Saturday, 7 February 2015




ಎಲ್ಲಾ ಬಿಟ್ಟು ಹೊರಟ ಮೇಲೂ
ತಿರುಗಿ ನೋಡೊ ಸೆಳೆತವೇಕೊ
ಈ ಪ್ರೀತಿ;
ಬಿಟ್ಟರೂ ಬಿಡದ ಮಾಯೆಯೇ!

08/02/2015

ಕವನ

ನನ್ನ ಮಾತುಗಳು


ಈಗೀಗ ನನ್ನ ಮಾತುಗಳು
ನೋವುಗಳ ಮುಚ್ಚಿಡದು
ಫ್ರತಿಭಟಿಸುವ ಹೊಂಚು
ನಾನು ನನ್ನಂತಿಲ್ಲವೆನಿಸಿದೆ
ತೇವವಾರಿದ ಮರದ ಎಲೆಯಂತೆ ಒರಟು!

ಬೀಗವಿಲ್ಲದ ಬಾಗಿಲೊಂದು
ಬಡಿದುಕೊಳ್ಳುತ್ತಿತ್ತು
ಬೀಗವಿಲ್ಲ; ಬಾಯಿಯೂ ಇಲ್ಲ
ನನಗೆ
ಕೇಳಿ ಕೇಳಿ ಕಿವುಡಾದೆನೊ ಇಲ್ಲ
ಮೂಗಿಯೋ
ಅಂತು ನನಗೆ ಮಾತಿನ ರೂಢಿಯಿಲ್ಲ

ಕಟ್ಟೆಯೊಡೆದಂತೆ ಒಮ್ಮೊಮ್ಮೆ
ಉಕ್ಕಿಬಿಡುವ ಹತಾಶೆ-ನೋವುಗಳು
ಬಹು ತೀಕ್ಷ್ಣವಾಗಿ
ಹೊರ ಬೀಳೊ ನನ್ನಯ ಮಾತುಗಳು!
ಆ ಚೂರಿಯಂತ ನನ್ನ ರೀತಿಗೆ
ನಾನೇ ನೋಯುತ್ತಲಿರುವೆ
ಅದರ ಮತ್ತೊಂದು ತುದಿಯೂ ಮೊನಚೇ
ನನ್ನೊಳಗೆ!


ತೇವವಾರಿದ ಎಲೆಯು ಒರಟೇ,
ಹಸಿರು ಕಳೆದುಕೊಂಡ ನೋವಿನ ಊಟೆ
ಮುದುಡದ ಆಕಾರವದು ಕುರುಚಲೇ
ತಾಗಿದರೆ ಮುರಿದು ಉದುರುವುದು

07/02/2015

ಕವನ

ಮತ್ತದೇ.............
ಏಕಾಂತ........


ಮಲ್ಲಿಗೆಯ ಘಮ
ನೇಸರ, ಸಂಜೆ
ಮಳೆ, ಹೊಂಬೆಳಕು
ಕಾಮನಬಿಲ್ಲೇ ಹರಡಿಕೊಂಡಿದ್ದೆ
ಒಳ ಮನೆಯೊಳು!

ಈಗೆಕೋ ಬಚ್ಚಿಟ್ಟ
ಹಿತ್ತಲ ವಿಷಗಳೆಲ್ಲಾ 
ನಡು ಮನೆಗೆ ದಾಳಿಯಿಟ್ಟಿವೆ 
ಗಾಳಿಯೊಡ ಸಂಗ ಮಾಡಿ!

ಎಲ್ಲವನೂ ತೂರಿ ಹೊರ ಹಾಕಬೇಕು
ಏನು ಮಾಡಲಿ ಆಜು  ಬಾಜಿನವರು
ಆಡಿಕೊಂಡಾರೆಂಬ ಭೀತಿ
ಅಂಜಿಕೆಯಿಂದಲೇ ಬಚ್ಚಿಟ್ಟೆ, 
ಮತ್ತೇನನ್ನೋ ಹರವಿಕೊಂಡೆ
ಎಷ್ಟು ಸುರಿದರೂ ಸುಗಂಧ
ತೊಲಗಿಸೀತೆ ಕಳಂಕ!

