Tuesday, 30 September 2014

ಮಳೆಗಾಲದಲಿ ಮಳೆಹನಿಗೂ
ಕವಿತೆಗಳಿಗೂ ಸ್ಪರ್ಧೆಯಂತೆ!
ಕವಿಯೊಬ್ಬ ಮೌನವಾದರೆ
ಕೋಗಿಲೆಗೆ ದನಿಯಿಲ್ಲವಂತೆ!
ಕಲೆಗಾರ ಕವಿ ಕೊರೆದರೆ ಕೋಗಿಲೆಯ ಹೃದಯ
ಕಂಠ ಶುದ್ಧ, ದನಿ ಮಧುರ!
ಕವಿತೆಗಳು ಪ್ರೇಮ ಕೊಂಡಿಗಳು
ಕವಿಗೂ ಕಿವಿಗೂ ನಡುವಿನ ಕೋಗಿಲೆಗೂ!!
DA

%%%%%%%%%%%%%

ಒಂದೇ ಸಮನೇ ಸುರಿದು
ಮರೆಯಾದ ಮಳೆಯಂತೆ
ಅವನ ಪ್ರೇಮ!
ನೆನಪಿರುವುದು ಸದಾ
ನೆನೆದ ಕಾರಣಕೆ,,

30/09/2014


ಕೋಪವು ಬಹಳ ನನಗೆ
ಅದಕೆ ಎಲ್ಲವೂ ಒಮ್ಮೆಲೆ ದೂರ!
ದೂರಲಾರೆ ಯಾರನೂ,
ಎನ್ನನೇ ಬಿಂಬಿಸಿಕೊಂಡೆನು ಗಡುಸೆಂದು!
ಪಡೆಯಲಾರೆ, ಬೇಡಲಾರೆ ಕೆಟ್ಟ ಸ್ವಾಭಿಮಾನ ನನ್ನದು!
ನಿಮ್ಮ ಭಾಷೆಯ ಅಹಂ!

%%%%%%%%%%%%%%%%%

ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆ
ಯಾರೋ ಹೇಳಿದ ಮಾತ ಕೇಳಿ
ಸಜ್ಜಾದ ಗಾಳದಲಿ ಮೀನು ಹಿಡಿಯ ಹೊರಟೆ,
ಮೀನನ್ನೇನೋ ಹಿಡಿದೆ, ಆದರೆ ಅದರ ಹೆಜ್ಜೆಯನ್ನಲ್ಲ
ಹೆಣ್ಣನ್ನೇನೋ ಒಲಿಸಿಕೊಂಡೆ ಆದರೆ ಅವಳ ಮನೋಭಿಲಾಶೆಯನ್ನಲ್ಲ!
ನಾನೊಬ್ಬ ಮೀನುಗಾರ, ಮೀನ ಹಿಡಿದು ತರುವೆ!!

%%%%%%%%%%%%

ಪ್ರೀತಿ ಕಾಡಿದಷ್ಟು
ಶೃಂಗಾರ ಕಾಡಲೇ ಇಲ್ಲ
ಆಗಾಗ ಕೆಣಕಬಹುದಷ್ಟೇ
ಹೆಣ್ಣು ಸೋಲುವಳು ಪ್ರೀತಿಗೆ
ಕುರುಡು ಕಾಮನೆಗಳಿಗಲ್ಲ,
ಇದೇ ನನ್ನ ಉತ್ತರ
ರಸ ಸಮಯವ ಸಾಧಿಸಲು
ಹೆಣಗುವ ತಂಗಾಳಿಗೆ, ಚಂದ್ರಮನಿಗೆ,
ವಿರಹದುರಿಯ ಸೂರ್ಯನಿಗೆ!,,

30/09/2014


ಕವಿತೆಗಳು ಮನಸ್ಸನ್ನು ತೆರೆದಿಟ್ಟರೆ
ಮನಸ್ಸು ವಾಸ್ತವದಲ್ಲೇ ಹುದುಗಿದೆ
ಒಮ್ಮೆ ನಗು ಒಮ್ಮೆ ಅಳು
ಅದುವೇ ಜೀವನ, ನಿತ್ಯವೂ ರಸ ಕಾವ್ಯ !!

%%%%%%%%%%%%%%%%%

ಚಂದ್ರಮಾ,
ನಿನ್ನ ಆಗಮನದ ಸಮಯವ ಬದಲಿಸಿಕೋ
ನೀ ಬರುವ ಹೊತ್ತಿಗೆ
ಉಂಡು ಮಲಗೋ ನಾನೂ ಇನ್ನೂ ದೂರ!
ತುಸು ಬೇಗ ಬಂದುಬಿಡು ಸಂಜೆಗೆ,,
ಒಟ್ಟಿಗೆ ಊಟ ಮಾಡೋಣ,, ಕತೆ ಕೇಳೋಣ
ನೀ ಹಾಡಿಗೆ ನಾ ನಿದಿರೆಗೆ ಹೊಂದಿಕೊಳ್ಳೋಣ!!

