ಯಾವ ದಿಕ್ಕಿಗೆ?!!
ಬೆಳಗ್ಗೆ ಎದ್ದೊಡನೆ ಕಣ್ಣಿಗೆ ಬಿದ್ದ
ಅತ್ಯಾಚಾರದ ಎರಡು ಸುದ್ದಿಗಳು.
ಒಂದು ಶಿಕ್ಷಕನಿಂದ ಶಾಲೆಯಲ್ಲಿ ಮತ್ತೊಂದು
ಅಪ್ಪನಿಂದ ಮಗಳ ಮೇಲೆ ಮನೆಯಲ್ಲೇ!.
ಅಲ್ಲೇ ಪಕ್ಕದಲ್ಲೊಂದು ವ್ಯಂಗ್ಯ ಚಿತ್ರ
ಶಾಲೆಯಿಂದ ಹೊರಡುವ ವೇದನೆಯ ಕೂಗಿಗೆ
ಹೆದರಿ ಎದ್ದು ಬಿದ್ದು ದೂರ ಓಡುವ ಬಾಲಕಿ!
ಶಾಲೆಯ ದಿಕ್ಕಿಗೆ ಆಸೆ ಕಂಗಳ ಕಂದಮ್ಮಗಳ
ಕನಸಿತ್ತು ಚಿತ್ರಕಾರರ ಕಣ್ಗಳಲಿ
ಶಾಲೆಯೆಡೆಗೆ ಸೆಳೆವ ಗುರಿಯಿತ್ತು ಶಿಕ್ಷಕರಲಿ
ಈಗೆಲ್ಲಾ ಭೀಕರವೆನಿಸೋ ಶಾಲೆಯ ಚಿತ್ರಣ
ಮನಗಳಲ್ಲೂ ಕಲೆಗಾರರಲ್ಲೂ;
ಶಾಲೆ ಎಂದರೆ ಹೆದರುವ ಸ್ಥಿತಿಗೆ ಪುಷ್ಠಿ ನೀಡಿ
ಎತ್ತ ಸಾಗಿಸುತ್ತಿದ್ದಾರೆ ಶಿಕ್ಷಣದ ಗುರಿಯಾ?
ಶಿಕ್ಷಣವೆಂಬುದು ಕೇವಲ ಶಿಕ್ಷಕನ ಗುರಿಯೇ
ಸಮಾಜವೆಲ್ಲಿ ಕಳೆದು ಹೋಯ್ತೋ ಕರ್ತವ್ಯ ಸಡಲಿಕೆಗಳಲಿ
ರಣ ಚಂಡಿಯಂತ ಆ ಆಂಟಿಯದು
ಒಂದೇ ಅಬ್ಬರಗಳ ಹೊಡೆತ
ಆ ಕೊಳಗೇರಿಯ ಹಾದು ಹೋಗುವಾಗ
ಕೇಳಿಬಂದ ಹಿಂದಿನ ದಿನದ ಇಳಿ ಸಂಜೆಯ ನೆನಪು;
ಎಂತ ಗಂಡನಯ್ಯಾ ನೀನೂ ಮುದಿ ಗೂಬೆ ನೀನು
ಐವತ್ತಾದ ಮೇಲೂ ಹೆಂಡತಿ ಸತ್ತಳೆಂದು
ಎರಡನೇ ಹೆಂಡತಿ ಬೇಕಿತ್ತೇನಯ್ಯಾ?! ಮುದಿಯಾ,,
ನೋಡು ಅಪ್ಪ ಮಗಳ ಮೇಲೇಯೇ ಕಣ್ಣು
ಹಾಕಿದ್ದನಂತೆ
ಬಿಟ್ಟರೇ ನೀನೂ ಅಂತವನೇ
ಈ ಎಪ್ಪತ್ತರಲ್ಲೂ
ಮನೆ ತುಂಬಾ ಹೆಣ್ಣು ಮಕ್ಕಳೇ ನಿನಗೆ,,
ಛೇ ಛೇ,,
ಎಂದೊಂದೇ ಉಸಿರಿಗೆ ಬಡಿದಾಡುತಿದ್ದಳು
ನಾಲಿಗೆಯೊಡನೆ ಅವಳ ಕೊಳಕು ಮೆದುಳೂ..
ಏದುಸಿರ ಜೀವ ಕಣ್ಣೀರಾಯ್ತೋ ಏನೋ
ಮಬ್ಬುಗತ್ತಲೊಳು ಆ ಹಿರಿ ಜೀವದ ಭಾವ
ಕಲ್ಪನೆಗೆ ಹಿಡಿಯಲಾಗಲಿಲ್ಲ
ಜಗತ್ತು ಪ್ರತಿಕ್ರಿಯಿಸುತ್ತಲಿದೆ, ಪ್ರತಿಭಟಿಸುತ್ತಲಿದೆ
ಯಾವ ದಿಕ್ಕಿಗೆ? ಯಾವ ರೀತಿಯಲಿ? ಎಂತಹ ಆಕ್ರೋಶದಲಿ?
ಯಾರ ಮೇಲೆ? ಯಾರ ಪರಾರಿ ಮಾಡಿ? ಯಾರನು ಶಿಕ್ಷಿಸಿ?!
ದೀರ್ಘ ನಿಟ್ಟುಸಿರಲಿ ಚಿಂತನೆ ಸಾಗಿದೆ!!
05/11/2014