Tuesday, 30 June 2015

ಅವಳ 
ದೃಷ್ಟಿ ಹಾಯದ 
ಸ್ಥಳಗಳಲ್ಲಿ
ಅಸಂಖ್ಯಾತ ಮರಗಳು
ಒಂದೂ ನಾಜೂಕಿಲ್ಲ 
ಓರೆ ಕೋರೆಗಳು
ವರುಣನಾಗಮನದ 
ಸುಳಿವು ಸಿಕ್ಕಿತ್ತೇನೋ
ತನ್ನ ತಾನೇ ಗಾಳಿಗೊಡ್ಡಿ 
ಸಡಿಲಗೊಳ್ಳುತ್ತಿದ್ದಾಳೆ
ತರಗೆಲೆಗಳನ್ನುದುರಿಸಿಕೊಂಡು 
ಯೌವ್ವನವನ್ನು 
ಆಹ್ವಾನಿಸಿಕೊಳ್ಳುತ್ತಿದ್ದಾಳೆ 
ಇಳೆ...

*****

ಹಿಡಿ ತುಂಬಾ ಹಿಡಿದರೂ
ಚೆಲ್ಲಿ ಹೋಗುವ ಕೆಲ ದ್ರಾಕ್ಷಿಗಳು
ಬಾಂಧವ್ಯದ ಬಳ್ಳಿಗಳು ಮತ್ತೂ ಬಿಗಿದು....

30/06/2015

ಕವನ

ಕವಿಯನೊಮ್ಮೆ ಕಂಡೆ

ಘಮಲಿಗೆ ನಾಸಿಕವೊಡ್ಡಿ
ಆಘ್ರಾಣಿಸಲಾಗದೆ 
ಸೋತವರ ಕಂಡಿಹೆನು

ಘಮಲೆಂಬೋ 
ಮಲ್ಲಿಗೆಯ
ಸೋಕಲಂಜಿದವರನೂ ಕಂಡಿಹೆನು

ಸಂಪಿಗೆಯ ಕೆಂಪೇ ಆಗಿರುವ ಹೆಣ್ಣನು
ಮಾತುಗಳೊಡನೆ ಸೋಲಿಸಿ
ಕಾವ್ಯದೊಳು ಸೆಳೆದನವನು

ಚಾಟಿಯ ಬೀಸದೆ ಕನಸ ಬುಗುರಿಯಾಡಿಸೋ
ಕವಿಯನೊಮ್ಮೆ ಕಂಡೆ
ಕ್ಷಣದೊಳು ಬಂಧಿಯೋ ನಾನಾಗ...

30/06/2015

ಕವನ

ಹಿಂದಿರುಗಿ ನೀ ನೋಡಿದಾಗ

ಪ್ರತೀ ಬಾರಿಯೂ
ನಾ ನಿರೀಕ್ಷಿಸಿದ್ದೆ
ಹಾಗೆ ನೀ ತಿರುವಲಿ
ತಿರುಗಿ ಹೋಗುವಾಗ
ಒಮ್ಮೆಯಾದರೂ
ತಿರುಗಿ ನೋಡಲಿ ಇವನೆಂದು

ಹತ್ತು ಹಲವು 
ಭೇಟಿಗಳಾದವು
ಸಂಜೆ ಕೆಂಪು 
ಮಳೆ ಹಾಡು ಹರಿದವು
ಮತ್ತೆ ಸಿಗುವೆನೆಂದು 
ನೀ ಹೊರಡುವಾಗ
ನನಗೋ 
ನಿನ್ನ ಕಳಿಹಿಸಲೇ ಮನಸ್ಸಿಲ್ಲ

ಆದರೂ ಅನಿವಾರ್ಯ 
ನಡೆದುಬಿಡುತ್ತಿದ್ದೆ
ಒಂದೇ ಆಸೆ 
ನೀನೊಮ್ಮೆ 
ತಿರುಗಿ ನೋಡುವೆ ಏನೋ ಎಂದು

ಬಹು ದಿನಗಳ ಸಂಜೆ ಕಳೆದು
ರಾತ್ರಿ ಹತ್ತಿರ
ಕತ್ತಲ ಹೊತ್ತಲಿ ಬೀದಿ ದೀಪದ ಬೆಳಕಲಿ
ಇಂದು ಕಂಡೆ
ನೀ ಎನ್ನ ತಿರುಗಿ ನೋಡಿದ್ದೆ!...
ನಾ ಎಂದಿನಂತೆ ನಿನ್ನ ನೋಡುತ್ತಲೇ ನಡೆದೆ...

ಮನದೊಳೊಂದು ಹಾಡು
'ದಾರಿ ಒಂದಾಗಲಿ ಕಾಲ ನಡೆಗೆ
ತಿರುವು ಮೂಡಲಿ ಈ ಬಯಲಿಗೆ'.....

29/06/2015


ಸಣ್ಣದೊಂದು ಪಿನ್ನು ಸಾಕು
ಊದಿದ ಬೆಲೂನಿನ ಹಮ್ಮು ಇಳಿಯಲು
ಹುಡುಗನ ಚಿಗುರು ಮೀಸೆ ಸಾಕು
ಹುಡುಗಿ ಕರಗಿ ರಂಗೇರಲು!.. 
29/06/2015

******

ನಮ್ಮ ಬೆನ್ನ ಹಿಂದಿನ ಬರಹ
ತಿಳಿಯಲು
ಒಮ್ಮೆಯಾದರೂ
ಎರಡು ಕನ್ನಡಿ
ಎದುರುಬದರಾಗಬೇಕು
ಹಣೆಬರಹವನ್ನೇ ತೋರಿದ್ದ
ಕನ್ನಡಿ
ಹಿಂಬರಹವನ್ನೂ ತೋರಿಸಿ
ಹೇಳಲು!

