Thursday, 2 May 2013
ಲೇಖನ:
"ತಾಯಿ" ಎಂದರೆ ಒಂದು ಬೆಂಬಲವಿದ್ದಂತೆ, ಜಗತ್ತಿನಲ್ಲಿನ ಅತೀ ಸಧೃಡ ಬೆಂಬಲವಾಗಿದೆ. ನಮ್ಮೊಂದಿಗೆ ಯಾರೇ ಇರಲೀ, ಇಲ್ಲದಿರಲೀ, ತಾಯಿಯ ಮಮತೆಯೊಂದೇ ನಮಗೆ ಬದುಕಲು ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಜೀವನದಲ್ಲಿನ ಸೋಲು ಗೆಲುವನ್ನು ಸಮಾನವಾಗಿ ಕಾಣಲು ಈ ಆತ್ಮವಿಶ್ವಾಸವು ಸಹಕಾರಿಯಾಗಿರುತ್ತದೆ. ತಾಯಿಯೊಂದಿಗಿರುವವರಿಗೆ ನನ್ನ ಈ ಮಾತುಗಳು ಅಷ್ಟು ರುಚಿಸದಿರಬಹುದು. ಆದರೆ ತಾಯಿ ಪಾತ್ರವನ್ನು ಕಳೆದುಕೊಂಡ ವ್ಯಕ್ತಿ ಬಹುಶಃ ಹೌದೆನ್ನಬಹುದು. ಜೀವನದಲ್ಲಿನ ಯಾವುದೇ ರೀತಿಯ ಸೋಲಾದರೂ ತನ್ನ ತಾಯಿ ಮಡಿಲನ್ನು ಸೇರಿ, ಸುಮ್ಮನೆ ಮಲಗಿಬಿಟ್ಟರೂ, ಕಣ್ಣೀರ ಹನಿಗಳಲ್ಲಿ ಸೋಲೆಂಬ ನೋವು ಹರಿದು ಹೊರನಡೆದುಬಿಡುತ್ತದೆ. ತಾಯಿಯ ಕೈಗಳು ನಮ್ಮ ತಲೆಯನ್ನು ನೇವರಿಸಲು, ರಮಿಸಲು ನಾವು ಪುನಃಶ್ಚೇತನಗೊಳ್ಳಲಾರಂಭಿಸುತ್ತೇವೆ. ಮತ್ತೆ ಯಾವುದೇ ರೀತಿಯ ಸವಾಲಿಗೂ ಮೈಯೊಡ್ಡಲು ಸಿದ್ದರಾಗಿ ನಿಲ್ಲುತ್ತೇವೆ. ಅದುವೇ ತಾಯಿ ಎಂಬ ಪ್ರೀತಿ ಮತ್ತು ಬೆಂಬಲ.ಅದೇ ರೀತಿ ತಾಯಿಯಿಲ್ಲದೇ ಬೆಳೆದ ವ್ಯಕ್ಠಿಗಳಲ್ಲಿ ನಾವು ಅನೇಕ ರೀತಿಯ ಸಮಸ್ಯೆಗಳನ್ನು ಕಾಣುತ್ತೇವೆ. ಎಲ್ಲರೆದುರು ಸಾಮಾನ್ಯರಾಗೆ ಕಾಣುವ ಅವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಯಾರೊಂದಿಗೂ ಹೆಚ್ಚು ಬೆರೆಯದಿರುವುದಕ್ಕೆ ಈ ದೌರ್ಬಲ್ಯವೇ ಕಾರಣವಾಗಿರುತ್ತದೆ. ಯಾರು ಹೇಗೋ? ಹೇಗೆ ಮಾತನಾಡಬೇಕು? ಮಾತನಾಡಿದರೆ ಏನು ತಪ್ಪಾಗುವುದೋ?