ಮೂರ್ಛೆ ಹಿಡಿದಂತೆ ಕಾಲ
ನಡೆದಿದೆ
ಬಿಟ್ಟು ಎಲ್ಲಾ ಆಕಾಂಕ್ಷೆಗಳ
ಹೀಗೆ ಬರಿಗೈನಲ್ಲಿ
ಹೂವೂ ಇಲ್ಲ, ವಿಷವು ಇಲ್ಲ
ಕವಿದ ಮಸುಕೆಲ್ಲಾ ಸರಿದಂತೆ

07/02/2015

Friday, 6 February 2015

ಕವನ

ನನ್ನ ಕವಿತೆಗಳು


ನನ್ನ ಕವಿತೆಗಳು
ನನ್ನನ್ನೇ ಅಣಕಿಸಿದಂತೆ
ಭಾಸವಾಗಿದೆ
ಸ್ವಾರಸ್ಯವೆಂದರೆ
ನಾನೀಗ ಹೆದರುತ್ತಿರುವೆ
ನನ್ನ ಸಾಲುಗಳಿಗೆ

ಯಾರೋ ಗೊಣಗಿಕೊಂಡಂತೆ
ಮರುಗಿದಂತೆ; ತಿವಿದು ಹೇಳಿದಂತೆ
ನನ್ನ ಕವಿತೆಗಳು
ವಿಶಿಷ್ಟ ಮುಖವಾಡಗಳಲಿ

ಬರೆಯಬಾರದಿತ್ತು ಹೀಗೆ
ಬಾಗಿಲು-ಚಿಲಕವಿಲ್ಲದೆ
ಮನವ ಬಯಲು ಮಾಡಿ
ಕೋಟೆ ಕಟ್ಟೋ ಯೋಚನೆ ಈಗ
ಊರೇ ಕೊಳ್ಳೆ ಹೊಡೆದ ಮೇಲೆ

ಎದ್ದು ಎದುರುಗೊಳ್ಳುವವು
ನನ್ನವೇ ಸಾಲುಗಳು
ಅವುಗಳೊಂದೊಂದು ಪ್ರಶ್ನೆಗಳು
ನಾ ಕಳೆದುಕೊಂಡ ನನ್ನ ಉತ್ತರಗಳು

ಹರಿದುಬಿಟ್ಟೆ ಅದ್ಯಾವುದೋ ಆವೇಗಕ್ಕೆ
ನಿರಾಳವಾದೆ ಎನ್ನುವ ಭ್ರಮೆ
ನಿಟ್ಟುಸಿರುಗಳ ಪೋಣಿಸಿಟ್ಟ ಮಾಲೆ
ಕೊರಳಲಿ ಉಳಿದೇ ಇತ್ತು

ಹರಿದಂತೆಲ್ಲಾ ಹಗುರಾಗುವರು
ಇರಬಹುದೇನೋ;
ನಡೆದದ್ದೆಲ್ಲಾ ಮರೆಯಾದೀತೆ
ತೆರೆ ಮೇಲಿನ ಪ್ರಹಸನಗಳು

ಸಾಲುಗಳು ಕೆಣಕಿವೆ ನನ್ನವು
ಸೋತಿದೆ ಬದುಕು
ಕಾಣದ ಉತ್ತರಕೆ
ಮತ್ತೊಂದು ದೀರ್ಘ ನಿಟ್ಟುಸಿರು;
ಹ್ಮೂ ಜೀವವಿದೆ
ಖಾತ್ರಿಯೇ!

06/02/2015


ಖಾಲಿ ನೀಲಿ ಹಾಳೆಯಂತೆ
ಕಾಣೋ ಈ ಆಗಸಕ್ಕೆ
ಮನಸೋ ಇಚ್ಛೆ
ಸಾವಿರ ಕನಸುಗಳ
ಅಂಟಿಸೊ ಹುಚ್ಚು!

06/02/2015

ಕವನ

ಚಂದಿರ ;-)



ಕಣ್ಣು ಬಿಟ್ಟಾಗ ಎದುರು ಕಿಟಕಿಯೊಳು
ಕಂಡ ದುಂಡು ರಸಗುಲ್ಲ
ಅರೇ! ಬೆಳಗಾಯಿತೇ?
ಇದೇನಿದು ಪಶ್ಚಿಮಕೆ ಸೂರ್ಯ
ಅದೂ ಹೀಗೆ ತಣ್ಣಗೆ!!