28/06/2015

ಕವನ

ಈ ಹೊತ್ತು

ತಂಗಾಳಿಯಲಿ ಮಸುಕು ಕತ್ತಲೊಳು
ಸಣ್ಣಗೆ ಸಂಗೀತ ನಲಿದು

ನಾನು ನನ್ನೊಂದಿಗೆ ಕಳೆದು
ಪೂರ್ಣದೊಂದಿಗೆ ಹೀಗೆ ಬೆರೆತು

ಹೊಸದೊಂದು ರೂಪಕವಾಗಿ
ಭಾವಗಳಿಗೆ ಶಬ್ದಗಳಾಗಿ

ಬೆಳದಿಂಗಳ ದೀಪಗಳಾಗಿ
ಈ ಹೊತ್ತು ನಿಶೆಯು ಬೆಳಗಿ

ಉತ್ಸಾಹ ನವೋಲ್ಲಾಸವು
ಕ್ಷಣ ಕ್ಷಣವೂ ಗೀತೆಯೊಂದು ಹುಟ್ಟಿ ಹಾಡಲು...

28/06/2015

ಕವನ

ಆಷಾಡದ ಗಾಳಿ

ಆಷಾಡದ ಗಾಳಿ ಎಂದರೆ ಅದೇನೋ ಆಲಸ್ಯ
ಬಂದರೆ ಬಂದೀತು ಕೆಮ್ಮು ನೆಗಡಿ
ಅದರ ಹೊರತು ತೊಂದರೆಗಳೇನೂ ಇಲ್ಲ
ತ್ರಾಸಗಳಂತೂ ತಲೆಗೆ ದೂರ

ತಂಪಾದ ಹವಯೇ ದಿನವಿಡೀ
ಆಗಾಗ ಜಿನುಗೋ ಮೋಡ ಮಳೆ
ಎಳೆ ಬಿಸಿಲೇ ದಿನವೆಲ್ಲಾ
ಸಂಜೆಗಾದರೂ ಕೊಂಚ ಕೆಂಪೇರುವ ಸೂರ್ಯ
ರಾತ್ರಿ ಮತ್ತದೆ ತಂಪು ಹವೆ
ಮಳೆಯ ಸೂಚನೆಯೂ

ಈ ಆಷಾಡದಗಾಳಿ ಅದೇನೋ ಬಲು ಆಲಸ್ಯ
ನಿದಿರೆಯ ಮಂಪರು ಆಕಳಿಕೆ ಆಲಿಂಗನ
ಪೆದ್ದು ಪೆದ್ದಾಗಿ ನಗು ತರಿಸೊ ಮುದ್ದಿನ ಕನಸುಗಳು

26/06/2015

Wednesday, 24 June 2015

ಕವನ

ಅವಳು


ಕಳೆದೇ ಹೋಗಲೆಂದು ಬಂದವಳಲ್ಲ
ಕಳೆದು ಹೋದ ನಗುವನ್ನರಸಿ ನಿಂದವಳು
ಕಳೆದು ಕಳೆದು ನಿಂದು ಹರಿದವಳು
ಬಿರುಸು ಮಾತು ಬತ್ತದ ಬಯಕೆಯವಳು

ಸವಾಲೆಸೆವ ದಾರಿಗುಂಟ
ಬಿಡದೆ ನಡೆದು ಹೋದವಳು
ನಿಂತು ಯೋಚಿಸದೆ 
ಕೊಂಚವೂ ವಿಚಲಿತಳಾಗದೆ ಮುನ್ನುಗ್ಗುವವಳು

ಆರಿದ ಆಸೆಗಳ ಜತನದಿ ಕಾಪಿಟ್ಟು 
ಕಿಡಿ ಹೊತ್ತಿಸಿದವಳು
ಶ್ರದ್ದೆಯ ಬೆಳಕನ್ನಷ್ಟೇ ಹೊದ್ದವಳು
ಅವಳು, 
ಅಲ್ಲಲ್ಲಿ ಕೆಲವರಿಗಷ್ಟೇ ಅರಿವಾಗಿ ಕಾಣುವವಳು!

24/06/2015

ಕವನ

ಮಿಂಚುಹುಳು


ಸುರುಳಿ ಕತ್ತಲೆ
ಸಹಸ್ರ ಮಿಂಚುಹುಳು
ಮಿಂಚಿದ ಬೆಳಕಿಗೆ 
ಹತ್ತು ಹಲವು ಚಿತ್ರಗಳು

ಹಿಡಿದಿಟ್ಟಿಡಲು ಒಂದೂ ಕುರುಹಿಲ್ಲ
ಕಣ್ರೆಪ್ಪೆಯ ಚಡಪಡಿಕೆ
ಕೃತಿಯೊಂದೂ ಉಳಿಯಲಿಲ್ಲ
ಮನದ ಪರದೆ ತೆರೆಯದೆ

ಜಡಗೊಂಡ ತಪವು
ಬೇಸತ್ತು ವಿಷಯ ಬೇಡಲು
ರುಚಿಕಟ್ಟು ಖಾದ್ಯ ವಾಸನೆ
ನಾಲಿಗೆಯೋ ಸುಟ್ಟ ನೆನಪು

ಮಿಂಚುಹುಳುಗಳು ಮನದ ಒಳಗೆಲ್ಲಾ
ಹರಿದು ಮಿಂಚಿ ಬಳುಕಿರೆ
ತನು ನಡುಗಿ ಬೆವತು ಧ್ಯಾನ ಭ್ರಷ್ಟತೆ
ಪರದೆಯ ಮೇಲೆ ಅಚ್ಚಾಗದ ಕೊರತೆ

ರಾತ್ರಿ ಕತ್ತಲೆಗೆ ಮಿಂಚುಹುಳು ಹಾವಳಿ
ದೂರದ ಸೂರ್ಯ ಹತ್ತಿರವಾಗಲು
ಮಿನುಗುವ ಬಳುಕಿದ ಕೃತಿಗಳೆಲ್ಲಾ ಕತ್ತಲ ಮರೆಗೆ
ತೆರೆದ ಮನವೊಂದು ಕವಿತೆ ಹಾಡಿದೆ ಈ ಬೆಳಗಿಗೆ

24/06/2015


ಈ ಗಾಳಿ ಮಳೆಯಲಿ
ಅವನೊಂದಿಗೆ ನಡೆವಾಗ
ಕೆಮ್ಮೇ ಇರಲಿ ಶೀತ ಜ್ವರವೇ
ಆದರೂ ಆದೀತು ಇಲ್ಲದೆ .. 

