Monday, 12 January 2015

ಕವನ

''ಕವಿ''


ಒಂದಷ್ಟು ಪದಗಳು ಗುಡ್ಡೆ ಹಾಕಿ
ಜೋಡಿಸಿ ಅರ್ಥೈಸಿಕೊಳ್ಳಿ ಎನ್ನುವ ಕವಿಯು
ಅದೇಕೋ ನನಗೆ ಭಾಷಾ ಶಿಕ್ಷಕನಾಗಿ ಕಾಣುತ್ತಾನೆ

ಒಂದಕ್ಕೊಂದು ಸಂಬಂಧವಿಲ್ಲದ ಪದಗಳು
ನಾವು ಅಂದುಕೊಂಡಂತೆಲ್ಲಾ ಹೊಸ ಹೊಸ ಅರ್ಥಗಳು
ನಮ್ಮ ಪ್ರಯೋಗಗಳಿಗೆ ಅವರು ಕವಿಗಳಾದರು

ಕವಿ ಎಂದರೆ ಅರ್ಥ ಬಿಡಿಸಲಾಗದೆ ಇಟ್ಟ 
ಒಗಟುಗಳ ಮಾಲೀಕನೇ? ಗುಟ್ಟುಗಳ ಗೂಡೆ?
ಸುಮ್ಮನಷ್ಟು ಸರಕೆ? ಮೆದುಳೊಳಗಾಡುವ ಬೆರಳೇ?

ಕವಿಯೊಬ್ಬ ಸೊಗಸುಗಾರ; ಭಾವಗಳ ಸರದಾರ
ಅಷ್ಟಗಲದ ಆಕಾಶವ ಇಷ್ಟಗಲದ ಕಣ್ಣೋಳಗೆ ತಂದಿಟ್ಟವನು
ಭೂಗರ್ಭ ಸಿರಿಯ ನಲ್ಲೆಯ ಹಣೆ ಬೊಟ್ಟಿನಲಿ ಕಂಡವನು

ಕವಿಯೊಬ್ಬ ರಸಿಕ; ಶೃಂಗಾರ ರಾಜ
ಚಂದ್ರನ ಸೆರಗಲೇ ಯೌವ್ವನೆಯ ಛಾಯೆ ಕಂಡವನು
ಮೇಘ ಮಾಲೆಯಲಿ ಲಲಿತೆಯ ತಬ್ಬಿ ನೆನೆದವನು

ಕವಿಯೊಬ್ಬ ಕನಸುಗಾರ; ಕಲ್ಪನೆಯ ಆಗರ
ಇಂದನ್ನು ನೆನ್ನೆಯಾಗಿ; ನೆನ್ನೆಯನ್ನು ನಾಳೆಯಾಗಿ ಚಿತ್ರಿಸಿ 
ಹೊಸತೆಲ್ಲಾ ಹಳೆಯದೆ; ಹಳೆಯದೆಲ್ಲಾ ಹೊಸತೆಂದು ಭ್ರಮೆ ಮೂಡಿಸುವನು

ಅವನೊಬ್ಬ ಮಾರ್ಗದರ್ಶಕ; ಸಲಹೆಗಾರ
ಅನುಭವಗಳ ಮೂಟೆ ಹೊತ್ತು ತಾರ್ಕಿಕ ವಿಶ್ಲೇಷಣೆಗಳಿಗೆ
ತನ್ನ ಸಾಲುಗಳ ಹಾದಿಗಳಲಿ ನಮ್ಮನಗಳ ಓಡಿಸುವವನು

ಅವನೊಬ್ಬ ದಾರ್ಶನಿಕ; ಒಳನೋಟದವನು
ಪ್ರಕೃತಿಗೂ ಮುನ್ನ ಹುಟ್ಟಿ ಬೆಳೆದವನು
ಅದರಂತೆ ನಮ್ಮ ಮುಂದೆ ನಡೆದವನು
ಒಳಗಣ್ಣಿಗಷ್ಟೇ ದಕ್ಕುವನು

ಚಿಂತಕನು ವಿಚಾರಶೀಲನೂ ಅವನು
ನಾಳೆಯ ಬೆಳಕಿಗಾಗಿ ಇಂದು ಕತ್ತಲೆಯ ಪಂಜಿನವನು
ಕತ್ತಲಲ್ಲವದು ಕಪ್ಪುರಂದ್ರ; ಎಲ್ಲವ ತೋಳ ತೆಕ್ಕೆಗೆ ಸೆಳೆದುಕೊಳ್ಳೊ ಕಾಂತ ಸೂರ್ಯ!

