Thursday, 9 May 2013

ಲೇಖನ; ಪುಸ್ತಕ ಕುರಿತು

 ಅಬಚೂರಿನ ಪೋಸ್ಟಾಫೀಸು (ಕಥಾಸಂಕಲನ) ; ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಹೊಸ ದಿಗಂತದೆಡೆಗೆ ಎಂಬ ತಲೆಬರಹದಡಿಯಲ್ಲಿ ಲೇಖಕರು ನವ್ಯ ಸಾಹಿತ್ಯದೆಡೆಗೆ ಅಸಮಧಾನಗೊಳ್ಳುತ್ತ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ, ಎಂದು ಖಂಡಿಸುತ್ತ; ಅದಕ್ಕೆ ಅವರು ಮೂರು ಕಾರಣಗಳನ್ನು ಹೀಗೆ ನೀಡುತ್ತಾರೆ. ಮೊದಲನೇಯದಾಗಿ, ಯಾಂತ್ರಿಕವಾಗಿರುವ ಸಾಹಿತ್ಯದ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು. ಎರಡನೇಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತ್ಯ ವರ್ಗ. ಮೂರನೇಯದಾಗಿ ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡಿರುವ ಅದರ ಕ್ರಾಂತಿಕಾರಕತನ. ಈ ಮೂರು ಕಾರಣಗಳಿಂದ ನವ್ಯ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ. ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಇದರ ಸ್ಫೂರ್ತಿ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಇದರ ಮೌಲ್ಯಗಳು ಎಲ್ಲವನ್ನೂ ತ್ಯಜಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ತ್ವಿಕವಾಗಿ, ಸಮಗ್ರವಾಗಿ ಬದಲಾವಣೆಯಾಗುವುದರಿಂದ ಮಾತ್ರವೇ ಹೊಸ ಸಾಹಿತ್ಯ ಬಂದೀತು. ಹೊಸ ಉಪಮಾನಗಳು, ಹೊಸ ಪದಪುಂಜಗಳು, ಹೊಸ ಅಚ್ಚು ಮಾಡುವ ಕ್ರಮ ಇವುಗಳಿಂದಲ್ಲವೆಂದು ತೀವ್ರವಾಗಿ ತೇಜಸ್ವಿರವರು ಖಂಡಿಸಿದ್ದಾರೆ. (೧೯೭೩)

ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ತನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿದೆ ಎಂದು ಹೇಳುತ್ತ ನಮ್ಮೆದುರಿಗೆ ಅಬಚೂರಿನ ಪೋಸ್ಟಾಫೀಸು ಎಂಬ ಕಥಾಸಂಕಲನವನ್ನು ಇರಿಸಿದ್ದಾರೆ.