24/06/2015
ಇಡಿ ಇಡೀ ಗುಲಾಬಿಯನ್ನೇ
ಕಿತ್ತಿದ್ದರೆ ಲೇಸಿತ್ತು
ಕನಸಿನ ತೋಟದಿಂದ
ಒಂದೊಂದೇ ಪಕಳೆಗಳ ಸೆಳದಂತೆ ಕಿತ್ತರಲ್ಲ
ವಿಧಿಯೆಂಬೋ ಮಾಂತ್ರಿಕ
ಅತ್ತರೂ ಈಗ ಕಣ್ಣೀರಿಲ್ಲ
ಕಾದು ಆವಿಯಾದ ಕಣ್ಣುಗಳಿಂದ.. !


************

ಕತ್ತಲೆಯೇ ಚೆಂದವಿತ್ತು
ಅಲ್ಲಿ
ನಾ ಕಾಣುತ್ತಿರಲಿಲ್ಲ
ನನ್ನ ಕನ್ನಡಿಯಲಿ
ಅದಕೂ ಮುನ್ನ
ಕನ್ನಡಿಯೇ ಇಲ್ಲವೆಂದೂ
ಗೊತ್ತಾಗುತ್ತಿರಲಿಲ್ಲ.. !
ಬೆಳಕು ಹರಿದು
ವಿಧಿಯ
ಹುಡುಕುವಂತಾಯಿತು.. !

*****

ಎಲ್ಲವನ್ನೂ ಕೇಳಿಯೇ
ಪಡೆಯುವುದಾದರೆ
ನನ್ನ ಬೇಡಿಕೆಗಳಿಗೆ
ವಿಧಿ ನನ್ನನು ಮೂಗಿಯಾಗಿಸಿದೆ!
ನಾನೂ ಅನುಪಾಲಿಸುವೆ..!
ಹಟವೇ ಇಲ್ಲದೆ..

22/06/2015
*****

ಹುಡುಗ,
ನಿನ್ನೊಂದಿಗೆ ಮಾತನಾಡುವಾಗ
ನಾನೋ ಒರಟು
ಮೃದುತ್ವಕ್ಕೆ ನೀ
ಕರಗದಿರಲೆಂದು..! 

21/06/2015

ಕವನ

ಗೋಡೆ


ಹುಡುಗನೊಬ್ಬ ಗೋಡೆಗೆ 
ತಲೆ ಚಚ್ಚಿಕೊಳ್ಳುತ್ತಿದ್ದ
ರಕ್ತ ಸೋರಿತು

ಗಾಬರಿಯಾಗಿ ದೂರ ಓಡಿ
ಮತ್ತೊಂದು ಗೋಡೆಗೆ
ತಲೆ ಚಚ್ಚಿಕೊಂಡ 
ಆಗಲೂ ರಕ್ತ ಒಸರಿತು!

ಹುಡುಗ ಗಂಭೀರನಾದ
ಬೇಕೆಂದೇ ಹೊಸದು ಗೋಡೆ ಹುಡುಕಿ
ತಲೆ ಚಚ್ಚಿಕೊಂಡ
ರಕ್ತವೋ ಧಾರಾಕಾರ ಸುರಿಯಿತು!

ಖುಷಿಯಿಂದ ನಕ್ಕ
ಅದೇನನ್ನೋ ಕಂಡುಕೊಂಡಂತೆ
ಗೋಡೆಗಳೊಳಗೂ ರಕ್ತ ಹರಿಯುತ್ತದೆ
ನೊಂದಾಗ ಅದು ಹೊರ ಹೊಮ್ಮುತ್ತದೆ!

ನನ್ನ ನೋವ ನೋಡಿ ಅದಕ್ಕೂ ನೋವಾಗಿದೆ
ನನಗಾಗಿ ನೋಯುವ ಒಂದಾಂದರೂ ಭಾವವಿದೆ 
ಅದು ಗೋಡೆಯೇ ಆಗಿದೆ!

ದೀರ್ಘ ಕಾಲ ನಕ್ಕ ಮೇಲೆ ಮನೆಯೊಳಗೆ ನಡೆದು
ತನ್ನವರೆಲ್ಲರನ್ನೂ ಮತ್ತೂ ಪ್ರೀತಿಸುತ್ತಾನೆ
ಗೋಡೆ ಮುಟ್ಟಿ ಆಗಾಗ ಸಮಾಧಾನಿಸುತ್ತಾನೆ

ಅಂದಿನಿಂದ ಗೋಡೆಯೂ ನಗುತ್ತಿದೆ ಅವನೊಂದಿಗೆ
ರಕ್ತದ ಒಂದೂ ಕಲೆಯಿಲ್ಲದೆ!... 


21/06/2015

Sunday, 21 June 2015

ಅವಮಾನವೆನಿಸೋ 
ಅವರ 
ನಗುವೆಲ್ಲಾ 
ಒಮ್ಮೆ 
ಸುಮ್ಮನೆ ಹಾರುವ 
ತರಗೆಲೆ ಎನಿಸದಿರದು
ಅವರ ನಗುವಿನ 
ಅರ್ಥಗಳಲ್ಲಿ 
ಹುರುಳಿಲ್ಲದೆ 
ನಗು ಉಳಿದು

*****

ಪ್ರೀತಿಯ ಹುಡುಗ 
ಪಕ್ಕದಲ್ಲೇ ನಿಲ್ಲಲು
ಎದುರಿನ ಕ್ಯಾಮರವೂ 
ಅದೇಕೋ ಕಣ್ ಹೊಡೆದಂತೆ
ನನಗೋ ಸಂಶಯ!

