆ
ಎಷ್ಟೇಲ್ಲಾ ನೋವುಗಳು
ಅದೆಲ್ಲೆಲ್ಲಿ ಅಡಗಿಸಿಟ್ಟು ನಕ್ಕರೋ 
ಆ ತಾಯಿ
ಹೆಣ್ಣು ಎಂದರೇ ಕಲೆಗಾರಳೇ
ನಗುವೊಂದರಲ್ಲೇ ಅಗಾಧ ಭೀಕರತೆಗಳನ್ನು
ತುಂಬಿಕೊಳ್ಳುವ ಪ್ರೀತಿ ಮೂರ್ತಿಯೇ!

04/02/2015




ಇಳಿದಂತೆ ದಿನ
ತಣಿದಂತೆ ಇಳೆ
ಹೃದಯ ಹುಡುಕಿದೆ
ಮತ್ತದೇ ಮನದ ರಂಗಸ್ಥಳ
ನೀನಿಂತು ಅಲ್ಲಿ
ನನ್ನದಿರೇ ನೋಡಿದಂತೆ!

04/02/2015

ಕವನ

ಕಣ್ಣ ಬಿಂಬ


ಚಲಿಸುತ್ತಲಿದ್ದೆ ನಾ
ಬಿಂಬ ಸ್ಪಷ್ಟವಾಗಲೇ ಇಲ್ಲ
ನನ್ನ ನಾ ಕಾಣಲು!

ಅಲ್ಲಲ್ಲಿ ಅವರಿವರ
ಉದ್ಗಾರ;
ಚೆಂದ, ಬಿಂಕ-ಬಿಗುಮಾನ
ಸಾಧಾರಣ, ಸೂಪರ್-ಸಪ್ಪೆ, 
ಜೊಳ್ಳು-ಪೊಳ್ಳು
ನಾ ದಾರಿಯಲಿ ಸಾಗುತ್ತಲಿದ್ದೆ
ದಿನ ಬೆಳಗಾದರೆ
ಪಶ್ಚಿಮದಿಂದ ಪೂರ್ವಕೆ!

ಚಲನೆಯ ಹಂತಗಳಲಿ
ನಾನು ಅವರ ಅಷ್ಟೂ ಆಗಿದ್ದೆ;
ಆಗುತ್ತಲಿರುವೆ,
ಜಡವಲ್ಲ ನಾ
ಒಂದೇ ಆಗಿರಲು!

ನನ್ನ ನಡುಗುವ ಕೈಗನ್ನಡಿ
ತೋರದ ನನ್ನ
ಅಲ್ಲಲ್ಲಿ ಅವರ ಕಣ್ಗಳಲಿ ಕಂಡೆ!

ನನಗಿನ್ನೂ ಸ್ಪಷ್ಟವಿಲ್ಲ
ನಾನು!
ನಾನಿನ್ನೂ ಗುರಿ ಮುಟ್ಟಿಲ್ಲ
ದಾರಿಯಲ್ಲಿರುವೆ
ದೂರದೂರಿಗೆ...!

04/02/2015

Tuesday, 3 February 2015


ನಾ ಕಳಿಸಿದ ಸಂದೇಶಗಳೇ

ತಲುಪುತ್ತಿಲ್ಲ ನಿನಗೆ

ಬಹುಶಃ ಅದರೊಳು

ನಿನ್ನ ಹಸರೇ ಬರೆದಿಲ್ಲವೇನೋ

ನಾ

ಆತುರದಿ;

ಹುಡುಕಿ ಹಿಡಿದುಕೊ

ಬೇಗ,

ಮತ್ತಿನ್ಯಾರೋ ಓದಿಕೊಂಡಾರು

ನೀನೆಂದು ಅವರು!

ನೋಡಿಲ್ಲಿ ಈಗಲೂ ನಿನ್ನ ಹೆಸರು

ನೀನೇ


ಆದೆ! 


*****

ಸಂಜೆ ಸೂರ್ಯ

ಕಣ್ ಹೊಡೆದ ಹಾಗೆ

ನನ್ನ ಕಣ್ಗಳು 

ಮುಚ್ಚಿಕೊಳ್ಳುವವು

ನಾಚಿದಂತೆ!

ಅರೆ ಬಿರಿದ ತುಟಿಗಳಿಗೆ

ರಂಗೇ ಬೇಕಿ


02/02/2015
"ಒಬ್ಬಂಟಿ ಹೆಣ್ಣು"


ಒಬ್ಬಂಟಿ ಹೆಣ್ಣನ್ನು
ಎಂದು ಸಮಾಜ 
ಒಪ್ಪಿಕೊಳ್ಳುವುದೋ
ಜೀವಿಸಲು 
ತೊಡಕಾಗದೇ ಉಳಿವುದೋ
ಅಂದು ಅವಳು
ತನ್ನವರ ಇನ್ನಿಲ್ಲದಂತೆ
ಮುಕ್ತಿ ಕೊಟ್ಟ ಮಹಾ ಪುರುಷರಂತೆ
ಬಣ್ಣಿಸುವುದ
ಬಿಡುವಳು!
ಮತ್ತು ಜೀವಿಸುವಳು
ತಲೆ ಬಾಗದೇ!

********

ಒಂದೊಳ್ಳೆ ನೆನಪಾದರೂ
ಬಿಟ್ಟು ಹೋಗು
ಎಲ್ಲಾ ಬರಿ ಒಗಡು ಕಂಟುಗಳೇ
ಉಳಿದಿವೆ ಎದೆಯೊಳು
ನೆನ್ನೆಯವು!

*********

ಕವಯತ್ರಿಯ
ಮನ ಕದಡಿತ್ತು
ಚಂದ್ರ ಚೂರಾಗಿ ಬಿದ್ದಿದ್ದ
ಅವರ ಮನೆ ಬಾವಿಯೊಳು...

03/02/2015

ಕವನ

"ಮೊಂಡುಕತ್ತಿ"



ನಾನೊಂದು ಮೊಂಡು ಕತ್ತಿ
ನನ್ನ ಅನೇಕ ಪ್ರಯತ್ನಗಳು
ವ್ಯರ್ಥವೇ ಸರಿ;
ಆದರೂ ನಾನಿನ್ನೂ 
'ಪ್ರಯತ್ನದಲ್ಲಿರುವೆ'..

ನನ್ನದು 
ಇನ್ನೂ ಮೊಂಡುತನ;
ಮೊದಲೇ ನಾ
ಮೊಂಡು ಕತ್ತಿ!

ಸಾಣೆ ಹಿಡಿಸುವ ಯತ್ನ
ಗಳಾಗಬೇಕಿದೆ
ಅಗೆದಷ್ಟೂ ಬೆಳಕು;
ಕಡೆದು ಕತ್ತಲು

ಸವೆದು ನೋಡಿ
ಚಚ್ಚಿ ಕಳೆದು
ಹೊಳಪ ನನೆದು..

ಚೀಲದಿಂದ ಹೊರಗೆ ಇದ್ದು
ಸವೆದು ಸವಿಯಬೇಕಿದೆ
ಮೊಂಡು ಕಳಚಲು 
ಹಲವು ಸಾಣೆ ಹಿಡಿತಗಳಲಿ..

ನಾನೊಂದು ಮೊಂಡುಕತ್ತಿ
ನನ್ನ ಪ್ರಯತ್ನಗಳು ಅನೇಕವಿಲ್ಲಿ!

03/02/2015

ಕವನ

ದ್ರವ್ಯ

ಹಕ್ಕುಗಳ ಕಸಿದುಕೊಂಡು
ಅವರ ಪಾಲಾಗಿ ಬಿಟ್ಟು ಕೊಟ್ಟ 
ದ್ರವ್ಯ;
ಅದೇಕೋ
ಸಾಗರದ ನೀರಾಗಿದೆ!

ಅನೇಕ ಕಣ್ಗಳ ಕಣ್ಣೀರು
ಹಿಂದೆ ತುಳುಕಿದ್ದು
ಇನ್ನೂ ಹರಿದಿಲ್ಲ
ತಿಳಿಗೊಳ್ಳಲೂ ಇಲ್ಲ; ಮೌನವಹಿಸಿವೆ!

ಮೊದಲೇ ಹೇಳಿದಂತೆ
ಸಾಗರವ ಸೇರಿದ್ದು ನದಿಯೇ ಆದರೂ
ಉಪ್ಪಂತೆ; ಪ್ರಕೃತಿಯ ಕೈವಾಡಕೆ
ಆಪಾದನೆಗಳ ಅಬ್ಬರ...

ಬಾಯಾರಿದೆ
ಕುಡಿಯಲು ನೀರಿಲ್ಲವಂತೆ
ಕಡಲ ಮಧ್ಯೆ!

02/02/2015

Sunday, 1 February 2015

ಭಗವಂತ ಎಲ್ಲೆಲ್ಲಿ 
ಖುಷಿಯ ಸೆಲೆಗಳನ್ನು
ಅಡಗಿಸಿರುತ್ತಾನೋ

ತೀರಾ ದುಃಖದ 
ಧ್ಯಾನದಲ್ಲೇ ಇರುವಾಗ
ಅವುಗಳೊಂದೊಂದೇ
ಬಿಚ್ಚಿಡುತ್ತಾನೆ
ಮಾಯಾವಿ!!

