Friday, 6 September 2013

ಲೇಖನ

ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ....




ಏನಾದರೂ ಆಗು,

ನೀ ಬಯಸಿದಂತಾಗು,

ಏನಾದರೂ ಸರಿಯೇ

ಮೊದಲು ಮಾನವನಾಗು


- ಎಂಬ ಮಾತಿನಿಂದ ಮಾನವನ ಮಾನವೀಯತೆಯನ್ನು ಕವಿ

ಜಾಗೃತಗೊಳಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಮನುಷ್ಯತ್ವವನ್ನೇ ಮರೆತಂತಹ 

ರಾಕ್ಷಸ ಕೃತ್ಯಗಳು ತಾಂಡವವಾಡುತ್ತಿರುವ ಕಾಲದಲ್ಲಿ ಇಂತಹ ಕವಿವಾಣಿಗಳು 

ಆಗಿಂದಾಗ್ಗೆ ಮನುಷ್ಯನ ಕಿವಿ ಮೇಲೆ ಬೀಳುತ್ತಿದ್ದಲ್ಲಿ ಸುಧಾರಣೆ ಕಾರ್ಯ 

ಸಾಧ್ಯವಾಗುವುದೆನೋ? ಎಂದೆನಿಸುತ್ತದೆ. ಇಂತಹದೇ ಸಂದೇಶ ಹೊತ್ತ ಮನುಜ 

ಮತಕ್ಕೆ ಒತ್ತನ್ನು ನೀಡಿದ ಅವರ ಕ್ರಾಂತಿಕಾರಿ ಗೀತೆಗಳ "ಅನಿಕೇತನ" ಕವನ 

ಸಂಕಲನದ "ಗುಡಿ, ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ….ಎಂಬ ಕ್ರಾಂತಿ 

ಗೀತೆ.


ಕವಿ ತಮ್ಮ ಈ ಗೀತೆಯಲ್ಲಿ ಸರ್ವ ಧರ್ಮ ಸಮಾನತೆಯ ಮಂತ್ರವನ್ನು 

ಜಪಿಸಿದ್ದಾರೆ. 

ಇಂದು ಮನುಷ್ಯ-ಮನುಷ್ಯನನ್ನು ದ್ವೇಷಿಸುತ್ತಿದ್ದಾರೆ. ಅದೂ ವಿನಾಕಾರಣ, 

ಒಬ್ಬರಿಂದೊಬ್ಬರಿಗೆ ಯಾವ ಹಾನಿ-ನಷ್ಟದ ವಿಚಾರವಿಲ್ಲದೆಯೇ!! ಇಲ್ಲಿ 

ಕಾರಣವಾದದ್ದಾರೂ ಏನು ಧರ್ಮಗಳು, ಜಾತಿಗಳು ಮತ್ತು ಉಪಜಾತಿಗಳು. 

ಹೌದು ಇಂದು ಧರ್ಮ-ಜಾತಿಗಳಿರಲಿ, ತಮ್ ತಮ್ಮ ಉಪಜಾತಿಗಳ ನಡುವೆಯೂ 

ವೈಷಮ್ಯ-ತಾರತಮ್ಯಗಳು ಹೆಚ್ಚಾಗಿವೆ. ಒಂದೇ ಧರ್ಮ, ಒಂದೇ ಜಾತಿಯೇ 

ಆದರೂ ಉಪಜಾತಿಗಳ ಹಣೆಪಟ್ಟಿ ಹಿಡಿದು; ಮನಸ್ಸಿನೊಂದಿಗೆ ಸಮಾಜಕ್ಕೂ ಹುಳಿ 

ಹಿಂಡಿಕೊಂಡು ಬಗ್ಗಡವಾಗುತ್ತಿದ್ದಾರೆ. ರಾಷ್ಟ್ರ ಕವಿಗಳು ಧರ್ಮಗಳನ್ನು 

ಒಂದಾಗಿಸುವ ಪ್ರಯತ್ನದಲ್ಲಿದ್ದರೆ; ಸಣ್ಣ ಮನಸ್ಸಿನವರು ತಮ್ ತಮ್ಮ ಧರ್ಮಗಳಲ್ಲೇ

ಹೊಡೆದಾಡುತ್ತಿದ್ದಾರೆ. ಎಂತಹ ವಿಪರ್ಯಾಸ…


ಮಾನವರು ತಾವೇ ಮಾಡಿಕೊಂಡ ತಮ್ಮ ಧರ್ಮ ಸಂಕೇತಗಳಾದ ಗುಡಿ, ಚರ್ಚು 

ಮತ್ತು ಮಸಜೀದಿಗಳನ್ನು ಬಿಟ್ಟು; ವಿಶಾಲವಾಗಿ ಚಿಂತಿಸಿ ಅಜ್ಞಾನದಿಂದ ಹೊರ 

ಬಂದು ಬಡತನವನ್ನು ಬುಡಸಮೇತ ಕಿತ್ತೆಸೆಯುವಂತೆ ಕವಿ ಕರೆ ನೀಡಿದ್ದಾರೆ. 

ಧರ್ಮಕ್ಕಾಗಿ ಹೊಡೆದಾಡುವ ಶಕ್ತಿ, ಹಣ ಮತ್ತು ಶ್ರಮವನ್ನು ದಾರಿದ್ರ್ಯ 

ನಿರ್ಮೂಲನೆಗೆ ಬಳಸಿದ್ದೇ ಆದರೆ ಬಡತನದ ರೇಖೆಯಿಂದ ಕೆಳಗಿರುವ ಜನರು, 

ಬಡತನ ರೇಖೆಯಲ್ಲಿರುವ ಜನರು ಮೇಲೇರುವಂತಾಗಬಹುದು ಎಂಬುದು 

ಕವಿಗಳ ಸಾಮಾಜಿಕ ಕಳಕಳಿ. ಜೊತೆಗೆ ಏಕತೆಯ ಮಂತ್ರದಿಂದ ದೇಶದ ಪ್ರಗತಿ 

ಸಾಧ್ಯ.


 ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ
 

ಬಡತನವ ಬುಡಮಟ್ಟ ಕೀಳ ಬನ್ನಿ


ಅಜ್ಞಾನ, ಮೂಢನಂಬಿಕೆಗಳಿಂದ ಜಾತಿ, ಧರ್ಮಗಳ ಆಚರಣೆಗಳಿಗೆ ಪುಷ್ಠಿ ಹೆಚ್ಚು. 

ಆದರಿಂದ ಮಾರಿಯಂತೆ ಕಾಡುತ್ತಿರುವ ಮೌಡ್ಯತೆಯನ್ನು ಜ್ಞಾನದ ಬೆಳಕಿನಲ್ಲಿ ಸಾಗಿ 

ವಿಜ್ಞಾನದ ದೀವಿಗೆಯನ್ನು ಹಿಡಿಯ ಬನ್ನಿರೆಂದು ಆಹ್ವಾನಿಸಿದ್ದಾರೆ. ಶೈಕ್ಷಣಿಕ ಮತ್ತು 

ವೈಜ್ಞಾನಿಕ ಮನೋಭಾವದಿಂದಷ್ಟೇ ಮೂಢನಂಬಿಕೆಗಳ ನಿರ್ಮೂಲನ 

ಸಾಧ್ಯವೆಂಬುದು ಇಲ್ಲಿನ ಸಾರ.


 ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ

 ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ 
ಓ ಬನ್ನಿ ಸೋದರರೆ ಬೇಗ ಬನ್ನಿ…….

 

ಎಲ್ಲಾ ಧರ್ಮದವರೂ ಸೋದರರಾಗಿ ಒಂದಾಗಿ ಬನ್ನಿ. ಮೌಡ್ಯತೆಯನ್ನು ಹೊರ 

ಹಾಕಿ ಬಡತನದ ನಿರ್ಮೂಲನೆಗೆ ಕೈ ಜೋಡಿಸಿರೆಂದು ಕವಿ ಕರೆ ನೀಡಿ 

ಹುರಿದುಂಬಿಸಿದ್ದಾರೆ.