%%%%%%%%%%%%%

ಈ ಕವಿತೆಗಳಲ್ಲೇ ನಾ ಕಳೆದು ಹೋಗೋ ಭಯವಿದೆ!,
ಬಯಸಿದ್ದೆಲ್ಲವೂ ಸಿಕ್ಕಿಬಿಡೋ ಖುಷಿ,,
ವಾಸ್ತವೆಲ್ಲಾ ಊದಿ ಬಿಟ್ಟ ಬೂದಿ!
ಈ ಕವಿತೆಗಳಲ್ಲೇ ಕಳೆದು ಹೋಗೋ ಭಯವಿದೆ
ಆದರೂ ಜೊತೆಗೊಬ್ಬ ಗೆಳೆಯನ ಕವನ
ಕಳೆದು ಹೋದ ನನ್ನ ಹುಡುಕಿಕೊಡುವುದೆಂದೇ
ಸುಳ್ಳೇ ನನ್ನ ಆಶಯ!!

29/09/2014

ಕವನ

ಪ್ರೀತಿ,,,,,


ಪ್ರೀತಿ, ಏನೆಲ್ಲಾ ಮಾಡುತ್ತದೆ?!
ಸುಳ್ಳೇ ಆದರೂ
ಕನಸುಗಳ ಹುಟ್ಟಿಸುತ್ತದೆ,,
ಹಿತವಾದ ಭ್ರಮೆಗಳಲಿ,, !!
ದೆಗೆಯಲೂ ತಂಗಾಳಿಯ ಅನುಭವ
ಅಮಾವಾಸ್ಯೆಯಲ್ಲೂ ಚಂದ್ರೋದಯದ ಉನ್ಮಾದ
ಶೀತಲ ಭಾವವೂ ಹೊತ್ತಿ ಉರಿವ ದೇದೀಪ್ಯಮಾನ
ತಾನಿಂತ ನೆಲೆವೇ ತೇಲೊ ಸ್ವರ್ಗ
ಈ ಕನಸುಗಳಿಗೆ ಹೇಗೆ ಗೊತ್ತೊ ಪ್ರೇಮ ಪರಿಪಾಠ
ಹುಚ್ಚು ಕಾಮನೆಗಳಲಿ ಹರಿದು ಭೋರ್ಗರೆತ
ಸುಂದರ-ಸುಮಧುರುಗಳೆಲ್ಲವೂ ಸುತ್ತಲ ನಿರ್ವಾತ
ಧ್ಯಾನಸ್ಥಿತಿಯಿಂದೆದ್ದ ಮಾನಸ ರುದ್ರ
ಪ್ರೀತಿ ಏನೆಲ್ಲಾ ಮಾಡುತ್ತದೆ
ಪಾಮರನೂ ಲಯದಲಿ ಹಾಡುವಂತೆ
ವಿರಹಿಗಳೂ ಪ್ರಣಯಿಗಳಾಗುವಂತೆ
ಮೋಡ ಮಳೆಗರೆವಂತೆ,
ಕಾಮನಬಿಲ್ಲು ಜಗದಗಲ ಹಬ್ಬುವಂತೆ
ಜೀವನ ಭಗ್ನಶಿಲೆಗಳೂ
ವಿಭಿನ್ನ ಕಲಾಕೃತಿಗಳಾಗಿ ನಿಲ್ಲುವಂತೆ
ನನ್ನಂತೆ,, ಈ ಜಗದಂತೆ,
ಒಳಿತನ್ನಷ್ಟೇ ಪ್ರೀತಿಸುವ
ಸಕಲ ಚೇತನಗಳಂತೆ

29/09/2014
ಎನ್ನ ಕುರಿತು ಕವನ ಬರೆಯೆಂದ
ಪೋರರೆಲ್ಲಾ ಸೋತು ಹೋದರು
ತಲೆಯಾಡಿಸಿ ಕೂತ ನನ್ನೆದುರು,
ಹೀಗೊಂದು ಸುಳಿ ಗಾಳಿ ಗೆಳೆಯ
ಕವಿತೆ ಕಟ್ಟಿ ಕಟ್ಟಿಸುತ್ತಿದ್ದಾನೆ
ಗಾಳಿಯಿದ್ದಷ್ಟು ಕಾಲ ನಾನೂ ಹಾಡುವೆ
ಹಾಡಿಸೊ ಜಾಣತನ ಅವನದಷ್ಟೇ,,

29/09/2014

^^^^^^^^^^^^^^^^^^^^^^^^^^^^

ಪ್ರೀತಿಸುವೆ ನಿನ್ನ ನಾ ಎನಲು
ಅಡ್ಡವಾದದ್ದಾದರೂ ಎನ್ನ ಅಹಂ ಎನ್ನದಿರು
ಏನು ಮಾಡಲಿ, ನಾನೂ ಅಂತೆಯೇ ಭಗ್ನಗೊಂಡ ಕನಸಿನವಳು
ಭಯವಿರುವುದಾದರೂ ಎದುರಾಗೋ ತಿರಸ್ಕಾರಗಳದ್ದು,,,
,,,,,, ನಿನಗೂ ಹಾಗೆಯೇ?!