ಈ ಕಥಾಸಂಕಲನವು ಏಳು ಕಥೆಗಳನ್ನು ಒಳಗೊಂಡಿದೆ "ಅಬಚೂರಿನ ಪೋಸ್ಟಾಪೀಸು", "ಅವನತ", "ಕುಬಿ ಮತ್ತು ಇಯಾಲ", "ತುಕ್ಕೋಜಿ", "ಡೇರ್ ಡೆವಿಲ್ ಮುಸ್ತಷಾ", "ತಬರನ ಕಥೆ" ಮತ್ತು "ತ್ಯಕ್ತ".
ಪ್ರಾರಂಭದ ಕಥೆ, ಅಬಚೂರಿನ ಪೋಸ್ಟಾಫೀಸು, ಓದುಗರಲ್ಲಿ ಕುತೂಹಲವನ್ನು ಮೂಡಿಸುವಂತಹ ಪ್ರಾರಂಭವೇ ಆಗಿದೆ. ಕುಗ್ರಾಮವೊಂದರಲ್ಲಿ ಪೋಸ್ಟಾಫೀಸಿನ ಆರಂಭ, ಅಚಾನಕ್ಕಾಗಿ ನಾಯಕ ಬೋಪಣ್ಣನಿಗೆ ಪೋಸ್ಟ ಮಾಸ್ಟರ್‌ಗಿರಿ ಒದಗಿ ಬಂದದ್ದು, ಈ ಸಮಯದಲ್ಲಿ ಯಾರಿಗೋ ಬಂದಂತಹ ಪೋಸ್ಟ್ ಕವರನ್ನು ಕುತೂಹಲಕ್ಕೆ ತೆರೆದು ನೋಡಿ ಅಲ್ಲಿನ ಸ್ತ್ರೀಯ ನಗ್ನ ಚಿತ್ರಕ್ಕೆ ಬೆಸ್ತು ಬಿದ್ದದ್ದು. ಇದೇ ಕಾರಣವಾಗಿ ಸಭ್ಯನಾದ ಬೋಪಣ್ಣರಲ್ಲಿ ಕುಚೇಷ್ಟೆಗಳು ಆರಂಭವಾಗಿ ಹೆಂಡತಿ ಮತ್ತು ಹೆಂಡತಿಯ ತಾಯಿಗೆ ಮನೆಯ ವಾತಾವರಣದಲ್ಲಿ ಕಿರಿಕಿರಿ ಎನಿಸಿ, ಇವನೆಡೆಗೆ ತಿರಸ್ಕಾರ ಮನೋಭಾವ ಹೊಂದುತ್ತಾರೆ. ಹೆಂಡತಿಗೆ ಗಂಡನ ಚೇಷ್ಟೆಗಳಿಂದ ತಾಯಿಗೆ ಏನೆನಿಸುತ್ತದೋ ಎಂಬ ಭಯ, ತಾಯಿಗೆ (ವಿಧವೆ) ತನಗೆ ಇನ್ಯಾರು ದಿಕ್ಕು, ಮಗಳು ಅಳಿಯನ ಮೇಲೆ ಮೋಹಗೊಂಡು ಎಲ್ಲಿ ತನ್ನನ್ನು ತೊರೆದು ಹೊರಡುವಳೋ ಎಂಬ ಆತಂಕ, ಈ ಸಂದರ್ಭಗಳಲ್ಲಿ ಕಥೆಗಾರರು ಮನುಷ್ಯನ ಆಂತರಿಕ ಅವಲಂಬನೆಗಳ ಮುಗ್ಗಲುಗಳನ್ನು ನಮಗೆ ಪರಿಚಯರಿಸುತ್ತಾರೆ. ತನ್ನ ಮಗಳೇ ಆದರೂ ಮೊದಲು ತನಗೆ ಪ್ರಾಶಸ್ತ್ಯ ನೀಡಬೇಕು, ಮಗಳು ಗಂಡನನ್ನು ಬಿಟ್ಟು ಒಂಟಿಯಾಗಿದ್ದರೂ ಸರಿಯೇ ತನ್ನ ಕೊನೆಗಾಲದಲ್ಲಿ ನನ್ನೊಂದಿಗಿರಬೇಕು ಎಂಬ ತಾಯಿಯ ಸ್ವಾರ್ಥ ಇಲ್ಲಿ ಕಂಡುಬರುತ್ತದೆ.

ಬೇಲಾಯದವನ ಮಗಳ ಚಾರಿತ್ಯದ ಕುರಿತಾದ ಹಗರಣದಲ್ಲಿ ಮೂಗೂರಿನ ಮೇಸ್ತ್ರಿ ತನ್ನ ಮಾನ ರಕ್ಷಣೆಗಾಗಿ ಬೋಪಣ್ಣನನ್ನು ನಿಂದಿಸಲು ನಿಂತಾಗ ಮಾತಿಗೆ ಮಾತು ಬೆಳೆದು, ಬೋಪಣ್ಣನಿಗೆ, "ಹೌದೌದು, ನೀನೊಬ್ಬ ಅಪ್ಪಂತವ, ಊರವರೆಲ್ಲಾ ಪೋಲಿಗಳು, ನಿನ್ನ ಮನೆ, ನಿನ್ನ ಹೆಣ್ತಿ ಬಂದೋಬಸ್ತು ಮಾಡಿಕೊಂಡು ಊರವರ ಮಾತಾಡು, ನಿನ್ನ ಕೈ ಹಿಡಿದೊಳು ಎಷ್ಟು ಜನರ ಮನೇಲಿದ್ದು ಬಂದವಳೋ ನೋಡಿಕೋ". ಎಂದು ಮನ ನೋಯಿಸಲೇಂದು ಚುಚ್ಚಾಡುತ್ತಾನೆ. ಅತೀ ಕೋಪದಿಂದ ತಾಳ್ಮೆಯನ್ನು ಕಳೆದುಕೊಂಡು ಬೋಪಣ್ಣ ಮುಷ್ಟಿಕಟ್ಟಿ ಬಲವಾಗಿ ಮೂಗೂರಿನ ಮೇಸ್ತ್ರಿ ಮುಸುಡಿಗೆ ಗುದ್ದಿಬಿಡುತ್ತಾನೆ. ಮೇಸ್ತ್ರಿ ನೆಲಕುರುಳುತ್ತಾನೆ. ಈ ಸನ್ನಿವೇಶದಲ್ಲಿ ತನ್ನ ಪ್ರೀತಿಯನ್ನು ಸ್ವೀಕರಿಸದ, ತನ್ನನ್ನು ತಿರಸ್ಕರಿಸುವ ಹೆಂಡಂತಿಯ ಚಾರಿತ್ರ್ಯದ ಬಗ್ಗೆ ಮತ್ತೊಬ್ಬನು ಮಾತನಾಡುವಾಗ ಬೋಪಣ್ಣ ಸಿಡಿದೇಳುತ್ತಾನೆ. ಕಥಾ ನಿರೂಪಣೆಯಲ್ಲಿ ರಸಿಕ, ಪುಂಡ, ಚಪಲಚಿತ್ತನನ್ನಾಗಿ ಚಿತ್ರಿಸಿದ ಬೋಪಣ್ಣನಲ್ಲಿ ಅತೀ ಗಾಂಭೀರ್ಯ ಮತ್ತು ಹೆಂಡತಿ ಕಡೆಗಿನ ನಂಬಿಕೆಯು ಆತನ ಉದ್ರಿಕ್ತ ಕೋಪದಲ್ಲಿ ವ್ಯಕ್ತಗೊಂಡಿದೆ.

