Friday, 31 May 2013

ಚುಟುಕು

*ಚಳಿ*

ಚಳಿಯಲಿ ಬಳಿನಿಂದು,
ಬೇಯಿಸದಿರು ಚೆಲುವೆ,,,,
ತಾಳೆನು ಈ ಕೊರೆಚಳಿಯ,
ಬಳಿನಿಂದು ಬೇಯಿಸದೆ,
ಸುಟ್ಟೇಬಿಡು ನಲ್ಲೆ,
ನಿನ್ನ ಬಿಗಿದಪ್ಪುಗೆಯಲಿ
ನನ್ನೀ ವಿರಹವ.

(ದಿವ್ಯ ಆಂಜನಪ್ಪ)

ಕವನ

ನಿರುತ್ತರ

ಮನೆಯ ಮುಂದೆ ಯಾರದೋ ಅಂತಿಮಯಾತ್ರೆ
ದುಃಖದ ಛಾಯೆ ಮನೆಮನಗಳಲ್ಲೂ;
ಮಂಕಾದ ಮುಖ ಹೊತ್ತ ತಂದೆ
ಮಗಳಿಗೆ ಛಲ ಹುಟ್ಟಿಸಲೆಂದೋ?!
ಹಾಕಿದ ಹೀಗೊಂದು ಪ್ರಶ್ನೆ.

ಮಗಳೇ, ನನ್ನಂತ್ಯಕ್ಕಿಹರು
ಹೊಟ್ಟೆಯಲಿ ಪುಟ್ಟಿದ ಮಗನೂ-ಹೆಣ್ಣು ಮಕ್ಕಳು.
ಭಂಡ ಧೈರ್ಯದ ನಿನಗೆ
ಯಾರಿಹರು ಕೊನೆಗೆ??.,,,,,,

ದಿಗ್ಬ್ರಮೆಯಾದರೂ ನಕ್ಕಳು ಅರೆಘಳಿಗೆ,
ಮರುಕ್ಷಣ ಮೌನ,
ಕಳೆದೇ ಹೋದಳು ಬಹುಕಾಲ.
ಮನದಲಿ ಮುಗಿಯದ ಹುಡುಕಾಟ.

"ಆದಿ-ಅಂತ್ಯಗಳೆಲ್ಲಾ
ಬರೀ ಕನಸೇ,,,,,?"
ಎಚ್ಚೆತ್ತಾಗ ಅಲ್ಲಿ ಅವಳೊಬ್ಬಳೆ;
ಜೊತೆಗೆ ಫಳ್ಳನುದುರಿದ ತಣ್ಣನೆಯ ಕಣ್ಣೀರು.

-ದಿವ್ಯ ಆಂಜನಪ್ಪ
೨೮/೦೫/೨೦೧೩

Tuesday, 28 May 2013

ಲೇಖನ

ಪ್ರೀತಿ

ಮನಕ್ಕೆ ಸಿಗದದ್ದು,
ಸಿಕ್ಕಾಗ ದಕ್ಕದದ್ದು,
ಮರೆತಾಗ ನೆನೆದದ್ದು,
ಬಯಸಿದಾಗ ಪಲಾಯನವಾದದ್ದು,
ನಾ ಮುಂದೆ ನೆಡೆದಾಗ
ಹಿಂದೆ ಅತ್ತದ್ದು………
ಬಹಳಷ್ಟು ಜನರ ಪ್ರೀತಿಯ ಅನುಭವ ಇವಿಷ್ಟೇ ಆಗಿರುತ್ತದೆ. ಹೌದಾದರೆ ಲೈಕ್ ಒತ್ತಿ, ಇಲ್ಲವಾದರೆ ಕಾಮೆಂಟ್ ಮಾಡಿ ಎಂದರೆ, ಕಾಮೆಂಟಿಗಿಂತ ಲೈಕ್ಸ್ ಹೆಚ್ಚಾಗಿರುತ್ತದೆ ಎಂಬುದು ನನ್ನ ನಂಬಿಕೆ.
ಅದೇನೇ ಇರಲಿ, ಪ್ರೀತಿ' ಎಂಬ ಭಾವವೇ ಮಧುರ, ವಿಸ್ಮಯ. ಪ್ರೀತಿಗೆ ವಯಸ್ಸಿನ ಪ್ರಶ್ನೆ ಇಲ್ಲ. ಪ್ರೀತಿಯಲ್ಲಿ ಎಲ್ಲರೂ ಟೀನೇಜರೇ,,,,:-))
ಈ ಪ್ರೀತಿಯ ಕಲ್ಪನೆ, ಕನಸುಗಳು ಹುಟ್ಟುವುದೇ ಹದಿಹರೆಯಗಳಲ್ಲಿ. ಅಂದರೆ ಹೈಸ್ಕೂಲ್-ಕಾಲೇಜಿನ ದಿನಗಳಲ್ಲಿ, ತುಂಟತನದ ದಿನಗಳು ಎಂದೇ ಹೇಳಬಹುದು. ಹತ್ತನೇ ತರಗತಿಯಿಂದ ತೇರ್ಗಡೆ ಹೊಂದಿದ್ದ ನಾನು, ಮನೆಯ ಹತ್ತಿರದಲ್ಲೇ ಇರುವ ಪಿ.ಯು ಕಾಲೇಜೊಂದರಲ್ಲಿ ದಾಖಲಾಗಿ, ಹೊಸತನಕ್ಕೆ ಮಂದವಾದ ಆತಂಕದ ಹುಡುಗಿಯಾಗಿದ್ದೆ. ಪ್ರಾರಂಭದ ದಿನಗಳಲ್ಲಿ ಕಾಲೇಜಿಗೆ ಹೋಗುವಾಗ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಬೇಡಿಕೆಯೆಂದರೆ, "ದೇವಾ, ಆಂಜನೇಯ ನನ್ನ ಯಾರೂ ಲವ್ ಮಾಡೋದು ಬೇಡಪ್ಪ, ನಾನೂ ಯಾರನ್ನೂ ಲವ್ ಮಾಡೋದು ಬೇಡಪ್ಪ, ನನ್ನಂಪ್ಪಂಗೆ ಇವೆಲ್ಲಾ ಇಷ್ಟ ಆಗೋಲ್ಲ, ಕಾಪಾಡಪ್ಪಾ",,,,,,,,ನೆನೆದಾಗಲೆಲ್ಲಾ ನನಗೆ ನಗು. ಪ್ರೀತಿಗೆ ನಮ್ಮಪ್ಪನ ಭೀತಿ ಕಾರಣವಾಗಿತ್ತು. ಜೊತೆಗೆ ಯಾರೂ ಇಷ್ಟನೂ ಆಗಲಿಲ್ಲ ಬಿಡಿ. ನಮ್ಮ ಕಾಲೇಜಿನಲ್ಲಿ ಆಗ ನಾನೇ ಲೇಡಿ ಡಾನ್. ನನ್ನ ಗೆಳೆತಿಯರಿಗೆಲ್ಲಾ ನಾನೇ ಬಾಡಿ ಗಾರ್ಡ್ ತರ ಆಗಿಬಿಟ್ಟಿದ್ದೆ. ಯಾವ ಹುಡುಗನು ನನ್ನ ಗೆಳೆತಿಯರನ್ನು ಗುರ್ರಾಯಿಸೊ ಹಾಗಿಲ್ಲ, ಚುಡಾಯಿಸೊ ಹಾಗಿಲ್ಲ. ಹಾಗೇನಾದರೂ ಆದರೆ ಸರಿಯಾದ ಮರ್ಯಾದೆ ನನ್ನಿಂದ!……. ಹೀಗಿರುವಾಗ ನನ್ನ ಸುದ್ದಿಗೆ ಯಾರು ಬಂದಾರು? ಧೈರ್ಯದ ಪ್ರಶ್ನೆ!! ಹಾಗಂತ ವ್ಯಥೆಯೇನಿಲ್ಲ, ಬಹಳ ಹೆಮ್ಮಯ ವಿಚಾರ ನನಗೆ.
ಪ್ರೀತಿಯ ಭಾವಕ್ಕೆ ಮನಸ್ಸಿನ ಮತ್ತು ವಯಸ್ಸಿನ ಪಕ್ವತೆಯೂ ಅಗತ್ಯವಿದೆ. ಪ್ರೇಮಿಗಳ ದಿನ ಬಂದಿತ್ತೆಂದು ಹಿಂದು ಮುಂದು ನೋಡದೆ ಯಾರಿಗೋ ಹೇಗೋ ಪ್ರೇಮ ನಿವೇದನೆ ಮಾಡಿ 'ಹಾಗೆ ಸುಮ್ಮನೆ' ಎಂಗೇಜ್ ಆಗುವುದು, ಈಗಿನ ಕಾಲದ ಒಂದು ಫ್ಯಾಷನ್ ಆಗಿಬಿಟ್ಟಿದೆ. ಆ ಸಂಬಂಧಗಳು ಎಷ್ಟು ದಿನ ಉಳಿಯುವುದೊ ಅಷ್ಟು ದಿನ ಆ ಪ್ರೀತಿಯ ಆಯಸ್ಸು. ಇಂತಹ ಸ್ವೇಚ್ಛಾಚಾರದ ಪ್ರೀತಿಯಿಂದ ಮನಸ್ಸಿನ ಹುಚ್ಚಾಟದ ಹೊಯ್ದಾಟಗಳಲ್ಲಿ ಏನೆಲ್ಲಾ ಅನಾಹುತಗಳಾಗಿ ಹೋಗುತ್ತದೆ. ಅದರಿಂದಲೇ ಇಂದಿಗೂ ಹೆತ್ತವರಿಗೆ ಮಕ್ಕಳು ಪ್ರೀತಿಸುತ್ತಾರೆಂದರೆ ಬೆಚ್ಚಿಬೀಳುತ್ತಾರೆ. ಪ್ರೀತಿಯ ಅರ್ಥವನ್ನು ಯುವಜನತೆ ಅಷ್ಟು ಕ್ರೂರವಾಗಿಸಿಬಿಟ್ಟಿದ್ದಾರೆ. ಪ್ರೀತಿಯಿಲ್ಲದ ಕತೆಯಿಲ್ಲ. ಪ್ರೀತಿಯಿಲ್ಲದ ಸಿನೆಮಾಯಿಲ್ಲ, ಇವನ್ನೆಲ್ಲಾ ಇಷ್ಟಪಡುವ, ಆಸ್ವಾಧಿಸುವ ಹೆತ್ತವರು ಮಕ್ಕಳ ಪ್ರೀತಿಯನ್ನು ಮಾತ್ರ ತಿರಸ್ಕರಿಸುತ್ತಾರೆ ಇಲ್ಲವೇ ವಿಮರ್ಶಿಸಲು ತೊಡಗುತ್ತಾರೆ. ಕಾರಣ ಇದೇ;'ಸ್ವೇಚ್ಛಾಚಾರ'. ಮಕ್ಕಳು ಹೆತ್ತವರಲ್ಲಿ ಗಳಿಸಿದ ವಿಶ್ವಾಸದಿಂದ ಮಾತ್ರ ತಮ್ಮ ಪ್ರೀತಿಯ ಪವಿತ್ರತೆಯನ್ನು ಧೃಡೀಕರಿಸಿ ಸಮಾಜದೆದುರು ಮಾನ್ಯತೆಯನ್ನು ಪಡೆಯಬಹುದಾಗಿದೆ. ಎಲ್ಲದರಲ್ಲೂ ಒಳ್ಳೆಯಾದನ್ನೇ ಕಾಣುವ, ಒಳ್ಳೆಯದನ್ನೇ ಹುಡುಕುವ ಮನಸ್ಸಿದ್ದರೆ ಖಂಡಿತ ಒಳ್ಳೆಯದೇ ಆಗುತ್ತದೆ. ಪ್ರೀತಿಯನ್ನು ಪ್ರೀತಿಯಿಂದ ನೋಡಬೇಕೆ ಹೊರತು ಕಾಮದಿಂದಲ್ಲ.