01/02/2015

ಕವನ

"ಕನಸು"

ನಾ ಕಂಡ
ಪ್ರತೀ ಕನಸನು 
ಕಣ್ಣೀರ ಹನಿಯಿಂದಲೇ
ಬೀಳ್ಕೊಟ್ಟಿಹೆನು

ಹೆಣ್ಣಾದ ಪ್ರಕೃತಿಗೆ
ಕಣ್ಣೊಳು ಇನ್ನೂ ಕಣ್ಣೀರಿವೆ
ಕನಸು ಕಾಣುವೆ
ಕಣ್ಣೀರ ಹಂಗಿಲ್ಲದೆ!

01/02/2015

ಕವನ

''ಬದುಕು''


ಬದುಕು ನೀನೂ ಅಲ್ಲ 
ನಾನೂ ಅಲ್ಲ
ನಾವಿಬ್ಬರು
ಅದು ಬದುಕಾಗಿದ್ದರೆ!

ಜೀವನವೆಂದರೆ ಬಿಡು, 
ಇದ್ದಾರೆ..
ಅವರೂ ಇವರು
ಬಂದು ಹೋದವರು;
ಬರದೇ ಇದ್ದವರು!

ಇನ್ನೂ ಜೀವಿಸಿರುವೆ
ಬದುಕ ಭರವಸೆಯಲಿ
ಸಾಗಿಸಿ ಉಸಿರ..

ಬದುಕುವುದು
ಜೀವಿಸುವುದು
ಎರಡೂ ಬೇರೆ ಬೇರೆಯೇ ಅಲ್ಲವೇ? 
ಹೇಳು ನೀ ಬದುಕೇ!

31/01/2015



ಸಂಗೀತದ ಸೆಲೆಗಳೋ
ನನ್ನೆದೆ ಕಡಲ ಕಲಕೋ
ಅಲೆಗಳೋ
ಸೋತಿವೆ ಕಣ್ಗಳು
ಮನವೂ
ಎಲ್ಲಿ ನಿಂತೆನೋ?!
ಎಲ್ಲೋ ಸೇರಬೇಕಿದ್ದ
ಈ ಹಡಗು..
ದ್ವೀಪದೊಳು ಸಿಕ್ಕಿಕೊಂಡೆನೋ
ಇಲ್ಲ ದಡವಿರದ
ಪ್ರವಾಹದೊಳೊ..?!
ಈಜುವುದ ಅದು ಹೇಗೋ
ಕಲಿಸಿಬಿಟ್ಟ ದೇವ,
ಗುರಿ ಕಾಣಿಸದೆ,
ಇನ್ನಿಲ್ಲದ ಅನುಭವಗಳ ಪಡೆಯದ ಹೊರತು
ಕೈ ಹಿಡಿದು 
ಕಾಪಾಡೆನು ಎಂದೇ
ಹಟ ಹಿಡಿದು ನಿಂತ
ಕಾಣದೂರಿನಲಿ!

*****

ಮೊದಲನೇಯದಾಗಿ
ಹೆಣ್ಣು ಕಾಮಕ್ಕೆ ದಕ್ಕಬೇಕು
ಮಿಕ್ಕಂತೆ ಅವಳ ಯೋಗ್ಯತೆ ಎಲ್ಲಾ
ಗೌಣ!
ಅವಳೆದುರು ಗಂಡು ಎನ್ನುವುದೊಂದೇ 
ಇವರ ಪ್ರಾಮುಖ್ಯತೆ
ಅವಳಿಗೆ ಗಂಡು ಎನ್ನುವುದಕ್ಕಿಂತ
ಮತ್ತಿನ್ನೇನೋ ಅತೀಶಯಗಳ
ಹುಡುಕಾಟವಿರುತ್ತದೆ
ಅದರಿಯದೇ
ಎದುರು ನಿಲ್ಲೋ ಜನಕೇ
ಅವಳೇ ನಾಯಕ!

*****

ಅದೆಷ್ಟು ಅಗೆದಗೆದು
ಹೊರಗೆಳೆಯಬೇಕೋ
ಈ ಮನದ ಹೂಳು
ಹೊರ ಬಿದ್ದ ಮಣ್ಣೆಲ್ಲಾ
ಸುಂದರವೆಂದ ಆ ಮನಗಳೇ
ಶ್ರೇಷ್ಠ ಒಲವುಗಳು

31/01/2015

Friday, 30 January 2015

ಕವನ

"ಬುಗುರಿ"



ಬಣ್ಣದ ಬುಗುರಿಯ
ತಬ್ಬುವ ಚಾಟಿಯು
ಖಾಸಗಿ ಜೀವನ ಹಿತ್ತಲ ಸತ್ಯ

ಬೀಸಿ ಬಿಡುವ ಕೈಚಳಕ;
ತಿರುತಿರುಗಿ ರಂಗಾಗುವ
ಸಾಮಾಜಿಕ ಬದುಕಿನ ಅಂಗಳ ನಿತ್ಯ

ಹಿತ್ತಲ ಹೊಕ್ಕಿ ಲೆಕ್ಕವಿಡದು
ಸುತ್ತಿದ ಸುತ್ತುಗಳ, ವೇಗ-ಆವೇಗಗಳ

ಜಿಗಿದು ಕುಣಿವ ಎಡವದೆ ಗಿರಕಿ ಹೊಡೆವ
ಹೊತ್ತು ಮೀರಿ ಉಸಿರು ಹಿಡಿದು ನಡೆದೇ ಇರುವ
ಬುಗುರಿಯ ತಲೆತಿರುಗಿದ ಕರಾಮತ್ತು

ನೋಟ ಹಿತವಾಗಿರಲಿ
ಸುತ್ತುಗಳ ಹಂಗಿಲ್ಲದೆ
ನುಂಗಿದ ನೋವ ತಪ್ಪಿಯೂ ಇದಿರು ಉಗುಳದೆ

ತಿರುಗಿದೆ ಬುಗುರಿ ಭಾರಿ ರಭಸದಿ 
ಅವರ ಕಣ್ಮಣಿಗಳ ಪೈಪೋಟಿಗೆ ಬಿದ್ದು
ಚಾಟಿಯು ಸುತ್ತಿದ ಸುತ್ತುಗಳ ಮರೆತು

ನಿಲ್ಲಿಸದಿರಿ ಬುಗುರಿ, ನನ್ನಯ ಬುಗುರಿ
ನಿಂತರೂ ಕೇಳದಿರಿ ನಿಂತು
ಅದಪ್ಪಿಕೊಂಡಿದ್ದ ಹಿತ್ತಲ ಸತ್ಯಗಳ!

30/01/2015

Thursday, 29 January 2015

ಕಳಚಿ ಹೋದ ಪೊರೆಯ
ಹುಡುಕಿ ಮೆಚ್ಚುವುದೇ ಉರಗ
ಹಾಗೆಯೇ 
ಕಳಚಿಟ್ಟು ಬಂದ ಮುಖಗಳಿಗೆ 
ಅನಾಮಿಕ ಚಹರೆಗಳು! 


*******


ಎಷ್ಟು ಜತನದ ಮಡಿಕೆಯೋ
ಈ ಅಂತರಂಗ
ಅಮೃತವನ್ನೇ ತುಂಬ ಬೇಕೆಂದಿದ್ದೆ
ಗಾಳಿ ನೀರು ಬೆಳಕು ಸಹ
ವಿಷವನ್ನೇ ಉಂಡು ನಡೆದಿವೆ
ನನ್ನದೇನು ಹೊಸತು!

30/01/2015

ಕವನ

ತುಂಟತನಗಳು


ನೀನಿಲ್ಲದ ಹೊತ್ತಲಿ
ನಿನ್ನ ಹುಡುಕಾಟದಲಿ
ಇಲ್ಲ ಸಲ್ಲದ ಸಂಶಯಗಳು
ಜಾಡ ಹಿಡಿದು ನೆಡೆದು
ನೀ ನಿಂತ ನಿನ್ನದೇ ತಪ್ಪಿನ ಚೌಕಟ್ಟಿನಲ್ಲಿ
ನೀನೊಂದು ಮುಗ್ಧನಂತೆ ಕಂಡು ಬೆರಗು
ಬಹುಶಃ ನಿನ್ನ ಅತೀ ವಿಚಾರವೂ
ಗೊತ್ತಿಲ್ಲದೆ ಸಹ್ಯವಾದರೂ
ನೀನೇ ತಿಳಿಸಿಬಿಡು 
ಗೊತ್ತಿಲ್ಲ; ತಿಳಿಯೊಲ್ಲ ನನಗೆ
ನಿನ್ನ ತುಂಟತನಗಳು!

29/01/2015

ಕವನ

"ಬೆಳಗು ತಿಂಗಳು"



ಮಂಪರಿನ ಒಂದೊತ್ತಿನಲ್ಲಿ
ಉನ್ಮತ್ತ ಸಾಲುಗಳ ಪೋಣಿಕೆ

ಏರು ಗಿರಿಯ ಮೇಲೆ 
ತೇಲಿ ಹೋದ ಚಂದ್ರಮ

ಸುಖವಾಗಿ ಹಿಡಿವ ತಂಗಾಳಿ
ಕತ್ತಲ ಆಕಾರಕೆ ಅವನ ಹೆಸರಂತೆ

ನೇರವಾಗಿ ಉಲಿವ 
ಚಕ್ಕೋರಳಿಗೆ

ಬರೆದು ಕಳಿಸೆಂದ ತಿಂಗಳು
ಬೇಡಿ ಶೃಂಗಾರ!

ಹಾಡುವುದ ನಿಲ್ಲಿಸಿ ಮೌನವಹಿಸಿದ್ದಾಳೆ
ಕವಯತ್ರಿ!

ಮಧ್ಯ ರಾತ್ರಿಯ ಕತ್ತಲ ಮಡಿಲು
ಈಗ ಅವನೆದೆ ತೇರು

ಬೆಳಗುಗಳು,
ರವಿ ಕಾಂತಿಯ ಬೆಳದಿಂಗಳ
ಪ್ರೀತಿ ತವರು!

29/01/2015
ಸಣ್ಣವರಲ್ಲಿ
ಬಹಳಷ್ಟು ಕದಿಯಲು
ಉಂಟು!!
ದೊಡ್ಡವರಲ್ಲಿ
ಬಹಳಷ್ಟು ಚಿಕ್ಕವರು
ಕಲಿಯಲು ಉಂಟು!!!

29/01/2015

ಕವನ

"ಕನಸ ಚಿತ್ರ"


ಹೀಗೆ ಕುಂಚ ಹಿಡಿ
ಗೆರೆ ಮೂಡಿಸು
ತಂದೆನು ನಾನಷ್ಟು ಬಣ್ಣಗಳ
ತಿದ್ದಿ ತೀಡಿ
ಚಿತ್ರಿಸಿಬಿಡು ನಮ್ಮಯ ಕನಸನು!

ಮುದ್ದಾಗಿರಲಿ 
ಮುದ್ದು ಬರುವಂತೆ
ಮುದ್ದಾಡಿ ಹೆಣೆದು ಬಿಡು 
ಕನಸ ಕೂಸನ್ನು

ನನ್ನಂತೆ ಇರಲಿ ಚಿತ್ರ
ನಾನೂ ಮುದ್ದು ನಿನಗೆ
ನಿನ್ನಂತಾಗಲಿ ಬಣ್ಣ 
ಭಾವದೊಳು
ಬಿಂಕ ಬಿಗುಮಾನ!

ಚಿತ್ರವೇ ಎಲ್ಲಾ ಈ ಹೊತ್ತಿನ
ಚಿತ್ತಾರಕೆ ; 
ಭಾವ ಬಣ್ಣಗಳ ಬೆಸೆದುಕೊಂಡು
ಮೂಡಿಸಿಬಿಡುವ 
ಚೆಂದದ ಕನಸನು
ಸರಿದು ಹೋಗುವ ಮುನ್ನ
ಈ ಇರುಳು!

ಕವನ

ಭಾವಗಳ ಅಭಾವವಾಗಿ.....



ಭೋರ್ಗರೆವ ನನ್ನ 
ಭಾವಗಳು
ಇರುಸು ಮುರಿಸಿನ ಅವರ 
ವೇದನೆಗಳು
ಬೇಡವೆಂದರು, 
ದೂರ ಮಾಡಿದರು
ನಾನು ನಿಂತೆ ಇದ್ದೆ ಇಲ್ಲೇ

ಕಳೆದ ಮೇಲೆ ಅಳಿದುಳಿದ 
ಅವರೆದೆಯ ಭಾವಗಳ
ಕಿಚ್ಚು ಹೊತ್ತಿಸಿಕೊಂಡು 
ಹುಡುಕಿ ಬಂದರು
ಭಾವಗಳ ಅಭಾವವಾಗಿ

ನಾನಾಗಲೇ 
ಹೊರಟುಬಿಟ್ಟಿದ್ದೆ
ಅವರೆಡೆಗೆ ಬತ್ತಿ
ಮತ್ತೆಲ್ಲೋ ಉಕ್ಕಿ 
ಹರಿದುಬಿಟ್ಟಿದ್ದೆ

ಇಂಗಿ ಹೋದ 
ಭಾವಗಳ 
ಅರಸುತ್ತ ನಿಂತರಲ್ಲಿ
ಹೋಗಿ ವಿಚಾರಿಸಲೂ 
ಆಗದು
ದ್ವೇಷವಲ್ಲ; ನಿಷ್ಠೆಯಿದು 
ನನ್ನದು 
ನನ್ನೊಂದಿಗಿನ 
ದಿವ್ಯ ಸ್ವಾಭಿಮಾನಕೆ!

28/01/2015

Tuesday, 27 January 2015

ಕವನ

"ಕಲ್ಪನೆ ಕಾವ್ಯ"


ನನ್ನ ಕಣ್ಣಿಗೇ ನಾನಿಷ್ಟು
ಮುದ್ದು ಮುದ್ದಾಗಿ ಕಾಣುವೆನಲ್ಲಾ
ಇನ್ನು ನಿನ್ನ ಕಣ್ಣಿಗೆ
ಅಬ್ಬಾ ಹೇಳಲಾರೆ'ನಲ್ಲ'!

ಈ ಮುದ್ದುತನವು
ಅದೇಕೋ ನನ್ನ ಮಗಳ ನೆನೆವಂತೆ
ಹೀಗೆಯೇ ಇರುವಳೋ ಏನೊ
ಎಂಬ ದೂರದ ಕನಸು

ಹೇಳು ನೀ ಮುದ್ದಲ್ಲವೇ ನಾನು?!
ನಾನೂ ಹೊಲುವೆನಂತೆ
ನನ್ನಮ್ಮನನ್ನೇ,,
ನನಗೂ ಕಾಣುವಾಸೆ ಅವಳನು ಮತ್ತೆ

ಈ ಕನಸು ಮನಸನು ಓದಿ ಬಿಡು ಒಮ್ಮೆ
ಮತ್ತೆ;
ಹೇಳು ನೀ 
ನಿನ್ನತ್ತೆ ಮುದ್ದಲ್ಲವೇ
ನಿನ್ನ ಮಗಳಂತೆ?!

27/012015

ನಿದ್ದೆಗೆ ಬಿದ್ದಾಗ ಹೀಗೆ
ಹಗಲು ಕತ್ತಲಾಗುವುದು
ನಿದ್ರೆಯು ಬಾರದಿದ್ದಾಗ
ಕತ್ತಲು ಬೆಳಕೇ ಆಗದು
ಬಯಸಿದಾಗ ಏನೂ ಇಲ್ಲ
ಬಯಸದಿದ್ದಾಗ ಎಲ್ಲವೂ ಉಂಟು!
ತರ್ಕವಲ್ಲವಿದು ವಾಸ್ತವ...

*****

ಹೃದಯದೊಳು ವಿರಾಜಿತ
ಕವಿಯೇ
ಬಿಡುವು ಮಾಡಿಕೊ
ಕೈ ಹಿಡಿದು ನಡೆವ
ಹೊಸ ಕಾವ್ಯವ
ನಾ ಆರಂಭಿಸಬೇಕಿದೆ!

27/01/2015

****

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು
ಹುಡುಕಿದ್ದು ಸಿಗಲೇ ಇಲ್ಲ
ಕಣ್ತುಂಬಾ ನಿದ್ದೆ ತುಂಬಿ
ಕನಸೊಳು ಸಿಕ್ಕಿದ್ದು ನೀನೇ ಅಲ್ವಾ?!

26/01/2015

Monday, 26 January 2015

ಕವನ


ನಂಟು...


ತುಂಬಿದ ಹಾಲಿನ ಕೊಡಕೆ
ಹುಳಿಯ ಹನಿ
ತುಂಬಿದ ಮನಕೆ
ಅವರೆಸಗಿದ ಬೇಸರದ ಕಿಡಿ!

ಬುಸ್ಸೆಂದು ಬಡಿದು ಹೋಯ್ತು
ನಾನು ನಿಂತೇ ಇದ್ದೆ
ತುಸು ನಗು ಮಾಸಿತ್ತು
ಮನಸ್ಸು ತಿಳಿಗೊಳ್ಳುತ್ತಿತ್ತು!

ದಾಟಿ ಹೋದರು ಅವರು
ದಾಟಿ ಬಂದೆನು ನಾನು
ಮಧ್ಯದಲಿ ಎರಡಕ್ಷರ ವ್ಯತ್ಯಾಸ
ನನಗೂ ಅವರಿಗೂ ಹೆಸರಿನಲಿ!

ಇರಲಿ ಹೀಗೆ ನಂಟು, ಗಂಟುಗಳು
ಬಿಡಿಸುತ ಅಂಟುತ ನಡೆಯುವುದು ಸೊಗಸು
ಓರೆ-ಕೋರೆಗಳಿಲ್ಲದೆ ನಡೆದು 
ಜಡ್ಡು ಗಟ್ಟುವುದೂ ಬೇಡ ಕಾಲು, ಈ ದಾರಿ

ಹಾಗೂ ಹೀಗೂ ಒರಳಿ ತುಳುಕಿ 
ತಿರುಗಿ ಬಾಗಿ ನಡೆದುಬಿಡೋಣ
ನಾನಿನ್ನೂ ದಾಪುಗಾಲು 
ಅವರುಗಳೆದುರು...... !!

26/01/2015

ಹನಿಗವನ

ಹುಡುಗ...

ಈ ಹುಡುಗನ ಕುರಿತು
ಬರೆಯುವುದನ್ನು ಬಿಡಬೇಕು
ಉಬ್ಬಿಕೊಂಡಿದ್ದಾನೆ

ನೋಡಿಲ್ಲಿ 'ಹುಡುಗ', 
ಎನ್ನುವಲ್ಲಿಯೂ
ಅದೇನೋ ಮದವೇರಿದಂತಿದೆ!