ಮುಂದಿನ ಕಥೆ "ಅವನತಿ"ಯಲ್ಲಿ ಸುರಸುಂದರಿಯಾದ ಗೌರಿ, ಸುಬ್ಬಯ್ಯನ ಹೆಂಡತಿ, ಮದುವೆಯಾಗಿ ನಾಲ್ಕು ವರ್ಷಗಳಲ್ಲಿ ಮೂರು ಮಕ್ಕಳನ್ನು ಹಡೆದಿದ್ದು, ಶೈಶವಾವಸ್ಥೆಯಲ್ಲಿಯೇ ತೀರಿಕೊಳ್ಳುತ್ತಿರುತ್ತವೆ. ಮಳೆಗಾಲದಲ್ಲಿ ಮಕ್ಕಳು ಜನಿಸುತ್ತಿದ್ದರಿಂದ ಹೀಗಾಗುತ್ತಿದೆ ಎಂದು ಗೌರಿ ಬಗೆದಿದ್ದಳು. ಸುಬ್ಬಯ್ಯನಿಗೆ ಯಾವುದೋ ಗುಪ್ತರೋಗವಿದ್ದುದರಿಂದ ಮಕ್ಕಳು ಸಾಯುತ್ತಿವೆ ಎಂದು ಅವರಿವರು ಊರಿನಲ್ಲಿ ನಗೆಯಾಡುತ್ತಲಿರುತ್ತಾರೆ. "ಹೇಗೆ ನೋಡಿದರೂ ಸ್ಫುರದ್ರೂಪಿಯಾದ ಗೌರಿ, ಅದು ಹೇಗೆ ಸುಬ್ಬಯ್ಯನನ್ನು ಮದುವೆಯಾದಳೋ?" ಎಂದು ಹೇಳುವಾಗ ಕಥೆಗಾರರು ಗೌರಿಯನ್ನು ದೋಷಮುಕ್ತಳನ್ನಾಗಿ ನಮ್ಮೆದುರು ನಿಲ್ಲಿಸುತ್ತಾರೆ. ಇಂತಹ ಗೌರಿಯ ಮೇಲೆ ಗಂಡನಾದ ಸುಬ್ಬಯ್ಯನು ದೋಷದ ಹೊರೆ ಹೊರಿಸಿ ಅವಳಿಗೆ ವೈದ್ಯವಾಗಬೇಕೆಂದು ಬರೆಯುವುದರ ಮೂಲಕ ಪುರುಷ ಪ್ರಧಾನ ಸಮಾಜದ ಚಿತ್ರಣವನ್ನು ಬಿಂಬಿಸಿದ್ದಾರೆ.