ನೋಡುತಾ ಕುಳಿತೆ
ಕಣ್ಣುಜ್ಜಿ ಮತ್ತೆ ಮತ್ತೆ
ದಿಕ್ಕನ್ನು ಎಂದೂ ಬದಲಾಯಿಸುವುದಿಲ್ಲ
ಈ ಸೂರ್ಯ, ಪಥ ಬದಲಿಸಬಹುದು

ಹೌದು ಖಾತ್ರಿಯಾಯ್ತು ನನಗೆ
ಇವನೇ ಚಂದಿರ
ಎಲ್ಲೆಂದರಲ್ಲಿ ದಾಳಿ ಇಡೋ ಸುಂದರ
ಪೂರ್ಣನಾಗಿ ಬಂದು ಇದಿರಲಿ ನಿಂತ

ಅದೇನು ಸೋಜಿಗ
ಗಾಢ ನಿದ್ರೆಯಲ್ಲೂ ಇವನಾಗಮನ
ಎಚ್ಚರಿಸಿ
ನನ್ನ ನಿದ್ದೆ ಕೆಡಿಸುತ್ತಿದೆ!

ಮುದ ನೀಡುತ್ತಾ 
ಮಗುವಾಗಿಸಿ ಮುದ್ದಿಸಿದಂತೆ
ಮನವ ತೊಳೆದು 
ಮುತ್ತುಗಳನೇ ತುಂಬಿಸಿದಂತೆ
ಜಿಗಿದು ಹಾರುವ ಈ ದಿನ 
ಹೊಸ ಹುರುಪು ಉತ್ಸಾಹ!

06/02/2015

Thursday, 5 February 2015

ಕವನ

ಕಲ್ಪನೆ ನೌಕೆ



ಆರಾಧನೆಗೊಂದು 
ಮೂರ್ತಿ ಬೇಕಿದೆ
ಧ್ಯಾನಕ್ಕೊಂದು ಚಿಂತನೆ
ಇಹವೆಲ್ಲ ಇಲ್ಲದಂತೆ ಮರೆತು
ಕಳೆದು ಹೋಗಬೇಕಿದೆ
ಪ್ರೀತಿ ಹುಡುಕಿದೆ
ಆದರದರದು ಕಣ್ಣುಮುಚ್ಚಾಲೆ
ಎಲ್ಲಿಯೂ ಕೇಂದ್ರೀಕರಿಸದ ಮನವ
ಸಂತೈಸದಾದೆ;
ಆಧ್ಯಾತ್ಮವೊ 
ಇಲ್ಲ ಅಲೆದಾಟವೋ
ಹಚ್ಚಿಕೊಳ್ಳಲೆನಿಸಿದೆ
ಬಹು ದೂರ ಸಾಗಿ ಹೋಗಬೇಕು
ಬೆನ್ನಿನ ಬಾಧೆಗಳ ಬಿಟ್ಟು
ಹೌದು
ಆ 'ಕಲ್ಪನೆ ನೌಕೆ' ಮಾತ್ರ 
ಹೀಗೆ
ನನ್ನ ಹೊತ್ತೊಯ್ಯಲು ಸಾಧ್ಯ!..

05/02/2015

ಕವನ

ನಿರೀಕ್ಷೆ-ನಿರಾಳ


ಎಂದಿನಂತೆ
ಇಂದೂ ನಿನ್ನ ಹುಡುಕಲಿಲ್ಲ
ನೀನೇ ಬರುವೆ
ಎನ್ನುವ ನಂಬಿಕೆ!

ಬರದಿದ್ದರೂ ಬಿಡು ತೊಂದರೆಯಿಲ್ಲ
ನಿನಗಾಗಿದ್ದ ಸಮಯವೆಲ್ಲಾ ಮತ್ತೆಲ್ಲೋ
ಕರಗಿ ಹೋಗುತ್ತಿವೆ; ಬಹುಶಃ
ಈ ವ್ಯರ್ಥ ಸಾಲುಗಳಲಿ....

ಯಾರೋ ಹೇಳಿ ಹೋದ
ಒಗಟು
"ಕವಿತೆ ಬರೆದರೆ 
ಬದುಕು ಕಟ್ಟಿಕೊಂಡಂತಲ್ಲ,
ಓದಿದವರ್ಯಾರೋ 
ಕಟ್ಟಿಕೊಳ್ಳಲು ಕನಸು!"..