ಕವನ

ಬಯಲು



ಇದ್ದದ್ದು ಇಷ್ಟೇ ಆಸೆ
ಅವನ ಕಣ್ಣೊಳು
ಹೊಳಪು ಒನಪಾಗಿ ನಲಿಯಲು

ಅಷ್ಟು ದೊಡ್ಡ ಕನಸೇ?!
ಎಂದ ದೈವ ಕೆಂಗಣ್ಣು ಬಿಟ್ಟು
ಊರಚೆ ಬಯಲಿಗೆ ದೂಡಿದ

ಬಯಕೆಯೂ ಇಲ್ಲ ಅವನೂ ಇಲ್ಲ!
ಬಯಲ ತುಂಬೆಲ್ಲಾ 
ಹರಡಿದ ಅವನ ಕಲ್ಪನೆ-ಕನವರಿಕೆಗಳು

26/01/2015

Saturday, 24 January 2015

ಕವನ

ಓ ನನ್ನ ಗೆಳೆಯ....



ಏನನ್ನಾದರೂ ಹೇಳಬಾರದಿತ್ತೆ
ನಾನಾದರೂ ಇನ್ನೆಷ್ಟು ಆಕಾಶ ತೋರಿಸಿ
ಚಂದ್ರ ಚುಕ್ಕಿಗಳನು ಕಿತ್ತು ನಿನ್ನ ಕೈಗಿತ್ತೆನು
ಸೋತಿರುವೆ ನಾ ಈ ನಕಲಿ ಕನಸುಗಳಲಿ

ಮಾತಾಡಿಬಿಡು ಅದೇನಿದೆಯೊ
ಇನ್ನೆಷ್ಟು ಹೊತ್ತು ಕೊರಗು!
ಮೂರು ದಿನದ ಬದುಕೊಳು
ಆಗಲೇ ಒಂದು ದಿನ ಕಳೆದುಬಿಟ್ಟೆವು
ಹೀಗೆ ಮೌನಗಳಲಿ!

ಸುಮ್ಮನಿರಲಾರದ ಹುಟ್ಟಿನವಳು
ಮಾತುಗಳನ್ನಾದರೂ ಹೇಗೆ ಬಿಟ್ಟೇನು
ನೀ ಮೂಗನಾದರೂ ಕಣ್ಣರಳಿಸಿ ಕೇಳು
ವಾಚಾಳಿಯಾದರೆ ನಾ ಕಿವಿ ಮುಚ್ಚಿ ನೋಡುವೆ

ಓ ನನ್ನ ಗೆಳೆಯ,
ಹರಟಿಬಿಡು ನಿನ್ನೊಳಗು ಬರಿದಾಗಲಿ
ಏನಿದ್ದರೂ, ಇಲ್ಲದಿದ್ದರೂ
ಕಿವಿ ಹೃದಯ ಆನಿಸಿರುವೆ
ಬೇಗನೆ ರಿಂಗಣಿಸಿಬಿಡು ನನ್ನ ಗೆಳೆಯ 'ಚರವಾಣಿಯೇ'! 

24/01/2015
ಎಷ್ಟು ನೋವುಗಳಿದ್ದರೇನು
ಇರುವುದೊಂದೇ ಬದುಕು
ಹುಟ್ಟಿ ಹಾಕೋಣ
ಬದುಕಿನುದ್ದಕೂ
ನಲಿವ ನವಿಲುಗಳನೇ

24/01/2015

ಕವನ

"ಬಡತನ"



ಆ ಭಿಕ್ಷುಕನ,
ಆ ಅರಿವೆ ಇಲ್ಲದ
ತುಂಡು ಮಕ್ಕಳ
ಮುಳ್ಳಂತಹ ಮೊಳೆಯ 
ಅವರ ಬಡಕಲು ದೇಹ
ಕೊಳೆಗಳ ಸಮೇತ
ಛಾಯಚಿತ್ರ ತೆಗೆದ ಕಲೆಗಾರ
ಎನಿಸಿಕೊಂಡ 
ಶ್ರೇಷ್ಠ ಛಾಯಗ್ರಾಹಕ
ಗಿಟ್ಟಿಸಿಕೊಂಡ 
ಲಕ್ಷದ ಬಹುಮಾನ!
ಯಾರು ಹೇಳಿದರು 
ಬಡತನವನ್ನು 
'ಬಡತನ'ವೆಂದು!....

ಯಾರು ಬಡವರು, 
ಯಾರು ಉದಾರಿಗಳು?!
ಯಾರು ಯಾರಿಗೆ ಏನನಿತ್ತು 
ಏನೂ ಅರಿಯದೆ 
ಹಿಂದುಳಿದರು?!
ಹುಡುಕೋಣ ಬಿಡಿ ಸಮೀಕ್ಷೆಗಳಲಿ....

24/01/2015

ಕವನ

''ಹುಚ್ಚು''




ಸಧ್ಯ..
ನನಗೆ ಆ ಹುಚ್ಚಿರಲಿಲ್ಲ
ಇದ್ದಿದ್ದರೆ
ಇಷ್ಟು ಹೊತ್ತಿಗೆ
ಬಿಟ್ಟಿರುತ್ತಿತ್ತು!
ಅದೇ ಆ ಹುಚ್ಚು ಆಸೆಗಳು
ಎಲ್ಲರಂತೆ
ಇಲ್ಲ ಎಲ್ಲರಿಗಿಂತ ಹೆಚ್ಚು
ಪಡೆದುಕೊಳ್ಳುವ
ಆರತಿ, ವಸಗೆ
ಸೋಬಾನೆ ಪದಗಳು!

ನನಗೆ ತಿಳಿದೇ ಇರಲಿಲ್ಲ
ನಾನು ಕಳಕೊಂಡ
ಅವಳೊಳ ವಾಂಛೆಗಳು
ದಾಟಿ ಹೋಯ್ತು ಕಣ್ಣೆದುರು
ನಿಲ್ಲಿಸಲು ತ್ರಾಣವಿರಲಿಲ್ಲ
ಇದ್ದರೂ ನಿಲ್ಲೋ ಆಸಕ್ತಿ 
ಅವುಗಳಿಗಿಲ್ಲ

ಆದರೂ ಹುಚ್ಚು ಮನಸ್ಸು
ಹಚ್ಚಿಕೊಂಡಿಹುದು
ಆ ಎಲ್ಲಾ ಪ್ರತೀಕಗಳ 
ಪಡೆದುಕೊಳ್ಳವ ಹಂಬಲದಿ
ಎಲ್ಲೋ ಹೇಗೋ
ಅವೆಲ್ಲವೂ ಮತ್ತೆ ಮತ್ತೆ 'ಹೆಣ್ಣು'
ಎಂದು ಉಬ್ಬಿಸುತ್ತಿತ್ತು
ಸಮಾಜ ಗೌರವಿಸುತ್ತಿತ್ತು!...

ಸೋಬಾನೆ ಪದ
ಕಾಣೆಯಾಗಿವೆ
ಕಟ್ಟುವ
ನನ್ನದೇ
ಈ ಹೊಸ ಹುನ್ನಾರವೂ
ನಡುವೆ ನಡೆದಿದೆ ! :-)

23/01/2015

Friday, 23 January 2015

ಕಡೆದ ಕಡಲು 

ಈ ಮಡಿಲು

ನಿಶ್ಶಬ್ದ ಸುನಾಮಿ!




23/01/2015

ಕವನ

''ಆ ಮೋಡ"



ಆ ಮೋಡದ ಮನವೆಲ್ಲಾ
ಆ ಆಗಸದ ತುದಿ ದ್ವೀಪದ ಕಡೆಗೆ
ನನ್ನೂರಿಗೆ ಇದುವರೆಗೂ ನೀರಿಲ್ಲ
ದೂಷಿಸುವುದೂ ಇಲ್ಲ ಅದರ ಭಾವ-ಕಾಮನೆಗಳನು

ಬೀಸಲಿ ಗಾಳಿ; ತೇಲಿ ಹೋಗಲಿ ಮೋಡ
ಸಾಗುವುದು ಬದುಕು
ಬೆಳೆಯಲೇಬೇಕಿಲ್ಲ ನಾನು
ಆ ಮೋಡದ ಪ್ರೇರಣೆಯ ಪೈರುಗಳನ್ನೇ!

ಭೂಮಿ ಗುದ್ದಾದರೂ ನೆನೆದು ನಿಲ್ಲುವೆ
ನನ್ನೀ ಭೂಮಿ ನನಗಿನ್ನೂ ಪ್ರೇರಣೆ
ನಿಲ್ಲದು ಹಸಿರು; ನೆಟ್ಟರೂ ಕಳೆಯ
ಬೆಳೆಬೆಳೆವುದು ಹುಲುಸು ಅದು ಮನದ ಹರವು!

23/01/2015

ಕವನ

ಶೃಂಗಾರ



ಮುಸುಕೆಳೆದು ಮುತ್ತಿಟ್ಟು
ಕತ್ತಲೊಳು ಅಪ್ಪುವುದೇ
ನಿನ್ನ ಶೃಂಗಾರವೆನ್ನಲೊಲ್ಲೆ!
ಮುಸುಕೆಳೆದು ಮುಖದಿಂದ
ಬೆಳಕೊಳು ಸ್ಫುರಿಸುವ
ಹೊಸ ಉತ್ಸಾಹಕೆ
ಗಲ್ಲ ಹಿಡಿದು ಕೆನ್ನೆ ತಬ್ಬಿ
ನೀನಿಟ್ಟ ಹೂ ಚುಂಬನ ತಿಲಕ;
ನನ್ನ ಶೃಂಗಾರ ಪೂರ್ಣ!