"ಕುಬಿ ಮತ್ತು ಇಯಾಲ" ಕಥೆಯಲ್ಲಿ ಅಜ್ಞಾನದಿಂದ ಬಾಲೆಯೊಬ್ಬಳ ಕೊಲೆ ಮತ್ತು ಅದರ ಸುತ್ತಮುತ್ತಲಿನ ರಾಜಕೀಯ, ಬಲಿಷ್ಟರ ದಬ್ಬಾಳಿಕೆಗಳ ಚಿತ್ರಣವನ್ನು ನೋಡಬಹುದು. ಕೊಲೆಯ ರಹಸ್ಯವನ್ನು ಕೊನೆವರೆಗೂ ಉಳಿಸಿ ಡಾ|| ಕುಬಿಯ ಕುರಿತು ಮತ್ತು ಇಯಾಲಳ ಕೊಲೆಯ ಸುತ್ತ ನಮ್ಮನ್ನು ಗಿರಕಿ ಹೊಡಿಸಿ, ಬಾಲೆಯ ಮುಗ್ಧತೆ ಮತ್ತು ಕೊಲೆಯ ಕರಾಳತೆಯನ್ನು ಬಿಚ್ಚಿಡುತ್ತ ಕೊಲೆಯ ರಹಸ್ಯವು ತೆರೆದುಕೊಳ್ಳುವಂತ ಕಥಾ ನಿರೂಪಣೆ ಕಾಣಬಹುದು. ಇಯಾಲಳ ಕೊಲೆ ಓದುಗರಲ್ಲಿ ಅವ್ಯಕ್ತ ನೋವನ್ನುಂಟು ಮಾಡುವುದಂತೂ ಖಂಡಿತ. ಅಜ್ಞಾನಕ್ಕೂ, ಸ್ವಾರ್ಥಕ್ಕೂ ಅನಾದಿಕಾಲದಿಂದಲೂ ಮುಗ್ಧರ ಬಲಿ ನಡೆಯುತ್ತಲೇ ಬಂದಿದೆ.

ಗುರುಗಳ್ಳಿ ಬೆಳೆಯುತ್ತಿರುವ ಭಾರತದೊಂದಿಗೆ ವಿಕಾಸಗೊಳ್ಳುತ್ತಿದ್ದ ಹಳ್ಳಿ. ಅಲ್ಲಿನ ದರ್ಜಿ ತುಕ್ಕೋಜಿ, ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಬಗೆಯ ಶೈಲಿಯಲ್ಲಿ ಬಟ್ಟೆಗಳನ್ನು ಹೊಲೆದು ಕೊಡುತ್ತಿದ್ದನು. ಆಧುನಿಕತೆಯ ದಿಕ್ಕಿನಲ್ಲಿ ಮನುಷ್ಯರ ಮನದ ನಡೆಯನ್ನು ಈ ಪ್ರಕಾರವಾಗಿ ಲೇಖಕರು ಬಿಂಬಿಸಿದ್ದಾರೆ. ದರ್ಜಿ ತುಕ್ಕೋಜಿಗೆ ಅನುಯಾಯಿಯಂತಹ ಹೆಂಡತಿ ಸಿಕ್ಕು ಸುಖ ಸಂಸಾರ ಅವರದಾಗಿತ್ತು. ಅವರಿಗೆ ಮಕ್ಕಳಿಲ್ಲದ್ದೇ ಅವರ ದೊಡ್ಡ ಚಿಂತೆಯಾಗಿತ್ತು. ಬಯಸಿ-ಬಯಸಿ ಕೊನೆಗೂ ಒಂದು ಗಂಡು ಮಗುವಾಗುತ್ತದೆ. ಆ ಮಗುವನ್ನು ನಿಭಾಯಿಸುವಲ್ಲಿ ಗಂಡ-ಹೆಂಡತಿಯರ ಸೆಣೆಸಾಟದ ಸನ್ನಿವೇಶಗಳಿದ್ದು, ಒಬ್ಬರಿಗೊಬ್ಬರಾಗಿದ್ದ ಅವರು ಕೊನೆಗೆ ಸದಾಕಾಲ ಒಬ್ಬರನ್ನೊಬ್ಬರು ನಿಂದಿಸುತ್ತ ತಮ್ಮ ಜಗಳದಲ್ಲಿ ಮಗವನ್ನು ಮೂದಲಿಸುತ್ತ ಬಯಸಿ ಪಡೆದ ಮಗುವನ್ನು ಕಡೆಗಣಿಸುವಂತಾಗುತ್ತಾರೆ. ಒಮ್ಮೆ ಯಾರೋ ಒಬ್ಬ ಕ್ರಾಲರ್‌ನ ಡ್ರೈವರ್, ಮಗುವನ್ನು ಆಡಿಸುವವನಂತೆ ಎತ್ತಿಕೊಂಡು ಕೆಲಕಾಲ ಕಣ್ಮರೆಯಾದಾಗ ಗಂಡ-ಹೆಂಡಿರಿಬ್ಬರು ದಿಗ್ಬ್ರಾಂತರಾಗಿ ನಿಲ್ಲುತ್ತಾರೆ. ಅವರಿಗೆ ದಿಕ್ಕೇ ತೋಚದಂತಾಗಿ ಒಬ್ಬರ ಮುಖವನ್ನೋಬ್ಬರು ನೋಡದಂತ ಅಪರಾಧಿ ಮನೋಭಾವವನ್ನು ಅನುಭವಿಸುವ ವೇಳೆಗೆ ಮಗುವನ್ನು ಕರೆದೊಯ್ದ ಕ್ರಾಲರ್‌ನ ಡ್ರೈವರ್ ಮತ್ತೆ ಮರಳಿ ಬರುವುದು ಕಾಣುತ್ತದೆ. ಕಳೆದೇ ಹೋಯ್ತು ಎನ್ನುವ ಮಗು ಮತ್ತೆ ಸಿಗುವುದರ ಮೂಲಕ ಮಗುವಿನ ಬೆಲೆಯನ್ನು ಕಂಡುಕೊಳ್ಳುತ್ತಾರೆ. ಮಾನವ ಸಂಬಂಧಗಳ ಮೌಲ್ಯದ ಬಗ್ಗೆ ಈ ಕಥೆಯು ಬೆಳಕು ಚೆಲ್ಲಿದೆ.