ಮತವೆಂಬ ಮೋಹಕ್ಕೆ ಸಿಲುಕಿ ಅಜ್ಞಾನದಿಂದ ನಡೆಯದೆ; ಬುದ್ದಿವಂತಿಕೆಯಿಂದ 

ಲೋಕ ಹಿತಕ್ಕಾಗಿ ದುಡಿಯುವ ಅಗತ್ಯವಿದೆ ಎಂದಿದ್ದಾರೆ. ಕಾಲ, ಶ್ರಮ 

ಮನಸ್ಸನ್ನು ದುಡಿಮೆಯಲ್ಲಿ ವಿನಿಯೋಗಿಸಿದ್ದಲ್ಲಿ ನಮ್ಮಲ್ಲಿ ದಾರಿದ್ರ್ಯವಿಲ್ಲದಂತಾಗಿ 

ಜನ, ನಾಡು, ದೇಶವು ಪ್ರಗತಿಯ ಹಾದಿ ಹಿಡಿಯುತ್ತದೆ. ಅಜ್ಞಾನದಿಂದ ಮತಗಳ 

ಸುಳಿಗಳಲ್ಲಿ ಸಿಲುಕದಿರಿ ಎಂಬುದು ಕವಿಗಳ ವಿನಮ್ರ ಸಲಹೆ.


ಸಿಲುಕದಿರಿ ಮತವೆಂಬ ಮೊಹದಜ್ಞಾನಕ್ಕೆ

ಮತಿಯಿಂದ ದುಡುಯಿರೈ ಲೋಕ ಹಿತಕ್ಕೆ


ಇಂದು ಮನುಷ್ಯನು "ತನ್ನದು ಈ ಮತ, ಅವನದು ಆ ಮತ"ವೆಂದು ತಮ್ ತಮ್ಮ 

ಧರ್ಮಗಳ ಉಳಿವಿಗಾಗಿ ಮತ್ತು ಪ್ರಚಾರಕ್ಕಾಗಿ ಸೆಣಸಾಡುತ್ತಿದ್ದಾನೆ. ಪರಸ್ಪರ 

ದ್ವೇಷ, ಪೈಪೋಟಿಗಳಲ್ಲಿ ಮುಳುಗಿ ದೇಶದ ಅಭಿವೃಧಿಯನ್ನು ಮರೆತಿದ್ದಾನೆ. 

ಈಗಂತು ಧರ್ಮದ ಹೆಸರಿನ ಆಡಂಬರದ ಆಚರಣೆಗಳಿಗೂ ಮೀರಿ, ಧರ್ಮದ 

ಉಳಿವಿಗಾಗಿ ಮತಾಂತರಗಳನ್ನು ಕೈಗೊಳ್ಳುವಂತಹ ಮನಃಸ್ಥಿತಿಗೆ ಧರ್ಮ 

ಪ್ರಚಾರಕರು ತಲುಪಿಬಿಟ್ಟಿದ್ದಾರೆ. ಜಾತಿಯೇ ಬೇಡ, ಧರ್ಮವೇ ಬೇಡವೆಂದು 

ಬದಿಗೊತ್ತಿ ಮುಂದೆ ಬನ್ನಿ ಎಂಬ ಕವಿ ವಾಣಿಗೆ ನಮ್ಮ ಪ್ರತಿಕ್ರಿಯೇ 

ಏನು? ಚಿಂತಿಸಬೇಕಾಗಿದೆ. ಮಾನವನದು ಒಂದೇ ಧರ್ಮ; ಮನುಜ ಕುಲ ಒಂದೇ 

ಎನ್ನುವಾಗ, 'ಇಂತದ್ದೇ ಧರ್ಮವು ಶ್ರೇಷ್ಠ, ಆ ಮತಕ್ಕೆ ಮತಾಂತರ ಹೊಂದಿ' 

ಎನ್ನುವುದು ಎಷ್ಟು ಸರಿ. "ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದ ಕುದುರೆಯ 

ಬೇಡುವವ ವೀರನೂ ಅಲ್ಲ, ಶೂರನೂ ಅಲ್ಲ……. ಎಂಬ ವಚನದಂತೆ. ಹುಟ್ಟಿದ 

ಧರ್ಮವನ್ನು ಜರಿದು ಮತ್ತೊಂದು ಧರ್ಮೋದ್ದಾರಕ್ಕೆ ನಿಲ್ಲುವವನೂ ಈ 

ಸಂದರ್ಭದಲ್ಲಿ ವಚನದಲ್ಲಿ ಹೇಳಿದಂತೆಯೇ ಕಾಣುತ್ತಾನೆ.


ಈ ಯಾವ ಮತಗಳ ಸಹವಾಸ, ಹಂಗಿಲ್ಲದೆ ಎಲ್ಲರೂ ವಿಶ್ವ ಮಾನವರಾಗೋಣ 

ಎಂದು ಕವಿ ಸ್ವಾಗತಿಸಿದ್ದಾರೆ.


ಆ ಮತದ ಈ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕ್ಕೆ

ಓ ಬನ್ನಿ ಸೋದರರೇ ವಿಶ್ವ ಪಥಕೆ…………


ಕರೆ ನೀಡಿದ ಕವಿಯೇ ಕಾಲವಾದರೂ ಸಮಾಜವು ಜಗ್ಗದೆ ಇನ್ನೂ ಧರ್ಮ 

ಜಾತಿಗಳಿಗಂಟಿಕೊಂಡೇ ಇದೆ. ಅಷ್ಟು ಹಿಂದಿನ ಕವಿ ಕರೆಗೆ ಇಂದು ಕೂಡ ತೀರ 

ವಿಳಂಬವೇ ಸರಿ. ಇನ್ನಾದರೂ ಸಮಾಜ(ನಾವು) ಬದಲಾಗಿ ನಮ್ಮ ಪರಿಸರವನ್ನೂ 

ಬದಲಾಗಿಸಬೇಕಾಗಿದೆ. ಸ್ನೇಹಿತರೇ, ಹಾಗಾದರೆ ಕವಿ ಕರೆಗೆ ಕೈ ಜೋಡಿಸೋಣವೆ?

…



ಪಂಜುವಿನಲ್ಲಿ


ಧನ್ಯವಾದಗಳು
22/06/2013


-ದಿವ್ಯ ಆಂಜನಪ್ಪ


Thursday, 5 September 2013

ಮೋಡಿ ಮಾಡಿದ ಹುಡುಗ
ಕಾಣದಾಗಿದ್ದಾನೆ
ಬಹುಶಃ ಕನಸಿನೆಡೆಗೆ
ನಡೆದಿರಬೇಕು
ನಾನಿನ್ನು ಕನಸ ಕಟ್ಟದಿದ್ದರೆ
ಮುನಿಸಿಕೊಂಡಾನೋ
ಕನಸಿನೊಳಗೂ....... :-)

-ದಿವ್ಯ ಆಂಜನಪ್ಪ
05/09/2013
ಎಲ್ಲರೂ
ಗೆದ್ದೆತ್ತಿನ
ಬಾಲವ
ಹಿಡಿವರೇ
ಎಂದಾದರೇ
"ದನ"
ಎಂದೊಡೆ
ಮುಖ ಸಿಂಡರಿಸದೇ
ಮುಖವರಳಬೇಕು
ತಾನೇ ಆತನಿಗಿಂತ
ಮುಂದೆಂದು :-)

-05/09/2013

ಚೆಂಡಿನಂತಹ
ಮನವು
ಏರಿಳಿತಕ್ಕೊಳಗಾಗದೇ
ಇರುವುದಕ್ಕೇ
ಅದು ತೇಳಾಡುವುದಾದರೂ
ಜೀವಂತಿಕೆಯ
ಭಾವದಲೆಯ ಮೇಲೆಯೇ
ಹೊರತು
ಗಟ್ಟಿ ಸೀಮೆಂಟಿನ
ನೆಲದ ಮೇಲಲ್ಲ