23/01/2015

Thursday, 22 January 2015

ಒಂದೆರಡು ಹನಿ
ಕಣ್ಣೀರು ಕಳೆದು
ಮನವು ಮತ್ತೆ ಮತ್ತೆ ಹೊರಳಿದೆ
ನಗುವ ಹೂವಿಗೆ
ನಾನೋ 
ನಗುವಿನ ಮಕರಂದ! 

22/01/2015

ಕವನ

"ವಸ್ತು"


ಕೆಲವು ವಸ್ತುಗಳನ್ನು
ಇನ್ನಿಲ್ಲದಂತೆ ಪೂಜಿಸಿರುತ್ತೇವೆ
ಒಲಿದು ಮುನಿಯುವ ಅವು
ಬಿಡದೇ ಗೋಗರೆದು ಮೊರೆವ ನಾವು

ಕೊನೆಗೊಂದು ದಿನ 
ಧಿಕ್ಕರಿಸಿ ಎದೆಗೊದ್ದು
ಹೊರಟುಬಿಟ್ಟಿರುತ್ತದೆ
ಕಣ್ಣೋ, ಕಣ್ಣೀರೊ ಯಾವುದು 
ಹೊರಬಿತ್ತೋ ಕಾಣೆ

ಮರುಗಟ್ಟಿದ ಹೃದಯ
ನೀಲಿಯಾಯ್ತೊ 
ಇಲ್ಲ ಬೇನಾಮಿಯೊ
ಕಲ್ಲಾದ ಹೃದಯವ 
ಕರಗಿಸೊ ಹುಚ್ಚುತನಕೆ
ಎಷ್ಟು ತಪಸ್ಸು
ಅಲೆಮಾರಿಯಾಗಿ 
ಹರಿದುಬಿಟ್ಟ ಕನಸೆಷ್ಟೊ

ಸೂರ್ಯನಿಳಿದರೂ 
ಮತ್ತೊಂದು ಹಗಲು
ಅಷ್ಟೇ ಸತ್ಯ!

ಕಾದು 
ಈ ಕಾದ ಕಬ್ಬಿಣದ ಮನವ
ಬಡಿದು ಬಡಿದು ತಿದ್ದಿದ್ದೆ
ಈಗದು ನನ್ನಂತೆ ನನ್ನ ಮಾತಿನಂತೆ 
ಬಾಗುವುದು

ಆಕಸ್ಮಿಕವೊ 
ಇಲ್ಲ ಕಾಡಿಕೊಂಡು ತಿರುಗಿ ಬಂದಂತೆ
ಆ ಹೊರಟು ಹೋದ ವಸ್ತು..
ಈಗಿಲ್ಲ ಪೂಜಿಸೋಷ್ಟು ಪುರಸತ್ತು

ನನ್ನಂಗಳವೆಲ್ಲಾ ಚಿತ್ತಾರಗಳೆ
ನೆನಪುಗಳ ಕಿತ್ತು
ಒಲಿಯದಿರು ವಸ್ತುವೇ,
ನಾ ಒಲಿಯಲೊಲ್ಲೆ..

ಖಾಲಿತನ ನನಗೀಗ ಸಹ್ಯವೂ
ಹೌದು..
ಅದಕೂ ಮುನ್ನ..
'ನಾನೀಗ ಖಾಲಿಯಲ್ಲ'!.....

22/01/2015

ಕವನ

"ತಿಳಿಗೊಳ"



ತುಟಿ ಎರಡು ಮಾಡದ
ಮರೆಯ ಮೌನ ಮನಗಳ 
ಸಂಭಾಷಣೆಯೇ 
ಸೊಗಸು,,
ನಿನ್ನೆದುರು 
ಬಿಚ್ಚು ಮಾತುಗಳಲಿ
ತುಟಿಗಳದುರಿ 
ದಳಗಳಾಗಿ 
ಉದುರಿ ಬೀಳುವುದೋ
ನಿನ್ನದೆ ತಿಳಿಗೊಳಕೆ
ಎಂಬುದೊಂದೇ 
ನನ್ನ ಭೀತಿ,
ತುಸು 
ಹೆಜ್ಜೆ ಗೆಜ್ಜೆಯ ಲಜ್ಜೆಯೂ...

21/01/2015

Wednesday, 21 January 2015

ನೋವನ್ನು ಬಿಚ್ಚಿಡಲಾರೆ
ಅಷ್ಟು ಚೆಂದದಿ ಈ ಪದಗಳಲ್ಲಿ
ನೋಯಿಸಿ ಎದುರು ನಿಲ್ಲಲಾರೆ
ನಿಮ್ಮ ಕಣ್ಗಳ ದಿಟ್ಟಿಸಿ
ನನ್ನವೂ ಕೆಲ ದೌರ್ಬಲ್ಯಗಳು
ನಿಮ್ಮ ಮಾಯವಾದ ನಗುವು ಸಹ
ನಿಂತಿದೆ ಇಲ್ಲಿ ನೋವ ನುಂಗಿ!

*****

ಗಾಳಿಯೊಳ ತೂರಿ ಹೋದಂತೆ ಮನಸು
ಮೊದಲೆಲ್ಲಾ ಈ ದಾರಿ
ಈಗೀಗ ಹೆಜ್ಜೆಯೂರಿ ನಡೆದಂತೆ ಕನಸು
ಬಹುಶಃ ಯಾರೋ ಜೊತೆ ಹೆಜ್ಜೆ ಸೇರಿಸಿದಂತೆ ಹೊಸತು
ಅದು ನೀನೇನಾ..
ಹೊಂಬೆಳಕು..?!

21/01/2015


*****

ನಾಚಿಕೆ ಸಂಕೋಚಗಳು
ದೂಡುವುದು 
ದೂರ;
ತಿಳಿದು 
ನೀ 
ಹತ್ತಿರ ಬಾರಾ!! 

20/01/2015

Tuesday, 20 January 2015

ಕವನ

ನೀ ನನ್ನಲಿ, ನಾ ನಿನ್ನಲಿ 



ಅರ್ಥವಾಗದ ಭಾವಗಳು
ನನ್ನವು ಗೆಳೆಯ
ಅರ್ಥವಾಗಿಬಿಟ್ಟರೆ
ಆಜು ಬಾಜಿನ ಗೆಳತಿಯರು
ಕದ್ದಾರು
ನನ್ನೊಳ ನಿನ್ನ!

ನಿನಗೂ ಅರ್ಥವಾಗದಿದ್ದರೂ 
ಸರಿಯೇ
ನಿನ್ನ ಗೆಳೆಯರ ಗುಂಪೊಳು
ನೀ ಉಬ್ಬಿ ಹಾಡದೇ ಇರುವೆಯಾ?!
ಅವರು ಕದ್ದಾರು ನಿನ್ನೊಳ ಕಾವ್ಯ!

ಸುಮ್ಮನಿದ್ದು ಬಿಡೋಣ ಬಿಡು
ಉಸಿರು ಬಿಗಿ ಹಿಡಿದು
ಇಳಿಯಲಿ ಸಂಜೆ ; ಏರಲಿ ಸೂರ್ಯ
ಕತ್ತಲೊಳು ಬೆಳಕಂತೆ
ಬೆಳಕೊಳು ಕತ್ತಲ ಮುತ್ತಂತೆ
ಹುಟ್ಟಿ ಉಳಿದಿದ್ದರೆ
ನೀ ನನ್ನಲಿ, ನಾ ನಿನ್ನಲಿ 
ಕಲರವವಾಗಿ
ಮೊಳಗೀತು ಹೃದಯ
ಪ್ರಣಯದ ಪ್ರಳಯಕೂ ಮುನ್ನ! ...

20/01/2015
ಅಮಲುಗಳು ಮಾನಸಿಕ ವಿರಾಮಗಳು
ಅದು ಬಾಟಲಿಯೊಳೋ
ಔಷಧೀ-ಮಾತ್ರೆಯೊಳೋ!
ಅದಕ್ಕಾಗಿಯೇ ಏನೋ
ಎಲ್ಲರಿಗೂ ಅಮಲೆಂಬುದು ಅಚ್ಚು-ಮೆಚ್ಚು
ಒಮ್ಮೊಮ್ಮೆ ಈ ಪ್ರೀತಿಯೂ ಆಗಿ..

%%%

ತುಂಬಿದ ಕೊಡದಲ್ಲಿ
ತುಳುಕಿಲ್ಲವೆಂದು
ಬಿಂದಿಗೆಯೇ ಅಲ್ಲವೆಂದ
ಸುಂದರಿ
ಬಳುಕಿ ನಡೆಯದಾದಳು!

%%%

ಹೊಸತನಕೆ ಉತ್ಸಾಹ
ಎನ್ನುವುದಾದರೆ
ಹಳೆಯ ಈ ಹೃದಯಕೆ
ನಿರುತ್ಸಾಹದ ಬೇಗೆ ನೀಡದಿರು
ಒಲವಿದು ನಿತ್ಯ ಚೇತನ..

