ಯು.ಆರ್. ಅನಂತಮೂರ್ತಿಯವರ ಭಾರತೀಪುರ
ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ.
ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ ನಾಯಕನ ಬಗ್ಗೆ ಅಸೂಯೆ ಭಾವ ಹೊಂದಿದ್ದು ಅವನೊಟ್ಟಿಗೆ ವ್ಯಾಸಂಗ ಮಾಡುತ್ತಿರುತ್ತಾನೆ. ಈ ಮೂವರಲ್ಲಿಯೂ ಸ್ನೇಹವು ಗಾಢವಾಗಿರುತ್ತದೆ.
ಉನ್ನತ ಶಿಕ್ಷಣದ ನಂತರ ‘ಭಾರತೀಪುರಕ್ಕೆ’ ಮರಳಿ ಬಂದಂತಹ ಜಗನ್ನಾಥನಿಗೆ ‘ಭಾರತೀಪುರ’, ಮೌಡ್ಯತೆಯ ಆಗರವಾಗಿ ಕಾಣುತ್ತದೆ. ಶೂದ್ರರ ದೇವ ಭೂತರಾಯ, ಭೂತರಾಯನ ಒಡೆಯ ಮಂಜುನಾಥಸ್ವಾಮಿ ಹೀಗೆ ಮೇಲ್ವರ್ಗದ ಜನಾಂಗ ಶೂದ್ರರನ್ನು ತಮ್ಮ ನಿಯಂತ್ರಣಕ್ಕೆ ಅನಿವಾರ್ಯವಾಗಿ ಒಳಪಡಿಸಿರುತ್ತಾರೆ. ಭಾರತೀಪುರದಲ್ಲಿ ಮಲ ಹೋರುವ ಹೊಲೆಯರಿರದಿದ್ದರೆ ಈ ಪುರವೆಲ್ಲಾ ಕೊಳೆತು ನಾರುತ್ತಿತ್ತೇನೋ ಎನಿಸುತ್ತದೆ. ಹೊಲೆಯರಿಂದಲೇ ಶುದ್ಧವಾಗುವ ಊರು, ಅವರು ಮಂಜುನಾಥ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದರೆ ಅಪವಿತ್ರವಾಗುವುದಾದರೂ ಹೇಗೆ? ಎಂದು ಯೋಚಿಸುತ್ತಾನೆ. ಬಂಡಾಯದ ಬಗ್ಗೆ ಮಾತನಾಡಿ ಮೆಚ್ಚಿಗೆ ಗಿಟ್ಟಿಸಿದ ಜಗನ್ನಾಥನಿಗೆ ಈ ಭಾರತೀಪುರದಲ್ಲಿ ಸುಧಾರಣೆ ತುರ್ತು ಅಗತ್ಯವಾಗಿ ಕಾಣುತ್ತದೆ.
ಇಡೀ ಕಥೆಯಲ್ಲಿ ಜಗನ್ನಾಥನ ಧ್ಯೇಯ ಒಂದೇ ಹೇಗಾದರೂ ಸಮಾನತೆಯನ್ನು ಸಾಧಿಸಬೇಕು. ಅದಕ್ಕಾಗಿ ಮೊದಲು ಹೊರೆಯರನ್ನು ದೇವಾಲಯಕ್ಕೆ ನುಗ್ಗಿಸಬೇಕು ಎಂಬುದು. ಆದರೆ ತನ್ನ ಮುಖವನ್ನು ತಲೆ ಎತ್ತಿ ನೋಡಲು ಹೆದರುವ ಹೊಲೆಯರು ಈ ಕಾರ್ಯಕ್ಕೆ ಸಿದ್ಧರಾಗುವರೇ? ಎಂದು ಸಂದೇಹಿಸಿ, ಮೊದಲು ಇವರಿಗೆ ಅಕ್ಷರ ಜ್ಞಾನವನ್ನು ನೀಡಬೇಕೆಂದು ತನ್ನ ಮನೆಯಂಗಳದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸುತ್ತಾನೆ. ಮಂಜುನಾಥ ಸ್ವಾಮಿಯಜಾತ್ರೆಯ ದಿನದಂದು ಹೊಲೆಯರನ್ನು ದೇವಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿ ಪತ್ರಿಕೆಯಲ್ಲಿಯೂ ಪ್ರಕವಣೆ ನೀಡುತ್ತಾನೆ. ಇದಕ್ಕೆ ಊರಿನವರಿಂದ ಹಾಗೂ ಹೊರಗಿನ ಜನರಿಂದಲೂ ಸಾಕಷ್ಟು ವಿರೋಧ-ಅವಿರೋಧ ಪ್ರತಿಕ್ರಿಯೆಗಳು ಬರುತ್ತದೆ. ನಾಯಕನಿಗೆ ಹೊರಗಿನಿಂದ ಬೆಂಬಲವನ್ನು ನೀಡಬಂದ ವ್ಯಕ್ತಿಗಳು ತಮ್ಮ ಕುಸಿಯುತ್ತಿರುವ ‘ಹಿರೋಯಿಸಮ್’ ನನ್ನು ಎತ್ತಿ ಹಿಡಿಯುವ ಸಲುವಾಗಿ ಜಗನ್ನಾಥನ ಕ್ರಾಂತಿಕಾರ್ಯವನ್ನು ಬಳಸಿಕೊಳ್ಳುವ ಸಂದರ್ಭಗಳು ಮತ್ತು ಆ ಸಂದರ್ಭಗಳಲ್ಲಿನ ನಾಯಕನ ನಿಲುವು ಓದುಗರ ಮನದಲ್ಲಿ ನಿಲ್ಲುತ್ತದೆ.
ಈ ನಡುವೆ ಜಗನ್ನಾಥನ ಗೆಳತಿ, ‘ಮನದನ್ನೇ’ಯಾಗಿದ್ದ ‘ಮಾರ್ಗರೇಟ್’, ಇಂಗ್ಲೆಂಡಿನಲ್ಲಿ ಉಳಿದಿದ್ದ ಗೆಳೆಯ (ಸದಾ ಕಾಲ ಜಗನ್ನಾಥನ ಬಗೆಗೆ ಅಸೂಯೆ ಪಡುವವ) ನೊಂದಿಗೆ ತನಗೆ ಏರ್ಪಟ್ಟು ಹೊಸ ಸಂಬಂಧವನ್ನು ತಿಳಿಸಿದಾಗ, ಜಗನ್ನಾಥ ಕುಗ್ಗಿ ಹೋಗುತ್ತಾನೆ. ಸಾವರಿಸಿಕೊಂಡು ತಾನು ಮತ್ತೆ ಮಾರ್ಗರೇಟನ್ನು ಪಡೆಯುತ್ತೇನೆಂಬ ಆಶಯವನ್ನು ದೃಢವಾಗಿಸಿಕೊಂಡು ತನ್ನ ಧ್ಯೇಯೆದೆಡೆಗೆ ಹೆಚ್ಚು ಜಾಗೃತನಾಗಿ ಕಾರ್ಯನಿರ್ವಹಿಸುತ್ತಾನೆ. ಜಗನ್ನಾಥ ಮಾರ್ಗರೇಟನ್ನು ಕಳೆದುಕೊಂಡ ನೋವನ್ನು ಓದುಗರು ಕೂಡ ಅನುಭವಿಸುವಂತೆ ಕಾದಂಬರಿಕಾರರು ಚಿತ್ರಿಸಿದ್ದಾರೆ.
ಅನೇಕ ವಿಘ್ಞಗಳ ನಡುವೆಯೂ ಜಗನ್ನಾಥನ ದೃಢಸಂಕಲ್ಪ ನಡೆದೇ ತೀರುತ್ತದೆ. ಹೊಲೆಯರು ಜಾತ್ರೆಯ ದಿನದಂದು ದೇವಾಲಯವನ್ನು ಪ್ರವೇಶಿಸುತ್ತಾರೆ. ಇದು ಪತ್ರಿಕೆಗಳಲ್ಲಿಯೂ ಸುದ್ಧಿಯಾಗುತ್ತದೆ. ಮುಂದಿನ ಹಂತವೆಂಬಂತೆ ಶೋಷಿತ ವರ್ಗದವರೊಂದಿಗೆ ರೈತರನ್ನು ಸೇರಿಸಿ ಕ್ರಾಂತಿ ಮಾಡುವ ಯೋಚನೆಯನ್ನು ನಾಯಕ ಹಾಕುತ್ತಿರುವಾಗ, ಅತ್ತ ಕಡೆ ದೇವಾಲಯದಲ್ಲಿ ಶುದ್ಧ ಮಾಡಿ ಮತ್ತೆ ಶ್ರೀ ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆಯ ಕಾರ್ಯ ಸಿದ್ಧತೆ ನಡೆದಿರುತ್ತದೆ. ಏನೇ ಕ್ರಾಂತಿ ಕಾರ್ಯಗಳಾದರೂ ಬದಲಾಗದ ಸಮಾಜ ಇಲ್ಲಿನ ಕಥಾ ವಸ್ತು.
