ನೆನ್ನೆ ರಾತ್ರಿ ಊಟಕ್ಕೆ ಕೂತ ಸಮಯ, ಅಪ್ಪನಿಂದ ನೇರ ಮಾತು, "ದಿವ್ಯಾ, ಬರಿತೀನಿ ಅಂತ ಏನೇನೋ ಬರಿಬೇಡ ಕಣಮ್ಮ", ನನಗೆ ಒಮ್ಮೆಲೆ ಆಶ್ಚರ್ಯ ಆತಂಕ. "ಏನ್ ಬರಿಬಾರ್ದು ಕಣಣ್ಣಾ?" ತಗ್ಗಿದ ದನಿಯಲಿ ಕೇಳಿದೆ. "ನೆಟ್ನಲ್ಲಿ ಏನೋ ಬರ್ದು ಹಾಕ್ತಿರ್ತಿಯಲ್ಲಾ?". ನನಗೋ ಭಯವಾಗೋಯಿತು. ನಾನ್ ಬರಿಯೋ ಚುಟುಕು ಹನಿಗವನಗಳ ಬಗ್ಗೆಯೇ ಮಾತಾಡ್ತಾ ಇದ್ದಾರೆ ಎಂದೆನಿಸಿತು. ಫೇಸ್ ಬುಕ್ಕಿನಲ್ಲಿ ಎಲ್ಲರೂ ಕೇಳುವ ಹಾಗೇ; ಅದರಲ್ಲಿನ ಹುಡುಗ ಯಾರು ಅಂತ ಕೇಳ್ತಾ ಇದ್ದಾರಾ?? ಒಂದು ಕ್ಷಣ ಉಸಿರು ಬಿಗಿಹಿಡಿದಂತೆ..... ಅದನ್ನೆಲ್ಲಾ ನಮ್ಮಪ್ಪ ಯಾವಾಗ್ ಓದಿದ್ರು?. ಯಾರ್ ಓದಿಸಿರಬಹುದು ಎಂದೆಲ್ಲಾ ಮನಸ್ಸು ಓಡುತ್ತಿರುವಾಗಲೇ ಅಪ್ಪನಿಂದ ಮುಂದುವರೆದ ಮಾತು. "ನೋಡಮ್ಮ ಯಾರೋ ಒಬ್ಬ ಲೇಖಕರು ಗಣೇಶನ ಬಗ್ಗೆ ನೆಗೆಟೀವ್ ಆಗಿ ಪುಸ್ತಕ ಬರೆದಿದ್ದಾರೆ. ಅದೀಗ ವಿವಾದದಲ್ಲಿದೆ ಪೇಪರ್ನಲ್ಲಿದೆ ಓದು. ನೀನ್ ಬರಿಯೋದರ ಮೇಲೆ ನಿಗಾ ಇರಲಿ ಅಂತ ಹೇಳೋಕ್ ಬಂದೆ". ನನಗೇ ಓಹ್...... :-) ಸುಸ್ತಾಗಿತ್ತು. ಚೇತರಿಸಿಕೊಂಡು, "ಇಲ್ಲಣ್ಣ ನಾನಿನ್ನೂ ಹೂವು, ಹಣ್ಣು, ಕಾಯಿ ಅಂತ ಬರಿತಾ ಇದ್ದೀನಿ ಅಂದೆ". ಅಪ್ಪನಿಂದ ಇನ್ನಷ್ಟು ವಿಚಾರ ಕೇಳಿ ತಿಳಿದೆ. ಖುಷಿಯಾಯಿತು ಅಪ್ಪ ನನ್ನ ಎಲ್ಲೊ ಇಟ್ಟು ನೋಡ್ತಾ ಇದ್ದಾರೆ; ನಾನ್ ಸೋಮಾರಿಯಾಗಿ ಕಾಲಕಳೆದೆ ಅಂತ ಬೇಸರವೂ ಆಯಿತು. ಅದೇ ಗುಂಗಿನಲ್ಲಿದ್ದ ನನಗೆ ಬೆಳಗ್ಗಿನ ಸುದ್ದೀ ವಾಹಿನಿಯೊಂದರಲ್ಲಿ ಅಪ್ಪ ಹೇಳಿದ ಪುಸ್ತಕದ ಕುರುತಾಗಿ ಮತ್ತಷ್ಟು ಮಾಹಿತಿ ದೊರೆತವು.