ಎಂಬ ಪ್ರಶ್ನೆಗಳು ಮತ್ತು ಆತಂಕಗಳಲ್ಲಿಯೇ ಅವರು ಕಳೆದುಹೋಗಿರುತ್ತಾರೆ. ಇತರರೊಂದಿಗೆ ಬೆರೆಯುವ ಹೆಚ್ಚು ಪ್ರಸಂಗಗಳಿಂದ ದೂರವೇ ಉಳಿಯಲು ಆಶಿಸುತ್ತಾರೆ. ಇದರ ಪರಿಣಾಮವು ಅವರ ವೈಯಕ್ತಿಕ ಕೆಲಸ ಕಾರ್ಯಗಳ ಮೇಲೂ ಉಂಟಾಗಿ 'ಸೋಮಾರಿಗಳು', 'ಅಹಂಕಾರಿಗಳು' ಎಂಬ ಬಿರುದುಗಳಿಗೆ ಪಾತ್ರರಾಗಿಬಿಡುತ್ತಾರೆ. ಹೊರಗಿನ ಜನರಿಗೆ ಇಂತಹ ವ್ಯಕ್ತಿಗಳು ಅಹಂ ಉಳ್ಳವರು ಎಂದೇ ಭಾವಿಸಲ್ಪಡುತ್ತಾರೆ. ಒಮ್ಮೆ ಅಂತಹವರೊಂದಿಗೆ ಆತ್ಮೀಯವಾಗಿ ವ್ಯವಹರಿಸಿ ನೋಡಿ, ಅವರಲ್ಲಿನ ಮುಗ್ದ ಮನಸ್ಸು ನಮ್ಮರಿವಿಗೆ ಬರುವುದು. ಹಾಗೇಯೆ ಅವರಲ್ಲಿನ ಪ್ರತಿಭೆಗಳು. ಮೃದು ಮನವು ಪಕ್ವವಾಗಲು ಅನುಭವಗಳೊಂದಿಗೆ ತಾಯಿ ಪ್ರೀತಿ ಎಂಬ "ಭರವಸೆ"ಯೂ ಅಗತ್ಯವೆಂದು ನನಗನಿಸುತ್ತದೆ.
.'ಹೆತ್ತವರಿಗೆ ಹೆಗ್ಗಣ ಮುದ್ದು', ಎನ್ನುವಂತೆ 'ತಾಯಿ'ಯು ನಮ್ಮ ಓರೆ-ಕೋರೆಗಳನ್ನು ತನ್ನವೆಂದು ಪ್ರೀತಿಸುತ್ತಾಳೆ. ಪ್ರಪಂಚದೆದುರು ನಿಲ್ಲುವಾಗ ನಮ್ಮ ಓರೆ-ಕೋರೆಗಳು ನಮ್ಮ ಕೀಳೆರಿಮೆಗಳಾಗಿ ಭಾದಿಸದಂತೆ ತಾಯಿ ಪ್ರೀತಿ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಯಾವಾಗ ಈ ಪ್ರೀತಿಯ ಕೊರತೆಯುಂಟಾಗುತ್ತದೆಯೋ ಅಂದು ಸಕಲ ಸುಗುಣಗಳನ್ನು ಹೊಂದಿದ್ದರೂ, ಮನದ ಮೂಲೆಯಲ್ಲೊಂದು 'ಅಳುಕು' ಅಡಗಿ ಕುಳಿತುಬಿಡುತ್ತದೆ. ಈ ಕಾರಣದಿಂದ ವ್ಯಕ್ತಿ ದುರ್ಬಲನಾಗುತ್ತಾ ಹೋಗುತ್ತಾನೆ. ಆದ್ದರಿಂದಲೇ ಹೇಳುವುದು, ಪ್ರತೀ ಯಶಸ್ವೀ ಗಂಡಿನ ಹಿಂದೆ ಒಬ್ಬಳು ಮಾತೃ ಸ್ವರೂಪಿ ಹೆಣ್ಣಿರುವಳೆಂದು. ನೀವು ಪ್ರಶ್ನಿಸಬಹುದು "ಎಲ್ಲಾ ಹೆಣ್ಣುಗಳು ಮಾತೃ ಸ್ವರೂಪಿಯೇ ಆಗಿರುತ್ತಾರೆಯೇ? ಹೆಂಡತಿ, ಮಗಳು, ಗೆಳತಿ- ಇವರು ಯಾಕಾಗಬಾರದು?" ಎಂದು. ಹೌದು ಅವರೂ ಆಗಿರಲು ಸಾಧ್ಯವಿದೆ. ಅವರು ನಿಮ್ಮೆಡೆಗೆ ಮಾತೃತ್ವವನ್ನು ಹೊಂದಿದ್ದೇ ಆದರೆ ಖಂಡಿತ ಸಾಧ್ಯ. ಗೆಳೆಯರೊಬ್ಬರ ಲೇಖನದಲ್ಲಿ ಓದಿದ್ದೆ, "ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ, ಅವರನ್ನು ಅರ್ಥ ಮಾಡಿಕೊಳ್ಳಲು ಹೋಗಲೇಬಾರದು" ಎಂದು. ಇಲ್ಲಿಯವರೆಗೂ ಈ ಲೇಖನ ಓದಿದ ನಿಮಗೆ ಹಾಗೇಯೇ ಅನ್ನಿಸುತ್ತದೆಯೇ? ಚಿಂತಿಸಿ.ತಾಯಿಯು ಕಲಿಸಿದ ಭಾಷೆ ಮಾತೃಭಾಷೆ ಎಂದು ಈಗಾಗಲೇ ಪ್ರಸ್ತಾಪಿಸಲಾಗಿದೆ. ತಾಯಿಯಂತೆ ಪ್ರೀತಿಸಿ, ಮುದ್ದಿಸಿ, ನಗಿಸಿ, ಕೆಣಕಿಸುವ ಅನೇಕ ಪುಸ್ತಕಗಳು ಕನ್ನಡ ತಾಯಿಯ ಕೈಗಳಿದ್ದಂತೆ. ತಾಯಿಯ ಮೇಲಿನ ವ್ಯಾಮೋಹವು ಸಹಜವಾಗಿಯೇ ಮಾತೃಭಾಷೆಯ ಮೇಲಿರುತ್ತದೆ ಎಂದು ಭಾವಿಸುತ್ತೇನೆ. ಪುಸ್ತಕ ರೂಪಿ ತಾಯಿಯ ಕೈಗಳು ಇಂದು ನಮ್ಮನ್ನು ಮುದ್ದಿಸಿವೆ, ಕೆಣಕಿದೆ, ಪ್ರೀತಿಸಿದೆ, ನಗಿಸಿ ನಮ್ಮೇಲ್ಲಾ ನೋವುಗಳನ್ನು ಮರೆಯಿಸಿ ಕ್ರಮೇಣ ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದೆ. ಎಲ್ಲರನ್ನೂ ಪ್ರೀತಿಸುವ ಕನ್ನಡಮಾತೆಯು ಇಂದಿಗೂ ಪರಭಾಷಾ ಮಕ್ಕಳನ್ನು ತನ್ನ ಮಡಿಲಿನಲ್ಲಿ ಪೋಷಿಸುತ್ತಿದ್ದಾಳೆ. ಕನ್ನಡ ತಾಯಿಯ ಮಡಿಲಿನಲಿ ಎಷ್ಟು ಹೊತ್ತು ಕಳೆದರೂ ಸುಖವೇ ಸರಿ. ಕನ್ನಡಾಂಬೆಯ ಕೈಗಳು ನಮ್ಮ ತಲೆಯನ್ನು ತಡವುತ್ತಿರುವವರೆಗೂ ನಾವು ಸೋಲಿಗಂಜದ ಪುತ್ರ-ಪುತ್ರೀಯರು. ಈ ತಾಯಿಯು ನಮ್ಮನ್ನು ಎಂದೆಂದಿಗೂ ತೊರೆಯಳು, ನಮ್ಮ ಕೊನೆಯುಸಿರಿರುವವರೆಗೂ ನಮ್ಮನ್ನು ಹರಸುವಳು. ಈ ತಾಯಿಯ ಕೀರ್ತಿಯನ್ನು ಕಾಪಾಡುವ ಮತ್ತು ಬೆಳಗಿಸುವ ಕರ್ತವ್ಯ ಬದುಕಿರುವಾಗ ನಮ್ಮದಲ್ಲವೇ? ಇದುವರೆಗೂ ನನ್ನಂತರಾಳದ ದನಿಗೆ ಕಿವಿಕೊಟ್ಟ ನಿಮಗೆ ಧನ್ಯವಾದಗಳು ಸ್ನೇಹಿತರೇ.
Subscribe to:
Post Comments (Atom)
ಆಲ್ ದ ಬೆಸ್ಟ್...
ReplyDeleteಧನ್ಯವಾದಗಳು ಸರ್
Delete