*****

ವಕ್ರರೇಖೆ ಚಿತ್ರಕ್ಕೆ ಕಾರಣ
ಎಲ್ಲಾ ಚಿತ್ರಣವೂ ವ್ಯಂಗ್ಯವೇ ಹೇಳದು

*****

ಈ ಗಾಳಿ, 
ಮೈ ಮನದೊಳು ಸುಳಿದಾಡಿ
ವಿರೂಪದೊಳು 
ರೂಪ ನಿರ್ಧರಿಸಿ
ಕೂಡಿಸಿ ತಂತು, 
ಮೀಟಿ ಮೌನ
ಕಾಡುತ್ತಿದೆ ಪ್ರೇಮ
ಅವನ ಬಯಸಿದಂತೆ
ಸೇರಿಸಿ 
ಬಗೆ ಬಗೆ ಚಿತ್ರಗಳ
ಈ ಕನಸ ಕೊಂಡಿಗೆ
ತೂಗಿದೆ ಈ ಗಾಳಿ, 
ಮನಸ ತೇಲಿಸಿ, ಹಾರಿಸಿ..!

*****

ಸದಾ ತಮ್ಮತನವನು
ಮುಚ್ಚಿಟ್ಟುಕೊಳ್ಳುವುದೇ ಆದರೆ
ಈ 'ಬದುಕು' ಇರುವುದಾದರೂ ಏಕೆ..?!
ಬದುಕುವುದಾದರೂ ಎಂದು.?!

20/06/2015

Friday, 19 June 2015

ಕವನ

ಅಂದ ಸುಗಂಧ!


ಮಲ್ಲಿಗೆ ಬನವನ್ನು
ಸುತ್ತಿ ಸುತ್ತಿ 
ಮೊಲ್ಲೆ ಹೂವ ಆರಿಸಿ 
ಮುಡಿದು
ಬರುವ ಗೆಳತಿಯರ 
ಉನ್ಮಾದ ತರಿಸೊ ಸೊಬಗು
ನೆಲ ಮುಟ್ಟದ ಗರಿಮೆ
ಚುರುಕಿನ ಚತುರೆಯರ
ಮೈ ಘಮ 
ಮಧುರ ಮಲ್ಲಿಗೆ ಸುಗಂಧ!

ನಾನೋ ಹಸಿ ಹಸಿಯ 
ಪಾಚಿಯ ಬಳಸಿ ಬಂದು
ಕೈ ಕಾಲು ಹೂತುಕೊಂಡು 
ನಡೆಯು ನಿಧಾನ
ಮೈಯೆಲ್ಲಾ 
ಕೆಸರ ವಾಸನೆಯೇ ನಿಜ
ಮನವೂ ಮಣ್ಣ ಹದ
ಹಿಡಿದು ಎರಡೂ ಕೈಗಳು 
ತಾವರೆ ಹೂ ಅಂದ .. !

19/06/2015

Thursday, 18 June 2015

ಕವನ

ಬಹುಶಃ
ನಾನಿನ್ನ ಪ್ರೀತಿಸುತ್ತೇನೆ
ನಾನೇ ಅಂತಿಮವಲ್ಲ ಎನ್ನುವ
ನಿನ್ನ ನಮ್ರ ಮಾತಿನಲ್ಲೂ 
ನನಗೆ ನಿನ್ನ ಕಾಳಜಿಯೇ
ಕಾಣುವುದು.
ನನಗೂ ಕಾಳಜಿಯಿರುವ ಕಾರಣ
ನಿನ್ನ ಮಾತ ಅಲ್ಲಗಳೆಯಲಾರೆ
ಹಾಗೆಂದು
ದೂರವೇ ಆಗಿ
ನೊಂದು ಬಾಳಲಾರೆ
ನಾನಿನ್ನ ಪ್ರೀತಿಸುತ್ತೇನೆ.. 
ಜೊತೆಗೂಡಿ
ಪರಸ್ಪರ ಕಾಳಜಿಗಳಾಗಲು 
ಬಯಸುತ್ತೇನೆ..

18/06/2015


ನಿರಾಶೆ ದುಃಖ 
ಹತ್ತಿರವೆನಿಸಿದಾಗ
ವೇದಾಂತವೊಂದೆ 
ಸಂಭಾಳಿಸುವ
ಪ್ರಾಮಾಣಿಕ ಪ್ರಯತ್ನವ 
ಮಾಡುವುದು
ಭಾವಗಳೆಲ್ಲಾ 
ಸೂಜಿ ಮೊನೆಯಾಗಿ
ನೆನಪು ಘಳಿಗೆಗಳ 
ಅಡಿಗಡಿಗೆ ನೆನಪಿಸಿ
ನಾಟುತ್ತಲಿರಲು...

17/06/2015

Wednesday, 17 June 2015

ಎಲ್ಲಾ ಅಂತ್ಯಗಳ ನಂತರವೂ
ನನ್ನ ಜೀವನವಿದೆ
ಮರೆತು ಒಮ್ಮೊಮ್ಮೆ ಅಂತ್ಯಗೊಂಡಿದ್ದೆ
ಅಂತ್ಯಗೊಳ್ಳುವ ಮುನ್ನ ಪ್ರಾರಂಭವಾಗಿದ್ದೆ
ಹೌದು ಯಾವುದೂ ಅಂತಿಮವಲ್ಲ!

ಕವನ




ಬಾಚಿ ತಬ್ಬಿಕೊಳ್ಳುವಂತೆ
ಹಬ್ಬಿತ್ತು
ಮೋಡದ ಮುಸುಕು
ಕಿರಣಗಳೋ ಕತ್ತರಿಸಿ
ಕರಗಿಸಿತ್ತು ಬಾಹುಗಳ
ಮನಸ್ಸು
ಮುಮ್ಮಲ ಮರುಗಿ ಮುದುಡಿ
ಗಾಳಿಯೋಳ ತೇಲಿ ಹೋಯ್ತು..
ಸೂರ್ಯನ
ಬಿಟ್ಟು ಹೋಗಲಾರದೆ
ಅಲ್ಲಲ್ಲಿ ಮಳೆ ಚೆಲ್ಲಿ
ಹಸಿರೆಲೆಯ
ಮುತ್ತಾಯ್ತು ಹೊಳೆದು
ಪ್ರಖರತೆಗೆ ಆವಿಯಾಗಿ
ನೇಸರನೆಡೆಗೆ
ಕೈ ಚಾಚಿ
ಏರುತ್ತಲಿದೆ ಮತ್ತೆ ಮತ್ತೆ ಮೋಹಿಸಿ...