28/09/2014

^^^^^^^^^^^^^^^^^^^^^

ಮನಸಿಗಿಳಿಯಲು
ಹುಲುಸು ಸಮಯವ
ಕಾಯಲೇ ಬೇಡ ನೀ
ಮರಿ ಜಿಂಕೆ ಜಿಗಿವಂತೆ
ಜಗಿದು ಸೇರಿಕೊ
ಕಸಿವಿಸಿಯ ಬಿಸಿಯುಸಿರ
ಈ ಎದೆಯೊಳಗೆ
ಕಣ್ಣೆವೆಗಳಪ್ಪವ ಮುನ್ನ
ನಶೆಯ ಕಣ್ಣೊಳಗೆ
ನನ್ನಯ ಕನಸೊಳಗೆ

27/09/2014

Sunday, 28 September 2014

ಚಿತ್ರಗಳು


28/09/2014



^^^^^^^^^^^^^^^^^^^^^^^^^

ನನ್ನ ಪ್ರತೀ ಹುಮ್ಮಸ್ಸಿಗೂ
ವ್ಯಂಗ್ಯವಾಡುವ ಅವಳು
ಕಾರಣ ಹೇಳದೆ ದೂರಾಗಿದ್ದು
ಒಂದು ದಿವ್ಯ ವಿದಾಯ;
ಈ ನನ್ನ ಪ್ರತೀ ಹುಂಬತನಕ್ಕೂ
ಗರಿಕೆದರಿ ಬಣ್ಣ ತುಂಬಿಸೊ ಇವಳು
ಹತ್ತಿರಾದಾಗಿನಿಂದ ಹೊಸ ಸುಪ್ರಭಾತ!

^^^^^^^^^^^^^^^^^^^^^

ಕಾಲದೊಳೆಲ್ಲೋ ಕಳೆದು
ಮತ್ತೆಲ್ಲೊ ಸಿಲುಕಿಕೊಂಡೆವು
ಎನ್ನುವುದೆಲ್ಲವೂ ಸುಳ್ಳೇ
ನಾವಿದ್ದ ತಾಣದಲ್ಲೇ ನಾವಿದ್ದೇವೆ,
ಮುಂದಣ ಹಜಾರವಷ್ಟೇ
ಮಾರ್ಪಟ್ಟಿದೆ
ಆಸೆಗಳು ನಮ್ಮ ಕಲ್ಪನೆಗಳನು
ಓಡಿಸಿದಂತೆ,,
ಎಂತಹ ದುರಂತ?!
ನಿಲ್ದಾಣದಲ್ಲೇ ನಿಂತು ಮುಂದಲೂರಿನ
ಕನಸು ಕಂಡಂತೆ...

27/09/2014
^

ಕಾಲದೊಳೆಲ್ಲೋ ಕಳೆದು
ಮತ್ತೆಲ್ಲೊ ಸಿಲುಕಿಕೊಂಡೆವು
ಎನ್ನುವುದೆಲ್ಲವೂ ಸುಳ್ಳೇ
ನಾವಿದ್ದ ತಾಣದಲ್ಲೇ ನಾವಿದ್ದೇವೆ,
ಮುಂದಣ ಹಜಾರವಷ್ಟೇ
ಮಾರ್ಪಟ್ಟಿದೆ
ಆಸೆಗಳು ನಮ್ಮ ಕಲ್ಪನೆಗಳನು
ಓಡಿಸಿದಂತೆ,,
ಎಂತಹ ದುರಂತ?!
ನಿಲ್ದಾಣದಲ್ಲೇ ನಿಂತು ಮುಂದಲೂರಿನ
ಕನಸು ಕಂಡಂತೆ...

28/09/2014

ಚಿತ್ರಗಳು


26/09/2014


ಚಿತ್ರಗಳು


24/09/2014



ಒಂದೇ ಸಮನೆ ಮಳೆಯಲಿ
ತೊಯ್ದ ಇಳೆ
ಅಲ್ಲೆಲ್ಲೋ
ಹಕ್ಕಿಗಳ ಚೀವ್ ಚೀವ್
ನಿಂತ ಮಳೆಗೆ ಗುಡುಗು ಹಿಮ್ಮೇಳ
ಕಾವಿಟ್ಟ ಹಬೆ
ರಸ ನಿಮಿಷವೀ ಘಳಿಗೆ
ಸ್ವರ್ಗಕ್ಕೇ ಕಿಚ್ಚು ಹೊತ್ತಿಸೊ
ಕಾವ್ಯ ಹುಟ್ಟೊ ಸಮಯ,,,,,,
ಕೆಹು ಕೆಹು......
ಛೇ,,,
ಈ ಹಾಳಾದ ಕೆಮ್ಮು
ಧರಗಿಳಿಸಿ ಬಿಸಿ ನೀರ ಕುಡಿಸಿದೆ...

