Friday 30 January 2015

ಕವನ

"ಬುಗುರಿ"



ಬಣ್ಣದ ಬುಗುರಿಯ
ತಬ್ಬುವ ಚಾಟಿಯು
ಖಾಸಗಿ ಜೀವನ ಹಿತ್ತಲ ಸತ್ಯ

ಬೀಸಿ ಬಿಡುವ ಕೈಚಳಕ;
ತಿರುತಿರುಗಿ ರಂಗಾಗುವ
ಸಾಮಾಜಿಕ ಬದುಕಿನ ಅಂಗಳ ನಿತ್ಯ

ಹಿತ್ತಲ ಹೊಕ್ಕಿ ಲೆಕ್ಕವಿಡದು
ಸುತ್ತಿದ ಸುತ್ತುಗಳ, ವೇಗ-ಆವೇಗಗಳ

ಜಿಗಿದು ಕುಣಿವ ಎಡವದೆ ಗಿರಕಿ ಹೊಡೆವ
ಹೊತ್ತು ಮೀರಿ ಉಸಿರು ಹಿಡಿದು ನಡೆದೇ ಇರುವ
ಬುಗುರಿಯ ತಲೆತಿರುಗಿದ ಕರಾಮತ್ತು

ನೋಟ ಹಿತವಾಗಿರಲಿ
ಸುತ್ತುಗಳ ಹಂಗಿಲ್ಲದೆ
ನುಂಗಿದ ನೋವ ತಪ್ಪಿಯೂ ಇದಿರು ಉಗುಳದೆ

ತಿರುಗಿದೆ ಬುಗುರಿ ಭಾರಿ ರಭಸದಿ 
ಅವರ ಕಣ್ಮಣಿಗಳ ಪೈಪೋಟಿಗೆ ಬಿದ್ದು
ಚಾಟಿಯು ಸುತ್ತಿದ ಸುತ್ತುಗಳ ಮರೆತು

ನಿಲ್ಲಿಸದಿರಿ ಬುಗುರಿ, ನನ್ನಯ ಬುಗುರಿ
ನಿಂತರೂ ಕೇಳದಿರಿ ನಿಂತು
ಅದಪ್ಪಿಕೊಂಡಿದ್ದ ಹಿತ್ತಲ ಸತ್ಯಗಳ!

30/01/2015

No comments:

Post a Comment