12/01/2015

ಕವನ

''ಕನಸು''


'ಸಾರೋಟಿನ ಸಾರಥಿ'ಯೆಂಬ 
ಕನಸ ಕೇಳಿ
ಬೆಚ್ಚಿಬಿದ್ದ ಹಿರಿಯರು
ಊಹಿಸಿರಲಿಲ್ಲ ಈ 
ವಿವೇಕಾನಂದರ
ರೇಷ್ಮೆಯ ನೂಲು ಸಹ
ಕಚ್ಚಾ ದಾರವೇ
ನೇಯ್ಗೆಯ ಮುನ್ನ
ಕನಸಿನ ಪರಿಧಿ ಸಣ್ಣದಾದರು
ಆಯ್ದ ದಿಕ್ಕು ದಿಟ್ಟವಾಗಿರಲು
ಸಾಗುವುದು ಸಾರೋಟು 
ಸಾರಥಿಯಂತೆ....

ಚಿತ್ರ ಕೃಪೆ; Upendra Prabhu sir



12/01/2015

Sunday, 11 January 2015

ಕವನ

ಮನವಿದು ನಿಲ್ಲದು


ಹೀಗೆಯೇ ನಿನ್ನೆಡೆಗೆ 
ಹರಿದು ಓಡುವ 
ಮನವನು
ಎಷ್ಟು ಕಷ್ಟದಿ 
ಸಂಭಾಳಿಸುತ್ತಿರುವೆ

ನಾನೆ ಸುತ್ತ 
ಬೇಲಿಯಾಗಿ
ಮುಷ್ಠಿ ಹಿಡಿದು 
ಬಿಗಿಯಾಗಿ
ಕಣ್ಣಿಟ್ಟು 
ಕಾಪಾಡಿ
ನನ್ನೊಂದಿಗೆ ನಾ 
ಹೊಡೆದಾಡಿ

ಆದರೂ 
ಅದು ಹೇಗೋ
ಸಡಿಲಗೊಂಡು 
ಹರಿವುದು ಮನವು
ಇದು
ಮೋಹದ 
ಭ್ರಾಂತಿಯೋ?
ವಯೋನ್ಮತ್ತ 
ಜಾಲವೋ?
ನನಗೊಂದೇ 
ಆತಂಕ ಚಡಪಡಿಕೆಗಳು..

11/01/2015

Saturday, 10 January 2015

ಕವನ

''ಗೊಂದಲ''


ಈಗೀಗ ಬರೆಯುವ ಕೈ
ತುಸು ಬಿಗಿಯೇ
ಆ ಮನಗಳನ್ನೂ
ಒಮ್ಮೆ ಅವಲೋಕಿಸಿ
ಅಕ್ಷರ ಹುಟ್ಟುವವು

ಕನ್ನಡಿಗೆ ಬೆನ್ನು ಮಾಡಿ 
ನಿಂತಾಗಿದ್ದ ಸ್ವೇಚ್ಛೆ
ಮುಖ ಮಾಡಿದಾಗ
ನಿಜದಿ ಭಾವ ಮೂಡದ 
ಗೆರೆಗಳ ಕಂಡು
ಈಗ ಭೀತಿ

ಇದು ನಾನೇನಾ?
ಕಲ್ಪನೆ ಹೌದೆಂದರೂ
ಮುಖ ಹೇಳಿದ್ದು
ಇಲ್ಲ...

ನನಗೊಂದೇ ಗೊಂದಲ
ಬರೆದಂತಿರಬೇಕು
ಇಲ್ಲ;
ನಡೆದಂತೆ ಬರೆಯಬೇಕು
ಅವರೊಬ್ಬರು ಹೇಳಿ ಸುಮ್ಮನಾದರು

ನಗುವನ್ನು ಬರೆವಾಗ 
ನಾ ನಕ್ಕೇ ಇರುವುದಿಲ್ಲ
ಅಳುವನ್ನು ಬರೆಯಲು
ಇನ್ನೂ ಕಲಿತೇ ಇಲ್ಲ!