24/09/2014
^^^^^^^^^^^^^^^^^^^

ಕೆಮ್ಮಿರಲಿ ಜ್ವರವಿರಲಿ
ಜೊತೆಯಲಿ ನೀನೆಂಬ
ನಾಮವಿರಲಿ ಸಾಕೆನಗೆ;
ಜ್ವರದಲೂ ಕನವರಿಸುವೆ ನಿನ್ನೊಲವ,
ಕೆಮ್ಮಿನಲೂ ಕಲ್ಪಿಸಿರುವೆ
ಕೈಹಿಡಿದು ರಮಿಸುವ ನಿನ್ನ,,
ನೀನು ಎನ್ನುವ ಕಲ್ಪನೆಯೇ ಚೆಂದ
ನೀನು,,,
ನೀನು,,,
ಎನ್ನ ಕಣ್ಣೋಳ ಮೀನು!

23/09/2014

^^^^^^^^^^^^^^^^^^^^^^^^^^^^

ಗೆಳೆಯನಾಗದ ಗೆಳೆಯ,,
ಅವನೊಮ್ಮೆ ನಿಟ್ಟುಸಿರನಿಡಲು
ಒಳಗೊಳಗೇ ಬೇಯ್ವ ಹೃದಯ
ಬದುಕ್ಕಿದ್ದಾದರೂ ಏಕೊ
ಆಯುಷ್ಯವಿದೆ ಎಂಬ ಕಾರಣಕೊ
ನಿರ್ಲಿಪ್ತವಾದ ಭಾವಗಳ ಕೊಲ್ಲಲೊ
ಕೊನೆಗೂ ಜೀವಿಸಿ ಸಾಧಿಸುವುದಾದರೂ ಏನನೊ
ಗೆಳೆಯನಾಗದ ಗೆಳೆಯನ ನೆನಪುಗಳಿಗೆ ಸಾಕ್ಷಿಯಾಗಲೋ,,,,,

^^^^^^^^^^^^^^^^^^^

ಮಳೆಯ ಹೊಡೆತಕೆ
ಕನಸು ಸಡಿಲ, ಎಚ್ಚೆತ್ತ ನಿದಿರೆ
ಇದಕೆ ಯಾರೂ ಹೊರತಲ್ಲ
ಮನಸು ತುಂಬಿದವರು
ತುಂಬಿಕೊಳ್ಳೊ ಕಾತುರದವರು

23/09/2014

^^^^^^^^^^^^^^^^^

ಬೆರೆಯದೆ
ಬೆಸೆದುಕೊಳ್ಳುವುದಾದರೂ ಹೇಗೆ
ಹೇಳೇ ಪ್ರೀತಿ?!

22/09/2014

ಚಿತ್ರಗಳು


21/09/2014

ಚಿತ್ರಗಳು


14/09/2014

ಚಿತ್ರಗಳು



07/09/2014

ಕವನ

ಎನ್ನ ನಂಬಿ,,,



ಎನ್ನ ನಂಬಿ''
ಎನ್ನುವುದು ಎಷ್ಟು ಕಷ್ಟವೋ!!
ಅವರಿವರು ಕೆಸರು ಕದ್ದಾರು,
ಎನ್ನ ಗದ್ದೆಯಲ್ಲೀಗ ಪೈರಿಲ್ಲ
ಅವರೆಲ್ಲಾ ದನಗಳ ಬಿಟ್ಟಾರು
ಪೈರಿಲ್ಲದ ಗದ್ದೆಯೆಲ್ಲಾ ದನದ ಹೆಜ್ಜೆ,
ಎನ್ನ ನಂಬಿ,,
ಕಾಲುವೆಯ ನೀರು ತಿರುಗಿಸ್ಯಾರು
ಅವರಿವರ ಹೊಲ-ಗದ್ದೆಗಳಿಗೆ,
ಎನ್ನ ಶ್ರಮಕ್ಕೆಲ್ಲಾ ಅವರ ಹೊಲ ಹಸನು
ನಂಬಿ ನನ್ನ,
ನಾ ಬೆಳೆದ ಫಲ ಎನಗಿಲ್ಲ,,
ಕದ್ದರು ಒಯ್ದರು ಬೆಳೆದಂತೆ ಅವರೇ,,
ಈಗೀಗ ನಾ ಬೆಳೆಬಾರದೆಂದು ರಾತ್ರೋ ರಾತ್ರಿ
ಕದ್ದಾರೋ ಆ ಸೂರ್ಯನ,
ನಾ ಹೇಗೆ ಬೆಳೆಯಲಿ ಎನ್ನ ಗದ್ದೆಯಲಿ ಏನನ್ನಾದರೂ
ನಂಬಿ ಎನ್ನ,
ಎನ್ನುವುದು ಎಷ್ಟು ಕಷ್ಟವೋ
ಅವನ ಸೂರ್ಯನ್ನನ್ನೇ ಅವರಿವರು ಕದ್ದರು
ಕತ್ತಲ ತುಂಬಿಸಿಹರಂತೆ
ಅವನ ಗದ್ದೆಯೊಳು ಬಿತ್ತಿ ಬೆಳೆಬೆಳೆವನೆಂದು
ಅವನ ಹೆಸರು ಹಾಳು ಮಾಡಿಹರು
ನಂಬಿ ಬಿಡೋಣ ಬಿಡಿ ನಾವು ನೀವು!!
ನಂಬಿ ಎನ್ನ,
ಎನ್ನುವುದು ಎಷ್ಟು ಕಷ್ಟವೋ?!!

