Wednesday, 24 June 2015

ಕವನ

ಗೋಡೆ


ಹುಡುಗನೊಬ್ಬ ಗೋಡೆಗೆ 
ತಲೆ ಚಚ್ಚಿಕೊಳ್ಳುತ್ತಿದ್ದ
ರಕ್ತ ಸೋರಿತು

ಗಾಬರಿಯಾಗಿ ದೂರ ಓಡಿ
ಮತ್ತೊಂದು ಗೋಡೆಗೆ
ತಲೆ ಚಚ್ಚಿಕೊಂಡ 
ಆಗಲೂ ರಕ್ತ ಒಸರಿತು!

ಹುಡುಗ ಗಂಭೀರನಾದ
ಬೇಕೆಂದೇ ಹೊಸದು ಗೋಡೆ ಹುಡುಕಿ
ತಲೆ ಚಚ್ಚಿಕೊಂಡ
ರಕ್ತವೋ ಧಾರಾಕಾರ ಸುರಿಯಿತು!

ಖುಷಿಯಿಂದ ನಕ್ಕ
ಅದೇನನ್ನೋ ಕಂಡುಕೊಂಡಂತೆ
ಗೋಡೆಗಳೊಳಗೂ ರಕ್ತ ಹರಿಯುತ್ತದೆ
ನೊಂದಾಗ ಅದು ಹೊರ ಹೊಮ್ಮುತ್ತದೆ!

ನನ್ನ ನೋವ ನೋಡಿ ಅದಕ್ಕೂ ನೋವಾಗಿದೆ
ನನಗಾಗಿ ನೋಯುವ ಒಂದಾಂದರೂ ಭಾವವಿದೆ 
ಅದು ಗೋಡೆಯೇ ಆಗಿದೆ!

ದೀರ್ಘ ಕಾಲ ನಕ್ಕ ಮೇಲೆ ಮನೆಯೊಳಗೆ ನಡೆದು
ತನ್ನವರೆಲ್ಲರನ್ನೂ ಮತ್ತೂ ಪ್ರೀತಿಸುತ್ತಾನೆ
ಗೋಡೆ ಮುಟ್ಟಿ ಆಗಾಗ ಸಮಾಧಾನಿಸುತ್ತಾನೆ

ಅಂದಿನಿಂದ ಗೋಡೆಯೂ ನಗುತ್ತಿದೆ ಅವನೊಂದಿಗೆ
ರಕ್ತದ ಒಂದೂ ಕಲೆಯಿಲ್ಲದೆ!... 


21/06/2015

No comments:

Post a Comment