ಇರಬಹುದು,
ಕವಿತೆಯೊ, ಬದುಕೊ
ಕಟ್ಟುವುದೊಂದು ನನ್ನ ಹವ್ಯಾಸ
ಬರಿದುಗೊಳ್ಳುವ ಮನಸ್ಸು
ತುಸು ನಿರಾಳ!

04/02/2015

Wednesday, 4 February 2015

ಕವನ

"ಮುತ್ತು"


ಮನದೊಳು ಕ್ಲೇಷಗಳೇ 
ತುಂಬಿ ಹರಿದ
ಈ ಎರಡೂ ದಿನಗಳು

ಅದೇಕೋ 
ಮತ್ತೆ ಮತ್ತೆ ನೆನೆದು 
ಮೆದುಗೊಳ್ಳುತ್ತಿದೆ
ಆ ಮುದ್ದು ಮುದ್ದು 
ಮುತ್ತುಗಳ ನೆನಪಲಿ ಮತ್ತೆ ಸವಿದು!

ಕೇಳಿದ ಅರೆ ಕ್ಷಣವೇ 
ಕೊಟ್ಟು ಬಿಟ್ಟ 
ಜೋಡಿ ಮುತ್ತುಗಳು! 
ಆ ಜೋಡಿ ಹುಡುಗರು
ನನ್ನೊಳ ಆಶ್ಚರ್ಯಗಳು!

ಹುಡುಗಿಯರ 
ಕಂಡರಾಗದ ಅವರು
ಒಮ್ಮೆಲೇ ಮಣಿದು ಬಿಟ್ಟ 
ಆ ಕ್ಷಣಗಳು!

ಅದರೊಟ್ಟಿಗೆ ಕೇಳದೇ ಕೊಟ್ಟ 
'ಮುತ್ತು','ಮುದ್ದು' ಅವಳಕ್ಕನದು;
ಕೆಲ ಹೊತ್ತಿನ ನನ್ನಯ 
ಕನ್ನಡ ಪಾಠ ಬೋದನೆಗೆ,

ಇನ್ನೂ ನೆನೆದು 
ತಣಿದಂತೆ
'ಈ ಹೊತ್ತು ತಂದ 
ಪ್ರೀತಿ ಬುತ್ತಿ'!

ಕಳೆದೆರಡು ದಿನಗಳ
ಹಿಂದಿನದೀಗ
ಹೊತ್ತು ಹೊತ್ತಿಗೆ
ನನ್ನ ಅಮೃತ ಔಷಧ!

ಆ ನನ್ನಕ್ಕನ 
ಮೂರು ಮಕ್ಕಳು;
'ಅಕ್ಕಳೊಂದಿಗಿನ ಅವಳಿ ತಮ್ಮಂದಿರು!'

04/02/2015

ಕವನ

"ಹೆಣ್ಣು"



ಒಂದೇ ಸಮನೆ ಕಣ್ಣೀರ ಹರಿವು
ಅವರ ಭವ್ಯ ಚಿತ್ರದೆದುರು
ಎದೆ ಝಲ್ಲೆಂದು ಹೋದ
ಕರಾಳ ಹೆಜ್ಜೆ ಗುರುತುಗಳು
ಅವರೆಲ್ಲಾ ನೋವುಗಳಿಗೆ
ನಾನೇ ಕಣ್ಣೀರಾದೆನೋ
ಇಲ್ಲ;
ಅವರೊಳಗೆ ನಾ ಹೊಕ್ಕೆನೋ ತಿಳಿಯೇ
ನಡುಗುವ ನನ್ನೊಳಗು
ಬಿಕ್ಕುಗಳ ನಿಲ್ಲಿಸದು
ಬಹು ಕಾಲ ಅವರ ನಗು ಮೊಗದಲ್ಲೇ ನಿಂತಿದ್ದೆ
ಎಷ್ಟೇಲ್ಲಾ ನೋವುಗಳು
ಅದೆಲ್ಲೆಲ್ಲಿ ಅಡಗಿಸಿಟ್ಟು ನಕ್ಕರೋ 
ಆ ತಾಯಿ
ಹೆಣ್ಣು ಎಂದರೇ ಕಲೆಗಾರಳೇ
ನಗುವೊಂದರಲ್ಲೇ ಅಗಾಧ ಭೀಕರತೆಗಳನ್ನು
ತುಂಬಿಕೊಳ್ಳುವ ಪ್ರೀತಿ ಮೂರ್ತಿಯೇ!