ಹೊಸದೊಂದು ತಿರುವಿಟ್ಟು
ಹೊರಟುಬಿಟ್ಟರು
ನನಗಿನ್ನೂ ತಿಳಿಯಲಿಲ್ಲ
ನಾನೇನು ಬರೆಯಲಿ ಎಂದು
ನನ್ನನೇ? ಇಲ್ಲ ನನ್ನ ಕಲ್ಪನೆಯೇ?!
ಉತ್ತರಕೆ ಅವರ ಸುಳಿವೂ ಇಲ್ಲ
ಬರೆದರೂ ಏನು ಬರೆದೇನು
ಬರೀ ಈ ನನ್ನ ಗೊಂದಲಗಳ ಬಿಟ್ಟು

ಕೊನೆಗೊಂದು 
ಅಡ್ಡ ಗೋಡೆಯ ದೀಪದುತ್ತರ;
ಬಿಡು ಇವೆಲ್ಲಾ 
ಅರ್ಧ ಸತ್ಯ!

10/01/2015

ಕವನ

''ಬಯಸಿದ ಹುಡುಗ''




ಬಯಸಿದ ಹುಡುಗ
ಅವರೆಕಾಯಿ ಬಿಡಿಸುತ ಕುಳಿತ ಎಲ್ಲೋ
ಈ ಚಿನ್ನಿ ದಾಂಡಿನ ಹುಡುಗರೆಲ್ಲಾ
ಅಂಗಳಕ್ಕೆ ಲಗ್ಗೆ ಇಟ್ಟು 
ಅಕ್ಕನಿಗೆ ''ಅಯ್ಯೊ'' ಎನ್ನುವರು..

ಅಕ್ಕ ಎಂದಿಗೂ ಹಾಗೆ
ಗದರಿ ಓಡಿಸುವಳು
ತುಂಟ ಹುಡುಗರ
ಒಮ್ಮೆ ಬಾರುಕೋಲಿನಲಿ ಹೊಡೆದು;
ಮತ್ತೊಮ್ಮೆ ಕೈಗೆ ಸಿಕ್ಕಿದ್ದರಲ್ಲಿ..
ಮತ್ತೆ ಮತ್ತೆ ಕಾಡುವರು 
ಈ ಚಿಕ್ಕ ಮಕ್ಕಳು

ಗೊತ್ತು 
ಅಕ್ಕನಿಗೆ ದೊಡ್ಡ ವಯಸ್ಸು
ಆದರೂ ಏಕೋ ಅವಳೇ ಆಕರ್ಷಣೆ
ಸುತ್ತಿ ಸುತ್ತಿ ಬರುವ ಹುಡುಗಾಟಿಕೆಗಳಿಗೆ
ಅಕ್ಕನದು ಕೆಂಗಣ್ಣ
ಅದು ಬೂದಿ ಮುಚ್ಚಿದ್ದು

ಬಯಸಿದ ಹುಡುಗ ಅದೆಲ್ಲೋ
ಅವರೆಕಾಯಿ ಬಿಡಿಸುತ ಕುಳಿತ
ಇನ್ನೂ ಮುಗಿಯಲಿಲ್ಲ;
ಮುಗಿದಿದ್ದರೆ
ಈ ಸಂಕ್ರಾಂತಿಗೆ ಹಿದಕವರೆ ಸಾರು
ಜೊತೆಗೆ ಹುಗ್ಗಿ-ತುಪ್ಪ!

10/01/2015


ನಗುವುದನ್ನು ಅಭ್ಯಾಸ 
ಮಾಡುತ್ತಲಿದ್ದೆ
ಕನ್ನಡಿ ಹೆದರಿದೆ
ತುಟಿಯೂ ಒಡೆದಿದೆ!

******

ಪದಗಳೇ ಮಿಡಿಯದು
ನಿನ್ನ ದನಿಯಿಲ್ಲದೆ... 
ಇನ್ನೆಲ್ಲಿಯ ಕನಸು
ರಾತ್ರಿ ಪೂರ ಭರ್ತಿ ನಿದ್ರೆ!..
ಹಗಲೂ ಮಂಪರು... !!
ಪದಗಳೇ ಪದ ಹಾಡಿವೆ
ನಾ ತಂಪಾಗಿ ಮಲಗಲು

10/01/2015

Friday, 9 January 2015

ಈ ನಿರೀಕ್ಷೆಗಳು ನಮ್ಮನು ಕೊಂದಷ್ಟು
ಮತ್ತಿನ್ಯಾವ ಘಟಿಸಿದ ನೋವೂ ಕಾಡಲಿಲ್ಲ!