ಹೆಣ್ಣಿಗಿಂತ ಗಂಡಿನಲ್ಲಿಯೇ ಮರೆವು ಹೆಚ್ಚು ಎಂದು ಕೇಳಿದ್ದೆ, ಹಾಗೆಯೇ ಅನಿಸುತ್ತದೆ ಕೂಡ. ಆದರೂ ಗಂಡು ಒಬ್ಬಳನ್ನು ಮರೆಯಲು ಮತ್ತೋಬ್ಬಳನ್ನು ಪ್ರೀತಿಸುತ್ತಾನೆ. ಒಂದು ಪ್ರೀತಿಯನ್ನು ಮರೆಯಲು ಮತ್ತೋಂದು ಪ್ರೀತಿಯನ್ನು ಬಯಸುತ್ತಾನೆ. ಇದು ಎಷ್ಟು ಸರಿಯೋ? ಪ್ರೀತಿಸಬೇಕೆಂದು ಪ್ರೀತಿಸಬಾರದು, ಆದರೆ ಪ್ರೀತಿ ಹುಟ್ಟಿದಾಗ ಪ್ರೀತಿಸದೆ ಇರಬಾರದು. ಇಂದು ಮನುಷ್ಯ ಎಷ್ಟು ದುರ್ಬಲನಾಗಿದ್ದಾನೆಂದರೆ, ಪ್ರೀತಿಯನ್ನು ಕಳೆದುಕೊಂಡ ನಂತರ ಖಾಲಿ ಮನಸ್ಸಿನೊಂದಿಗೆ ಆತ ಜೀವಿಸಲು ಸಿದ್ದನಿಲ್ಲ. ಸಾಂಗತ್ಯ ಆತನಿಗೆ ಬೇಕೇ ಬೇಕು, ಅದೇಕೊ ತಿಳಿಯದು. ಪ್ರೀತಿಯೊಂದು ದೌರ್ಬಲ್ಯವಾಗದೆ ಒಂದು ಶಕ್ತಿಯಾಗಿ, ಆತ್ಮವಿಶ್ವಾಸವಾಗಿ ಪರಿಣಮಿಸಿದಾಗ ಮಾತ್ರ ಅದು ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ ಜೀವಂತಿಕೆಯ ಚಿಲುಮೆಗಳನ್ನಾಗಿಸುತ್ತದೆ.
ಒಮ್ಮೊಮ್ಮೆ ಅನಿರೀಕ್ಷಿತವಾಗಿ ಎಲ್ಲಿಂದ ಎಲ್ಲಿಗೊ ಪ್ರೀತಿ ಅಂಕುರವಾಗಿಬಿಟ್ಟಿರುತ್ತದೆ. ಕೆಲವೊಮ್ಮೆ ಮುಖಾಮುಖಿಯಾಗದೆಯೇ ಮನಸ್ಸು ಮತ್ತು ವ್ಯಕ್ತಿತ್ವಕ್ಕೆ ಶರಣಾಗಿ ಒಬ್ಬರಿಗೊಬ್ಬರಂತೆ ಪ್ರೀತಿಯಲ್ಲಿ ಅನುರಕ್ತರಾಗಿಬಿಟ್ಟಿರುತ್ತಾರೆ. ದೇಹ ಸೌಂದರ್ಯಕ್ಕಿಂತ ಮಾನಸಿಕ ಸೌಂದರ್ಯ ಮಿಗಿಲು. ಎಂದಿಗೂ ನಿಷ್ಕಾಮ ಪ್ರೇಮಕ್ಕೆ ಮಾತ್ರ ದೀರ್ಘಾಯುಷ್ಯ. ಸ್ನೇಹಿತರೇ, ಈ ಪ್ರೇಮಿಗಳ
ದಿನದಂದು ತಮ್ಮೆಲರಿಗೂ ಶುಭಾಶಯಗಳು. ಪ್ರೇಮ ಅಮರವಾಗರಲಿ. ದೀರ್ಘಾಯುಷ್ಯದ ಪ್ರೇಮ ಪ್ರೀತಿಯ ಪ್ರೇಮಿಗಳು ನೀವಾಗಿ ಬಾಳಿರಿ. ಶುಭವಾಗಲಿ. ಧನ್ಯವಾದಗಳು.

ಪ್ರೇಮಿಗಳ ದಿನದ ವಿಶೇಷಾಂಕದಲ್ಲಿ ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಪಂಜು ಪತ್ರಿಕೆಯ ಸಂಪಾದಕರು ಮತ್ತು ಬಳಗಕ್ಕೆ ನನ್ನ ಅನಂತ ಧನ್ಯವಾದಗಳು

-ದಿವ್ಯ ಆಂಜನಪ್ಪ
14/02/2013

ಕವನ

ನನ್ನ ಅಸಹಾಯಕತೆ

ನೀ ನನ್ನ ನಿದ್ದೆ ಕದ್ದರೂ
ನಾ ನಿನ್ನ ಶಪಿಸಲಾರೆ.

ನೀ ನನ್ನ ಮನವ ಗೆದ್ದರೂ,
ನಾ ನಿನಗೆ ಸೋಲಲಾರೆ.

ನೀ ಮುನಿಸಿದರೂ,
ನಾ ನಿನ್ನ ರಮಿಸಲಾರೆ.

ನೀ ನನ್ನ ಮರೆತರೂ,
ನಾ ನಿನ್ನ ಪ್ರಶ್ನಿಸಲಾರೆ.

-ದಿವ್ಯ ಆಂಜನಪ್ಪ

13/11/2012

ಕವನ


*ಮಾನವನ ಮನ*

ಬದಲಾಗದ ಮನ 
ಮಾನವನ ಮನ,
ಎಷ್ಟೇ ಓದಿದರು, 
ಏನೇ ತಿಳಿದರು,
ಏನೇ ಚರ್ಚಿಸಿದರೂ
ಬದಲಾಗದ ಮನ 
ಈ ಮಾನವನ ಮನ,

ಓದಿದೆಲ್ಲಾ ಕುತೂಹಲಕ್ಕೆ,
ತಿಳಿದಿದೆಲ್ಲಾ ವಾದಗಳಿಗೆ,
ಚರ್ಚೆಯೆಲ್ಲಾ ಬರೀ ಪ್ರತೀಷ್ಠೆಗೆ,
ಮನಕ್ಕಿಳಿಯದ ಸಾರ
ತೂರಿ ಹೋಯಿತು ಪೂರ
ಅಲುಗಾಡದ ಮನ 
ಮಾನವನ ಈ ಜಡಮನ.

-ದಿವ್ಯ ಆಂಜನಪ್ಪ
23/12/2012


ಕವನ


*ಕನಸು*


ಕನಸು ಕಟ್ಟುವಲ್ಲಿ ನಾ ಬಲು ಹಳಬಳಯ್ಯ,
ಚೂರಾಗೋ ಕನಸುಗಳು ಈಗ ಹೊಸತೇನಲ್ಲಯ್ಯ,


ಕನಸ ಹೆಣೆವ ಮನಸೇ ಚೂರಾದರೂ,
ಆ ಒಡೆದ ಮನಸ್ಸನ್ನೇ ಕಟ್ಟುವ ಕನಸು ನನ್ನದಯ್ಯ.


ಒಡೆದ ಕನಸ, ಒಡೆದ ಮನಸ ಹೊತ್ತರೂ,
ಒಡೆಯದ ಛಲದ ಒಡತಿ ನಾನಯ್ಯ.



-ದಿವ್ಯ ಆಂಜನಪ್ಪ

06/01/2013

Sunday, 26 May 2013

ಹನಿಗವನ

**ನೀ ಯಾರು**

ಇಷ್ಟು ದಿನಗಳೂ
ಮನವೆಲ್ಲಾ ನಿನ್ನದೇ
ಪ್ರೀತಿ-ಪ್ರೇಮ-ಪ್ರಣಯ.
ಇಂದೇಕೋ ಕಾಣೆ!,
ಮನವು ಸಂನ್ಯಾಸತ್ವ ಬೇಡಿದರೂ
ಭಕ್ತಿ ಭಾವಕೂ ನೀನೇ ಬಂದು ನಿಲ್ಲುವೆ.
ಆಧ್ಯಾತ್ಮ ದಲ್ಲೂ ನಿನ್ನದೇ ಧ್ಯಾನ
ಹೇಳು ನೀ ಯಾರು ನನಗೆ?.