17/06/2015

ಕವನ

ತುಂತುರು ಮಳೆ ಹನಿ

ಎದೆಯೊಳಿದ್ದ ಬಿಸಿ ಹಬೆಯ 
ತಿರುಚೆಲ್ಲಾ ಚುರ್ರೆಂದು ಉರಿದು 
ಹಾರಿ ಹೋದಂತೆ
ಈ ತುಂತುರು ಮಳೆ ಹನಿಯ 
ಮೊದಲ ಸಿಂಚನ

ಮತ್ತೆ ಒಲವಾದಂತೆ 
ಈ ಹನಿಗಳೊಂದಿಗೆ
ಕಣ್ಮುಚ್ಚಿ ಮೊಗವೊಡ್ಡಿ 
ಆಹ್ಲಾದಿಸುವ ಮನಸ್ಸು
ಹನಿಗಳೆಲ್ಲ ಹೊರಳಾಡಿ ತಂಪಾಡಿ 
ಕಣ್ಣೆವೆಗಳ ರೆಕ್ಕೆ ಬಡಿತ

ಆರ್ಭಟವಿಲ್ಲ ಮಿಂಚಿ ಗುಡುಗಿ 
ಹೆದರಿಸಲಿಲ್ಲ
ಪನ್ನೀರ ಹನಿಯಾಗಿ 
ಉದುರುತ್ತಲಿವೆ ಹೂವಂತೆ
ನಾ ಬಯಸಿ ನಿಂದೆನೋ ಎಂಬಂತೆ 
ಮನವ ತೋಯ್ಸಿ

ಕಣ್ ಹನಿಗಳೊಂದಿಗೆ 
ಹನಿ ಸೇರಿಸಿ ಕಳೆದೇ ಹೋದೆನೆಂದಿದ್ದೆ
ಹನಿ ಬಿದ್ದು ತೆನೆಯಾಯ್ತು 
ಭಾವ ಬೆಸುಗೆಯ ಹೊಲಕೆ
ಹಗುರಾದ ಎದೆಯ ಹರವಿನೊಳು 
ಮೊಳೆತೆ ನೀ ತುಂತುರು ಮಳೆ ಹನಿಯೇ 
ನವ್ಯ ಚೇತನವಾಗಿ ದಿವ್ಯ ಚೇತನವಾಗಿ
ಹನಿ ಹನಿದು, ಹನಿ ಹನಿದು 
ಮನವ ಬೆಳಗಿ

17/06/2015


ಕೈ ಬಾಯಿಗೆ ಬೀಗ ಜಡಿದು
ಕನಸಿಗೆ ಮಾತು ಕಲಿಸಿ
ಪ್ರೀತಿಗೆ ಹೊಸ ಭಾಷೆಯಿಟ್ಟು
ಬಯಕೆಗಳ ಬೇಲಿ ಒಡೆದು
ನಾ ಬಿಟ್ಟ ರಂಗವಲ್ಲಿಯ ಸುತ್ತ ದೀಪವನಿಟ್ಟವನೀಗ
ಕೂತನೀ ಎದೆಯಲಿ
ಕೈ ಬಾಯಿಗೆ ಬೀಗ ಜಡಿದು..
ಮುನಿಸಿನಲಿ....

17/06/2015


ನನ್ನವರು
ಎನ್ನುವವರೆಲ್ಲಾ
ತಿರುಗಿ ಬಿದ್ದರು
ನಾನೀಗ ಬೇರೆಯಾಗಿ
ಮುಂದೊಬ್ಬಳೇ..
ಎನಿಸುವಾಗಲೆಲ್ಲಾ
ಮೋಡ ಬಿಟ್ಟ ಹನಿಯ ಕತೆ ನೆನಪು... !

*****


ಯೋಚಸದೇ ಆಗುವುದು
ಪ್ರೀತಿ ಎಂದರೆ
ಯೋಚಿಸಿ ಆದರೆ ಮದುವೆ
ಎಂದನವ ನನ್ನವ!..


******


ನಿರೀಕ್ಷೆಗಳು ನಿರೀಕ್ಷಿಸುತ್ತಾ
ಕ್ಷೀಣಿಸುವುದಾದರೆ
ನಿರೀಕ್ಷಿಸುವುದೇ ಸರಿ
ತುಸು ಗ್ರಾಸವನ್ನೂ ಸಹಿಸಿ
ಬತ್ತಿ ಹೋದ ನಿರೀಕ್ಷೆಗಳು
ಮತ್ತೆಂದೂ ಉಸಿರೆತ್ತದೆ ಉಳಿದು
ಯೋಗಿಯಂತಾಗಲಿ ಮನವು!

*****

ಹೆಣ್ಣೊಬ್ಬಳ ಅಹಂ 
ಎನಿಸೊ
ಪುರುಷರೆದುರ ಸ್ವಾಭಿಮಾನವ
ಹುಟ್ಟಡಗಿಸೋ 
ಅವಳ ಸುತ್ತ ಹೆಣೆದ 
ಸಂಶಯಗಳ ಜಾಲ ಕಂಡು 
ನಗು ಉಕ್ಕಿ 
ಎನಗೋ ಉನ್ಮಾದ..

16/06/2015

Monday, 15 June 2015

ಕವನ

ನಗು


ದಿನಗಳು ಹೀಗೆ ನಗುತ್ತಿದ್ದವು
ಎಂದು ತಿಳಿದಿದ್ದರೆ
ಆ ದಿನಗಳು
ನಾನು ಅಳುತ್ತಿರಲಿಲ್ಲ!