21/09/2014
ನವಿಲು ಕುಣಿವುದು ಅದರಂತೆ
ನಮ್ಮ ನಿಮ್ಮ ಅಭಿಮಾನದಾಶಯವಿಲ್ಲದೆ
ಹಾಗೆಯೇ ಒಬ್ಬ ಸಜ್ಜನ ನಡೆವನು ಅವನಂತೆ
ತನ್ನ ಬಣ್ಣಿಸದೇ, ಅವರಿವರ ಜರಿಯದೇ

^^^^^^^^^^^^^^^^^^^^^^^^^^^^^

ಮನುಷ್ಯ ತನಗೆ ಬೆನ್ನೇ ಇಲ್ಲದಂತೆ
ಮುನ್ನೆಡೆದ ಹಿಂದಾಕಿದ ದಾರಿಗಳ ದೂರಿ
ತಾನು ಮಾಡಿದ್ದೇ ಸರಿಯೆಂದು ಘೋಷಿಸಿಕೊಂಡ
ತನ್ನ ಬೆನ್ನಿಗೆ ಕಣ್ಣೇ ಇಲ್ಲದಂತೆ,
ತನ್ನೇದುರಿನ ರೂಪವನ್ನೇ ಬಿಗಿದಪ್ಪಿದ
ಕನ್ನಡಿಯೊಳ ಮೋಹವನ್ನೇ ಮರೆಮಾಚಿ
ಕಟು ಸತ್ಯಗಳ ಕೊಲೆಗೈದ
ಸಾಕ್ಷಿಯಾಗೊ ತನ್ನ ಕಣ್ಣುಗಳೇ ಇಲ್ಲದಂತೆ!!

21/09/201

^^^^^^^^^^^^^^^^^^^^^

ಕೆಲವೊಮ್ಮೆ 'ಕಳೆದೇ ಬಿಟ್ಟೆವು'
ಎಂದೆನಿಸುವಾಗ
ಮತ್ತೊಮ್ಮೆ ಸಿಕ್ಕದ್ದೇ ಆದಲ್ಲಿ
ಅದುವೇ ಸ್ನೇಹ ವಿಶ್ವಾಸಗಳು
ಪ್ರಾಮಾಣಿಕ ಮನಗಳದು!

15/09/2014

Monday, 22 September 2014



ಬಿಟ್ಟು ನಡೆಯುವರೆಲ್ಲಾ ನಡೆದುಬಿಡಲಿ,
ಜೊತೆಯಿದ್ದು ಕಸಿವಿಸಿಕೊಳ್ಳುವುದು ಬೇಡ!

**********************

ಓಡಿದಷ್ಟೂ ಹಿಂಬಾಲಿಸೊ
ಸೋಲುಗಳು;
ಗೆಲುವುಗಳಿಗೇ
ನಾವು
ಅನಿವಾರ್ಯವಾಗಿಸಿಬಿಡುವವು!

***********************

ಗುಂಪಿನಿಂದ ಓಡಿದ್ದು
ಇನ್ನು ಸಾಕು,,
ಗುಂಪಿಗೊಂದು ಒಳ ಕೊಂಡಿಯಾದರೂ
ಆಗೋ ಆಲೋಚನೆಯಿದೆ,,
ಮನಸಿಗಷ್ಟು ಕಸರತ್ತು, ...
ಚಿಂತನೆ
ಅರಳೊ ಹೊಂಬಣ್ಣಗಳ ತುಂಬಿಕೊಳ್ಳ
ಹೊಸ ಹೊಸ ಕಾಮನೆಗಳು ಮೇಳೈಸಿ
ಮೆರೆದಿದೆ ಮತ್ತೆ ಮತ್ತೆ ಮನವು
ಹೊರಳಿ ಬೆಳಕಿನೆಡೆಗೆ,,,


13/09/2014

*********************************

ಬಾಳೊಂದು ಭಾವಗೀತೆ, ಭರವಸೆಯೆ ಪಲ್ಲವಿ,,,, :-)

************************

ಎನ್ನ ಕನ್ನಡಿ
ಎನಗೇ
ಸೊಗಸೆನಿಸಿದಾಗ
ಜಗದ ಮಸುಕೆಲ್ಲಾ
ಸಹ್ಯ!