-ದಿವ್ಯ ಆಂಜನಪ್ಪ


17/04/2013

Friday, 24 May 2013

ಲೇಖನ

  "ಅಮ್ಮ", ಪ್ರೀತಿಯ ಮೂರ್ತಿ,,,

ಮನುಷ್ಯ ಜೀವನದ ಏರು ಪೇರುಗಳಲ್ಲಿ ಕೆಲವರು ಎಷ್ಟೋ ಪಡೆದಿರುತ್ತಾರೆ, ಕೆಲವರು ಏಷ್ಟೋ ಕಳೆದಿರುತ್ತಾರೆ ಮತ್ತೆ ಕೆಲವರು ಭರಿಸಲಾರದಂತಹ ಖಾಲಿ ಮನಸ್ಸನ್ನು ಗಿಟ್ಟಿಸಿಕೊಂಡುಬಿಟ್ಟಿರುತ್ತಾರೆ. ವಿಪರ್ಯಾಸ!,,,,ಕೆಲವೊಮ್ಮೆ ತಮ್ಮ ಬಾಲ್ಯದಿಂದಲೂ ತಾಯಿಯ ಪ್ರೀತಿಯನ್ನು ಬಯಸಿ ಪಡೆಯಲಾರದ ಕೂಸುಗಳು ಬಹುಶಃ ಜೀವನವಿಡೀ ಆ ಪ್ರೀತಿಗಾಗಿಯೇ ಹಂಬಲಿಸಿ ಮಾನವನ ಇತರೆ ಸಂಬಂಧಗಳ ಪ್ರೀತಿಗಳಲ್ಲೂ ಕೊರತೆಯನ್ನು ಕಾಣುವಂತಾಗುತ್ತದೋ ಏನೋ ಎಂದೆನಿಸುತ್ತದೆ. ಈ ಪ್ರೀತಿಯ ಹಂಬಲ ಇತರರಿಗೆ ಹಿಂಸೆಯಾಗಿಯೋ, ಅತಿರೇಕವಾಗಿಯೋ ಕಂಡರೆ ಹಂಬಲಿಸುವ ವ್ಯಕ್ತಿಗೆ ಈ ವ್ಯತಿರಿಕ್ತವು ಅರ್ಥವಾಗದ ಗೊಂದಲ. ಯಾರೂ ತನ್ನನ್ನು ಪ್ರೀತಿಸುವುದಿಲ್ಲವೆಂದು ಭಾವಿಸುವ ಈ ಜೀವಿಗಳು ಬಹುಶಃ ಇತರರ ಪ್ರೀತಿಯಲ್ಲಿ ಕೊರತೆಯನ್ನು ಕಾಣುವಂತ ಮನಃಸ್ಥಿತಿಯನ್ನು ತಲುಪಿರುತ್ತಾರೆ. ಕಾರಣ ಅಮ್ಮನಂತ ಪ್ರೀತಿಗೆ ಸರಿಸಾಟಿಯಾದುದು ಯಾವುದೂ ಇಲ್ಲ. ಈ ರೀತಿಯ ಅತೃಪ್ತಿಯಿಂದಾಗಿಯೇ ಮನಸ್ಸು ಖಿನ್ನತೆಗೊಳಗಾಗುತ್ತದೆ ಎನಿಸುತ್ತದೆ. ಬುದ್ಧಿ ಜೀವಿಗಳಾದ ನಾವೆಲ್ಲಾ ಹೇಳಬಹುದು, 'ಮನಸ್ಸನ್ನು ಭಾವನೆಗಳನ್ನು ಹಿಡಿತದಲ್ಲಿಡಬೇಕು, ಮನಸೋ ಇಚ್ಛೆ ಹರಿಬಿಡಬಾರದು" ಎಂದು. ಸಲಹೆ ನೀಡಿದಂತೆ ಅವರೇ ನಾವಾಗಿ ನಿಂದು ಮನೋಸ್ಥಿತಿಯನ್ನು ಅರ್ಥೈಸಿಕೊಳ್ಳುವುದು ಕಷ್ಟ. ಅದು ಸಾಧ್ಯವಾದರೆ ಅದೇ ಮಾನವೀಯತೆ.

ಇರಬಹುದು ಮನದ ಮೂಲೆಯಲ್ಲಿನ ಒಂದು ಅತೃಪ್ತ ಭಾವದಿಂದ ವ್ಯಕ್ತಿ ಎಷ್ಟೇ ದಕ್ಷನಾದರೂ ಅವರಲ್ಲಿ "ಎನೋ ಕೊರತೆ", "ಏನೋ ತಪ್ಪಿದೆ" ಅನ್ನುವ ಭಾವ ಸಹಜ. ಈ ಭಾವದ ಅರಿವಿನಿಂದ ಮತ್ತಷ್ಟು ಖಿನ್ನರಾಗುವ ಬದಲು. ಅದರ ಸಮಾಧಾನಕರ ಉಪಶಮನದ ದಾರಿಯನ್ನು ಸ್ವತಃ ಕಂಡುಕೊಳ್ಳುವಂತಾಗಬೇಕು. ಆದರೆ ಕಂಡುಕೊಂಡ ದಾರಿ ಒಳ್ಳೆಯದಾಗಿರಬೇಕು ಅಷ್ಟೆ. ಪ್ರಙ್ಞಾವಂತ ವ್ಯಕ್ತಿ ಉತ್ತಮವಾದ ಮಾರ್ಗವನ್ನೇ ಹಿಡಿಯುತ್ತಾನೆ ಎಂಬುದು ನನ್ನ ನಂಬಿಕೆ. ಹೀಗೆ ತಮ್ಮ ತಮ್ಮ ಮನಸ್ಸನ್ನು ಭಾವನೆಗಳನ್ನು ಮಕ್ಕಳಂತೆ ರಮಿಸಿ, ಸಾಂತ್ವನ ನೀಡುವುದರ ಮೂಲಕ ಪರಿಸ್ಥಿತಿಗಳನ್ನು ನಿಭಾಯಿಸಬಹುದು. ಹಾಗಂತ ಭಾವನೆಗಳ ಮೇಲೆ ಹಿಡಿತ ಸಾಧಿಸಿ ನೋಯುವುದನ್ನು ನಾನು ಒಪ್ಪಲಾರೆ. ನಮ್ಮ ಭಾವನೆಗಳ ಮೇಲೆ ನಮಗೆ ಗೌರವವಿದ್ದರೆ, ನಮ್ಮ ಮನಸ್ಸು ಒಳ್ಳೇಯದೇ ಹೇಳುತ್ತಿದೆ ಎಂಬ ಭರವಸೆಯಿದ್ದರೆ ಖಂಡಿತ ಭಾವನೆಗಳನ್ನು ಅರಳಲು ಬಿಡಬೇಕು. ಆಗಲೇ ಮನಸ್ಸು ಪ್ರಫುಲ್ಲವಾಗಿ, ಜೀವನ ಉತ್ಸಾಹದಾಯಕವಾಗುವುದು.

ಭಾವಗಳಲ್ಲೇ ಶ್ರೇಷ್ಠ ಭಾವ ಪ್ರೀತಿ. ತಾಯಿಯ ನಂತರ ತಾಯಿಯಂತೆ ಪ್ರಿತಿಸುವ ಅಕ್ಕಂದಿರು-ಅತ್ತಿಗೆಯರು, ತಂದೆಯಂತಹ ಭಾವಂದಿರು- ಅಣ್ಣಂದಿರು; ಹೀಗೆ ಪ್ರೀತಿಯ ಯಾತ್ರೆ ನಡೆದಿರುವಾಗ ಯೌವ್ವನದಲ್ಲಿ ಅದೇ ಅಮ್ಮನ ಪ್ರೀತಿಯ ಮಟ್ಟದಲ್ಲಿ ಸಂಗಾತಿಗಳ ಪ್ರೀತಿಯನ್ನು ನಿರೀಕ್ಷಿಸುತ್ತೇವೆ ಎಂದೆನಿಸುತ್ತದೆ. ಕೆಲವೊಮ್ಮೆ ಇಲ್ಲಿ ಕೆಲವರು ಅದೃಷ್ಟವಂತರು ಎನಿಸಿಕೊಂಡರೆ ಮತ್ತೆ ಕೆಲವರು,,,,,,,,,,,,,. :-)

ಆದರೂ ಮನುಷ್ಯನ ಮನಸ್ಸು ನಿರಂತರ ಪ್ರೀತಿಯ ದಾಸ. ಮುಂದೆ ಮಕ್ಕಳಲ್ಲಿ, ಮೊಮ್ಮಕ್ಕಳಲ್ಲಿ ಹೀಗೆ ಮುಂದುವರೆಯುವುದು. ಯಾವುದೇ ಸಂಭಂದವಾಗಲಿ ಅಲ್ಲಿನ ಪ್ರೀತಿಯ ಕಾಂತಿಯಿಂದಲೇ ಆ ಬಾಂಧವ್ಯದ ಉಜ್ವಲ ಭವಿಷ್ಯ ಸಾಧ್ಯ. ಸ್ನೇಹಿತರೇ, "ಅಮ್ಮ", "ಪ್ರೀತಿ" ಇಂತಹ ಚೈತನ್ಯ ಚಿಲುಮೆಗಳ ಕುರಿತು ಎಷ್ಟೇ ಮಾತನಾಡಿದರೂ-ಬರೆದರೂ ಇನ್ನೂ ಮತ್ತಷ್ಟು ಉಳಿಯುತ್ತದೆ. ಎಲ್ಲವನ್ನೂ ಮಾತಿನಲ್ಲಿ ಬರಹಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲವೇನೋ?.. ಧನ್ಯವಾದಗಳು

-ದಿವ್ಯ ಆಂಜನಪ್ಪ:-)

Thursday, 23 May 2013

ಚುಟುಕು




ದೂರ





ಪ್ರೀತಿಸುವುದು ದೂರವಾಗಲೇ?

ದೂರವಾಗಲೆಂದೇ ಪ್ರೀತಿಸುವುದೇ??



ದೂರಾಗಲೆಂದೇ ನೀ ಪ್ರೀತಿಸುವುದಾದರೂ



ನಾ ನಿನ್ನೇ ದೂರದೆ ಪ್ರೀತಿಸುವೆ :-)




-(ದಿವ್ಯ ಆಂಜನಪ್ಪ)

23/05/2013

Sunday, 12 May 2013

ಹನಿಗವನ

ಒಲಿದೆ ನಾ




ಮೆರೆದೆ ನಾ


ನನ್ನೆಲ್ಲಾ ಆಸೆಯ ಕನಸ್ಸನ್ನು


ಕವನವಾಗಿ ಬರೆದು,



ಸೆಳೆದೆ ನೀ


ನನ್ನೆಲ್ಲಾ ನಾಚಿಕೆಯ


ನಿಬಂಧನೆಗಳ ಮುರಿದು,




ಒಲಿದೆ ನಾ


ನಿನ್ನ ಪ್ರೇಮದ ಒರತೆಗೆ


ನೆನೆದು ನದಿಯಾಗಿ ಹರಿದು. :-)





-ದಿವ್ಯ ಆಂಜನಪ್ಪ

Saturday, 11 May 2013

ಚುಟುಕು



ಮುಗ್ಧ




"ಪ್ರೀತಿ ಭಾವಗಳನ್ನು ಹುಟ್ಟು ಹಾಕಬಾರದು,

ಅವು ತಾವಾಗಿಯೇ ಮೊಳೆಯಬೇಕು",

ಎಂದವನೀಗ ಪ್ರೀತಿಯ ಕಾಣಲಾರ.

ಕಾರಣ, ಗುರುತಿಸಲಾರದ 'ಮುಗ್ಧ'!?  :-)




-ದಿವ್ಯ ಆಂಜನಪ್ಪ
12/05/2013

ಹನಿಗವನ


ಬೇಡಿಕೆ



ಬೇಡೆನು ನಾನಿನ್ನು 

ನಿನ್ನ ಸಮಯವ; 

ತಿಳಿದರೆ ತಿಳಿ, 

ಎನ್ನಂತರಂಗವ. 

ನೀ ತಿಳಿಯದಿದ್ದರೂ ಕೆಡಿಸದಿರು 

ಎನ್ನ ಭಾವಗಳರ್ಥವ; 

ಮನದಿ ಬೆರೆತು  

ಮನವರಿಯದೇ ಹೋದವನಿಗೆ 

ಈ ಬೇಡಿಕೆಯೇ ಕೊನೆಯದಾಗುವ.