ಗೊತ್ತಿಲ್ಲದೆ ಒಂದಷ್ಟು ಸೋತಿದ್ದೆ
ಒಂದಷ್ಟು ಸೋರಿದ್ದೆ
ಕ್ರಮೇಣ ತುಂಬುವ ಹೊತ್ತಿಗೆ
ಸೋರದ ಸೋಲದ ನಗುವ ಹೊತ್ತೆ; ಈ ಹೊತ್ತು!

ಗೊತ್ತಿಲ್ಲದ ದಿನಗಳು
ಹೌದು ಮುಂದೆಯೂ,
ಸೋತರೂ ಸೋಲಿಸಿದರೂ 
ನಗುವೊಂದೆ ತಾಕತ್ತು 
ಬದುಕಿಗೆ
ಪ್ರೀತಿ ತಾ ತುಟಿ ತಾಕಿರಲು

ಹೀಗೆ ನಿರಾಳವೇ ನಾನಾಗಿ 
ಇರುವೆನೆಂದು ತಿಳಿದಿದ್ದರೆ 
ಅಂದು ಭಾರವಾಗಿ
ಭೂಮಿಗೆ ಬಾಗುತ್ತಿರಲಿಲ್ಲ
ನೆಲ ಮುಟ್ಟಿ ಹುದುಗುತ್ತಿರಲಿಲ್ಲ!

ಬೇರಿನಂತೆ ಕತ್ತಲೊಳು ಇಳಿದು
ಬೆಳಕಿಗೆ ತೆರೆದುಕೊಂಡವೆಲ್ಲವೂ
ಹಸಿರಾಯ್ತು ಒಮ್ಮೆ ಉಸಿರಾಯ್ತು
ಚಿಗುರು, ಮೊಳೆ, ಬೆಳೆಯಾಯ್ತು
ಬಯಲ ಎದೆಯ ಕಂಪಾಯ್ತು

ಅಳು ಬಿತ್ತಿ ನಲಿವೂ ಬೆಳೆಯಾಗಿ
ಕನಸ ಕಂಡಿರುವೆ
ಅಳಬಾರದಿತ್ತು; ನಗುವ ಭರವಸೆಗಳ ಬಿಟ್ಟು...
ಈಗ ನಗುವೊಂದನ್ನೇ ಕೈಲಿ ಹಿಡಿದು
ಕಾಣುತ್ತಲಿರುವೆ ಹತ್ತು ಹಲವು ಕನಸುಗಳನು
ಒಂದು ನಗುವಿಗೆ ಹತ್ತು ಕಾರಣಗಳು ಹುಟ್ಟಿಕೊಂಡು..

14/06/2015
ಹೊರಗೆ 
ಸಣ್ಣಗೆ 
ಮಳೆ ಹನಿವ ಸದ್ದು;
ಒಳಗೆ 
ಪದಗಳೊಂದಿಗೆ ಸರಸ 
ನಿನ್ನ ನೆನೆದು!

13/06/2015

Saturday, 13 June 2015

ಕವನ

ನೀನಷ್ಟೇ..


ನನಗೆ ನಾನೀಗ
ಹೆಚ್ಚು ಪ್ರಿಯಳು
ನನ್ನೊಳಗೆ ನೀನು
ಸುಳಿದಾಡಿ
ಅದರ ಸುದ್ದಿ
ಎಲ್ಲೆಡೆ ಹರಿದಾಡಿ
ನನಗೆ ನಾನೀಗ
ಅದೇನೋ ದೊಡ್ಡಸ್ತಿಕೆ!

ಪ್ರೀತಿಸುತ್ತಿರುವೆ ನಿನ್ನನು
ನಿನ್ನೊಳ ನನ್ನನೂ!
ಹೆಚ್ಚು ಕಾಳಜಿವಹಿಸಿ
ನಡೆಯುತ್ತಿರುವೆ 
ನಿನ್ನ ನಡೆಯೂ 
ಬೆರೆತಂತೆ ಈ ನಡೆಯೊಂದಿಗೆ...

ಲಘುವಾಗಿ ಕಣ್ ಹನಿದರೂ
ದೀರ್ಘವಾಗಿ ಚುಂಬಿಸಿರುವೆ
ಮರೆತು ಜಗವನು
ನಿನ್ನನ್ನಷ್ಟೇ
ನೀನಷ್ಟೇ
ಉಳಿದು ಕಣ್ ಮನಗಳಲಿ...!

13/06/2015

ನಕ್ಕು ನಲಿವ ರೀತಿಯೇ
ಪ್ರೀತಿಯಲ್ಲ
ನಗುವ ನಿಲ್ಲಿಸಿ 
ಮನವ ಬಯಸಿ ನೋಯುವ
ಕ್ಷಣವೂ ಪ್ರೀತಿ ರೂಪಕವೇ
ಕನಸ ಕಣ್ಣು ತೆರೆಯಲು
ಮನದ ಸ್ವಾರ್ಥ ಮರೆಯಲು
ಪ್ರೀತಿ ಅಡಿಗಡಿಗೂ ಮುತ್ತನಿಟ್ಟಿದೆ!

12/06/2015

ಕವನ

ಅಪರಿಚಿತೆ!


ತಿರಸ್ಕರಿಸಿ
ಬಿಟ್ಟು ಕೊಟ್ಟಿತ್ತು 
ಬದುಕಿಗೆ ,
ಅರ್ಥ ತಿಳಿಯದೆ..

ಆ ನೆಡೆದು ಬಂದ 
ಹಾದಿಯಲ್ಲೆಲ್ಲಾ
ಇನ್ನೂ 
ನಾನೊಂದು 'ಅಪರಿಚಿತೆ'!

ಅರ್ಥಕ್ಕೂ ಕಲ್ಪನೆಗೂ ನಿಲುಕದೆ
ಎಷ್ಟು ದೂರವಿದ್ದವು ಪರಸ್ಪರ
ನಡೆ ಮತ್ತು
ಆ ದಾರಿಗಳು?!