-ದಿವ್ಯ ಆಂಜನಪ್ಪ :-)
05/09/2013
"ಬಂಧ"

ಬಂಧದೊಳು ಬಂಧಿಯಾಗಲು
ದುಂಬಾಲು ಬೀಳುವ ಹಲವರು
ಬಂಧದಿಂದಾಚೆಗೇ ಸ್ವತಂತ್ರರೆಂದು
ಬಗೆವರು ಕೆಲವರು
ಬಂಧದೊಳಿದ್ದೂ ಇಲ್ಲದಂತೆ
ಸೋಗೆ ಹಾಕುವ ಮತ್ತೆ ಕೆಲವರು
ಬಂಧದೊಳಿಲ್ಲದೆ ಬಂಧಿಯಾಗುವ
ಮುಕ್ತ ಮನದ ಜನರು
ಬಂಧವಿಲ್ಲದೆ ಬಂದಂತೆ ಹೋದರೂ
ಬಂದು ಕಳಿಸಲಾರರು ಬಂಧು ಬಾಂಧವರು 


05/09/2013
ಸೌಂದರ್ಯವಿರುವುದು 
ನೋಡುವ 
ದೃಷ್ಟಿಯಲ್ಲಿಯೇ 
ಹೊರತು 
ನೋಡುವ 
ನೋಟದಲ್ಲಲ್ಲ!!


05/09/2013

Wednesday, 4 September 2013

"ಗುರು"
ಒಂದೇ ಒಂದು ಅಕ್ಷರವನ್ನು ಕಲಿಸಿದ್ದರೂ ಅವರನ್ನು ಗುರುಗಳಂತೆ ಕಾಣಬೇಕಂತೆ. ಮನುಷ್ಯ ತಾನು ಹುಟ್ಟಿನಿಂದ ಕೊನೆಯ ತನಕವೂ ಒಂದಲ್ಲ ಒಂದನ್ನು ತಾವು ಸಂಧಿಸಿದ ವ್ಯಕ್ತಿಗಳಿಂದ ಕಲಿಯುತ್ತಲೇ ಇರುತ್ತಾನೆ. ಹಾಗೆಯೇ ನನಗೂ ಅದೆಷ್ಟೋ ಜನ ಗುರುಗಳು. ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣದಲ್ಲಿನ ಗುರು ಹಿರಿಯರು. ಔಪಚಾರಿಕ ಶಿಕ್ಷಣದಿಂದಾಚೆಗಿನ ಮಾರ್ಗದರ್ಶಕರು. ಹೀಗೇ ಮುಂದುವರೆದು ಈಗ ಫೇಸ್ ಬುಕ್ಕಿನ ಶಾಲಾ ವಿದ್ಯಾರ್ಥಿಯಾದ ನನಗೆ ಇಲ್ಲಿನ ಹಿರಿಯ ಕಿರಿಯ ಗೆಳೆಯರೂ ನನಗೆ ಪಾಠ ಕಲಿಸುವ ಶಿಕ್ಷಕರಂತೇ ಕಾಣುತ್ತಾರೆ. ಹೌದು ಫೇಸ್ ಬುಕ್ಕಿಗೆ ಯಾವುದೇ ಉದ್ದೇಶವಿಲ್ಲದೆ ಮನಸ್ಸಿಗೊಂದು ಬದಲಾವಣೆ ಸಿಗಲಿ ಎಂಬ ಭಾವದಲ್ಲಿ ನಾನು ಬಂದದ್ದು. ಬಂದ ತುಂಬಾ ದಿನಾ ಇಲ್ಲಿ ನನ್ನದೇನು ಪಾತ್ರವಿರಲಿಲ್ಲ. ಏನ್ ಮಾಡ್ಬೇಕು ಅಂತನೂ ಗೊತ್ತಿರಲಿಲ್ಲ ಬಿಡಿ........... :-) 
ಓದುವ ಹವ್ಯಾಸವನ್ನಷ್ಟೇ ಹೊಂದಿದ್ದ ನನಗೆ ಬರೆಯುವಂತೆ ಪ್ರೇರೇಪಿಸಿದ ಗುರುವೂ ಸಿಕ್ಕರು. ಈಗ ಬರವಣಿಗೆಯ ಹಾದಿಯಲ್ಲಿ ದಾಪುಗಾಲಿಡುತ್ತಿರುವೆ.
ಕಾಲ ಎಲ್ಲಿಂದ ಎಲ್ಲಿಗೋ ದಾರಿ ಬದಲಿಸಿದೆ. ಕಲಿಯುವ ಆಸಕ್ತಿಯೊಂದು ಮಾತ್ರ ನನ್ನ ನಿರಂತರ ಸಂಗಾತಿ......... :-)

ತಮ್ಮೆಲ್ಲರಿಗೂ ಧನ್ಯವಾದಗಳು.
ಶಿಕ್ಷಕರ ದಿನದ ಶುಭಾಶಯಗಳು :-)

ನಾಳೆ ಬೆಳಗ್ಗೆಯಿಂದಲೇ ಬ್ಯುಸಿ ನಾನು ಹಾಗಾಗಿ ಈಗಲೇ ಶುಭಾಶಯ ಕೊರುತ್ತಿರುವೆ.
ಮಾತು ಮೌನವಾದರೂ
ಮನವು ಬಲು ಮಾತುಗಾರ್ತಿ
ನಮ್ಮಿಬ್ಬರ ಸಂಭಾಷಣೆಗೆ
ಏಕ ಪಾತ್ರಾಭಿನಯದ ಕಲೆಗಾರ್ತಿ!!


04/09/2013
ಸಮಸ್ಯೆ 
ಎಂಬ 
ಶತ್ರುಗಳಿಗೆಲ್ಲಾ 
ಒಂದೇ 
ಅಸ್ತ್ರ 
ನಗು 


04/09/2013
ನಗಿಸಲು 
ನಗಬೇಕು 
ಹೇಳುವ ಮುನ್ನ 
ನಡೆದು ತೋರಬೇಕು
ಬಯಸುವ ಮುನ್ನ 
ಪ್ರೀತಿಸಬೇಕು
ಗಾಢ ಪ್ರೇಮವಾಗುವ ಮುನ್ನ 
ಸಣ್ಣ ವಿರಹವಿರಬೇಕು 


04/09/2013

Tuesday, 3 September 2013

ಬರಡು 
ಮನಕ್ಕೂ 
ಒಮ್ಮೆಲೆಯಾದರೂ
ಪ್ರೀತಿ ಸಿಂಚನ 
ಋಣವಂತೆ 

03/09/2013
ಅರ್ಥವಾದ ಅಹಿತವೂ
ಅರ್ಥವಾಗದ ಹಿತಕ್ಕಿಂತ
ಹೆಚ್ಚೇ ಸುಖ ನೀಡಬಲ್ಲದು
ಅನರ್ಥವಾದ ಹಿತವೂ
ಅರಗಿಸಿಕೊಂಡ ಅಹಿತಕ್ಕೂ
ಹೆಚ್ಚೇ ಕ್ಷೋಭೆ ನೀಡಬಲ್ಲದು


03/09/2013
ಶೂನ್ಯ ಸ್ಥಿತಿಯ ಮನಸಿನ
ಮಸ್ತಕವೂ ಸುರುಳಿಸುರುಳಿಯಾಗಿ
ಭ್ರಮೆಗಳ ಪರಿಭ್ರಮಣೆಯಲಿ
ಕಾಲವೂ ನಿಲ್ಲದೆ ತಿರುಗಿದೆ
ಓಟವಿದ್ದರೂ ಮನವಲ್ಲೇ
ತಿರುತಿರುಗಿ ಆಳಕ್ಕಿಳಿದು
ಒಮ್ಮೆಲೆ ಮೇಲೆದ್ದು
ಶಾಂತಗೊಳಲು ಬೆಟ್ಟವಾದರೂ
ಬಡಿದು ತಡೆಯಬಾರದೇ
ಎಂದಲುಬುತ್ತ
ಹುಡುಕಿದೆ ತನಗಿಂತ
ಗಟ್ಟಿ ಆಸರೆಯ 

- ದಿವ್ಯ ಆಂಜನಪ್ಪ 

03/09/213
ನಿನ್ನ ಮನದ ದನಿ
ಪಿಸುಗುಟ್ಟಿದ್ದು
ನನ್ಹೆಸರೇ
ನಿನ್ನ ಮಾತು 
ಘರ್ಜಿಸಿದ್ದು 
ಬೇರೆಯದೇ
ಹೇಳು ನೀನೇ 
ಯಾವುದ ನಂಬಲಿ ??!! 


