Monday, 15 June 2015

ಕವನ

ನಗು


ದಿನಗಳು ಹೀಗೆ ನಗುತ್ತಿದ್ದವು
ಎಂದು ತಿಳಿದಿದ್ದರೆ
ಆ ದಿನಗಳು
ನಾನು ಅಳುತ್ತಿರಲಿಲ್ಲ!

ಗೊತ್ತಿಲ್ಲದೆ ಒಂದಷ್ಟು ಸೋತಿದ್ದೆ
ಒಂದಷ್ಟು ಸೋರಿದ್ದೆ
ಕ್ರಮೇಣ ತುಂಬುವ ಹೊತ್ತಿಗೆ
ಸೋರದ ಸೋಲದ ನಗುವ ಹೊತ್ತೆ; ಈ ಹೊತ್ತು!

ಗೊತ್ತಿಲ್ಲದ ದಿನಗಳು
ಹೌದು ಮುಂದೆಯೂ,
ಸೋತರೂ ಸೋಲಿಸಿದರೂ 
ನಗುವೊಂದೆ ತಾಕತ್ತು 
ಬದುಕಿಗೆ
ಪ್ರೀತಿ ತಾ ತುಟಿ ತಾಕಿರಲು

ಹೀಗೆ ನಿರಾಳವೇ ನಾನಾಗಿ 
ಇರುವೆನೆಂದು ತಿಳಿದಿದ್ದರೆ 
ಅಂದು ಭಾರವಾಗಿ
ಭೂಮಿಗೆ ಬಾಗುತ್ತಿರಲಿಲ್ಲ
ನೆಲ ಮುಟ್ಟಿ ಹುದುಗುತ್ತಿರಲಿಲ್ಲ!

ಬೇರಿನಂತೆ ಕತ್ತಲೊಳು ಇಳಿದು
ಬೆಳಕಿಗೆ ತೆರೆದುಕೊಂಡವೆಲ್ಲವೂ
ಹಸಿರಾಯ್ತು ಒಮ್ಮೆ ಉಸಿರಾಯ್ತು
ಚಿಗುರು, ಮೊಳೆ, ಬೆಳೆಯಾಯ್ತು
ಬಯಲ ಎದೆಯ ಕಂಪಾಯ್ತು

ಅಳು ಬಿತ್ತಿ ನಲಿವೂ ಬೆಳೆಯಾಗಿ
ಕನಸ ಕಂಡಿರುವೆ
ಅಳಬಾರದಿತ್ತು; ನಗುವ ಭರವಸೆಗಳ ಬಿಟ್ಟು...
ಈಗ ನಗುವೊಂದನ್ನೇ ಕೈಲಿ ಹಿಡಿದು
ಕಾಣುತ್ತಲಿರುವೆ ಹತ್ತು ಹಲವು ಕನಸುಗಳನು
ಒಂದು ನಗುವಿಗೆ ಹತ್ತು ಕಾರಣಗಳು ಹುಟ್ಟಿಕೊಂಡು..

14/06/2015

1 comment:

  1. ನನ್ನ ಕನಸಿನ ಉದ್ಯೋಗ ಕನಸು ಕಾಣುವುದು. ಅರೆ, ಇದೇನು? ಎಂದನಿಸಬಹುದು ನಿಮಗೆ. ಹೊಸತನ್ನು ಕನಸು ಕಾಣುತ್ತ ಅದಕ್ಕೆ ರೂಪ ಕೊಡುವುದು ನನ್ನ ಉದ್ಯೋಗ. ಹಣ ಮಾಡಬೇಕು, ದೊಡ್ಡ ಮನುಷ್ಯನಾಗಬೇಕು ಎಂಬ ಕನಸುಗಳ ಜೊತೆಗೆ ಹೀಗೊಂದು ಹೊಸತು - ಅದನ್ನು ಬೇರಾರೂ ಮಾಡಿರಕೂಡದು, ಮುಖ್ಯವಾಗಿ ಎಲ್ಲರಿಗೂ ಅದರ ಉಪಯೋಗವಾಗಬೇಕು!