ಕಾದಂಬರಿಯಲ್ಲಿನ ಭಾಷಾ ಶೈಲಿ ತುಂಬಾ ಇಷ್ಠವಾಗುತ್ತದೆ. ಸರಳವಾಗಿ ಭಾವನೆಗಳ ಕಲ್ಪನೆ ಮೂಡಿಸುವ ಕಾರ್ಯ ನಡಿದಿದೆ ಪ್ರತೀ ಸನ್ನೀವೇಶದಲ್ಲೂ ವ್ಯಕ್ತಿಯ ಆಂತರಿಕ ಆಲೋಚನೆಗಳು ಖಿನ್ನತೆ, ಆಸೆಗಳನ್ನು ಹಾಗೂ ಬಾಹ್ಯ ನಡೆಗಳ ಚಿತ್ರಣವನ್ನು ಒಟ್ಟೊಟ್ಟಿಗೆ ನಮಗೆ ಕಟ್ಟಿಕೊಡುತ್ತಾರೆ. ಈ ವಿಶೇಷತೆ ನನಗೆ ತುಂಬಾ ಇಷ್ಟವಾಯಿತು. ಸರಳ ಮಾತುಗಳಿಂದ ವ್ಯಕ್ತಿಯ ವಿವಿಧ ಬಲ-ದೌರ್ಬಲ್ಯಗಳನ್ನು ಪಾತ್ರಗಳ ಮುಖೇನ ನಮಗೆ ದರ್ಶಿಸುತ್ತಾರೆ. ಇದರ ಮೂಲಕ ನಮ್ಮನ್ನು ‘ಅಂತರಾವಲೋಕನ’ಕ್ಕೆ ತೊಡಗುವಂತೆ ಮಾಡಿದ್ದಾರೆ.
ಮತ್ತೊಂದು ಸಂಗತಿಯೆಂದರೆ, ಈ ಕಾದಂಬರಿಯಲ್ಲಿ ಗಂಡು-ಹೆಣ್ಣಿನ ಸಂಬಂಧವು ಪ್ರೇಮಮಯವಾಗಿರದೆ ಕಾಮಮಯವಾಗಿರುವುದು ಮನಸ್ಸಿಗೆ ಏಕೋ ಸಂಕಟವಾಗುತ್ತದೆ. ಈ ಸಂಬಂಧದಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತದೆ. ಉದಾಹರಿಸುವುದಾದರೆ, ಮನೆಯ ಆಳು ಕಾವೇರಿ, ಜೋಯಿಸರ ಸೊಸೆ ನಾಗಮಣಿಯರನ್ನು ಮೋಹಿಸುವ ಜಗನ್ನಾಥ, ತನ್ನ ಪ್ರೇಯಸಿ ಮಾರ್ಗರೇಟನ್ನೂ ಬಯಸುತ್ತಾನೆ. ಆಕೆ ಇನ್ನೊಬ್ಬನಲ್ಲಿ ಆಸಕ್ತಳಾದಾಗ ನೋಯುತ್ತಾನೆ, ಕುಗ್ಗುತ್ತಾನೆ. ಹಾಗಾದರೆ ಈತ ಯಾರಿಗೆ ಪ್ರಾಮಾಣಿಕನಾಗಿದ್ದಾನೆ? ಎಂಬುದು ಪ್ರಶ್ನೆ.