ನನ್ನೆದುರು
ಹೆಜ್ಜೆ ಗುರುತ ನುಂಗಿ ನಿಂತವು
ಕುತೂಹಲವೊಂದನ್ನಷ್ಟೇ 
ಉಳಿಸಿಕೊಂಡು ಇಂದಿಗೂ!

12/06/2015

Wednesday, 10 June 2015

ಕವನ

ಯಾವ ಪಾತ್ರವೋ

ಎಷ್ಟು ತಡೆದರೇನು
ಆಗುವ ಅನುಕೂಲ -ಆಘಾತಗಳು
ಎಲ್ಲವೂ
ಒಂದು ರೀತಿಯ
ಕೈ ಮೀರಿದವು!

ಹಣೆಯ ಬರಹವನ್ನು
ಮತ್ತೆ ಮತ್ತೆ ಮುಟ್ಟಿ ನೋಡಿಕೊಳ್ಳುವಂತೆ
ಆಗಾಗ ತಲೆ ಬಾಚಿ ಬೊಟ್ಟಿಟ್ಟುಕೊಳ್ಳೊ
ಪ್ರಯತ್ನಗಳು
ಎಷ್ಟು ಏಳುವುದೋ
ಮತ್ತೆಷ್ಟೆ ತೆವಳುವುದೋ...

ಅಂದುಕೊಂಡಂತೆಲ್ಲಾ ಏನೂ ಇಲ್ಲದೆ
ಆಗದ್ದು ಆಗಿ ಹೋಗಿ
ಆಗದಕ್ಕೆ ಕೊರಗಿ ಕೊರಗಿ ತಲೆ ಬೇನೆ
ಹೊಟ್ಟೆ ಕಿವುಚಿ ಸಂಕಟ...

ಯಾವುದನ್ನೂ ತಡೆಹಿಡಿಯಲಾಗದು
ನೋವನೂ ಹಾಗೆಯೇ ನಲಿವನು
ಯಾರ ದೃಷ್ಟಿಯೋ, ನಿಟ್ಟುಸಿರೋ
ಬಸಿರು ಕಟ್ಟಿ ಹಿಂಡುವ ಕರುಳು..

ಎದುರು ಕಣ್ಣರಳಿ ನಿಲ್ಲೋ 
ಅನೇಕ ಪ್ರೇಕ್ಷಕರು
ನನ್ನದಿದು ಯಾವ ಪಾತ್ರವೋ... 
ಪ್ರಶಂಸೆಗಳು ನಿರಂತರ...

09/06/2015

ಕವನ

ಚಿತ್ತಾರ


ಬೆಳಗಾಗೆದ್ದು ಕಣ್ಬಿಡೆ
ಸೆಳೆಯೋ
ಬಿಳಿ ಹಾಸಿಗೆಯ
'ಚಿತ್ತಾರ'
ಪೃಕೃತಿಯ ವರವೆನ್ನೋ
ಹೆಣ್ತನ
ಹೆಚ್ಚಾಗಿ ಉಕ್ಕಿದ
ಭಾವೋದ್ವೇಗ
'ಕಲೆ'ಯೆಂದರೂ
ಬಚ್ಚಿಡುವಂತಹುದು
ಮಾತಿಗೂ ನಿಲುಕದ
ನೋವಿನೊಳಗಿನ
ಪುಳಕ, ಸಂಕೋಚವಷ್ಟೇ...
ರಜಸ್ವಲೆಯ ಮನಸ್ಸು..

09/2015

Tuesday, 9 June 2015





ರಾತ್ರಿ ಕನಸಿನಲಿ 
ಅವನು ಬಂದಿದ್ದನು
ಅವನು 
ಪ್ರೇಮಿಯೇ ಎನ್ನಲು
ಸಾಕ್ಷಿಯಾಗಿತ್ತು 
ತುಟಿ ಮುತ್ತಿನ ಪ್ರಯತ್ನಗಳು!...

******

ಈ ಕಣ್ಣು ಮನಸ್ಸು 
ಜೀವಂತವಿರುವವರೆಗೂ
ತಿರಸ್ಕಾರ ನಿಂದನೆ 
ಹೊಸದೊಂದು ಚಿಂತನೆಯಷ್ಟೇ!

08/06/2015


******

ಈ ಕೈಗನ್ನಡಿಗೆ
ಬೆಳಕು 
ಹರಿಯಬಾರದಿತ್ತು
ಹೊಳೆದಂತೆ 
ನೀನು 
ಕಂಡೆ
ವಜ್ರ ಹೃದಯ 
ಸಾವಿರ ಪ್ರತಿಫಲಿಸಿದೆ! 

*****

ದಾರಿ ಪೂರ ಕಾಮನಬಿಲ್ಲಂತ ನವಿಲುಗಳೇ
ನೋಡುತಾ ಸಾಗುವಾಗ
ಬಳಿ ಸುಳಿಯದ ಕನಸುಗಳೆಲ್ಲಾ
ಆಗಸವೇರಿ ನಿಂತವು
ರಾತ್ರಿಯಲ್ಲದಿದ್ದರೂ ನಕ್ಷತ್ರಗಳಿದ್ದವು!

07/06/2015

ಕವನ

ಇದು ನಾನಲ್ಲ!

ಸಹಿಸದ ಕಣ್ಣನ್ನು
ಒರೆಸುವ ಶಕ್ತಿ ಎನಗಿಲ್ಲ
ಹರಸುವ ಮನಗಳಿಗೆ
ಎನ್ನ ಕಣ್ಣ ಕಾಡಿಗೆಯ ದೃಷ್ಟಿ ಬೊಟ್ಟು!

ಕಾಡುವ ಸಾಲುಗಳನು
ಎದೆಯೊಳಿಟ್ಟು ಪೂಜಿಸುವೆನು
ಕದಡಿದ ಮಾತುಗಳ ಬಿಟ್ಟುಕೊಟ್ಟೆ
ಹೃದಯ ಹರಿಕೊಟ್ಟು!