*****

ಕುರುಡಾಗಿ 'ಕಂಡುಕೊಂಡ' 
ಎಷ್ಟೊ ದಾರಿ
ಬೆಳಕ ಕಾಣಲು ಅನುವಾಯಿತು
ನನ್ನ ತಪ್ಪು ಪ್ರಯತ್ನಗಳಿಗೆ
ಸದಾ ನಾ ಸಂಭ್ರಮಿಸುತ್ತೇನೆ... ! 

09/01/2015

ಕವನ

ಚಿಲಿಪಿಲಿ


ಎಲ್ಲರದೂ ಚಿಲಿಪಿಲಿಯ
ಗೂಡು ಜೀಕಾಟ
ನನ್ನದು ಮೌನದ
ಕೊಂಬೆ ತೊನೆದಾಟ

ಬಾಗಿ ಆಗಾಗ
ಆಸ್ವಾದಿಸೋ ಅವಕಾಶ
ಅವರ ಕಣ್ಮಣಿಗಳಲ್ಲೊಮ್ಮೆ
ಹಚ್ಚಿ ಕಾಂತಿ ದೀಪ

ಕೊಂಬೆ ಸಹಿಸಿದಷ್ಟು ಕಾಲ
ನಾನೂ ತೂಗುವೆ
ಭಾರವೆಣಿಸಿದಾಗ
ಬಹುಶಃ ಹಾರುವೆ...

ಆ ಎಲ್ಲಾ ಚಿಲಿಪಿಲಿಗಳ
ಒಟ್ಟು ಜೂಟಾಟ
ಕಳೆದೀತು ಎನ್ನೆದೆಯ
ಬರಡು ಕನಸುಗಳ ಚೀರಾಟ

09/01/2015

ಕವನ

"ಕಲ್ಪನೆಯಲ್ಲ"



ನಾನು
ನಿನ್ನ ಸಮೀಪಿಸಿ
ನಿನ್ನಡೆಗೆ ಜಾರುತಲಿದ್ದೆ
ನೀನು;
ನಾ ಜಾರುತ್ತಿರುವ 
ವಿರುದ್ಧ ದಿಕ್ಕಿನ ಬಂಡೆ ಏರಿ 
ಕುಳಿತೆ
ನಾನು ಜಾರುತ್ತಲೇ ಇದ್ದೆ
ಅದೆಕೋ ಈ ಅಹಂನ 
ಬಂಡೆಗಳು
ನಮ್ಮ ನಡುವೆ ದಿಢೀರ್ 
ಬೆಳೆದುಬಿಟ್ಟವು
ಬೆಳೆಯುತ್ತಲೇ ಇವೆ
ನಾ ಜಾರುತ್ತಲೇ ಇರುವೆ..
ನನ್ನ ಈ ಕಲ್ಪನೆಗಳ ಹೊರಗೆ...

09/01/2015

Thursday, 8 January 2015

ನಾ ಬರೆದದೆಲ್ಲಾ ನಾನೇ ಆದರೆ
ನನ್ನಾತ್ಮ ನಿನ್ನ ಹುಡುಕಲಿ
ನನ್ನ ಸಾಲುಗಳು ಆಗಲೇ ಸತ್ತಿದ್ದವು
ನಾ ಬರೆದದೆಲ್ಲಾ ನನ್ನ ಕಲ್ಪನೆಯೇ ಆದರೆ
ಆಗಲೂ ನನ್ನಾತ್ಮ ನಿನ್ನ ಹುಡುಕಲಿ
ನನ್ನ ಸಾಲುಗಳು ಮತ್ತೆ ಹುಟ್ಟಲು!

*****

ಕಂಡು ಕಾಣದೇ ಹೋಗುವವರ
ನಾ ಕರೆದೇಕೆ ತೊಂದರೆ ನೀಡಲಿ?
ಕಂಡು ಕಾಣದೆ ಹೋಗುವ ಅನೇಕ 
ಈ ಗಾಳಿ ಮಳೆ ಬೆಳಕು
ನಾ ಕರೆದೇನು ತೊಂದರೆ ನೀಡಲಿ
ಅದರದರ ಹರಿವಂತೆ ಹರಿದುಬಿಡಲಿ
ಜೊತೆಗೆ ನಾನೂ ಹೀಗೆಯೇ...