04/02/2015




ಇಳಿದಂತೆ ದಿನ
ತಣಿದಂತೆ ಇಳೆ
ಹೃದಯ ಹುಡುಕಿದೆ
ಮತ್ತದೇ ಮನದ ರಂಗಸ್ಥಳ
ನೀನಿಂತು ಅಲ್ಲಿ
ನನ್ನದಿರೇ ನೋಡಿದಂತೆ!

04/02/2015

ಕವನ

ಕಣ್ಣ ಬಿಂಬ


ಚಲಿಸುತ್ತಲಿದ್ದೆ ನಾ
ಬಿಂಬ ಸ್ಪಷ್ಟವಾಗಲೇ ಇಲ್ಲ
ನನ್ನ ನಾ ಕಾಣಲು!

ಅಲ್ಲಲ್ಲಿ ಅವರಿವರ
ಉದ್ಗಾರ;
ಚೆಂದ, ಬಿಂಕ-ಬಿಗುಮಾನ
ಸಾಧಾರಣ, ಸೂಪರ್-ಸಪ್ಪೆ, 
ಜೊಳ್ಳು-ಪೊಳ್ಳು
ನಾ ದಾರಿಯಲಿ ಸಾಗುತ್ತಲಿದ್ದೆ
ದಿನ ಬೆಳಗಾದರೆ
ಪಶ್ಚಿಮದಿಂದ ಪೂರ್ವಕೆ!

ಚಲನೆಯ ಹಂತಗಳಲಿ
ನಾನು ಅವರ ಅಷ್ಟೂ ಆಗಿದ್ದೆ;
ಆಗುತ್ತಲಿರುವೆ,
ಜಡವಲ್ಲ ನಾ
ಒಂದೇ ಆಗಿರಲು!

ನನ್ನ ನಡುಗುವ ಕೈಗನ್ನಡಿ
ತೋರದ ನನ್ನ
ಅಲ್ಲಲ್ಲಿ ಅವರ ಕಣ್ಗಳಲಿ ಕಂಡೆ!

ನನಗಿನ್ನೂ ಸ್ಪಷ್ಟವಿಲ್ಲ
ನಾನು!
ನಾನಿನ್ನೂ ಗುರಿ ಮುಟ್ಟಿಲ್ಲ
ದಾರಿಯಲ್ಲಿರುವೆ
ದೂರದೂರಿಗೆ...!

04/02/2015

Tuesday, 3 February 2015


ನಾ ಕಳಿಸಿದ ಸಂದೇಶಗಳೇ

ತಲುಪುತ್ತಿಲ್ಲ ನಿನಗೆ

ಬಹುಶಃ ಅದರೊಳು

ನಿನ್ನ ಹಸರೇ ಬರೆದಿಲ್ಲವೇನೋ

ನಾ

ಆತುರದಿ;

ಹುಡುಕಿ ಹಿಡಿದುಕೊ

ಬೇಗ,

ಮತ್ತಿನ್ಯಾರೋ ಓದಿಕೊಂಡಾರು

ನೀನೆಂದು ಅವರು!

ನೋಡಿಲ್ಲಿ ಈಗಲೂ ನಿನ್ನ ಹೆಸರು

ನೀನೇ


ಆದೆ! 


*****

ಸಂಜೆ ಸೂರ್ಯ

ಕಣ್ ಹೊಡೆದ ಹಾಗೆ

ನನ್ನ ಕಣ್ಗಳು 

ಮುಚ್ಚಿಕೊಳ್ಳುವವು

ನಾಚಿದಂತೆ!

ಅರೆ ಬಿರಿದ ತುಟಿಗಳಿಗೆ

ರಂಗೇ ಬೇಕಿ


02/02/2015
"ಒಬ್ಬಂಟಿ ಹೆಣ್ಣು"


ಒಬ್ಬಂಟಿ ಹೆಣ್ಣನ್ನು
ಎಂದು ಸಮಾಜ 
ಒಪ್ಪಿಕೊಳ್ಳುವುದೋ
ಜೀವಿಸಲು 
ತೊಡಕಾಗದೇ ಉಳಿವುದೋ
ಅಂದು ಅವಳು
ತನ್ನವರ ಇನ್ನಿಲ್ಲದಂತೆ
ಮುಕ್ತಿ ಕೊಟ್ಟ ಮಹಾ ಪುರುಷರಂತೆ
ಬಣ್ಣಿಸುವುದ
ಬಿಡುವಳು!
ಮತ್ತು ಜೀವಿಸುವಳು
ತಲೆ ಬಾಗದೇ!

