Wednesday 19 June 2013

ಲೇಖನ

ಕನಕದಾಸರು; ಒಂದು ಕಿರು ಪರಿಚಯ

ಕನ್ನಡ ಸಾಹಿತ್ಯ ಚರಿತ್ರೆಯ ಘಟ್ಟಗಳಲ್ಲಿ ಚಂಪೂ, ವಚನ, ರಗಳೆ, ಕೀರ್ತನೆ ಷಟ್ಪದಿಯಂಥಹ ಹಲವು ಛಂದೋ ರೂಪಗಳಿವೆ. ಕೀರ್ತನ ಸಾಹಿತ್ಯವೆಂದಾಕ್ಷಣ ದಾಸಸಾಹಿತ್ಯವೆಂದೇ ನಾವು ಹೆಸರಿಸುತ್ತೇವೆ. ದಾಸಸಾಹಿತ್ಯದ ಶ್ರೇಷ್ಟರೆಂದೇ ಹೆಸರಾದವರು ಕನಕದಾಸರು ಮತ್ತು ಪುರಂದರದಾಸರು. ಅವರಿಬ್ಬರೂ ದಾಸಸಾಹಿತ್ಯದ ಎರಡು ಕಣ್ಣುಗಳೆಂದೇ ಹಲವರು ವ್ಯಾಖ್ಯಾನಿಸಿದ್ದಾರೆ. ವಾದಿರಾಜರಿಂದ ಧೀಕ್ಷೆಯನ್ನು ಪಡೆದ ಕನಕದಾಸರು ಪುರಂದರದಾಸರ ಸಮಕಾಲೀನರಾಗಿದ್ದಾರೆ. ಕನಕದಾಸ ಜಯಂತಿಯ ಸಮಯದಲ್ಲಿ ಅವರನ್ನೊಮ್ಮೆ ನೆನೆಯುವ ಸಲುವಾಗಿ ಈ ಲೇಖನ.

ಕವಿ ಕನಕದಾಸರ ಮೂಲ ಹೆಸರು 'ತಿಮ್ಮಪ್ಪ', ತಂದೆ 'ಬೀರಪ್ಪ', ತಾಯಿ ';ಬಚ್ಚಮ್ಮ'. ೧೫೦೮ ರಲ್ಲಿ ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ಒಂದು ಸಣ್ಣ ಊರಾದ 'ಬಾಡ' (ಈಗಿನ ಹಾವೇರಿ ಜಿಲ್ಲೆ) ಯಲ್ಲಿ ಜನಿಸಿದವರು. ಕನಕದಾಸರು ಜನಸಾಮಾನ್ಯರಾಗಿ, ಸೈನಿಕರಾಗಿ, ಸಾಮಂತನಾಗಿ, ದಾರ್ಶನಿಕರಾಗಿ, ಕವಿಯಾಗಿ ಜೀವನದ ವಾಸ್ತವಿಕೆತೆಯ ಹಲವು ಮಜಲುಗಳನ್ನು ಸವೆದು, ಅದರ ಅನುಭವಗಳನ್ನು ತಮ್ಮ ಕೀರ್ತನೆಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸಾದರಪಡಿಸಿದವರು. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ತೀಡುವ ನಿಟ್ಟಿನಲ್ಲಿ ಅವರ ಸಾಹಿತ್ಯ ಕಾರ್ಯನಿರ್ವಹಿಸಿದೆ.