ಇಡೀ ಕಥಾಸಂಕಲನದಲ್ಲಿ "ಡೇರ್ ಡೆವಿಲ್ ಮುಸ್ತಫಾ" ಕಥೆಯು ವಿಶಿಷ್ಟವಾಗಿಯೂ, ವಿನೋದಕರವಾಗಿಯೂ ಮೂಡಿಬಂದಿದೆ. ಕಥೆಯಲ್ಲಿ ಅಂದಿನ ಧರ್ಮಾಂಧತೆಯ ವಿಸ್ತಾರವನ್ನು ತಿಳಿಸುತ್ತ ಹೇಗೆ ಒಬ್ಬ ಇಸ್ಲಾಂ ಧರ್ಮದ ಹುಡುಗ ಒಂದು ಹಿಂದೂಗಳ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುತ್ತಾನೆ; ಆತನ ಕುರಿತು ಸಹಪಾಠಿಗಳ, ಗುರುಗಳ ಮತ್ತು ಸಮಾಜದ ಧೋರಣಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಗಣೇಶನ ಹಬ್ಬದುತ್ಸವದಂದು ಎಲ್ಲಿ ಹಿಂದೂ-ಮುಸ್ಲಿಂ ಜಗಳವಾಗುತ್ತದೋ ಎಂದು ಎಲ್ಲರೂ ಎಣಿಸುವಾಗ ಗಣಪನ ಮುಂದೆ ಮೆರವಣಿಗೆ ಬರುತಿದ್ದ ಸಹಪಾಠಿ ಬಸವನ ಬೆನ್ನಿಗೆ ಪಂಜಿನ ಕೊಳವು ತಾಗಿ, ಬಸವ ಅಪಾಯದಲ್ಲಿದ್ದಾಗ ಮುಸ್ತಫಾ ಅವನಿಗೆ ಸಹಾಯ ನೀಡಿ ಅಪಾಯದಿಂದ ಪಾರುಮಾಡಿ ಎಲ್ಲರ ಮನವನ್ನು ಗೆಲ್ಲುತ್ತಾನೆ. "ಜಾತಿಗಿಂತ ಮನಸ್ಸು ದೊಡ್ಡದು". ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಕಾಲೇಜ್ ಯೂನಿಯನ್ ದಿನದಂದು ಮುಸ್ತಫಾ ಜಾದು ಮಾಡುವ ಭರದಲ್ಲಿ ಅಚಾತುರ್ಯದಿಂದ ಶಾಖಾಹಾರಿಯಾದ ಕಾಪ್ಟನ್ ರಾಮಾನುಜಂ; ತನ್ನ ಜೇಬಿನಲ್ಲಿ ತಾನೇ ಮೊಟ್ಟೆಹೊಡೆದುಕೊಳ್ಳುವಂತೆ ಮಾಡಿಬಿಡುತ್ತಾನೆ. ಸ್ವಾರಸ್ಯಕರ ಹಾಸ್ಯ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದು. ಕಥೆಯ ಪ್ರಾರಂಭದಲ್ಲಿ ತಿರಸ್ಕೃತನಾಗಿದ್ದ ಮುಸ್ತಫಾ ಸಮಯ ಪ್ರಜ್ಞೆ-ಜಾಣತನ ಮತ್ತು ಹಾಸ್ಯದಿಂದ ಎಲ್ಲರೊಳಗೊಂದಾಗಿಬಿಡುತ್ತಾನೆ.