*****

ಕನಸ ಕಣ್ಣೊಳಗೆ
ಕಮಲ ಅರಳಿದ್ದು
ತಿಳಿದೇ ಇರಲಿಲ್ಲ
ನೀ ಬಂದು 
ಇಲ್ಲಿನ 
ಮುತ್ತುಗಳನ್ನು
ಆರಿಸಿಕೊಳ್ಳುವವರೆಗೂ...

08/01/2015

*****

ಮನದ ಪರಧಿ 
ವೃದ್ಧಿಸಿದಷ್ಟು
ಶೂನ್ಯಳಾಗುತ್ತಾ ಹೋದೆ
ಕಾಣದ ಬಿಂದುವಾಗುವ 
ಭಯವಿದೆ
ಮತ್ತೂ ಉಳಿದು ತುಂಬಿಕೊಂಡ 
ಖಾಲಿತನದ್ದು 
ಸಾವಿರ ಪ್ರಶ್ನೆಗಳು
ನಾ ಒಂದಕ್ಕೂ 
ಉತ್ತರಿಸಲಾಗದ್ದು!

07/01/2015

Wednesday, 7 January 2015

ಕವನ

ನನ್ನ ಸ್ವಗತಗಳು



ಈ ಸ್ವಗತಗಳು ಹುಟ್ಟಿಕೊಳ್ಳಲು
ಕಾರಣಗಳೇನೆಂದು ನಾನೂ ಯೋಚಿಸಿದೆ

ಬಿಂಬಕೆ ಪ್ರತಿಬಿಂಬವಿದ್ದಂತೆ
ಧ್ವನಿಗೆ ಪ್ರತಿಧ್ವನಿಯಂತೆ

ಸೆಳೆದುಕೊಳ್ಳುವ ಮನವಿಲ್ಲದೇ 
ಕೇಳುವ ಕಿವಿಯೂ ಇಲ್ಲದೆ

ಹೀಗೆ ನನ್ನವೇ ಸ್ವಗತಗಳು 
ನನ್ನೇ ಸುತ್ತುವವು

ಆಗಾಗ ಅವರಿವರಿಗೂ ಕೇಳಿರಲು
ನನ್ನ ಸ್ವಗತಗಳಿಗೂ ಕೆಲ ವಿಮರ್ಶೆಗಳು!

ಮತ್ತಷ್ಟು ಸ್ವಗತಗಳು 
ಹೀಗೆಯೇ ಹುಟ್ಟುವವು

ದಾರಿ ಸವೆಸಿ ಮುನ್ನೆಡೆದುಬಿಡುವವು 
'ನನ್ನ ಸ್ವಗತಗಳು'............

07/01/2015

Tuesday, 6 January 2015

ಕವನ

ಸಿರಿ....



ಮನ ಸಿರಿಯೊ, ಪದ ಸಿರಿಯೊ
ಮುಖ ಸಿರಿಯೊ ಇಲ್ಲ ಭಾವ ಸಿರಿಯೊ
ಅದು ಯಾವ ಸಿರಿಯೋ?!

ಕ್ರೋಢೀಕೃತ ವೈಭವವೊ..
ಎನಿಸುವಷ್ಟು 
ತೇಜಸ್ಸಿನ ಸೂರ್ಯನಲ್ಲೂ
ಅದೇಕೋ ಕಲೆಗಳು
ಚಂದ್ರನಲ್ಲೂ ಕಂದಕಗಳು

ಇರಲಿ ಬಿಡು, 
ನನ್ನಲೂ ಕೆಲ ಅಪವಾದಗಳು
ನಿನ್ನ ಬಯಕೆಯೊಳು!

06/01/2015
ಅವನು ಕೇಳಿದನು
ಹೊಸದೊಂದು ಒಗಟು ಹೇಳೆಂದು
ಸುಮ್ಮನೆ ನಕ್ಕುಬಿಟ್ಟೆ
ಇನ್ನೂ ಬಿಡಿಸುತ್ತಿದ್ದಾನೆ
ಸಿಕ್ಕಿಕೊಂಡಂತೆ!