ಅವರ ಕೀರ್ತನೆಗಳಲ್ಲಿ ಕಾಣುವ "ಕಾಗಿನೆಲೆಯಾದಿಕೇಶವ",ಎಂಬುದು ಅವರ ಅಂಕಿತನಾಮವಾಗಿದ್ದು, ಕಾಗಿನೆಲೆಯಲ್ಲಿನ "ಆದಿಕೇಶವ" ಅವರ ಮನೆತನದ ಆರಾಧ್ಯ ದೈವವಾಗಿದೆ. ಅವರು ರಚಿಸಿದ ಕೃತಿಗಳು; 'ನಳಚರಿತ್ರೆ', 'ಹರಿಭಕ್ತಿಸಾರ', 'ರಾಮಧಾನ್ಯ ಚರಿತ', 'ಮೋಹನ ತರಂಗಿಣಿ', 'ಕೀರ್ತನ ಮತ್ತು ಮುಂಡಿಗೆಗಳು'. ನಳಚರಿತ್ರೆಯಲ್ಲಿ, ನಳ-ದಮಯಂತಿಯರ ಪ್ರೀತಿ-ಪ್ರೇಮ, ವಿರಹ-ವೈರಾಗ್ಯಗಳನ್ನೊಳಗೂಂಡ ಕತೆಯನ್ನು ನಾವು ಕಾಣುತ್ತೇವೆ. ಸ್ತೀ ಜೀವನದ ಉತ್ತುಂಗತೆಯನ್ನು ಸಾರುವುದೇ ಇಲ್ಲಿನ ಉದ್ದೇಶವಾಗಿದೆ. ಭಕ್ತಿ ವೈರಾಗ್ಯಗಳ ಸಾರವೇ 'ಹರಿಭಕ್ತಿಸಾರ' ಕಾವ್ಯವಾಗಿದೆ. ಸಂಸಾರ, ಅರಿಷಡ್ವರ್ಗಗಳಿಂದ ದೂರನಾದ ವ್ಯಕ್ತಿ ಶ್ರೀಹರಿಯ ಸಾನಿಧ್ಯವನ್ನು ಪಡೆಯಬಲ್ಲನೆಂಬ ನಿಲುವಿದೆ. ಮುಕ್ತಿಗೆ ಇದೊಂದೇ ಮಾರ್ಗವೆಂದು ತಿಳಿಸಿದ್ದಾರೆ. 'ರಾಮಧಾನ್ಯ ಚರಿತ'ದಲ್ಲಿ, ಲಂಕಾಪತಿ ರಾವಣನನ್ನು ಸಂಹರಿಸಿ ಸೀತೆಯೊಂದಿಗೆ ರಾಮನು ಅಯೋಧ್ಯೆಗೆ ಮರಳುತ್ತಿದ್ದ ಸಂದರ್ಭದಲ್ಲಿ, ಏರ್ಪಡಿಸಲಾದ ಭೋಜನ ಔತಣದಲ್ಲಿ ನಡೆದ "ರಾಗಿ" ಮತ್ತು "ಭತ್ತ"ದ ವಾಗ್ವಾದದ ಚಿತ್ರಣವಿದೆ. ಭತ್ತ-ರಾಗಿಯ ಜಗಳದ ತೀರ್ಮಾನಕ್ಕೆ ಶ್ರೀರಾಮನು ಆರು ತಿಂಗಳ ಕಾಲ ಗಡುವು ವಿಧಿಸಿ, ರಾಗಿ ಭತ್ತವನ್ನು ಬಂಧನದಲ್ಲಿ ಇರಿಸಲಾಗುತ್ತದೆ. ಆಶ್ಚರ್ಯವೆಂದರೆ, ಆರು ತಿಂಗಳ ಅವಧಿಯಲ್ಲಿ ಭತ್ತ ಸೊರಗಿ ಟೊಂಕ ಮುರಿದು ಬಿಟ್ಟರೆ, ರಾಗಿ ಹಾಗೆಯೇ ಗಟ್ಟಿಯಾಗಿ ನಿಂತಿರುತ್ತದೆ. ಅಯೋಧ್ಯೆಯ ಜನ ರಾಗಿಯ ಪರವಾಗಿ ನ್ಯಾಯ ನೀಡುತ್ತಾರೆ. ಜಾತಿಭೇದ-ವರ್ಣಭೇದಕ್ಕೆ ತಮ್ಮ ಕೃತಿಯ ಮುಖೇನ ದಾಸರು ಸಮಾಜಕ್ಕೆ ಉತ್ತರವನ್ನು ನೀಡಿದ್ದಾರೆ. "ಮೋಹನ ತರಂಗಿಣಿ"ಯಲ್ಲಿನ ಕಥಾವಸ್ತು, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಆಡಳಿತ, ಆಸ್ತಾನಕ್ಕೆ ಸಂಬಂದಿಸಿದ ವಿವರಗಳೇ ಹೆಚ್ಚಾಗಿವೆ. ಒಟ್ಟಾರೆಯಾಗಿ ಕೃಷ್ಣನೇ ಎತ್ತರದ ಪುರುಷನಾಗಿ ನಿಲ್ಲುತ್ತಾನೆ. ಈ ಎಲ್ಲಾ ಕೃತಿಗಳ ವಿಶ್ಲೇಷಣೆಯನ್ನಷ್ಟೇ ಓದಿದ್ದು, ಅದರ ಸಂಕ್ಷಿಪ್ತರೂಪವನ್ನು ಇಲ್ಲಿ ಪ್ರಸ್ತುತಪಡಿಸಿರುತ್ತೇನೆ.