********

ಒಂದೊಳ್ಳೆ ನೆನಪಾದರೂ
ಬಿಟ್ಟು ಹೋಗು
ಎಲ್ಲಾ ಬರಿ ಒಗಡು ಕಂಟುಗಳೇ
ಉಳಿದಿವೆ ಎದೆಯೊಳು
ನೆನ್ನೆಯವು!

*********

ಕವಯತ್ರಿಯ
ಮನ ಕದಡಿತ್ತು
ಚಂದ್ರ ಚೂರಾಗಿ ಬಿದ್ದಿದ್ದ
ಅವರ ಮನೆ ಬಾವಿಯೊಳು...

03/02/2015

ಕವನ

"ಮೊಂಡುಕತ್ತಿ"



ನಾನೊಂದು ಮೊಂಡು ಕತ್ತಿ
ನನ್ನ ಅನೇಕ ಪ್ರಯತ್ನಗಳು
ವ್ಯರ್ಥವೇ ಸರಿ;
ಆದರೂ ನಾನಿನ್ನೂ 
'ಪ್ರಯತ್ನದಲ್ಲಿರುವೆ'..

ನನ್ನದು 
ಇನ್ನೂ ಮೊಂಡುತನ;
ಮೊದಲೇ ನಾ
ಮೊಂಡು ಕತ್ತಿ!

ಸಾಣೆ ಹಿಡಿಸುವ ಯತ್ನ
ಗಳಾಗಬೇಕಿದೆ
ಅಗೆದಷ್ಟೂ ಬೆಳಕು;
ಕಡೆದು ಕತ್ತಲು

ಸವೆದು ನೋಡಿ
ಚಚ್ಚಿ ಕಳೆದು
ಹೊಳಪ ನನೆದು..

ಚೀಲದಿಂದ ಹೊರಗೆ ಇದ್ದು
ಸವೆದು ಸವಿಯಬೇಕಿದೆ
ಮೊಂಡು ಕಳಚಲು 
ಹಲವು ಸಾಣೆ ಹಿಡಿತಗಳಲಿ..

ನಾನೊಂದು ಮೊಂಡುಕತ್ತಿ
ನನ್ನ ಪ್ರಯತ್ನಗಳು ಅನೇಕವಿಲ್ಲಿ!

03/02/2015

ಕವನ

ದ್ರವ್ಯ

ಹಕ್ಕುಗಳ ಕಸಿದುಕೊಂಡು
ಅವರ ಪಾಲಾಗಿ ಬಿಟ್ಟು ಕೊಟ್ಟ 
ದ್ರವ್ಯ;
ಅದೇಕೋ
ಸಾಗರದ ನೀರಾಗಿದೆ!

ಅನೇಕ ಕಣ್ಗಳ ಕಣ್ಣೀರು
ಹಿಂದೆ ತುಳುಕಿದ್ದು
ಇನ್ನೂ ಹರಿದಿಲ್ಲ
ತಿಳಿಗೊಳ್ಳಲೂ ಇಲ್ಲ; ಮೌನವಹಿಸಿವೆ!

ಮೊದಲೇ ಹೇಳಿದಂತೆ
ಸಾಗರವ ಸೇರಿದ್ದು ನದಿಯೇ ಆದರೂ
ಉಪ್ಪಂತೆ; ಪ್ರಕೃತಿಯ ಕೈವಾಡಕೆ
ಆಪಾದನೆಗಳ ಅಬ್ಬರ...

ಬಾಯಾರಿದೆ
ಕುಡಿಯಲು ನೀರಿಲ್ಲವಂತೆ
ಕಡಲ ಮಧ್ಯೆ!

02/02/2015

Sunday, 1 February 2015

ಭಗವಂತ ಎಲ್ಲೆಲ್ಲಿ 
ಖುಷಿಯ ಸೆಲೆಗಳನ್ನು
ಅಡಗಿಸಿರುತ್ತಾನೋ

ತೀರಾ ದುಃಖದ 
ಧ್ಯಾನದಲ್ಲೇ ಇರುವಾಗ
ಅವುಗಳೊಂದೊಂದೇ
ಬಿಚ್ಚಿಡುತ್ತಾನೆ
ಮಾಯಾವಿ!!