10/09/2014
*******************************

ಪ್ರಜ್ವಲಿಸೊ ಬೆಂಕಿ ಒಳಗೊಳಗೇ ಸುಟ್ಟಿದ್ದು
ಅರಿವಾಗುವುದು ಬೆಳಕು ನಂದಿದ ನಂತರವೇ,,!!

07/09/2014
**********************

ಮೆಚ್ಚಲು
ಮನಸ್ಸಿರಬೇಕು
ಕಣ್ಣೆದುರಿಗಿನ
ಸೊಗಸಿಗಿಂತ!!
ಮೊಸರೊಳ ಕಲ್ಲಾಗ...
ಇದ್ದರೂ ಮಾಯ!!!


06/09/2014

Saturday, 6 September 2014

ಗುರು,,


ಅಕ್ಷರಕೂ ಶಿಕ್ಷಕನಿಗೂ
ಅದೇನು ನಂಟೊ
ಒಂದಕ್ಷರವ ಕಲಿಸಿ
ಎರಡನೇಯದನ್ನು ನೀನೇ
ತಿದ್ದೆಂದ ಜೀವನವೂ
ಮಹಾ ಗುರುವೇ ಸರಿ,,

05/09/2014


'ವಿಚಿತ್ರ'ವೆಂದರೂ ಸರಿಯೆ
'ವಿಚಿತ್ರ'ದೊಳೊಂದು 'ಚಿತ್ರ'ವಿಹುದು
ಮುಂದೊಮ್ಮೆ ಚಿತ್ರವೆನಿಕೊಳ್ಳಲೂಬಹುದು
ವಿಚಿತ್ರವೂ ಹಲವು ತರತರ ಗೆರೆಗಳ ಹಾವಳಿಗೆ
ಬಣ್ಣಗಳು ತುಂಬಿ ಕಳೆಯುವ
ಲೆಕ್ಕಾಚಾರಗಳಿಗೆ,,

************************

ಅವರ ಗೆಲುವ ಸಹಿಸಲಾಗದವರು
ದೂರಿ ದೂರ ಸರಿಯುವರು
ಉದಯಿಸೊ ಸೂರ್ಯನೆದುರು
ರವರವ ಬೆಳಕ ದೊಡೆತಕೆ
ಕಣ್ಣು ತೆರೆಯದ ಅಸಹಾಯಕತೆಗೆ
ಬಿಸಿಲನೇ ದೂರಿ ಕಣ್ಣ ಮುಚ್ಚುವರು
ಕೈ ನೆರಳ ಆಸರೆ ಬಯಸಿ!

******************

ಆಸೆಗಳ ಮೀರುತ
ವೈರಾಗ್ಯ ಹತ್ತಿರಾಗಿ
ಬದುಕು ಮುಗಿವ ಮುನ್ನ
ಬದುಕಿಬಿಡುವ ಆಸೆಯು
ಭಗ್ನಗೊಂಡ ತಪ
ಮರುಭೂಮಿಯಿಂದ ಹೊರಟ
ಒಂದು ಪರಿಮಳ!

04/09/2014

ಕವನ

ಕನಸ ಬಲೆ,,,


ಕನಸ ಬಲೆಯ ಹೆಣೆಯುತ್ತಿದ್ದೆ
ಬಂಧಿಯಾಗುವ ಭಯವಾಗಿ
ನಡುವೆಯೇ ಕಣ್ಮರೆಯಾದ
ಈ ನಡುವೆ ಕನಸಿನ ಮಹಲು ನನ್ನದು
ರೂಪುಗೊಳ್ಳುತ್ತಿದೆ ಸುಂದರ
ಸಿಂಹಾಸನವೊಂದು ಖಾಲಿ
ಅದು ಅವನಿಗಾಗಿ ಕಾತರಿಸಲು,,
ಅವನಿಗಿನ್ನೂ ಭಯವಂತೆ
ಕಾರಣ
ಅವ ಬರುವ ಮುನ್ನ, ಬಂದ ನಂತರವೂ
ನನ್ನದೇ ಹೃದಯ ರಾಜ್ಯಭಾರ
ಅವನನೂ ಸೇರಿಸಿ... ;-)

04/09/2014

ಕವನ

ಆ ಮನ,,,


ಆ ಮನಕೆ
ಜೀವನದ ಸೌಂದರ್ಯವನ್ನು
ನಂಬಿಸುತ್ತಿದ್ದಳು
ಕರಿ ನೆರಳು,
ಕಳೆದ ಭಾವ
ಹೊಸಕಿದ ಕನಸಿನ ಪರಿವೆ
ಅವಳಿಗೂ ಇದ್ದ ಕಾಲ,