"ತಬರನ ಕಥೆ"ಯಲ್ಲಿ ಬ್ರಿಟೀಷರ ಕಾಲದಲ್ಲಿ ಕೆಲಸಕ್ಕೆ ಸೇರಿದ್ದ ತಬರ, ಸ್ವಾತಂತ್ರ್ಯ ಬಂದ ನಂತರ ನಿವೃತ್ತಿ ಹೊಂದಿರುತ್ತಾನೆ. ಅನೇಕ ಇಲಾಖೆಗಳಲ್ಲಿ ಕೆಲಸ ಮಾಡಿದ ತಬರನು ಸೇವೆಯಲ್ಲಿದ್ದಾಗ, ತನ್ನ ಆಚಾತುರ್ಯದಿಂದ ಸುಂಕದ ಎರಡು ರಶೀದಿಗಳನ್ನು ಬರೆದು, ತಾನೇ ಅದನ್ನು ಭರಿಸುವ ಬಾಬತ್ತಿಗೆ ಬೀಳುವಂತಾಗಿದ್ದೇ ಆತನ ವ್ಯಥೆಗೆ (ಕಥೆಯ)ಕಾರಣವಾಗಿದೆ. ತಬರನ ಸಂಕಷ್ಟಗಳ ಮೂಲ ತನ್ನ ಸಂಬಳಕ್ಕಿಂತ ಜುಲ್ಮಾನೆ ಸುಂಕವೇ ಹೆಚ್ಚಾಗಿರುವುದು. ಕೊನೆಗೆ ತನಗೆ ಪಿಂಚಣಿಯಾದರೂ ಬರಬಹುದೇನೋ ಅದರಿಂದ ತನ್ನ ಹೆಂಡತಿಯ ಉಲ್ಬಣಗೊಂಡ ಸಕ್ಕರೆ ಖಾಯಿಲೆಯನ್ನಾದರೂ ಗುಣಪಡಿಸಬಹುದೆನೋ? ಎಂಬ ಆಶಯದಲ್ಲಿ ಎಲ್ಲಾ ಕಛೇರಿಗಳಿಗೂ ತನ್ನ ಸೇವೆಯ ದೃಢತಾಪತ್ರಗಳನ್ನು ಸಂಗ್ರಹಿಸುತ್ತಾನೆ. ಫೈಲುಗಳು ಮುಂದಕ್ಕೆ ಹೋಗುವುದೇ ತಡ ಅದರಲ್ಲಿ ಒಂದೊಂದು ಕ್ವೈರಿಗಳು ಹುಟ್ಟಿಕೊಳ್ಳುತ್ತ ಹಿಂದಕ್ಕೆ ಬರುತ್ತಿದ್ದರೆ, ಇತ್ತ ಕಡೆ ಹೆಂಡತಿಯ ಅಸ್ವಸ್ಥತೆಯಿಂದ ಕಂಗೆಟ್ಟ ತಬರನಿಗೆ ಹುಚ್ಚು ಹಿಡಿದಂತಾಗಿರುತ್ತದೆ.