-ದಿವ್ಯ ಆಂಜನಪ್ಪ

ಚುಟುಕುಗಳು


ನನ್ನರಿತು 



ನನ್ನೀ ಕಸಿ-ವಿಸಿಯ ಮನದಲ್ಲೂ, 

ಸುಮ್ಮನೆ ಹಸಿ-ಹಸಿಯ ಭಾವಗಳ ತುಂಬಿ

ನೀ ತುಸು-ತುಸುವೇ ಎನ್ನೆದೆಯಲಿ ಬಿರಿದಿರಲು 

ಈಗ ಮುಸಿ-ಮುಸಿ ನಗುತಲಿರುವೆ ಏಕೆ? ನನ್ನರಿತು!!.


ಹೂ ಮಾಲೆ




ಘಮ್ಮೆಂದಿತು ಹೂ ಮಾಲೆ

ನನ್ನಡ್ಡಿಯ ಮೀರಿ,

ಕೈತಾಕಿತು ಕಿವಿಯೋಲೆ

ನಿನ್ನಂಕೆಯ ಮೀರಿ.


-ದಿವ್ಯ ಆಂಜನಪ್ಪ

ಹನಿಗವನ

ವಿನಂತಿ



"ಮನಕ್ಕೆ ಶಾಂತಿ,

ಭಾವಕ್ಕೆ ಪ್ರೀತಿ,

ಹೆತ್ತವರಿಗೆ ಕೀರುತಿ,

ಹೆಸರಿನ ಮುಂದೆ ಶ್ರೀಮತಿ,

ಕಂದನಿಗೆ ಭಾರತಿ.

ಇಷ್ಟೇ ಅಲ್ಲವೇ ಹೆಣ್ಣಿನ ವಿನಂತಿ,

ತಂದೆ ಮಾರುತಿ?".


-ದಿವ್ಯ ಆಂಜನಪ್ಪ


Friday, 10 May 2013

ಹನಿಗವನ

"ಪ್ರೇಮ ಸಂಭಾಷಣೆ"


ಹುಡುಗ;

ನಿನ್ನಾಸೆ ಅತಿಯಾಗಿ

ಮನವೆಲ್ಲಾ ಹುಚ್ಚಾಗಿ

ಕನವರಿಕೆ ಶುರುವಾಗಿದೆ ಗೆಳೆತಿ.



ಹುಡುಗಿ;

ಮೌನವೇ ಮಾತಾಗಿ

ವಿರಹವೇ ತಪವಾಗಿ

ನಾಚಿಕೆಯೇ ಜೊತೆಯಾಗಿದೆ ಗೆಳೆಯಾ.



-ದಿವ್ಯ ಆಂಜನಪ್ಪ

ಹನಿಗವನ

ನನ್ನ ದೇವನಿಗೊಂದು ವಿನಂತಿ


ಬಿಡಿಸಿ ಎಲ್ಲವ ನಾ ಹೇಳಲಾರೆ,

ಈ ಪದಗಳನ್ನೇ ಅರ್ಥೈಸಿಕೊ

ಕೊಡದು ಈ ವ್ಯವಸ್ಥೆಯು ಎನಗೆ

ಅಭಿವ್ಯಕ್ತಿಯ ಅವಕಾಶವ.

ಎಲ್ಲಾ ಬಲ್ಲವ ನೀನೇ ಅಲ್ಲವೇ?

ಅದರಂತೆ ನೀ ನೆಡೆದಿಕೊ,

ನನ್ನಾಸೆ-ಕನಸುಗಳ ನಿನ್ನ ಕೈಗಿತ್ತಿರುವೆ.

ಅರಳಿಸುವೆಯೋ? ಕಮರಿಸುವೆಯೋ ನೋಡಿಕೊ.

ಇಷ್ಟೇ ನನ್ನ ವಿನಂತಿ,

ನೀ ನಿಲ್ಲದೆ ನಾ ಒಂಟಿ.



-ದಿವ್ಯ ಆಂಜನಪ್ಪ

ಕವನ


ಜೀವದ ಭಾವ




ಬರಡು ಭೂಮಿಯ ಬದುಕಲಿ
ಬಯಕೆ ಹೊತ್ತ ಮನವು,
ತಡವುತ್ತಿರುವುದು ಅನುದಿನವೂ
ಬತ್ತದ ಪ್ರೀತಿಯ ಒರತೆಯ.
ಕಾಣಬಹುದು ಎಂದಾದರೂ
ಪ್ರೀತಿಯ ಜಲಧಾರೆಯಾ
ಕಂಡ ಮರೀಚಿಕೆಗಳ ನೆನೆದು,
ದಿಟವಾದದನ್ನೂ ಒಮ್ಮೆ ಅನುಮಾನಿಸೀತು.

ಮರುಭೂಮಿಯ ದಾರಿ ಮುಗಿದು
ಸಾಗಿರಬಹುದು ಚೈತನ್ಯದೂರಿನೆಡೆಗೆ,
ಹಸಿರನ್ನೂ ಒಮ್ಮೆ ನಿಟ್ಟುಸಿರಿನಲಿ ನೋಡಿ,
ಸಿಗಬಹುದೇ ಎನ್ನ ಋಣಕ್ಕೆ?,
ಎಂಬ ಸಂಶಯದಿಂದಲೇ
ನಿಜ ಸಂತಸವ ಕಳೆವುದು ಮನವು,
ಹಾಗಾಗಿ, ನಿಜಕ್ಕೆ ಸಿಕ್ಕರೂ ಕನಸಿಗೆ ಸಿಕ್ಕರೂ
ಸಂತಸದಿ ಸುಖಿಸಿಬಿಡುವುದೇ ಲೇಸು
ಈ ಜೀವದ ಭಾವವ. :-)

-ದಿವ್ಯ ಆಂಜನಪ್ಪ

Thursday, 9 May 2013

ಲೇಖನ; ಪುಸ್ತಕ ಕುರಿತು

 ಅಬಚೂರಿನ ಪೋಸ್ಟಾಫೀಸು (ಕಥಾಸಂಕಲನ) ; ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಹೊಸ ದಿಗಂತದೆಡೆಗೆ ಎಂಬ ತಲೆಬರಹದಡಿಯಲ್ಲಿ ಲೇಖಕರು ನವ್ಯ ಸಾಹಿತ್ಯದೆಡೆಗೆ ಅಸಮಧಾನಗೊಳ್ಳುತ್ತ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ, ಎಂದು ಖಂಡಿಸುತ್ತ; ಅದಕ್ಕೆ ಅವರು ಮೂರು ಕಾರಣಗಳನ್ನು ಹೀಗೆ ನೀಡುತ್ತಾರೆ. ಮೊದಲನೇಯದಾಗಿ, ಯಾಂತ್ರಿಕವಾಗಿರುವ ಸಾಹಿತ್ಯದ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು. ಎರಡನೇಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತ್ಯ ವರ್ಗ. ಮೂರನೇಯದಾಗಿ ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡಿರುವ ಅದರ ಕ್ರಾಂತಿಕಾರಕತನ. ಈ ಮೂರು ಕಾರಣಗಳಿಂದ ನವ್ಯ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ. ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೇ ಇದರ ಸ್ಫೂರ್ತಿ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಇದರ ಮೌಲ್ಯಗಳು ಎಲ್ಲವನ್ನೂ ತ್ಯಜಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ತ್ವಿಕವಾಗಿ, ಸಮಗ್ರವಾಗಿ ಬದಲಾವಣೆಯಾಗುವುದರಿಂದ ಮಾತ್ರವೇ ಹೊಸ ಸಾಹಿತ್ಯ ಬಂದೀತು. ಹೊಸ ಉಪಮಾನಗಳು, ಹೊಸ ಪದಪುಂಜಗಳು, ಹೊಸ ಅಚ್ಚು ಮಾಡುವ ಕ್ರಮ ಇವುಗಳಿಂದಲ್ಲವೆಂದು ತೀವ್ರವಾಗಿ ತೇಜಸ್ವಿರವರು ಖಂಡಿಸಿದ್ದಾರೆ. (೧೯೭೩)

ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ತನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿದೆ ಎಂದು ಹೇಳುತ್ತ ನಮ್ಮೆದುರಿಗೆ ಅಬಚೂರಿನ ಪೋಸ್ಟಾಫೀಸು ಎಂಬ ಕಥಾಸಂಕಲನವನ್ನು ಇರಿಸಿದ್ದಾರೆ.

ಈ ಕಥಾಸಂಕಲನವು ಏಳು ಕಥೆಗಳನ್ನು ಒಳಗೊಂಡಿದೆ "ಅಬಚೂರಿನ ಪೋಸ್ಟಾಪೀಸು", "ಅವನತ", "ಕುಬಿ ಮತ್ತು ಇಯಾಲ", "ತುಕ್ಕೋಜಿ", "ಡೇರ್ ಡೆವಿಲ್ ಮುಸ್ತಷಾ", "ತಬರನ ಕಥೆ" ಮತ್ತು "ತ್ಯಕ್ತ".
ಪ್ರಾರಂಭದ ಕಥೆ, ಅಬಚೂರಿನ ಪೋಸ್ಟಾಫೀಸು, ಓದುಗರಲ್ಲಿ ಕುತೂಹಲವನ್ನು ಮೂಡಿಸುವಂತಹ ಪ್ರಾರಂಭವೇ ಆಗಿದೆ. ಕುಗ್ರಾಮವೊಂದರಲ್ಲಿ ಪೋಸ್ಟಾಫೀಸಿನ ಆರಂಭ, ಅಚಾನಕ್ಕಾಗಿ ನಾಯಕ ಬೋಪಣ್ಣನಿಗೆ ಪೋಸ್ಟ ಮಾಸ್ಟರ್‌ಗಿರಿ ಒದಗಿ ಬಂದದ್ದು, ಈ ಸಮಯದಲ್ಲಿ ಯಾರಿಗೋ ಬಂದಂತಹ ಪೋಸ್ಟ್ ಕವರನ್ನು ಕುತೂಹಲಕ್ಕೆ ತೆರೆದು ನೋಡಿ ಅಲ್ಲಿನ ಸ್ತ್ರೀಯ ನಗ್ನ ಚಿತ್ರಕ್ಕೆ ಬೆಸ್ತು ಬಿದ್ದದ್ದು. ಇದೇ ಕಾರಣವಾಗಿ ಸಭ್ಯನಾದ ಬೋಪಣ್ಣರಲ್ಲಿ ಕುಚೇಷ್ಟೆಗಳು ಆರಂಭವಾಗಿ ಹೆಂಡತಿ ಮತ್ತು ಹೆಂಡತಿಯ ತಾಯಿಗೆ ಮನೆಯ ವಾತಾವರಣದಲ್ಲಿ ಕಿರಿಕಿರಿ ಎನಿಸಿ, ಇವನೆಡೆಗೆ ತಿರಸ್ಕಾರ ಮನೋಭಾವ ಹೊಂದುತ್ತಾರೆ. ಹೆಂಡತಿಗೆ ಗಂಡನ ಚೇಷ್ಟೆಗಳಿಂದ ತಾಯಿಗೆ ಏನೆನಿಸುತ್ತದೋ ಎಂಬ ಭಯ, ತಾಯಿಗೆ (ವಿಧವೆ) ತನಗೆ ಇನ್ಯಾರು ದಿಕ್ಕು, ಮಗಳು ಅಳಿಯನ ಮೇಲೆ ಮೋಹಗೊಂಡು ಎಲ್ಲಿ ತನ್ನನ್ನು ತೊರೆದು ಹೊರಡುವಳೋ ಎಂಬ ಆತಂಕ, ಈ ಸಂದರ್ಭಗಳಲ್ಲಿ ಕಥೆಗಾರರು ಮನುಷ್ಯನ ಆಂತರಿಕ ಅವಲಂಬನೆಗಳ ಮುಗ್ಗಲುಗಳನ್ನು ನಮಗೆ ಪರಿಚಯರಿಸುತ್ತಾರೆ. ತನ್ನ ಮಗಳೇ ಆದರೂ ಮೊದಲು ತನಗೆ ಪ್ರಾಶಸ್ತ್ಯ ನೀಡಬೇಕು, ಮಗಳು ಗಂಡನನ್ನು ಬಿಟ್ಟು ಒಂಟಿಯಾಗಿದ್ದರೂ ಸರಿಯೇ ತನ್ನ ಕೊನೆಗಾಲದಲ್ಲಿ ನನ್ನೊಂದಿಗಿರಬೇಕು ಎಂಬ ತಾಯಿಯ ಸ್ವಾರ್ಥ ಇಲ್ಲಿ ಕಂಡುಬರುತ್ತದೆ.