ಲೇಖಕರು; "ಯೋಗೇಶ್ ಮಾಸ್ಟರ್". ಪುಸ್ತಕ; "ಢುಂಢೀ". ವಿವಾದಗಳಿಗೊಳಗಾಗಿ ಸುದ್ಧೀ ವಾಹಿನಿಯಲ್ಲಿ ಬಿತ್ತರವಾದ ವಿಚಾರ ಸಾರಾಂಶ ಹೀಗಿದೆ; ಗಣೇಶನನ್ನು ಲೇಖಕರು ರೌಡಿಯಾಗಿ, ಕಾಡ ಬಾಲಕನಾಗಿ ಬಿಂಬಿಸಿದ್ದಾರೆ. ಅವನು ಪಾರ್ವತಿಸುತನಲ್ಲ. "ಮಾಲ" ಎನ್ನುವ ದಾಸಿಯ ಮಗ ಎನ್ನುವಾಗ ಆ ತಾಯಿಯ ಚರಿತ್ರೆಯೂ ಸರಿಯಿಲ್ಲವೆಂಬುವಂತೆ ಪುಸ್ತಕದಲ್ಲಿ ಚಿತ್ರಿಸಲಾಗಿದೆ ಎಂದು ವಾಹಿನಿಯು ಪ್ರಸಾರ ಮಾಡಿರುತ್ತದೆ. ಇದರೊಟ್ಟಿಗೆ ಶಿವನನ್ನು ಬೇಡ ಕುಲಕ್ಕೆ ಸೇರಿಸಿ ಆತನನ್ನು ಚಾರಿತ್ಯ ಹರಣ ವಿಚಾರಗಳಲ್ಲಿ ಬಿಂಬಿಸಿ ಲೇಖಕರು ಬರೆದಿದ್ದಾರೆ ಎಂದು ಹೇಳಲಾಗಿದೆ. ವಾಹಿನಿಯಲ್ಲಿ ಲೇಖಕರು, ಜನ ಪೂರ್ಣ ಪುಸ್ತಕವನ್ನು ಓದಲಿ ಹಾಗೇಯೇ ಪುಸ್ತಕದ ಆಧಾರಗಳನ್ನು ಪರಿಶೀಲಿಸಲಿ ಎಂಬಿತ್ಯಾದಿ ಮಾತನಾಡುತ್ತಿದ್ದರು. ಗಣೇಶನ ಹಬ್ಬಕ್ಕೆ ಕಾತುರರಾಗಿ ಸಂಭ್ರಮದಿಂದ ಕಾಯುತ್ತಿರುವ ನಮಗೆ ಈ ವಿಚಾರಗಳು ಈ ಸಂದರ್ಭದಲ್ಲೇಯೇ ಏಕೆ ಬಂದವು ಎಂದೆನಿಸದೇ ಇರಲಾರದು, ಅಲ್ಲವೇ ಸ್ನೇಹಿತರೇ? ಅದೇನೇ ಇರಲಿ ಪುಸ್ತಕವನ್ನು ಓದುವ ಕಾತುರತೆ ಏಕೋ ನನಗೂ ಹುಟ್ಟಿದೆ. ಡಾ||ಚಿದಾನಂದಮೂರ್ತಿರವರು ಪುಸ್ತಕವನ್ನು ಬ್ಯಾನ್ ಮಾಡಬೇಕಾಗಿ ವಿನಂತಿಸುತ್ತಿದ್ದಾರೆ. ವಿವಾದಗಳು ಓದಲು ಪ್ರೇರೇಪಿಸುತ್ತಿವೆ. ಈ ಮಧ್ಯೆ ನನ್ನಂತಹ ಓದುಗರು ಅರ್ಧ ತಿಳಿದು ತಬ್ಬಿಬ್ಬಾಗುತ್ತಿದ್ದಾರೆ.
ಧನ್ಯವಾದಗಳು
ದಿವ್ಯ ಆಂಜನಪ್ಪ
೨೮/೦೮/೨೦೧೩