01/02/2015

ಕವನ

"ಕನಸು"

ನಾ ಕಂಡ
ಪ್ರತೀ ಕನಸನು 
ಕಣ್ಣೀರ ಹನಿಯಿಂದಲೇ
ಬೀಳ್ಕೊಟ್ಟಿಹೆನು

ಹೆಣ್ಣಾದ ಪ್ರಕೃತಿಗೆ
ಕಣ್ಣೊಳು ಇನ್ನೂ ಕಣ್ಣೀರಿವೆ
ಕನಸು ಕಾಣುವೆ
ಕಣ್ಣೀರ ಹಂಗಿಲ್ಲದೆ!

01/02/2015

ಕವನ

''ಬದುಕು''


ಬದುಕು ನೀನೂ ಅಲ್ಲ 
ನಾನೂ ಅಲ್ಲ
ನಾವಿಬ್ಬರು
ಅದು ಬದುಕಾಗಿದ್ದರೆ!

ಜೀವನವೆಂದರೆ ಬಿಡು, 
ಇದ್ದಾರೆ..
ಅವರೂ ಇವರು
ಬಂದು ಹೋದವರು;
ಬರದೇ ಇದ್ದವರು!

ಇನ್ನೂ ಜೀವಿಸಿರುವೆ
ಬದುಕ ಭರವಸೆಯಲಿ
ಸಾಗಿಸಿ ಉಸಿರ..

ಬದುಕುವುದು
ಜೀವಿಸುವುದು
ಎರಡೂ ಬೇರೆ ಬೇರೆಯೇ ಅಲ್ಲವೇ? 
ಹೇಳು ನೀ ಬದುಕೇ!

31/01/2015



ಸಂಗೀತದ ಸೆಲೆಗಳೋ
ನನ್ನೆದೆ ಕಡಲ ಕಲಕೋ
ಅಲೆಗಳೋ
ಸೋತಿವೆ ಕಣ್ಗಳು
ಮನವೂ
ಎಲ್ಲಿ ನಿಂತೆನೋ?!
ಎಲ್ಲೋ ಸೇರಬೇಕಿದ್ದ
ಈ ಹಡಗು..
ದ್ವೀಪದೊಳು ಸಿಕ್ಕಿಕೊಂಡೆನೋ
ಇಲ್ಲ ದಡವಿರದ
ಪ್ರವಾಹದೊಳೊ..?!
ಈಜುವುದ ಅದು ಹೇಗೋ
ಕಲಿಸಿಬಿಟ್ಟ ದೇವ,
ಗುರಿ ಕಾಣಿಸದೆ,
ಇನ್ನಿಲ್ಲದ ಅನುಭವಗಳ ಪಡೆಯದ ಹೊರತು
ಕೈ ಹಿಡಿದು 
ಕಾಪಾಡೆನು ಎಂದೇ
ಹಟ ಹಿಡಿದು ನಿಂತ
ಕಾಣದೂರಿನಲಿ!

*****

ಮೊದಲನೇಯದಾಗಿ
ಹೆಣ್ಣು ಕಾಮಕ್ಕೆ ದಕ್ಕಬೇಕು
ಮಿಕ್ಕಂತೆ ಅವಳ ಯೋಗ್ಯತೆ ಎಲ್ಲಾ
ಗೌಣ!
ಅವಳೆದುರು ಗಂಡು ಎನ್ನುವುದೊಂದೇ 
ಇವರ ಪ್ರಾಮುಖ್ಯತೆ
ಅವಳಿಗೆ ಗಂಡು ಎನ್ನುವುದಕ್ಕಿಂತ
ಮತ್ತಿನ್ನೇನೋ ಅತೀಶಯಗಳ
ಹುಡುಕಾಟವಿರುತ್ತದೆ
ಅದರಿಯದೇ
ಎದುರು ನಿಲ್ಲೋ ಜನಕೇ
ಅವಳೇ ನಾಯಕ!

*****

ಅದೆಷ್ಟು ಅಗೆದಗೆದು
ಹೊರಗೆಳೆಯಬೇಕೋ
ಈ ಮನದ ಹೂಳು
ಹೊರ ಬಿದ್ದ ಮಣ್ಣೆಲ್ಲಾ
ಸುಂದರವೆಂದ ಆ ಮನಗಳೇ
ಶ್ರೇಷ್ಠ ಒಲವುಗಳು

31/01/2015