ಬೇಲಾಯದವನ ಮಗಳ ಚಾರಿತ್ಯದ ಕುರಿತಾದ ಹಗರಣದಲ್ಲಿ ಮೂಗೂರಿನ ಮೇಸ್ತ್ರಿ ತನ್ನ ಮಾನ ರಕ್ಷಣೆಗಾಗಿ ಬೋಪಣ್ಣನನ್ನು ನಿಂದಿಸಲು ನಿಂತಾಗ ಮಾತಿಗೆ ಮಾತು ಬೆಳೆದು, ಬೋಪಣ್ಣನಿಗೆ, "ಹೌದೌದು, ನೀನೊಬ್ಬ ಅಪ್ಪಂತವ, ಊರವರೆಲ್ಲಾ ಪೋಲಿಗಳು, ನಿನ್ನ ಮನೆ, ನಿನ್ನ ಹೆಣ್ತಿ ಬಂದೋಬಸ್ತು ಮಾಡಿಕೊಂಡು ಊರವರ ಮಾತಾಡು, ನಿನ್ನ ಕೈ ಹಿಡಿದೊಳು ಎಷ್ಟು ಜನರ ಮನೇಲಿದ್ದು ಬಂದವಳೋ ನೋಡಿಕೋ". ಎಂದು ಮನ ನೋಯಿಸಲೇಂದು ಚುಚ್ಚಾಡುತ್ತಾನೆ. ಅತೀ ಕೋಪದಿಂದ ತಾಳ್ಮೆಯನ್ನು ಕಳೆದುಕೊಂಡು ಬೋಪಣ್ಣ ಮುಷ್ಟಿಕಟ್ಟಿ ಬಲವಾಗಿ ಮೂಗೂರಿನ ಮೇಸ್ತ್ರಿ ಮುಸುಡಿಗೆ ಗುದ್ದಿಬಿಡುತ್ತಾನೆ. ಮೇಸ್ತ್ರಿ ನೆಲಕುರುಳುತ್ತಾನೆ. ಈ ಸನ್ನಿವೇಶದಲ್ಲಿ ತನ್ನ ಪ್ರೀತಿಯನ್ನು ಸ್ವೀಕರಿಸದ, ತನ್ನನ್ನು ತಿರಸ್ಕರಿಸುವ ಹೆಂಡಂತಿಯ ಚಾರಿತ್ರ್ಯದ ಬಗ್ಗೆ ಮತ್ತೊಬ್ಬನು ಮಾತನಾಡುವಾಗ ಬೋಪಣ್ಣ ಸಿಡಿದೇಳುತ್ತಾನೆ. ಕಥಾ ನಿರೂಪಣೆಯಲ್ಲಿ ರಸಿಕ, ಪುಂಡ, ಚಪಲಚಿತ್ತನನ್ನಾಗಿ ಚಿತ್ರಿಸಿದ ಬೋಪಣ್ಣನಲ್ಲಿ ಅತೀ ಗಾಂಭೀರ್ಯ ಮತ್ತು ಹೆಂಡತಿ ಕಡೆಗಿನ ನಂಬಿಕೆಯು ಆತನ ಉದ್ರಿಕ್ತ ಕೋಪದಲ್ಲಿ ವ್ಯಕ್ತಗೊಂಡಿದೆ.

ಮುಂದಿನ ಕಥೆ "ಅವನತಿ"ಯಲ್ಲಿ ಸುರಸುಂದರಿಯಾದ ಗೌರಿ, ಸುಬ್ಬಯ್ಯನ ಹೆಂಡತಿ, ಮದುವೆಯಾಗಿ ನಾಲ್ಕು ವರ್ಷಗಳಲ್ಲಿ ಮೂರು ಮಕ್ಕಳನ್ನು ಹಡೆದಿದ್ದು, ಶೈಶವಾವಸ್ಥೆಯಲ್ಲಿಯೇ ತೀರಿಕೊಳ್ಳುತ್ತಿರುತ್ತವೆ. ಮಳೆಗಾಲದಲ್ಲಿ ಮಕ್ಕಳು ಜನಿಸುತ್ತಿದ್ದರಿಂದ ಹೀಗಾಗುತ್ತಿದೆ ಎಂದು ಗೌರಿ ಬಗೆದಿದ್ದಳು. ಸುಬ್ಬಯ್ಯನಿಗೆ ಯಾವುದೋ ಗುಪ್ತರೋಗವಿದ್ದುದರಿಂದ ಮಕ್ಕಳು ಸಾಯುತ್ತಿವೆ ಎಂದು ಅವರಿವರು ಊರಿನಲ್ಲಿ ನಗೆಯಾಡುತ್ತಲಿರುತ್ತಾರೆ. "ಹೇಗೆ ನೋಡಿದರೂ ಸ್ಫುರದ್ರೂಪಿಯಾದ ಗೌರಿ, ಅದು ಹೇಗೆ ಸುಬ್ಬಯ್ಯನನ್ನು ಮದುವೆಯಾದಳೋ?" ಎಂದು ಹೇಳುವಾಗ ಕಥೆಗಾರರು ಗೌರಿಯನ್ನು ದೋಷಮುಕ್ತಳನ್ನಾಗಿ ನಮ್ಮೆದುರು ನಿಲ್ಲಿಸುತ್ತಾರೆ. ಇಂತಹ ಗೌರಿಯ ಮೇಲೆ ಗಂಡನಾದ ಸುಬ್ಬಯ್ಯನು ದೋಷದ ಹೊರೆ ಹೊರಿಸಿ ಅವಳಿಗೆ ವೈದ್ಯವಾಗಬೇಕೆಂದು ಬರೆಯುವುದರ ಮೂಲಕ ಪುರುಷ ಪ್ರಧಾನ ಸಮಾಜದ ಚಿತ್ರಣವನ್ನು ಬಿಂಬಿಸಿದ್ದಾರೆ.

"ಕುಬಿ ಮತ್ತು ಇಯಾಲ" ಕಥೆಯಲ್ಲಿ ಅಜ್ಞಾನದಿಂದ ಬಾಲೆಯೊಬ್ಬಳ ಕೊಲೆ ಮತ್ತು ಅದರ ಸುತ್ತಮುತ್ತಲಿನ ರಾಜಕೀಯ, ಬಲಿಷ್ಟರ ದಬ್ಬಾಳಿಕೆಗಳ ಚಿತ್ರಣವನ್ನು ನೋಡಬಹುದು. ಕೊಲೆಯ ರಹಸ್ಯವನ್ನು ಕೊನೆವರೆಗೂ ಉಳಿಸಿ ಡಾ|| ಕುಬಿಯ ಕುರಿತು ಮತ್ತು ಇಯಾಲಳ ಕೊಲೆಯ ಸುತ್ತ ನಮ್ಮನ್ನು ಗಿರಕಿ ಹೊಡಿಸಿ, ಬಾಲೆಯ ಮುಗ್ಧತೆ ಮತ್ತು ಕೊಲೆಯ ಕರಾಳತೆಯನ್ನು ಬಿಚ್ಚಿಡುತ್ತ ಕೊಲೆಯ ರಹಸ್ಯವು ತೆರೆದುಕೊಳ್ಳುವಂತ ಕಥಾ ನಿರೂಪಣೆ ಕಾಣಬಹುದು. ಇಯಾಲಳ ಕೊಲೆ ಓದುಗರಲ್ಲಿ ಅವ್ಯಕ್ತ ನೋವನ್ನುಂಟು ಮಾಡುವುದಂತೂ ಖಂಡಿತ. ಅಜ್ಞಾನಕ್ಕೂ, ಸ್ವಾರ್ಥಕ್ಕೂ ಅನಾದಿಕಾಲದಿಂದಲೂ ಮುಗ್ಧರ ಬಲಿ ನಡೆಯುತ್ತಲೇ ಬಂದಿದೆ.