06/01/2015

Monday, 5 January 2015

ಕವನ

ಸುತ್ತಿ ಬರುವ ಚಾಟಿಯೇ ಲೇಸು


ಎಷ್ಟು ರಭಸದಿ ದೂರ ಬೀಸಿದರೂ
ಅಷ್ಟೇ ವೇಗದಿ ಬಂದಪ್ಪುವುದು
ಸುತ್ತಿ ಬರುವ ಚಾಟಿಯೇ ಲೇಸು

ಮೃದುವಾಗಿ ಮುಡಿದರೂ
ಸಂಜೆ ಬಿಸಿಲ ಮುನ್ನ 
ಮುದುಡುವುದು ಮೊಲ್ಲೆ ಹೂ; 
ಸುತ್ತಿ ಬರುವ ಚಾಟಿಯೇ ಲೇಸು

ಬೊಗಸೆ ತುಂಬಾ ಹಿಡಿದ ಪ್ರೀತಿ
ಬಂಡೆಗಲ್ಲ ಮೇಲಿರಿಸಿದರು; 
ಚಿಗುರಲಿಲ್ಲ, ನಿಲ್ಲಲಿಲ್ಲ
ಈ ಸುತ್ತಿ ಬರುವ ಚಾಟಿಯೇ ಲೇಸು

ಹೆಮ್ಮೆಯಲಿ ತಿರುವಿದ ಮುಂಡಾಸು
ಗಾಳಿ ಮಳೆಯ ಎದುರಿಸಲಿಲ್ಲ
ಶಿರ ತೋಯ್ದಿದೆ ಬಾಗಿದೆ
ಸುತ್ತಿ ಬರುವ ಚಾಟಿಯೇ ಲೇಸು!

ಎಷ್ಟು ರಭಸದಿ ದೂರ ಬೀಸಿದರೂ
ಅಷ್ಟೇ ವೇಗದಿ ಬಂದಪ್ಪುವುದು
ಸುತ್ತಿ ಬರುವ ಚಾಟಿಯೇ ಲೇಸು
ನೋವಿನೊಳೂ ಜೊತೆಗಿರುವ 
ಚಾಟಿಯೇ ಲೇಸು...
ಈ ಚಾಟಿಯೇ ಲೇಸು!

05/01/2015

ಕವನ

ವ್ಯತ್ಯಾಸ!...


ಅವಳು... 
'ಮಗಳ' ಹೆಸರಿನವಳು
ಪ್ರತೀ ತಿಂಗಳೂ
ಬಸ್ ಪಾಸ್ ಮೇಲೆ
ತನ್ನ ಮನೆಯ ವಿಳಾಸ
ತಪ್ಪಿಲ್ಲದೆ ಬೆರೆಯುತ್ತಾಳೆ
ದಾರಿಯಲ್ಲೆಲ್ಲಾದರೂ 
ಹೆಚ್ಚು ಕಡಿಮೆಯಾದಲ್ಲಿ
'ತನ್ನವರು' ಎಂಬ ಹೆಸರಿನ 
ವ್ಯಕ್ತಿಗಳಿಗೆ
ಸುದ್ದಿ ಮುಟ್ಟಿಬಿಡಲಿ ಕೊನೆಗೆ 
ಎಂದು!

ಅವರು ನಿವೃತ್ತಿಯಂಚಿನ
'ಮಡದಿ- ತಾಯಿ'ಹೆಸರಿನ 
ಮಹಿಳೆ
ಅವರು ಆ ಅದೇ ಬಸ್ ಪಾಸ್ನಲ್ಲಿ
ತನ್ನ ಹೆಸರನ್ನಲ್ಲದೆ
ಮತ್ತೇನನ್ನೂ ಬರೆಯರು
ವಿಳಾಸವಂತೂ ಇಲ್ಲವೇ ಇಲ್ಲ!
'ತನ್ನವರಿಗೆ' 
ತೊಡಕಾಗಬಾರದು..
ಮನೆಯ ಕೀ ಸಹ 
ಪಾಸ್ನೊಂದಿಗೇ ಪರ್ಸಿನಲ್ಲಿರುವ ಕಾರಣ; 
ಎಲ್ಲಿಯಾದರೂ
ಕಳೆದರೆ ಯಾರಿಗೋ ಸಿಕ್ಕಿ
ಮನೆಯನು ಹುಡುಕಿ 
ಬಾರದಿರಲಿ ಎಂದು!

ವಿಳಾಸವು ಹೀಗೆಲ್ಲಾ ಬೇಕು- ಬೇಡಗಳಲ್ಲಿ!