18/01/2015

Saturday, 17 January 2015

ಕವನ

''ಚಿತ್ತಾರ''



ಈ ಗೋಡೆ ಕಿಟಕಿಯ ಮೇಲೆಲ್ಲಾ
ನಾ ಬಿಡಿಸಿದ ವರ್ಣರಹಿತ 
ಚಿತ್ತಾರಗಳು
'ನಾನಿಲ್ಲದ ಹೊತ್ತಲ್ಲೂ
ಅದೇನು ಉತ್ಸಾಹ,
ಅದ್ಯಾವ ಪ್ರೇರಣೆ?'
ಎನ್ನದಿರು,
ನನ್ನದಿದು ಹವ್ಯಾಸ!

ಈ ಮನದ ಹರವು ಅದೇಕೋ 
ಸದಾ ಪಾದರಸದ ಚಿಲುಮೆ
ಏನು ಮಾಡಲಿ ನಾ?!
ನಿಲ್ಲಲಾರೆ ಲಾವವ ತಡೆದು
ಒರತೆಯ ಹಿಡಿದು!

ಚಿತ್ರಗಳೊ ಅವು ನನ್ನವು,
ಒಂದೆಡೆ ಸೂರ್ಯನ ಹೋಲಿದರೆ
ಮತ್ತೊಂದೆಡೆ ಚುಕ್ಕಿ-ಚಂದ್ರಮ
ಹೂವೂ-ಮುಳ್ಳುಗಳು
ಆಕಾಶ- ಪಾತಾಳಗಳೂ
ನೋವು-ನವಿರುಗಳು..

ಹೀಗೆಲ್ಲಾ ಮೂಡುವ ಚಿತ್ತಾರಗಳಿಗೆ
ನೀನೊಮ್ಮೆ ಬಂದು 
ತುಂಬಿಬಿಡು ಬಣ್ಣಗಳ
ಸಾಕಷ್ಟೇ; 
ಸಮಯವಿದ್ದರೆ 
ನಿನ್ನ ಕನಸ ಬಣ್ಣಗಳ
ಎರವಲು ಕೊಡು 
ನನ್ನೀ ಚಿತ್ತಾರಕೆ 
ಜೊತೆಲಿದ್ದು 
ಹೀಗೆಯೇ...

18/01/2015

ಕವನ

''ನಿರೀಕ್ಷೆ''


ಒಂದು ವಸ್ತು, 
ವ್ಯಕ್ತಿಯ ಮೇಲೆ 
ಇಟ್ಟ ನಿರೀಕ್ಷೆಯ 
ನಂತರ
ಬಹುಶಃ ಅವುಗಳೇ
'ಎಲ್ಲಾ'
ಎಂದಾಗಿಬಿಡುತ್ತವೆ
ಆಗ ಅದರೆಡೆಗೇ 
ನಮ್ಮೆಲ್ಲಾ ಒತ್ತಡಗಳು

ಆಗಾಗ ಈ ನಿರೀಕ್ಷೆಗಳ
ಸಡಲಿಸಿ
ಸ್ವೇಚ್ಛೆಯನ್ನೇ ಒದಗಿಸಬೇಕು
ಹಿಡಿದಷ್ಟೂ 
ಹಣ್ಣು ನುಜ್ಜು ನುಜ್ಜು
ಹಕ್ಕಿಯ ಕೊರಳ 
ಮುರಿದಂತೆ

ಹಿಡಿದಿರಬೇಕು 
ಭಾವಗಳನ್ನಷ್ಟೇ
ಹೊರೆಯಾಗದಂತೆ,
ಗಾಳಿಯಲಿ ತೇಲೋ 
ಗಾಳಿಪಟದ ಸೂತ್ರವದು 
ಹಿಡಿತವಂತೆ

ನಿರೀಕ್ಷೆಗಳೇ ಬದುಕಲ್ಲ
ಅದರಾಚೆಗೂ 
'ನೀಡಿ ಬದುಕುವ'
ನೀತಿಯುಂಟು,
ಪ್ರೀತಿಸುವ ನಂತರ
ಪ್ರೀತಿಸಿಕೊಳ್ಳುವ!

17/01/2015





ಕಲ್ಪನೆಯ ಹುಡುಗನಿಗೊಂದು
ಮುಖವಿಡುವ ಯತ್ನದಲ್ಲಿದ್ದೆ
ಗುರುತ ಮರೆಸಲೆಂದೋ
ಕಾಡಿ ಪೀಡಿಸಲೆಂದೋ
ನೀ ಕಾಣೆಯಾದೆ
ಇರಲಿ ನಿನ್ನ ಕಲ್ಪನೆಗೂ 
ನನ್ನದೇ ಮುಖವಿಟ್ಟಿರುವೆ
ಹುಡುಕಿ ನೀ ಬರಲೆಂದು!



****


ಸಾಲುಗಳ ತೀಡಿ
ಮನಕ್ಕೆ ಅಂಟಿಸಿದಂತಲ್ಲ
ಈ ಪ್ರೀತಿ
ಬಿಟ್ಟರೂ ಬಿಡದೆ ಕಾಡಿ
ಉಳಿಸಿಕೊಳ್ಳೊ ನವ್ಯ 
ಈ ರೀತಿ


*****


ನೂರು ಜೊತೆ ಕಣ್ಗಳ
ಹರ್ಷದ ನೋಟಗಳ
ಮೀರಿ
ಒಂದು ಜೊತೆ ಕಣ್ಗಳ
ಮೌನದ ಬೇಟವು
ಅದೇಕೋ ಕಾಡಿತ್ತು!

16/01/2015

*****

ಒಳಗಿನ 
ನೀರವತೆಯ
ನೀಗಲು
ಹೊರಗು 
ಬರೀ ಗದ್ದಲ

****

ಯಾರೂ ಇಲ್ಲವೆಂದಿದ್ದೆ
ಎಲ್ಲರೂ ಇದ್ದರು
ಎಲ್ಲರೂ ಇದ್ದಾರೆ ಎಂದುಕೊಂಡಿದ್ದೆ
ಯಾರೂ ಇರಲಿಲ್ಲ
ಭ್ರಮೆಯ ಬದುಕು
ಒಬ್ಬಂಟಿಯಾಗಿಸಿತ್ತು
ಇನ್ನೂ ನಂಬದಾದೆ
ಅವರೂ ಇವರೂ
ಉಳಿದಾರೆಂದು
ನಿರೀಕ್ಷೆಗಳು ಇನ್ನೂ
ಸಾಗಿವೆ..

****


ನನ್ನ ಸುಳ್ಳುಗಳಿಗೆಲ್ಲಾ 
ನಿನ್ನ ಅಂತರ 
'ಉತ್ತರ'
ಗೊತ್ತಿಹುದು ಹುಡುಗ
ನಾನೇನು ಮಾಡಲಿ
ನಿಜವ ಹೇಳಿಯೂ 
ನೀನಾಗಲಾರೆ 
'ಹತ್ತಿರ'! ....

*****

ಮೌನ ಕವಿತೆ 
ಬರೆಯುತ್ತಲಿರುವೆ 
ಪದಗಳ
ಸಾಲ ನೀಡುವೆಯಾ
ಹುಡುಗ!
ಇದೊಂದು ಅಪೂರ್ಣ ಕವಿತೆ
ನಿನ್ನ ನಿರೀಕ್ಷೆಯೇ ತುಂಬಿ!

15/01/2015
ಈ ನಿದ್ದೆ ಕದ್ದ 
ಹುಡುಗನ
ನಿನಗೊಪ್ಪಿಸುವೆ 
ಚಂದಿರ,
ದಯಮಾಡಿ 
ನನ್ನ ಕನಸಿಗೆ 
ದೂಡದಿರು
ಕನಸಲೂ ನಾ 
ನಿದ್ದೆಗೆ ಪರದಾಡುವೆ
ಕಾಡುವ 
ಇವನ ಕಂಡು!... 

13/01/2015

Wednesday, 14 January 2015

ಕವನ

ಸಂಕ್ರಾಂತಿ


ಒಳ್ಳೆಯ ಮಾತಾಡುವ
ಎಳ್ಳಿಗೇ ಕಾಯುವುದು
ಅನಿವಾರ್ಯವೇನಲ್ಲ
ದಿನವೂ ಸಂಕ್ರಾಂತಿಯೇ
ಎಳ್ಳಿಲ್ಲದೆ ಬೆಳ್ಳಿ ನಗೆ ಇದ್ದೊಡೆ

ಬೆಲ್ಲವಿರಲಿ ಹುಗ್ಗಿಗೆ
ತುಪ್ಪವಿರಲಿ ಜೊತೆಗೆ
ನಾವು ನೀವು ಹೀಗೆಯೇ ಇರುವ
ಅಚ್ಚು ಮೆಚ್ಚುಗೆ

ಸಕ್ಕರೆಯಚ್ಚಿನ ಜೀವನದಲಿ
ಸಕ್ಕರೆ ಇರುವೆಗಳು ನಾವು
ಕೊರೆದು ಸವಿಯೋಣ
ಅನುದಿನವೂ
ಕಾವ್ಯ ಪ್ರೀತಿ
ಎದೆಯೊಳಗೆ!