ಗಾಂಗ್ರಿನ್‌ನಿಂದ ಹೆಂಡತಿಯ ಕಾಲನ್ನು ಮಂಡಿಯವರೆಗೂ ಕತ್ತರಿಸಬೇಕಾಗಿ ವೈದ್ಯರು ಹೇಳಿದಾಗ ಹಣದ ದಾರಿದ್ರ್ಯದಿಂದ ಕಂಗೆಟ್ಟ ತಬರ; ಮಾಂಸದಂಗಡಿಯ ಯೂಸೆಫ್‌ನನ್ನು ತನ್ನ ಹೆಂಡತಿಯ ಕಾಲನ್ನು ಮಂಡಿಯ ಕಾಲಿನವರಿಗೆ ಕಡಿದುಕೊಡುತ್ತೀಯಾ?, ಎಂದು ಕೇಳಿಕೊಳ್ಳುತ್ತಾನೆ. ಇದರಿಂದ ಖಾಯಿಲೆಯ ಬಗೆಗಿನ ಮೂಢ ನಂಬಿಕೆ, ಹಣದ ಅಭಾವದಿಂದ ಅಸ್ವಸ್ಥಗೊಂಡ ತಬರನ ಮನೋಸ್ಥಿತಿಯು ನಮ್ಮರಿವಿಗೆ ಬರುತ್ತದೆ. ಹಾಗೇಯೇ ಸರ್ಕಾರದ ವ್ಯವಸ್ಥೆ.
ಕೊನೆಗೂ ಹೆಂಡತಿಯೂ ತೀರಿಕೊಂಡು ಅರೆ ಹುಚ್ಚನಂತೆ ತಬರ ಅಲೆಯುತ್ತಿರಲು ಅವನಾಡುವ ಅನುಭವದ ಮಾತುಗಳು ಸ್ವಾತಂತ್ರ್ಯ ಪೂರ್ವದ ಸರ್ಕಾರ ವ್ಯವಸ್ಥೆಯನ್ನು ಹೊಗಳುತ್ತಿರುತ್ತದೆ. ಅರ್ಥವಾದವರಿಗೆ ಆತ ವೇದಾಂತಿ-ಮೇಧಾವಿ, ಇತರರಿಗೆ ಹುಚ್ಚ,,,,,,,,

"ತ್ಯಕ್ತ"ದಲ್ಲಿ ಲೇಖಕರು ತಾವು ಕಾಣಬಯಸುವ, ಬರೆಯ ಬಯಸುವ ಸಾಹಿತ್ಯದ ಹೊಸ ಸೆಲೆಯನ್ನು ಸೋಮನ ವ್ಯಕ್ತಿತ್ವದಲ್ಲಿ ತಂದುಕೊಂಡಂತೆಯೂ, ಅದನ್ನು ಅರ್ಥೈಸಲು ಸೆಣಸಾಡುವ ಪರಿ, ಗೆಳೆಯ ಹೇಮ ನಿಂದ ಅರ್ಥವಾಗದ ಪ್ರತಿಕ್ರಿಯ, "ಎಲ್ಲರನ್ನೂ ಹೆದರಿಸುವ ದುರಾತ್ಮ ನಾಗಿದ್ದೀಯ" ಎಂಬ ಗೆಳೆಯನ ಸಂಬೋಧಗಳು-ಇವು ನವ ರೀತಿಯ ಪ್ರಯೋಗದಲ್ಲಿ ಎದುರಾದ ಸನ್ನಿವೇಶಗಳ ಊಹೆಯನ್ನು ಈ ಕಥೆಯ ಪ್ರಾತ್ರಗಳ ಮೂಲಕ ಒಳಾರ್ಥದಲ್ಲಿ ವ್ಯಕ್ತಪಡಿಸಿರುವಂತೆ ನನಗೆ ಭಾಸವಾಗುತ್ತದೆ. ಪುಟ್ಟ ಕಂದ ಕಿಟ್ಟಿಯಲ್ಲಿ "ಜೀವಿಸುವ ಸ್ವಾತಂತ್ರ" ("ಪುಟಿಯುವ ಜೀವದ ಮಿಡಿತ")ವನ್ನು ಪ್ರಸ್ತುತಪಡಿಸಿದ್ದಾರೆ.

ಆ ಪುಟ್ಟ ಮಗುವಿನ ಜೀವಿಸುವ ಛಲ, ತುಂಟತನದ ಹಕ್ಕುಗಳನ್ನು ಲೇಖಕರು ಸಮರ್ಥಿಸುತ್ತಾರೆ. ಈ ಮೂಲಕ ಹೊಸ ಶೈಲಿಯ ಪ್ರಯೋಗದ ಹಕ್ಕಿಗೆ ಅವರು ಒತ್ತು ನೀಡಿರಬಹುದು.

