Saturday 10 January 2015

ಕವನ

''ಗೊಂದಲ''


ಈಗೀಗ ಬರೆಯುವ ಕೈ
ತುಸು ಬಿಗಿಯೇ
ಆ ಮನಗಳನ್ನೂ
ಒಮ್ಮೆ ಅವಲೋಕಿಸಿ
ಅಕ್ಷರ ಹುಟ್ಟುವವು

ಕನ್ನಡಿಗೆ ಬೆನ್ನು ಮಾಡಿ 
ನಿಂತಾಗಿದ್ದ ಸ್ವೇಚ್ಛೆ
ಮುಖ ಮಾಡಿದಾಗ
ನಿಜದಿ ಭಾವ ಮೂಡದ 
ಗೆರೆಗಳ ಕಂಡು
ಈಗ ಭೀತಿ

ಇದು ನಾನೇನಾ?
ಕಲ್ಪನೆ ಹೌದೆಂದರೂ
ಮುಖ ಹೇಳಿದ್ದು
ಇಲ್ಲ...

ನನಗೊಂದೇ ಗೊಂದಲ
ಬರೆದಂತಿರಬೇಕು
ಇಲ್ಲ;
ನಡೆದಂತೆ ಬರೆಯಬೇಕು
ಅವರೊಬ್ಬರು ಹೇಳಿ ಸುಮ್ಮನಾದರು

ನಗುವನ್ನು ಬರೆವಾಗ 
ನಾ ನಕ್ಕೇ ಇರುವುದಿಲ್ಲ
ಅಳುವನ್ನು ಬರೆಯಲು
ಇನ್ನೂ ಕಲಿತೇ ಇಲ್ಲ!

ಹೊಸದೊಂದು ತಿರುವಿಟ್ಟು
ಹೊರಟುಬಿಟ್ಟರು
ನನಗಿನ್ನೂ ತಿಳಿಯಲಿಲ್ಲ
ನಾನೇನು ಬರೆಯಲಿ ಎಂದು
ನನ್ನನೇ? ಇಲ್ಲ ನನ್ನ ಕಲ್ಪನೆಯೇ?!
ಉತ್ತರಕೆ ಅವರ ಸುಳಿವೂ ಇಲ್ಲ
ಬರೆದರೂ ಏನು ಬರೆದೇನು
ಬರೀ ಈ ನನ್ನ ಗೊಂದಲಗಳ ಬಿಟ್ಟು

ಕೊನೆಗೊಂದು 
ಅಡ್ಡ ಗೋಡೆಯ ದೀಪದುತ್ತರ;
ಬಿಡು ಇವೆಲ್ಲಾ 
ಅರ್ಧ ಸತ್ಯ!

10/01/2015

No comments:

Post a Comment