ಬೆಳಕು ಉರಿಯುತ್ತಿರಲು
ಕಣ್ಣಿಗೆ ಕಾಣದ ಗಾಳಿ
ಬೇಕಿದ್ದ ನೆಪವಿದೆ,,
ಬದುಕಲು ಒಳ ಒತ್ತಡವಿರಬೇಕು
ಪ್ರೀತಿಯಲಿ ತೇಲೊ ಹುಮ್ಮಸ್ಸಿರಬೇಕು
ಹುಟ್ಟು ಹಾಕಿ ದುಃಖಗಳನು
ಹಿಂದಾಕುತಾ ಮುಂದೆ ಸಾಗಬೇಕು..
ಆ ತೀರವ ಸೇರಲೆಂದು,, ಇಲ್ಲವೇ
ಮುಳುಗದೇ ಸಾಗಲೆಂದು,,
ಕರಿ ನೆರಳ ಹೀಗೊಂದು ನಿರೂಪಣೆ,,

02/09/2014


ನೀನೆಷ್ಟು ಬಚ್ಚಿಟ್ಟುಕೊಂಡರೇನು
ಮರದ ಮರೆಯಲಿ,
ನೀ ಹಿಂದಿರುಗಿ ನೋಡಿಯೇ ಇಲ್ಲ
ನಿನ್ನ ಬೆನ್ನಿಗೆ ನಾನೂ ಬಚ್ಚಿಟ್ಟುಕೊಂಡಿರುವೆ!

ಅವರ್ಯಾರು ನೋಡಿಲ್ಲ,,

***********************

"ಅವನು ಮತ್ತು ಕನಸು"

ನನ್ನ ಕನಸುಗಳನು ಪೋಣಿಸಿಕೊಳ್ಳಲು ಅವನಿಲ್ಲ,
ಆದರೂ ನನ್ನ ಕನಸುಗಳಿಗೆ ಕೊನೆಯೇ ಇಲ್ಲ
ಅವನೇ ಬಂದು ಪೋಣಿಸಿ ಎಣಿಸಿ ಮಾಲೆಯಾಗುವನು
ಎಂಬುದೇ ನನ್ನ ದೊಡ್ಡ ಕನಸು
ಕನಸುಗಳಿಗೀಗ ಬರವಿಲ್ಲ
ಎಲ್ಲಾ ಕನಸುಗಳಲೂ ಅವನೇ ಇರುವನಲ್ಲ
ಇದು ಮಾತ್ರ ಕನಸಲ್ಲ!

****************

ಪ್ರೀತಿಯಲಿ ಮುನಿದವರು
ಗಮನ ಸೆಳೆಯಲು ಜರಿದವರೇ
ಒಮ್ಮೊಮ್ಮೆ ಬಹುವಾಗಿ
ಇಷ್ಟವಾಗಿಬಿಡುವರು,,!

02/09/2014

***************

ನಡು ರಾತ್ರಿ ಕನಸಲಿ
ಹಸಿರು ತಂದವನೇ
ಕತ್ತಲೆಯ ಕಪ್ಪೊಳು
ನಿನ್ನ ನಿಶಾನೆಯ
ಗುರುತು ಹಚ್ಚಲಾಗಲಿಲ್ಲ
ಜತನದಿ ಹಗಲಾಗಿ ಬಾ
ನಾ ಹಗಲುಗನಸಿನವಳು!

01/09/2014

ಕವನ

ಕ್ಷಮೆ,,,,,


ಕ್ಷಮಿಸಿಬಿಡಬೇಕು ಅವರೆಲ್ಲರನೂ
ಚೂರಿ ಹಾಕದೆ ಕತ್ತು ಹಿಸುಕದೆ
ಜೀವವಿದ್ದೂ ಇಲ್ಲವಾಗಿಸಿ
ಒಳಗೊಳಗೇ ಒಸರೋ ರಕ್ತಕೆ
ಮದ್ದು ಮಾಡಿಕೊಳ್ಳಲಾಗದೆ 
ಕಂಬಗಳಂತೆ ನಮ್ಮ ನಿಲ್ಲಿಸಿದ 
ಆ ಅಷ್ಟೂ ಜನರನ್ನು,,
ಕ್ಷಮಿಸಿಬಿಡಬೇಕು,,

ಹೌದು ಕ್ಷಮಿಸಿಬಿಡಬೇಕು
ನಮ್ಮೊಳಗಿನ ಮೃದುತ್ವ ಕಳೆದು
ಕಲ್ಲೊಂದು ಜೀವ ತಳೆದು
ದಿನ ಬೆಳಗಾಗುತ್ತಲೆ
ಕಣ್ಣೀರ ಇಂಗಿಸಿ ನಿಂತ
ನಮ್ಮದೇ ಮುಖವು 
ಭಾವಗಳ ಗೆರೆಗಳಳಿಸಿ
ನಗುವನ್ನೊಂದು ಚಿನ್ಹೆ ಮಾಡಲು
ಕಲಿಸಿದ ಆ ಎಲ್ಲಾ ಜನರನೂ
ಕ್ಷಮಿಸಿಬಿಡಬೇಕು,,,