    ಮೈಬಗ್ಗಿಸಿ ಕೆಲಸಮಾಡಲು ಸೋಮಾರಿತನ ಇದ್ದೂ ಹುಟ್ಟಿ ಬೆಳೆದ ಗ್ರಾಮಕ್ಕೆ ಏನಾದರೂ ಮಾಡಬೇಕು ಎನ್ನುವ ಮಹದಾಸೆ , ನಮ್ಮ ಗ್ರಾಮದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕಂಪ್ಯೂಟರನಲ್ಲಿ ಮಾಹಿತಿ ಕಲೆ ಹಾಕುತ್ತಾ ಅಧಿಕಾರಿಗಳ ಮುಂದೆ ಕುಳಿತು ಸೋಮಾರಿತನದ ಪರಮಾವಧಿಯಲ್ಲೇ ಏನೆಲ್ಲ ಬದಲಾವಣೆ ಮೂಡಿಸಬಹುದು! ಇನ್ಯಾರಿಗೂ ಬೇಡವಾದ ಅಭಿವೃಧ್ದಿಯ ಬಗ್ಗೆ ಇರುವ ಗೋಜಲನ್ನು ಬಿಡಿಸುತ್ತ ಕುಳಿತಿರುತ್ತಿದ್ದೆ. ಪ್ರತಿದಿನ ಪ್ರತಿಕ್ಷಣ ಹರಿಯುವ ಹೊಸ ವಿಷಯಗಳನ್ನು ಅರಗಿಸಿಕೊಳ್ಳುತ್ತ ಕಳೆದುಹೋಗುತ್ತಿದ್ದೆ, ಹೊಟ್ಟೆಕಿಚ್ಚಿನ ಜನರಿಗೆ ಇದು ಒಂಥರಾ ಸೂನ್ಯ ವಿಷಯ.
    ಮೊದಮೊದಲಿಗೆ ಕಬ್ಬಿಣದ ಕಡಲೆ ಎನಿಸುವ ಅಭಿವೃಧ್ದಿ ವಿವರ ತಿಳಿದ ಮೇಲೆ ಸುಲಭ! ಗೋಜಲು ಬಿಡಿಸುತ್ತ ಹೋದಂತೆ ಹೊಸ ವಿಚಾರ ತೆರೆದುಕೊಳ್ಳುತ್ತದೆ. ಎಲ್ಲವೂ ಸಾಧ್ಯವುಂಟು ಈ ಜಗತ್ತಿನಲ್ಲಿ. ಕನಸುಗಳಿಗೆ ಸೀಮೆ ಇಲ್ಲ. ಒಗಟು ಬಿಡಿಸಿದಂತೆ ಒಂದಕ್ಕೊಂದು ಉತ್ತರ ಕಂಡುಕೊಳ್ಳುತ್ತ ಸಾಗುವ ಪಯಣಿಗನಿಗೆ ನಡೆದುಬಂದ ಹಾದಿ ಖುಷಿ ಕೊಡುತ್ತದೆ. ಅಲ್ಲಿ ಅರಿತ ಹೊಸ ವಿಷಯ, ಹೊಸ ವಿಧಾನ ಕಾಲಕ್ರಮೇಣ ಉಪಯೋಗಕ್ಕೂ ಬರುತ್ತದೆ.

    ಇನ್ನು ಇದರಲ್ಲಿರುವ ಆಕರ್ಷಣೆ ಎಲ್ಲೆಯಿಲ್ಲದ್ದು! ಜನಪರ ಕೆಲಸವನ್ನೂ ಮಾಡಬಹುದಾದ ಸುಯೋಗಕ್ಕಿಂತ ಹೆಚ್ಚಿನ ಆಕರ್ಷಣೆ ಬೇಕೆ? ಅಭಿವೃಧ್ದಿಯ ಬಗ್ಗೆ ಕಂಡ ಕನಸುಗಳಿಗೆ ರೂಪ ಕೊಡಲು ಬೇಕಿರುವ ಜ್ಞಾನ ಸಂಪತ್ತಿಗೆ ಕಿಟಕಿ ತೆರೆದಿಡುತ್ತದೆ. ಸಂಪನ್ಮೂಲಗಳನ್ನೂ ಹುಡುಕಿಕೊಳ್ಳುವ ಅವಕಾಶ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮತ್ತಷ್ಟು ಕನಸು ಕಾಣಲು ಸಮಯ, ಅವಕಾಶ ಎರಡನ್ನೂ ಒದಗಿಸಿಕೊಡುತ್ತದೆ!
    ಹೆಚ್ಚು ಜನರಿಗೆ ಅರ್ಥವಾಗದ ವಿಷಯಗಳನ್ನು ತಿಳಿದ ಖುಷಿ ಮತ್ಯಾರಿಗೂ ಸಿಗದು. ಹಾಗೆಯೇ ತಿಳಿಯದವರ ಅಸೂಯೆಯ ನೋಟ, ತಿಳಿದವರ ಅಸಡ್ಡೆ - ಸ್ವಾರಸ್ಯಗಳ ಮೇಳ! ಎಲ್ಲಿಯೂ ಕದಲದೆ ಅರಿವಿನ ಇಟ್ಟಿಗೆಗಳಿಂದ ಕನಸಿನ ಗೋಡೆ ಕಟ್ಟುತ್ತ ಅದರೊಂದಿಗೆ ಫೈಟ್ ಮಾಡುತ್ತ ಸಾಧಿಸಿದ ಗೆಲುವು, ಎದುರಿಸಿದ ಸೋಲು ಎರಡೂ ಮನಸ್ಸಿಗೆ ಬುತ್ತಿ. ಏಳು ಬೀಳುಗಳನ್ನು ಎದುರಿಸುವ ಪಾಠ ಕಲೆಯುವುದೂ ಒಂದು ಅದ್ಭುತ ಅನುಭವ.

    ಇದು ನನ್ನ ಮನಸಿನ ಮಾತು
    ಇಂತಿ
    ಸುಭಾಸ
    

    ReplyDelete