03/09/2013
ಫಲ ವಿಫಲವೆಲ್ಲಾ
ಹೊರ ಜಗಕೆ
ನನಗೆ ನನ್ನ 
ಪ್ರೇಮವೆಂದಿಗೂ
ಸಫಲವೇ
ಕಾರಣವಿಷ್ಟೇ
ಅದರೊಳು
ನನಗೆ ಕಾಣ್ವದು
ನಿಷ್ಟೆಯಷ್ಟೇ 


03/09/2013

Monday, 2 September 2013

ಯಾರವನು ಯಾರವನು
ಕೇಳ್ವರು ಎಲ್ಲರೂ
ಭಾವಕ್ಕೆ ಏನೆಂದು ಹೆಸರಿಡಲಿ
ನೀನನ್ನದೆ?!!


02/09/2013
ಭಾವಗಳ 
ಹುಟ್ಟಿಸಲಾಗದು
ಹುಟ್ಟಿದ ಮೇಲೆ 
ಬಂಧಿಸಲಾಗದು
ಮೀರಿ ಹಿಡಿದಿಟ್ಟರೆ
ನನಗೆ ನಾನೇ 
ಅಪರಿಚಿತ


02/09/2013
ಚುಟುಕಿನ ಗುಟುಕಿಗೆ
ಮತ್ತೇರಿಸಿಕೊಳುವ
ಪಟುವೇ;
ಸ್ವಲ್ಪ ನೆಶೆಯಿಳಿಸಿಕೊ
ಕಣ್ಬಿಟ್ಟು ನೋಡಿ
ಮನವರಿತು ಮೃದುವಾಗು
ಕುಟುಕುವುದು ಮೌನವದು
ನಿನ್ನದು!!!

-ದಿವ್ಯ ಆಂಜನಪ್ಪ

೦೨/೦೯/೨೦೧೩
ನೀ ಕಲಿಸಿಕೊಟ್ಟೆ 
ಅದ ನೀನೇ ಪಡೆದೆ
ನನ್ನದೇನಿದೆ?
ಹೆಸರಷ್ಟೇ
ನಿನ್ನ ಕಲೆ
ಅರ್ಪಿತ
ನಿನಗೇ 

-ದಿವ್ಯ ಆಂಜನಪ್ಪ
02/09/2013

Sunday, 1 September 2013

ಪ್ರೀತಿ ಎಂದರೆ 
ಪಡೆದುಕೊಳ್ಳುವದಕ್ಕಿಂತ
ಮುಷ್ಟಿ ಹಿಡಿದ
ಕನಸು ಕೊಟ್ಟುಬಿಡುವುದು 


01/09/2013
ಹಾಗೇ ಸುಮ್ಮನೆ.... :-)

ಈ ಮಳೆ
ನೆನೆಸಿ ಇಳೆ
ನೆನಪಿಸಿವೆ
ಆ ನಿನ್ನ
ಹಳೆಯ
ಮಾತುಗಳ
ಮನವೀಗ
ಹುಚ್ಚು ಹೊಳೆ :-)

-01/09/2013
ಹೊರಗೆ ಜೋರು ಮಳೆ
ಮನದೊಳು ಧಗೆ
ಅವನ ಕೋಪ ತಾಪಕ್ಕೆ
ನನ್ನೊಳಗೂ ಹಾಗೇ
:-)

-ದಿವ್ಯ ಆಂಜನಪ್ಪ
01/09/2013


ಮನದೊಳು
ಜನಿಪ
ಭಾವ;
ಭಾವದ
ಹೊಮ್ಮಿಕೆ
ಅಭಿವ್ಯಕ್ತಿ;
ಅಭಿವ್ಯಕ್ತಿಯ
ಅದುಮಿಟ್ಟರೆ
ಮನವದು
ವಿಪ್ಲವ

-ದಿವ್ಯ ಆಂಜನಪ್ಪ
01/09/2013
ಹುಣ್ಣಿಮೆಯ ಶಶಿಯೋ
ಕಾಮನ ಬಿಲ್ಲೋ
ಸಾಗರದಲೆಯೋ
ಮಾತಿನ ಮೋಡಿಯೋ
ಕಾಣೆ
ಅವನೊಲವು;
ಕಂಡ ಅವ ಮಾತ್ರ
ಚುಂಬಕ ಶಕ್ತಿಯ ಪುತ್ಥಳಿಯೇ
ಸೆಳೆದ ಮೇಲೆ ಬಿಡುವ
ಮಾತಿಲ್ಲ!!!......... :-)

01/09/2013
ನಮ್ಮಿಬ್ಬರ
ಒಳ ದನಿ
ಮತ್ತೊಬ್ಬರ 
ಹೊರ ದನಿ 
ಆದಾಗ
ಅರ್ಧ
ನಾನು
ನೀನಲ್ಲ 


01/08/2013

Saturday, 31 August 2013

ಕೊನೆಗೂ 
ನಗು
ನನ್ನಿಂದ 
ಸಾಧ್ಯವಾಗಲೂ
ಅತ್ತ 
ಅಷ್ಟೂ 
ಘಳಿಗೆಗಳಿಗಿದೆ
ನನ್ನ ಕ್ಷಮೆ

31/08/2013
ಒಂದಷ್ಟು ಹೊತ್ತು ಹರಟು
ನಿನ್ನ ಸ್ವಾರ್ಥತೆ ಇಲ್ಲದೆ
ನೋಡೋಣ ಆಗಲೂ
ನಿನ್ನಲ್ಲಿ ಮಾನವೀಯತೆ
ಜಾಗೃತವಾಗದೇ ಎಂದು


31/08/2013
ಮನೆಯ ಮುಂದಿನ ಬೃಂದಾವನಕಷ್ಟೇ
ದೀಪ ಹಚ್ಚಬೇಕೆಂದಿದ್ದೆ
ಯಾವ ಮಾಯೆಯಲಿ ಮನೆಯೊಳಗೂ
ಬೆಳಕಾಯಿತೋ
ಬೆಂಕಿತಾಗದ ಸೊಡರುಗಲಿದ್ದ ದೀಪಗಳಲಿ
ಙ್ಞಾನವಾಹಿನಿ ಹರಿದು :-)

31/08/2013
ಮಂಜಿನ 
ಚೂರಿಯಾಗಿ 
ಇರಿಯುತ್ತಿದೆ 
ನಿನ್ನ 
ಅಕಾರಣ 
ಮೌನ


31/08/2013
ಹೂವಿನಂತಹ ಮನಸ್ಸು 
ಬೇಗೆಗೆ ಬಾಡಲು 
ತುಸು ಹಾರೈಕೆ 
ತಂಗಾಳಿಯಂತಹ 
ಇಷ್ಟು ಸವಿ ಮಾತು
ಸಾಕಲ್ಲವೇ 
ಜೀವ ಜೀಕಾಡಲು
ಹೂವಿನ ಉಯ್ಯಾಲೆಯಲಿ