ಕಥಾ ನಾಯಕ ಜಗನ್ನಾಥ ತನ್ನೇಲ್ಲಾ ಭಾವನೆಗಳನ್ನು ಸದಾಕಾಲ ಮನಸ್ಸಿನಲ್ಲಿಯೇ ‘ಮಾರ್ಗರೇಟಿ’ಗೆ ಕಾಗದವನ್ನು ಬರೆಯುತ್ತಿರುತ್ತಾನೆ. ಇದರಿಂದ ಮಾನಸಿಕವಾಗಿ ಆಕೆ ಯಾವಾಗಲೂ ಅವನೊಂದಿಗೆ ಇರುತ್ತಿದ್ದಳು. ಇಂತಹ ಗೆಳತಿ ತನಗೆ ದ್ರೋಹ ಮಾಡಿದಳೆಂದು ತಿಳಿದು ಸಹ ಅವಳನ್ನು ಮತ್ತೆ ತಾನು ಜೀವನದಲ್ಲಿ ಪಡೆಯುತ್ತೇನೆಂಬ ಜಗನ್ನಾಥನ ಆಶಯ ಮತ್ತು ನಿರೀಕ್ಷೆಗಳನ್ನು ಇಲ್ಲಿ ಪ್ರೀತಿಯೇ ಆಗಿರಬಹುದೆಂದು ತಿಳಿದು ಸಮಾಧಾನಗೊಳ್ಳುತ್ತೇನೆ.
ಕಥಾ ನಾಯಕ ಜಗನ್ನಾಥ ತನ್ನೇಲ್ಲಾ ಭಾವನೆಗಳನ್ನು ಸದಾಕಾಲ ಮನಸ್ಸಿನಲ್ಲಿಯೇ ‘ಮಾರ್ಗರೇಟಿ’ಗೆ ಕಾಗದವನ್ನು ಬರೆಯುತ್ತಿರುತ್ತಾನೆ. ಇದರಿಂದ ಮಾನಸಿಕವಾಗಿ ಆಕೆ ಯಾವಾಗಲೂ ಅವನೊಂದಿಗೆ ಇರುತ್ತಿದ್ದಳು. ಇಂತಹ ಗೆಳತಿ ತನಗೆ ದ್ರೋಹ ಮಾಡಿದಳೆಂದು ತಿಳಿದು ಸಹ ಅವಳನ್ನು ಮತ್ತೆ ತಾನು ಜೀವನದಲ್ಲಿ ಪಡೆಯುತ್ತೇನೆಂಬ ಜಗನ್ನಾಥನ ಆಶಯ ಮತ್ತು ನಿರೀಕ್ಷೆಗಳನ್ನು ಇಲ್ಲಿ ಪ್ರೀತಿಯೇ ಆಗಿರಬಹುದೆಂದು ತಿಳಿದು ಸಮಾಧಾನಗೊಳ್ಳುತ್ತೇನೆ.
ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಸಾಮಾಜಿಕ ಕಾದಂಬರಿ. ಸಮಾಜದಲ್ಲಿನ ಮೌಡ್ಯತೆ, ಅಸಮಾನತೆ, ದಬ್ಬಾಳಿಕೆ, ಕುತಂತ್ರ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದೆ.
ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವಂತಹ, ಕಿತ್ತು ಹಾಕುವಂತಹ ಯೋಚನೆಗಳನ್ನು ನಮ್ಮಲ್ಲಿಯೂ ಹುಟ್ಟು ಹಾಕುತ್ತದೆ.
ನನ್ನ ದೃಷ್ಟಿಕೋನ, ವಿಶ್ಲೇಷಣೆಯಲ್ಲೇನಾದರೂ ದೋಷವಿದ್ದರೆ, ಎಚ್ಚರಿಸಿ ಸಹಕರಿಸಿರಿ. ಧನ್ಯವಾದಗಳು.
08/10/2012
ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಪಂಜು ಪತ್ರಿಕೆಯ ಸಂಪಾದಕರು ಮತ್ತು ಬಳಗಕ್ಕೆ ನನ್ನ ಅನಂತ ವಂದನೆಗಳು :-)
-ದಿವ್ಯ ಆಂಜನಪ್ಪ
ವಿಶ್ಲೇಷಣೆ ವಿಶೇಷವಾಗಿದೆ....ಕಾದಂಬರಿ ಓದುವ ಹಂಗಿಲ್ಲದಂತೆ ವಿಶ್ಳೇಷಿಸಿದ್ದೀರಿ...ಶುಭದಿನ !
ReplyDeleteಧನ್ಯವಾದಗಳು ಸರ್
Deleteಇದು ನನ್ನ ಮೊದಲ ಲೇಖನ ಸರ್ :-)