ಮುಂಡಿಗೆಗಳು:
ಗೂಡಾರ್ಥ ಮುಂಡಿಗೆಗಳಿಗೆ ಇವರು ಪ್ರಸಿದ್ದರಾಗಿದ್ದಾರೆ. ಪುರಾಣ ಸಂಗತಿಗಳು, ಧಾರ್ಮಿಕ ವಿಚಾರಗಳು, ಸಾಧಕರಿಗೆ ಬೇಕಾದ ಮಾರ್ಗದರ್ಶನ ಸೂತ್ರಗಳನ್ನು ಈ ಮುಂಡಿಗೆಗಳು ಒಳಗೊಂಡಿರುತ್ತದೆ. ಅಂತಹದೊಂದು ಮುಂಡಿಗೆ ಹೀಗಿದೆ:
"ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ".
ಅರ್ಥ: ಅಂಧಕನೆಂದರೆ ಧೃತರಾಷ್ಟ್ರ, ಅಂಧಕನನುಜ ಪಾಂಡುರಾಜ, ಇವನ ಕಂದ ಧರ್ಮರಾಯ, ಈತನ ತಂದೆ ಯಮಧರ್ಮ. ಈತನನ್ನು ಕೊಂದವನು ಈಶ್ವರ. ಈಶ್ವರನ ಶಿರದಲಿ ನಿಂದವನು ಚಂದ್ರ.
ಹೀಗೆ ಗೂಡಾರ್ಥಗಳಿಂದ ಕೂಡಿದ ಮುಂಡಿಗೆಗಳು ಪೌರಾಣಿಕವೂ, ಆಧ್ಯಾತ್ಮದ ಹಿನ್ನೆಲೆಯವೂ, ಸ್ವಾರಸ್ಯಕರವೂ ಆಗಿರುತ್ತದೆ.

ಕೀರ್ತನೆಗಳು:
ಕನಕದಾಸರ ಅನೇಕ ಕೀರ್ತನೆಗಳಲ್ಲಿ ಸುಪ್ರಸಿದ್ಧವಾದ ಕೀರ್ತನೆ "ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ"ಯನ್ನು ನಾವೇಲ್ಲಾ ಕೇಳಿಯೇ ಇರುತ್ತೇವೆ. ಮಾನವನ ಯಾಂತ್ರಿಕ ಜೀವನದಲ್ಲಿ ಆತ ತನ್ನ ಹೊಟ್ಟೆಗಾಗಿಯೇ ತಾನು ಜೀವಿಸುತ್ತಿರುವ ಪ್ರಸಂಗವನ್ನು ಕಂಡ ಕವಿ, ಹೀಗೆ ತಮ್ಮ ಕೀರ್ತನೆಯಲ್ಲಿ ಹಾಡಿ ತಿಳಿಸಿದ್ದಾರೆ. ಹಲವಾರು ವೃತ್ತಿಗಳ ಬೆನ್ನು ಹತ್ತಿದ ಮಾನವ ಇಂದು ಹಣಗಳಿಕೆಯನ್ನೇ ಕೇಂದ್ರ ಗುರಿಯನ್ನಾಗಿಸಿಕೊಂಡಿದ್ದಾನೆ. ಇಂಥಹ ಮನೋಭಾವ ಅವನನ್ನು ಅನೇಕ ರೀತಿಯ ಜಟಿಲತೆ, ತಾಕಲಾಟಗಳಿಗೆ ಈಡು ಮಾಡುತ್ತಿದೆ. ಮನುಷ್ಯ ಹೊಟ್ಟೆ-ಬಟ್ಟೆಯ ಚಿಂತೆಯನ್ನು ಬಿಟ್ಟು ದೈವಭಕ್ತಿಯನ್ನು ಹೊಂದಿ, ಆತ್ಮಸಂತೋಷವನ್ನು ಪಡೆಯಬೇಕೆಂಬುದು ಕನಕದಾಸರ ಆಶಯವಾಗಿದೆ. ಅವರ ಆಶಯದ ದಾಸಪದ ಹೀಗಿದೆ:

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||ಪಲ್ಲವಿ||

ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೧

ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೨

ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೩

ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೪

ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೫

ಕೊಟ್ಟಣವನ್ನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೬

ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೭

ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೮

ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ೯

ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ೧೦

ಪರಾಮರ್ಶನ ಗ್ರಂಥಗಳು: ೧)ಸಾಹಿತ್ಯ ಚಂದನ, ಪಿಯುಸಿ ಪಠ್ಯಪುಸ್ತಕ
೨)ಪಠ್ಯಕ್ರಮ ಕೆಎಸ್ಒಯು
ಧನ್ಯವಾದಗಳು

-ದಿವ್ಯ ಆಂಜನಪ್ಪ
02/12/2012

No comments:

Post a Comment