-ದಿವ್ಯ ಆಂಜನಪ್ಪ
31/08/2013
ಕಳೆದ ಕಾಲಕ್ಕೆ 
ಮರೆತ ಭಾವಕ್ಕೆ 
ನನ್ನದೊಂದು
ನಿಟ್ಟುಸಿರು
ಎರಡು ಹನಿ ಕಂಬನಿಯಷ್ಟೇ
ಹೆಚ್ಚಾದರೆ ಉದಯರವಿ
ಸುಡುತಾನೊ ಬೆಳ್ಳಂಬೆಳಗ್ಗೆ 


31/08/2013

Friday, 30 August 2013

ಅರಳುವ ಮನವ 
ಮುದುಡಿದ ಭಾವವ
ಒಮ್ಮೆಲೆ 
ಮಡಿಸಲಾಗದು ಬಿಡಿಸಲಾಗದು
ಕಾಯಬೇಕಷೇ
ತಾಳ್ಮೆಗೆ 
ಮೃದುವಾಗಬಹುದೆಂದು
ಆತುರಪಟ್ಟರೆ
ಮುರಿವುದು 
ಮಾನಸ ಪಕಳೆಗಳು

-ದಿವ್ಯ ಆಂಜನಪ್ಪ
30/08/2013
ಹಾಗೇ ಸುಮ್ಮನೆ...... :-)

ಮಳೆಯಲಿ ಬೇಸಿಗೆಯ
ಬೇಸಿಗೆಯಲಿ ಮಳೆಯ
ತರಿಸುವವ
ಮೋಡಿಗಾರ
ಮೇಘರಾಜ
ಕ್ಷೀಣಿಸಿದರೂ
ಬಿಡಿಸುವನು
ಬಣ್ಣದ ಚಿತ್ತಾರ!!

-ದಿವ್ಯ ಆಂಜನಪ್ಪ
30/08/2013
ಪ್ರೀತಿ 
ಪರಿಚಯಿಸಿ
ಸ್ನೇಹ 
ತೊರೆದ
ಕತೆಗೆ
ಅವನೇ
ಕರ್ತೃ


30/08/2013
"ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ
ಗೆಳತೀ ಓ ನನ್ನ ಗೆಳತಿ......."

ಈ ಸಾಲಿನ ಕವಿಗಳು ಯಾರೆಂದ ಈ ಕ್ಷಣಕ್ಕೆ ನೆನಪಿಲ್ಲ. ಆದರೆ ತುಂಬಾ ಕಾಡುವ ಸಾಲುಗಳು... ಇತ್ತೀಚಿನ ದಿನಗಳಲ್ಲಿ. ಈ ಹಾಡು ನನ್ನ ಕಾಲೇಜು ದಿನಗಳಲ್ಲಿ ತುಂಬಾ ಫೇಮಸ್. ನಮ್ಮ ಟಿ.ಸಿ.ಹೆಚ್ ನಲ್ಲಿ ವಾರಕ್ಕೊಂದು ಪ್ರೊಗ್ರಾಮ್ ಕಂಪಲ್ಸರಿ. ಎಲ್ಲರೂ ಭಾಗವಹಿಸಲೇ ಬೇಕು ಇಂಟರ್ನಲ್ ಮಾರ್ಕ್ಸ್ ಉಂಟು. ಹಾಗಾಗಿ ಬರ್ದಿದ್ರೂ ಹಾಡ್ಬೇಕು ನೃತ್ಯ ಮಾಡ್ಬೇಕು ಮೋನೋ ಆಕ್ಟ್ ಮಾಡ್ಬೇಕು..... ಆಗಲ್ಲ ಬರಲ್ಲ ಅನ್ನಂಗಿಲ್ಲ. ಅಗ್ಲೇ ನಮಗೂ ಇವೆಲ್ಲಾ ಬರುತ್ತಾ ಅಂತ ಗೊತ್ತಾಗಿದ್ದು :-). ಈ ಸಂಬರ್ಭಗಳಲ್ಲಿ ಹುಡುಗರೆಲ್ಲಾ ಹೆಚ್ಚು ಈ ಹಾಡನ್ನೇ ಹಾಡ್ತಿದ್ರು ಯಾರ್ಯಾರ್ನೋ ಮನಸಲಿಟ್ಕೊಂಡು. ಕೇಳಿ ಕೇಳಿ ನಮಗೂ ಬಾಯ್ ಪಾಠ. ಪಾಪ ಅವರ ವೇದನೆ ಏನಿತ್ತೋ. ಅಗೆಲ್ಲಾ ನಾವು ಹಾಡಿನ ಧಾಟಿ, ರಾಗ ಏರಿಳಿತ ಅಷ್ಟನ್ನೇ ಗಮನಿಸುತ್ತಿದ್ದೆವೇನೋ ಅದರ ಭಾವಾರ್ಥದ ಗೋಜಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ. ಭಾವಗೀತೆಗೆ ಚಿತ್ರಗೀತೆಯಂತಹ ನೃತ್ಯ ಸಂಯೋಜನೆ. ಯಾವ್ದೋ ಚಿತ್ರಗೀತೆಗೆ ತಮಟೆ ಬಡಿದು ನೃತ್ಯ ಸಂಯೋಜನೆ ಹೀಗೆ ಹೊಸ ಹೊಸ ಪ್ರಯತ್ನ ನಮ್ಮದು. ಬಹಳ ಸ್ಟ್ರಿಕ್ಟ್ ನಮ್ ಕಾಲೇಜ್ ಬೇರೆ ಹೆಚ್ಚು ಕಡಿಮೆ ಆದ್ರೂ ಸರಿಯಾಗ್ ಬೈತಿದ್ರು. ತಂಡದ ಸಾಧನೆಯೇ ಒಂದು ಖುಶಿ. ಆಗಿನ ಹಾಡುಗಳೆಲ್ಲಾ ಈಗ ಅರ್ಥ ನೀಡುತ್ತಿವೆ ಅನಿಸುತ್ತಿದೆ ನನಗೆ. ಏಷ್ಟ್ ಲೇಟ್ ನಾನು ಅನ್ಸುತ್ತೆ :-)
ಈ ಮೇಲಿನ ಹಾಡು ಏಷ್ಟು ಭಾವಪೋರ್ಣ; ಹೌದಲ್ವಾ? ಯಾರನ್ನಾದರೂ ತುಂಬಾ ಕಾಡಿಸೋದು ತಪ್ಪು. ಆ ವೇದನೆಯನ್ನು ತಾಳಲಾರದೆ ಕವಿಗಳು ತನ್ನನ್ನು ಕೊಂದುಬಿಡು ಆದರೆ ಹೀಗೆ ಕಾಡಬೇಡವೆಂದು ಬೇಡುತ್ತಿದ್ದಾರೆ. ಜೀವನದಲ್ಲಿನ ಯಾವ ವಿಚಾರ ಕವಿಗೆ ವಸ್ತುವಾಗಲಾರದು ಹೇಳಿ? ಎಲ್ಲವೂ ಸಾಧ್ಯ. ಅದಕ್ಕಾಗಿಯೇ ಕವಿಗಿಲ್ಲ ಯಾವುದರ ಹಂಗು. ಭಾವಗಳ ಬಂಧಿಸುವ ಅನಿವಾರ್ಯತೆ. ನಿಜ ಸ್ವತಂತ್ರ್ಯ ಅಂದರೆ ಇದೇ ಅನಿಸುತ್ತೆ ನನಗೆ. ಮನಬಿಚ್ಚಿ ಹಾರುವ ಭಾವಗಳ ತಾರಾಟವ ಗಾಳಿಪಟವೆಂಬಂತೆ ನೋಡಿ ಆಡಿ ಆನಂದಿಸುವ ಸುವವಕಾಶ. ಸಿಕ್ಕರೆ ಬಿಡಬಾರದು ಇಂತಹ ಅವಕಾಶಗಳ....... :-)