05/01/2015

ಚಿತ್ರಗಳು


04/01/2015

ಜೇನು ಗೂಡಲಿ 
ಜೇನು ಸೇರಿಸಿದಂತೆ
ಈ ಮನವ 
ಕೂಡಿಡುವುದು

ಒಮ್ಮೆ ಚದುರಿದರೆ 
ಕಲ್ಲೇಟಿಗೆ
ಎಷ್ಟು ಕಷ್ಟವೋ 
ಮತ್ತೆ ಒಗ್ಗೂಡುವುದು!

ಮನದೊಳು ಮನವಿಲ್ಲ;
ಜೇನು ಗೂಡು ಖಾಲಿ ಖಾಲಿ
ಕಲ್ಲೇಟದು ಮನಗಳಿಗೆ
ಈ ನಡುವಿನ ಮೌನವು!

^^^^^^

ಅಗತ್ಯಕ್ಕಿಂತ ಹೆಚ್ಚು 
ತಲೆ ಕೆಡಿಸಿಕೊಂಡಾಗ
ಮನಸ್ಸು ಅಲ್ಲೇ ನಿಲ್ಲುತ್ತದೆ
ಸಿಕ್ಕಾಪಟ್ಟೆ ಕಾಯುತ್ತದೆ
ಏನು ಪಡೆದುಕೊಳ್ಳುವುದೋ
ಇಲ್ಲ ಕಳೆವುದೋ
ಒಂದು ರೀತಿಯ ಹಟ
ಮಗುವಿನಂತ ಮನದು!
ಸುಲಭಕೆ ಜಗ್ಗದು 
ನಿಂತ ದಾರಿಯಿಂದ..

04/01/2015

ಕವನ

"ಕದ್ದು ನೋಡದಿರು"


ನಿನ್ನ ಕನಸೊಳು
ನಗು ತೇಲಲು
ಕದ್ದು ನೀ ನೋಡದಿರು!

ಕೆಲವಾದರು
ನನ್ನ ಸ್ವಂತವಾಗುಳಿಯಲಿ
ಅಮಲು ಉನ್ಮಾದ...
ಕದ್ದು ನೋಡದಿರು

ಗೊತ್ತು ನೀನಿಲ್ಲಿಲ್ಲ
ಆದರೂ ನೀ 
ಕದ್ದು ನೋಡಿದಂತೆ
ಇಲ್ಲೆಲ್ಲಾ ನಾಚಿಕೆ ಹರಿದಾಡಿದೆ

ಇಷ್ಟಾದರೂ
ಸಾಲದೆ?!
ಕದ್ದು ನೋಡದಿರು
ಈ ನಸುಕಿನ ನಗುವನು! 

04/01/2015




ಎರಡು ಹೆಜ್ಜೆ ತಪ್ಪಿಸಿ
ಮುಗ್ಗರಿಸಿ ನಿಂತು
ಮುನ್ನೆಡೆಯುವಿಕೆಗೆ
ಇಂದು ಉದಾಹರಣೆ!

04/01/2015

^^^^^

ಸಾಲು ಪೋಣಿಸುವಾಗ
ಮಡಿಲೊಳು ಉದುರಿದ
ಮೊಗ್ಗುಗಳು
ನಿನ್ನ ನಗು!

03/01/2015

ಕವನ


ಈ ಬಂಧಗಳು
ಬಹು ಪ್ರಶ್ನೆಗಳು
ಉತ್ತರಗಳು
ಬಿರೀ ಮೌನಗಳು

ಮಾತುಗಳು
ಮನದ ಪರದೆಗಳು
ಮೌನ ಅರಿತಾಗ
ಉದುರೋ ಮುತ್ತುಗಳು

ಈಗೀಗ ಹೆಚ್ಚು ಈ ತೊದಲುಗಳು
ಮಾತುಗಳ ಮರೆತು.
ಗುನುಗುಗಳು, ಕಲ್ಪನೆಗಳು
ಮಾತ್ರವೇ ಸೊಗಸುಗಳು

ಏಕಪಾತ್ರಾಭಿನಯವೇ
ಮನದ ಪ್ರತಿಭೆಗಳು
ಅದ ನೋಡಿದ ಕಣ್ಗಳು
ಕಾಂತಿ ಹೊತ್ತ ಸೋಜಿಗಗಳು!

03/01/2015