ಕ್ಷಮಿಸಿಬಿಡಬೇಕು
ಹೆಜ್ಜೆ ಹೆಜ್ಜೆಗೂ ಕಾಲೆಳೆದ
ಇದ್ದ ಇರದ ಸುಳ್ಳ ಸೃಷ್ಠಿ ಮಾಡಿ
ಹೊರಗೆಳೆದ ನಮ್ಮ ವಿನೂತನ ಶಕ್ತಿಗಾಗಿ
ನಮ್ಮ ನಾವೇ ಹೆಮ್ಮೆಯ ಸವಾಲುಗಾರರಾಗಿ
ಕಾಣೊ ಅವಕಾಶಗಳ ನೀಡಿದ ಜನರನು
ಕ್ಷಮಿಸಿ ಹಾರೈಸಿ ಬಿಟ್ಟುಬಿಡಬೇಕು,,
ಬೇಕೆಂದರೂ ಸುಳಿವು ಸಿಗದಂತೆ
ಪ್ರೀತಿಯನು ದ್ವೇಷಿಸಿದ ಅವರಿಂದ
ದೂರ ದೂರ ನೆಡೆದು,,,

01/09/2014


ಜೀವನದ ದುರಂತಗಳನ್ನೆಲ್ಲಾ ಬಿಚ್ಚಿಡಬೇಕಿರಲಿಲ್ಲ
ಸೋಗಸೇನಿಲ್ಲ ನಿನ್ನಲಿ ಎನ್ನುವೆಯೇನೋ
ಎಂದಷ್ಟೇ ಹರಿದುಬಿಟ್ಟೆ ಅಂದು ಪದಗಳಲಿ

***********************

ಚಿಕ್ಕ ಮಗುವು ಕೈಯೊಳಿಂದ
ನವಿಲು ಗರಿಯ
ಕಿತ್ತುಕೊಂಡು ಓಡುವಂತೆ
ನೀ ನನ್ನಿಂದ ಮಾತುಗಳ
ಸೆಳೆದುಕೊಂಡು ಹೋದೆ,
ಮರಳಿಸುವುದಾದರೂ ಎಂದು?
ಹೇಳಿ ಹೋಗಬಾರದಿತ್ತೆ?!,,,,

**************************

ಚಿಗುರೋ ಹೃದಯಕೆ
ಏನೇನೋ ಆಸೆಗಳು ಕನಸುಗಳು,
ಪ್ರೀತಿ ಪ್ರೇಮ ಕನವರಿಕೆಗಳು,
ಅನಿರೀಕ್ಷಿತ ಹೊಡೆತಕೆ
ಜೀವನ ರಾಗ ಏರುಪೇರು,,
ದುಃಖ ಉಮ್ಮಳಿಸಲು
ಕಣ್ಣೀರ ಸುರಿಸಲಾರದ ಮೂಕ,,
ಕಣ್ಣಿರಿಗೆ ಮುತ್ತೋ ಧೂಳುಗಳ ಕಾರಣ
ಬತ್ತಿಸಿಕೊಳ್ಳೊ ಕೊಳಗಳ ಮಾಲೀಕರು!!
ಜೀವನವೊಂದು ನಾಟಕ,,
ನಗುವೊಂದು ಸಾಧನವದದ್ದು ವಿಪರ್ಯಾಸ,,

31/08/2014

************************************

ಬೆನ್ನ ಹಿಂದೆ ನಿಂತು ಎಷ್ಟು ಆಟವಾಡುವೆಯೋ ಕೃಷ್ಣ
ನವಿಲು ಗರಿಗಳೆಲ್ಲಾ ಚೆಲ್ಲಾಪಿಲ್ಲಿ ನೋಡು
ಮಡಿಕೆ ಬೆಣ್ಣೆಯೂ, ದೇವಕಿಗೆ ಮೊದಲೇ ತಿಳಿದಿತ್ತೋ ಏನೋ
ನಿನ್ನ ತುಂಟತನ ಅದಕೆ ನನಗೆ ವಹಿಸಿದಳು ನಿನ್ನ,,

*****************

ಇಲ್ಲ ಇಲ್ಲವೆಂದೇ ಕಳೆದೆ
ನಿನ್ನ ಇರುವಿಕೆಯ ಲೆಕ್ಕಿಸದೆ,
ಹೃದಯವಿರುವುರಾದರೂ ಹೇಗೆ
ಮಿಡಿಯುತ ನೀ ನಿಲ್ಲದೆ,,

30/08/2014