ಧನ್ಯವಾದಗಳು
-ದಿವ್ಯ ಆಂಜನಪ್ಪ
30/08/2013

Thursday, 29 August 2013

ಭಾವ ಬೆಸೆಯುವ
ಭರಕ್ಕಿಂತ 
ಭಾವ ಹೊಸೆಯುವ 
ವರ ಸಿದ್ಧಿಸಬೇಕು


(ಅದು ಸಾಧನೆ 
ನಾ ಸಾಧಿಸಲಾದದ್ದು ) ;-)

29/08/2013
ಸ್ನೇಹ-ಸಂಬಂಧಿಗಳಿಂದ ಆಕ್ಷೇಪ
ವಿರಹಗೀತೆ ಸಾಕು
ಪ್ರಣಯಗೀತೆ ಬೇಕು
ನನ್ನದೂ ಒಂದು ಭಾವ ನಿಕ್ಷೇಪ
ಬೇಡುತ್ತಿದೆ ಪಕ್ವವಾಗಲೂ 
ಇನ್ನೂ ಸ್ವಲ್ಪ ಸಮಯ ಬೇಕು

-ದಿವ್ಯ ಆಂಜನಪ್ಪ :-)
30/08/2013
ನೀ ದಾರಿ ಬದಲಿಸಿದೆಯೆಂದು 
ನಾನೂ ತಿರುಗಿದರೆ
ಅಷ್ಟೂ ದಿನ ನಮ್ಮ ನೆಡೆಸಿದ
ದಾರಿ ಒಂಟಿಯಾಗಬಾರದಲ್ಲವೇ 

-ದಿವ್ಯ ಆಂಜನಪ್ಪ
29/08/2013
ಕೃಷ್ಣ
ನೀ ಸಿಕ್ಕರೆ
ನಾ ರಾಧೆ 
ಸಿಗದಿರೆ
ನಾ ನಿನ್ನ ಮೀರೆ


29/08/2013
ಪದೇ ಪದೇ
ನೆನಪಾಗೊ ನೆನಪಿಗೆ 
ನೆನಪು
ಎಂದರೆ ತಪ್ಪೇನೋ 
ನೆನಪೆಂಬ 
ನೆಪ
ನಿನ್ನ ನೆನೆಯಲು
ಎಂದರೆ ಸರಿಯೇನೋ 


29/08/2013

Wednesday, 28 August 2013

ಚುಟುಕು

ಬರೆದು ಹಾಕಿ
ಇಲ್ಲ 
ಬರೆದು ಹರಿದು ಹಾಕಿ
ಕಳೆದ ಕಹಿ ಘಳಿಗೆಯ
ಜೀವನವದು
ಸವಿಯಲು ಸವಿಯ
ಹೊರತು 
ಸವೆಯಲಲ್ಲ ಕಹಿಯ

-ದಿವ್ಯ ಆಂಜನಪ್ಪ
28/08/2013

ಚುಟುಕು

ಸಮಯ ನೋಡಿ 
ಹೊಂಚ ಹೂಡಿ
ಸೇತುವೆಯಾಗುವ
ನಿನ್ನ ನೆನಪು 
ನಿನ್ನೆಡೆಗೇ
ಸೆಳೆದು ದೂಡುವುದು
ನಾ ಏನು ಮಾಡಲಿ
ಎಲ್ಲಾ 
ನಿನ್ನ ಮೋಡಿ 