"ಮಾತನ್ನು ತನ್ನೊಳಗೆ ಮಾತಿನ ಆಚೆಗೆ ಇರೋದರ ಮೇಲೆ ದಾಳಿ ಮಾಡೋದಕ್ಕೆ, ಅಂಧಕಾರದಲ್ಲಿ ಒಂದು ಸಾರಿಯಾದರೂ ಸತ್ಯವನ್ನು ನೋಡೋದಕ್ಕೆ ಸಾಧ್ಯವಯ್ಯ", ಎಂಬ ಸೋಮನ ಮಾತಿನಿಂದ ನಾವು ಅಂತರಾತ್ಮಾವಲೋಕನದ ದಾರಿಗಳನ್ನು ಕಂಡುಕೊಳ್ಳುವಂತೆ ಮಾತಿನಿಂದ ಸೆಳೆದಿದ್ದಾರೆ.

ಮನೆಯ ಅಜ್ಜಿಯ ಸಾವಿನಲ್ಲಿ ಆ ಪುಟ್ಟ ಮಗು ಅನುಭಾವಿಸುವ ಸತ್ಯದ ಅರಿವಿನ ಭಾವವನ್ನು ಲೇಖಕರು ಸುಲಲಿತವಾಗಿ "ಆ ಅದೇ" ಮಾತಿನಾಚೆಯ ಭಾವವನ್ನೂ ಪರಿಚಯಿಸಿದ್ದಾರೆ. ಹೌದು ನಮ್ಮ ಮಾತಿನಾಚೆಗೆ ಅದೆಷ್ಟೋ ಮಾತುಗಳಿವೆ, ಭಾವಗಳಿವೆ. ಎಲ್ಲವನ್ನೂ ಶಬ್ದ ರೂಪಕ್ಕಿಳಿಸಲು ಸಾಧ್ಯವಾಗದ್ದೇನೋ. "ಆ ಅದೇ" ಭಾವಗಳನ್ನು ಕೆಲವೊಮ್ಮೆ ಮೌನಗಳು ಅಲಂಕರಿಸಿಬಿಡುತ್ತವೆ. ಹಾಗಾಗಿ ಮೌನಕ್ಕೆ ಬೆಲೆ ಹೆಚ್ಚು ಎಂದೆನಿಸುತ್ತದೆ.

ಒಟ್ಟಾರೆಯಾಗಿ ಈ ಪುಸ್ತಕದ ಕುರಿತಾಗಿ ಹೇಳುವುದಾದರೆ, ಈ ಕಥಾಸಂಕಲನವು ಜೀವನದ ಹಲವು ಮಜಲುಗಳನ್ನು ಸುತ್ತಿಸಿ, ಜೀವನಾನುಭವವನ್ನು ನೀಡುವುದರೊಂದಿಗೆ ತೇಜಸ್ವಿರವರ ಭಾಷೆಯಲ್ಲಿನ ನವೀನತೆಯ ಸ್ವೀಕಾರ, ಕಾರಣ, ಪರಿಣಾಮಗಳನ್ನು ಅವರ ಊಹೆಗಳಂತೆ ಕಥೆಗಳಲ್ಲಿ ಅಲ್ಲಲಿ ವ್ಯಕ್ತಪಡಿಸಿರುವುದನ್ನು ನಾವು ಗಮನಿಸಬಹುದು. ಮೊದಲ ಬಾರಿ ಓದಿದಾಗ ಕಥೆಗಳನ್ನು ನಾವು ಅಸ್ವಾಧಿಸಿದರೆ ನಂತರದ ಓದಿನಲ್ಲಿ ಲೇಖಕರ ಭಾಷೆ ಬಗೆಗಿನ ಧೋರಣೆ, ಹೊಸ ನೀತಿಗಳನ್ನು ಕಂಡು ಅರ್ಥಗಳನ್ನು ಅರಗಿಸಿಕೊಳ್ಳುತ್ತ ಹೋಗುತ್ತೇವೆ. ಕೃತಿಯು ನಮ್ಮನಕ್ಕಿಳಿಯುತ್ತ ನಮ್ಮನ್ನು ವಿಮರ್ಶಕತೆಗೆ ಈಡುಮಾಡುತ್ತದೆ.
ಧನ್ಯವಾದಗಳು

ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ  ಪಂಜು ಪತ್ರಿಕೆಯ  ಸಂಪಾದಕರು ಮತ್ತು ಬಳಗಕ್ಕೆ ನನ್ನ ಅನಂತ ವಂದನೆಗಳು :-)


-ದಿವ್ಯ ಆಂಜನಪ್ಪ

No comments:

Post a Comment