15/01/2015

ಕವನ

''ಹೆಜ್ಜೇನು''



ಹೆಜ್ಜೇನುಗಳೆಲ್ಲಾ ಹರಿದು ಬಂದವು
ನನ್ನಡೆಗೆ; ನೋಡಿ ವಿಸ್ಮಯ 
ರೊಯ್ಯನೆ ಬರುವ ರಭಸಕೆ 
ಭಯವೂ ಕುತೂಹಲವೂ

ಸುತ್ತ ತುಂಬಿಕೊಳ್ಳೊ 
ಜೇನ್ನೋಣಗಳ ಗುಯ್ ಕಾರ
ಅದರೊಟ್ಟಿಗೆ ತೇಲಿ ಹೋಗೊ 
ನನ್ನೊಳ ಸಂಭ್ರಮ

ಇನ್ನೆಷ್ಟು ಹೊತ್ತೋ 
ಎನಿಸಲು
ಸದ್ದಿಡಗಿ ನಿಂತ್ತಿತ್ತು; 
ದೂರದಲ್ಲೆಲ್ಲೋ
ಹರಡಿದ ಗುಂಪು 
ಸುಳಿಯಾಗಿ ಸುತ್ತುತ್ತಿವೆ

ಓಹ್! ಆ ಮರದ ಗೊಂಚಲೊಳು
ಈ ಹೆಜ್ಜೇನಿನ ಗೂಡು!
ಹಾದು ಹೋಗುವಾಗ ನನ್ನನೂ
ಹೀಗೆ ಸುತ್ತಿ ಹೋಯಿತು!

14/01/2015

ಕವನ

ಕವನ


ಈ ಕಲ್ಪನೆ-ಭಾವಗಳು
ಎಷ್ಟು ಸುಂದರ
ವಾಸ್ತವದ ಹೊರತು

ಈ ಮನದ ಆಸೆಗಳೇ
ಸುಮಧುರ
ಅದರ ಮೂಲದ ಹೊರತು

ಹಾದಿ ಹಿಡಿದು ಪಡೆದುಕೊಳ್ಳುವ
ಮುನ್ನ ಸವಿದುಬಿಡೋಣ
ಈ ಸುಂದರ ಸಂತೋಷದ ಕ್ಷಣಗಳ

ಅಂದುಕೊಂಡಂತೆಲ್ಲಾ ಇಲ್ಲ
ಈ ಜೀವ ಮತ್ತು ಜೀವನ
ನೆನೆದುಕೊಂಡಂತೆ ಇರಲಿ ಈ ಕವನ!

14/01/2015
ಈ ನಿದ್ದೆ ಕದ್ದ 

ಹುಡುಗನ

ನಿನಗೊಪ್ಪಿಸುವೆ 

ಚಂದಿರ,

ದಯಮಾಡಿ 

ನನ್ನ ಕನಸಿಗೆ 

ದೂಡದಿರು

ಕನಸಲೂ ನಾ 

ನಿದ್ದೆಗೆ ಪರದಾಡುವೆ

ಕಾಡುವ 

ಇವನ ಕಂಡು!...



***



ಗೆಳೆಯ
,
ನೀಡು ನೀ 

ನನ್ನ ಕಲ್ಪನೆಗಳಿಗೆ

ಮಾನ್ಯ;

ನಾನಾಗುವೆ ಆಗ

ನಿನ್ನ

ಕಾಮನೆಗಳಿಗೆ

ರಮ್ಯ!


13/01/2015

ಕವನ

ಈ ಜನರಿಗೆ 
ಒಂದೆ ಕೊರಗು
ನಾನು 
ಕೊರಗುತ್ತಿರುವೆನೆಂದು

ಹೇಗೆ ಹೇಳಲಿ 
ನಾ ಇಲ್ಲವೆಂದು?!
ಒಂಟಿಯೆಂದ 
ಮಾತ್ರಕ್ಕೆ ಕೊರಗಿರುವುದೆ?!

ಇಷ್ಟಕ್ಕೂ 
ನಾ ಒಂಟಿಯೆಂದು
ಹೇಳಿದವರ್ಯಾರು
ಮನದೊಳಗಿನ ಅವನ 
ನಿಮಗೆ ನಾ 
ತೋರುವುದೆಂತು?

ಅದಿರಲಿ 
ನಾನೇಕೆ ನಿಮಗೆ
ಅವನನ್ನು ತೋರಿಸಲೇ 
ಬೇಕು?!

ನನಗಿನ್ನೂ 
ಆ ಅನಿವಾರ್ಯವಿಲ್ಲ,
ನಿಮ್ಮ ಹಟಕ್ಕೆ 
ನನ್ನಂತರಂಗವ 
ಬಯಲುಗೊಳಿಸುವ..

13/01/2015

ಕವನ




ಪ್ರಶ್ನೆಗಳಿಗೆ ಉತ್ತರವಾಗುವುದು
ಅಷ್ಟು ಸುಲಭವೆ?!
ಇದ್ದಾಗಲೂ ಇಲ್ಲದಿದ್ದಾಗಲೂ
ವ್ಯಕ್ತಿ ಪರಿಚಯವದು
ಸಿಹಿಯಾಗಿರಲಿ ಯಾವುದೆ
ಕಸಿವಿಸಿಯಿಲ್ಲದೆ!

ನಡೆದು ಹೋದ, ನಡೆದು ಬಂದ
ದಾರಿಗಳೇಕೋ ಸೇತುವೆ ಮುರಿದವುಗಳು
ತಿರುಗಿ ನೋಡಿದರೂ ದಾರಿ ಕಾಣದು
ಕೊರೆದ ಕಣಿವೆಯ ಹೊರತು
ಮರೆತು ಭೂಮಿಗಳ ಬದಲಿಸಿದರೂ
ಆ ಮನಗಳ ವಾಸ್ತು ಇನ್ನೂ
ಭೂಮಿಗೆ ಹೊಂದುತ್ತಲೇ ಇವೆ
ಭೂಮಿಯೇ ಎದ್ದು ನಿಂತು ಕೊಡವಿಕೊಳ್ಳಬೇಕಿದೆ
ಹೊಸ ಹೊಸ ಚಿಂತನೆಗಳಿಗೆ

ಪ್ರಶ್ನೆಗಳೆಷ್ಟೋ ಇನ್ನೂ ಪ್ರಶ್ನಿಸಲಾಗದ್ದು
ಮನಗಳೆಷ್ಟೋ ಪರಿಚಯವ
ಮೆರೆತು ಹೋದದ್ದು
ಭೂಮಿಗಳೆಷ್ಟೋ ದೋಷ ಹುಟ್ಟಿ
ಬಿಟ್ಟು ಹೋದದ್ದು!
ಕಾದು ನೋಡಬೇಕು ಇನ್ನೂ ಬದುಕಿದ್ದು...

12/01/2015

Monday, 12 January 2015

ಕವನ

''ಕವಿ''


ಒಂದಷ್ಟು ಪದಗಳು ಗುಡ್ಡೆ ಹಾಕಿ
ಜೋಡಿಸಿ ಅರ್ಥೈಸಿಕೊಳ್ಳಿ ಎನ್ನುವ ಕವಿಯು
ಅದೇಕೋ ನನಗೆ ಭಾಷಾ ಶಿಕ್ಷಕನಾಗಿ ಕಾಣುತ್ತಾನೆ

ಒಂದಕ್ಕೊಂದು ಸಂಬಂಧವಿಲ್ಲದ ಪದಗಳು
ನಾವು ಅಂದುಕೊಂಡಂತೆಲ್ಲಾ ಹೊಸ ಹೊಸ ಅರ್ಥಗಳು
ನಮ್ಮ ಪ್ರಯೋಗಗಳಿಗೆ ಅವರು ಕವಿಗಳಾದರು

ಕವಿ ಎಂದರೆ ಅರ್ಥ ಬಿಡಿಸಲಾಗದೆ ಇಟ್ಟ 
ಒಗಟುಗಳ ಮಾಲೀಕನೇ? ಗುಟ್ಟುಗಳ ಗೂಡೆ?
ಸುಮ್ಮನಷ್ಟು ಸರಕೆ? ಮೆದುಳೊಳಗಾಡುವ ಬೆರಳೇ?

ಕವಿಯೊಬ್ಬ ಸೊಗಸುಗಾರ; ಭಾವಗಳ ಸರದಾರ
ಅಷ್ಟಗಲದ ಆಕಾಶವ ಇಷ್ಟಗಲದ ಕಣ್ಣೋಳಗೆ ತಂದಿಟ್ಟವನು
ಭೂಗರ್ಭ ಸಿರಿಯ ನಲ್ಲೆಯ ಹಣೆ ಬೊಟ್ಟಿನಲಿ ಕಂಡವನು

ಕವಿಯೊಬ್ಬ ರಸಿಕ; ಶೃಂಗಾರ ರಾಜ
ಚಂದ್ರನ ಸೆರಗಲೇ ಯೌವ್ವನೆಯ ಛಾಯೆ ಕಂಡವನು
ಮೇಘ ಮಾಲೆಯಲಿ ಲಲಿತೆಯ ತಬ್ಬಿ ನೆನೆದವನು

ಕವಿಯೊಬ್ಬ ಕನಸುಗಾರ; ಕಲ್ಪನೆಯ ಆಗರ
ಇಂದನ್ನು ನೆನ್ನೆಯಾಗಿ; ನೆನ್ನೆಯನ್ನು ನಾಳೆಯಾಗಿ ಚಿತ್ರಿಸಿ 
ಹೊಸತೆಲ್ಲಾ ಹಳೆಯದೆ; ಹಳೆಯದೆಲ್ಲಾ ಹೊಸತೆಂದು ಭ್ರಮೆ ಮೂಡಿಸುವನು

ಅವನೊಬ್ಬ ಮಾರ್ಗದರ್ಶಕ; ಸಲಹೆಗಾರ
ಅನುಭವಗಳ ಮೂಟೆ ಹೊತ್ತು ತಾರ್ಕಿಕ ವಿಶ್ಲೇಷಣೆಗಳಿಗೆ
ತನ್ನ ಸಾಲುಗಳ ಹಾದಿಗಳಲಿ ನಮ್ಮನಗಳ ಓಡಿಸುವವನು

ಅವನೊಬ್ಬ ದಾರ್ಶನಿಕ; ಒಳನೋಟದವನು
ಪ್ರಕೃತಿಗೂ ಮುನ್ನ ಹುಟ್ಟಿ ಬೆಳೆದವನು
ಅದರಂತೆ ನಮ್ಮ ಮುಂದೆ ನಡೆದವನು
ಒಳಗಣ್ಣಿಗಷ್ಟೇ ದಕ್ಕುವನು

ಚಿಂತಕನು ವಿಚಾರಶೀಲನೂ ಅವನು
ನಾಳೆಯ ಬೆಳಕಿಗಾಗಿ ಇಂದು ಕತ್ತಲೆಯ ಪಂಜಿನವನು
ಕತ್ತಲಲ್ಲವದು ಕಪ್ಪುರಂದ್ರ; ಎಲ್ಲವ ತೋಳ ತೆಕ್ಕೆಗೆ ಸೆಳೆದುಕೊಳ್ಳೊ ಕಾಂತ ಸೂರ್ಯ!