28/08/2013

ಚುಟುಕು

ನಿನ್ನ ಮುಂದಿನ 
ದೂರದ ಮಂದಿಗೂ
ತಲುಪುವ ನೀನು
ನಿಲುಕದಾದೆ
ಎನಗೆ 
ದೀಪದ ಬುಡ
ಕತ್ತಲೆನ್ನುವಂತೆ



27/08/2013

ಚುಟುಕು

ರಸಿಕ ಕೃಷ್ಣನ
ವೈಭವೀಕರಿಸುವ
ಅನುಕರಿಸುವ ಜನ
ಮರೆತರೊ
ಆತ ಸಾರಿದ
ಸಂದೇಶವ 


27/08/2013

Tuesday, 27 August 2013

 ನೆನ್ನೆ ರಾತ್ರಿ ಊಟಕ್ಕೆ ಕೂತ ಸಮಯ, ಅಪ್ಪನಿಂದ ನೇರ ಮಾತು, "ದಿವ್ಯಾ, ಬರಿತೀನಿ ಅಂತ ಏನೇನೋ ಬರಿಬೇಡ ಕಣಮ್ಮ", ನನಗೆ ಒಮ್ಮೆಲೆ ಆಶ್ಚರ್ಯ ಆತಂಕ. "ಏನ್ ಬರಿಬಾರ್ದು ಕಣಣ್ಣಾ?" ತಗ್ಗಿದ ದನಿಯಲಿ ಕೇಳಿದೆ. "ನೆಟ್ನಲ್ಲಿ ಏನೋ ಬರ್ದು ಹಾಕ್ತಿರ್ತಿಯಲ್ಲಾ?". ನನಗೋ ಭಯವಾಗೋಯಿತು. ನಾನ್ ಬರಿಯೋ ಚುಟುಕು ಹನಿಗವನಗಳ ಬಗ್ಗೆಯೇ ಮಾತಾಡ್ತಾ ಇದ್ದಾರೆ ಎಂದೆನಿಸಿತು. ಫೇಸ್ ಬುಕ್ಕಿನಲ್ಲಿ ಎಲ್ಲರೂ ಕೇಳುವ ಹಾಗೇ; ಅದರಲ್ಲಿನ ಹುಡುಗ ಯಾರು ಅಂತ ಕೇಳ್ತಾ ಇದ್ದಾರಾ?? ಒಂದು ಕ್ಷಣ ಉಸಿರು ಬಿಗಿಹಿಡಿದಂತೆ..... ಅದನ್ನೆಲ್ಲಾ ನಮ್ಮಪ್ಪ ಯಾವಾಗ್ ಓದಿದ್ರು?. ಯಾರ್ ಓದಿಸಿರಬಹುದು ಎಂದೆಲ್ಲಾ ಮನಸ್ಸು ಓಡುತ್ತಿರುವಾಗಲೇ ಅಪ್ಪನಿಂದ ಮುಂದುವರೆದ ಮಾತು. "ನೋಡಮ್ಮ ಯಾರೋ ಒಬ್ಬ ಲೇಖಕರು ಗಣೇಶನ ಬಗ್ಗೆ ನೆಗೆಟೀವ್ ಆಗಿ ಪುಸ್ತಕ ಬರೆದಿದ್ದಾರೆ. ಅದೀಗ ವಿವಾದದಲ್ಲಿದೆ ಪೇಪರ್ನಲ್ಲಿದೆ ಓದು. ನೀನ್ ಬರಿಯೋದರ ಮೇಲೆ ನಿಗಾ ಇರಲಿ ಅಂತ ಹೇಳೋಕ್ ಬಂದೆ". ನನಗೇ ಓಹ್...... :-) ಸುಸ್ತಾಗಿತ್ತು. ಚೇತರಿಸಿಕೊಂಡು, "ಇಲ್ಲಣ್ಣ ನಾನಿನ್ನೂ ಹೂವು, ಹಣ್ಣು, ಕಾಯಿ ಅಂತ ಬರಿತಾ ಇದ್ದೀನಿ ಅಂದೆ". ಅಪ್ಪನಿಂದ ಇನ್ನಷ್ಟು ವಿಚಾರ ಕೇಳಿ ತಿಳಿದೆ. ಖುಷಿಯಾಯಿತು ಅಪ್ಪ ನನ್ನ ಎಲ್ಲೊ ಇಟ್ಟು ನೋಡ್ತಾ ಇದ್ದಾರೆ; ನಾನ್ ಸೋಮಾರಿಯಾಗಿ ಕಾಲಕಳೆದೆ ಅಂತ ಬೇಸರವೂ ಆಯಿತು. ಅದೇ ಗುಂಗಿನಲ್ಲಿದ್ದ ನನಗೆ ಬೆಳಗ್ಗಿನ ಸುದ್ದೀ ವಾಹಿನಿಯೊಂದರಲ್ಲಿ ಅಪ್ಪ ಹೇಳಿದ ಪುಸ್ತಕದ ಕುರುತಾಗಿ ಮತ್ತಷ್ಟು ಮಾಹಿತಿ ದೊರೆತವು.
ಲೇಖಕರು; "ಯೋಗೇಶ್ ಮಾಸ್ಟರ್". ಪುಸ್ತಕ; "ಢುಂಢೀ". ವಿವಾದಗಳಿಗೊಳಗಾಗಿ ಸುದ್ಧೀ ವಾಹಿನಿಯಲ್ಲಿ ಬಿತ್ತರವಾದ ವಿಚಾರ ಸಾರಾಂಶ ಹೀಗಿದೆ; ಗಣೇಶನನ್ನು ಲೇಖಕರು ರೌಡಿಯಾಗಿ, ಕಾಡ ಬಾಲಕನಾಗಿ ಬಿಂಬಿಸಿದ್ದಾರೆ. ಅವನು ಪಾರ್ವತಿಸುತನಲ್ಲ. "ಮಾಲ" ಎನ್ನುವ ದಾಸಿಯ ಮಗ ಎನ್ನುವಾಗ ಆ ತಾಯಿಯ ಚರಿತ್ರೆಯೂ ಸರಿಯಿಲ್ಲವೆಂಬುವಂತೆ ಪುಸ್ತಕದಲ್ಲಿ ಚಿತ್ರಿಸಲಾಗಿದೆ ಎಂದು ವಾಹಿನಿಯು ಪ್ರಸಾರ ಮಾಡಿರುತ್ತದೆ. ಇದರೊಟ್ಟಿಗೆ ಶಿವನನ್ನು ಬೇಡ ಕುಲಕ್ಕೆ ಸೇರಿಸಿ ಆತನನ್ನು ಚಾರಿತ್ಯ ಹರಣ ವಿಚಾರಗಳಲ್ಲಿ ಬಿಂಬಿಸಿ ಲೇಖಕರು ಬರೆದಿದ್ದಾರೆ ಎಂದು ಹೇಳಲಾಗಿದೆ. ವಾಹಿನಿಯಲ್ಲಿ ಲೇಖಕರು, ಜನ ಪೂರ್ಣ ಪುಸ್ತಕವನ್ನು ಓದಲಿ ಹಾಗೇಯೇ ಪುಸ್ತಕದ ಆಧಾರಗಳನ್ನು ಪರಿಶೀಲಿಸಲಿ ಎಂಬಿತ್ಯಾದಿ ಮಾತನಾಡುತ್ತಿದ್ದರು. ಗಣೇಶನ ಹಬ್ಬಕ್ಕೆ ಕಾತುರರಾಗಿ ಸಂಭ್ರಮದಿಂದ ಕಾಯುತ್ತಿರುವ ನಮಗೆ ಈ ವಿಚಾರಗಳು ಈ ಸಂದರ್ಭದಲ್ಲೇಯೇ ಏಕೆ ಬಂದವು ಎಂದೆನಿಸದೇ ಇರಲಾರದು, ಅಲ್ಲವೇ ಸ್ನೇಹಿತರೇ? ಅದೇನೇ ಇರಲಿ ಪುಸ್ತಕವನ್ನು ಓದುವ ಕಾತುರತೆ ಏಕೋ ನನಗೂ ಹುಟ್ಟಿದೆ. ಡಾ||ಚಿದಾನಂದಮೂರ್ತಿರವರು ಪುಸ್ತಕವನ್ನು ಬ್ಯಾನ್ ಮಾಡಬೇಕಾಗಿ ವಿನಂತಿಸುತ್ತಿದ್ದಾರೆ. ವಿವಾದಗಳು ಓದಲು ಪ್ರೇರೇಪಿಸುತ್ತಿವೆ. ಈ ಮಧ್ಯೆ ನನ್ನಂತಹ ಓದುಗರು ಅರ್ಧ ತಿಳಿದು ತಬ್ಬಿಬ್ಬಾಗುತ್ತಿದ್ದಾರೆ.
ಧನ್ಯವಾದಗಳು
ದಿವ್ಯ ಆಂಜನಪ್ಪ

೨೮/೦೮/೨೦೧೩  

ಚುಟುಕು

ಕನಸಿನ 
ಬಣ್ಣ ಕದ್ದ
ಮನಸಿನ 
ಮಾತ ಕದ್ದ
ಚೋರ 
ಅವ 
ಚತುರ 


27/08/2013

ಚುಟುಕು

ಪ್ರೀತಿಯೊಂದು ಭ್ರಮೆ
ಎಂದಾದರೂ
ಭ್ರಮೆಯಲ್ಲಿನ 
ನನ್ನ ಪ್ರೇಮವೂ
ಆಹ್ಲಾದ
ನನ್ನ ಭ್ರಮೆಗೆ
ನಾ ಪ್ರಾಮಾಣಿಕ
ಅನುಭಾವಿ