ಗುರುಗಳ್ಳಿ ಬೆಳೆಯುತ್ತಿರುವ ಭಾರತದೊಂದಿಗೆ ವಿಕಾಸಗೊಳ್ಳುತ್ತಿದ್ದ ಹಳ್ಳಿ. ಅಲ್ಲಿನ ದರ್ಜಿ ತುಕ್ಕೋಜಿ, ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಬಗೆಯ ಶೈಲಿಯಲ್ಲಿ ಬಟ್ಟೆಗಳನ್ನು ಹೊಲೆದು ಕೊಡುತ್ತಿದ್ದನು. ಆಧುನಿಕತೆಯ ದಿಕ್ಕಿನಲ್ಲಿ ಮನುಷ್ಯರ ಮನದ ನಡೆಯನ್ನು ಈ ಪ್ರಕಾರವಾಗಿ ಲೇಖಕರು ಬಿಂಬಿಸಿದ್ದಾರೆ. ದರ್ಜಿ ತುಕ್ಕೋಜಿಗೆ ಅನುಯಾಯಿಯಂತಹ ಹೆಂಡತಿ ಸಿಕ್ಕು ಸುಖ ಸಂಸಾರ ಅವರದಾಗಿತ್ತು. ಅವರಿಗೆ ಮಕ್ಕಳಿಲ್ಲದ್ದೇ ಅವರ ದೊಡ್ಡ ಚಿಂತೆಯಾಗಿತ್ತು. ಬಯಸಿ-ಬಯಸಿ ಕೊನೆಗೂ ಒಂದು ಗಂಡು ಮಗುವಾಗುತ್ತದೆ. ಆ ಮಗುವನ್ನು ನಿಭಾಯಿಸುವಲ್ಲಿ ಗಂಡ-ಹೆಂಡತಿಯರ ಸೆಣೆಸಾಟದ ಸನ್ನಿವೇಶಗಳಿದ್ದು, ಒಬ್ಬರಿಗೊಬ್ಬರಾಗಿದ್ದ ಅವರು ಕೊನೆಗೆ ಸದಾಕಾಲ ಒಬ್ಬರನ್ನೊಬ್ಬರು ನಿಂದಿಸುತ್ತ ತಮ್ಮ ಜಗಳದಲ್ಲಿ ಮಗವನ್ನು ಮೂದಲಿಸುತ್ತ ಬಯಸಿ ಪಡೆದ ಮಗುವನ್ನು ಕಡೆಗಣಿಸುವಂತಾಗುತ್ತಾರೆ. ಒಮ್ಮೆ ಯಾರೋ ಒಬ್ಬ ಕ್ರಾಲರ್‌ನ ಡ್ರೈವರ್, ಮಗುವನ್ನು ಆಡಿಸುವವನಂತೆ ಎತ್ತಿಕೊಂಡು ಕೆಲಕಾಲ ಕಣ್ಮರೆಯಾದಾಗ ಗಂಡ-ಹೆಂಡಿರಿಬ್ಬರು ದಿಗ್ಬ್ರಾಂತರಾಗಿ ನಿಲ್ಲುತ್ತಾರೆ. ಅವರಿಗೆ ದಿಕ್ಕೇ ತೋಚದಂತಾಗಿ ಒಬ್ಬರ ಮುಖವನ್ನೋಬ್ಬರು ನೋಡದಂತ ಅಪರಾಧಿ ಮನೋಭಾವವನ್ನು ಅನುಭವಿಸುವ ವೇಳೆಗೆ ಮಗುವನ್ನು ಕರೆದೊಯ್ದ ಕ್ರಾಲರ್‌ನ ಡ್ರೈವರ್ ಮತ್ತೆ ಮರಳಿ ಬರುವುದು ಕಾಣುತ್ತದೆ. ಕಳೆದೇ ಹೋಯ್ತು ಎನ್ನುವ ಮಗು ಮತ್ತೆ ಸಿಗುವುದರ ಮೂಲಕ ಮಗುವಿನ ಬೆಲೆಯನ್ನು ಕಂಡುಕೊಳ್ಳುತ್ತಾರೆ. ಮಾನವ ಸಂಬಂಧಗಳ ಮೌಲ್ಯದ ಬಗ್ಗೆ ಈ ಕಥೆಯು ಬೆಳಕು ಚೆಲ್ಲಿದೆ.

ಇಡೀ ಕಥಾಸಂಕಲನದಲ್ಲಿ "ಡೇರ್ ಡೆವಿಲ್ ಮುಸ್ತಫಾ" ಕಥೆಯು ವಿಶಿಷ್ಟವಾಗಿಯೂ, ವಿನೋದಕರವಾಗಿಯೂ ಮೂಡಿಬಂದಿದೆ. ಕಥೆಯಲ್ಲಿ ಅಂದಿನ ಧರ್ಮಾಂಧತೆಯ ವಿಸ್ತಾರವನ್ನು ತಿಳಿಸುತ್ತ ಹೇಗೆ ಒಬ್ಬ ಇಸ್ಲಾಂ ಧರ್ಮದ ಹುಡುಗ ಒಂದು ಹಿಂದೂಗಳ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುತ್ತಾನೆ; ಆತನ ಕುರಿತು ಸಹಪಾಠಿಗಳ, ಗುರುಗಳ ಮತ್ತು ಸಮಾಜದ ಧೋರಣಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಗಣೇಶನ ಹಬ್ಬದುತ್ಸವದಂದು ಎಲ್ಲಿ ಹಿಂದೂ-ಮುಸ್ಲಿಂ ಜಗಳವಾಗುತ್ತದೋ ಎಂದು ಎಲ್ಲರೂ ಎಣಿಸುವಾಗ ಗಣಪನ ಮುಂದೆ ಮೆರವಣಿಗೆ ಬರುತಿದ್ದ ಸಹಪಾಠಿ ಬಸವನ ಬೆನ್ನಿಗೆ ಪಂಜಿನ ಕೊಳವು ತಾಗಿ, ಬಸವ ಅಪಾಯದಲ್ಲಿದ್ದಾಗ ಮುಸ್ತಫಾ ಅವನಿಗೆ ಸಹಾಯ ನೀಡಿ ಅಪಾಯದಿಂದ ಪಾರುಮಾಡಿ ಎಲ್ಲರ ಮನವನ್ನು ಗೆಲ್ಲುತ್ತಾನೆ. "ಜಾತಿಗಿಂತ ಮನಸ್ಸು ದೊಡ್ಡದು". ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಕಾಲೇಜ್ ಯೂನಿಯನ್ ದಿನದಂದು ಮುಸ್ತಫಾ ಜಾದು ಮಾಡುವ ಭರದಲ್ಲಿ ಅಚಾತುರ್ಯದಿಂದ ಶಾಖಾಹಾರಿಯಾದ ಕಾಪ್ಟನ್ ರಾಮಾನುಜಂ; ತನ್ನ ಜೇಬಿನಲ್ಲಿ ತಾನೇ ಮೊಟ್ಟೆಹೊಡೆದುಕೊಳ್ಳುವಂತೆ ಮಾಡಿಬಿಡುತ್ತಾನೆ. ಸ್ವಾರಸ್ಯಕರ ಹಾಸ್ಯ ನಿರೂಪಣೆಯನ್ನು ನಾವಿಲ್ಲಿ ಕಾಣಬಹುದು. ಕಥೆಯ ಪ್ರಾರಂಭದಲ್ಲಿ ತಿರಸ್ಕೃತನಾಗಿದ್ದ ಮುಸ್ತಫಾ ಸಮಯ ಪ್ರಜ್ಞೆ-ಜಾಣತನ ಮತ್ತು ಹಾಸ್ಯದಿಂದ ಎಲ್ಲರೊಳಗೊಂದಾಗಿಬಿಡುತ್ತಾನೆ.

"ತಬರನ ಕಥೆ"ಯಲ್ಲಿ ಬ್ರಿಟೀಷರ ಕಾಲದಲ್ಲಿ ಕೆಲಸಕ್ಕೆ ಸೇರಿದ್ದ ತಬರ, ಸ್ವಾತಂತ್ರ್ಯ ಬಂದ ನಂತರ ನಿವೃತ್ತಿ ಹೊಂದಿರುತ್ತಾನೆ. ಅನೇಕ ಇಲಾಖೆಗಳಲ್ಲಿ ಕೆಲಸ ಮಾಡಿದ ತಬರನು ಸೇವೆಯಲ್ಲಿದ್ದಾಗ, ತನ್ನ ಆಚಾತುರ್ಯದಿಂದ ಸುಂಕದ ಎರಡು ರಶೀದಿಗಳನ್ನು ಬರೆದು, ತಾನೇ ಅದನ್ನು ಭರಿಸುವ ಬಾಬತ್ತಿಗೆ ಬೀಳುವಂತಾಗಿದ್ದೇ ಆತನ ವ್ಯಥೆಗೆ (ಕಥೆಯ)ಕಾರಣವಾಗಿದೆ. ತಬರನ ಸಂಕಷ್ಟಗಳ ಮೂಲ ತನ್ನ ಸಂಬಳಕ್ಕಿಂತ ಜುಲ್ಮಾನೆ ಸುಂಕವೇ ಹೆಚ್ಚಾಗಿರುವುದು. ಕೊನೆಗೆ ತನಗೆ ಪಿಂಚಣಿಯಾದರೂ ಬರಬಹುದೇನೋ ಅದರಿಂದ ತನ್ನ ಹೆಂಡತಿಯ ಉಲ್ಬಣಗೊಂಡ ಸಕ್ಕರೆ ಖಾಯಿಲೆಯನ್ನಾದರೂ ಗುಣಪಡಿಸಬಹುದೆನೋ? ಎಂಬ ಆಶಯದಲ್ಲಿ ಎಲ್ಲಾ ಕಛೇರಿಗಳಿಗೂ ತನ್ನ ಸೇವೆಯ ದೃಢತಾಪತ್ರಗಳನ್ನು ಸಂಗ್ರಹಿಸುತ್ತಾನೆ. ಫೈಲುಗಳು ಮುಂದಕ್ಕೆ ಹೋಗುವುದೇ ತಡ ಅದರಲ್ಲಿ ಒಂದೊಂದು ಕ್ವೈರಿಗಳು ಹುಟ್ಟಿಕೊಳ್ಳುತ್ತ ಹಿಂದಕ್ಕೆ ಬರುತ್ತಿದ್ದರೆ, ಇತ್ತ ಕಡೆ ಹೆಂಡತಿಯ ಅಸ್ವಸ್ಥತೆಯಿಂದ ಕಂಗೆಟ್ಟ ತಬರನಿಗೆ ಹುಚ್ಚು ಹಿಡಿದಂತಾಗಿರುತ್ತದೆ.

ಗಾಂಗ್ರಿನ್‌ನಿಂದ ಹೆಂಡತಿಯ ಕಾಲನ್ನು ಮಂಡಿಯವರೆಗೂ ಕತ್ತರಿಸಬೇಕಾಗಿ ವೈದ್ಯರು ಹೇಳಿದಾಗ ಹಣದ ದಾರಿದ್ರ್ಯದಿಂದ ಕಂಗೆಟ್ಟ ತಬರ; ಮಾಂಸದಂಗಡಿಯ ಯೂಸೆಫ್‌ನನ್ನು ತನ್ನ ಹೆಂಡತಿಯ ಕಾಲನ್ನು ಮಂಡಿಯ ಕಾಲಿನವರಿಗೆ ಕಡಿದುಕೊಡುತ್ತೀಯಾ?, ಎಂದು ಕೇಳಿಕೊಳ್ಳುತ್ತಾನೆ. ಇದರಿಂದ ಖಾಯಿಲೆಯ ಬಗೆಗಿನ ಮೂಢ ನಂಬಿಕೆ, ಹಣದ ಅಭಾವದಿಂದ ಅಸ್ವಸ್ಥಗೊಂಡ ತಬರನ ಮನೋಸ್ಥಿತಿಯು ನಮ್ಮರಿವಿಗೆ ಬರುತ್ತದೆ. ಹಾಗೇಯೇ ಸರ್ಕಾರದ ವ್ಯವಸ್ಥೆ.
ಕೊನೆಗೂ ಹೆಂಡತಿಯೂ ತೀರಿಕೊಂಡು ಅರೆ ಹುಚ್ಚನಂತೆ ತಬರ ಅಲೆಯುತ್ತಿರಲು ಅವನಾಡುವ ಅನುಭವದ ಮಾತುಗಳು ಸ್ವಾತಂತ್ರ್ಯ ಪೂರ್ವದ ಸರ್ಕಾರ ವ್ಯವಸ್ಥೆಯನ್ನು ಹೊಗಳುತ್ತಿರುತ್ತದೆ. ಅರ್ಥವಾದವರಿಗೆ ಆತ ವೇದಾಂತಿ-ಮೇಧಾವಿ, ಇತರರಿಗೆ ಹುಚ್ಚ,,,,,,,,