12/01/2015

ಕವನ

''ಕನಸು''


'ಸಾರೋಟಿನ ಸಾರಥಿ'ಯೆಂಬ 
ಕನಸ ಕೇಳಿ
ಬೆಚ್ಚಿಬಿದ್ದ ಹಿರಿಯರು
ಊಹಿಸಿರಲಿಲ್ಲ ಈ 
ವಿವೇಕಾನಂದರ
ರೇಷ್ಮೆಯ ನೂಲು ಸಹ
ಕಚ್ಚಾ ದಾರವೇ
ನೇಯ್ಗೆಯ ಮುನ್ನ
ಕನಸಿನ ಪರಿಧಿ ಸಣ್ಣದಾದರು
ಆಯ್ದ ದಿಕ್ಕು ದಿಟ್ಟವಾಗಿರಲು
ಸಾಗುವುದು ಸಾರೋಟು 
ಸಾರಥಿಯಂತೆ....

ಚಿತ್ರ ಕೃಪೆ; Upendra Prabhu sir



12/01/2015

Sunday, 11 January 2015

ಕವನ

ಮನವಿದು ನಿಲ್ಲದು


ಹೀಗೆಯೇ ನಿನ್ನೆಡೆಗೆ 
ಹರಿದು ಓಡುವ 
ಮನವನು
ಎಷ್ಟು ಕಷ್ಟದಿ 
ಸಂಭಾಳಿಸುತ್ತಿರುವೆ

ನಾನೆ ಸುತ್ತ 
ಬೇಲಿಯಾಗಿ
ಮುಷ್ಠಿ ಹಿಡಿದು 
ಬಿಗಿಯಾಗಿ
ಕಣ್ಣಿಟ್ಟು 
ಕಾಪಾಡಿ
ನನ್ನೊಂದಿಗೆ ನಾ 
ಹೊಡೆದಾಡಿ

ಆದರೂ 
ಅದು ಹೇಗೋ
ಸಡಿಲಗೊಂಡು 
ಹರಿವುದು ಮನವು
ಇದು
ಮೋಹದ 
ಭ್ರಾಂತಿಯೋ?
ವಯೋನ್ಮತ್ತ 
ಜಾಲವೋ?
ನನಗೊಂದೇ 
ಆತಂಕ ಚಡಪಡಿಕೆಗಳು..

11/01/2015

Saturday, 10 January 2015

ಕವನ

''ಗೊಂದಲ''


ಈಗೀಗ ಬರೆಯುವ ಕೈ
ತುಸು ಬಿಗಿಯೇ
ಆ ಮನಗಳನ್ನೂ
ಒಮ್ಮೆ ಅವಲೋಕಿಸಿ
ಅಕ್ಷರ ಹುಟ್ಟುವವು

ಕನ್ನಡಿಗೆ ಬೆನ್ನು ಮಾಡಿ 
ನಿಂತಾಗಿದ್ದ ಸ್ವೇಚ್ಛೆ
ಮುಖ ಮಾಡಿದಾಗ
ನಿಜದಿ ಭಾವ ಮೂಡದ 
ಗೆರೆಗಳ ಕಂಡು
ಈಗ ಭೀತಿ

ಇದು ನಾನೇನಾ?
ಕಲ್ಪನೆ ಹೌದೆಂದರೂ
ಮುಖ ಹೇಳಿದ್ದು
ಇಲ್ಲ...

ನನಗೊಂದೇ ಗೊಂದಲ
ಬರೆದಂತಿರಬೇಕು
ಇಲ್ಲ;
ನಡೆದಂತೆ ಬರೆಯಬೇಕು
ಅವರೊಬ್ಬರು ಹೇಳಿ ಸುಮ್ಮನಾದರು

ನಗುವನ್ನು ಬರೆವಾಗ 
ನಾ ನಕ್ಕೇ ಇರುವುದಿಲ್ಲ
ಅಳುವನ್ನು ಬರೆಯಲು
ಇನ್ನೂ ಕಲಿತೇ ಇಲ್ಲ!

ಹೊಸದೊಂದು ತಿರುವಿಟ್ಟು
ಹೊರಟುಬಿಟ್ಟರು
ನನಗಿನ್ನೂ ತಿಳಿಯಲಿಲ್ಲ
ನಾನೇನು ಬರೆಯಲಿ ಎಂದು
ನನ್ನನೇ? ಇಲ್ಲ ನನ್ನ ಕಲ್ಪನೆಯೇ?!
ಉತ್ತರಕೆ ಅವರ ಸುಳಿವೂ ಇಲ್ಲ
ಬರೆದರೂ ಏನು ಬರೆದೇನು
ಬರೀ ಈ ನನ್ನ ಗೊಂದಲಗಳ ಬಿಟ್ಟು

ಕೊನೆಗೊಂದು 
ಅಡ್ಡ ಗೋಡೆಯ ದೀಪದುತ್ತರ;
ಬಿಡು ಇವೆಲ್ಲಾ 
ಅರ್ಧ ಸತ್ಯ!

10/01/2015

ಕವನ

''ಬಯಸಿದ ಹುಡುಗ''




ಬಯಸಿದ ಹುಡುಗ
ಅವರೆಕಾಯಿ ಬಿಡಿಸುತ ಕುಳಿತ ಎಲ್ಲೋ
ಈ ಚಿನ್ನಿ ದಾಂಡಿನ ಹುಡುಗರೆಲ್ಲಾ
ಅಂಗಳಕ್ಕೆ ಲಗ್ಗೆ ಇಟ್ಟು 
ಅಕ್ಕನಿಗೆ ''ಅಯ್ಯೊ'' ಎನ್ನುವರು..

ಅಕ್ಕ ಎಂದಿಗೂ ಹಾಗೆ
ಗದರಿ ಓಡಿಸುವಳು
ತುಂಟ ಹುಡುಗರ
ಒಮ್ಮೆ ಬಾರುಕೋಲಿನಲಿ ಹೊಡೆದು;
ಮತ್ತೊಮ್ಮೆ ಕೈಗೆ ಸಿಕ್ಕಿದ್ದರಲ್ಲಿ..
ಮತ್ತೆ ಮತ್ತೆ ಕಾಡುವರು 
ಈ ಚಿಕ್ಕ ಮಕ್ಕಳು

ಗೊತ್ತು 
ಅಕ್ಕನಿಗೆ ದೊಡ್ಡ ವಯಸ್ಸು
ಆದರೂ ಏಕೋ ಅವಳೇ ಆಕರ್ಷಣೆ
ಸುತ್ತಿ ಸುತ್ತಿ ಬರುವ ಹುಡುಗಾಟಿಕೆಗಳಿಗೆ
ಅಕ್ಕನದು ಕೆಂಗಣ್ಣ
ಅದು ಬೂದಿ ಮುಚ್ಚಿದ್ದು

ಬಯಸಿದ ಹುಡುಗ ಅದೆಲ್ಲೋ
ಅವರೆಕಾಯಿ ಬಿಡಿಸುತ ಕುಳಿತ
ಇನ್ನೂ ಮುಗಿಯಲಿಲ್ಲ;
ಮುಗಿದಿದ್ದರೆ
ಈ ಸಂಕ್ರಾಂತಿಗೆ ಹಿದಕವರೆ ಸಾರು
ಜೊತೆಗೆ ಹುಗ್ಗಿ-ತುಪ್ಪ!

10/01/2015


ನಗುವುದನ್ನು ಅಭ್ಯಾಸ 
ಮಾಡುತ್ತಲಿದ್ದೆ
ಕನ್ನಡಿ ಹೆದರಿದೆ
ತುಟಿಯೂ ಒಡೆದಿದೆ!

******

ಪದಗಳೇ ಮಿಡಿಯದು
ನಿನ್ನ ದನಿಯಿಲ್ಲದೆ... 
ಇನ್ನೆಲ್ಲಿಯ ಕನಸು
ರಾತ್ರಿ ಪೂರ ಭರ್ತಿ ನಿದ್ರೆ!..
ಹಗಲೂ ಮಂಪರು... !!
ಪದಗಳೇ ಪದ ಹಾಡಿವೆ
ನಾ ತಂಪಾಗಿ ಮಲಗಲು

10/01/2015