26/08/2013

ಮನದ ಮಾತು

ಮನಸೇ ಹಾಗೆ ಎಲ್ಲೆಲ್ಲೋ ಓಡಿ ಎಲ್ಲೆಲ್ಲೋ ನಿಲ್ಲಿಸಿ; ಮರೆಸಿ ಎಲ್ಲವ ಮತ್ತೆ ಪ್ರಶ್ನೆಗಳನ್ನು ಎದುರು ನಿಲ್ಲಿಸಿಬಿಡುತ್ತದೆ, "ಇಲ್ಲಿಗೇಕೆ ಬಂದು ನಿಂತೆ?, ಏಕೆ ಓಡಿದೆ? ನಾನೆಲ್ಲಿ ನಿಂತಿದ್ದೆ ಏನಾಗಿ ನಿಂತಿದ್ದೆ... ? ಮನಸ್ಸಿನೊಂದಿಗೆ ಓಡುವುದು ಒಂದು ಮಗುವಿನೊಂದಿಗೆ ಓಡಿದಂತೆ. ಮಗುವಿನ ಓಟ ಅದೊಂದು ಆಟ. ಉದ್ದೇಶವು ಖುಷಿಯ ಹೊರತಾಗಿ ಇನ್ನೇನು ಅಲ್ಲ. ಮನಸ್ಸಿನಂತೆ ನಡೆವ ನಡೆಯೂ ನಿಜವಾದ ಒಂದು ಸಂತೃಪ್ತಿ. "ಏನಿದ್ದರೂ ಇಲ್ಲದಂತೆ" ಎಂಬ ಭಾವ ಹುಟ್ಟುವುದು ನಮ್ಮ ನಮಸ್ಸಿಗೆ ನಾವೇ ಸ್ವತಃ ದ್ರೋಹ ಬಗೆದಾಗಲೇ. ಮನಸ್ಸು ನಿರಂತರ ಸಂಚಾರಿ ಅದರ ಬಯಕೆ ಅಪಾರ. ಒಮ್ಮೊಮ್ಮೆ ಏನೇನೋ ಬಯಸಿ ಕಿನ್ನತೆಗೊಳಗಾಗುತ್ತದೆ. ಈ ಕಿನ್ನತೆ, ದುಃಖ ಇವೆಲ್ಲಕ್ಕೂ ಕಾರಣ ಯಾವುದೋ ಒಂದು ಆಸೆ. ಆಸೆ ಈಡೇರದೇ ಮನಸ್ಸು ಮಗುವಿಂತೆ ಹಟಹಿಡಿದು ಬುದ್ಧಿಗೂ ಮನಸ್ಸಿಗೂ ತಾಕಲಾಟವುಂಟಾಗುತ್ತದೆ. ಕೊನೆಗೆ ಗೆಲ್ಲುವುದು ಯಾವುದೋ? ಆದರೆ ಅಷ್ಟರಲ್ಲಿ ಮನುಷ್ಯ ಕುಗ್ಗಿ ಹೋಗಿರುತ್ತಾನೆ. ಬಂದ ಅತೀ ಸಣ್ಣ ಕಾಯಿಲೆ ನೆಗಡಿಯೂ ಮಹಾ ಮಾರಿಯಾಗಿ ವಾರಗಟ್ಟಲೆ ಕಾಡುತ್ತದೆ. ಸಣ್ಣ ಕೆಲಸವೂ ತನ್ನಿಂದಾಗುವುದೇ ಎಂದು ಯೋಚಿಸುವಂತಾಗುತ್ತದೆ. ಮುಂದೆ ಇದೇ ಅತಿರೇಕವಾದರೇ ಮುಂಚೆ ಹೇಳಿದ ಎಲ್ಲಾ ಗುಣಗಳು ಉಲ್ಬಣವಾಗಿ ನಿಂತಿರುತ್ತದೆ. ಇಷ್ಟೇಲ್ಲಾ ಅನಾಹುತಗಳಿಗೆ ಕಾರಣ "ಆ ಅದ್ಯಾವುದೋ ತೀರದ ಬಯಕೆ, ಆಸೆ". ಒಂದು ಕ್ಷಣ ಯೋಚಿಸುವ; ಈ ಮುಂಚೆ ತನಗೆ ತನ್ನ ಜೀವನದಲ್ಲಿ ಆ ಆಸೆ ಇದ್ದಿತೇ? ಇಲ್ಲದಿದ್ದರೂ ತಾನು ಸುಖವಾಗಿರಲಿಲ್ಲವೇ? ಹೌದು ಎಂದಾದರೇ ಈಗಲೂ ನಾ ಮೊದಲಿನಂತೆ ದೃಡಭಾವದ ಅದೇ ಖುಷೀ ಜೀವಿ ಎಂದುಕೊಳ್ಳಬಹುದಲ್ಲವೇ?. ಇಂತಹ ಘಳಿಗೆಗಳಲ್ಲಿ ಮನಸ್ಸಿಗೆ ಬೇಕಿರುವುದು ಒಂದು ನಿರಾಳಭಾವ. ಅದನ್ನರಿತು ಸುಮಾರ್ಗದಲ್ಲಿ ಮನಸ್ಸಿಗೆ ನಾವೇ ರಮಿಸಬೇಕಿದೆ. ಮನಸ್ಸಿನ ಶಕ್ತಿ ಅಗಾಧ. ಆಸೆಪಡುವ, ಆಸೆಯನ್ನು ಹಸನುಗೊಳಿಸುವ, ಇತರಲ್ಲಿ ಆಶಾಭಾವ ಮೂಡಿಸುವ ಅಮೋಘವಾದ ಶಕ್ತಿ ಅದಕ್ಕಿದೆ. ಮತ್ತೆ ಹೊಸ ಆಸೆ ಹೊಸ ಕನಸ ಕಟ್ಟುವ ಸಾಮರ್ಥ್ಯವಿದೆ. ಯಾರೂ ದುರ್ಬಲ ಮನಸ್ಸಿನವರಲ್ಲ. ನಾವು ಹೇಗೆ ಶಾಲೆಗೆ ಹೋಗುತ್ತ, ಕಾಲೇಜಿಗೆ ಹೊಗುತ್ತಾ ಪಾಠ ಕಲಿತು ವಿದ್ಯಾವ೦ತರು ಎನಿಸಿಕೊಳ್ಳುತ್ತೇವೋ ಹಾಗೆಯೇ ನಮ್ಮ ಮನಸ್ಸನ್ನೂ ಶಿಕ್ಷಿತಗೊಳಿಸಬೇಕು. ಅದುವೇ ನಿಜವಾದ ಶಿಕ್ಷಣ. ಶಿಕ್ಷಣವೆಂದರೆ ಜೀವನ ನಿರ್ವಹಣೆಯ ಕಲೆ, ಉತ್ತಮ ನಡೆ-ನುಡಿ, ಆಚಾರ-ವಿಚಾರಗಳನ್ನು ಅರಿವುದು ಙ್ಞಾನಾರ್ಜನೆ ಸಾಧನ ಎಂದೆಲ್ಲಾ ಹೇಳುವಾಗ ಇಷ್ಟೇಲ್ಲಾ ಕಾರ್ಯಗಳ ಹಿಂದಿನ ಮನಸ್ಸನ್ನು ಮರೆಯುವ ಹಾಗಿಲ್ಲ. ಮನಸ್ಸಿನ ಮೇಲಿನ ಪರಿಣಾಮವೇ ಬಾಹ್ಯ ನಡತೆ. ಹೌದಲ್ಲವೇ ಸ್ನೇಹಿತರೆ? .ಹಾಗಾದರೇ ನಿಮಗೆ ಆಸೆಗಳು ಬಾಧಿಸಿವೆಯೇ???? :-)

ಧನ್ಯವಾದಗಳು
ದಿವ್ಯ ಆಂಜನಪ್ಪ

೨೭/೦೮/೨೦೧೩   

Monday, 26 August 2013

ಚುಟುಕು

ಕದಿಯುವವರು ಕದ್ದಾರು
ಎನ್ನ ಕವನವ,
ಕದಿಯಲಾರರು
ಬರಹದ ಭಾವವ
ಮತ್ತೂ
ಕದಿಯಲಸಾಧ್ಯ
ಎನ್ನ ಚುಟುಕುವಿನ
ಚೊಟುದ್ದ ಹುಡುಗನ
ನನ್ನಿಂದ!!..... :-)

26/08/2013

ಚುಟುಕು

ಜೀವನವೆಲ್ಲಾ 
ಪ್ರೇಮಮಯ
ಜೀವಕ್ಕೆ ಪ್ರೀತಿ ಬಿದ್ದ 
ಕನಸಿನಿಂದ 


26/08/2013

ಚುಟುಕು

ನೈಜ ನಡೆ
ಫಾಸಿಯೇ ಆದರೂ
ಕಟ್ಟ ಕಡೆ
ಫಲವದು ಪ್ರಫುಲ್ಲ 


25/08/2013

ಚುಟುಕು

ಎಲ್ಲಾ
ಮೇರುಗಳ
ಮೀರಿದರೂ
ಮೀರಲಾರೆ
ನಿನ್ನ ಮನಸ
ಹಜಾರವ 


24/08/2013

ಚುಟುಕು

ಒಂಟಿ 
ಎನಿಸಲೂ
ದುಃಖಿಯೇ
ಆದರೂ
ನಾ
ನೆನೆವೆ ನಿನ್ನನೇ
ನೀಡು ಬಾ
ತುಸು 
ಚೈತನ್ಯವ
ನಿನ್ನೆದೆಗಪ್ಪಿ 
ಕೆಲ ಕಾಲ 
ಕಳೆದು ನನ್ನಲಿ 


23/08/2013

ಹನಿಗವನ

ಜೀವಕ್ಕೆ ಬೆಲೆ
ಭಾವಕ್ಕೆ ನೆಲೆಸಿಕ್ಕಾಗಲೇ;
ಅದಕ್ಕಾಗಿ ಕಟ್ಟಬೇಕಿದೆ
ಮನಕೊಂದು ನೆಲೆ,
ದಟ್ಟ ಕಡಪಗಳ ಅಡಿಪಾಯದಲಿ
ಬತ್ತಲಾರದ ಪ್ರೀತಿ-ವಿಶ್ವಾಸದ ಸೆಲೆ
ನಿತ್ಯ ನೂತನ ಸಂತೋಷದಲೆ
ದೊಷ ವಿದ್ದರೂ ನಿಭಾಯಿಸುವ ಕಲೆ
ಹೌದು;
ಆತ್ಮವಿಶ್ವಾಸವೇ ಎಲ್ಲಕೂ
ಗಟ್ಟಿ ನೆಲೆ!!! 


-ದಿವ್ಯ ಆಂಜನಪ್ಪ
23/08/2013