"ತ್ಯಕ್ತ"ದಲ್ಲಿ ಲೇಖಕರು ತಾವು ಕಾಣಬಯಸುವ, ಬರೆಯ ಬಯಸುವ ಸಾಹಿತ್ಯದ ಹೊಸ ಸೆಲೆಯನ್ನು ಸೋಮನ ವ್ಯಕ್ತಿತ್ವದಲ್ಲಿ ತಂದುಕೊಂಡಂತೆಯೂ, ಅದನ್ನು ಅರ್ಥೈಸಲು ಸೆಣಸಾಡುವ ಪರಿ, ಗೆಳೆಯ ಹೇಮ ನಿಂದ ಅರ್ಥವಾಗದ ಪ್ರತಿಕ್ರಿಯ, "ಎಲ್ಲರನ್ನೂ ಹೆದರಿಸುವ ದುರಾತ್ಮ ನಾಗಿದ್ದೀಯ" ಎಂಬ ಗೆಳೆಯನ ಸಂಬೋಧಗಳು-ಇವು ನವ ರೀತಿಯ ಪ್ರಯೋಗದಲ್ಲಿ ಎದುರಾದ ಸನ್ನಿವೇಶಗಳ ಊಹೆಯನ್ನು ಈ ಕಥೆಯ ಪ್ರಾತ್ರಗಳ ಮೂಲಕ ಒಳಾರ್ಥದಲ್ಲಿ ವ್ಯಕ್ತಪಡಿಸಿರುವಂತೆ ನನಗೆ ಭಾಸವಾಗುತ್ತದೆ. ಪುಟ್ಟ ಕಂದ ಕಿಟ್ಟಿಯಲ್ಲಿ "ಜೀವಿಸುವ ಸ್ವಾತಂತ್ರ" ("ಪುಟಿಯುವ ಜೀವದ ಮಿಡಿತ")ವನ್ನು ಪ್ರಸ್ತುತಪಡಿಸಿದ್ದಾರೆ.

ಆ ಪುಟ್ಟ ಮಗುವಿನ ಜೀವಿಸುವ ಛಲ, ತುಂಟತನದ ಹಕ್ಕುಗಳನ್ನು ಲೇಖಕರು ಸಮರ್ಥಿಸುತ್ತಾರೆ. ಈ ಮೂಲಕ ಹೊಸ ಶೈಲಿಯ ಪ್ರಯೋಗದ ಹಕ್ಕಿಗೆ ಅವರು ಒತ್ತು ನೀಡಿರಬಹುದು.

"ಮಾತನ್ನು ತನ್ನೊಳಗೆ ಮಾತಿನ ಆಚೆಗೆ ಇರೋದರ ಮೇಲೆ ದಾಳಿ ಮಾಡೋದಕ್ಕೆ, ಅಂಧಕಾರದಲ್ಲಿ ಒಂದು ಸಾರಿಯಾದರೂ ಸತ್ಯವನ್ನು ನೋಡೋದಕ್ಕೆ ಸಾಧ್ಯವಯ್ಯ", ಎಂಬ ಸೋಮನ ಮಾತಿನಿಂದ ನಾವು ಅಂತರಾತ್ಮಾವಲೋಕನದ ದಾರಿಗಳನ್ನು ಕಂಡುಕೊಳ್ಳುವಂತೆ ಮಾತಿನಿಂದ ಸೆಳೆದಿದ್ದಾರೆ.

ಮನೆಯ ಅಜ್ಜಿಯ ಸಾವಿನಲ್ಲಿ ಆ ಪುಟ್ಟ ಮಗು ಅನುಭಾವಿಸುವ ಸತ್ಯದ ಅರಿವಿನ ಭಾವವನ್ನು ಲೇಖಕರು ಸುಲಲಿತವಾಗಿ "ಆ ಅದೇ" ಮಾತಿನಾಚೆಯ ಭಾವವನ್ನೂ ಪರಿಚಯಿಸಿದ್ದಾರೆ. ಹೌದು ನಮ್ಮ ಮಾತಿನಾಚೆಗೆ ಅದೆಷ್ಟೋ ಮಾತುಗಳಿವೆ, ಭಾವಗಳಿವೆ. ಎಲ್ಲವನ್ನೂ ಶಬ್ದ ರೂಪಕ್ಕಿಳಿಸಲು ಸಾಧ್ಯವಾಗದ್ದೇನೋ. "ಆ ಅದೇ" ಭಾವಗಳನ್ನು ಕೆಲವೊಮ್ಮೆ ಮೌನಗಳು ಅಲಂಕರಿಸಿಬಿಡುತ್ತವೆ. ಹಾಗಾಗಿ ಮೌನಕ್ಕೆ ಬೆಲೆ ಹೆಚ್ಚು ಎಂದೆನಿಸುತ್ತದೆ.

ಒಟ್ಟಾರೆಯಾಗಿ ಈ ಪುಸ್ತಕದ ಕುರಿತಾಗಿ ಹೇಳುವುದಾದರೆ, ಈ ಕಥಾಸಂಕಲನವು ಜೀವನದ ಹಲವು ಮಜಲುಗಳನ್ನು ಸುತ್ತಿಸಿ, ಜೀವನಾನುಭವವನ್ನು ನೀಡುವುದರೊಂದಿಗೆ ತೇಜಸ್ವಿರವರ ಭಾಷೆಯಲ್ಲಿನ ನವೀನತೆಯ ಸ್ವೀಕಾರ, ಕಾರಣ, ಪರಿಣಾಮಗಳನ್ನು ಅವರ ಊಹೆಗಳಂತೆ ಕಥೆಗಳಲ್ಲಿ ಅಲ್ಲಲಿ ವ್ಯಕ್ತಪಡಿಸಿರುವುದನ್ನು ನಾವು ಗಮನಿಸಬಹುದು. ಮೊದಲ ಬಾರಿ ಓದಿದಾಗ ಕಥೆಗಳನ್ನು ನಾವು ಅಸ್ವಾಧಿಸಿದರೆ ನಂತರದ ಓದಿನಲ್ಲಿ ಲೇಖಕರ ಭಾಷೆ ಬಗೆಗಿನ ಧೋರಣೆ, ಹೊಸ ನೀತಿಗಳನ್ನು ಕಂಡು ಅರ್ಥಗಳನ್ನು ಅರಗಿಸಿಕೊಳ್ಳುತ್ತ ಹೋಗುತ್ತೇವೆ. ಕೃತಿಯು ನಮ್ಮನಕ್ಕಿಳಿಯುತ್ತ ನಮ್ಮನ್ನು ವಿಮರ್ಶಕತೆಗೆ ಈಡುಮಾಡುತ್ತದೆ.
ಧನ್ಯವಾದಗಳು

ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ  ಪಂಜು ಪತ್ರಿಕೆಯ  ಸಂಪಾದಕರು ಮತ್ತು ಬಳಗಕ್ಕೆ ನನ್ನ ಅನಂತ ವಂದನೆಗಳು :-)