ಅವರಿವರ ಕಣ್ಣುಸಿರ ಕಸಿದು
ನಿಂತಿದ್ದೆ; ಅದು ಶಾಪ
ಕಣ್ಣೊಳಗೆ ಬಿಂದವೇ ಮಸುಕು
ಉಸುರಿ ಆಗಾಗ ನಿಂತ ನೆಲವೇ ಬಿರುಕು!

ಕಣ್ಣೊರೆಸುವ ಕೈಯಿಲ್ಲ ಎನ್ನಲಿ
ಮಡುಗಟ್ಟಿದೆದೆಯಲಿ ಹರಿಯದ ವಿಷಾದ
ಹನಿಗಳಿದ್ದರೂ ತೂಗದ ಭಾವ
ಭರ್ತಿಯಾಗಿ ನಿಂತಿದೆ ಸಿಡಿದುಬಿಡಲೆಂಬ ಹಂಬಲವು!

ಇದು ನಾನಲ್ಲ
-ವೆಂದು....

07/05/2015

ಕವನ

ಮುತ್ತು


ಬೆಳ್ಳಂಬೆಳಗ್ಗೆ 
ಮುತ್ತಿನ ಓಲೆ ಹರಿದು 
ಕೈ ತಡವರಿಸಿದಾಗಲೇ 
ಅನಿಸಿತ್ತು
ಸಂಜೆಗೆ ಮುತ್ತಿನ 
ಹನಿಗಳಿವೆಂದು
ಬಾಚಿಕೊಳ್ಳಲು 
ನನ್ನದೇ ಕಣ್ ದೃಷ್ಟಿ 
ಮುತ್ತೆಲ್ಲಾ ಚೆಲ್ಲಾಡಿವೆ 
ಕೈ ಬಾರದು
ಅದರ ಕುಣಿತವ 
ತಣಿಸಿ ಹಿಡಿಯಲು
ಸೋಲದ ಹೊತ್ತು 
ಗೆದ್ದ ಅನೇಕ ಮುತ್ತುಗಳು!

07/05/2015
ಅವ ನನ್ನನು
ಸಿಕ್ಕು ಸಿಕ್ಕಾಗಿಯೇ 
ಕಾಣುತ್ತಾನೆ
ಬಿಡಿಸಲೆತ್ನಿಸಲು
ನುಲಿದಾಡುವಂತೆಯೇ
ಭ್ರಮಿಸುತ್ತಾನೆ
ಸುತ್ತಿ ಬಳಸಲು!

*****

ಚುಕ್ಕಿಗಳು ದೂರದಿಂದ 
ಕಂಡ ಮಾತ್ರಕ್ಕೆ 
ಅದು ಚಿರತೆಯೇ ಆಗಿರಲಿಲ್ಲ
ಜಿಗಿಯುವ 
ತುಂಟ ಜಿಂಕೆಯಾಯ್ತು ಬರು ಬರುತ್ತಾ
ನಂಬಿಕೆ ಎನ್ನುವುದು
ಅದು ಏಕೆ ಹೇಗೆ ಬದಲಾಯ್ತೋ
ಈ ಕಣ್ಣಳತೆಗಳಲ್ಲಿ ...

05/06/2015

Friday, 5 June 2015

ಕವನ

ನಿನ್ನೆದೆ ಮಲ್ಲಿಗೆಯೊಳು


ಕಣ್ಣ ಬಿಂದುವಿಗೆ
ಸೂಜಿಯಂತ ಮೊಗ್ಗು
ಮುತ್ತಿಗಾಗಿ ಅರಳಿ ನಿಂತು
ಘಮ್ಮೆನ್ನುತಿರೆ
ಜಗವೊಂದು ಸೂಜಿ ಮಲ್ಲಿಗೆ

ಈ ಕಣ್ಣ ತುಂಬ ಮಲ್ಲಿಗೆ ಕನಸು 
ಪ್ರತಿಫಲಿಸದು
ಯಾವುದೊಂದೂ ಜಗದ ಕಲಾಪ
ಈ ಮನದೊಳು
ಕಟ್ಟಿಕೊಂಡು ಮಲ್ಲಿಗೆ ಮಾಲೆ

ಮನದ ಮಲ್ಲಿಗೆ
ಒಲುಮೆಯೊಳು ಅರಳಿ
ಜಗದಗಲ ಹೊಮ್ಮಿದಂತೆ
ಹುದುಗಿಕೊಂಡೆ
ನಿನ್ನೆದೆ ಮಲ್ಲಿಗೆಯೊಳು
ಘಮಲಿನಂತೆ ...
ಮತ್ತೆ ಮತ್ತೆ ಅಮಲಿನ ಗುಂಗಿನೊಳಗೆ

04/06/2015

ಕವನ

ಅದ್ಭುತ


ಅದ್ಯಾವುದೋ ನನ್ನ ಸಾಲನು
ನೆನೆದು ನೀ ಪ್ರಶ್ನಿಸುವಾಗ
ನಾನೋ ನಾಚುವ ಹೊತ್ತು

ಏನು ಅರ್ಥವಿತ್ತೋ ನನ್ನ ಸಾಲಿನದ್ದು
ಅದೇನು ಮೋಜಿತ್ತೋ ನಿನ್ನ ಕಲ್ಪನೆಯೊಳು

ಅನುಭಾವಿಸಿ 
ಚಿಮ್ಮಿದಂತೆ ಕೆಂಪು ಕೆಂಪಾದೆಯಲ್ಲ
ಕ್ಷಣ ಕ್ಷಣಕ್ಕೂ ಉಕ್ಕಿ
ಅದು
ನಾ ಕಂಡ ಮೊದಲ ಅದ್ಭುತ!

02/06/2015
ನಗುವ ಗುಲಾಬಿಗೆ
ರಂಗು ತಂದದ್ದು
ನೋವು ಕೊಟ್ಟ ಮುಳ್ಳುಗಳೇ
ಎನಿಸುವಾಗ
ಇದ್ದಷ್ಟು ಹೊತ್ತು ನೋವು 
ನಲಿವೂ ಹೌದು!

01/06/2015