ತುಂತುರು ಮಳೆ ಹನಿ
ಎದೆಯೊಳಿದ್ದ ಬಿಸಿ ಹಬೆಯ
ತಿರುಚೆಲ್ಲಾ ಚುರ್ರೆಂದು ಉರಿದು
ಹಾರಿ ಹೋದಂತೆ
ಈ ತುಂತುರು ಮಳೆ ಹನಿಯ
ಮೊದಲ ಸಿಂಚನ
ಮತ್ತೆ ಒಲವಾದಂತೆ
ಈ ಹನಿಗಳೊಂದಿಗೆ
ಕಣ್ಮುಚ್ಚಿ ಮೊಗವೊಡ್ಡಿ
ಆಹ್ಲಾದಿಸುವ ಮನಸ್ಸು
ಹನಿಗಳೆಲ್ಲ ಹೊರಳಾಡಿ ತಂಪಾಡಿ
ಕಣ್ಣೆವೆಗಳ ರೆಕ್ಕೆ ಬಡಿತ
ಆರ್ಭಟವಿಲ್ಲ ಮಿಂಚಿ ಗುಡುಗಿ
ಹೆದರಿಸಲಿಲ್ಲ
ಪನ್ನೀರ ಹನಿಯಾಗಿ
ಉದುರುತ್ತಲಿವೆ ಹೂವಂತೆ
ನಾ ಬಯಸಿ ನಿಂದೆನೋ ಎಂಬಂತೆ
ಮನವ ತೋಯ್ಸಿ
ಕಣ್ ಹನಿಗಳೊಂದಿಗೆ
ಹನಿ ಸೇರಿಸಿ ಕಳೆದೇ ಹೋದೆನೆಂದಿದ್ದೆ
ಹನಿ ಬಿದ್ದು ತೆನೆಯಾಯ್ತು
ಭಾವ ಬೆಸುಗೆಯ ಹೊಲಕೆ
ಹಗುರಾದ ಎದೆಯ ಹರವಿನೊಳು
ಮೊಳೆತೆ ನೀ ತುಂತುರು ಮಳೆ ಹನಿಯೇ
ನವ್ಯ ಚೇತನವಾಗಿ ದಿವ್ಯ ಚೇತನವಾಗಿ
ಹನಿ ಹನಿದು, ಹನಿ ಹನಿದು
ಮನವ ಬೆಳಗಿ
17/06/2015
No comments:
Post a Comment