-ದಿವ್ಯ ಆಂಜನಪ್ಪ

ಲೇಖನ; ಪುಸ್ತಕ ಕುರಿತು

ಯು.ಆರ್. ಅನಂತಮೂರ್ತಿಯವರ ಭಾರತೀಪುರ



ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ.
ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ ನಾಯಕನ ಬಗ್ಗೆ ಅಸೂಯೆ ಭಾವ ಹೊಂದಿದ್ದು ಅವನೊಟ್ಟಿಗೆ ವ್ಯಾಸಂಗ ಮಾಡುತ್ತಿರುತ್ತಾನೆ. ಈ ಮೂವರಲ್ಲಿಯೂ ಸ್ನೇಹವು ಗಾಢವಾಗಿರುತ್ತದೆ.
ಉನ್ನತ ಶಿಕ್ಷಣದ ನಂತರ ‘ಭಾರತೀಪುರಕ್ಕೆ’ ಮರಳಿ ಬಂದಂತಹ ಜಗನ್ನಾಥನಿಗೆ ‘ಭಾರತೀಪುರ’, ಮೌಡ್ಯತೆಯ ಆಗರವಾಗಿ ಕಾಣುತ್ತದೆ. ಶೂದ್ರರ ದೇವ ಭೂತರಾಯ, ಭೂತರಾಯನ ಒಡೆಯ ಮಂಜುನಾಥಸ್ವಾಮಿ ಹೀಗೆ ಮೇಲ್ವರ್ಗದ ಜನಾಂಗ ಶೂದ್ರರನ್ನು ತಮ್ಮ ನಿಯಂತ್ರಣಕ್ಕೆ ಅನಿವಾರ್ಯವಾಗಿ ಒಳಪಡಿಸಿರುತ್ತಾರೆ. ಭಾರತೀಪುರದಲ್ಲಿ ಮಲ ಹೋರುವ ಹೊಲೆಯರಿರದಿದ್ದರೆ ಈ ಪುರವೆಲ್ಲಾ ಕೊಳೆತು ನಾರುತ್ತಿತ್ತೇನೋ ಎನಿಸುತ್ತದೆ. ಹೊಲೆಯರಿಂದಲೇ ಶುದ್ಧವಾಗುವ ಊರು, ಅವರು ಮಂಜುನಾಥ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದರೆ ಅಪವಿತ್ರವಾಗುವುದಾದರೂ ಹೇಗೆ? ಎಂದು ಯೋಚಿಸುತ್ತಾನೆ. ಬಂಡಾಯದ ಬಗ್ಗೆ ಮಾತನಾಡಿ ಮೆಚ್ಚಿಗೆ ಗಿಟ್ಟಿಸಿದ ಜಗನ್ನಾಥನಿಗೆ ಈ ಭಾರತೀಪುರದಲ್ಲಿ ಸುಧಾರಣೆ ತುರ್ತು ಅಗತ್ಯವಾಗಿ ಕಾಣುತ್ತದೆ.
ಇಡೀ ಕಥೆಯಲ್ಲಿ ಜಗನ್ನಾಥನ ಧ್ಯೇಯ ಒಂದೇ ಹೇಗಾದರೂ ಸಮಾನತೆಯನ್ನು ಸಾಧಿಸಬೇಕು. ಅದಕ್ಕಾಗಿ ಮೊದಲು ಹೊರೆಯರನ್ನು ದೇವಾಲಯಕ್ಕೆ ನುಗ್ಗಿಸಬೇಕು ಎಂಬುದು. ಆದರೆ ತನ್ನ ಮುಖವನ್ನು ತಲೆ ಎತ್ತಿ ನೋಡಲು ಹೆದರುವ ಹೊಲೆಯರು ಈ ಕಾರ್ಯಕ್ಕೆ ಸಿದ್ಧರಾಗುವರೇ? ಎಂದು ಸಂದೇಹಿಸಿ, ಮೊದಲು ಇವರಿಗೆ ಅಕ್ಷರ ಜ್ಞಾನವನ್ನು ನೀಡಬೇಕೆಂದು ತನ್ನ ಮನೆಯಂಗಳದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸುತ್ತಾನೆ. ಮಂಜುನಾಥ ಸ್ವಾಮಿಯಜಾತ್ರೆಯ ದಿನದಂದು ಹೊಲೆಯರನ್ನು ದೇವಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿ ಪತ್ರಿಕೆಯಲ್ಲಿಯೂ ಪ್ರಕವಣೆ ನೀಡುತ್ತಾನೆ. ಇದಕ್ಕೆ ಊರಿನವರಿಂದ ಹಾಗೂ ಹೊರಗಿನ ಜನರಿಂದಲೂ ಸಾಕಷ್ಟು ವಿರೋಧ-ಅವಿರೋಧ ಪ್ರತಿಕ್ರಿಯೆಗಳು ಬರುತ್ತದೆ. ನಾಯಕನಿಗೆ ಹೊರಗಿನಿಂದ ಬೆಂಬಲವನ್ನು ನೀಡಬಂದ ವ್ಯಕ್ತಿಗಳು ತಮ್ಮ ಕುಸಿಯುತ್ತಿರುವ ‘ಹಿರೋಯಿಸಮ್’ ನನ್ನು ಎತ್ತಿ ಹಿಡಿಯುವ ಸಲುವಾಗಿ ಜಗನ್ನಾಥನ ಕ್ರಾಂತಿಕಾರ್ಯವನ್ನು ಬಳಸಿಕೊಳ್ಳುವ ಸಂದರ್ಭಗಳು ಮತ್ತು ಆ ಸಂದರ್ಭಗಳಲ್ಲಿನ ನಾಯಕನ ನಿಲುವು ಓದುಗರ ಮನದಲ್ಲಿ ನಿಲ್ಲುತ್ತದೆ.
ಈ ನಡುವೆ ಜಗನ್ನಾಥನ ಗೆಳತಿ, ‘ಮನದನ್ನೇ’ಯಾಗಿದ್ದ ‘ಮಾರ್ಗರೇಟ್’, ಇಂಗ್ಲೆಂಡಿನಲ್ಲಿ ಉಳಿದಿದ್ದ ಗೆಳೆಯ (ಸದಾ ಕಾಲ ಜಗನ್ನಾಥನ ಬಗೆಗೆ ಅಸೂಯೆ ಪಡುವವ) ನೊಂದಿಗೆ ತನಗೆ ಏರ್ಪಟ್ಟು ಹೊಸ ಸಂಬಂಧವನ್ನು ತಿಳಿಸಿದಾಗ, ಜಗನ್ನಾಥ ಕುಗ್ಗಿ ಹೋಗುತ್ತಾನೆ. ಸಾವರಿಸಿಕೊಂಡು ತಾನು ಮತ್ತೆ ಮಾರ್ಗರೇಟನ್ನು ಪಡೆಯುತ್ತೇನೆಂಬ ಆಶಯವನ್ನು ದೃಢವಾಗಿಸಿಕೊಂಡು ತನ್ನ ಧ್ಯೇಯೆದೆಡೆಗೆ ಹೆಚ್ಚು ಜಾಗೃತನಾಗಿ ಕಾರ್ಯನಿರ್ವಹಿಸುತ್ತಾನೆ. ಜಗನ್ನಾಥ ಮಾರ್ಗರೇಟನ್ನು ಕಳೆದುಕೊಂಡ ನೋವನ್ನು ಓದುಗರು ಕೂಡ ಅನುಭವಿಸುವಂತೆ ಕಾದಂಬರಿಕಾರರು ಚಿತ್ರಿಸಿದ್ದಾರೆ.
ಅನೇಕ ವಿಘ್ಞಗಳ ನಡುವೆಯೂ ಜಗನ್ನಾಥನ ದೃಢಸಂಕಲ್ಪ ನಡೆದೇ ತೀರುತ್ತದೆ. ಹೊಲೆಯರು ಜಾತ್ರೆಯ ದಿನದಂದು ದೇವಾಲಯವನ್ನು ಪ್ರವೇಶಿಸುತ್ತಾರೆ. ಇದು ಪತ್ರಿಕೆಗಳಲ್ಲಿಯೂ ಸುದ್ಧಿಯಾಗುತ್ತದೆ. ಮುಂದಿನ ಹಂತವೆಂಬಂತೆ ಶೋಷಿತ ವರ್ಗದವರೊಂದಿಗೆ ರೈತರನ್ನು ಸೇರಿಸಿ ಕ್ರಾಂತಿ ಮಾಡುವ ಯೋಚನೆಯನ್ನು ನಾಯಕ ಹಾಕುತ್ತಿರುವಾಗ, ಅತ್ತ ಕಡೆ ದೇವಾಲಯದಲ್ಲಿ ಶುದ್ಧ ಮಾಡಿ ಮತ್ತೆ ಶ್ರೀ ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆಯ ಕಾರ್ಯ ಸಿದ್ಧತೆ ನಡೆದಿರುತ್ತದೆ. ಏನೇ ಕ್ರಾಂತಿ ಕಾರ್ಯಗಳಾದರೂ ಬದಲಾಗದ ಸಮಾಜ ಇಲ್ಲಿನ ಕಥಾ ವಸ್ತು.
ಕಾದಂಬರಿಯಲ್ಲಿನ ಭಾಷಾ ಶೈಲಿ ತುಂಬಾ ಇಷ್ಠವಾಗುತ್ತದೆ. ಸರಳವಾಗಿ ಭಾವನೆಗಳ ಕಲ್ಪನೆ ಮೂಡಿಸುವ ಕಾರ್ಯ ನಡಿದಿದೆ ಪ್ರತೀ ಸನ್ನೀವೇಶದಲ್ಲೂ ವ್ಯಕ್ತಿಯ ಆಂತರಿಕ ಆಲೋಚನೆಗಳು ಖಿನ್ನತೆ, ಆಸೆಗಳನ್ನು ಹಾಗೂ ಬಾಹ್ಯ ನಡೆಗಳ ಚಿತ್ರಣವನ್ನು ಒಟ್ಟೊಟ್ಟಿಗೆ ನಮಗೆ ಕಟ್ಟಿಕೊಡುತ್ತಾರೆ. ಈ ವಿಶೇಷತೆ ನನಗೆ ತುಂಬಾ ಇಷ್ಟವಾಯಿತು. ಸರಳ ಮಾತುಗಳಿಂದ ವ್ಯಕ್ತಿಯ ವಿವಿಧ ಬಲ-ದೌರ್ಬಲ್ಯಗಳನ್ನು ಪಾತ್ರಗಳ ಮುಖೇನ ನಮಗೆ ದರ್ಶಿಸುತ್ತಾರೆ. ಇದರ ಮೂಲಕ ನಮ್ಮನ್ನು ‘ಅಂತರಾವಲೋಕನ’ಕ್ಕೆ ತೊಡಗುವಂತೆ ಮಾಡಿದ್ದಾರೆ.
ಮತ್ತೊಂದು ಸಂಗತಿಯೆಂದರೆ, ಈ ಕಾದಂಬರಿಯಲ್ಲಿ ಗಂಡು-ಹೆಣ್ಣಿನ ಸಂಬಂಧವು ಪ್ರೇಮಮಯವಾಗಿರದೆ ಕಾಮಮಯವಾಗಿರುವುದು ಮನಸ್ಸಿಗೆ ಏಕೋ ಸಂಕಟವಾಗುತ್ತದೆ. ಈ ಸಂಬಂಧದಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತದೆ. ಉದಾಹರಿಸುವುದಾದರೆ, ಮನೆಯ ಆಳು ಕಾವೇರಿ, ಜೋಯಿಸರ ಸೊಸೆ ನಾಗಮಣಿಯರನ್ನು ಮೋಹಿಸುವ ಜಗನ್ನಾಥ, ತನ್ನ ಪ್ರೇಯಸಿ ಮಾರ್ಗರೇಟನ್ನೂ ಬಯಸುತ್ತಾನೆ. ಆಕೆ ಇನ್ನೊಬ್ಬನಲ್ಲಿ ಆಸಕ್ತಳಾದಾಗ ನೋಯುತ್ತಾನೆ, ಕುಗ್ಗುತ್ತಾನೆ. ಹಾಗಾದರೆ ಈತ ಯಾರಿಗೆ ಪ್ರಾಮಾಣಿಕನಾಗಿದ್ದಾನೆ? ಎಂಬುದು ಪ್ರಶ್ನೆ.

 ಕಥಾ ನಾಯಕ ಜಗನ್ನಾಥ ತನ್ನೇಲ್ಲಾ ಭಾವನೆಗಳನ್ನು ಸದಾಕಾಲ ಮನಸ್ಸಿನಲ್ಲಿಯೇ ‘ಮಾರ್ಗರೇಟಿ’ಗೆ ಕಾಗದವನ್ನು ಬರೆಯುತ್ತಿರುತ್ತಾನೆ. ಇದರಿಂದ ಮಾನಸಿಕವಾಗಿ ಆಕೆ ಯಾವಾಗಲೂ ಅವನೊಂದಿಗೆ ಇರುತ್ತಿದ್ದಳು. ಇಂತಹ ಗೆಳತಿ ತನಗೆ ದ್ರೋಹ ಮಾಡಿದಳೆಂದು ತಿಳಿದು ಸಹ ಅವಳನ್ನು ಮತ್ತೆ ತಾನು ಜೀವನದಲ್ಲಿ ಪಡೆಯುತ್ತೇನೆಂಬ ಜಗನ್ನಾಥನ ಆಶಯ ಮತ್ತು ನಿರೀಕ್ಷೆಗಳನ್ನು ಇಲ್ಲಿ ಪ್ರೀತಿಯೇ ಆಗಿರಬಹುದೆಂದು ತಿಳಿದು ಸಮಾಧಾನಗೊಳ್ಳುತ್ತೇನೆ.
ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಸಾಮಾಜಿಕ ಕಾದಂಬರಿ. ಸಮಾಜದಲ್ಲಿನ ಮೌಡ್ಯತೆ, ಅಸಮಾನತೆ, ದಬ್ಬಾಳಿಕೆ, ಕುತಂತ್ರ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದೆ.
ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವಂತಹ, ಕಿತ್ತು ಹಾಕುವಂತಹ ಯೋಚನೆಗಳನ್ನು ನಮ್ಮಲ್ಲಿಯೂ ಹುಟ್ಟು ಹಾಕುತ್ತದೆ.
ನನ್ನ ದೃಷ್ಟಿಕೋನ, ವಿಶ್ಲೇಷಣೆಯಲ್ಲೇನಾದರೂ ದೋಷವಿದ್ದರೆ, ಎಚ್ಚರಿಸಿ ಸಹಕರಿಸಿರಿ. ಧನ್ಯವಾದಗಳು.
08/10/2012

ಈ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ  ಪಂಜು ಪತ್ರಿಕೆಯ  ಸಂಪಾದಕರು ಮತ್ತು ಬಳಗಕ್ಕೆ ನನ್ನ ಅನಂತ ವಂದನೆಗಳು :-)

-ದಿವ್ಯ ಆಂಜನಪ್ಪ